ಪಂಚದಶಃ ಪರಿಚ್ಛೇದಃ
ಭಕ್ತಸ್ಥಲಾಂತರ್ಗತ ನವವಿಧ ಲಿಂಗ ಸ್ಥಲ - ಪ್ರಸಂಗಃ -
ಅಥ ಭಕ್ತಸ್ಥಲಮ್
|| ಶ್ರೀ ರೇಣುಕ ಉವಾಚ ||
ಷಟ್ಸ್ಥಲೋಕ್ತ ಸದಾಚಾರ-
ಸಂಪನ್ನಸ್ಯ ಯಥಾ ಕ್ರಮಮ್ |
ಲಿಂಗ ಸ್ಥಲಾನಿ ಕಥ್ಯಂತೇ
ಜೀವನ್ ಮುಕ್ತಿ ಪರಾಣಿ ಚ || 15-1
ಹೇ ಅಗಸ್ತ್ಯನೇ, ಅಂಗ ಷಟ್ಸ್ಥಲದಲ್ಲಿ ಹೇಳಿದ ಸದಾಚಾರ ಸಂಪನ್ನನಾದವನಿಗೆ
‘ಜೀವನ್ಮುಕ್ತಿ’ ಪರವಾಗಿ ಹೇಳುವ ಲಿಂಗಸ್ಥಲಗಳು ಕ್ರಮಾನುಸಾರವಾಗಿ ಹೇಳಲ್ಪಡುತ್ತವೆ.
|| ಅಗಸ್ತ್ಯ ಉವಾಚ ||
#ಭಕ್ತಾದ್ಯೆ ಕ್ಯಾ ವಸಾನಾನಿ
ಷಡುಕ್ತಾನಿ ಸ್ಥಲಾನಿ ಚ |
ಲಿಂಗಸ್ಥಲಾನಿ ಕಾನೀಹ
ಕಥ್ಯಂತೇ ಕತಿ ವಾ ಪುನಃ || 15-2
ಹೇ ರೇಣುಕಗಣಾಧೀಶ್ವರನೇ, ಭಕ್ತನನ್ನೇ ಮೊದಲುಗೊಂಡು ಐಕ್ಯನೇ ಕೊನೆಯದಾಗಿರುವ ಆರು ಸ್ಥಲಗಳನ್ನು ನೀವು ಹೇಳಿದ್ದೀರಿ.
ಈಗ ಲಿಂಗಸ್ಥಲಗಳೆಂದರೆ ಯಾವುವು? ಅವು ಪುನಃ ಎಷ್ಟು ವಿಧವಾಗಿ ಹೇಳಲ್ಪಡುತ್ತವೆ?
|| ಶ್ರೀ ರೇಣುಕ ಉವಾಚ ||
ಗುರ್ವಾದಿ ಜ್ಞಾನ ಶೂನ್ಯಾಂತಾಃ
ಭಕ್ತಾದಿ ಸ್ಥಲ ಸಂಶ್ರಿತಾಃ |
ಸ್ಥಲ ಭೇದಾಃ ಪ್ರಕೀತ್ರ್ಯಂತೇ
ಪಂಚಾಶತ್ಸಪ್ತ ಚಾಧುನಾ || 15-3
ಭಕ್ತಾದಿ ಸ್ಥಲಗಳನ್ನು ಆಶ್ರಯಿಸಿರುವ ದೀಕ್ಷಾಗುರುಸ್ಥಲವನ್ನೇ ಮೊದಲು ಮಾಡಿಕೊಂಡು
ಜ್ಞಾನಶೂನ್ಯಸ್ಥಲದವರೆಗಿನ ಐವತ್ತೇಳು (57) ಪ್ರಕಾರದ ಸ್ಥಲಭೇದಗಳು ಹೇಳಲ್ಪಡುತ್ತವೆ.
#ಆದೌ ನವಸ್ಥಲಾನೀಹ
ಭಕ್ತಸ್ಥಲ ಸಮಾಶ್ರಯಾತ್ |
ಕಥ್ಯಂತೇ ಗುಣಸಾರೇಣ
ನಾಮಾನ್ಯೇಷಾಂ ಪೃಥಕ್ ಶ್ರುಣು |15-4
ಇವುಗಳಲ್ಲಿ ಭಕ್ತಸ್ಥಲವನ್ನು ಆಶ್ರಯಿಸಿರುವ ಒಂಭತ್ತು ಅವಾಂತರ ಸ್ಥಲಗಳು
ಗುಣಶ್ರೇಷ್ಠತ್ವದಿಂದ ಹೇಳಲ್ಪಡುತ್ತವೆ. ಇವುಗಳ ಹೆಸರುಗಳನ್ನು ಬೇರೆಬೇರೆಯಾಗಿ ಕೇಳು
ದೀಕ್ಷಾ ಗುರು ಸ್ಥಲಂ ಪೂರ್ವಮ್
ತತಃ ಶಿಕ್ಷಾ ಗುರು ಸ್ಥಲಮ್ |
ಪ್ರಜ್ಞಾ ಗುರು ಸ್ಥಲಂ ಚಾಥ
ಕ್ರಿಯಾ ಲಿಂಗ ಸ್ಥಲಂ ತತಃ || 15-5
ಮೊದಲನೆಯದು ದೀಕ್ಷಾಗುರುಸ್ಥಲವು. ಅನಂತರ ಶಿಕ್ಷಾಗುರುಸ್ಥಲವು.
ಅದಾದ ಮೇಲೆ ಪ್ರಜ್ಞಾ (ಜ್ಞಾನ) ಗುರುಸ್ಥಲವು. ನಂತರ ಕ್ರಿಯಾಲಿಂಗಸ್ಥಲವು.
#ಭಾವಲಿಂಗಸ್ಥಲಂ ಚಾಥ
ಜ್ಞಾನ ಲಿಂಗ ಸ್ಥಲಂ ತತಃ |
ಸ್ವಯಂ ಪರಂ ಚರಂ ಚೇತಿ
ತೇಷಾಂ ಲಕ್ಷ್ಮಣ ಮುಚ್ಯತೇ || 15-6
ಅದಾದ ಮೇಲೆ ಭಾವಲಿಂಗ ಸ್ಥಲವು. ನಂತರ ಜ್ಞಾನಲಿಂಗಸ್ಥಲವು.
ತರುವಾಯ ಸ್ವಯಸ್ಥಲ, ಪರಸ್ಥಲ, ಚರಸ್ಥಲಗಳು ಹೇಳಲ್ಪಡುತ್ತವೆ.
ಅವುಗಳ ಲಕ್ಷಣಗಳನ್ನು ಕ್ರಮವಾಗಿ ಹೇಳಲಾಗುವುದು.
ಭಕ್ತಸ್ಥಲಮ್
ದೀಯತೇ ಪರಮಂ ಜ್ಞಾನಮ್
ಕ್ಷೀಯತೇ ಪಾಶ ಬಂಧನಮ್ |
ಯಯಾ ದೀಕ್ಷೇತಿ ಸಾ ತಸ್ಯಾಮ್
ಗುರುರ್ ದೀಕ್ಷಾ ಗುರುಃ ಸ್ಮೃತಃ || 15-7
ಯಾವುದರಿಂದ ಪರಮಶ್ರೇಷ್ಠವಾದ ಶಿವಜ್ಞಾನವು ಕೊಡಲ್ಪಡುವುದೋ ಮತ್ತು ಮಲ ಮಾಯಾಪಾಶರೂಪವಾದ ಬಂಧನವು ಕ್ಷಯಿಸಲ್ಪಡುವುದೋ ಅದುವೇ ದೀಕ್ಷೆಯು.
ಆ ದೀಕ್ಷೆಯಲ್ಲಿ (ದೀಕ್ಷೆ ಮಾಡುವಲ್ಲಿ) ಯಾರು ಗುರುವೋ ಅವನು ‘ದೀಕ್ಷಾಗುರು’ವೆಂದು ನೆನೆಯಲ್ಪಡುವನು.
#ಗುಣಾತೀತಂ ಗುಕಾರಂ ಚ
ರೂಪಾತೀತಂ ರು ಕಾರಕಮ್ |
ಗುಣಾತೀತ ಮರೂಪಂ ಚ
ಯೋ ದದ್ಯಾತ್ ಸ ಗುರುಃ ಸ್ಮೃತಃ || 15-8
‘ಗು’ಕಾರವೆಂದರೆ ಗುಣಾತೀತ (ಪ್ರಾಕೃತ ಗುಣಾತೀತ)ವೆಂದರ್ಥ ಮತ್ತು ‘ರು’ ಕಾರವೆಂದರೆ ರೂಪಾತೀತ
(ಮಾಯಾ ರೂಪವನ್ನು ಮೀರಿದ್ದು) ಎಂದರ್ಥ. ಹೀಗೆ ಗುಣಾತೀತವೂ ಮತ್ತು ರೂಪಾತೀತವೂ ಆದ
(ಗುಣತ್ರಯವನ್ನು ಮೀರಿದ ಜ್ಯೋತಿರ್ಮಯವಾದ ಬಿಂದು ಸಂಬಂಧವಾದ, ಕಲಾರೂಪವಿಲ್ಲದ, ಚಿನ್ಮಯ
ವಸ್ತುವನ್ನು) ಯಾವನು ಕೊಡುವನೋ
(ಯಾವನು ಉಪದೇಶಿಸಿ ತಿಳಿಸಿ ಕೊಡುವನೋ) ಅವನೇ ‘ಗುರು’ವೆಂದು ನೆನೆಯಲ್ಪಡುವನು.
ಆಚಿನೋತಿ ಚ ಶಾಸ್ತ್ರಾರ್ಥಾನ್
ಆಚಾರೇ ಸ್ಥಾಪಯತ್ಯಲಮ್ |
ಸ್ವಯಮಾಚರತೇ ಯಸ್ಮಾತ್
ಆಚಾರ್ಯಸ್ತೇನ ಚೋಚ್ಯತೇ || 15-9
ಶಾಸ್ತ್ರಾರ್ಥಗಳನ್ನು (ಶಿವಾಗಮ ಶಾಸ್ತ್ರ ರಹಸ್ಯಾರ್ಥಗಳನ್ನು) ಯಾರು ಸಂಗ್ರಹಿಸುತ್ತಾರೆಯೋ,
ಆಚಾರದಲ್ಲಿ (ವೀರಶೈವಾಚಾರದಲ್ಲಿ) ಹೆಚ್ಚಿನ ಪ್ರಮಾಣದಲ್ಲಿ (ಶಿಷ್ಯರನ್ನು)
ನಿಯೋಜಿಸುವನೋ ಮತ್ತು ತಾನೂ ಆಚರಿಸುವನೋ ಅವನೇ ‘ಆಚಾರ್ಯ’ನೆಂದು ಹೇಳಲ್ಪಡುತ್ತಾನೆ.
#ಷಡಧ್ವಾತೀತ ಯೋಗೇನ
ಯತತೇ ಯಸ್ತು ದೇಶಿಕಃ |
ಮಾಯಾಬ್ಧಿ ತಾರಣೋಪಾಯ-
ಹೇತುರ್ ವಿಶ್ವಗುರುಃ ಶಿವಃ || 15-10
ಯಾವ ದೇಶಿಕನು (ಗುರುವು) ಷಡಧ್ವಗಳನ್ನು
(ವರ್ಣಾಧ್ವ, ಪದಾಧ್ವ, ಮಂತ್ರಾಧ್ವ, ಭುವನಾಧ್ವ, ತತ್ತ್ವಾಧ್ವ, ಕಲಾಧ್ವಗಳನ್ನು)
ಮೀರಿದ ಉಪಾಯದಿಂದ ಶಿವಯೋಗದಲ್ಲಿ ಯತ್ನಶೀಲನಾಗುತ್ತಾನೆಯೋ ಅವನೇ ವಿಶ್ವಗುರುವು, ಅವನೇ ಶಿವನು.
ಅಖಂಡಂ ಯೇನ ಚೈತನ್ಯಮ್
ವ್ಯಜ್ಯತೇ ಸರ್ವವಸ್ತುಷು |
ಆತ್ಮ ಯೋಗ ಪ್ರಭಾವೇನ
ಸ ಗುರುರ್ ವಿಶ್ವಭಾಸಕಃ || 15-11
ತನ್ನ ಆತ್ಮಯೋಗ ಪ್ರಭಾವದಿಂದ (ಶಿವತಾದಾತ್ಮ್ಯ ಯೋಗದ) ಯಾವ ದೇಶಿಕನಿಗೆ
ಜಗತ್ತಿನ ಎಲ್ಲ ವಸ್ತುಗಳಲ್ಲಿ ಅಖಂಡವಾದ ಚೈತನ್ಯವೇ ತೋರುವುದೋ ಅಂತಹ
ಆ ಗುರುವನ್ನು ವಿಶ್ವಭಾಸಕನೆಂದು ಕರೆಯುತ್ತಾರೆ.
ಇತಿ ದೀಕ್ಷಾಗುರುಸ್ಥಲಂ
--------------------
ಅಥ ಶಿಕ್ಷಾಗುರುಸ್ಥಲಮ್
ದೀಕ್ಷಾ ಗುರು ರಸೌ ಶಿಕ್ಷಾ-
ಹೇತುಃ ಶಿಷ್ಯಸ್ಯ ಬೋಧಕಃ |
ಪ್ರಶ್ನೋತ್ತರ ಪ್ರವಕ್ತಾ ಚ
ಶಿಕ್ಷಾ ಗುರು ರಿತೀರ್ಯತೇ || 15-12
ಆ ದೀಕ್ಷಾಗುರುವೇ ಶಿಷ್ಯನಿಗೆ ಬೋಧಕನಾಗಿ ಮತ್ತು ಪ್ರಶ್ನೋತ್ತರಗಳಿಗೆ ಪ್ರವಕ್ತಕನಾಗಿ
ಶಿಕ್ಷಣಕ್ಕೆ ಕಾರಣವಾಗಿರುವುದರಿಂದ ಅವನನ್ನು `ಶಿಕ್ಷಾಗುರು’ವೆಂದು ಕರೆಯಲಾಗಿದೆ.
#ಬೋಧಕೋಯಂ ಸಮಾಖ್ಯಾತೋ
ಬೋಧ್ಯಮೇತದಿತಿ ಸ್ಫುಟಮ್ |
ಶಿಷ್ಯೇ ನಿ ಯುಜ್ಯತೇ ಯೇನ
ಸ ಶಿಕ್ಷಾ ಗುರು ರುಚ್ಯತೇ || 15-13
ಈ ಗುರುವು ಬೋಧಕನೆಂದು ಹೇಳಲ್ಪಡುತ್ತಾನೆ. ಈ ಶಿವಯೋಗ ಜ್ಞಾನವು ಬೋಧ್ಯವೆಂದು ನಿಶ್ಚಯವಾಗಿ ತಿಳಿದುಕೊಳ್ಳಬೇಕು. ಈ ಬೋಧ್ಯ-ಬೋಧಕ
ಭಾವನೆಯು ಯಾವ ಗುರುವಿನಿಂದ ಶಿಷ್ಯನಲ್ಲಿ ನಿಯೋಜಿಸಲ್ಪಡುತ್ತದೆಯೋ ಅವನು ‘ಶಿಕ್ಷಾಗುರು’ವೆಂದು ಹೇಳಲ್ಪಡುತ್ತಾನೆ.
ಸಂಸಾರ ತಿಮಿರೋನ್ಮಾಥಿ-
ಶರಚ್ಚಂದ್ರ ಮರೀಚಯಃ |
ವಾಚೋ ಯಸ್ಯ ಪ್ರವರ್ತಂತೇ
ತಮಾಚಾರ್ಯಂ ಪ್ರಚಕ್ಷತೇ || 15-14
ಯಾವನ ಉಪದೇಶ ವಾಕ್ಯಗಳು ಸಂಸಾರವೆಂಬ ಅಂಧಕಾರವನ್ನು ತೊಲಗಿಸುವಲ್ಲಿ ಶರತ್ಕಾಲದ
ಚಂದ್ರನ ಕಿರಣಗಳಂತೆ ಕಾರ್ಯಗೈಯುವುದೋ ಅವನನ್ನು ಆಚಾರ್ಯನೆಂದು ಕರೆಯುತ್ತಾರೆ.
#ದದಾತಿ ಯಃ ಪ್ರತಿ ಜ್ಞಾನಮ್
ಜಗನ್ಮಾಯಾ ನಿ ವರ್ತಕಮ್ |
ಅದ್ವೈತ ವಾಸನೋಪಾಯಮ್
ತಮಾಚಾರ್ಯ ವರಂ ವಿದುಃ || 15-15
ಜಗದ್ರೂಪವಾದ ಮಾಯೆಯನ್ನು ನಿವರ್ತನ ಗೊಳಿಸುವ (ತೊಲಗಿರುವ) ಪತಿಜ್ಞಾನವನ್ನು (ಶಿವಜ್ಞಾನವನ್ನು) ಯಾವಾತನು ಕೊಡುತ್ತಾನೆಯೋ
ಮತ್ತು ಅದ್ವೈತ (ಶಿವಾದ್ವೈತ) ವಾಸನೆಗೆ ಸಾಧನವಾದ ಆ ಗುರುವನ್ನು ಆಚಾರ್ಯಶ್ರೇಷ್ಠನೆಂದು ಹೇಳುತ್ತಾರೆ.
ಪೂರ್ವ ಪಕ್ಷಂ ಸಮಾದಾಯ
ಜಗದ್ಭೇದ ವಿಕಲ್ಪನಮ್ |
ಅದ್ವೈತ ಕೃತ ಸಿದ್ಧಾಂತೋ
ಗುರುರೇಷ ಗುಣಾಧಿಕಃ || 15-16
ಜಗತ್ತಿನ ಭೇದರೂಪವಾದ ವಿಕಲ್ಪಾದಿಗಳನ್ನು ಪೂರ್ವಪಕ್ಷ ರೂಪದಲ್ಲಿ ಗ್ರಹಿಸಿಕೊಂಡು
(ಅವುಗಳನ್ನು ನಿರಸನಗೊಳಿಸಿ) ಶಿವಾದ್ವೈತ ಸಿದ್ಧಾಂತವನ್ನು ಸಿದ್ಧಗೊಳಿಸುವ ಈ ಶಿಕ್ಷಾಗುರುವೇ ಗುಣಾಧಿಕನು
(ಶ್ರೇಷ್ಠನು) (ಪೂರ್ವಪಕ್ಷವಾದ ದ್ವೈತ ಸಿದ್ಧಾಂತವನ್ನು ಖಂಡಿಸಿ, ಶಿವಾದ್ವೈತ ಸಿದ್ಧಾಂತವನ್ನು ಬೋಧಿಸುವವನೇ ಶಿಕ್ಷಾಗುರುವು).
#ಸಂದೇಹ ವನ ಸಂದೋಹ-
ಸಮುಚ್ಛೇದ ಕುಠಾರಿಕಾ |
ಯತ್ಸೂಕ್ತಿ ಧಾರಾ ವಿಮಲಾ
ಸ ಗುರೂಣಾಂ ಶಿಖಾಮಣಿಃ || 15-17
ಸಂದೇಹಗಳೆಂಬ ನಿಬಿಡವಾದ ಅರಣ್ಯವನ್ನು ಕತ್ತರಿಸಿ ಹಾಕುವ ಕೊಡಲಿಯಂತಿರುವ
ನಿರ್ಮಲವಾದ ಸದುಪದೇಶವೆಂಬ ವಾಗ್ಝರಿ ಯಾರಿಗೆ ಇರುವುದೋ ಆ ಶಿಕ್ಷಾಗುರುವು ಗುರುಗಳಿಗೆಲ್ಲಾ ಶಿಖಾಮಣಿಯಾಗಿದ್ದಾನೆ.
ಯತ್ಸೂಕ್ತಿ ದರ್ಪಣಾ ಭೋಗೇ
ನಿರ್ಮಲೇ ದೃಶ್ಯತೇ ಸದಾ |
ಮೋಕ್ಷ ಶ್ರೀರ್ ಬಿಂಬ ರೂಪೇಣ
ಸ ಗುರುರ್ ಭವತಾರಕಃ || 15-18
ಯಾರ ಉಪದೇಶವೆಂಬ ನಿರ್ಮಲವಾದ ದರ್ಪಣದ ವಿಸ್ತಾರದಲ್ಲಿ ಮೋಕ್ಷಲಕ್ಷ್ಮಿಯು
ಬಿಂಬರೂಪದಿಂದ ಕಾಣುವಳೋ ಆ ಶಿಕ್ಷಾಗುರುವೆ ಭವತಾರಕನು.
#ಶಿಷ್ಯಾಣಾಂ ಹೃದಯಾ ಲೇಖ್ಯಮ್
ಪ್ರದ್ಯೋತಯತಿ ಯಃ ಸ್ವಯಮ್ |
ಜ್ಞಾನ ದೀಪಿಕ ಯಾನೇನ
ಗುರುಣಾ ಕಃ ಸಮೋ ಭವೇತ್ || 15-19
ಶಿಷ್ಯರ ಹೃದಯ ಕಮಲದಲ್ಲಿರುವ (ಅವರ) ‘ನಿಜ’ರೂಪದ ಚಿತ್ರವನ್ನು
ತನ್ನ ಜ್ಞಾನದೀಪದಿಂದ ಯಾರು ಪ್ರಕಾಶಗೊಳಿಸುವನೋ ಅಂತಹ ಶಿಕ್ಷಾಗುರುವಿಗೆ ಯಾರು ತಾನೇ ಸಮಾನರಾಗುವರು?
ಪರಮಾದ್ವೈತ ವಿಜ್ಞಾನ
ಪರಮೌಷಧಿ ದಾನತಃ |
ಸಂಸಾರ ರೋಗ ನಿರ್ಮಾಥೀ
ದೇಶಿಕಃ ಕೇನ ಲಭ್ಯತೇ || 15-20
ಪರಮಾದ್ವೈತ ವಿಜ್ಞಾನವೆಂಬ (ಶ್ರೇಷ್ಠವಾದ ಶಿವಾದ್ವೈತ ಜ್ಞಾನವೆಂಬ) ಉತ್ಕೃಷ್ಟ ಔಷಧವನ್ನು ಕೊಡುವುದರ
ಮೂಲಕ ಸಂಸಾರವೆಂಬ ರೋಗವನ್ನು ಪರಿಹರಿಸುವ ಈ ಶಿಕ್ಷಾಗುರುವೆಂಬ ದೇಶಿಕನು ಯಾರಿಗೆ ತಾನೇ ಲಭ್ಯವಾಗಬಲ್ಲನು?
(ಶಕ್ತಿಪಾತರೂಪವಾದ ಸಾತ್ವಿಕ ಭಾವಸಹಿತರಾದವರಿಗೆ ಮಾತ್ರ ಇಂತಹ ಗುರುವು ದೊರೆಯುತ್ತಾನೆ).
ಇತಿ ಶಿಕ್ಷಾ ಗುರು ಸ್ಥಲಂ
---------------------
ಅಥ (ಪ್ರಜ್ಞಾ) ಜ್ಞಾನಗುರುಸ್ಥಲಮ್
ಉಪದೇಷ್ಟೋ ಪದೇಶಾನಾಮ್
ಸಂಶಯ ಚ್ಛೇದ ಕಾರಕಃ |
ಸಮ್ಯಕ್ಜ್ಞಾನ ಪ್ರದಃ ಸಾಕ್ಷಾತ್
ಏಷ ಜ್ಞಾನ ಗುರುಃ ಸ್ಮೃತಃ || 15-21
ಉಪದೇಶಗಳನ್ನು (ಶಾಸ್ತ್ರದ ರಹಸ್ಯಾರ್ಥಗಳನ್ನು) ಉಪದೇಶಿಸುವ, (ಶಿಷ್ಯನ) ಮನಸ್ಸಿನಲ್ಲಿರುವ ಸಂಶಯಗಳನ್ನು ನಿವಾರಣೆ ಮಾಡುವ ಮತ್ತು ಸಾಕ್ಷಾತ್ ಸಮ್ಯಕ್ ಜ್ಞಾನವನ್ನು ಪ್ರಧಾನ ಮಾಡುವ (ಶಿವಜ್ಞಾನವನ್ನು ಅನುಗ್ರಹಿಸುವ) ಈ ಗುರುವೇ `ಜ್ಞಾನಗುರು’ವೆಂದು ಕರೆಯಿಸಿಕೊಳ್ಳುವನು.
#ನಿರಸ್ತ ವಿಶ್ವ ಸಂಭೇದಮ್
ನಿರ್ವಿಕಾರಂ ಚಿದಂಬರಮ್|
ಸಾಕ್ಷಾತ್ಕರೋತಿ ಯೋ ಯುಕ್ತ್ಯಾ
ಸ ಜ್ಞಾನ ಗುರು ರುಚ್ಯತೇ|| 15-22
ಯಾವ ಗುರುವು ಯುಕ್ತಿಯಿಂದ (ಶಿವಾದ್ವೈತ ಶಾಸ್ತ್ರದಲ್ಲಿ ಹೇಳಿದ ಯುಕ್ತಿ ಪ್ರಮಾಣಗಳಿಂದ ಮತ್ತು ಸ್ವಾನುಭಾವದಿಂದ) ಜಗತ್ತಿನ ಯಾವ ಭೇದವೂ ಇಲ್ಲದಿರುವ, ವಿಕಾರರಹಿತವಾದ ‘ಚಿದಂಬರ’ವನ್ನು (ಚಿದಾಕಾಶ ತತ್ತ್ವದ ಸ್ವರೂಪ ಪರಮಾತ್ಮನನ್ನು) ತಾನು ಸಾಕ್ಷಾತ್ಕರಿಸಿಕೊಳ್ಳುವನೋ ಅವನೇ ‘ಜ್ಞಾನಗುರು’ವೆಂದು ಹೇಳಲ್ಪಡುತ್ತಾನೆ.
ಕಲಂಕವಾನ ಸೌ ಚಂದ್ರಃ
ಕ್ಷಯವೃದ್ಧಿ ಪರಿಪ್ಲುತಃ |
ನಿಷ್ಕಲಂಕ ಸ್ಥಿತೋ ಜ್ಞಾನ-
ಚಂದ್ರಮಾ ನಿರ್ವಿಕಾರವಾನ್ || 15-23
ಚಂದ್ರನು (ಆಕಾಶಚಂದ್ರನು) ಕಲಂಕವುಳ್ಳವನು ಮತ್ತು ಕ್ಷಯ ವೃದ್ಧಿಗಳಿಂದ ಕೂಡಿಕೊಂಡಿರುವವನು ಆಗಿರುತ್ತಾನೆ. ಆದರೆ ಈ ಜ್ಞಾನವೆಂಬ ‘ಜ್ಞಾನಚಂದ್ರನು’ ನಿಷ್ಕಲಂಕಿಯೂ, ನಿರ್ವಿಕಾರಿಯೂ ಆಗಿದ್ದಾನೆ.
#ಪಾಶ್ರ್ವಸ್ಥ ತಿಮಿರಂ ಹಂತಿ
ಪ್ರದೀಪೋ ಮಣಿ ನಿರ್ಮಿತಃ |
ಸರ್ವಗಾಮಿ ತಮೋ ಹಂತಿ
ಬೋಧದೀಪೋ ನಿರಂಕುಶಃ || 15-24
ಮಣಿಯಿಂದ ನಿರ್ಮಿಸಲ್ಪಟ್ಟ ದೀಪವು ಸಮೀಪದಲ್ಲಿರುವ ತಿಮಿರವನ್ನು (ಕತ್ತಲೆಯನ್ನು) ನಾಶಮಾಡುವುದು. ಆದರೆ ನಿರಂಕುಶವಾದ (ಅಪರಿಚ್ಛಿನ್ನವಾದ) ಬೋಧದೀಪವು (ಶಿವಜ್ಞಾನದ ದೀಪವು) ಎಲ್ಲೆಡೆಯಲ್ಲಿರುವ (ತಮಸ್ಸನ್ನು) ಅಜ್ಞಾನವನ್ನು ನಾಶಮಾಡುತ್ತದೆ.
ಸರ್ವಾರ್ಥ ಸಾಧಕ ಜ್ಞಾನ-
ವಿಶೇಷಾದೇಶ ತತ್ಪರಃ |
ಜ್ಞಾನಾಚಾರ್ಯಃ ಸಮಸ್ತಾನಾಮ್
ಅನುಗ್ರಹಕರಃ ಶಿವಃ || 15-25
ಸರ್ವಾರ್ಥಸಾಧಕವಾದ (ಭೋಗ ಮೋಕ್ಷಗಳಿಗೆ ಸಾಧಕವಾದ) ಜ್ಞಾನ ವಿಶೇಷವನ್ನು (ಶಿವಾದ್ವೈತ ಜ್ಞಾನವನ್ನು)
ಆದೇಶಿಸುವುದರಲ್ಲಿ (ಉಪದೇಶಿಸುವಲ್ಲಿ) ತತ್ಪರನಾದ ಮತ್ತು ಎಲ್ಲ ಮುಮುಕ್ಷುಗಳಿಗೆ ಅನುಗ್ರಹವನ್ನು ಮಾಡುವ ಜ್ಞಾನಾಚಾರ್ಯನು ಸಾಕ್ಷಾತ್ ಶಿವನೇ ಆಗಿದ್ದಾನೆ.
#ಕಟಾಕ್ಷ ಚಂದ್ರಮಾಯಸ್ಯ
ಜ್ಞಾನ ಸಾಗರ ವರ್ಧನಃ |
ಸಂಸಾರ ತಿಮಿರಚ್ಛೇದೀ
ಸ ಗುರುರ್ಜ್ಞಾನ ಪಾರಗಃ || 15-26
ಯಾವ ಗುರುವಿನ ಕೃಪಾಕಟಾಕ್ಷವೆಂಬ ಚಂದ್ರನು (ಶಿಷ್ಯನ) ಜ್ಞಾನಸಾಗರವನ್ನು ಹೆಚ್ಚಿಸುವನೋ ಮತ್ತು ಸಂಸಾರವೆಂಬ ಕತ್ತಲೆಯನ್ನು ಹೋಗಲಾಡಿಸುವನೋ ಆ ಗುರುವು ಜ್ಞಾನಪಾರಂಗತನು.
ಬಹಿಸ್ತಿಮಿರವಿಚ್ಛೇತ್ತಾ
ಭಾನುರೇಷ ಪ್ರಕೀರ್ತಿತಃ |
ಬಹಿರಂತ ಸ್ತಮಶ್ಛೇದೀ
ವಿಭುರ್ದೆಶಿಕ ಭಾಸ್ಕರಃ || 15-27
ಈ ಕಾಣುವ ಸೂರ್ಯನು ಬಹಿರಂಗದಲ್ಲಿರುವ ಕತ್ತಲೆಯನ್ನು ಕಳೆಯುವ ನೆಂದು ಹೇಳಲ್ಪಟ್ಟಿರುವನು. ಆದರೆ ಈ ವಿಭುವಾದ (ಚಿದ್ವಾರ್ಯ ರೂಪಕನಾದ) ದೇಶಿಕನೆಂಬ ಭಾಸ್ಕರನು (ಜ್ಞಾನಗುರುವೆಂಬ ಸೂರ್ಯನು) ಹೊರ ಒಳಗಿನ ಅಜ್ಞಾನವನ್ನು ದೂರಮಾಡುವನು.
#ಕಟಾಕ್ಷ ಲೇಶ ಮಾತ್ರೇಣ
ವಿನಾ ಧ್ಯಾನಾದಿ ಕಲ್ಪನಮ್ |
ಶಿವತ್ವಂ ಭಾವಯೇದ್ಯತ್ರ
ಸ ವೇಧಃ ಶಾಂಭವೋ ಮತಃ || 15-28
ಧ್ಯಾನ ಧಾರಣಾದಿ ಅಷ್ಟಾಂಗಯೋಗಗಳನ್ನು ಮಾಡದೆ ಯಾವ ಗುರುವಿನ ಸ್ವಲ್ಪವೇ ಆದ ಕೃಪಾಕಟಾಕ್ಷದಿಂದಲೇ ಶಿಷ್ಯನಲ್ಲಿ ಶಿವತ್ವವು (ಶಿವನೇ ನಾನೆಂಬ ಜ್ಞಾನವು) ವ್ಯಕ್ತವಾಗುವುದೋ ಆ ವೇಧವು (ಗುರುವಿನಿಂದ ಅನುಗ್ರಹಿಸಲ್ಪಟ್ಟ ಶಿವತ್ವ ಸಮಾವೇಶವು) ‘ಶಾಂಭವಜ್ಞಾನ’ವೆಂದು ಕರೆಯಲಾಗುವುದು.
ಶಿವ ವೇಧ ಕರೇ ಜ್ಞಾನೇ
ದತ್ತೇ ಯೇನ ಸು ನಿರ್ಮಲೇ |
ಜೀವನ್ಮುಕ್ತೋ ಭವೇಚ್ಛಿಷ್ಯಃ
ಸ ಗುರುರ್ ಜ್ಞಾನ ಸಾಗರಃ || 15-29
ಶಿಷ್ಯನಲ್ಲಿ ಶಿವವೇಧವನ್ನುಂಟು ಮಾಡುವ (ಶಿವತ್ವವನ್ನು ಸಮಾವೇಶ ಗೊಳಿಸುವ) ನಿರ್ಮಲವಾದ ಜ್ಞಾನವು ಯಾವ ಗುರುವಿನಿಂದ ಕೊಟ್ಟೊಡನೆ ಶಿಷ್ಯನು ಜೀವನ್ಮುಕ್ತನಾಗುವನೋ ಆ ಗುರುವು ಜ್ಞಾನಸಾಗರನು.
ಇತಿ (ಪ್ರಜ್ಞಾ) ಜ್ಞಾನಗುರುಸ್ಥಲಂ
----------------
ಅಥ ಕ್ರಿಯಾ ಲಿಂಗ ಸ್ಥಲಮ್
ಗುರೋರ್ ವಿಜ್ಞಾನ ಯೋಗೇನ
ಕ್ರಿಯಾ ಯತ್ರ ವಿಲೀಯತೇ |
ತತ್ಕ್ರಿಯಾ ಲಿಂಗಮಾಖ್ಯಾತಮ್
ಸರ್ವೆರಾಗಮ ಪಾರಗೈಃ || 15-30
ಜ್ಞಾನಗುರುವಿನಿಂದ ದೊರೆತ ಅನುಭವಾತ್ಮಕ ಜ್ಞಾನಸಂಬಂಧದಿಂದ ಯಾವ ಲಿಂಗದಲ್ಲಿ ಎಲ್ಲ ಕ್ರಿಯೆಗಳು ವಿಲಯಗೊಳ್ಳುವುವೋ ಆ ಲಿಂಗಕ್ಕೆ ಎಲ್ಲರೂ ಶಿವಾಗಮಗಳಲ್ಲಿ ಪಾರಂಗತರಾದವರು (ಎಲ್ಲ ವೀರಶೈವಾಚಾರ್ಯರು) ‘ಕ್ರಿಯಾಲಿಂಗ’ವೆಂದು ಹೇಳುತ್ತಾರೆ.
#ಪರಾನಂದ ಚಿದಾಕಾರಮ್
ಪರಬ್ರಹ್ಮೈವ ಕೇವಲಮ್ |
ಲಿಂಗಂ ಸದ್ರೂಪ ತಾಪನ್ನಮ್
ಲಕ್ಷ್ಯತೇ ವಿಶ್ವಸಿದ್ಧಯೇ || 15-31
ಪರಮಾನಂದ ಸ್ವರೂಪವೂ, ಚಿದ್ರೂಪವೂ ಆದ ಆ ಕೇವಲ ಪರಬ್ರಹ್ಮವೇ ವಿಶ್ವದಲ್ಲಿಯ ಎಲ್ಲ ಸತ್ಕ್ರಿಯೆಗಳ ಸಿದ್ಧಿಗಾಗಿ ಸದ್ರೂಪತೆಯನ್ನು ತಾಳಿ, ಇಷ್ಟಲಿಂಗ ರೂಪದಲ್ಲಿ ಕುರುಹಾಗಿ ದೊರೆತಿದೆ.
ಲಿಂಗ ಮೇವ ಪರಂ ಜ್ಯೋತಿಃ
ಭವತಿ ಬ್ರಹ್ಮ ಕೇವಲಮ್ |
ತಸ್ಮಾತ್ ತತ್ಪೂಜನಾ ದೇವ
ಸರ್ವ ಕರ್ಮ ಫಲೋದಯಃ || 15-32
ಪರಂಜ್ಯೋತಿ ಸ್ವರೂಪವಾದ, ಕೇವಲ ಸ್ವರೂಪದ (ಒಂದೇ ಆದ) ಆ ಪರಬ್ರಹ್ಮವೇ ಈ ಲಿಂಗವು (ಇಷ್ಟಲಿಂಗವು). ಆದ್ದರಿಂದ ಈ ಲಿಂಗದ ಪೂಜೆಯಿಂದಲೇ ಎಲ್ಲ ಸತ್ಕರ್ಮಗಳು ಫಲಿಸುವುವು.
#ಪರಿತ್ಯಜ್ಯ ಕ್ರಿಯಾಃ ಸರ್ವಾ
ಲಿಂಗ ಪೂಜೈಕ ತತ್ಪರಾಃ |
ವರ್ತಂತೇ ಯೋಗಿನಃ ಸರ್ವೆ
ತಸ್ಮಾಲ್ಲಿಂಗಂ ವಿಶಿಷ್ಯತೇ || 15-33
ಆದ್ದರಿಂದ ಎಲ್ಲ (ಶಿವ)ಯೋಗಿಗಳು ಬೇರೆಲ್ಲಾ ಕ್ರಿಯೆಗಳನ್ನು ತ್ಯಜಿಸಿ ಶಿವಲಿಂಗ ಪೂಜೆಯೊಂದರಲ್ಲಿಯೇ ತತ್ಪರರಾಗಿ ಇರುತ್ತಾರೆ. ಅಂತೆಯೇ ಕ್ರಿಯಾಲಿಂಗವು ಸರ್ವೊತ್ಕೃಷ್ಟವಾಗಿದೆ.
ಯಜ್ಞಾದಯಃ ಕ್ರಿಯಾಃ ಸರ್ವಾ
ಲಿಂಗ ಪೂಜಾಂಶ ಸಮ್ಮಿತಾಃ |
ಇತಿ ಯತ್ಪೂಜ್ಯತೇ ಸಿದ್ಧೈಃ
ತತ್ಕ್ರಿಯಾ ಲಿಂಗ ಮುಚ್ಯತೇ || 15-34
ಯಜ್ಞ ಯಾಗ ಮೊದಲಾದ ಎಲ್ಲ ಕ್ರಿಯೆಗಳು ಈ ಇಷ್ಟಲಿಂಗಪೂಜೆಯ ಫಲದ ಒಂದು ಅಂಶಕ್ಕೆ ಸಮನಾಗಿರುತ್ತದೆ. ಈ ರೀತಿಯಾಗಿ ತಿಳಿದುಕೊಂಡ (ಶಿವಯೋಗ) ಸಿದ್ಧರಿಂದ ಪೂಜೆಗೊಳ್ಳುವ ಯಾವ ಲಿಂಗವಿದೆಯೋ ಅದುವೇ ಕ್ರಿಯಾಲಿಂಗವೆಂದು ಹೇಳಲ್ಪಡುತ್ತದೆ.
#ಕಿಂ ಯಜ್ಞೈ ರಗ್ನಿಹೋತ್ರಾದ್ಯೈಃ
ಕಿಂ ತಪೋಭಿಶ್ಚ ದುಶ್ಚರೈಃ |
ಲಿಂಗಾರ್ಚನ ರತಿರ್ಯಸ್ಯ
ಸ ಸಿದ್ಧಃ ಸರ್ವಕರ್ಮಸು || 15-35
ಕ್ರಿಯಾಲಿಂಗಪೂಜೆಯಲ್ಲಿ ಯಾರಿಗೆ ಆಸಕ್ತಿ ಇದೆಯೋ ಅವನಿಗೆ ಎಲ್ಲ ಸತ್ಕರ್ಮಗಳ ಸಿದ್ಧಿಗಳು ಉಂಟಾಗುತ್ತವೆ. ಆದ್ದರಿಂದ ಅವನಿಗೆ ಅಗ್ನಿಹೋತ್ರಾದಿ ಯಜ್ಞಗಳಿಂದಲೇ ಆಗಲಿ, ಅಸಾಧ್ಯವಾದ ತಪಸ್ಸುಗಳಿಂದಲೇ ಆಗಲಿ ಏನು ಪ್ರಯೋಜನ? (ಅವನಿಗೆ ಯಾವ ಪ್ರಯೋಜನವೂ ಇರುವುದಿಲ್ಲ).
ಬ್ರಹ್ಮವಿಷ್ಣ್ವಾದಯಃ ಸರ್ವೆ
ವಿಬುಧಾ ಲಿಂಗಮಾಶ್ರಿತಾಃ |
ಸಿದ್ಧಾಃ ಸ್ವಸ್ವಪದೇ ಭಾಂತಿ
ಜಗತ್ತಂತ್ರಾಧಿ ಕಾರಿಣಃ || 15-36
ಜಗತ್ತಿನ ನಿರ್ಮಾಣಾದಿ ತಂತ್ರಗಳಿಗೆ (ಕ್ರಿಯೆಗಳಿಗೆ) ಅಧಿಕಾರಿಗಳಾದ ಬ್ರಹ್ಮ, ವಿಷ್ಣುವೇ ಮೊದಲಾದ ಎಲ್ಲ ದೇವತೆಗಳು ಲಿಂಗವನ್ನೇ ಆಶ್ರಯಿಸಿದವರಾಗಿ (ಲಿಂಗಪೂಜೆಯನ್ನೇ ಮಾಡಿ) ತಮ್ಮ ತಮ್ಮ ಪದಗಳಲ್ಲಿ ಸಿದ್ಧಿಯನ್ನು ಪಡೆದವರಾಗಿರುತ್ತಾರೆ.
ಇತಿ ಕ್ರಿಯಾಲಿಂಗಸ್ಥಲಂ
---------------
ಅಥ ಭಾವಲಿಂಗಸ್ಥಲಮ್
ಕ್ರಿಯಾ ಯಥಾ ಲಯಂ ಪ್ರಾಪ್ತಾ
ತಥಾ ಭಾವೋಪಿ ಲೀಯತೇ |
ಯತ್ರ ತದ್ ದೇಶಿಕೈ ರುಕ್ತಮ್
ಭಾವ ಲಿಂಗ ಮಿತಿ ಸ್ಫುಟಮ್ || 15-37
ಈ ಹಿಂದೆ ಹೇಳಿದಂತೆ ಯಾವ ಪ್ರಕಾರವಾಗಿ ಕ್ರಿಯೆಗಳು ಲಯವನ್ನು ಹೊಂದುವುವೋ, ಅದರಂತೆ ಯಾವ ಲಿಂಗದಲ್ಲಿ ಭಾವವೂ ಸಹ ಲೀನವಾಗುವುದೋ ಅದು ಭಾವಲಿಂಗ (ಪ್ರಾಣಲಿಂಗ)ವೆಂದು ದೇಶಿಕರು (ವೀರಶೈವ ಆಚಾರ್ಯರು) ಸ್ಪಷ್ಟವಾಗಿ ಹೇಳುತ್ತಾರೆ.
#ಭಾವೇನ ಗೃಹ್ಯತೇ ದೇವೋ
ಭಗವಾನ್ ಪರಮಃ ಶಿವಃ |
ಕಿಂ ತೇನ ಕ್ರೀಯತೇ ತಸ್ಯ
ನಿತ್ಯಪೂರ್ಣೊ ಹಿ ಸ ಸ್ಮೃತಃ || 15-38
ಭಗವಂತನಾದ (ಷಡ್ಗುಣೈಶ್ವರ್ಯ ಸಂಪನ್ನನಾದ), ಪರಮಶಿವನಾದ ದೇವನು ಭಾವದಿಂದಲೇ (ಪರಿಪೂರ್ಣವಾದ ಶಿವಾತ್ಮಕ ವೃತ್ತಿಯಿಂದಲೇ) ಗ್ರಹಿಸಲ್ಪಡುತ್ತಾನೆ. ಹೀಗೆ ನಿತ್ಯಪರಿಪೂರ್ಣನೆಂದು ಹೇಳಲ್ಪಟ್ಟ ಅವನಿಗೆ ಕೇವಲ ಕ್ರಿಯೆಗಳಿಂದ ಏನು ಪ್ರಯೋಜನ?
ಅಖಂಡ ಪರಮಾನಂದ-
ಬೋಧರೂಪಃ ಪರಃ ಶಿವಃ |
ಭಕ್ತಾನಾ ಮುಪಚಾರೇಣ
ಭಾವ ಯೋಗಾತ್ ಪ್ರಸೀದತಿ || 15-39
ಅಖಂಡನೂ (ಅಪರಿಚ್ಛಿನ್ನನೂ), ಪರಮಾನಂದ ಸ್ವರೂಪವೂ ಮತ್ತು ಬೋಧರೂಪನೂ (ಚಿದ್ರೂಪನೂ) ಆದ ಆ ಪರಶಿವನು ಭಾವದಿಂದ ಮಾಡಿದ ಭಕ್ತರ ಭಾವನಾತ್ಮಕವಾದ ಉಪಚಾರಗಳಿಂದ ಪ್ರಸನ್ನನಾಗುತ್ತಾನೆ.
#ಮೃಚ್ಛಿಲಾ ವಿಹಿತಾಲ್ಲಿಂಗಾದ್
ಭಾವಲಿಂಗಂ ವಿಶಿಷ್ಯತೇ |
ನಿರಸ್ತ ಸರ್ವದೋಷತ್ವಾದ್
ಜ್ಞಾನಮಾರ್ಗ ಪ್ರವೇಶನಾತ್ || 15-40
ಮಣ್ಣು ಮತ್ತು ಶಿಲೆ ಮುಂತಾದ ಬಾಹ್ಯವಸ್ತುಗಳಿಂದ ನಿರ್ಮಿಸಲ್ಪಟ್ಟ ಲಿಂಗಕ್ಕಿಂತಲೂ ಭಾವಲಿಂಗವು (ಪ್ರಾಣಲಿಂಗವು) ವಿಲಕ್ಷಣವಾಗಿರುತ್ತದೆ. ಏಕೆಂದರೆ ಅದು ಸರ್ವದೋಷಗಳಿಂದ ವಿಮುಕ್ತವಾಗಿದ್ದು ಜ್ಞಾನಮಾರ್ಗ ಪ್ರವೇಶಕ್ಕೆ ಸಹಾಯಕವಾಗುತ್ತದೆ.
ವಿಹಾಯ ಬಾಹ್ಯಲಿಂಗಾನಿ
ಚಿಲ್ಲಿಂಗಂ ಮನಸಿ ಸ್ಮರನ್ |
ಪೂಜಯೇದ್ ಭಾವ ಪುಷ್ಪೈರ್ಯೊ
ಭಾವಲಿಂಗೀತಿ ಕಥ್ಯತೇ || 15-41
ಬಾಹ್ಯ (ಇಷ್ಟಲಿಂಗದ ಹೊರತಾದ) ಲಿಂಗಗಳನ್ನು ಬಿಟ್ಟು, ಚಿಲ್ಲಿಂಗವನ್ನೇ ಮನಸ್ಸಿನಲ್ಲಿ ಸ್ಮರಿಸುತ್ತಾ ಭಾವಪುಷ್ಪಗಳಿಂದ ಯಾವಾತನು ಅದನ್ನು ಪೂಜಿಸುತ್ತಾನೆಯೋ ಅವನು ಭಾವಲಿಂಗಿಯೆಂದು ಕರೆಯಲ್ಪಡುತ್ತಾನೆ.
#ಮೂಲಾಧಾರೇಥವಾ ಚಿತ್ತೇ
ಭ್ರೂಮಧ್ಯೇ ವಾ ಸು ನಿರ್ಮಲಮ್ |
ದೀಪಾಕಾರಂ ಯಜನ್ ಲಿಂಗಮ್
ಭಾವದ್ರವ್ಯೈಃ ಸ ಯೋಗವಾನ್ |15-42
ತನ್ನ ಮೂಲಾಧಾರದಲ್ಲಿ (ಆಧಾರ ಚಕ್ರದಲ್ಲಿ), ಚಿತ್ತದಲ್ಲಿ (ಹೃದಯದ ಅನಾಹತ ಚಕ್ರದಲ್ಲಿ) ಅಥವಾ ಭ್ರೂಮಧ್ಯದಲ್ಲಿ (ಆಜ್ಞಾ ಚಕ್ರದಲ್ಲಿ) ಅತ್ಯಂತ ನಿರ್ಮಲವಾದ ದೀಪಾಕಾರದ ಲಿಂಗವನ್ನು ಭಾವದ್ರವ್ಯಗಳಿಂದ ಯಾವಾತನು ಪೂಜಿಸುವನೋ ಅವನೇ ಯೋಗಿಯು (ಶಿವಯೋಗಿಯು).
ಸ್ವಾನುಭೂತಿ ಪ್ರಮಾಣೇನ
ಜ್ಯೋತಿರ್ಲಿಂಗೇನ ಸಂಯುತಃ |
ಶಿಲಾ ಮೃದ್ದಾರು ಸಂಭೂತಮ್
ನ ಲಿಂಗಂ ಪೂಜಯತ್ಯ ಸೌ ||15-43
ಸ್ವಾನುಭೂತಿಯ (ಶಿವನೇ ನಾನೆಂಬ ಅನುಭವ ರೂಪವಾದ) ಪ್ರಮಾಣದಿಂದ ಜ್ಯೋತಿರ್ಲಿಂಗದೊಡನೆ ಬೆರೆತಿರುವವನು ಶಿಲೆ, ಮಣ್ಣು, ಕಟ್ಟಿಗೆ ಮುಂತಾದವುಗಳಿಂದ ನಿರ್ಮಾಣಗೊಂಡ ಲಿಂಗಗಳನ್ನು (ಇಷ್ಟಲಿಂಗ ಹೊರತಾದ ಬಾಹ್ಯಲಿಂಗಗಳನ್ನು) ಪೂಜಿಸುವುದಿಲ್ಲ.
#ಕ್ರಿಯಾರೂಪಾ ತು ಯಾ ಪೂಜಾ
ಸಾ ಜ್ಞೇಯಾ ಸ್ವಲ್ಪ ಸಂವಿದಾಮ್ |
ಅಂತರಾ ಭಾವಪೂಜಾ ತು
ಶಿವಸ್ಯ ಜ್ಞಾನಿ ನಾಂ ಮತಾ || 15-44
ಕ್ರಿಯಾರೂಪವಾದ (ಬಾಹ್ಯ ಉಪಚಾರಗಳಿಂದ ಮಾಡಲ್ಪಡುವ) ಯಾವ ಪೂಜೆಯಿದೆಯೋ ಆ ಪೂಜೆಯನ್ನು ಸ್ವಲ್ಪ ತಿಳುವಳಿಕೆ ಉಳ್ಳವರದ್ದೆಂದು ತಿಳಿದುಕೊಳ್ಳಬೇಕು. ಆದರೆ ಅಂತರಂಗದಲ್ಲಿ ಮಾಡಲ್ಪಡುವ ಶಿವನ
ಆ ಭಾವಪೂಜೆಯು ಜ್ಞಾನಿಗಳಿಗೆ (ಶಿವಾದ್ವೈತ ಜ್ಞಾನಿಗಳಿಗೆ) ಸಮ್ಮತವಾದುದು (ಇಷ್ಟಲಿಂಗ ಪೂಜೆಯನ್ನು ಮಾಡುತ್ತಾ ಭಾವಲಿಂಗದ ಕಡೆಗೆ ಸಾಧಕನು ಸಾಗಿದಾಗಲೇ ಪೂರ್ಣಜ್ಞಾನಿಯಾಗುವನು).
ಇತಿ ಭಾವ ಲಿಂಗ ಸ್ಥಲಂ
------------------------
ಅಥ ಜ್ಞಾನ ಲಿಂಗ ಸ್ಥಲಮ್
ತದ್ಭಾವ ಜ್ಞಾಪಕ ಜ್ಞಾನಮ್
ಲಯಂ ಯತ್ರ ಸಮಶ್ನುತೇ |
ತಜ್ಜಾ ಜ್ಞಾನ ಲಿಂಗ ಮಾಖ್ಯಾತಮ್
ಶಿವತತ್ತ್ವಾರ್ಥ ಕೋವಿದೈಃ || 15-45
ಆ ಭಾವಲಿಂಗವನ್ನು ಜ್ಞಾಪಕ ಮಾಡಿಕೊಡುವ (ಅರುಹಿಸುವ) ಜ್ಞಾನವು ಯಾವುದರಲ್ಲಿ ಸಂಪೂರ್ಣವಾಗಿ ಲಯವನ್ನು ಹೊಂದುವುದೋ, ಅದನ್ನೇ ಶಿವತತ್ತ್ವಕೋವಿದರು ಜ್ಞಾನಲಿಂಗವೆಂದು ಕರೆಯುತ್ತಾರೆ.
#ತ್ರಿಮೂರ್ತಿ ಭೇದ ನಿರ್ಮುಕ್ತಮ್
ತ್ರಿಗುಣಾತೀತವೈಭವಮ್ |
ಬ್ರಹ್ಮ ಯದ್ ಬೋಧ್ಯತೇ ತತ್ತು
ಜ್ಞಾನಲಿಂಗ ಮುದಾಹೃತಮ್ || 15-46
ಬ್ರಹ್ಮ, ವಿಷ್ಣು ರುದ್ರರೆಂಬ ತ್ರಿಮೂರ್ತಿ ರೂಪವಾದ ಭೇದವಿಲ್ಲದಿರುವ (ಅಖಂಡವಾದ) ಸತ್ವ, ರಜ, ತಮಸ್ಸುಗಳೆಂಬ ತ್ರಿಗುಣಗಳ ವೈಭವಕ್ಕಿಂತಲೂ ಮಿಗಿಲಾದ ವೈಭವವುಳ್ಳ ಇಂತಹ ಆ ಯಾವ ಪರಬ್ರಹ್ಮತತ್ತ್ವವು ಶ್ರುತಿ, ಗುರು, ಸ್ವಾನುಭಾವಗಳಿಂದ ಬೋಧಿಸಲ್ಪಡುತ್ತದೆಯೋ ಅದುವೇ ‘ಜ್ಞಾನಲಿಂಗ’ವೆಂದು ಹೇಳಲ್ಪಡುತ್ತದೆ.
ಸ್ಥೂಲೇ ಕ್ರಿಯಾ ಸಮಾಪತ್ತಿಃ
ಸೂಕ್ಷ್ಮೇ ಭಾವಸ್ಯ ಸಂಭವಃ |
ಸ್ಥೂಲ ಸೂಕ್ಷ್ಮ ಪದಾತೀತೇ
ಜ್ಞಾನಮೇವ ಪರಾತ್ಮನಿ || 15-47
ಪರಾತ್ಪರವಾದ ಆ ಜ್ಞಾನಲಿಂಗವೇ ಸ್ಥೂಲರೂಪದಲ್ಲಿ ಇಷ್ಟಲಿಂಗವಾಗಿರುವ ಕಾರಣ, ಅಲ್ಲಿ ಕ್ರಿಯಾರೂಪವಾದ ಪೂಜಾಸಂಪತ್ತಿಯು ಅರ್ಪಿತವಾಗುವುದು. ಅದುವೇ ಸೂಕ್ಷ ್ಮ ರೂಪದಲ್ಲಿ ಭಾವಲಿಂಗ (ಪ್ರಾಣಲಿಂಗ)ವಾದ ಕಾರಣ ಅದರಲ್ಲಿ ಭಾವಮಯವಾದ ಸಂಪತ್ತಿಯು ಅರ್ಪಿತವಾಗುವುದು. ಇನ್ನು ಈ ಸ್ಥೂಲ ಸೂಕ್ಷ್ಮಕ್ಕಿಂತಲೂ ಅತೀತವಾದ ಪರಾತ್ಪರವಾದ ಜ್ಞಾನಲಿಂಗ (ತೃಪ್ತಿಲಿಂಗ)ಕ್ಕೆ ಜ್ಞಾನವೇ ಅರ್ಪಣೀಯವಾಗುವುದು.
#ಕಲ್ಪಿತಾನಿ ಹಿ ರೂಪಾಣಿ
ಸ್ಥೂಲಾನಿ ಪರಮಾತ್ಮನಃ |
ಸೂಕ್ಷ್ಮಾಣ್ಯಪಿ ಚ ತೈಃ ಕಿಂ ವಾ
ಪರಬೋಧಂ ಸಮಾಚರೇತ್ || 15-48
ಪರಮಾತ್ಮನ ಸ್ಥೂಲ ಹಾಗೂ ಸೂಕ್ಷ್ಮ ರೂಪಗಳು ಕಲ್ಪಿತಗಳಾಗಿರುತ್ತವೆ. ಮುಮುಕ್ಷುಗಳಿಗೆ ಅವುಗಳಿಂದ ಪ್ರಯೋಜನವಿಲ್ಲದ ಕಾರಣ, ಪರಬೋಧರೂಪವಾದ ತೃಪ್ತಿಲಿಂಗವನ್ನೇ ಸರ್ವೋತ್ಕೃಷ್ಟವೆಂದು ತಿಳಿಯಬೇಕು.
ಪರಾತ್ಪರಂ ತು ಯದ್ ಬ್ರಹ್ಮ
ಪರಮಾನಂದಲಕ್ಷಣಮ್ |
ಶಿವಾಖ್ಯಂ ಜ್ಞಾಯತೇ ಯೇನ
ಜ್ಞಾನಲಿಂಗೀತಿ ಕಥ್ಯತೇ || 15-49
ಪರಮಾನಂದವೇ ಸ್ವರೂಪಲಕ್ಷಣವಾಗಿರುವ ಈ ಪರಾತ್ಪರ ಬ್ರಹ್ಮರೂಪವಾದ ಶಿವತತ್ತ್ವವು ಯಾರಿಂದ ತಿಳಿಯಲ್ಪಡುತ್ತದೆಯೋ ಅವನೇ ಜ್ಞಾನಲಿಂಗಿಯೆಂದು ಕರೆಯಲ್ಪಡುತ್ತಾನೆ.
#ಬಾಹ್ಯಕ್ರಿಯಾಂ ಪರಿತ್ಯಜ್ಯ
ಚಿಂತಾಮಪಿ ಚ ಮಾನಸೀಮ್ |
ಅಖಂಡಜ್ಞಾನರೂಪತ್ವಮ್
ಯೋ ಭಜೇನ್ಮುಕ್ತ ಏವ ಸಃ || 15-50
ಪೂರ್ವೋಕ್ತವಾದ ಇಷ್ಟಲಿಂಗದ ಬಾಹ್ಯಕ್ರಿಯಾ ರೂಪವಾದ ಪೂಜೆಯನ್ನು ಮತ್ತು ಅದರಂತೆ ಪ್ರಾಣಲಿಂಗಿ ಸಂಬಂಧಿಯಾದ ಧ್ಯಾನರೂಪವಾದ ಅಂತಃಪೂಜೆಯನ್ನೂ ಸಹ ಪರಿತ್ಯಜಿಸಿ ಯಾವಾತನು ಅಖಂಡ ಜ್ಞಾನರೂಪವಾದ ತೃಪ್ತಿಲಿಂಗವನ್ನು ಪೂಜಿಸುವನೋ ಅವನೇ ಮುಕ್ತನು.
ಇತಿ ಜ್ಞಾನಲಿಂಗಸ್ಥಲಂ
--------------------------------
ಅಥ ಸ್ವಯಸ್ಥಲಮ್
ತದ್ಭಾವ ಜ್ಞಾಪಕ ಜ್ಞಾನಮ್
ಯತ್ರ ಜ್ಞಾನೇ ಲಯಂ ವ್ರಜೇತ್ |
ತದ್ವಾನೇಷ ಸಮಾಖ್ಯಾತಃ
ಸ್ವಾಭಿಧಾನೋ ಮನೀಷಿಭಿಃ || 15-51
ಆ ಭಾವ (ಭಾವಲಿಂಗ) ಪ್ರಕಾಶಕವಾದ ಜ್ಞಾನವು ಯಾವ ಜ್ಞಾನ (ಲಿಂಗ)ದಲ್ಲಿ ಲಯ ಹೊಂದುವುದೋ ಅಂತಹ ಸ್ಥಿತಿಯುಳ್ಳವನೆ ‘ಸ್ವಯ’ವೆಂದು ಅಭಿಧಾನವುಳ್ಳವನೆಂದು (ಸ್ವಯಸ್ಥಲಿಯೆಂದು, ಸ್ವಯಲಿಂಗವೆಂದು) ಮನೀಷಿಭಿಗಳು (ಶಿವಜ್ಞಾನಿಗಳು) ಹೇಳುತ್ತಾರೆ.
#ಸ್ವಚ್ಛಂದಾಚಾರ ಸಂತುಷ್ಟೋ
ಜ್ಯೋತಿರ್ಲಿಂಗ ಪರಾಯಣಃ |
ಆತ್ಮಸ್ಥ ಸಕಲಾಕಾರಃ
ಸ್ವಾಭಿಧೋ ಮುನಿ ಸತ್ತಮಃ || 15-52
ತನ್ನ ಇಷ್ಟಾನುಸಾರ ಆಚರಣೆಗಳಲ್ಲಿ ಸಂತುಷ್ಟನಾಗಿದ್ದು ಜ್ಯೋತಿರ್ಲಿಂಗ (ಜ್ಞಾನಲಿಂಗ) ನಿಷ್ಠನಾದ ಶಿವಸ್ವರೂಪನಾದ
ಮತ್ತು ತನ್ನಲ್ಲಿ ಪ್ರಪಂಚದ ಎಲ್ಲಾ ಆಕಾರಗಳನ್ನು ಅಡಗಿಸಿಕೊಂಡ ಮುನಿಶ್ರೇಷ್ಠನೇ ಸ್ವಯಸ್ಥಲಿಯು.
ನಿರ್ಮಮೋ ನಿರಹಂಕಾರೋ
ನಿರಸ್ತ ಕ್ಲೇಶ ಪಂಚಕಃ |
ಭಿಕ್ಷಾಶೀ ಸಮ ಬುದ್ಧಿಶ್ಚ
ಮುಕ್ತ ಪ್ರಾಯೋ ಮುನಿರ್ ಭವೇತ್||15-53
ಮಮಕಾರ ರಹಿತನಾದ, ನಿರಹಂಕಾರಿಯಾದ, ಅವಿದ್ಯಾದಿ ಪಂಚಕ್ಲೇಶಗಳನ್ನು ಕಳೆದುಕೊಂಡ, ಭಿಕ್ಷಾಹಾರವನ್ನು ಸೇವಿಸುವ, ಸರ್ವರಲ್ಲಿ ಸಮಬುದ್ಧಿಯುಳ್ಳವನಾದ ಮತ್ತು ಮುನಿಯಾದ (ಮೌನಿಯಾದ) ಮುಕ್ತಪ್ರಾಯನಾದವನೇ (ಪರಮುಕ್ತಿಯನ್ನು ಪಡೆದವರಿಗೆ ಸಮಾನನಾದವನೇ) ಸ್ವಯಸ್ಥಲಿಯು.
#ಯದೃಚ್ಛಾ ಲಾಭ ಸಂತುಷ್ಟೋ
ಭಸ್ಮನಿಷ್ಠೋ ಜಿತೇಂದ್ರಿಯಃ |
ಸಮ ವೃತ್ತಿರ್ ಭವೇದ್ ಯೋಗೀ
ಭಿಕ್ಷುಕೇ ವಾ ನೃಪೇಥವಾ || 15-54
ದೊರೆತಷ್ಟರಲ್ಲಿಯೇ ಸಂತುಷ್ಟನಾದ, ಭಸ್ಮೋದ್ಧೂಳನಾದಿಗಳಲ್ಲಿ ನಿಷ್ಠೆಯುಳ್ಳ, ಜಿತೇಂದ್ರಿಯನಾದ
(ಇಂದ್ರಿಯಗಳನ್ನು ಸ್ವಾಧೀನದಲ್ಲಿರಿಸಿಕೊಂಡ) ಸ್ವಯಸ್ಥಲಿಯಾದ ಯೋಗಿಯು, ರಾಜನಲ್ಲಿಯೇ ಆಗಲಿ ಮತ್ತು ಭಿಕ್ಷುಕನಲ್ಲಿಯೇ ಆಗಲಿ ಸಮಬುದ್ಧಿಯುಳ್ಳವನಾಗುತ್ತಾನೆ.
ಪಶ್ಯನ್ ಸರ್ವಾಣಿ ಭೂತಾನಿ
ಸಂಸಾರ ಸ್ಥಾನಿ ಸರ್ವಶಃ |
ಸ್ಮಯಮಾನಃ ಪರಾನಂದೇ
ಲೀನಾತ್ಮಾ ವರ್ತತೇ ಸುಧೀಃ || 15-55
ಸುಧೀಯಾದ (ಶೋಭಾಯಮಾನ ಬುದ್ಧಿಯುಳ್ಳ) ಸ್ವಯಸ್ಥಲಿಯು (ಶಿವಯೋಗಿಯು) ಸಂಸಾರದಲ್ಲಿರುವ ಎಲ್ಲ ಪ್ರಾಣಿಗಳನ್ನು ವಿಸ್ಮಯವಾಗಿ ನೋಡುತ್ತಾ ಪರಮಾನಂದಮಯವಾದ ಮಹಾಲಿಂಗದಲ್ಲಿ ಲೀನವಾಗಿ ವರ್ತಿಸುವನು.
#ಧ್ಯಾನಂ ಶೈವಂ ತಥಾ ಜ್ಞಾನಮ್
ಭಿಕ್ಷಾ ಚೈಕಾಂತ ಶೀಲತಾ |
ಯತೇಶ್ಚತ್ವಾರಿ ಕರ್ಮಾಣಿ
ನ ಪಂಚಮ ಮಿಹೇಷ್ಯತೇ || 15-56
ಶಿವಧ್ಯಾನವು, ಶಿವಜ್ಞಾನವು, ಭಿಕ್ಷಾಹಾರವು ಮತ್ತು ಏಕಾಂತಶೀಲತೆ – ಈ ನಾಲ್ಕು ಕರ್ಮಗಳನ್ನು ಮಾಡುವವನಾಗಿ, ಇದರ ಹೊರತು ಐದನೆಯದಾದ ಯಾವುದೇ ಕರ್ಮವನ್ನು ಅಪೇಕ್ಷಿಸದವನೇ ‘ಸ್ವಯಸ್ಥಲಿ’ಯೆಂದು ತಿಳಿದುಕೊಳ್ಳಬೇಕು.
ಇತಿ ಸ್ವಯ ಸ್ಥಲಂ
----------------------
ಅಥ ಚರ ಸ್ಥಲಮ್
ಸ್ವರೂಪ ಜ್ಞಾನ ಸಂಪನ್ನೋ
ಧ್ವಸ್ತಾಹಂ ಮಮತಾ ಕೃತಿಃ |
ಸ್ವಯಮೇವ ಸ್ವಯಂ ಭೂತ್ವಾ
ಚರತೀತಿ ಚರಾಭಿಧಃ || 15-57
ನಾನು ನನ್ನದೆಂಬ ಅಹಂಕಾರ ಮಮಕಾರಗಳನ್ನು ನಿವಾರಿಸಿಕೊಂಡ, ಸ್ವಸ್ವರೂಪ ಜ್ಞಾನವನ್ನು ಪಡೆದುಕೊಂಡ, ಆ ಸ್ವಯಲಿಂಗಿಯೇ ತಾನೇ ತಾನಾಗಿ ‘ಚರಿಸು’ವುದರಿಂದ ‘ಚರಸ್ಥಲಿ’ಯೆಂದು (ಚರಲಿಂಗವೆಂದು) ಕರೆಸಿಕೊಳ್ಳುವನು.
#ಕಾಮ ಕ್ರೋಧಾದಿ ನಿರ್ಮುಕ್ತಃ
ಶಾಂತಿ ದಾಂತಿ ಸಮನ್ವಿತಃ |
ಸಮ ಬುದ್ಧ್ಯಾ ಚರೇದ್ ಯೋಗೀ
ಸರ್ವತ್ರ ಶಿವ ಬುದ್ಧಿಮಾನ್ || 15-58
ಕಾಮಕ್ರೋಧಾದಿಗಳನ್ನು ನಿಃಶೇಷವಾಗಿ ಕಳೆದುಕೊಂಡ, ಶಾಂತಿ-ದಾಂತಿ ಸಮನ್ವಿತವಾದ (ಶಮೆ, ದಮೆಗಳಿಂದ ಕೂಡಿದ), ಸಮಬುದ್ಧಿಯುಳ್ಳ ಮತ್ತು ಸರ್ವತ್ರ ಶಿವಬುದ್ಧಿಯುಳ್ಳವನಾಗಿ, ಈ ಚರಸ್ಥಲದ ಶಿವಯೋಗಿಯು ಎಲ್ಲೆಡೆಯಲ್ಲಿ ಸಂಚರಿಸುತ್ತಾನೆ.
ಇದಂ ಮುಖ್ಯ ಮಿದಂ ಹೀನಮ್
ಇತಿ ಚಿಂತಾಮಕಲ್ಪಯನ್ |
ಸರ್ವತ್ರ ಸಂಚರೇದ್ ಯೋಗೀ
ಸರ್ವಂ ಬ್ರಹ್ಮೇತಿ ಭಾವಯನ್ || 15-59
ಇದು ಮುಖ್ಯವಾದುದು ಮತ್ತು ಇದು ಹೀನವಾದುದು ಎಂಬ ಚಿಂತೆಯನ್ನು ಮಾಡದೆ ಸರ್ವವನ್ನು ಬ್ರಹ್ಮವೆಂಬುದಾಗಿ ಸ್ವಾನುಭಾವದಿಂದ ಭಾವಿಸಿ ಎಲ್ಲೆಡೆ ಸಂಚರಿಸುವ ಯೋಗಿಯೇ ‘ಚರಲಿಂಗ’ನು.
#ನ ಸನ್ಮಾನೇಷು ಸಂಪ್ರೀತಿಮ್
ನಾವಮಾನೇಷು ಚ ವ್ಯಥಾಮ್ |
ಕುರ್ವಾಣಃ ಸಂಚರೇದ್ ಯೋಗೀ
ಕೂಟಸ್ಥೇ ಸ್ವಾತ್ಮನಿ ಸ್ಥಿತಃ || 15-60
ಕೂಟಸ್ಥನಾದ (ನಿರ್ವಿಕಾರ ಸ್ಥಿತಿಯಲ್ಲಿರುವ), ತನ್ನ ನಿಜದಲ್ಲೇ ತಾನಿರುವ ಚರಸ್ಥಲಿಯು (ಲೋಕದಲ್ಲಿ ದೊರೆಯುವ) ಸನ್ಮಾನಗಳಲ್ಲಿ ಪ್ರೀತಿಯನ್ನೇ ಆಗಲಿ ಮತ್ತು ಅವಮಾನಗಳಲ್ಲಿ ವ್ಯಥೆಯನ್ನೇ ಆಗಲಿ (ಮಾನಸಿಕ ದುಃಖವನ್ನೇ ಆಗಲಿ) ಹೊಂದದೇ ಸರ್ವತ್ರ ಸಂಚರಿಸುವ ಶಿವಯೋಗಿಯೇ ಚರಲಿಂಗನು.
ಅಪ್ರಾಕೃತೈರ್ಗುಣೈಃ ಸ್ವೀಯೈಃ
ಸರ್ವಂ ವಿಸ್ಮಾಪಯನ್ ಜನಮ್ |
ಅದ್ವೈತ ಪರಮಾನಂದ-
ಮುದಿತೋ ದೇಹಿವಚ್ಚರೇತ್ || 15-61
ಶಿವಾದ್ವೈತ ಜ್ಞಾನದಿಂದುಂಟಾದ ಪರಮಾನಂದದಿಂದ ಸಂತುಷ್ಟನಾದ, ಅಪ್ರಾಕೃತಗಳಾದ (ಲೋಕೋತ್ತರಗಳಾದ) ತನ್ನ ಗುಣಗಳಿಂದ ಜಗತ್ತಿನ ಎಲ್ಲಾ ಜನರನ್ನು ವಿಸ್ಮಯಗೊಳಿಸುತ್ತಾ (ಅಚ್ಚರಿಗೊಳಿಸುತ್ತಾ) ಸಾಮಾನ್ಯ ಜೀವಿಯಂತೆ ಸಂಚರಿಸುವವನೇ ಚರಲಿಂಗನು.
#ನ ಪ್ರಪಂಚೇ ನಿಜೇ ದೇಹೇ
ನ ಧರ್ಮೆ ನ ಚ ದುಷ್ಕೃತೇ |
ಗತವೈಷಮ್ಯ ಧೀರ್ಧಿರೋ
ಯತಿಶ್ಚರತಿ ದೇಹಿವತ್ || 15-62
ವಿಧಿ-ನಿಷೇಧಗಳ ವೈಷಮ್ಯ ಬುದ್ಧಿಯನ್ನು ಕಳೆದುಕೊಂಡ, ಧೀರನಾದ (ನಿರ್ವಿಕಾರ ಮನಸ್ಸುಳ್ಳ) ಯತಿಯು (ಈ ಚರಸ್ಥಲಿಯು) ಈ ಪ್ರಪಂಚದಲ್ಲಿಯೇ ಆಗಲಿ, ತನ್ನ ದೇಹದ ವ್ಯವಹಾರದಲ್ಲಿಯೇ ಆಗಲಿ, ಧರ್ಮದಲ್ಲಿಯೇ ಆಗಲಿ, ದೃಷ್ಕೃತ್ಯದಲ್ಲಿ (ಪಾಪದಲ್ಲಿ)ಯೇ ಆಗಲಿ ದೇಹಿಯಂತೆ (ಸಾಮಾನ್ಯ ಜೀವಿಯಂತೆ) ಆಚರಿಸುವುದಿಲ್ಲ.
ಪ್ರಾಕೃತೈಶ್ವರ್ಯ ಸಂಪತ್ತಿ-
ಪರಾಙ್ಮುಖ ಮನಃ ಸ್ಥಿತಿಃ |
ಚಿದಾನಂದ ನಿಜಾತ್ಮಸ್ಥೋ
ಮೋದತೇ ಮುನಿಪುಂಗವಃ || 15-63
ಪ್ರಕೃತಿತತ್ತ್ವಗಳಿಂದುಂಟಾದ ಬ್ರಹ್ಮ, ವಿಷ್ಣು ಮೊದಲಾದವರ ಐಶ್ವರ್ಯರೂಪವಾದ ಸಂಪತ್ತಿನಿಂದ ಪರಾಙ್ಮುಖವಾದ ಮನಸ್ಸುಳ್ಳ ಮತ್ತು ಚಿದಾನಂದರೂಪವಾದ ತನ್ನ ಆತ್ಮನಲ್ಲಿಯೇ ಸ್ಥಿತನಾಗಿ ಆನಂದವನ್ನು ಪಡುತ್ತಿರುವ ಈ ಮುನಿಪುಂಗವನೇ (ಮುನಿಶ್ರೇಷ್ಠನೇ) ಚರಸ್ಥಲಿಯು.
ಇತಿ ಚರಸ್ಥಲಂ
-------------------
ಅಥ ಪರಸ್ಥಲಮ್
ಸ್ವಯಮೇವ ಸ್ವಯಂ ಭೂತ್ವಾ
ಚರತಃ ಸ್ವಸ್ವರೂಪತಃ |
ಪರಂ ನಾಸ್ತೀತಿ ಬೋಧಸ್ಯ
ಪರತ್ವ ಮ ಭಿಧೀಯತೇ || 15-64
ತಾನೇ ತಾನಾಗಿ ಚರಿಸುತ್ತಿದ್ದವನೂ, ತನ್ನ ಸ್ವಸ್ವರೂಪಕ್ಕಿಂತಲೂ (ತನಗಿಂತಲೂ) ಬೇರೊಂದು ಏನೂ ಇಲ್ಲವೆಂಬ ಜ್ಞಾನವುಳ್ಳವನಾಗುವುದೇ ‘ಪರತ್ವ’ ಸ್ಥಿತಿಯೆಂದು ಹೇಳಲ್ಪಡುತ್ತದೆ (ಪರಸ್ಥಲಿಯೆಂದು ಕರೆಯಲ್ಪಡುತ್ತಾನೆ).
#ಸ್ವತಂತ್ರಃ ಸರ್ವ ಕೃತ್ಯೇಷು
ಸ್ವಂ ಪರತ್ವೇನ ಭಾವಿತಃ |
ತೃಣೀ ಕುರ್ವನ್ ಜಗಜ್ಜಾಲಮ್
ವರ್ತತೇ ಶಿವಯೋಗಿರಾಟ್ || 15-65
ತನ್ನನ್ನು ಪರವಸ್ತುವನ್ನಾಗಿ ಭಾವಿಸಿದ (ತಾನೇ ಪರವಸ್ತುವಾದ) ಪರಸ್ಥಲದ ಶಿವಯೋಗೀಶ್ವರನು ಎಲ್ಲ ಕೃತ್ಯಗಳಲ್ಲಿ ಸ್ವತಂತ್ರನಾಗಿದ್ದು, ಈ ಜಗಜ್ಜಾಲವನ್ನು (ಜಗತ್ ಸಮೂಹವನ್ನು) ತೃಣವೆಂದು ತಿಳಿದುಕೊಂಡವನಾಗಿರುತ್ತಾನೆ.
ವರ್ಣಾಶ್ರಮ ಸಮಾಚಾರ-
ಮಾರ್ಗ ನಿಷ್ಠಾ ಪರಾಙ್ಮುಖಃ |
ಸರ್ವೊತ್ಕೃಷ್ಟಂ ಸ್ವಮಾತ್ಮಾನಮ್
ಪಶ್ಯನ್ ಯೋಗೀ ತು ಮೋದತೇ 15-66
ಲೌಕಿಕಗಳಾದ ವರ್ಣಾಶ್ರಮಗಳಿಗೆ ಸಂಬಂಧಪಟ್ಟ ಆಚಾರಗಳ ನಿಷ್ಠೆಯಿಂದ ಪರಾಙ್ಮುಖನಾದ ಈ ಪರಸ್ಥಲಯೋಗಿಯು ತನ್ನನ್ನೇ ಸರ್ವೊತ್ಕೃಷ್ಟವಾದ ಪರಬ್ರಹ್ಮವನ್ನಾಗಿಯೇ ನೋಡುತ್ತಾ (ಅನುಭವಿಸುತ್ತಾ) ಆನಂದಮಯನಾಗಿರುತ್ತಾನೆ.
#ವಿಶ್ವಾತೀತಂ ಪರಂ ಬ್ರಹ್ಮ
ಶಿವಾಖ್ಯಂ ಚಿತ್ಸ್ವರೂಪಕಮ್ |
ತದೇವಾಹ ಮಿತಿ ಜ್ಞಾನೀ
ಸರ್ವೊತ್ಕೃಷ್ಟಃ ಸ ಉಚ್ಯತೇ || 15-67
ವಿಶ್ವಾತೀತವಾದ (ಜಗತ್ತನ್ನು ಮೀರಿದ) ಚಿದ್ರೂಪವಾದ ಶಿವನೆಂಬ ಪರಬ್ರಹ್ಮವೇ ತಾನೆಂದು ಅರಿತ ಜ್ಞಾನಿಯೇ ಸರ್ವೊತ್ಕೃಷ್ಟನೆೆಂದು ಹೇಳಲ್ಪಡುತ್ತಾನೆ.
ಅಚಲಂ ಧ್ರುವಮಾತ್ಮಾನಮ್
ಅನುಪಶ್ಯನ್ನಿರಂತರಮ್ |
ನಿರಸ್ತವಿಶ್ವವಿಭ್ರಾಂತಿಃ
ಜೀವನ್ಮುಕ್ತೋ ಭವೇನ್ಮುನಿಃ || 15-68
ತನ್ನನ್ನು ಅಚಲವನ್ನಾಗಿಯೂ (ನಿಶ್ಚಲನನ್ನಾಗಿಯೂ), ದೃಢನನ್ನಾಗಿಯೂ (ನಿತ್ಯನನ್ನಾಗಿಯೂ) ನಿರಂತರವಾಗಿ ನೋಡುತ್ತಿರುವ, ಪ್ರಾಪಂಚಿಕ ಭೇದಭ್ರಾಂತಿಯನ್ನು ನಿರಾಕರಿಸಿಗೊಂಡ ಆ ಮುನಿಯೇ (ಆ ಪರಸ್ಥಲದ ಯೋಗಿಯೇ) ಜೀವನ್ಮುಕ್ತನಾಗಿರುವನು.
#ಬ್ರಹ್ಮಾದ್ಯಾಃ ಕಿಂ ನು ಕುರ್ವಂತಿ
ದೇವತಾಃ ಕರ್ಮ ಮಾರ್ಗಗಾಃ |
ಕರ್ಮಾತೀತ ಪದಸ್ಥಸ್ಯ
ಸ್ವಯಂ ಬ್ರಹ್ಮ ಸ್ವರೂಪಿಣಃ || 15-69
ಕರ್ಮಾತೀತ ಪದಸ್ಥನಾದ, ಕರ್ಮಕಾಂಡಗಳಲ್ಲಿ ಹೇಳಿದ ಪದವಿಗಳನ್ನು ಮೀರಿ ನಿಂತಿರುವ, ತಾನೇ ಪರಬ್ರಹ್ಮ ಸ್ವರೂಪನಾದ ಈ ಪರಸ್ಥಲದ ಯೋಗಿಗೆ ಕರ್ಮಮಾರ್ಗಿಗಳಾದ ಬ್ರಹ್ಮಾದಿ ದೇವತೆಗಳು ಏನು ಮಾಡಬಲ್ಲರು?
ಸ್ವೇಚ್ಛಯಾ ಸಂಚರೇದ್ ಯೋಗೀ
ವಿಮುಂಚನ್ ದೇಹ ಮಾನಿತಾಮ್ |
ದರ್ಶನೈಃ ಸ್ಪರ್ಶನೈಃ ಸರ್ವಾನ್
ಅಜ್ಞಾನಪಿ ವಿಮೋಚಯೇತ್ || 15-70
ದೇಹಾಭಿಮಾನವನ್ನು ಬಿಟ್ಟಿರುವ, ತನ್ನ ಇಚ್ಛಾನುಸಾರವಾಗಿ ಸಂಚರಿಸುತ್ತಿರುವ ಈ ಪರಸ್ಥಲದ ಯೋಗಿಯು ಕೇವಲ ತನ್ನ ದರ್ಶನ, ಸ್ಪರ್ಶನಗಳಿಂದಲೇ ಅಜ್ಞಾನಿಗಳಾದ ಜೀವಿಗಳನ್ನೂ ಸಹ ಮುಕ್ತರನ್ನಾಗಿ ಮಾಡುವನು.
#ನಿತ್ಯೇ ನಿರ್ಮಲ ಭಾವನೇ ನಿರುಪಮೇ
ನಿರ್ಧೂತ ವಿಶ್ವ ಭ್ರಮೇ
ಸತ್ತಾನಂದ ಚಿದಾತ್ಮಕೇ ಪರಶಿವೇ
ಸಾಮ್ಯಂ ಗತಃ ಸಂಯಮೀ|
ನಿತ್ಯನೂ, ನಿರ್ಮಲ ಸ್ವರೂಪನೂ, ಉಪಮಾತೀತನೂ, ವಿಶ್ವಭ್ರಾಂತಿರಹಿತನೂ, ಸಚ್ಚಿದಾನಂದಮಯನೂ ಆದ ಪರಶಿವನಲ್ಲಿ ಸಾಮ್ಯತ್ವವನ್ನು ಪಡೆದುಕೊಂಡ ಮತ್ತು ಸಂಯಮಿಯಾದ,
ಪ್ರಧ್ವಸ್ತಾಶ್ರಮ ವರ್ಣ ಧರ್ಮ ನಿಗಲಃ
ಸ್ವಚ್ಛಂದ ಸಂಚಾರ ವಾನ್
ದೇಹೀವಾದ್ಭುತ ವೈಭವೋ
ವಿಜಯತೇ ಜೀವನ್ವಿಮುಕ್ತಃ ಸುಧೀಃ || 15-71
ವರ್ಣಾಶ್ರಮ ಧರ್ಮಗಳ ಸಂಕೋಲೆಗಳನ್ನು ಕಳೆದುಕೊಂಡ, ಸ್ವಚ್ಛಂದವಾಗಿ ಸಂಚರಿಸುತ್ತಿರುವ, ದೇಹವನ್ನು ಧರಿಸಿದ್ದರೂ ಸಹ ಅದ್ಭುತವಾದ ವೈಭವವನ್ನು ಹೊಂದಿರುವ, ಸುಜ್ಞಾನಿಯಾದ ಪರಸ್ಥಲದ ಸಂಯಮಿಯು ಜೀವನ್ಮುಕ್ತನಾಗಿ ವಿಜಯಂಗೈಯುತ್ತಿರುವನು.
ಇತಿ ಪರಸ್ಥಲಮ್ ಪರಿಸಮಾಪ್ತಂ
ಓಂ ತತ್ಸತ್ ಇತಿ
ಶ್ರೀ ಶಿವಗೀತೇಷು ಸಿದ್ಧಾಂತಾಗಮೇಷು
ಶಿವಾದ್ವೈತ ವಿದ್ಯಾಯಾಂ ಶಿವಯೋಗ ಶಾಸ್ತ್ರೇ
ಶ್ರೀ ರೇಣುಕಾಗಸ್ತ್ಯ ಸಂವಾದೇ ವೀರಶೈವ ಧರ್ಮ ನಿರ್ಣಯೇ
ಶ್ರೀ ಶಿವಯೋಗಿ ಶಿವಾಚಾರ್ಯ ವಿರಚಿತೇ
ಶ್ರೀ ಸಿದ್ಧಾಂತ ಶಿಖಾಮಣೌ ಭಕ್ತ ಸ್ಥಲಾಂತರ್ಗತ ಲಿಂಗಸ್ಥಲೇ
ದೀಕ್ಷಾ ಗುರು ಸ್ಥಲಾದಿ ನವವಿಧ ಸ್ಥಲ ಪ್ರಸಂಗೋ ನಾಮ
ಪಂಚದಶಃ ಪರಿಚ್ಛೇದಃ ||
ಇಲ್ಲಿಗೆ ಪರಸ್ಥಲವು ಮುಗಿಯಿತು
ಓಂ ತತ್ಸತ್ ಇಲ್ಲಿಗೆ ಶ್ರೀ ಶಿವನಿಂದ ಉಪದೇಶಿಸಲ್ಪಟ್ಟ
ಶ್ರೀ ಸಿದ್ಧಾಂತಾಗಮಗಳಲ್ಲಿಯ ಶಿವಾದ್ವೈತವಿದ್ಯಾರೂಪವೂ,
ಶಿವಯೋಗಶಾಸ್ತ್ರವೂ, ಶ್ರೀ ರೇಣುಕಾಗಸ್ತ್ಯಸಂವಾದರೂಪವೂ.
ಶ್ರೀ ವೀರಶೈವಧರ್ಮನಿರ್ಣಯವೂ ಆದ ಶ್ರೀ ಸಿದ್ಧಾಂತಶಿಖಾಮಣಿಯಲ್ಲಿ ಭಕ್ತಸ್ಥಲದಲ್ಲಿಯ
ಲಿಂಗಸ್ಥಲದಲ್ಲಿಯ ದೀಕ್ಷಾಗುರುಸ್ಥಲಾದಿ ಒಂಭತ್ತು ವಿಧ ಸ್ಥಲ ಪ್ರಸಂಗವೆಂಬ ಹೆಸರಿನ
ಹದಿನೈದನೆಯ ಪರಿಚ್ಛೇದವು ಮುಗಿದುದು