ಅಷ್ಟಾದಶಃ ಪರಿಚ್ಛೇದಃ

ಪ್ರಾಣಲಿಂಗಿಸ್ಥಲಾಂತರ್ಗತ ನವವಿಧಲಿಂಗ ಸ್ಥಲ ಪ್ರಸಂಗಃ

ಅಥ ಪ್ರಾಣಲಿಂಗಿ ಸ್ಥಲಮ್

|| ಅಗಸ್ತ್ಯ ಉವಾಚ ||

ಪ್ರಸಾದಿಸ್ಥಲ ಸಂಬದ್ಧಾಃ

ಸ್ಥಲಭೇದಾಃ ಪ್ರಕೀರ್ತಿತಾಃ |

ಪ್ರಾಣಲಿಂಗಿಸ್ಥಲಾ ರೂಢಾನ್

ಸ್ಥಲಭೇದಾನ್ ವದಸ್ವ ಮೇ || 18-1

ಹೇ ಗಣೇಶ್ವರನೇ, ಪ್ರಸಾದಿ ಸ್ಥಲಕ್ಕೆ ಸಂಬಂಧಪಟ್ಟ ಸ್ಥಲ ಭೇದಗಳು ತಮ್ಮಿಂದ ಉಪದೇಶಿಸಲ್ಪಟ್ಟಿವೆ. (ಈಗ ತಾವು) ನನಗೆ ಪ್ರಾಣಲಿಂಗಿ ಸ್ಥಲದಲ್ಲಿರುವ ಸ್ಥಲ ಭೇದವನ್ನು ಕುರಿತು ಹೇಳುವವರಾಗಿರಿ.

|| ಶ್ರೀ ರೇಣುಕ ಉವಾಚ ||

#ಸ್ಥಲಾನಾಂ ನವಕಂ ಪ್ರೋಕ್ತಮ್

ಪ್ರಾಣಲಿಂಗಿ ಸ್ಥಲಾ ಶ್ರಿತಮ್ |

ಆದಾವಾತ್ಮ ಸ್ಥಲಂ ಪ್ರೋಕ್ತಮ್

ಅಂತರಾತ್ಮ ಸ್ಥಲಂ ತತಃ || 18-2

ಹೇ ಮುನಿಶ್ರೇಷ್ಠನೇ, ಈ ಪ್ರಾಣಲಿಂಗಿಸ್ಥಲದಲ್ಲಿ ಒಂಭತ್ತು ಸ್ಥಲಗಳು ಹೇಳಲ್ಪಟ್ಟಿವೆ. ಅವುಗಳಲ್ಲಿ ಮೊದಲನೆಯದು ಆತ್ಮಸ್ಥಲವು, ಅನಂತರ ಅಂತರಾತ್ಮಸ್ಥಲವು. ಅದಾದ ಮೇಲೆ ಪರಮಾತ್ಮಸ್ಥಲವು.

ಪರಮಾತ್ಮ ಸ್ಥಲಂ ಪಶ್ಚಾತ್

ನಿರ್ದೆಹಾಗಮ ಸಂಜ್ಞಕಮ್ |

ನಿರ್ಭಾವಾಗಮ ಸಂಜ್ಞಂ ಚ

ತತೋ ನಷ್ಟಾಗಮ ಸ್ಥಲಮ್ || 18-3

ತರುವಾಯ ನಿರ್ದೆಹಾಗಮಸ್ಥಲವು, ನಂತರ ನಿರ್ಭಾವಾಗಮಸ್ಥಲವು. ಅದಾದ ಮೇಲೆ ನಷ್ಟಾಗಮಸ್ಥಲವು, ತದನಂತರ ಆದಿ ಪ್ರಸಾದಿಸ್ಥಲವು, ಆನಂತರ ಅಂತ್ಯಪ್ರಸಾದಿಸ್ಥಲವು.

#ಆದಿ ಪ್ರಸಾದನಾಮಾ ಥ

ತತೋಪ್ಯಂತ್ಯ ಪ್ರಸಾದಕಮ್ |

ಸೇವ್ಯ ಪ್ರಸಾದಕಂ ಚಾಥ

ಶ್ರುಣು ತೇಷಾಂ ಚ ಲಕ್ಷಣಮ್ || 18-4

ಅದಾದ ಮೇಲೆ ಸೇವ್ಯಪ್ರಸಾದಿ ಸ್ಥಲವು. ಇನ್ನು ಇವುಗಳ ಲಕ್ಷಣಗಳನ್ನು ಕೇಳುವಂತಹವನಾಗು.

ಇತಿ ಪ್ರಾಣಲಿಂಗಿ ಸ್ಥಲಮ್

-----------------

ಅಥ ಆತ್ಮಸ್ಥಲdಮ್

ಜೀವ ಭಾವಂ ಪರಿತ್ಯಜ್ಯ

ಯದಾ ತತ್ತ್ವಂ ವಿಭಾವ್ಯತೇ |

ಗುರೋಶ್ಚ ಬೋಧ ಯೋಗೇನ

ತದಾತ್ಮಾಯಂ ಪ್ರಕೀರ್ತಿ ತಃ || 18-5

ಶ್ರೀಗುರುವಿನಿಂದ ಮಾಡಿದ ಶಿವಾದ್ವೈತ ಬೋಧೆಯಿಂದ ಶಿಷ್ಯನು ತನ್ನ ಜೀವಭಾವವನ್ನು ಪರಿತ್ಯಜಿಸಿ ಯಾವಾಗ ಪರತತ್ತ್ವವನ್ನು ಭಾವಿಸುವನೋ ಆಗ ಅವನು ಆತ್ಮಸ್ಥಲಿಯೆಂದು ಕರೆಯಿಸಿಕೊಳ್ಳುವನು.

#ವಾಲಾಗ್ರ ಶತಭಾಗೇನ

ಸದೃಶೋ ಹೃದಯ ಸ್ಥಿತಃ |

ಅಶ್ನನ್ ಕರ್ಮಫಲಂ ಸರ್ವಮ್

ಆತ್ಮಾ ಸ್ಫುರತಿ ದೀಪವತ್ || 18-6

ಈ ಆತ್ಮನು ಕೂದಲಿನ ಅಗ್ರಭಾಗದ ಶತಭಾಗಕ್ಕೆ ಸಮಾನವಾದ ಪ್ರಮಾಣವುಳ್ಳವನಾಗಿ (ಅತ್ಯಂತ ಸೂಕ್ಷ್ಮ ರೂಪವಾಗಿ) ಹೃದಯದಲ್ಲಿ ಇದ್ದುಕೊಂಡು ತನ್ನ ಕರ್ಮಫಲಗಳನ್ನು ಅನುಭವಿಸುತ್ತಾ ದೀಪದಂತೆ ಪ್ರಕಾಶಮಾನವಾಗಿದ್ದಾನೆ.

ಆತ್ಮಾಪಿ ಸರ್ವಭೂತಾನಾಮ್

ಅಂತಃಕರಣ ಮಾಶ್ರಿತಃ |

ಅಣುಭೂತೋ ಮಲಾ ಸಂಗಾದ್

ಆದಿಕರ್ಮ ನಿಯಂತ್ರಿತಃ || 18-7

ಈ ಆತ್ಮನು ಎಲ್ಲ ಭೂತಗಳ ಆತ್ಮನಾಗಿದ್ದರೂ ಸಹ (ವ್ಯಾಪಕವಾಗಿದ್ದರೂ) ಮಲಗಳ ಸಂಗದಿಂದ (ಆಣವಾದಿ ಮಲಗಳ ಸಂಬಂಧದಿಂದ) ತಾನು ಅಣುರೂಪನಾಗಿ ಅಂತಃಕರಣವನ್ನು ಆಶ್ರಯಿಸಿಕೊಂಡು ತನ್ನ ಪ್ರಾಚೀನವಾದ ಕರ್ಮಪಾಶದಿಂದ ಬಂಧಿಸಲ್ಪಟ್ಟಿದ್ದಾನೆ.

#ಜಪಾ ಯೋಗಾದ್ಯಥಾ ರಾಗಃ

ಸ್ಫಟಿಕಸ್ಯ ಮಣೇರ್ಭವೇತ್ |

ತಥಾಹಂಕಾರ ಸಂಬಂಧಾತ್

ಆತ್ಮ ನೋ ದೇಹಮಾನಿತಾ || 18-8

ಜಪಾಕುಸುಮ ಯೋಗದಿಂದ (ಕೆಂಪು ದಾಸವಾಳದ ಸಂಬಂಧದಿಂದ) ಹೇಗೆ ಸ್ಫಟಿಕಮಣಿಗೆ ಕೆಂಪುಬಣ್ಣದ ಸಂಬಂಧ ವಾಗುವುದೋ ಅದರಂತೆ ಅಹಂಕಾರದ ಸಂಬಂಧದಿಂದ ಈ ಆತ್ಮನಿಗೆ ದೇಹಾಭಿಮಾನವು ಉಂಟಾಗುತ್ತದೆ.

ಅಶರೀರೋಪಿ ಸರ್ವತ್ರ

ವ್ಯಾಪಕೋಪಿ ನಿರಂಜನಃ|

ಆತ್ಮಾ ಮಾಯಾ ಶರೀರಸ್ಥಃ

ಪರಿಭ್ರಮತಿ ಸಂಸೃತೌ || 18-9

ಈ ಆತ್ಮನು ಅಶರೀರನಾಗಿದ್ದರೂ, ಸರ್ವತ್ರ ವ್ಯಾಪಕನಾಗಿದ್ದರೂ ಮತ್ತು ನಿರಂಜನನಾಗಿದ್ದರೂ (ದೋಷರಹಿತನಾಗಿದ್ದರೂ) ಸಹ ಮಾಯಾಶರೀರಸ್ಥನಾಗಿ (ಅಧೋಮಾಯೆಯಿಂದ ಕಲ್ಪಿಸಲ್ಪಟ್ಟ ಶರೀರದಲ್ಲಿ ವಾಸಿಸುವವನಾಗಿ) ಸಂಸಾರ ಚಕ್ರದಲ್ಲಿ ಸುತ್ತುತ್ತಿರುತ್ತಾನೆ. (ತಾತ್ಪರ್ಯ: ಶಕ್ತಿ ಸದಾಶಿವೇಶ್ವರ ವಿದ್ಯಾರೂಪವಾಗಿ ಅಪರಮುಕ್ತಿ ಕ್ಷೇತ್ರವಾದ ಶುದ್ಧಮಯಾ ಶರೀರಸ್ಥ ನಾದಾತ್ಮನಿಗೆ ಸಂಸಾರ ವಿಲ್ಲವೆಂದರ್ಥ. ಆಧಾರ – ಸಿದ್ದಾಂತ ಶಿಖಾಮಣಿ ಸೋಸಲೆ ಶ್ರೀ ರೇವಣಾರಾಧ್ಯರ ಗ್ರಂಥ)

#ಆತ್ಮ ಸ್ವರೂಪ ವಿಜ್ಞಾನಮ್

ದೇಹೇಂದ್ರಿಯ ವಿಭಾಗತಃ |

ಅಖಂಡ ಬ್ರಹ್ಮ ರೂಪೇಣ

ತದಾತ್ಮ ಪ್ರಾಪ್ತಿ ರುಚ್ಯತೇ || 18-10

ದೇಹ, ಇಂದ್ರಿಯಗಳಿಗಿಂತ ನಾನು ಭಿನ್ನನಾಗಿದ್ದೇನೆ ಮತ್ತು ನಾನು ಅಖಂಡ ಬ್ರಹ್ಮರೂಪನಾಗಿದ್ದೇನೆ ಎಂಬುದಾಗಿ ತನ್ನ ಆತ್ಮಸ್ವರೂಪದ ಅನುಭವಾತ್ಮಕ ಜ್ಞಾನವನ್ನು ಪ್ರಾಪ್ತ ಮಾಡಿಕೊಳ್ಳುವುದೇ ಆತ್ಮಪ್ರಾಪ್ತಿಯೆಂದು ಹೇಳಲ್ಪಡುತ್ತದೆ.

ನ ಚಾಸ್ತಿ ದೇಹ ಸಂಬಂಧೋ

ನಿರ್ದೆಹಸ್ಯ ಸ್ವಭಾವತಃ |

ಅಜ್ಞಾನ ಕರ್ಮ ಯೋಗೇನ

ದೇಹೀ ಭವತಿ ಭುಕ್ತಯೇ || 18-11

ನಿರ್ದೆಹಿಯಾದ ಆತ್ಮನಿಗೆ ಸ್ವಾಭಾವಿಕವಾಗಿ (ಸಹಜವಾಗಿ) ದೇಹಸಂಬಂಧವು ಇರುವುದಿಲ್ಲ. ಆದರೆ ಅನಾದಿಯಾದ (ಆಣವಾದಿ ಮಲ ಹಾಗೂ ಕರ್ಮಸಂಬಂಧದಿಂದ) ಕರ್ಮಫಲದ ಭೋಗಕ್ಕಾಗಿ ‘ದೇಹ’ವುಳ್ಳವನಾಗುತ್ತಾನೆ.

#ನಾ ಸೌ ದೇವೋ ನ ಗಂಧರ್ವೊ

ನ ಯಕ್ಷೊ ನೈವ ರಾಕ್ಷಸಃ |

ನ ಮನುಷ್ಯೋ ನ ತಿರ್ಯಕ್ ಚ

ನ ಚ ಸ್ಥಾವರವಿಗ್ರಹಃ |

ತತ್ತಚ್ಛರೀರ ಯೋಗೇನ

ತತ್ತನ್ನಾಮ್ನಾ ವಿರಾಜತೇ || 18-12

ಈ ಆತ್ಮನು ದೇವನೂ ಅಲ್ಲ, ಗಂಧರ್ವನೂ ಅಲ್ಲ, ಯಕ್ಷನೂ ಅಲ್ಲ, ರಾಕ್ಷಸನೂ ಅಲ್ಲ, ಮನುಷ್ಯನೂ ಅಲ್ಲ, ತಿರ್ಯಕ್ ಪ್ರಾಣಿಯೂ ಅಲ್ಲ ಮತ್ತು ಸ್ಥಾವರ ಶರೀರಿಯೂ ಅಲ್ಲ (ತರು ಮರಾದಿಗಳಲ್ಲ) ಆದರೆ ಆಯಾ ಶರೀರಗಳ ಸಂಬಂಧದಿಂದ ಆಯಾ ಹೆಸರುಗಳಿಂದ ಕರೆಯಲ್ಪಡುತ್ತಾನೆ.

ನಾನಾ ಕರ್ಮವಿಪಾಕಾಶ್ಚ

ನಾನಾ ಯೋನಿಸಮಾಶ್ರಿತಾಃ |

ನಾನಾ ಯೋಗ ಸಮಾಪನ್ನಾ

ನಾನಾ ಬುದ್ಧಿ ವಿಚೇಷ್ಟಿತಾಃ || 18-13

#ನಾನಾ ಮಾರ್ಗ ಸಮಾರೂಢಾ

ನಾನಾ ಸಂಕಲ್ಪ ಕಾರಿಣಃ|

ಅ ಸ್ವತಂತ್ರಾಶ್ಚ ಕಿಂಚಿಜ್ಜ್ಞಾಃ

ಕಿಂಚಿತ್ಕರ್ತೃತ್ವ ಹೇತವಃ |

ಲೀಲಾ ಭಾಜನ ತಾಂ ಪ್ರಾಪ್ತಾಃ

ಶಿವಸ್ಯ ಪರಮಾತ್ಮನಃ || 18-14

ಈ ಜೀವರು ತಮ್ಮ ನಾನಾ ವಿಧಗಳಾದ ಪೂರ್ವಕರ್ಮದ ಪರಿಪಾಕದಿಂದ ದೇವ ಮನುಷ್ಯಾದಿ ನಾನಾ ಯೋನಿಗಳಲ್ಲಿ ಹುಟ್ಟಿ ಅನೇಕ ವಿಧವಾದ ಯೋಗಗಳನ್ನು ಪಡೆದು (ಅನೇಕ ಅಪ್ರಾಪ್ತ ವಸ್ತುಗಳನ್ನು ಪ್ರಾಪ್ತ ಮಾಡಿಕೊಂಡು) ಅನೇಕ ವಿಧವಾದ ಬುದ್ಧಿಗಳಿಂದ ವ್ಯವಹರಿಸುವವರಾಗಿ ನಾನಾ ವಿಧಗಳಾದ ಷಡ್ದರ್ಶನಾದಿ ಮಾರ್ಗಗಳನ್ನು ಅವಲಂಬಿಸಿ, ಅನೇಕ ಸಂಕಲ್ಪಗಳನ್ನು ಮಾಡುತ್ತಾ, ಅಸ್ವತಂತ್ರರಾಗಿ, ಅಲ್ಪಜ್ಞರಾಗಿ, ಅಲ್ಪಕರ್ತೃತ್ವಶಕ್ತಿಯುಳ್ಳವರಾದ (ಈ ಜೀವಿಗಳು) ಪರಮಾತ್ಮನಾದ ಶಿವನಿಗೆ ಲೀಲಾ ಭಾಜನರಾಗುತ್ತಾರೆ.

ಚೋದಿತಾಃ ಪರಮೇಶೇನ

ಸ್ವಸ್ವ ಕರ್ಮಾನು ರೂಪತಃ |

ಸ್ವರ್ಗಂ ವಾ ನರಕಂ ವಾಪಿ

ಪ್ರಾಣಿನೋ ಯಾಂತಿ ಕರ್ಮಿಣಃ || 18-15

ಕರ್ಮಿಗಳಾದ (ಕರ್ಮಬದ್ಧರಾದ) ಈ ಜೀವರು ತಮ್ಮ ತಮ್ಮ ಕರ್ಮಾನುಸಾರವಾಗಿ ಪರಮಾತ್ಮನಿಂದ ಪ್ರೇರಿತರಾಗಿ ಸ್ವರ್ಗವನ್ನೇ ಆಗಲಿ ಅಥವಾ ನರಕವನ್ನೇ ಆಗಲಿ ಹೊಂದುತ್ತಾರೆ.

#ಪುನಃ ಕರ್ಮಾವಶೇಷೇಣ

ಜಾಯಂತೇ ಗರ್ಭಕೋಟರಾತ್ |

ಜಾತಾ ಮೃತಾಃ ಪುನರ್ಜಾತಾಃ

ಪುನರ್ಮರಣ ಭಾಜಿನಃ |

ಭ್ರಮಂತಿ ಘೋರ ಸಂಸಾರೇ

ವಿಶ್ರಾಂತಿ ಕಥಯಾ ವಿನಾ || 18-16

(ಹೀಗೆ ಸ್ವರ್ಗ ಹಾಗೂ ನರಕಗಳಲ್ಲಿ ಪುಣ್ಯ ಪಾಪಗಳ ಫಲವನ್ನು ಅನುಭವಿಸಿ) ಪುನಃ ಉಳಿದ ಕರ್ಮಶೇಷವನ್ನು ತೆಗೆದುಕೊಂಡು ಆ ಜೀವಿಗಳು ಗರ್ಭಗಳಿಂದ ಪುನಃ ಹುಟ್ಟುತ್ತಾರೆ. ಹುಟ್ಟಿದ ಅವರು ಮತ್ತೆ ಮೃತರಾಗುತ್ತಾರೆ; ಪುನಃ ಹುಟ್ಟುತ್ತಾರೆ. ಮರಣ ಭಾಜನರಾಗುತ್ತಾರೆ. ಹೀಗೆ ಈ ಘೋರವಾದ ಸಂಸಾರದಲ್ಲಿ ವಿಶ್ರಾಂತಿಯ ಮಾತೇ ಇಲ್ಲದೆ ಯಾವಾಗಲೂ ಸುತ್ತುತ್ತಿರುತ್ತಾರೆ.

ಜೀವತ್ವಂ ದುಃಖ ಸರ್ವಸ್ವಮ್

ತದಿದಂ ಮಲ ಕಲ್ಪಿತಮ್ |

ನಿರಸ್ಯತೇ ಗುರೋರ್ಬೊಧಾತ್

ಜ್ಞಾನಶಕ್ತಿಃ ಪ್ರಕಾಶತೇ || 18-17

ಆಣವಾದಿ ಮಲಗಳಿಂದ ಕಲ್ಪಿಸಲ್ಪಟ್ಟ ದುಃಖವೇ ಸರ್ವಸ್ವವಾಗಿರುವ (ದುಃಖರೂಪವಾಗಿರುವ) ಈ ಜೀವಭಾವವು ಗುರುವಿನ ಬೋಧೆಯಿಂದ ನಿವಾರಿಸಲ್ಪಡುತ್ತದೆ ಮತ್ತು ಸಾಧಕನಲ್ಲಿ ಜ್ಞಾನಶಕ್ತಿಯನ್ನು ಪ್ರಕಾಶಗೊಳಿಸುತ್ತದೆ.

ಇತಿ ಆತ್ಮ ಸ್ಥಲಂ

---------------------------------------------------

ಅಥ ಅಂತರಾತ್ಮ ಸ್ಥಲಮ್

ಯದಾ ನಿರಸ್ತಂ ಜೀವತ್ವಮ್

ಭವೇದ್ ಗುರ್ವನುಬೋಧತಃ |

ತದಾಂತರಾತ್ಮ ಭಾವೋಪಿ

ನಿರಸ್ತಸ್ಯ ಭವೇದ್ ಧ್ರುವಮ್ || 18-18

ಶ್ರೀಗುರುವಿನ ಬೋಧದಿಂದ ಯಾವಾಗ ಈ ಆತ್ಮಸ್ಥಲದ ಸಾಧಕನಿಗೆ ಜೀವತ್ವಭಾವವು ನಿರಸ್ತವಾಗುವುದೋ (ಇಲ್ಲವಾಗುವುದೋ) ಆಗ ನಿರಾಕರಿಸಲ್ಪಟ್ಟ ಜೀವತ್ವ ಭಾವವುಳ್ಳ ಅವನಿಗೆ ಅಂತರಾತ್ಮ ಭಾವವು ನಿಶ್ಚಯವಾಗಿ ಉಂಟಾಗುವುದು.

#ದೇಹ ಸ್ಥಿತೋಪ್ಯಯಂ ಜೀವೋ

ದೇಹಸಂಗ ವಿವರ್ಜಿತಃ |

ಬೋಧಾತ್ಪರಾತ್ಮ ಭಾವಿತ್ವಾತ್

ಅಂತರಾತ್ಮೇತಿ ಕೀರ್ತಿತಃ || 18-19

ಈ ಜೀವನು ದೇಹಸ್ಥನಾಗಿದ್ದರೂ ಸಹ ಗುರುಬೋಧೆಯಿಂದುಂಟಾದ ಸ್ವಸ್ವರೂಪ ಜ್ಞಾನದ ದೆಸೆಯಿಂದ, ದೇಹಸಂಗವಿಲ್ಲದವನಾಗಿ ಪರಾತ್ಮ ಭಾವವುಳ್ಳವನಾದ್ದರಿಂದ ಅವನು ಅಂತರಾತ್ಮನೆಂದು ಕರೆಯಿಸಿಕೊಳ್ಳುತ್ತಾನೆ.

ಆತ್ಮಾಂತರಾಲ ವರ್ತಿತ್ವಾತ್

ಜೀವಾತ್ಮ ಪರಮಾತ್ಮನೋಃ |

ಯೋಗಾದುಭಯ ಧರ್ಮಾಣಾಮ್

ಅಂತರಾತ್ಮೇತಿ ಕೀರ್ತಿತಃ || 18-20

ಈ ಆತ್ಮನು ಜೀವಾತ್ಮ ಮತ್ತು ಪರಮಾತ್ಮ ಇವರೀರ್ವರ ಮಧ್ಯದಲ್ಲಿ ಇರುವುದರಿಂದ ಮತ್ತು ಅವರೀರ್ವರ ಧರ್ಮಗಳಿಂದ ಕೂಡಿಕೊಂಡಿ ರುವುದರಿಂದ (ಕರ್ತೃತ್ವ ಮತ್ತು ಭೋಕ್ತೃತ್ವಗಳಾದ ಜೀವಾತ್ಮ ಧರ್ಮವನ್ನು ಹಾಗೂ ಸಾಕ್ಷೀರೂಪವಾದ ಪರಮಾತ್ಮ ಧರ್ಮವನ್ನು ಹೊಂದಿರುವುದರಿಂದ) ಅವನು ಅಂತರಾತ್ಮನೆನಿಸಿಕೊಳ್ಳುವನು.

#ಅಹಂಕಾರಸ್ಯ ಸಂಬಂಧಾತ್

ಮನುಷ್ಯತ್ವಾದಿ ವಿಭ್ರಮಃ |

ನ ಸ್ವಭಾವ ಇತಿ ಜ್ಞಾನಾತ್

ಅಂತರಾತ್ಮೇತಿ ಕಥ್ಯತೇ || 18-21

ಜೀವಾತ್ಮನಲ್ಲಿಯ ಮನುಷ್ಯತ್ವಾದಿ ಭ್ರಾಂತಿಯು ಪರಿಚ್ಛಿನ್ನವಾದ ಮೂಲ ಅಹಂಕಾರದ ಸಂಬಂಧದ ದೆಸೆಯಿಂದ ತೋರುವುದಲ್ಲದೆ ಅದು ಸ್ವಾಭಾವಿಕವಾದುದಲ್ಲ ಎಂಬ ಜ್ಞಾನವು ಇವನಿಗೆ ಇರುವುದರಿಂದ, ಇವನು ಅಂತರಾತ್ಮನೆಂದು ಹೇಳಲ್ಪಡುತ್ತಾನೆ.

ಯಥಾ ಪದ್ಮ ಪಲಾಶಸ್ಯ

ನ ಸಂಗೋ ವಾರಿಣಾ ಭವೇತ್ |

ತಥಾ ದೇಹಜುಷೋಪ್ಯಸ್ಯ

ನ ಶರೀರೇಣ ಸಂಗತಿಃ || 18-22

ತಾವರೆಯ ಎಲೆಯು ಹೇಗೆ ನೀರಿನಲ್ಲಿದ್ದರೂ ನೀರಿನ ಸಂಗವಿಲ್ಲ ದಂತಿರುವುದೋ ಅದರಂತೆ ಈ ಅಂತರಾತ್ಮನು ದೇಹವನ್ನು ಹೊಂದಿದ್ದರೂ, ಶರೀರದ ಸಂಗವು ಅವನಿಗೆ ಇರುವುದಿಲ್ಲ (ಅವನು ದೇಹಧರ್ಮಗಳನ್ನು ತನ್ನ ಮೇಲೆ ಆರೋಪಿಸಿಕೊಳ್ಳುವುದಿಲ್ಲ).

#ನೀಡಸ್ಥಿತೋ ಯಥಾ ಪಕ್ಷೀ

ನಿಡಾದ್ಭಿನ್ನಃ ಪ್ರದೃಶ್ಯತೇ |

ದೇಹಸ್ಥಿತ ಸ್ತಥಾತ್ಮಾಯಮ್

ದೇಹಾದನ್ಯಃ ಪ್ರಕಾಶ್ಯತೇ || 18-23

ಗೂಡಿನಲ್ಲಿರುವ ಪಕ್ಷಿಯು ಹೇಗೆ ಗೂಡಿಗಿಂತಲೂ ಭಿನ್ನವಾಗಿ ಕಾಣುತ್ತದೆಯೋ ಅದರಂತೆ ದೇಹದಲ್ಲಿರುವ ಈ ಅಂತರಾತ್ಮನು ದೇಹಕ್ಕಿಂತಲೂ ಭಿನ್ನವಾಗಿ ಪ್ರಕಾಶಿಸುತ್ತಾನೆ.

ಆಚ್ಛಾದ್ಯತೇ ಯಥಾ ಚಂದ್ರೋ

ಮೇಘೈರಾಸಂಗವರ್ಜಿತೈಃ |

ತಥಾತ್ಮಾ ದೇಹಸಂಘಾತೈಃ

ಅಸಂಗ ಪರಿವೇಷ್ಟಿತಃ || 18-24

ಚಂದ್ರನು ಹೇಗೆ ತನ್ನನ್ನು ಸ್ಪರ್ಶಿಸದೆ ಇರುವ ಮೇಘಗಳಿಂದ ಆವರಿಸಲ್ಪಡುತ್ತಾನೆಯೋ (ಮರೆಮಾಡಲ್ಪಡುತ್ತಾನೆಯೋ) ಅದರಂತೆ ಜೀವಭಾವನಿವೃತ್ತಿಗೊಂಡ ಈ ಅಂತರಾತ್ಮನು ಸ್ಥೂಲಾದಿದೇಹಗಳ ಗುಣಸಂಗವನ್ನುಹೊಂದದೆ ಅವುಗಳಿಂದ ಆವರಿಸಲ್ಪಟ್ಟಿರುವನು

#ನಿರ್ಮಮೋ ನಿರಹಂಕಾರೋ

ನಿರಸ್ತೋಪಾಧಿ ವಿಕ್ಲವಃ |

ದೇಹಸ್ಥೋಪಿ ಸದಾ ಹ್ಯಾತ್ಮಾ

ಶಿ ವಂ ಪಶ್ಯತಿ ಯೋಗತಃ || 18-25

ಈ ಅಂತರಾತ್ಮನು ದೇಹಸ್ಥನಾಗಿದ್ದರೂ ಅಹಂಕಾರ ಮಮಕಾರ ರಹಿತನಾಗಿರುವುದರಿಂದ ಮತ್ತು ದೇಹಾದಿ ಉಪಾಧಿಗಳ ಬಾಧೆಯಿಲ್ಲ ದಿರುವುದರಿಂದ ಇವನು ಯಾವಾಗಲೂ ಶಿವಯೋಗ ಮಾರ್ಗದಿಂದ ಶಿವನನ್ನೇ ನೋಡುತ್ತಿರುತ್ತಾನೆ.

ಭೋಕ್ತೃ ಭೋಜ್ಯ ಪರಿತ್ಯಾಗಾತ್

ಪ್ರೇರಕಸ್ಯ ಪ್ರಸಾದತಃ |

ಭೋಕ್ತೃತಾಭಾವ ಗಲಿತಃ

ಸ್ಫುರತ್ಯಾತ್ಮಾ ಸ್ವಭಾವತಃ || 18-26

ಈ ಅಂತರಾತ್ಮನು ದೇಹಸ್ಥನಾಗಿದ್ದರೂ ಅಹಂಕಾರ ಮಮಕಾರ ರಹಿತನಾಗಿರುವುದರಿಂದ ಮತ್ತು ದೇಹಾದಿ ಉಪಾಧಿಗಳ ಬಾಧೆಯಿಲ್ಲ ದಿರುವುದರಿಂದ ಇವನು ಯಾವಾಗಲೂ ಶಿವಯೋಗ ಮಾರ್ಗದಿಂದ ಶಿವನನ್ನೇ ನೋಡುತ್ತಿರುತ್ತಾನೆ.

#ಸರ್ವೆಷಾಂ ಪ್ರೇರಕತ್ವೇನ

ಶಂಭುರಂತಃ ಸ್ಥಿತಃ ಸದಾ |

ತತ್ಪರಿಜ್ಞಾನ ಯೋಗೇನ

ಯೋಗೀ ನಂದತಿ ಮುಕ್ತವತ್ || 18-27

ಪ್ರೇರಕನಾಗಿರುವ ಶಂಭುವು ಎಲ್ಲರ ಹೃದಯದಲ್ಲಿ ಸದಾ ವಾಸಿಸುತ್ತಿರುತ್ತಾನೆ. ಆ ಶಂಭುವಿನ ಅನುಸಂಧಾನ ಮಾಡುವ ಜ್ಞಾನಯೋಗದಿಂದ ಕೂಡಿದ ಈ ಅಂತರಾತ್ಮ ಯೋಗಿಯು ಮುಕ್ತನಂತೆ ಆನಂದವಾಗಿರುತ್ತಾನೆ.

ಇತಿ ಅಂತರಾತ್ಮಸ್ಥಲಂ

------------------------------------

ಅಥ ಪರಮಾತ್ಮಸ್ಥಲಮ್

ನಿರ್ಧೂತೇ ತತ್ಪ್ರ ಬೋಧೇನ

ಮಲೇ ಸಂಸಾರಕಾರಣೇ |

ಸಾಮರಸ್ಯಾತ್ ಪರಾತ್ಮಸ್ಥಾತ್

ಪರಮಾತ್ಮಾ ಯಮುಚ್ಯತೇ || 18-28

ಈ ಅಂತರಾತ್ಮನಿಗೆ ಶಿವಾದ್ವೈತ ಪ್ರಬೋಧನದಿಂದ ಸಂಸಾರಕ್ಕೆ ಕಾರಣೀಭೂತಗಳಾದ ಮಲಗಳು ಅಳಿಯಲಾಗಿ ಮತ್ತು ಆ ಪರಮಾತ್ಮನೊಂದಿಗೆ ಸಾಮರಸ್ಯ ಸ್ಥಿತಿ ಪ್ರಾಪ್ತವಾಗಲು ಅವನು ಪರಮಾತ್ಮನೆಂದು ಕರೆಯಲ್ಪಡುತ್ತಾನೆ.

#ಸರ್ವೆಷಾಮಾತ್ಮ ಭೇದಾನಾಮ್

ಉತ್ಕೃಷ್ಟತ್ವಾತ್ ಸ್ವತೇಜಸಾ |

ಪರಮಾತ್ಮಾ ಶಿವಃ ಪ್ರೋಕ್ತಃ

ಸರ್ವಗೋಪಿ ಪ್ರಕಾಶವಾನ್ || 18-29

ವಿವಿಧ ಭೇದಗಳಿಂದ ಕೂಡಿದ ಎಲ್ಲ ಆತ್ಮಗಳಲ್ಲಿ ತನ್ನ ತೇಜಸ್ಸಿನಿಂದ ಸರ್ವೊತ್ಕೃಷ್ಟನಾದ, ಸರ್ವವ್ಯಾಪಕನಾದ, ಸರ್ವವನ್ನೂ ಪ್ರಕಾಶಿಸುವ ಆ ಶಿವನು ಪರಮಾತ್ಮನೆಂದು ಹೇಳಲ್ಪಡುತ್ತಾನೆ.

ಬ್ರಹ್ಮಾಂಡ ಬುದ್ಬುದ ಸ್ತೋಮಾ

ಯಸ್ಯ ಮಾಯಾಮಹೋದಧೌ |

ಉನ್ಮಜ್ಜಂತಿ ನಿಮಜ್ಜಂತಿ

ಪರಮಾತ್ಮಾ ಸ ಉಚ್ಯತೇ || 18-30

ಯಾವನ ಮಾಯೆಯೆಂಬ ಮಹಾಸಮುದ್ರದಲ್ಲಿ ಬ್ರಹ್ಮಾಂಡಗಳೆಂಬ ಗುಳ್ಳೆಗಳ ಸಮೂಹವು ತೇಲುತ್ತಲೂ, ಮುಳುಗುತ್ತಲೂ ಇರುವುವೋ ಅವನೇ ಪರಮಾತ್ಮನೆಂದು ಹೇಳಲಾಗಿದೆ.

#ಯಸ್ಮಿನ್ ಜ್ಯೋತಿರ್ಗಣಾಃ ಸರ್ವೆ

ಸ್ಫುಲಿಂಗಾ ಇವ ಪಾವಕಾತ್ |

ಉತ್ಪತ್ಯ ವಿಲಯಂ ಯಾಂತಿ

ತದ್ರೂಪಂ ಪರಮಾತ್ಮನಃ || 18-31

ಯಾವ ಪರವಸ್ತುವಿನಲ್ಲಿ ಎಲ್ಲಾ ಜೀವತೇಜ ಸಮೂಹವು ಅಗ್ನಿಯಿಂದ ವಿಸ್ಫುಲಿಂಗಗಳಂತೆ (ಬೆಂಕಿಯ ಕಿಡಿಗಳಂತೆ) ಹುಟ್ಟಿ ವಿಲಯವನ್ನು ಹೊಂದುವುದೋ ಅದುವೇ ಪರಮಾತ್ಮ ಸ್ವರೂಪವು.

ಯಸ್ಮಿನ್ ಸಮಸ್ತ ವಸ್ತೂನಿ

ಕಲ್ಲೋಲಾ ಇವ ವಾರಿಧೌ |

ಸಂಭೂಯ ಲಯ ಮಾಯಾಂತಿ

ತದ್ರೂಪಂ ಪರಮಾತ್ಮನಃ || 18-32

ಯಾವ ಪರವಸ್ತುವಿನಲ್ಲಿ ಎಲ್ಲಾ ಜೀವತೇಜ ಸಮೂಹವು ಅಗ್ನಿಯಿಂದ ವಿಸ್ಫುಲಿಂಗಗಳಂತೆ (ಬೆಂಕಿಯ ಕಿಡಿಗಳಂತೆ) ಹುಟ್ಟಿ ವಿಲಯವನ್ನು ಹೊಂದುವುದೋ ಅದುವೇ ಪರಮಾತ್ಮ ಸ್ವರೂಪವು.

#ನಿರಸ್ತ ಮಲ ಸಂಬಂಧಮ್

ನಿಃಶೇಷ ಜಗದಾತ್ಮಕಮ್ |

ಸರ್ವತತ್ತ್ವೋ ಪರಿ ಪ್ರೋಕ್ತಮ್

ಸ್ವರೂಪಂ ಪರಮಾತ್ಮನಃ || 18-33

ಆಣವಾದಿ ಮಲಸಂಬಂಧಗಳಿಲ್ಲದ ನಾಮರೂಪಾತ್ಮಕವಾದ ಸಕಲ ಜಗತ್ತಿಗೆ ಆತ್ಮರೂಪವಾದ ಎಲ್ಲ ತತ್ವಗಳನ್ನು ಮೀರಿರುವ ಯಾವ ಸ್ವರೂಪವಿದೆಯೋ ಅದುವೇ ಪರಮಾತ್ಮನ ಸ್ವರೂಪವು.

ಯಥಾ ವ್ಯಾಪ್ಯ ಜಗತ್ಸರ್ವಮ್

ಸ್ವಭಾಸಾ ಭಾತಿ ಭಾಸ್ಕರಃ |

ತಥಾ ಸ್ವಶಕ್ತಿ ಭಿರ್ವ್ಯಾಪ್ಯ

ಪರಮಾತ್ಮಾ ಪ್ರಕಾಶತೇ || 18-34

ಸೂರ್ಯನು ತನ್ನ ಪ್ರಕಾಶದಿಂದ ಜಗತ್ತೆಲ್ಲವನ್ನೂ ವ್ಯಾಪಿಸಿ ಹೇಗೆ ಪ್ರಕಾಶಿಸುವನೋ ಅದರಂತೆ ತನ್ನ ಶಕ್ತಿಗಳಿಂದ ಜಗತ್ತೆಲ್ಲವನ್ನೂ ವ್ಯಾಪಿಸಿ ಪರಮಾತ್ಮನು ಪ್ರಕಾಶಿಸುತ್ತಾನೆ.

#ವಿಶ್ವತೋ ಭಾಸಮಾನೋಪಿ

ವಿಶ್ವ ಮಾಯಾ ವಿಲಕ್ಷಣಃ |

ಪರಮಾತ್ಮಾ ಸ್ವಯಂಜ್ಯೋತೀ –

ರೂಪೋ ಜೀವಾತ್ಮನಾಂ ಭವೇತ್|| 18-35

ಈ ಪರಮಾತ್ಮನು ಜಗತ್ತಿನಲ್ಲೆಲ್ಲಾ ವ್ಯಾಪಿಸಿ ಪ್ರಕಾಶಿಸುತ್ತಿದ್ದರೂ, ವಿಶ್ವಮಾಯೆಯಿಂದ ವಿಲಕ್ಷಣನಾಗಿದ್ದಾನೆ. ಷಡ್ಬಾವ ವಿಕಾರರಹಿತವಾಗಿದ್ದಾನೆ. (ಷಡ್ಭಾವ ವಿಕಾರಗಳು: ಅಸ್ತಿ (ಇರುವಿಕೆ), ಜಾಯತೇ (ಹುಟ್ಟುವಿಕೆ), ವಿವರ್ಧತೆ (ಬೆಳೆಯುವಿಕೆ), ವಿಪರಿಣಮತೆ (ಪರಿಣಾಮವನ್ನು ಹೊಂದುವಿಕೆ), ಅಪಕ್ಷೀಯತೆ (ಕ್ಷೀಣವಾಗುವಿಕೆ), ವಿನಶ್ಯತಿ (ನಾಶವಾಗುವಿಕೆ). ಪರಮಾತ್ಮನು ಜೀವಾತ್ಮರಲ್ಲಿ ಮಾತ್ರ ಪ್ರಕಾಶಮಾನ ನಾದರೂ, ಸ್ವಯಂಜ್ಯೋತಿ ಸ್ವರೂಪನಾಗಿಯೇ ಪ್ರಕಾಶಿಸುತ್ತಾನೆ.

ಇತಿ ಪರಮಾತ್ಮ ಸ್ಥಲಂ

----------------------------

ಅಥ #ನಿರ್ದೆಹಾಗಮ ಸ್ಥಲಮ್

ದೇಹಿನೋಪಿ ಪರಾತ್ಮತ್ವ-

ಭಾವಿನೋ ನಿರಹಂಕೃತೇಃ |

ನಿರಸ್ತದೇಹಧರ್ಮಸ್ಯ

ನಿರ್ದೆಹಾಗಮ ಉಚ್ಯತೇ || 18-36

ಪರಮಾತ್ಮ ತತ್ತ್ವವನ್ನು ಭಾವಿಸುತ್ತಿರುವ ಯೋಗಿಯು ತಾನು ದೇಹವನ್ನು ಧರಿಸಿದ್ದರೂ, ದೇಹಧರ್ಮಗಳನ್ನು (ಸ್ಥೂಲತ್ವ ಮತ್ತು ಕೃಶತ್ವ ಮೊದಲಾದ ಧರ್ಮಗಳನ್ನು) ನಿವಾರಿಸಿಕೊಂಡಿರುತ್ತಾನೆ ಮತ್ತು ನಿರಹಂಕಾರ ಸ್ಥಿತಿಯಲ್ಲಿರುವ ಆ ಯೋಗಿಯೇ ನಿರ್ದೆಹಾಗಮನೆಂದು ಕರೆಯಲ್ಪಡುತ್ತಾನೆ.

#ಗಲಿತೇ ಮಮತಾ ಹಂತೇ

ಸಂಸಾರ ಭ್ರಮಕಾರಣೇ |

ಪರಾಹಂತಾಂ ಪ್ರವಿಷ್ಟಸ್ಯ

ಕುತೋ ದೇಹಃ ಕುತೋ ರತಿಃ || 18-37

ಸಂಸಾರದ ಭ್ರಮಕ್ಕೆ ಕಾರಣಗಳಾದ ಅಹಂಕಾರ ಮತ್ತು ಮಮಕಾರಗಳು ಇಲ್ಲವಾಗಲು, ಪರಾಹಂತಾ ಸ್ಥಿತಿಯನ್ನು ಪ್ರವೇಶಿಸಿದ ಆ ಯೋಗಿಗೆ ದೇಹವೆಲ್ಲಿಯದು ಹಾಗೂ ದೇಹದ ಮೇಲಿನ ಪ್ರೀತಿಯೇ ಆಗಲಿ ಎಲ್ಲಿಯದು?

ಕೇವಲೇ ನಿಷ್ಪ್ರ ಪಂಚೌಘೇ

ಗಂಭೀರೇ ಚಿನ್ಮಹೋದಧೌ |

ನಿಮಗ್ನ ಮಾನಸೋ ಯೋಗೀ

ಕಥಂ ದೇಹಂ ವಿಚಿಂತಯೇತ್ || 18-38

ಚರಾಚರಾತ್ಮಕ ಪ್ರಪಂಚ ಪ್ರವಾಹವಿಲ್ಲದಿರುವ ಗಂಭೀರವಾದ (ಅಗಾಧವಾದ) ಕೇವಲ ಅರಿವೆಂಬ ಮಹಾಸಮುದ್ರದಲ್ಲಿ ಮುಳುಗಿದ ಮನಸ್ಸುಳ್ಳ ಯೋಗಿಯು ತನ್ನ ದೇಹವನ್ನು ಕುರಿತು ಹೇಗೆ ತಾನೇ ಚಿಂತಿಸಬಲ್ಲನು?

#ಅಪರಿಚ್ಛೇದ್ಯ ಮಾತ್ಮಾನಮ್

ಚಿದಂಬರ ಮಿತಿ ಸ್ಮರನ್ |

ದೇಹ ಯೋಗೇಪಿ ದೇಹಸ್ಥೈಃ

ವಿಕಾರೈರ್ನ ವಿಲಿಪ್ಯತೇ || 18-39

ತನ್ನನ್ನು ಅಪರಿಚ್ಛೇದ್ಯವಾದ (ದೇಶ, ಕಾಲ, ವಸ್ತು ಪರಿಚ್ಛೇದವಿಲ್ಲದ, ಅಖಂಡವಾದ) ಚಿದಾಕಾಶವನ್ನಾಗಿ ಸ್ಮರಿಸುತ್ತಿರುವ ಈ ಯೋಗಿಗೆ ದೇಹ ಸಂಬಂಧವಿದ್ದರೂ ದೇಹದಲ್ಲಿಯ ವಿಕಾರಗಳಿಂದ (ಷಡ್ಭಾವ ವಿಕಾರಗಳಿಂದ) ಅಥವಾ ಇಂದ್ರಿಯ ವಿಕಾರಗಳಿಂದ ಲಿಪ್ತನಾಗುವುದಿಲ್ಲ.

ಅಖಂಡ ಸಂವಿದಾಕಾರಮ್

ಅದ್ವಿತೀಯಂ ಸುಖಾತ್ಮಕಮ್ |

ಪರಮಾಕಾಶ ಮಾತ್ಮಾನಮ್

ಮನ್ವಾನಃ ಕುತ್ರ ಮುಹ್ಯತಿ || 18-40

ಅಖಂಡವೂ ಜ್ಞಾನಸ್ವರೂಪವೂ ಅದ್ವಿತೀಯವೂ, ಆನಂದ ಸ್ವರೂಪವೂ ಆದ ಪರಮಾಕಾಶ ರೂಪವಾದ ಪರಮಾತ್ಮನೇ ತಾನೆಂದು ತಿಳಿದುಕೊಂಡ ಯೋಗಿಯು ಯಾವ ದೇಹದಲ್ಲಿ ಮೋಹಿತನಾಗಬಲ್ಲನು?

#ಉಪಾಧಿ ವಿಹಿತಾ ಭೇದಾ

ದೃಶ್ಯಂತೇ ಚೈಕ ವಸ್ತುನಿ |

ಇತಿ ಯಸ್ಯ ಮತಿಃ ಸೋಯಮ್

ಕಥಂ ದೇಹಮಿತೋ ಭವೇತ್ || 18-41

ಒಂದೇ ಆದ ಅಖಂಡ ವಸ್ತುವಿನಲ್ಲಿ ಉಪಾಧಿ ಮೂಲಕವಾಗಿಯೇ ಭೇದಗಳು ಕಾಣುತ್ತವೆ. ಈ ಪ್ರಕಾರವಾದ ತಿಳುವಳಿಕೆಯುಳ್ಳ ಆ ಯೋಗಿಯು ಹೇಗೆ ತಾನೇ ದೇಹಾದಿಗಳಿಂದ ಪರಿಚ್ಛಿನ್ನ ಭಾವವನ್ನು ಪಡೆಯಬಲ್ಲನು? (ಅಖಂಡವಾದ ಆಕಾಶವು ಘಟ ಮಠಾದಿ ಉಪಾಧಿಗಳಿಂದ ಭಿನ್ನವಾಗಿ ತೋರುವಂತೆ ದೇಹಾದಿ ಉಪಾಧಿಗಳಿಂದ ಆತ್ಮನ ಭೇದ ವ್ಯವಹಾರವೆಂದು ತಿಳಿದುಕೊಳ್ಳಬೇಕು).

ಭೇದ ಬುದ್ಧಿಃ ಸಮಸ್ತಾನಾಮ್

ಪರಿಚ್ಛೇದಸ್ಯ ಕಾರಣಮ್ |

ಅಭೇದ ಬುದ್ಧೌ ಜಾತಾಯಾಮ್

ಪರಿಚ್ಛೇದಸ್ಯ ಕಾ ಕಥಾ || 18-42

ಎಲ್ಲರಿಗೂ ಅವರವರ ಭೇದಬುದ್ಧಿಯೇ ಅವರವರ ಪರಿಮಿತ ವ್ಯವಹಾರಕ್ಕೆ ಕಾರಣವಾಗಿರುತ್ತದೆ. ಇನ್ನು (ಪರಮಾತ್ಮ ಸ್ವರೂಪವನ್ನು ತಿಳಿದುಕೊಂಡ ಮೇಲೆ ಅಭೇದ ಬುದ್ಧಿಯುಂಟಾಗಲು) ಪರಿಚ್ಛೇದದ ಮಾತೇ ಇರುವುದಿಲ್ಲ.

#ಶಿವೋಹ ಮಿತಿ ಯಸ್ಯಾಸ್ತಿ

ಭಾವನಾ ಸರ್ವಗಾಮಿನೀ |

ತಸ್ಯ ದೇಹೇನ ಸಂಬಂಧಃ

ಕಥಂ ಸ್ಯಾದಮಿತಾತ್ಮನಃ || 18-43

ಶಿವನು ನಾನೆಂಬ ಭಾವನೆಯು ಯಾವ ಯೋಗಿಗೆ ಇರುತ್ತದೆಯೋ ಅಂತಹ ಅಖಂಡ ಪರಮಾತ್ಮ ಸ್ವರೂಪನಾದ ಅವನಿಗೆ ದೇಹ ಸಂಬಂಧವು ಹೇಗೆ ತಾನೇ ಆಗುವುದು?

ಇತಿ ನಿರ್ದೆಹಾಗಮಸ್ಥಲಂ

-------------------------------

#ಅಥ #ನಿರ್ಭಾವಾಗಮಸ್ಥಲಮ್

ವ್ಯತಿ ರೇಕಾತ್ ಸ್ವ್ವರೂಪಸ್ಯ

ಭಾವಾಂತರ ನಿರಾಕೃತೇಃ|

ಭಾವೋ ವಿಕಾರ ನಿರ್ಮುಕ್ತೋ

ನಿರ್ಭಾವಾಗಮ ಉಚ್ಯತೇ || 18-44

ಹಿಂದೆ ಹೇಳಿದ ತನ್ನ ಸ್ವರೂಪಕ್ಕೆ(ನಿರ್ದೆಹಾಗಮ ಸ್ವರೂಪಕ್ಕೆ) ವ್ಯತಿರೇಕಗಳಾದ (ವಿಪರೀತಗಳಾದ) ಬೇರೆ ಬೇರೆ ಭಾವಗಳನ್ನು ನಿರಾಕರಿ ಸಲ್ಪಟ್ಟ ಮತ್ತು ಇಂದ್ರಿಯಗಳ ವಿಕಾರದಿಂದ ಮುಕ್ತವಾದ ಯಾವ ಭಾವವಿದೆಯೋ ಅದುವೇ ನಿರ್ಭಾವಾಗಮವೆಂದು ಹೇಳಲ್ಪಡುತ್ತದೆ.

#ಅಹಂ ಬ್ರಹ್ಮೇತಿ ಭಾವಸ್ಯ

ವಸ್ತು ದ್ವಯ ಸಮಾಶ್ರಯಃ |

ಏಕೀ ಭೂತಸ್ಯ ಚಿದ್ವ್ಯೋಮ್ನಿ

ತದಭಾವೋ ವಿನಿಶ್ಚಿತಃ || 18-45

ಅಹಂ ಬ್ರಹ್ಮಾಸ್ಮಿ (ನಾನು ಬ್ರಹ್ಮನಾಗಿದ್ದೇನೆ) ಎಂಬ ಭಾವದಲ್ಲಿ ಅಹಂ ಮತ್ತು ಬ್ರಹ್ಮವೆಂಬ ಎರಡು ವಸ್ತುಗಳು ಇರುತ್ತವೆ. ಆದರೆ ಚಿದಾಕಾಶದಲ್ಲಿ ಏಕೀಭೂತನಾದ ಈ ಯೋಗಿಗೆ ಆ ಭಾವನೆಯ ಅಭಾವವು ನಿಶ್ಚಿತವಾಗಿ ಇರುತ್ತದೆ. ಅಂದರೆ ಅಹಂ ಬ್ರಹ್ಮಾಸ್ಮಿ, ಶಿವೋಹಂ ಈ ಭಾವನೆಗಳಿಲ್ಲದ ಯೋಗಿಯ ಆ ಸ್ಥಿತಿಯೇ ನಿರ್ಭಾವಾಗಮ ಸ್ಥಿತಿಯಾಗಿದೆ.

ಏಕಭಾವ ನಿರೂಢಸ್ಯ

ನಿಷ್ಕಲಂಕೇ ಚಿದಂಬರೇ |

ಕ್ವ ಜಾತಿ ವಾಸನಾ ಯೋಗಃ

ಕ್ವ ದೇಹಿತ್ವಂ ಪರಿಭ್ರಮಃ || 18-46

ನಿಷ್ಕಲಂಕವಾದ, ಚಿದಂಬರದಲ್ಲಿ (ಚಿದಾಕಾಶದಲ್ಲಿ) ತಾದಾತ್ಮ್ಯ ಭಾವವನ್ನು ಹೊಂದಿದ ಈ ನಿರ್ಭಾವಾಗಮ ಯೋಗಿಗೆ, ಜಾತಿ ವಾಸನೆಗಳ ಸಂಬಂಧವು ಇರುವುದಿಲ್ಲ ಮತ್ತು ದೇಹವುಳ್ಳಾತನದಿಂದ ಉಂಟಾಗುವ ಜನನ ಮರಣ ರೂಪವಾದ ಸಂಸಾರ ಚಕ್ರದ ಪರಿಭ್ರಮಣವಾದರೂ ಇರುವುದಿಲ್ಲ.

#ಶೂನ್ಯೇ ಚಿದಂಬರೇ ಸ್ಥಾನೇ

ದೂರೇ ವಾಙ್ಮಾನ ಸಾಧ್ವನಃ |

ವಿಲೀನಾತ್ಮಾ ಮಹಾಯೋಗೀ

ಕೇನ ಕಿಂ ವಾಪಿ ಭಾವಯೇತ್ || 18-47

ವಾಣಿ ಮತ್ತು ಮನಸ್ಸುಗಳಿಗೆ ಅಗೋಚರವಾದ, ಶೂನ್ಯವಾದ (ನಿರಾಕಾರವಾದ), ಚಿದಂಬರ (ಚಿದಾಕಾಶ) ಸ್ಥಾನದಲ್ಲಿ ತಾದಾತ್ಮ್ಯಭಾವದಿಂದ ಈ ಯೋಗಿಯು ಯಾವುದರಿಂದ ಏನು ಭಾವಿಸಬೇಕು?

ಅವಿಶುದ್ಧೇ ವಿಶುದ್ಧೇ ವಾ

ಸ್ಥಲೇ ದೀಪ್ತಿರ್ಯಥಾ ರವೇಃ |

ಪತತ್ಯೇವಂ ಸದಾದ್ವೈತೀ

ಸರ್ವತ್ರ ಸಮವೃತ್ತಿಮಾನ್ || 18-48

ಅಶುದ್ಧ ಸ್ಥಾನವಿರಲಿ ಅಥವಾ ವಿಶುದ್ಧ ಸ್ಥಾನವಿರಲಿ, ಎಲ್ಲ ಕಡೆ ಸೂರ್ಯನ ಕಿರಣವು ಸಮಾನವಾಗಿ ಬೀಳುವಂತೆ ಈ ಶಿವಾದ್ವೈತಿಯು ಎಲ್ಲೆಡೆ ಸಮಾನವಾದ ವೃತ್ತಿಯುಳ್ಳವನು ಆಗಿರುತ್ತಾನೆ.

#ನ ಬಿಭೇತಿ ಜರಾಮೃತ್ಯೋಃ

ನ ಕ್ಷುಧಾಯಾ ವಶಂ ವ್ರಜೇತ್ |

ಪರಿಪೂರ್ಣ ನಿಜಾನಂದಮ್

ಸಮಾಸ್ವಾದನ್ ಮಹಾಸುಖೀ || 18-49

ಈ ನಿರ್ಭಾವಾಗಮ ಯೋಗಿಯು ಮುಪ್ಪು ಮರಣಗಳಿಗೆ ಅಂಜುವುದಿಲ್ಲ. ಹಸಿವೆ ತೃಷೆಗಳಿಗೆ ವಶನಾಗುವುದಿಲ್ಲ ಮತ್ತು ಪರಿಪೂರ್ಣವಾದ ನಿಜಾನಂದವನ್ನೇ ಆಸ್ವಾದಿಸುತ್ತಿರುವ ಇವನು ಮಹಾಸುಖಿಯಾಗಿರುತ್ತಾನೆ (ಈ ಯೋಗಿಯು ತನ್ನ ದೇಹ ಮತ್ತು ಪ್ರಾಣಗಳ ಅಭಿಮಾನವನ್ನು ಹೊಂದಿರುವುದಿಲ್ಲ).

ಕುತೋ ಭಾವಃ ಕುತಶ್ಚಿತ್ತಮ್

ಕುತಃ ಸಂಕಲ್ಪ ವಾಸನಾ |

ನಿಸ್ತರಂಗೇ ಚಿದಂ ಬೋಧೌ

ವಿಲೀನಸ್ಯ ಮಹಾತ್ಮನಃ || 18-50

ನಿಸ್ತರಂಗವಾದ (ಕ್ಷುಧೆ, ತೃಷ್ಣೆ, ಹರ್ಷ, ವಿಷಾದ, ಜನನ, ಮರಣಗಳೆಂಬ ಷಡೂರ್ಮಿ ರೂಪಗಳಾದ ತರಂಗವಿಲ್ಲದ) ಚಿತ್ಸಾಗರ ದಲ್ಲಿ ವಿಲೀನನಾದ, ಮಹಾತ್ಮನಾದ ಯೋಗಿಗೆ ಭಾವವೆಲ್ಲಿಯದು, ಚಿತ್ತವೆಲ್ಲಿಯದು, ಸಂಕಲ್ಪವಾಸನೆಗಳಾದರೂ ಸಹ ಎತ್ತಣವು?

ಇತಿ ನಿರ್ಭಾವಾಗಮಸ್ಥಲಂ

-------------------------------------------

ಅಥ #ನಷ್ಟಾಗಮಸ್ಥಲಮ್

ಭೇದಶೂನ್ಯೇ ಮಹಾಬೋಧೇ

ಜ್ಞಾತ್ರಾದಿತ್ರಯಹೀನಕಃ |

ಜ್ಞಾನಸ್ಯ ನಷ್ಟಭಾವೇನ

ನಷ್ಟಾಗಮ ಇಹೋಚ್ಯತೇ || 18-51

ಭೇದಶೂನ್ಯವಾದ ಮಹಾಬೋಧೆಯು (ಶಿವಾದ್ವೈತ ರೂಪವಾದ ಮಹಾಜ್ಞಾನವು) ಜ್ಞಾತೃ, ಜ್ಞಾನ, ಜ್ಞೇಯಗಳೆಂಬ ತ್ರಿಪುಟಿ ವ್ಯವಹಾರದಿಂದ ಹೀನವಾಗಿರುತ್ತದೆ. ಈ ರೀತಿಯಾಗಿ ಜ್ಞಾನದ ತ್ರಿಪುಟಿ ಭಾವನೆಗಳು ನಷ್ಟವಾದಾಗ ಆ ಜ್ಞಾನವು ನಷ್ಟಾಗಮವೆಂದು ಕರೆಯಲ್ಪಡುತ್ತದೆ.

#ಅದ್ವೈತ ವಾಸನಾವಿಷ್ಟ-

ಚೇತಸಾಂ ಪರಯೋಗಿನಾಮ್ |

ಪಶ್ಯತಾಮಂತರಾತ್ಮಾನಮ್

ಜ್ಞಾತೃತ್ವಂ ಕಥಮನ್ಯಥಾ || 18-52

ಅದ್ವೈತ ವಾಸನೆಯಿಂದಲೇ (ಎಲ್ಲವೂ ಶಿವನೇ ಎಂಬ ಜ್ಞಾನದಿಂದ) ತುಂಬಿಕೊಂಡ ಮನಸ್ಸುಳ್ಳ ಮತ್ತು ತನ್ನ ಹೃದಯದಲ್ಲಿ ತನ್ನ ಸ್ವರೂಪವನ್ನೇ ಕಾಣುತ್ತಿರುವ ಪರಯೋಗಿಗಳಿಗೆ ಬೇರೊಂದು ಜ್ಞಾತೃತ್ವವು ಹೇಗೆ ಉಂಟಾದೀತು?

ಅಕರ್ತಾಹಮವೇತ್ತಾಹಮ್

ಅದೇಹೋಹಂ ನಿರಂಜನಃ |

ಇತಿ ಚಿಂತಯತಃ ಸಾಕ್ಷಾತ್

ಸಂವಿದೇವ ಪ್ರಕಾಶತೇ || 18-53

ನಾನು ಕರ್ಮಕರ್ತೃವಲ್ಲ, ನಾನು ಪ್ರಪಂಚವನ್ನು ಅರಿವವನಲ್ಲ, ನಾನು ದೇಹನೂ ಅಲ್ಲ, ನಾನು ನಿರಂಜನನು (ನಾನು ದೋಷರಹಿತನು) ಎಂಬುದಾಗಿ ಚಿಂತಿಸುತ್ತಿರುವ ಈ ನಷ್ಟಾಗಮಸ್ಥಲದ ಯೋಗಿಗೆ ಸಾಕ್ಷಾತ್ ಶಿವಜ್ಞಾನವೊಂದೇ ಪ್ರಕಾಶಿಸುತ್ತಿರುತ್ತದೆ.

#ನಿರಸ್ತ ಭೇದ ಜಲ್ಪಸ್ಯ

ನಿರೀಹಸ್ಯ ಪ್ರಶಾಮ್ಯತಃ |

ಸ್ವೇ ಮಹಿಮ್ನಿ ವಿಲೀನಸ್ಯ

ಕಿಮನ್ಯಜ್ಜ್ಞೇಯ ಮುಚ್ಯತೇ || 18-54

ವಾದ, ಜಲ್ಪ, ವಿತಂಡಗಳೆಂಬ ಭೇದದಿಂದ ಕೂಡಿದ ವಾಗ್ ವ್ಯವಹಾರವಿಲ್ಲದ, ನಿರೀಹನಾದ (ಅಪೇಕ್ಷಾರಹಿತನಾದ), ಪ್ರಶಾಂತನಾದ ಮತ್ತು ತನ್ನಲ್ಲಿಯೇ ತಾನು ಲೀನನಾದ ಈ ಯೋಗಿಗೆ ಬೇರಾವುದು ಜ್ಞೇಯವಾಗಿರುತ್ತದೆ?

ಏಕೀಭೂತೇ ನಿಜಾಕಾರೇ

ಸಂವಿದಾ ನಿಷ್ಪ್ರಪಂಚಯಾ |

ಕೇನ ಕಿಂ ವೇದನೀಯಂ ತದ್

ವೇತ್ತಾ ಕಃ ಪರಿಭಾಷ್ಯತೇ || 18-55

ನಿರಾಕಾರನಾದ, ನಿಷ್ಪ್ರಪಂಚರೂಪನಾದ ಆ ಪರಮಾತ್ಮನಲ್ಲಿ ಜ್ಞಾನದಿಂದ ಏಕೀಭೂತನಾದ (ಸಮರಸನಾದ) ಈಯೋಗಿಗೆ ಯಾವುದರಿಂದ ಏನನ್ನು ತಿಳಿದುಕೊಳ್ಳುವುದು ಇದೆ? ತಿಳಿದುಕೊಳ್ಳುವವರು ಯಾರಿದ್ದಾರೆ ಮತ್ತು ತಿಳಿಸುವವರು ಯಾರಿದ್ದಾರೆ? (ಜ್ಞಾತೃ, ಜ್ಞಾನ, ಜ್ಞೇಯ ಗಳೆಂಬ ತ್ರಿಪುಟಿಗಳು ನಷ್ಟವಾಗಿರುತ್ತವೆ)

#ಮಹಾಸತ್ತಾ ಮಹಾಸಂವಿದ್

ವಿಶ್ವ ರೂಪಾ ಪ್ರಕಾಶತೇ |

ತದ್ವಿನಾ ನಾಸ್ತಿ ವಸ್ತ್ವೇಕಮ್

ಭೇದ ಬುದ್ಧಿಂ ವಿಮುಂಚತಃ || 18-56

ಭೇದಬುದ್ಧಿಯನ್ನು ಕಳೆದುಕೊಂಡ ಆ ಯೋಗಿಗೆ ಮಹಾಸತ್ತಾ ರೂಪವಾದ (ಮಹಾ ಸದ್ರೂಪವಾದ) ಮಹಾ ಸಂವಿದ್ರೂಪವಾದ (ಮಹಾ ಚಿದ್ರೂಪವೂ ಆದ ಬ್ರಹ್ಮ ಚೈತನ್ಯವೇ ವಿಶ್ವರೂಪವಾಗಿ ಪ್ರಕಾಶಿಸುತ್ತದೆ)ಆ ಬ್ರಹ್ಮ ಚೈತನ್ಯದ ಹೊರತಾಗಿ ಮತ್ತೊಂದು ವಸ್ತುವು ಇರುವುದಿಲ್ಲ

ಇತಿ #ನಷ್ಟಾಗಮಸ್ಥಲಂ

---------------------------

ಅಥ #ಆದಿಪ್ರಸಾದಿಸ್ಥಲಮ್

ಸರ್ವಾಧಿಷ್ಠಾಕೃತಃ ಶಂಭುಃ

ಆದಿಸ್ತಸ್ಯ ಪ್ರಸಾದತಃ |

ಆದಿಪ್ರಸಾದೀತ್ಯುಕ್ತೋಯಮ್

ನಿರ್ವಿಕಾರ ಪದೇ ಸ್ಥಿತಃ || 18-57

ಅನೇಕ ಜನ್ಮಗಳಲ್ಲಿ ಮಾಡಿದ ಸಾಧನೆಯಿಂದ ಶುದ್ಧನಾದ (ದೇಹಾಭಿಮಾನ ಶೂನ್ಯವಾದ) ನಿರಹಂಕಾರ ಭಾವವುಳ್ಳ ಮತ್ತು ಅಪ್ರಪಂಚಿ ಯಾದ (ಪ್ರಾಪಂಚಿಕ ಭೇದ ರಹಿತನಾದ) ಯೋಗಿಗೆ ಆದಿದೇವನಾದ ಪರಮಾತ್ಮನು ಮುಕ್ತಿಯನ್ನು ಕೊಡುವುದಕ್ಕಾಗಿ ಪ್ರಸನ್ನನಾಗುತ್ತಾನೆ.

#ಅನೇಕಜನ್ಮಶುದ್ಧಸ್ಯ

ನಿರಹಂಕಾರಭಾವಿನಃ |

ಅಪ್ರಪಂಚಸ್ಯಾದಿ ದೇವಃ

ಪ್ರಸೀದತಿ ವಿಮುಕ್ತಯೇ || 18-58

ಅನೇಕ ಜನ್ಮಗಳಲ್ಲಿ ಮಾಡಿದ ಸಾಧನೆಯಿಂದ ಶುದ್ಧನಾದ (ದೇಹಾಭಿಮಾನ ಶೂನ್ಯವಾದ) ನಿರಹಂಕಾರ ಭಾವವುಳ್ಳ ಮತ್ತು ಅಪ್ರಪಂಚಿ ಯಾದ (ಪ್ರಾಪಂಚಿಕ ಭೇದ ರಹಿತನಾದ) ಯೋಗಿಗೆ ಆದಿದೇವನಾದ ಪರಮಾತ್ಮನು ಮುಕ್ತಿಯನ್ನು ಕೊಡುವುದಕ್ಕಾಗಿ ಪ್ರಸನ್ನನಾಗುತ್ತಾನೆ.

ಶಿವಪ್ರಸಾದ ಸಂಪತ್ತ್ಯಾ

ಶಿವಭಾವ ಮುಪೇಯುಷಿ |

ಶಿವಾದನ್ಯ ಜ್ಜಗಜ್ಜಾಲಮ್

ದೃಶ್ಯತೇ ನ ಚ ದೃಶ್ಯತೇ || 18-59

ಶಿವನ ಪ್ರಸಾದರೂಪವಾದ ಸಂಪತ್ತಿನಿಂದ ಶಿವಭಾವವನ್ನು ಪಡೆದುಕೊಂಡ ಈ ಯೋಗಿಗೆ ಈ ಜಗಜ್ಜಾಲವು ಶಿವನಿಗಿಂತಲೂ ಭಿನ್ನವಾದುದಾಗಿ ಕಾಣುವುದಿಲ್ಲ. ಆದರೆ ಅವನು ಶಿವಸ್ವರೂಪವನ್ನಾಗಿಯೇ ಕಾಣುತ್ತಾನೆ.

#ಶಂಭೋಃ ಶಿವ ಪ್ರಸಾದೇನ

ಸಂಸಾರಚ್ಛೇದ ಕಾರಿಣಾ |

ಮೋಹಗ್ರಂಥಿಂ ವಿನಿರ್ಭಿದ್ಯ

ಮುಕ್ತಿಂ ಯಾಂತಿ ವಿವೇಕಿನಃ || 18-60

ವಿವೇಕಿಗಳು (ಶಿವಾದ್ವೈತ ಜ್ಞಾನಿಗಳು) ಸಂಸಾರವನ್ನು ನಿವೃತ್ತಿಗೊಳಿಸುವ ಶಂಭುವಿನ ಮಂಗಲಮಯ ಪ್ರಸಾದದಿಂದ ಮೋಹಗ್ರಂಥಿಯನ್ನು ಭೇದಿಸಿಕೊಂಡು ಮುಕ್ತಿಯನ್ನು ಪಡೆಯುತ್ತಾರೆ.

ವಿನಾ ಪ್ರಸಾದಮೀಶಸ್ಯ

ಸಂಸಾರೋ ನ ನಿವರ್ತತೇ |

ವಿನಾ ಸೂರ್ಯೊದಯಂ ಲೋಕೇ

ಕುತಃ ಸ್ಯಾತ್ ತಮಸೋ ಲಯಃ || 18-61

ಲೋಕದಲ್ಲಿ ಸೂರ್ಯೊದಯವಾಗದೆ ಹೇಗೆ ಕತ್ತಲೆಯು ಲಯವಾಗುವುದಿಲ್ಲವೋ ಅದರಂತೆ ಪ್ರಸಾದವಿಲ್ಲದೆ ಸಂಸಾರವು ನಿವೃತ್ತಿಯಾಗುವುದಿಲ್ಲ.

#ಸರ್ವಾನು ಗ್ರಾಹಕಃ ಶಂಭುಃ

ಕೇವಲಂ ಕೃಪಯಾ ಪ್ರಭುಃ |

ಮೋಚಯೇತ್ ಸಕಲಾನ್ ಜಂತೂನ್

ನ ಕಿಂಚಿದಿಹ ಕಾರಣಮ್ || 18-62

ಸರ್ವರನ್ನು ಅನುಗ್ರಹಿಸುವ ಹಾಗೂ ಪ್ರಭುವಾದ ಶಂಭುವು ಕೇವಲ ತನ್ನ ಕೃಪೆಯಿಂದಲೇ ಎಲ್ಲ ಜೀವಿಗಳನ್ನು ಮುಕ್ತಿ ಗೊಳಿಸಬಲ್ಲನು. ಈ ವಿಷಯದಲ್ಲಿ ಬೇರೊಂದು ಕಾರಣವು ಯಾವುದೂ ಇರುವುದಿಲ್ಲ.

ಇತಿ ಆದಿಪ್ರಸಾದಿಸ್ಥಲಂ

-----------------------------------------

ಅಥ #ಅಂತ್ಯಪ್ರಸಾದಿಸ್ಥಲಮ್

ಲಯಃ ಸರ್ವಪದಾರ್ಥಾನಾಮ್

ಅಂತ್ಯ ಇತ್ಯುಚ್ಯತೇ ಬುಧೈಃ |

ಪ್ರಸಾದೋನು ಭವಸ್ತಸ್ಯ

ತದ್ವಾನಂತ್ಯ ಪ್ರಸಾದವಾನ್ || 18-63

ಎಲ್ಲ ಪದಾರ್ಥಗಳು ಎಲ್ಲಿ ಲಯಗೊಳ್ಳುವವೋ ಅದಕ್ಕೆ ಬುಧರು (ವೀರಶೈವ ಶಾಸ್ತ್ರಜ್ಞರು) ಅಂತ್ಯವೆಂಬುದಾಗಿ ಕರೆದಿದ್ದಾರೆ. ಆ ಅಂತ್ಯತತ್ತ್ವದ ಸ್ವಾತ್ಮರೂಪವಾದ ಅನುಭವವೇ ಅಂತ್ಯಪ್ರಸಾದವು. ಅದನ್ನು ಪಡೆದುಕೊಂಡವನೇ ಅಂತ್ಯಪ್ರಸಾದಿಯು.

#ದೇವತಿರ್ಯಙ್ಮನುಷ್ಯಾದಿ-

ವ್ಯವಹಾರ ವಿಕಲ್ಪನಾ |

ಮಾಯಾಕೃತಾ ಪರೇ ತತ್ತ್ವೇ

ತಲ್ಲಯೇ ತತ್ಕ್ಷಯೋ ಭವೇತ್ || 18-64

ದೇವ, ತಿರ್ಯಕ್ ಮತ್ತು ಮನುಷ್ಯರೆಂಬ ಈ ಭೇದ ವ್ಯವಹಾರವು ಮಾಯಾಕೃತವಾದುದು. ಈ ಮಾಯೆಯು ಆ ಪರತತ್ತ್ವದಲ್ಲಿ ಲಯವಾಗಲು ಈ ಭೇದವ್ಯವಹಾರವು ಕ್ಷಯಗೊಳ್ಳುವುದು.

ಸಾಕ್ಷಾತ್ಕೃತೇ ಪರೇ ತತ್ತ್ವೇ

ಸಚ್ಚಿದಾನಂದ ಲಕ್ಷಣೇ |

ಕ್ವ ಪದಾರ್ಥ ಪರಿಜ್ಞಾನಮ್

ಕುತೋ ಜ್ಞಾತೃತ್ವ ಸಂಭವಃ || 18-65

ಸಚ್ಚಿದಾನಂದ ಲಕ್ಷಣವಾದ ಪರತತ್ತ್ವವು (ಪರಶಿವಬ್ರಹ್ಮದ) ಸಾಕ್ಷಾತ್ಕಾರವಾಗಲು ಪದಾರ್ಥಗಳ (ಜ್ಞೇಯ ಪದಾರ್ಥಗಳ) ಪರಿಜ್ಞಾನವಾಗಲಿ ಮತ್ತು ಜ್ಞಾತೃತ್ವವಾಗಲಿ ಹೇಗೆ ತಾನೇ ಸಂಭವಿಸುವುದು?

#ಪದಾರ್ಥಾಃ ಸ್ವಪ್ನ ಸಂದೃಷ್ಟಾ

ಯಥಾ ಬೋಧೇ ಲಯಂ ಗತಾಃ |

ತಥಾ ಸಂಸಾರಜಾಃ ಭಾವಾ

ಲೀಯಂತೇ ಬ್ರಹ್ಮ ಬೋಧತಃ || 18-66

ಸಪ್ನದಲ್ಲಿ ತೋರಿದ ಪದಾರ್ಥಗಳು ಎಚ್ಚರವಾದೊಡನೆ ಹೇಗೆ ಲಯವಾಗುತ್ತವೆಯೋ ಹಾಗೆಯೇ ಸಂಸಾರದಲ್ಲಿ ಹುಟ್ಟಿದ ಭಾವಗಳು ಬ್ರಹ್ಮಜ್ಞಾನವಾದೊಡನೆ ಅದರಲ್ಲಿಯೇ ಲಯವಾಗುತ್ತವೆ.

ಸುಷುಪ್ತಸ್ಯ ಯಥಾ ವಸ್ತು

ನ ಕಿಂಚಿದಪಿ ಭಾಸತೇ |

ತಥಾ ಮುಕ್ತಸ್ಯ ಜೀವಸ್ಯ

ನ ಕಿಂಚಿದ್ವಸ್ತು ದೃಶ್ಯತೇ || 18-67

ಗಾಢವಾದ ನಿದ್ರೆಯಲ್ಲಿರುವ ವ್ಯಕ್ತಿಗೆ ಪ್ರಪಂಚದ ಯಾವುದೇ ವಸ್ತು ಹೇಗೆ ಭಾಸವಾಗುವುದಿಲ್ಲವೋ (ತೋರುವುದಿಲ್ಲವೋ) ಅದರಂತೆ ಮುಕ್ತನಾದ ಜೀವಿಗೆ ಯಾವ ವಸ್ತುವೂ ತೋರುವುದಿಲ್ಲ.

#ಯಥಾಕಾಶ ಮವಿಚ್ಛಿನ್ನಮ್

ನಿರ್ವಿಕಾರಂ ಸ್ವರೂಪತಃ |

ತಥಾ ಮುಕ್ತಸ್ಯ ಜೀವಸ್ಯ

ಸ್ವರೂಪಮವ ಶಿಷ್ಯತೇ || 18-68

ಆಕಾಶವು ಸ್ವರೂಪತಃ ಅವಿಚ್ಛಿನ್ನವೂ ಮತ್ತು ನಿರ್ವಿಕಾರವೂ ಹೇಗೆ ಆಗಿರುತ್ತದೆಯೋ ಅದರಂತೆ ಮುಕ್ತನಾದ ಜೀವಿಯ ಸ್ವರೂಪವೂ ಸಹ ಹಾಗೆಯೇ ಇರುತ್ತದೆ.

ನ ಕಿಂಚಿದಪಿ ಮುಕ್ತಸ್ಯ

ದೃಶ್ಯಂ ಕರ್ತವ್ಯಮೇವ ವಾ |

ಸುಖ ಸ್ಫೂರ್ತಿ ಸ್ವರೂಪೇಣ

ನಿಶ್ಚಲಾ ಸ್ಥಿತಿರುಚ್ಯತೇ || 18-69

ಈ ಮುಕ್ತನಾದ ಜೀವಿಗೆ ದೃಶ್ಯವಾಗಲಿ (ಕಣ್ಣಿನಿಂದ ನೋಡುವುದಾಗಲಿ) ಮತ್ತು ಕರ್ತವ್ಯವಾಗಲಿ (ಕೈಯಿಂದ ಮಾಡು ವುದಾಗಲಿ) ಯಾವುದೂ ಇರುವುದಿಲ್ಲ. ಆದರೆ ಅವನು ಪರಿಪೂರ್ಣ ಆನಂದ ಸ್ವರೂಪದಿಂದ ನಿಶ್ಚಲ ಸ್ಥಿತಿಯಲ್ಲಿರುತ್ತಾನೆ.

#ಶಿವಾದ್ವೈತಪರಿಜ್ಞಾನ-

ಶಿಥಿಲಾಶೇಷ ವಸ್ತು ನಃ |

ಕೇವಲಂ ಸಂವಿದುಲ್ಲಾಸ-

ದರ್ಶಿನಃ ಕೇನ ಕೋ ಭವೇತ್ || 18-70

ಶಿವಾದ್ವೈತ ಪರಿಜ್ಞಾನದಿಂದ ಪ್ರಾಪಂಚಿಕ ವಸ್ತುಗಳ ಭೇದ ಭ್ರಾಂತಿಯನ್ನು ಸಡಿಲಿಸಿಕೊಂಡ ಮತ್ತು ಯಾವಾಗಲೂ ಜ್ಞಾನದ ಉಲ್ಲಾಸವನ್ನೇ ನೋಡುತ್ತಿರುವ(ಶಿವಾದ್ವೈತ ಜ್ಞಾನದ ಅನುಭಾವದಲ್ಲೇ ಇರುವ) ಈ ಅಂತ್ಯಪ್ರಸಾದಿಗೆ ಯಾರಿಂದ ಏನೂ ಪ್ರಯೋಜನವಿಲ್ಲ.

ಇತಿ ಅಂತ್ಯಪ್ರಸಾದಿಸ್ಥಲಂ

-------------------------------

ಅಥ #ಸೇವ್ಯಪ್ರಸಾದಿಸ್ಥಲಮ್

ಸೇವ್ಯೋ ಗುರುಃ ಸಮಸ್ತಾನಾಮ್

ಶಿವ ಏವ ನ ಸಂಶಯಃ |

ಪ್ರಸಾದೋಸ್ಯ ಪರಾನಂದ-

ಪ್ರಕಾಶಃ ಪರಿಕೀತ್ರ್ಯತೇ || 18-71

ಎಲ್ಲರಿಗೂ ಸೇವ್ಯನಾಗಿರುವಂತಹ ಗುರುವು ಸಾಕ್ಷಾತ್ ಶಿವನೇ ಆಗಿರುತ್ತಾನೆ. ಇದರಲ್ಲಿ ಯಾವ ಸಂಶಯವೂ ಇಲ್ಲ. ಅವನ ಪ್ರಸಾದವೇ ಸೇವ್ಯಪ್ರಸಾದವು. ಆ ಪ್ರಸಾದವು ಪರಾನಂದ ಪ್ರಕಾಶ ರೂಪವಾಗಿರುತ್ತದೆ.

#ಸೇವ್ಯೋ ಗುರುಃ ಸ್ಮೃತೋ ಹ್ಯಸ್ಯ

ಪ್ರಸಾದೋನುಭವೋ ಮತಃ |

ತದೇಕಾವೇಶರೂಪೇಣ

ತದ್ವಾನ್ ಸೇವ್ಯ ಪ್ರಸಾದವಾನ್ || 18-72

ಶಿವಸ್ವರೂಪನಾದ ಶ್ರೀಗುರುವು ಎಲ್ಲರಿಗೂ ಸೇವ್ಯನಾಗಿರುವನು. ಇಂತಹ ಶ್ರೀಗುರುವಿನ ಅನುಭವವು (ಉಪದೇಶಾನು ಭಾವವು) ಪ್ರಸಾದವೆಂದು ಕರೆಯಲ್ಪಡುತ್ತದೆ. ಇಂತಹ ಗುರುವನ್ನು ಹಾಗೂ ಪ್ರಸಾದವನ್ನು ಏಕರೂಪದಿಂದ ಕಂಡು ಅನುಭವಿಸತಕ್ಕವನೆ ಸೇವ್ಯ ಪ್ರಸಾದಿ ಎನಿಸಿಕೊಳ್ಳುವನು.

ಗುರುದೇವಃ ಪರಂ ತತ್ತ್ವಮ್

ಪರತತ್ತ್ವಂ ಗುರುಃ ಸ್ಮೃತಃ |

ತದೇಕತ್ವಾನು ಭಾವೇನ

ನ ಕಿಂಚಿದವ ಶಿಷ್ಯತೇ || 18-73

ಗುರುದೇವನೇ ಪರತತ್ತ್ವವು ಮತ್ತು ಆ ಪರಮತತ್ತ್ವವೇ ಶ್ರೀಗುರುವು. ಆದ್ದರಿಂದ ಅವೆರಡನ್ನು ಐಕ್ಯಾನು ಸಂಧಾನ ಮಾಡುವುದರಿಂದ ಆ ಶಿವಯೋಗಿಗೆ (ತನ್ನ ಹೊರತು) ಬೇರೆ ಯಾವುದೂ ಉಳಿಯುವುದಿಲ್ಲ.

#ಅಪರಿಚ್ಛೇದ್ಯಮಾತ್ಮಸ್ಥಮ್

ಅವಾಙ್ಮನಸ ಗೋಚರಮ್ |

ಆನಂದಂ ಪಶ್ಯತಾಂ ಪುಂಸಾಮ್

ರತಿರನ್ಯತ್ರ ಕಾ ಭವೇತ್ || 18-74

ವಾಣಿ ಮತ್ತು ಮನಸ್ಸುಗಳಿಗೆ ಅಗೋಚರವಾದ ಪರಿಚ್ಛೇದವಲ್ಲದ (ಅಖಂಡವಾದ) ತನ್ನ ಆತ್ಮಾನಂದವನ್ನು ಅನುಭವಿಸುತ್ತಿರುವ ಯೋಗಿಗೆ ಬೇರೆ ಕಡೆ ಪ್ರೀತಿಯು ಅದು ಹೇಗೆ ತಾನೆ ಉಂಟಾದೀತು?

ಜ್ಞಾನಾಮೃತೇನ ತೃಪ್ತಸ್ಯ

ಕಿಮನ್ಯೈರ್ಭೊಜ್ಯವಸ್ತುಭಿಃ |

ಜ್ಞಾನಾದೇವ ಪರಾನಂದಮ್

ಪ್ರಕಾಶಯತಿ ಸಚ್ಛಿವಃ || 18-75

ಜ್ಞಾನಾಮೃತದಿಂದ ತೃಪ್ತನಾದ ಯೋಗಿಗೆ ಅದಕ್ಕಿಂತಲೂ ಭಿನ್ನವಾದ ಭೋಜ್ಯ ವಸ್ತುಗಳಿಂದ ಏನು ಪ್ರಯೋಜನ? ಆದ್ದರಿಂದ ಜ್ಞಾನದಿಂದಲೇ ಪರಾನಂದವು ಪ್ರಕಾಶಿಸುವುದು ಎಂಬುದಾಗಿ ಶಿವನೇ ಶ್ರುತಿಯಲ್ಲಿ ಹೇಳಿದ್ದಾನೆ.

#ಮುಕ್ತಿರೇವ ಪರಾ ತೃಪ್ತಿಃ

ಸಚ್ಚಿದಾನಂದ ಲಕ್ಷಣಾ |

ನಿತ್ಯತೃಪ್ತಸ್ಯ ಮುಕ್ತಸ್ಯ

ಕಿಮನ್ಯೈರ್ಭೊಗಸಾಧನೈಃ || 18-76

ಸಚ್ಚಿದಾನಂದ ಲಕ್ಷಣವಾದ ಮುಕ್ತಿಯೇ ಪರಾತೃಪ್ತಿಯು, ಹೀಗೆ ಮುಕ್ತನಾದ ಅಂತೆಯೇ ನಿತ್ಯ ತೃಪ್ತನಾದ ಯೋಗಿಗೆ ಅನ್ಯಭೋಗ ಸಾಧನಗಳಿಂದ ಏನು ಪ್ರಯೋಜನ?

ನ ಬಾಹ್ಯಂ ಕರ್ಮ ತಸ್ಯಾಸ್ತಿ

ನ ಚಾಂತನೆರ್ವ ಕುತ್ರಚಿತ್ |

ಶಿವೈಕ್ಯ ಜ್ಞಾನರೂಢಸ್ಯ

ದೇಹಭ್ರಾಂತಿಂ ವಿಮುಂಚತಃ || 18-77

ಶಿವೈಕ್ಯ ಜ್ಞಾನದಿಂದ ದೇಹ ಭ್ರಾಂತಿಯನ್ನು ಕಳೆದುಕೊಂಡ ಯೋಗಿಗೆ ಬಾಹ್ಯ ಕರ್ಮವಾಗಲಿ, ಅಂತರಂಗ ಕರ್ಮವಾಗಲಿ ಅಥವಾ ಇನ್ನಾವುದೇ ಕರ್ಮವಾಗಲಿ ಇರುವುದಿಲ್ಲ.

ನ ಕರ್ಮಬಂಧೇ ನ ತಪೋವಿಶೇಷೇ

ನ ಮಂತ್ರಯೋಗಾಭ್ಯಸನೇ ತಥೈವ |

ಧ್ಯಾನೇ ನ ಬೋಧೇ ಚ ತಥಾತ್ಮತತ್ತ್ವೇ

ಮನಃಪ್ರವೃತ್ತಿಃ ಪರಯೋಗಭಾಜಾಮ್|| 18-78

ಪರಶಿವ ಬ್ರಹ್ಮದೊಡನೆ ಸಾಮರಸ್ಯವನ್ನು ಪಡೆದುಕೊಂಡಿರುವ ಈ ಸೇವ್ಯ ಪ್ರಸಾದಿಗೆ ಕರ್ಮಬಂಧನದಲ್ಲಿಯೇ ಆಗಲಿ, ಯಾವುದೇ ವಿಶಿಷ್ಟ ತಪಸ್ಸಿನಲ್ಲಿಯೇ ಆಗಲಿ, ಮಂತ್ರ, ಲಯ, ಹಠ ಮತ್ತು ರಾಜ ಯೋಗಾದಿಗಳ ಅಭ್ಯಾಸದಲ್ಲಿಯೇ ಆಗಲಿ, ಅದರಂತೆ ಧ್ಯಾನದಲ್ಲಿಯೇ ಆಗಲಿ ಮತ್ತು ಬೋಧನಾತ್ಮಕ ವ್ಯವಹಾರದಲ್ಲಿಯೇ ಆಗಲಿ ಅವನ ಮನಃಪ್ರವೃತ್ತಿ ಇರುವುದಿಲ್ಲ.

ಇತಿ ಸೇವ್ಯಪ್ರಸಾದಿಸ್ಥಲಂ

#ಓಂ ತತ್ಸತ್ ಇತಿ

ಶ್ರೀ ಶಿವಗೀತೇಷು ಸಿದ್ಧಾಂತಾಗಮೇಷು

ಶಿವಾದ್ವೈತ ವಿದ್ಯಾಯಾಂ ಶಿವಯೋಗಶಾಸ್ತ್ರೇ

ಶ್ರೀರೇಣುಕಾಗಸ್ತ್ಯಸಂವಾದೇ ವೀರಶೈವಧರ್ಮನಿರ್ಣಯೇ,

ಶ್ರೀಶಿವಯೋಗಿ ಶಿವಾಚಾರ್ಯವಿರಚಿತೇ

ಶ್ರೀಸಿದ್ಧಾಂತಶಿಖಾಮಣೌ

ಲಿಂಗ ಸ್ಥಲಾಂತರ್ಗತ ಪ್ರಾಣಲಿಂಗಿ ಸ್ಥಲೇ

ಆತ್ಮಸ್ಥಲಾದಿ ನವವಿಧ ಸ್ಥಲಾಂತರ್ಗತಪ್ರಸಂಗೋ ನಾಮ

ಅಷ್ಟಾದಶಃ ಪರಿಚ್ಛೇದಃ ||

ಇಲ್ಲಿಗೆ ಸೇವ್ಯಪ್ರಸಾದಿಸ್ಥಲವು ಮುಗಿಯಿತು ಓಂ ತತ್ಸತ್ ಇಲ್ಲಿಗೆ ಶ್ರೀ ಶಿವನಿಂದ ಉಪದೇಶಿಸಲ್ಪಟ್ಟ ಶ್ರೀ ಸಿದ್ಧಾಂತಾಗಮಗಳಲ್ಲಿಯ ಶಿವಾದ್ವೈತವಿದ್ಯಾರೂಪವೂ, ಶಿವಯೋಗಶಾಸ್ತ್ರವೂ, ಶ್ರೀ ರೇಣುಕಾಗಸ್ತ್ಯ ಸಂವಾದರೂಪವೂ, ಶ್ರೀವೀರಶೈವಧರ್ಮನಿರ್ಣಯವೂ, ಶ್ರೀ ಶಿವಯೋಗಿ ಶಿವಾಚಾರ್ಯ ವಿರಚಿತವೂ ಆದ ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿ ಲಿಂಗಸ್ಥಲಾಂತರ್ಗತವಾದ ಪ್ರಾಣಲಿಂಗಿಸ್ಥಲದಲ್ಲಿಯ ಆತ್ಮಸ್ಥಲಾದಿ ಒಂಭತ್ತು ವಿಧ ಸ್ಥಲಪ್ರಸಂಗವೆಂಬ ಹೆಸರಿನ ಹದಿನೆಂಟನೆಯ ಪರಿಚ್ಛೇದವು ಮುಗಿಯಿತು.