ರುದ್ರ ಭದ್ರ ದರ್ಶನಂ


ಹಕ್ಕಿಗಳೊಳಗೆ ಸಾಳ್ವ ಪಕ್ಷಿಯು

ಮಿಕ್ಕವುಗಳಿಗದುಹಿರಿದಾಗಿದೆ

ಅಕ್ಕರದೆರಡು ಮುಖವು ಸಾಳ್ವಕೆ ಗಂಡ ಭೇರುಂಡ

ಹಕ್ಕಿ ರೂಪವ ತಾಳ್ದವೀರನು

ಪಕ್ಕಿರಾಜ ಶ್ರೇಷ್ಠತೆವಿದಕೆ

ಚೊಕ್ಕ ವಿಜಯನಗರರಸರ ಲಾಂಚನವು ಸಾಳ್ವಕ್ಕೇ||


ಬೊಮ್ಮನ ಮಗನು ಕಸ್ಯಪ, ಮಡದಿ

ಒಮ್ಮನದದಿತಿ ಅವರ ಮಕ್ಕಳು

ಒಮ್ಮೆ ಅವಳಿಗಳೂ ಹಿರಣ್ಯಾಕ್ಷನು ಹಿರಣ್ಯಕಶಿಪ

ಬೊಮ್ಮನೊಲಿಸಿದರು ತಪಗೈಯುತ

ಬಿಮ್ಮು ಬಿಂಕು ಅವರೊಳು ಹುಟ್ಟಿತು

ಸುಮ್ಮನಿರರು ಮರಣವಿರದ ವರದಿಂದ ಗರ್ವಿಗಳು


ರಕ್ಕಸ ಹಿರಣ್ಯಾಕ್ಷನುಪಟಳ-

ಮಿಕ್ಕಿ ಮುರಿಯೆ ವರಾಹ ರೂಪದಿ

ತಿಕ್ಕಿ ತಿವಿಯುತ ವಿಷ್ಣು ಅಸುರನ ಕೊಂದು ಹಿತಗೈದ

ಸೊಕ್ಕಿನ ಸಹೋದರನ ಮರಣವು

ದುಃಖ ತಂದಿತು ಕಶ್ಯಪನೆನುತ -

ಮುಕ್ಕಿಸುವ ಮಣ್ಣನಿವರಿಗೆ ಶಪಥವಿದು ಅನುಜನೆ ನಾ||


ಲೋಕ ಕಂಟಕನಾದ ದುರುಳನು

ನಾಕ ನರಕದ ಭಯ ಹಿರಣ್ಯಗೆ

ಸೋಕದು ಹಗಲಿರುಳು ನರ ಮೃಗ ಖಗದಿ ಮರಣ ಬರದು

ಜೋಕೆಯಿಂದ ಪಡೆದಿಹ ನೀವರ

ಮೂಕರಾಗಿ ಸಹಿಪರು ವೇದನೆ

ಲೋಕಪಾಲನೆ ಸಲಹು ಎನುತಾ ಸ್ತುತಿಸುತಿಹರೆಲ್ಲ||


ಹಸುಗಳಪಹರಿಸಿದ ಹಿರಣ್ಯನು

ಹಸಿವಿನಿಂದ ಬಳಲುತ ಶಿಶುಗಳು

ಕಸವಿಸಿಯು ಹಡೆದವರುಪಾಯವ ಕಾಣದೆ ಕನಲುತ

ಅಸಮ ಮಹಿಮಾಶಾಲಿ ಶಿವನಿಗೆ

ಕುಸುಮಗಳ ಧರಿಸಿ ನೆನುವೊಂದೇ-

ಪಶುಪತಿ ಸಮರ್ಥನು ಹಿರಣ್ಯಾಕ್ಷನಾವಧಿಸಲು ತಾ||


ರಚನೆ:- ಶ್ರೀಮತಿ ಶಿವಲಿಂಗಮ್ಮ ಕಟ್ಟಿ, ಹುಬ್ಬಳ್ಳಿ.

ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿ

06-030622