ಏಕವಿಂಶಃ ಪರಿಚ್ಛೇದಃ#ವಿಭೀಷಣಾಭೀಷ್ಟಪ್ರದಾನಮ್
ಇತ್ಯುಕ್ತ್ವಾ ಪಶ್ಯತಸ್ತಸ್ಯ
ಪುರಸ್ತಾದೇವ ರೇಣುಕಃ |
ಅಂತರ್ದಧೇ ಮಹಾದೇವಮ್
ಚಿಂತಯನ್ನಂತರಾತ್ಮನಾ || 21-1
ಈ ರೀತಿಯಾಗಿ ಅಗಸ್ತ್ಯನಿಗೆ ಉಪದೇಶ ಮಾಡಿದ
ಶ್ರೀರೇಣುಕನು ಮಹಾದೇವನನ್ನು ತನ್ನ ಮನಸ್ಸಿನಿಂ
ದ ಚಿಂತಿಸುತ್ತಾ ಅವನು ನೋಡುತ್ತಿರುವಾಗಲೇ
ಎಲ್ಲರ ಎದುರಿಗೆ ಅಂತರ್ಧಾನನಾದನು.
# ಅಂತರ್ಹಿತೇ ತದಾ ತಸ್ಮಿನ್
ಮುನಿರಾಶ್ಚರ್ಯಸಂಕುಲಃ |
ತಚ್ಛಾಸ್ತ್ರಪ್ರವಣೋ ಭೂತ್ವಾ
ಸಮವರ್ತತ ಸಂಯಮೀ || 21-2
ಹೀಗೆ ಶ್ರೀ ರೇಣುಕ ಗಣೇಶ್ವರನು ಅಂತರ್ಧಾನಗೊಳ್ಳಲು ಸಂಯಮಿಯಾದ
ಅಗಸ್ತ್ಯಮುನಿಯು ಆಶ್ಚರ್ಯಗೊಂಡ ಬಳಿಕ ಗಣೇಶ್ವರನಿಂದ
ಉದ್ದಿಷ್ಟವಾದ (ಉಪದೇಶಿಸಲ್ಪಟ್ಟು) ಶಾಸ್ತ್ರದ ಅನುಷ್ಠಾನದಲ್ಲಿ ಆಸಕ್ತಿಯುಳ್ಳವನಾದನು.
ಯ ಇದಂ ಶಿವಸಿದ್ಧಾಂತಮ್
ವೀರಶೈವಮತಂ ಪರಮ್ |
ಶ್ರುಣೋತಿ ಶುದ್ಧಮನಸಾ
ಸ ಯಾತಿ ಪರಮಾಂ ಗತಿಮ್ || 21-3
ಸರ್ವೊತ್ಕೃಷ್ಟವಾದ ವೀರಶೈವ ಮತದ ಈ ಶಿವಸಿದ್ಧಾಂತ ಶಾಸ್ತ್ರವನ್ನು ಯಾರು ಶುದ್ಧವಾದ ಮನಸ್ಸಿನಿಂದ ಶ್ರವಣ ಮಾಡುವರೋ ಅವರು ಪರಮಗತಿಯನ್ನು (ಲಿಂಗಾಂಗ ಸಾಮರಸ್ಯವನ್ನು) ಪಡೆಯುತ್ತಾರೆ.
# ಸ್ವಚ್ಛಂದಾಚಾರರಸಿಕಃ
ಸ್ವೇಚ್ಛಾನಿರ್ಮಿತ ವಿಗ್ರಹಃ |
ಆಸಸಾದ ಪುರೀಂ ಲಂಕಾಮ್
ರೇಣುಕೋ ಗಣನಾಯಕಃ || 21-4
ತನ್ನ ಇಚ್ಛೆಯಂತೆ ದೇಹಗಳನ್ನು ನಿರ್ಮಿಸಿಕೊಳ್ಳಬಲ್ಲ, ಸ್ವಚ್ಛಂದವಾಗಿ ಸಂಚರಿಸುವಲ್ಲಿ ಪ್ರೀತಿಯುಳ್ಳ, ಎಲ್ಲ ಗಣರಿಗೆ ನಾಯಕನಾದ ಶ್ರೀರೇಣುಕನು ಲಂಕಾಪಟ್ಟಣಕ್ಕೆ ಬಂದವನಾದನು.
ತಮಾಗತಂ ಮಹಾಭಾಗಮ್
ಸರ್ವಾಗಮ ವಿಶಾರದಮ್ |
ವಿಭೀಷಣಃ ಸಮಾಲೋಕ್ಯ
ಗೇಹಂ ಪ್ರಾವೇಶಯನ್ನಿಜಮ್ || 21-5
ಸಕಲ ಆಗಮಗಳ ವಿಶಾರದನೂ, ಮಹನೀಯನೂ ಆದ ಆ ಆಗಮಿಸಿದ ಗಣೇಂದ್ರನನ್ನು ವಿಭೀಷಣನು ನೋಡಿ ತನ್ನ ಅರಮನೆಗೆ ಕರೆದುಕೊಂಡು ಹೋದನು.
#ಭದ್ರಾಸನೇ ನಿಜೇ ರಮ್ಯೇ
ನಿವೇಶ್ಯ ಗಣನಾಯಕಮ್ |
ಅಘ್ರ್ಯಪಾದ್ಯಾದಿಭಿಃ ಸರ್ವೆಃ
ಉಪಚಾರೈರಪೂಜಯತ್ || 21-6
ಆ ಗಣಶ್ರೇಷ್ಠನನ್ನು ತನ್ನ ರಮ್ಯವಾದ ಮಂಗಲಮಯ ಆಸನದ ಮೇಲೆ (ಸಿಂಹಾಸನದ ಮೇಲೆ) ಕುಳ್ಳಿರಿಸಿ
ಅಘ್ರ್ಯ ಪಾದ್ಯಾದಿಗಳಿಂದ ಮತ್ತು ಉಳಿದೆಲ್ಲ ಉಪಚಾರಗಳಿಂದ ಆತನ ಪೂಜೆಯನ್ನು ಮಾಡಿದನು.
ಪೂಜಿತೇನ ಪ್ರಸನ್ನೇನ
ರೇಣುಕೇನ ನಿರೂಪಿತಃ |
ನಿಷಸಾದ ತದಭ್ಯಾಸೇ
ಸ ನಿಜಾಸನಮಾಶ್ರಿತಃ || 21-7
ಹೀಗೆ ಪೂಜೆಗೊಳ್ಳಲ್ಪಟ್ಟ ಪ್ರಸನ್ನನಾದ ಶ್ರೀರೇಣುಕನಿಂದ ಆದೇಶಿಸಲ್ಪಟ್ಟ ವಿಭೀಷಣನು
ಅವನ ಸಮೀಪದಲ್ಲಿ ತನ್ನ ಆಸನವನ್ನು ಆಶ್ರಯಿಸಿದವನಾಗಿ ಕುಳಿತುಕೊಂಡನು.
#ಆಬಭಾಷೇ ಗಣೇಂದ್ರಂ ತಮ್
ಕೃತಾಂಜಲಿರ್ವಿಭೀಷಣಃ |
ಮಾನುಷಾಕಾರ ಸಂಪನ್ನಮ್
ಸಾಕ್ಷಾಚ್ಛಿವಮಿವಾಪರಮ್ || 21-8
ಮನುಷ್ಯ ಆಕಾರದಿಂದ ಬಂದಿರುವ, ಸಾಕ್ಷಾತ್ ಶಿವನಂತಿರುವ ಆ ರೇಣುಕ ಗಣೇಶ್ವರನನ್ನು
ಕುರಿತು ವಿಭೀಷಣನು ಕೈಮುಗಿದು ಈ ರೀತಿಯಾಗಿ ಬಿನ್ನವಿಸಿಕೊಂಡನು.
ರೇಣುಕ ತ್ವಂ ಗಣಾಧೀಶ
ಶಿವಜ್ಞಾನಪರಾಯಣ |
ಅವತೀರ್ಣಂ ಮಹೀಮೇನಾಮ್
ಇತಿ ಸಮ್ಯಕ್ ಶ್ರುತಂ ಮಯಾ || 21-9
ಶಿವಜ್ಞಾನ ಪರಾಯಣನಾದ ಹೇ ರೇಣುಕ ಗಣೇಶ್ವರನೇ, ನೀನು ಭೂಲೋಕದಲ್ಲಿ ಅವತರಿಸಿರುವೆ ಎಂಬುದನ್ನು ಈ ಮೊದಲೇ ನಾನು ಕೇಳಿದವನಾಗಿದ್ದೇನೆ.
#ಮದ್ಭಾಗ್ಯ ಗೌರವಾದದ್ಯ
ಸಮಾಯಾಸ್ತ್ವಂ ಪುರೀಮಿಮಾಮ್ |
ಕಥಂ ಭಾಗ್ಯವಿಹೀನಾನಾಮ್
ಸುಲಭಾಃ ಸ್ಯುರ್ಭವಾದೃಶಾಃ || 21-10
ಈಗ ನನ್ನ ಭಾಗ್ಯದಿಂದ, ಪುಣ್ಯ ವಿಶೇಷದಿಂದ ಇಂದು ನೀನು ನನ್ನ ಪಟ್ಟಣಕ್ಕೆ ದಯಮಾಡಿಸಿರುವೆ.
ನಿಮ್ಮಂತಹ ಮಹನೀಯರು ಭಾಗ್ಯಹೀನರಾದ ಜನರಿಗೆ ಹೇಗೆ ತಾನೇ ಸುಲಭವಾಗಿ ದೊರೆತಾರು?
ಮತ್ಸಮೋ ನಾಸ್ತಿ ಲೋಕೇಷು
ಭಾಗ್ಯಾತಿಶಯ ವತ್ತಯಾ |
ಯಸ್ಯ ಗೇಹಂ ಸ್ವಯಂ ಪ್ರಾಪ್ತೋ
ಭವಾನ್ ಸಾಕ್ಷಾನ್ಮಹೇಶ್ವರಃ || 21-11
ಸಾಕ್ಷಾತ್ ಮಹೇಶ್ವರನಂತಿರುವ ತಾವು ಯಾವ ನನ್ನ ಅರಮನೆಗೆ ನೀವಾಗಿಯೇ
ಬಂದಿರುವಿರೋ ಅಂತಹ ನನಗೆ ಸಮಾನವಾದ ಭಾಗ್ಯಶಾಲಿಯು ಈ ಲೋಕದಲ್ಲಿ ಯಾರೂ ಇಲ್ಲ?
#ಕೃತಾರ್ಥಾ ಮೇ ಪುರೀ ಹ್ಯೇಷಾ
ಕೃತಾರ್ಥೊ ರಾಕ್ಷಸಾನ್ವಯಃ |
ಜೀವಿತಂ ಚ ಕೃತಾರ್ಥಂ ಮೇ
ಯಸ್ಯ ತ್ವಂ ದೃಷ್ಟಿಗೋಚರಃ || 21-12
ನನಗೆ ತಾವು ದೃಷ್ಟಿಗೋಚರವಾಗಿದ್ದರಿಂದ (ದರ್ಶನವಿತ್ತಿದ್ದರಿಂದ) ನನ್ನ ಈ ಪಟ್ಟಣವು ಕೃತಾರ್ಥವಾಯಿತು.
ಅದರಂತೆ ನನ್ನ ರಾಕ್ಷಸ ವಂಶವೂ ಕೂಡ ಧನ್ಯವಾಯಿತು ಮತ್ತು ನನ್ನ ಜೀವನವು ಕೂಡ ಸಫಲವಾಯಿತು.
ಇತಿ ಬ್ರುವಾಣಂ ಕಲ್ಯಾಣಮ್
ರಾಕ್ಷಸೇಂದ್ರಂ ಗಣೇಶ್ವರಃ |
ಬಭಾಷೇ ಸಸ್ಮಿತೋ ವಾಣೀಮ್
ವಿಶ್ವೋಲ್ಲಾಸಕರೀಂ ಶುಭಾಮ್|| 21-13
ಈ ರೀತಿಯಾಗಿ ಹೇಳುತ್ತಿರುವ ಮಂಗಲ ಸ್ವರೂಪವಾದ ರಾಕ್ಷಸೇಂದ್ರನಾದ ವಿಭೀಷಣನನ್ನು ಕುರಿತು ಶ್ರೀ ರೇಣುಕಗಣೇಶ್ವರನು ವಿಶ್ವಕ್ಕೆಲ್ಲಾ
ಆನಂದವನ್ನುಂಟು ಮಾಡುವ ಮುಗುಳ್ನಗೆಯಿಂದ ಕೂಡಿದ ಶುಭಕರವಾದ ವಾಣಿಯಿಂದ ಈ ರೀತಿಯಾಗಿ ಹೇಳತೊಡಗಿದನು.
#ವಿಭೀಷಣ ಮಹಾಭಾಗ
ಜಾನೇ ತ್ವಾಂ ಧರ್ಮಕೋವಿದಮ್ |
ತ್ವಾಂ ವಿನಾ ಕಸ್ಯ ಲೋಕೇಷು
ಜಾಯತೇ ಭಕ್ತಿರೀದೃಶೀ || 21-14
ಮಹಾ ಭಾಗ್ಯಶಾಲಿಯಾದ ವಿಭೀಷಣನೇ, ನೀನು ಧರ್ಮಕೋವಿದನೆಂಬುದನ್ನು ನಾನು ತಿಳಿದಿರುವೆನು.
ನಿನ್ನ ಹೊರತಾಗಿ ಈ ಲೋಕದಲ್ಲಿ ಇಂತಹ ಭಕ್ತಿಯು ಯಾರಲ್ಲಿ ತಾನೇ ಉಂಟಾದೀತು?
ಸಮಸ್ತಶಾಸ್ತ್ರ ಸಾರಜ್ಞಮ್
ಸರ್ವಧರ್ಮ ಪರಾಯಣಮ್ |
ಅಧ್ಯಾತ್ಮ ವಿದ್ಯಾನಿರತಮ್
ಆಹುಸ್ತ್ವಾಂ ರಾಕ್ಷಸೇಶ್ವರ || 21-15
ಹೇ ರಾಕ್ಷಸೇಶ್ವರನಾದ ವಿಭೀಷಣನೇ, ನೀನು ಎಲ್ಲ ಶಾಸ್ತ್ರಗಳ ಸಾರವನ್ನು ಬಲ್ಲವನೆಂತಲೂ,
ಸರ್ವಧರ್ಮ ಪರಾಯಣನೆಂತಲೂ ಮತ್ತು ಆಧ್ಯಾತ್ಮ ವಿದ್ಯೆಯಲ್ಲಿ ನಿಷ್ಠೆಯುಳ್ಳವನೆಂತಲೂ ಎಲ್ಲ ಜನರೂ ಹೇಳುತ್ತಿರುವರು.
#ತ್ವದೀಯಧರ್ಮಸಂಪತ್ತಿಮ್
ಶ್ರುತ್ವಾಹಂ ವಿಸ್ಮಿತಾಶಯಃ |
ವ್ರಜನ್ ಕೈಲಾಸಮಚಲಮ್
ತ್ವದಂತಿಕಮುಪಾಗತಃ || 21-16
ಆದ್ದರಿಂದ ಕೈಲಾಸಕ್ಕೆ ಹೋಗುತ್ತಿದ್ದ ನಾನು ನಿನ್ನ ಧರ್ಮನಿಷ್ಠೆಯನ್ನು ಕೇಳಿ ವಿಸ್ಮಿತನಾಗಿ ನಿನ್ನ ಸಮೀಪಕ್ಕೆ ಬಂದಿರುವೆನು.
ಪ್ರೀತೋಸ್ಮಿ ತವ ಚಾರಿತ್ರೈಃ
ಶೋಭನೈರ್ಲೊಕ ವಿಶ್ರುತೈಃ |
ದಾಸ್ಯಾಮಿ ತೇ ವರಂ ಸಾಕ್ಷಾತ್
ಪ್ರಾರ್ಥಯಸ್ವ ಯಥೇಪ್ಸಿತಮ್ || 21-17
ಜಗತ್ಪ್ರಸಿದ್ಧವೂ, ಮಂಗಳಕರವೂ ಆದ ನಿನ್ನ ನಡತೆಗಳಿಂದ, ನಿನ್ನ ಉತ್ತಮವಾದ ಆಚರಣೆಗಳಿಂದ ನಾನು ಸಂತುಷ್ಟನಾಗಿದ್ದೇನೆ.
ಅಂತೆಯೇ ನಿನಗೆ ಅಪೇಕ್ಷಿತವಾದ ಇಷ್ಟಾರ್ಥವನ್ನು ಬೇಡಿಕೋ, ಅದನ್ನು ನಾನು ನಿನಗೆ ಕೊಡುತ್ತೇನೆ.
#ಇತಿ ಪ್ರಸಾದ ಸುಮುಖೇ
ಭಾಷಮಾಣೇ ಗಣೇಶ್ವರೇ |
ಪ್ರಣಮ್ಯ ಪರಯಾ ಪ್ರೀತ್ಯಾ
ವ್ಯಾಜಹಾರ ವಿಭೀಷಣಃ || 21-18
ಹೀಗೆ ಶ್ರೀ ರೇಣುಕ ಗಣೇಶ್ವರನು ಪ್ರಸನ್ನ ಮುಖಮಂಡಲವುಳ್ಳವನಾಗಿ
ನುಡಿಯಲು ವಿಭೀಷಣನು ಅತ್ಯಂತ ಪ್ರೀತಿಯಿಂದ ನಮಸ್ಕರಿಸಿ ಹೀಗೆ ನುಡಿದನು.
ಆಗಮಾನುಗ್ರಹಾದೇವ
ಭವತಃ ಶಿವಯೋಗಿನಃ |
ದುರ್ಲಭಾಃ ಸರ್ವಲೋಕಾನಾಮ್
ಸಮಪದ್ಯಂತ ಸಂಪದಃ || 21-19
ಹೇ ಗಣಶ್ರೇಷ್ಠನೇ, ಶಿವಯೋಗಿಯಾದ ತಮ್ಮ ಅಗಮನ ರೂಪವಾದ
ಅನುಗ್ರಹದಿಂದಲೇ ಎಲ್ಲ ಜನರಿಗೆ ದುರ್ಲಭಗಳಾದ ಸಂಪತ್ತುಗಳೆಲ್ಲಾ ದೊರೆಯುವುವು.
#ತಥಾಪಿ ಪ್ರಾರ್ಥನೀಯಂ ಮೇ
ಕಿಂಚಿದಸ್ತಿ ಗಣೇಶ್ವರ |
ಸುಕೃತೇ ಪರಿಪಕ್ವೇ ಹಿ
ಸ್ವಯಂ ಸಿದ್ಧ್ಯತಿ ವಾಂಛಿತಮ್ || 21-20
ಹೇ ಗಣೇಶ್ವರನೇ, ಆದರೂ ಸಹ ನಾನು ಬೇಡಿಕೊಳ್ಳುವುದು ಸ್ವಲ್ಪ ಇರುವುದು. ಸುಕೃತಗಳು (ಪುಣ್ಯಗಳು) ಪರಿಪಕ್ವವಾದಾಗಲೇನೇ
ಅಪೇಕ್ಷಿತವಾದದ್ದು ತಾನಾಗಿಯೇ ಸಿದ್ಧಿಯಾಗುವುದು (‘ಸುಕೃತೇ ಪರಿಪಕ್ವೇ ಹಿ ಸ್ವಯಮ್ ಸಿದ್ಧ್ಯತಿ ವಾಂಛಿತಮ್’).
ರಾವಣೋ ಹಿ ಮಮ ಭ್ರಾತಾ
ಮಾಹೇಶ್ವರಶಿಖಾಮಣಿಃ |
ಅದೃಷ್ಟಶತ್ರುಸಂಬಾಧಮ್
ಶಶಾಸ ಹಿ ಜಗತ್ತ್ರಯಮ್ || 21-21
ನನ್ನ ಅಣ್ಣನಾದ ರಾವಣನು ಮಾಹೇಶ್ವರ (ಶಿವಭಕ್ತ) ಶಿರೋಮಣಿಯಾಗಿದ್ದನು.
ಅವನು ಯಾವನೊಬ್ಬ ಶತ್ರುವಿನ ಬಾಧೆಯಿಲ್ಲದ ಹಾಗೆ ಈ ಮೂರು ಲೋಕವನ್ನು ಪರಿಪಾಲಿಸುತ್ತಿದ್ದನು.
#ಯಸ್ಯ ಪ್ರತಾಪ ಮತುಲಮ್
ಸೋಢುಮಕ್ಷತ ಶಕ್ತಯಃ |
ಇಂದ್ರಾದಯಃ ಸುರಾಃ ಸರ್ವೆ
ರಾಜ್ಯಲಕ್ಷ್ಮ್ಯಾ ವಿಯೋಜಿತಾಃ || 21-22
ಆ ರಾವಣೇಶ್ವರನ ಅತುಲನೀಯವಾದ ಪರಾಕ್ರಮವನ್ನು ಸಹಿಸಲು ಅಸಮರ್ಥರಾದ ಇಂದ್ರಾದಿ ದೇವತೆಗಳೆಲ್ಲರೂ, ತಮ್ಮ ರಾಜ್ಯಲಕ್ಷ್ಮಿಯನ್ನು ಕಳೆದುಕೊಂಡವರಾದರು.
ಸ ತು ಕಾಲವಶೇನೈವ
ಸ್ವಚರಿತ್ರವಿಪರ್ಯಯಾತ್ |
ರಣೇ ವಿಷ್ಣ್ವವತಾರೇಣ
ರಾಮೇಣ ನಿಹತೋಭವತ್ || 21-23
ಅಂತಹ ರಾವಣೇಶ್ವರನು ತನ್ನ ಕಾಲಕರ್ಮವಶದಿಂದ ತನ್ನ ಚಾರಿತ್ರ್ಯದಲ್ಲಿ ವಿಪರ್ಯಾಸವುಂಟಾಗಲು ಯುದ್ಧದಲ್ಲಿ ವಿಷ್ಣುವಿನ ಅವತಾರಿಯಾದ ರಾಮನಿಂದ ಕೊಲ್ಲಲ್ಪಟ್ಟನು.
#ಸ ತು ರಾಮಶರಾವಿದ್ಧಃ
ಕಂಠಸ್ಖಲಿತಜೀವಿತಃ |
ಅವಶಿಷ್ಟಂ ಸಮಾಲೋಕ್ಯ
ಮಾಮವಾದೀತ್ಸುದುಃಖಿತಃ || 21-24
ಯುದ್ಧದಲ್ಲಿ ಅವನು ರಾಮನ ಬಾಣಗಳಿಂದ ಪೆಟ್ಟು ತಿಂದವನಾಗಿ ಪ್ರಾಣವು ಕಂಠಗತವಾದಾಗ ರಾಕ್ಷಸ ವಂಶದಲ್ಲಿ ಉಳಿದಿರುವ ನನ್ನನ್ನು ನೋಡಿ ಅತ್ಯಂತ ದುಃಖಿತನಾಗಿ ನನಗೆ ಹೀಗೆ ನುಡಿದನು.
ವಿಭೀಷಣ ವಿಶೇಷಜ್ಞ
ಮಹಾಬುದ್ಧೇ ಸುಧಾರ್ಮಿಕ |
ಅವಶಿಷ್ಟೋಸಿ ವಂಶಸ್ಯ
ರಕ್ಷಸಾಂ ಭಾಗ್ಯಗೌರವಾತ್ || 21-25
ಧರ್ಮತತ್ಪರನೂ, ಮಹಾಬುದ್ಧಿಶಾಲಿಯೂ, ವಿವೇಕಿಯೂ ಆದ ಎಲೈ ವಿಭೀಷಣನೇ, ರಾಕ್ಷಸ ವಂಶದ ಭಾಗ್ಯದಿಂದಾಗಿ ನೀನೊಬ್ಬನೇ ಜೀವಂತವಾಗಿ ಉಳಿದಿರುವೆ.
#ವಯಮ ಜ್ಞಾನ ಸಂಪನ್ನಾ
ಮಹತ್ಸು ದ್ರೋಹಕಾರಿಣಃ |
ಈದೃಶೀಂ ತು ಗತಿಂ ಪ್ರಾಪ್ತಾ
ದುಸ್ತರಾ ಹಿ ವಿಧಿಸ್ಥಿತಿಃ || 21-26
ಅಜ್ಞಾನಿಗಳಾದ ನಾವು ಮಹಾಪುರುಷರಿಗೆ ದ್ರೋಹವನ್ನು ಮಾಡಿ ಇಂತಹ ದುರ್ಗತಿಯನ್ನು ಹೊಂದಿದೆವು. ವಿಧಿಯ ವಿಧಾನವನ್ನು ಯಾರಿಂದಲೂ ದಾಟಲಾಗುವುದಿಲ್ಲ.
ನವಕಂ ಲಿಂಗಕೋಟೀನಾಮ್
ಪ್ರತಿಷ್ಠಾಪ್ಯಮಿಹ ಸ್ಥಲೇ |
ಇತಿ ಸಂಕಲ್ಪಿತಂ ಪೂರ್ವಮ್
ಮಯಾ ತದವಶಿಷ್ಯತೇ || 21-27
ಈ ಲಂಕೆಯಲ್ಲಿ ಒಂಭತ್ತು ಕೋಟಿ ಲಿಂಗಗಳನ್ನು ಪ್ರತಿಷ್ಠಾಪಿಸಬೇಕೆಂದು ಪೂರ್ವದಲ್ಲಿ ನಾನು ಸಂಕಲ್ಪ ಮಾಡಿದ್ದೆನು. ಅದೆಲ್ಲವೂ ಈಡೇರದೆ ಸ್ವಲ್ಪ ಉಳಿದುಕೊಂಡಿದೆ.
ಕೋಟಿಷಟ್ಕಂ ತು ಲಿಂಗಾನಾಮ್
ಮಯಾ ಸಾಧು ಪ್ರತಿಷ್ಠಿತಮ್ |
ಕೋಟಿತ್ರಯಂ ತು ಲಿಂಗಾನಾಮ್
ಸ್ಥಾಪನೀಯಮತಸ್ತ್ವಯಾ || 21-28
ಆ ಸಂಕಲ್ಪದಲ್ಲಿ ಆರು ಕೋಟಿ ಲಿಂಗಗಳನ್ನು ನಾನೇ ಚೆನ್ನಾಗಿ ಪ್ರತಿಷ್ಠಾಪನೆ ಮಾಡಿದೆನು. ಇನ್ನು ಮೂರು ಕೋಟಿ ಲಿಂಗಗಳ ಪ್ರತಿಷ್ಠಾಪನೆ ಮಾತ್ರ ಉಳಿದಿರುವುದು. ಆದ್ದರಿಂದ ಆ ಮೂರುಕೋಟಿ ಲಿಂಗಗಳ ಸ್ಥಾಪನೆಯ ಕಾರ್ಯವನ್ನು ನೀನು ನೆರವೇರಿಸಬೇಕು
ಇತಿ ತಸ್ಯ ವಚಃ ಶ್ರುತ್ವಾ
ದೀನಬುದ್ಧೇರ್ಮರಿಷ್ಯತಃ |
ತಥಾ ಸಾಧು ಕರೋಮೀತಿ
ಪ್ರತಿಜ್ಞಾತಂ ಮಯಾ ತಥಾ || 21-29
ಹೀಗೆ ಮರಣದ ಸಮಯದಲ್ಲಿ ದೈನ್ಯಬುದ್ಧಿಯಿಂದ ಹೇಳಿದ ಆ ನನ್ನ ಅಣ್ಣನ ಮಾತುಗಳನ್ನು ಕೇಳಿ, ಆಗಲಿ. ನಿನ್ನ ಸಂಕಲ್ಪವನ್ನು ಚೆನ್ನಾಗಿ ನೆರವೇರಿಸುತ್ತೇನೆ ಎಂದು ನಾನು ಆಗ ಪ್ರತಿಜ್ಞೆಯನ್ನು ಮಾಡಿದೆನು.
#ಯುಗಪಚ್ಛಿವ ಲಿಂಗಾನಾಮ್
ಕೋಟಿತ್ರಯ ಮನುತ್ತಮಮ್ |
ಪ್ರತಿಷ್ಠಾಪ್ಯಂ ಯಥಾಶಾಸ್ತ್ರಮ್
ಇತಿ ಮೇ ನಿಶ್ಚಯೋಭವತ್ || 21-30
ಶ್ರೇಷ್ಠವಾದ ಮೂರು ಕೋಟಿ ಲಿಂಗಗಳನ್ನು ಏಕಕಾಲದಲ್ಲಿ ಶಾಸ್ತ್ರೋಕ್ತ ವಿಧಿಯಂತೆ ಪ್ರತಿಷ್ಠಾಪನೆಯನ್ನು ಮಾಡಬೇಕು ಎಂಬ ನಿಶ್ಚಯವನ್ನು ನಾನು ಮಾಡಿದೆನು.
ಲಿಂಗಕೋಟಿ ತ್ರಯಸ್ಯೇಹ
ಯುಗಪತ್ ಸ್ಥಾಪನಾ ವಿಧೌ |
ಅವಿದನ್ನೇ ಕಮಾಚಾರ್ಯಮ್
ಅಹಮೇವಮ ವಸ್ಥಿತಃ || 21-31
ಆದರೆ ಒಂದೇ ಮುಹೂರ್ತದಲ್ಲಿ ಮೂರು ಕೋಟಿ ಲಿಂಗಗಳನ್ನು ಸ್ಥಾಪಿಸುವ ವಿಷಯದಲ್ಲಿ ಸಮರ್ಥನಾದ ಆಚಾರ್ಯನನ್ನು ಕಾಣದೆ ಸುಮ್ಮನೆ ಹೀಗೆ ಕುಳಿತಿದ್ದೇನೆ.
#ಶಿವಶಾಸ್ತ್ರ ವಿಶೇಷಜ್ಞ
ಶಿವಜ್ಞಾನ ನಿಧಿರ್ಭವಾನ್ |
ಆಚಾರ್ಯ ಭಾವಮಾಸಾದ್ಯ
ಮಮ ಪೂರಯ ವಾಂಛಿತಮ್ || 21-32
ಶಿವಶಾಸ್ತ್ರದ ರಹಸ್ಯವನ್ನು ವಿಶೇಷವಾಗಿ ತಿಳಿದಿರುವ ಹೇ ರೇಣುಕನೇ, ನೀನು ಶಿವಜ್ಞಾನಕ್ಕೆ ನಿಕ್ಷೇಪದಂತಿರುವೆ. ಆದಕಾರಣ ನೀನು ಆಚಾರ್ಯಭಾವವನ್ನು ಹೊಂದಿ ನನ್ನ ವಾಂಛಿತವನ್ನು (ಇಷ್ಟಾರ್ಥವನ್ನು) ಪೂರ್ಣ ಮಾಡು.
ತಸ್ಯೇತಿ ವಚನಂ ಶ್ರುತ್ವಾ
ರಾಕ್ಷಸೇಂದ್ರಸ್ಯ ಧೀಮತಃ |
ತಥೇತಿ ಪ್ರತಿಶುಶ್ರಾವ
ಸರ್ವಜ್ಞೋ ಗಣನಾಯಕಃ || 21-33
ಧೀಮಂತನಾದ ರಾಕ್ಷಸೇಂದ್ರನಾದ ವಿಭೀಷಣನ ಈ ರೀತಿಯಾದ ಮಾತುಗಳನ್ನು ಕೇಳಿ ಸರ್ವಜ್ಞನಾದ ರೇಣುಕ ಗಣನಾಯಕನು ಹಾಗೆ ಆಗಲಿ ಎಂದು ಮರಳಿ ಹೇಳಿದನು (ಒಪ್ಪಿಕೊಂಡನು).
#ತತ್ ಸಂತುಷ್ಟಚಿತ್ತಸ್ಯ
ಪೌಲಸ್ತ್ಯಸ್ಯೇಷ್ಟಸಿದ್ಧಯೇ |
ಕೋಟಿತ್ರಯಂ ತು ಲಿಂಗಾನಾಮ್
ಯಥಾಶಾಸ್ತ್ರಂ ಯಥಾವಿಧಿ |
ತ್ರಿಕೋಟ್ಯಾಚಾರ್ಯ ರೂಪೇಣ
ಸ್ಥಾಪಿತಂ ತೇನ ತತ್ಕ್ಷಣೇ || 21-34
ಸಂತುಷ್ಟ ಚಿತ್ತನಾದ ಪುಲಸ್ತ್ಯ ಋಷಿಯ ಮಗನಾದ ವಿಭೀಷಣನ ಇಷ್ಟಾರ್ಥ ಸಿದ್ಧಿಗಾಗಿ ಆ ಲಂಕೆಯಲ್ಲಿ ಶ್ರೀ ರೇಣುಕ ಗಣೇಶ್ವರನು ಮೂರು ಕೋಟಿ ಆಚಾರ್ಯರ ರೂಪವನ್ನು (ಏಕಕಾಲಕ್ಕೆ) ಧರಿಸಿ ಶಾಸ್ತ್ರದ ವಿಧಿ ವಿಧಾನಾನುಸಾರವಾಗಿ ಒಂದೇ ಕ್ಷಣದಲ್ಲಿ ಮೂರು ಕೋಟಿ ಲಿಂಗಗಳನ್ನು ಪ್ರತಿಷ್ಠಾಪನೆ ಮಾಡಿದನು.
ತಾದೃಶಂ ತಸ್ಯ ಮಾಹಾತ್ಯ್ಶಮ್
ಸಮಾಲೋಕ್ಯ ವಿಭೀಷಣಃ |
ಪ್ರಣನಾಮ ಮುಹುರ್ಭಕ್ತ್ಯಾ
ಪಾದಯೋಸ್ತಸ್ಯ ವಿಸ್ಮಿತಃ || 21-35
ಈ ರೀತಿಯಾದ ಆ ರೇಣುಕ ಗಣೇಶ್ವರನ ಮಹಿಮಾ ಸಿದ್ಧಿಯನ್ನು ನೋಡಿ ಆಶ್ಚರ್ಯಗೊಂಡ ವಿಭೀಷಣನು ಅವನ ಪಾದಗಳಿಗೆ ಭಕ್ತಿಯಿಂದ ಮತ್ತೆ ಮತ್ತೆ ನಮಸ್ಕಾರವನ್ನು ಮಾಡಿದನು.
#ಪ್ರಣತಂ ವಿನಯೋಪೇತಮ್
ಪ್ರಹೃಷ್ಟಂ ರಾಕ್ಷಸೇಶ್ವರಮ್ |
ಅನುಗೃಹ್ಯ ಸ್ವಮಾಹಾತ್ಮಾ ್ಯದ್
ರೇಣುಕೋಂತರ್ಹಿತೋ ಭವತ್ |21-36
ಹೀಗೆ ಸಂತೋಷಗೊಂಡು ವಿನಯದಿಂದ ಪ್ರಣಾಮವನ್ನು ಮಾಡಿದ ರಾಕ್ಷಸೇಶ್ವರನಾದ ವಿಭೀಷಣನನ್ನು ಅನುಗ್ರಹಿಸಿ ರೇಣುಕಗಣೇಶ್ವರನು ತನ್ನ ಮಹಿಮಾ ಶಕ್ತಿಯಿಂದ ಅಂತರ್ಧಾನಗೊಂಡನು.
ವಿಭೀಷಣೋಪಿ ಹೃಷ್ಟಾತ್ಮಾ
ರೇಣುಕಸ್ಯ ಪ್ರಸಾದತಃ |
ಶಿವಭಕ್ತಿ ರಸಾಸಕ್ತಃ
ಸ್ಥಿರರಾಜ್ಯ ಮಪಾಲಯತ್ || 21-37
ಇತ್ತ ವಿಭೀಷಣನೂ ಕೂಡ ಶ್ರೀ ರೇಣುಕ ಗಣೇಶ್ವರನ ಪ್ರಸಾದದಿಂದ ಸಂತೋಷಗೊಂಡವನಾಗಿ, ಶಿವಭಕ್ತಿಯ ರಸದಲ್ಲಿ ಆಸಕ್ತನಾದವನಾಗಿ (ಶಿವಭಕ್ತಿ ತತ್ಪರನಾಗಿ) ತನ್ನ ರಾಜ್ಯವನ್ನು ಚಿರಕಾಲದವರೆವಿಗೆ ಪರಿಪಾಲನೆ ಮಾಡಿದನು.
#ರೇಣುಕೋಪಿ ಮಹಾತೇಜಾಃ
ಸಂಚರನ್ ಕ್ಷಿತಿಮಂಡಲೇ |
ಪ್ರಚ್ಛನ್ನಶ್ಚ ಪ್ರಕಾಶಶ್ಚ
ಪರಮಾದ್ವೈತ ಭಾವಿತಃ || 21-38
ಕಾಂಶ್ಚಿದ್ ದೃಷ್ಟಿ ನಿಪಾತೇನ
ಕರುಣಾ ರಸವರ್ಷಿಣಾ |
ಅಪರಾನುಪದೇಶೇನ
ಶಿವಾದ್ವೈತಾಭಿಮರ್ಶಿನಾ || 21-39
#ಅನ್ಯಾಂಶ್ಚ ಸಹವಾಸೇನ
ಸಮಸ್ತಮಲ ಹಾರಿಣಾ |
ಕೃತಾರ್ಥಯನ್ ಜನಾನ್ ಸರ್ವಾನ್
ಕೃತಿನಃ ಪಕ್ವ ಕರ್ಮಿಣಃ |21-40
ದರ್ಶಯಿತ್ವಾ ನಿಜಾಧಿಕ್ಯಮ್
ಶಿವದರ್ಶನ ಲಾಲಸಃ |
ಖಂಡಯಿತ್ವಾ ದುರಾಚಾರಾನ್
ಪಾಷಂಡಾನ್ ಭಿನ್ನ ದರ್ಶನಾನ್ || 21-41
#ಯಂತ್ರಮಂತ್ರ ಕಲಾಸಿದ್ಧಾನ್
ವಿಮತಾನ್ ಸಿದ್ಧಮಂಡಲಾನ್ |
ಸ್ಥಾಪಯಿತ್ವಾ ಶಿವಾಗಮಾನ್ |
ಆಜಗಾಮ ನಿಜಾವಾಸಮ್
ಕೊಲ್ಲಿಪಾಕ್ಯಾಭಿಧಂ ಪುರಮ್ || 21-42
ತತ್ರ ಸಂಭಾವಿತಃ ಸರ್ವೆಃ
ಜನೈಃ ಶಿವ ಪರಾಯಣೈಃ |
ಸೋಮನಾಥಾಭಿಧಾನಸ್ಯ
ಶಿವಸ್ಯ ಪ್ರಾಪ ಮಂದಿರಮ್ || 21-43
ಮಹಾತೇಜಸ್ವಿಯಾದ ಶ್ರೀ ರೇಣುಕನು ಸದಾ ಶಿವಾದ್ವೈತಭಾವ ಸಂಪನ್ನನಾಗಿ ಪ್ರಚ್ಛನ್ನನಾಗಿಯೂ
(ಗುಪ್ತವಾಗಿಯೂ) ಮತ್ತು ಕೆಲವು ಸಮಯ ಪ್ರಕಟವಾಗಿಯೂ ಭೂಮಂಡಲದಲ್ಲಿ ಸಂಚರಿಸುತ್ತಾ,
ಕೆಲವರನ್ನು ತನ್ನ ಕರುಣಾಕಟಾಕ್ಷದಿಂದ ನೋಡುತ್ತಾ, ಬೇರೆಯವರನ್ನು ಶಿವಾದ್ವೈತ ಜ್ಞಾನದ ಉಪದೇಶದಿಂದ
ಕೃತಾರ್ಥರನ್ನಾಗಿ ಮಾಡುತ್ತಾ, ಮತ್ತೆ ಕೆಲವರನ್ನು ಮಲತ್ರಯ ನಿವಾರಕವಾದ ತನ್ನ ಸಹವಾಸದಿಂದ
ಕೃತಾರ್ಥರನ್ನಾಗಿ ಮಾಡುತ್ತಾ, ಇನ್ನುಳಿದ ಸಕಲ ಜನರನ್ನು ಕರ್ತವ್ಯ ಕುಶಲರನ್ನಾಗಿಯೂ ಮತ್ತು ಪಕ್ವ
ಕರ್ಮಿಗಳನ್ನಾಗಿಯೂ ಮಾಡುತ್ತಾ, ತನ್ನ ಆಧಿಕ್ಯವನ್ನು ತೋರಿಸುತ್ತಾ, ದುರಾಚಾರಿಗಳಾದ ಪಾಷಂಡಿಗಳನ್ನು
(ನಾಸ್ತಿಕ ದರ್ಶನಗಳನ್ನು) ಖಂಡಿಸುತ್ತಾ, ಯಂತ್ರ ಮಂತ್ರ ಕಲೆಗಳಲ್ಲಿ ಸಿದ್ಧರಾದ, ತಮಗೆ ಸಮ್ಮತರಲ್ಲದ
ಸಿದ್ಧರ ಮಂಡಲಗಳನ್ನು ಗೆದ್ದು ತನ್ನ ಪ್ರಭಾವದಿಂದ ಶಿವಾಗಮೋಕ್ತ ಸಿದ್ಧಾಂತವನ್ನು ಸ್ಥಾಪಿಸಿ, ಶಿವದರ್ಶನದ ಅಭಿಲಾಷೆಯುಳ್ಳವನಾಗಿ ತನ್ನ ವಾಸಸ್ಥಾನವಾದ ಕೊಲ್ಲಿಪಾಕಿಯೆಂಬ ಪುರಕ್ಕೆ ಆಗಮಿಸಿದನು. ಅಲ್ಲಿದ್ದ ಸಕಲ ಶಿವಭಕ್ತರಿಂದ ಸತ್ಕರಿಸಲ್ಪಟ್ಟವನಾಗಿ ಅಲ್ಲಿನ ಸೋಮನಾಥ ಮಂದಿರಕ್ಕೆ ತಲುಪಿದನು.
#ಪಶ್ಯತಾಂ ತತ್ರ ಸರ್ವೆಷಾಮ್
ಭಕ್ತಾನಾಂ ಶಿವಯೋಗಿನಾಮ್ |
ತನ್ವಾನೋ ವಿಸ್ಮಯಂ ಭಾವೈಃ
ತುಷ್ಟಾವ ಪರಮೇಶ್ವರಮ್ || 21-44
ಆ ಸೋಮನಾಥ ಮಂದಿರದಲ್ಲಿ ತನ್ನನ್ನು ನೋಡುತ್ತಿರುವ ಎಲ್ಲ ಶಿವಯೋಗೀಶ್ವರರಿಗೂ ಮತ್ತು ಎಲ್ಲ
ಭಕ್ತರಿಗೂ ವಿಸ್ಮಯಗೊಳ್ಳುವ ಹಾಗೆ ತನ್ನ ಉತ್ಕೃಷ್ಟ ಭಾವನೆಗಳಿಂದ ಪರಮೇಶ್ವರನನ್ನು ಕುರಿತು ಸ್ತೋತ್ರ ಮಾಡಿದನು.
ದೇವ ದೇವ ಜಗನ್ನಾಥ
ಜಗತ್ಕಾರಣಕಾರಣ |
ಬ್ರಹ್ಮವಿಷ್ಣುಸುರಾಧೀಶ-
ವಂದ್ಯಮಾನಪದಾಂಬುಜ || 21-45
#ಸಂಸಾರ ನಾಟಕ ಭ್ರಾಂತಿ-
ಕಲಾನಿರ್ವಹಣಪ್ರದ |
ಸಮಸ್ತವೇದವೇದಾಂತ-
ಪರಿಬೋಧಿತವೈಭವ || 21-46
ಸಂಸಾರವೈದ್ಯ ಸರ್ವಜ್ಞ
ಸರ್ವಶಕ್ತಿನಿರಂಕುಶ |
ಸಚ್ಚಿದಾನಂದ ಸರ್ವಸ್ವ
ಪರಮಾಕಾಶವಿಗ್ರಹ || 21-47
ಸಮಸ್ತ ಜಗದಾಧಾರ-
ಜ್ಯೋತಿರ್ಲಿಂಗ ವಿಜೃಂಭಣ |
ಸದಾಶಿವ ಮುಖಾನೇಕ-
ದಿವ್ಯಮೂರ್ತಿ ಕಲಾಧರ || 21-48
# ಗುಣತ್ರಯ ಪದಾತೀತ
ಮಲತ್ರಯ ವಿನಾಶನ |
ಜಗತ್ತ್ರಯ ವಿಲಾಸಾತ್ಮನ್
ಶ್ರುತಿತ್ರಯ ವಿಲೋಚನ || 21-49
ಪಾಹಿ ಮಾಂ ಪರಮೇಶಾನ
ಪಾಹಿ ಮಾಂ ಪಾರ್ವತೀಪತೇ |
#ತ್ವದಾಜ್ಞಯಾ ಮಯೈತಾವತ್
ಕಾಲಮಾತ್ರಂ ಮಹೀತಲೇ |
ಅಚಾರಿ ಭವದುಕ್ತಾನಾಮ್
ಆಗಮಾನಾಂ ಪ್ರಸಿದ್ಧಯೇ || 21-50
ಅತಃ ಪರಂ ಸ್ವರೂಪಂ ತೇ
ಪ್ರಾಪ್ತುಕಾಮೋಸ್ಮಿ ಶಂಕರ |
ಅಂತರಂ ದೇಹಿ ಮೇ ಕಿಂಚಿತ್
ಅನುಕಂಪಾವಿಶೇಷತಃ || 21-51
ಹೇ ದೇವದೇವನಾದ ಜಗನ್ನಾಥನೇ, ಈ ಜಗತ್ತಿನ ಕಾರಣಕ್ಕೂ ಕಾರಣನಾದವನೇ, ಬ್ರಹ್ಮ, ವಿಷ್ಣು ಮತ್ತು ಇಂದ್ರರಿಂದ ನಮಸ್ಕರಿಸಲ್ಪಟ್ಟ ಪಾದಕಮಲವುಳ್ಳವನೇ, ಸಂಸಾರವೆಂಬ ನಾಟಕ ಭ್ರಾಂತಿಯನ್ನು ದೂರ ಮಾಡಿದವನೇ, ಸಮಸ್ತ ವೇದ ವೇದಾಂತಗಳಿಂದ ಹೊಗಳಲ್ಪಟ್ಟ ವೈಭವವುಳ್ಳವನೇ, ಭವರೋಗ ವೈದ್ಯನೇ, ಸರ್ವಜ್ಞನೇ, ಸರ್ವಕರ್ತೃತ್ವಾದಿ ಮಹಾಶಕ್ತಿಯುಳ್ಳವನೇ, ನಿರಂಕುಶನೇ, ಸಚ್ಚಿದಾನಂದ ಸ್ವರೂಪನೇ, ಚಿದಾಕಾಶವೇ ದೇಹವಾಗಿ ಉಳ್ಳವನೇ, ಸಕಲ ಜಗತ್ತಿಗೂ ಆಧಾರಭೂತನಾದವನೇ, ಜ್ಯೋತಿರ್ಲಿಂಗ ರೂಪದಿಂದ ಗೋಚರಿಸುವವನೇ, ಸದಾಶಿವ ರುದ್ರವರ್ಗ ಮೊದಲಾದ ಅನೇಕ ಲೀಲಾಮೂರ್ತಿಗಳನ್ನು ಧರಿಸಿದವನೇ, ಸತ್ವಾದಿ ಗುಣತ್ರಯ ಸ್ಥಾನಾತೀತನೇ, ಆಣವಾದಿ ಮಲತ್ರಯ ವಿನಾಶಕನೇ,
ಮೂರು ಲೋಕಗಳ ಪಂಚಕೃತ್ಯಗಳೇ ಲೀಲೆಯಾಗಿ ಉಳ್ಳವನೇ, ಮೂರು ಶ್ರುತಿಗಳೇ ಕಣ್ಣಾಗಿ ಉಳ್ಳವನೇ,
ಹೇ ಪಾರ್ವತೀಪತಿಯಾದ ಪರಮೇಶ್ವರನೇ, ನನ್ನನ್ನು ರಕ್ಷಿಸು, ನನ್ನನ್ನು ರಕ್ಷಿಸು. ನಿನ್ನ ಅಪ್ಪಣೆಯ ಮೇರೆಗೆ ನಾನು ಇರುವವರೆವಿಗೆ ಭೂಮಿಯ ಮೇಲೆ ನಿನ್ನಿಂದ ಉಪದೇಶಿಸಲ್ಪಟ್ಟ ಶಿವಾಗಮಗಳನ್ನು ಪ್ರಸಾರ ಮಾಡುವುದಕ್ಕಾಗಿ ಸಂಚರಿಸಿದೆನು.
ಎಲೈ ಶಂಕರನೇ, ಇನ್ನು ನಾನು ನಿನ್ನ ನಿಜರೂಪವನ್ನು ಪಡೆಯಬೇಕೆಂಬ ಇಚ್ಛೆಯುಳ್ಳವನಾಗಿದ್ದೇನೆ. ಆದಕಾರಣ ಕೃಪೆಯಿಂದ ನಿನ್ನಲ್ಲಿ ನನಗೆ ಸ್ವಲ್ಪ ಅವಕಾಶವನ್ನು ಕೊಡು.
#ಇತ್ಯುಕ್ತೇ ಗಣನಾಯಕೇನ ಸಹಸಾ ಲಿಂಗಾತ್ತತಃ ಶಾಂಕರಾತ್
ವತ್ಸಾಗಚ್ಛ ಮಹಾನುಭಾವ ಭವತೋ ಭಕ್ತ್ಯಾ ಪ್ರಸನ್ನೋಸ್ಮ್ಯಹಮ್|
ಇತ್ಯುಚ್ಚೆ ರಗದಾದ್ವಚಸ್ತನುಭೃತಾ ಮಾಶ್ಚರ್ಯ ಮಾಸೀತ್ ತ್ತದಾ
ದಿವ್ಯೋ ದುಂದುಭಿರಾನನಾದ ಗಗನೇ ಪುಷ್ಪಂ ವವರ್ಷುರ್ಗಣಾಃ||21-52
#ಶ್ರುತ್ವಾ ಲಿಂಗಾದ್ವಚನ ಮುದಿತಂ ಶಾಂಕರಂ, ಸಾನುಕಂಪಮ್
ಸಂಹೃಷ್ಟಾತ್ಮಾ ಗಣಪತಿರಥೋ, ಜ್ಯೋತಿಷಾ ದೀಪ್ಯಮಾನಃ |
ಜಾತೋತ್ಕಂಠೈಃ ಪರಮನುಚರೈಃ,ಯೋಗಿಭಿಃ ಸ್ತೂಯಮಾನೋ
ಜ್ಯೋತಿರ್ಲಿಂಗಂ ಪರಮನುವಿಶತ್ ಸ್ವಪ್ರಕಾಶಂ ತದಾನೀಮ್ || 21-53
ಪೂರ್ವೊಕ್ತ ರೀತಿಯಲ್ಲಿ ಶ್ರೀ ರೇಣುಕ ಗಣೇಶ್ವರನು ಶಿವನನ್ನು ಸ್ತುತಿಸಲು ಆ ಕೂಡಲೇ ಆ ಸೋಮೇಶ್ವರ ಮಹಾಲಿಂಗದಿಂದ ಹೇ ಮಹಿಮಾಶಾಲಿಯಾದ ವತ್ಸನೇ, ಇಲ್ಲಿ ಬಾ. ನಿನ್ನ ಭಕ್ತಿಯಿಂದ ನಾನು ಪ್ರಸನ್ನನಾಗಿದ್ದೇನೆ ಎಂಬ ಧ್ವನಿಯು ಉತ್ಪನ್ನವಾಯಿತು. ಆ ಧ್ವನಿಯನ್ನು ಕೇಳಿ ಜನರೆಲ್ಲಾ ಆಶ್ಚರ್ಯಚಕಿತರಾದರು.
ಅದೇ ಸಮಯದಲ್ಲಿ ದೇವ ದುಂದುಭಿಗಳು ಮೊಳಗತೊಡಗಿದವು. ಶಿವಗಣರು ಪುಷ್ಪವೃಷ್ಟಿಯನ್ನುಗೈದರು. ಶಿವಲಿಂಗದಿಂದ ಹೊರಹೊರಟ ದಯಾಘನವಾದ ಶಿವನ ಆ ನುಡಿಗಳನ್ನು ಕೇಳಿ ರೇಣುಕ ಗಣೇಶ್ವರನು ಅತ್ಯಂತ ಸಂತುಷ್ಟಾಂತರಂಗನಾಗಿ ತೇಜಸ್ಸಿನಿಂದ ಹೊಳೆಯ ತೊಡಗಿದನು.
ಆಗ ಅವನ ಒಡನಾಡಿಗಳಾದ ಶಿವಯೋಗಿಗಳೆಲ್ಲಾ ಆಶ್ಚರ್ಯಗೊಂಡು ಸ್ತುತಿಯನ್ನು ಮಾಡುತ್ತಿರುವಾಗ ಆ ಜ್ಯೋತಿರ್ಲಿಂಗದಲ್ಲಿ ಸಾಮರಸ್ಯದಿಂದ ಪ್ರವೇಶಿಸಿ ಐಕ್ಯಗೊಂಡನು.
# ಲೀನೇ ತಸ್ಮಿನ್ ಶಾಂಕರೇ ಸ್ವಪ್ರಕಾಶೇ
ದಿವ್ಯಾಕಾರೇ ರೇಣುಕೋ ಸಿದ್ಧನಾಥೇ |
ಸರ್ವೊ ಲೋಕೋ ವಿಸ್ಮಿತೋಭೂತ್ ತದಾನೀಂ
ಶೈವೀ ಭಕ್ತಿಃ ಸಪ್ರಮಾಣಾ ಬಭೂವ || 21-54
ದಿವ್ಯದೇಹಧಾರಿಯಾದ ಸಿದ್ಧರಿಗೆಲ್ಲಾ ಒಡೆಯನಾದ ರೇಣುಕ ಗಣೇಶ್ವರನು ಹೀಗೆ ಸ್ವಪ್ರಕಾಶಮಯವಾದ ಆ ಸೋಮೇಶ್ವರ ಲಿಂಗದಲ್ಲಿ ಐಕ್ಯನಾಗಲು ಸಕಲ ಜನರು ಆಶ್ಚರ್ಯಗೊಂಡರು. ಆಗ ಶಿವಭಕ್ತಿಯು ಸರ್ವೊತ್ಕೃಷ್ಟವಾದುದೆಂಬ ವಿಷಯವು ಪ್ರತ್ಯಕ್ಷ ಪ್ರಮಾಣದಿಂದ ಸಿದ್ಧವಾಯಿತು.
# ಲೀನೇ ತಸ್ಮಿನ್ ಶಾಂಕರೇ ಸ್ವಪ್ರಕಾಶೇ
ದಿವ್ಯಾಕಾರೇ ರೇಣುಕೋ ಸಿದ್ಧನಾಥೇ |
ಸರ್ವೊ ಲೋಕೋ ವಿಸ್ಮಿತೋಭೂತ್ ತದಾನೀಂ
ಶೈವೀ ಭಕ್ತಿಃ ಸಪ್ರಮಾಣಾ ಬಭೂವ || 21-54
#ಶ್ರೀವೇದಾಗಮವೀರಶೈವಸರಣಿಂ ಶ್ರೀಷಟ್ಸ್ಥಲೋದ್ಯನ್ಮಣಿಮ್
ಶ್ರೀಜೀವೇಶ್ವರಯೋಗಪದ್ಮತರಣಿಂ ಶ್ರೀಗೋಪ್ಯಚಿಂತಾಮಣಿಮ್
ಶ್ರೀಸಿದ್ಧಾಂತಶಿಖಾಮಣಿಂ ಲಿಖಯಿತಾ ಯಸ್ತಂ ಲಿಖಿತ್ವಾ ಪರಾನ್
ಶ್ರುತ್ವಾ ಶ್ರಾವಯಿತಾ ಸ ಯಾತಿ ವಿಮಲಾಂ ಭುಕ್ತಿಂ ಚ ಮುಕ್ತಿಂ ಪರಾಮ್|21-55
ಶ್ರೀ ವೇದಾಗಮಗಳಿಂದ ಪ್ರತಿಪಾದಿತವಾಗಿರುವ ವೀರಶೈವ ಮಾರ್ಗವನ್ನು ನಿರೂಪಿಸಿರುವ, ಷಟ್ಸ್ಥಲ ಮಾರ್ಗವನ್ನು ತೋರಿಸಿ ಕೊಡುವ ಹೊಳೆಯುತ್ತಿರುವ ರತ್ನದಂತಿರುವ, ಜೀವ ಮತ್ತು ಈಶ್ವರರ ಐಕ್ಯವೆಂಬ ತಾವರೆಯನ್ನು ಅರಳಿಸುವ ಸೂರ್ಯನಂತಿರುವ, ಶಿವಾದ್ವೈತ ಜ್ಞಾನವೆಂಬ ಗುಪ್ತನಿಧಿಯನ್ನು ತೋರಿಸಿಕೊಡುವ ಶ್ರೀ ಚಿಂತಾಮಣಿಯಾಗಿರುವ, ಸಕಲ ಸಿದ್ಧಾಂತಗಳಿಗೆ ಶಿಖಾರತ್ನದಂತಿರುವ ಈ ಶ್ರೀ ಸಿದ್ಧಾಂತ ಶಿಖಾಮಣಿಯೆಂಬ ಶಿವಾದ್ವೈತ ಶಾಸ್ತ್ರವನ್ನು ಯಾರು ತಾನಾಗಿ ಬರೆದು, ಇತರರಿಂದಲೂ ಬರೆಯಿಸುವನೋ, ಯಾವಾತನು ತಾನೂ ಶ್ರವಣ ಮಾಡಿ (ಕೇಳಿ) ಇತರರಿಗೂ ಶ್ರವಣ
ಮಾಡಿಸುವನೋ ಆತನು ನಿರ್ಮಲವಾದ ಐಹಿಕ ಸುಖಭೋಗಗಳನ್ನು ಮತ್ತು ಸರ್ವೊತ್ಕೃಷ್ಟವಾದ ಮುಕ್ತಿಯನ್ನು ಪಡೆದುಕೊಳ್ಳುವನು.
ಇತಿ ವಿಭೀಷಣಾಭೀಷ್ಟಪ್ರದಾನಂ
ಓಂ ತತ್ಸತ್ ಇತಿ
ಶ್ರೀ ಶಿವಗೀತೇಷು ಸಿದ್ಧಾಂತಾಗಮೇಷು ಶಿವಾದ್ವೈತವಿದ್ಯಾಯಾಂ ಶಿವಯೋಗಶಾಸ್ತ್ರೇ
ಶ್ರೀರೇಣುಕಾಗಸ್ತ್ಯಸಂವಾದೇ ವೀರಶೈವಧರ್ಮನಿರ್ಣಯೇ
ಶ್ರೀ ಶಿವಯೋಗಿ ಶಿವಾಚಾರ್ಯವಿರಚಿತೇ ಶ್ರೀ ಸಿದ್ಧಾಂತ ಶಿಖಾಮಣೌ
ವಿಭೀಷಣಾಭೀಷ್ಟವರ ಪ್ರದಾನಪ್ರಸಂಗೋ ನಾಮ ಏಕವಿಂಶತಿತಮಃ ಪರಿಚ್ಛೇದಃ ||
ಇಲ್ಲಿಗೆ ವಿಭೀಷಣಾಭೀಷ್ಟಪ್ರದಾನವು ಮುಗಿಯಿತು.
ಓಂ ತತ್ಸತ್ ಇಲ್ಲಿಗೆ ಶ್ರೀ ಶಿವನಿಂದ ಉಪದೇಶಿಸಲ್ಪಟ್ಟು
ಶ್ರೀ ಸಿದ್ಧಾಂತಾಗಮಗಳಲ್ಲಿಯ ಶಿವಾದ್ವೈತವಿದ್ಯಾರೂಪವೂ, ಶಿವಯೋಗ ಶಾಸ್ತ್ರವೂ,
ಶ್ರೀ ರೇಣುಕಾಗಸ್ತ್ಯಸಂವಾದರೂಪವೂ, ಶ್ರೀ ವೀರಶೈವಧರ್ಮನಿರ್ಣಯವೂ,
ಶ್ರೀ ಶಿವಯೋಗಿ ಶಿವಾಚಾರ್ಯವಿರಚಿತವೂ ಆದ ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿ
ವಿಭೀಷಣನ ಅಭೀಷ್ಟವರಪ್ರದಾನಪ್ರಸಂಗವೆಂಬ ಹೆಸರಿನ
ಇಪ್ಪತ್ತೊಂದನೆಯ ಪರಿಚ್ಛೇದವು ಮುಗಿದುದು.