ಚತುರ್ದಶಃ ಪರಿಚ್ಛೇದಃ

ಐಕ್ಯಸ್ಯ ಚತುರ್ವಿಧಸ್ಥಲಪ್ರಸಂಗಃ

ಐಕ್ಯಸ್ಥಲಮ್

|| ಅಗಸ್ತ್ಯ ಉವಾಚ ||

ತಾಮಸ ತ್ಯಾಗ ಸಂಬಂಧಾತ್

ನಿರ್ದೆಶಾಚ್ಛೀಲ ತ ಸ್ತಥಾ |

ಶರಣಾಖ್ಯಸ್ಯ ಭೂಯೋಸ್ಯ

ಕಥಮೈಕ್ಯ ನಿರೂಪಣಮ್ || 14-1

ಹೇ ರೇಣುಕಗಣಾಧೀಶ್ವರನೇ, ತಮೋಗುಣವನ್ನು ತ್ಯಾಗ ಮಾಡಿಕೊಂಡ ಜ್ಞಾನ ನಿರ್ದೆಶದಿಂದ ಮತ್ತು ಶೀಲ ಸಂಪಾದನೆಯಿಂದ ಶರಣನೆಂದು ಕರೆಯಲ್ಪಟ್ಟ ಈ ಶರಣಸ್ಥಲದ ಸಾಧಕನು ಮತ್ತೆ ಐಕ್ಯನೆಂದು ಹೇಗೆ ನಿರೂಪಿಸಲ್ಪಡುವನು.

||ಶ್ರೀ ರೇಣುಕ ಉವಾಚ ||

#ಪ್ರಾಣ ಲಿಂಗಾದಿ ಯೋಗೇನ

ಸುಖಾತಿಶಯ ಮೇಯಿವಾನ್ |

ಶರಣಾಖ್ಯಃ ಶಿವೇನೈಕ್ಯ-

ಭಾವನಾದೈಕ್ಯ ವಾನ್ ಭವೇತ್ || 14-2

ಹೇ ಅಗಸ್ತ್ಯನೇ, ಪ್ರಾಣಲಿಂಗಾದಿಗಳ ಯೋಗದಿಂದ (ಪ್ರಾಣಲಿಂಗದ ಅನುಸಂಧಾನದಿಂದ) ಅತಿಶಯವಾದ ಆನಂದವನ್ನು ಅನುಭವಿಸುತ್ತಿದ್ದ ಶರಣನೆಂಬ ಸಾಧಕನು ಶಿವನೊಂದಿಗೆ ಐಕ್ಯ ಭಾವನೆಯನ್ನು ಹೊಂದಿದಾಗ ಐಕ್ಯನೇ ಆಗುತ್ತಾನೆ.

ಐಕ್ಯ ಸ್ಥಲ ಮಿದಂ ಪ್ರೋಕ್ತಮ್

ಚತುರ್ಧಾ ಮುನಿ ಪುಂಗವ |

ಐಕ್ಯ ಮಾಚಾರ ಸಂಪತ್ತಿಃ

ಏಕ ಭಾಜನ ಮೇವ ಚ |

ಸಹಭೋಜನ ಮಿತ್ಯೇಷಾಮ್

ಕ್ರಮಾಲ್ಲಕ್ಷಣ ಮುಚ್ಯತೇ || 14-3

ಮುನಿಪುಂಗವನಾದ ಅಗಸ್ತ್ಯನೇ, ಈ ಐಕ್ಯಸ್ಥಲವು ನಾಲ್ಕು ಪ್ರಕಾರವಾಗಿ ಹೇಳಲ್ಪಟ್ಟಿದೆ. (ಅವು ಯಾವುದೆಂದರೆ) ಐಕ್ಯಸ್ಥಲ, ಆಚಾರಸಂಪತ್ತಿಸ್ಥಲ, ಏಕಭಾಜನ ಸ್ಥಲ ಮತ್ತು ಸಹಭೋಜನಸ್ಥಲಗಳು. ಇವುಗಳ ಲಕ್ಷಣಗಳನ್ನು ಕ್ರಮವಾಗಿ ಹೇಳಲಾಗುವುದು.

ಅಥ ಐಕ್ಯಸ್ಥಲಮ್

ವಿಷಯಾನಂದ ಕಣಿಕಾ-

ನಿಃಸ್ಪೃಹೋ ನಿರ್ಮಲಾಶಯಃ |

ಶಿವಾನಂದ ಮಹಾಸಿಂಧು-

ಮಜ್ಜನಾದೈಕ್ಯ ಮುಚ್ಯತೇ || 14-4

ಬಿಂದು ರೂಪಗಳಾದ ವಿಷಯಾನಂದದಲ್ಲಿ ನಿಸ್ಪೃಹನಾಗಿ ನಿರ್ಮಲವಾದ ಆಶಯ (ಭಾವನೆ)ಯುಳ್ಳ ಶರಣನೇ ಶಿವಾನಂದವೆಂಬ ಮಹಾಸಿಂಧುವಿನಲ್ಲಿ (ಮಹಾಸಾಗರದಲ್ಲಿ) ಮುಳುಗುವುದರಿಂದ ಐಕ್ಯನೆಂದು ಹೇಳಲ್ಪಡುತ್ತಾನೆ.

#ನಿರ್ಧೂತಮಲ ಸಂಬಂಧೋ

ನಿಷ್ಕಲಂಕ ಮನೋಗತಃ |

ಶಿವೋಹ ಮಿತಿ ಭಾವೇನ

ನಿರೂಢೋ ಹಿ ಶಿವೈಕ್ಯತಾಮ್ || 14-5

ಮಲಗಳ (ಆಣವಾದಿ ಮಲಗಳ) ಸಂಬಂಧವನ್ನು ಕಳೆದುಕೊಂಡ, ಕಲಂಕರಹಿತವಾದ ಮನೋವ್ಯಾಪಾರವುಳ್ಳ ಸಾಧಕನು ಶಿವೋಹಂ (ಶಿವನೇ ನಾನಾಗಿದ್ದೇನೆ) ಎಂಬ (ಅನುಸಂಧಾನದಿಂದ) ಶಿವೈಕ್ಯತೆಯನ್ನು (ಶಿವನೊಡನೆ ಸಂಪೂರ್ಣವಾಗಿ ಅಭೇದವನ್ನು) ಹೊಂದುವನು.

ಶಿವೇನೈಕ್ಯಂ ಸಮಾಪನ್ನಃ

ಚಿದಾನಂದ ಸ್ವರೂಪಿಣಾ |

ನ ಪಶ್ಯತಿ ಜಗಜ್ಜಾಲಮ್

ಮಾಯಾಕಲ್ಪಿತ ವೈಭವಮ್ || 14-6

ಚಿದಾನಂದ ಸ್ವರೂಪನಾದ ಶಿವನೊಂದಿಗೆ ಐಕ್ಯತೆಯನ್ನು (ಸಾಮರಸ್ಯವನ್ನು) ಪಡೆದ ಐಕ್ಯಸ್ಥಲಿಯ ಮಾಯಾಕಲ್ಪಿತ ವೈಭವದಿಂದ ಕೂಡಿದ ಜಗಜ್ಜಾಲವನ್ನು ನೋಡುವುದಿಲ್ಲ.

#ಬ್ರಹ್ಮಾಂಡ ಬುದ್ಬುದೋದ್ಭೇದ-

ವಿಜೃಂಭೀ ತತ್ತ್ವವೀಚಿಮಾನ್ |

ಮಾಯಾ ಸಿಂಧುರ್ಲಯಂ ಯಾತಿ

ಶಿವೈಕ್ಯ ವಡ ವಾನಲೇ || 14-7

ಬ್ರಹ್ಮಾಂಡಗಳೆಂಬ ಬುದ್ಭುದಗಳಿಂದ (ಬೊಬ್ಬುಳಿಕೆಗಳಿಂದ) ಬೆಳೆದು ನಿಂತ ತತ್ತ್ವಗಳೆಂಬ ವೀಚಿಗಳುಳ್ಳ (36 ತತ್ತ್ವಗಳೆಂಬ ತೆರೆಗಳುಳ್ಳ) ಮಾಯಾ ಸಿಂಧುವು (ಮಾಯೆಯೆಂಬ ಸಮುದ್ರವು) ಶಿವೈಕ್ಯವೆಂಬ ವಡಬಾನಲದಲ್ಲಿ (ವಡವಾಗ್ನಿಯಲ್ಲಿ) ಲಯವನ್ನು ಹೊಂದುತ್ತದೆ.

ಮಾಯಾ ಶಕ್ತಿ ತಿರೋಧಾನಾತ್

ಶಿವೇ ಭೇದ ವಿಕಲ್ಪನಾ |

ಆತ್ಮನಸ್ತ ದ್ವಿನಾಶೇ ತು

ನಾದ್ವೈತಾ ತ್ಕಿಂಚಿ ದಿಷ್ಯತೇ || 14-8

ಶಿವನಿಗೆ ಮಾಯಾಶಕ್ತಿಯ ತಿರೋಧಾನವಾಗಿರಲು (ಅವತರಣವಾಗಲು) ಜೀವಾತ್ಮನಲ್ಲಿ ಭೇದ ಕಲ್ಪನೆ ಉಂಟಾಗುವುದು. ಜೀವಾತ್ಮನಲ್ಲಿ ಭೇದಬುದ್ಧಿಯು ನಾಶವಾಗಲು ಅದ್ವೈತಕ್ಕಿಂತಲೂ ಬೇರೆ ಯಾವುದೂ ಉಳಿಯುವುದಿಲ್ಲ.

#ಪಶುತ್ವಂ ಚ ಪತಿತ್ವಂ ಚ

ಮಾಯಾ ಮೋಹ ವಿಕಲ್ಪಿತಮ್ |

ತಸ್ಮಿನ್ ಪ್ರಲಯ ಮಾಪನ್ನೇ

ಕಃ ಪಶುಃ ಕೋ ನು ವಾ ಪತಿಃ || 14-9

ಪಶುತ್ವವೇ ಆಗಲಿ (ಜೀವಭಾವವೇ ಆಗಲಿ) ಪತಿತ್ವವೇ ಆಗಲಿ (ಶಿವತ್ವವೇ ಆಗಲಿ) – ಇವೆರಡೂ ಮಾಯಾ ಮೋಹದಿಂದಲೇ ಕಲ್ಪಿಸಲ್ಪಟ್ಟಿವೆ. ಆ ಮಾಯಾ ಮೋಹವು ಶಿವನಲ್ಲಿ ಪ್ರಳಯವಾಗಲು (ಇಲ್ಲದಂತಾಗಲು) ಪಶು ಯಾರು? ಪತಿ ಯಾರು? (ಈ ಭೇದವಿರುವುದಿಲ್ಲ). ಭೇದವೆಂಬ

ಘೋರ ಸಂಸಾರ ಸರ್ಪಸ್ಯ

ಭೇದವಲ್ಮೀಕ ಶಾಯಿನಃ |

ಬಾಧಕಂ ಪರಮಾದ್ವೈತ-

ಭಾವನಾ ಪರಮೌಷಧಮ್ || 14-10

(ಶಿವ-ಜೀವಭೇದವೆಂಬ) ಹುತ್ತದಲ್ಲಿ ವಾಸವಾಗಿರುವ, ಘೋರವಾದ (ಭಯಾನಕವಾದ) ಸಂಸಾರರೂಪವಾದ ಸರ್ಪಕ್ಕೆ ಪರಮಾದ್ವೈತ (ಶಿವಾದ್ವೈತ) ಭಾವನೆಯೇ ಬಾಧಕವಾದ ಪರಮೌಷಧವಾಗಿದೆ.

#ಭೇದಬುದ್ಧಿ ಸಮುತ್ಪನ್ನ-

ಮಹಾಸಂಸಾರ ಸಾಗರಮ್ |

ಅದ್ವೈತ ಬುದ್ಧಿ ಪೋತೇನ

ಸಮುತ್ತರತಿ ದೇಶಿಕಃ || 14-11

ಈ ಮಹಾಸಂಸಾರರೂಪವಾದ ಸಾಗರವು ಭೇದಬುದ್ಧಿಯಿಂದಲೇ (ಶಿವ-ಜೀವರ ಭೇದಬುದ್ಧಿಯಿಂದಲೇ) ಉತ್ಪನ್ನವಾಗುತ್ತದೆ. ಇದನ್ನು ದೇಶಿಕನು ಅದ್ವೈತ (ಶಿವಾದ್ವೈತ) ಬುದ್ಧಿಯೆಂಬ ಹಡಗಿನಿಂದಲೇ ದಾಟುತ್ತಾನೆ.

ಅಜ್ಞಾನ ತಿಮಿರೋದ್ರಿಕ್ತಾ

ಕಾಮರಕ್ಷಃಕ್ರಿಯಾಕರೀ |

ಸಂಸಾರ ಕಾಲ ರಾತ್ರಿಸ್ತು

ನಶ್ಯೇದದ್ವೈತ ಭಾನು ನಾ || 14-12

ಅಜ್ಞಾನರೂಪವಾದ ಗಾಢಾಂಧಕಾರದಿಂದ ಹುಟ್ಟಿ, ಕಾಮ ವ್ಯಾಪಾರ ರೂಪವಾದ ರಾಕ್ಷಸಕೃತ್ಯವನ್ನು ಮಾಡುತ್ತಿರುವ ಸಂಸಾರವೆಂಬ ಕಾರ್ಗತ್ತಲೆಯು ಅದ್ವೈತ ಭಾವನಾರೂಪವಾದ ಭಾನುವಿನಿಂದ (ಸೂರ್ಯನಿಂದ) ನಾಶವಾಗುತ್ತದೆ.

#ತಸ್ಮಾದದ್ವೈತ ಭಾವಸ್ಯ

ಸದೃಶೋ ನಾಸ್ತಿ ಯೋಗಿನಾಮ್ |

ಉಪಾಯೋ ಘೋರ ಸಂಸಾರ-

ಮಹಾತಾಪ ನಿವೃತ್ತಯೇ || 14-13

ಆದ್ದರಿಂದ ಯೋಗಿಗಳಿಗೆ ಘೋರವಾದ (ಭಯಾನಕವಾದ) ಸಂಸಾರದ ಮಹಾತಾಪವನ್ನು ನಿವೃತ್ತಿ ಮಾಡಿಕೊಳ್ಳಲು, ಅದ್ವೈತ ಭಾವನೆಗೆ ಸಮವಾದ ಬೇರೊಂದು ಉಪಾಯವು ಇರುವುದಿಲ್ಲ.

ಅದ್ವೈತ ಭಾವನಾ ಜಾತಮ್

ಕ್ಷಣಮಾತ್ರೇಪಿ ಯತ್ಸುಖಮ್ |

ತತ್ಸುಖಂ ಕೋಟಿ ವರ್ಷೆಣ

ಪ್ರಾಪ್ಯತೇ ನೈವ ಭೋಗಿಭಿಃ || 14-14

ಅದ್ವೈತ ಭಾವನೆಯಿಂದುಂಟಾದ ಒಂದು ಕ್ಷಣದ ಯಾವ ಸುಖವುಂಟೋ ಆ ಸುಖವು ವಿಷಯಭೋಗಿಗಳಿಗೆ ಒಂದು ಕೋಟಿ ವರ್ಷಗಳಿಂದಲೂ ಸಹ ಪ್ರಾಪ್ತಿ ಮಾಡಿಕೊಳ್ಳಲಾಗುವುದಿಲ್ಲ.

#ಚಿತ್ತವೃತ್ತಿ ಸಮಾಲೀನ-

ಜಗತಃ ಶಿವಯೋಗಿನಃ |

ಶಿವಾನಂದ ಪರಿಸ್ಫೂರ್ತಿಃ

ಮುಕ್ತಿರಿತ್ಯ ಭಿಧೀಯತೇ || 14-15

ತಮ್ಮ ಚಿತ್ತವೃತ್ತಿಯಲ್ಲಿ ಜಗತ್ತನ್ನು ಲೀನಗೊಳಿಸಿಕೊಂಡ ಶಿವಯೋಗಿಗಳಿಗೆ ಉಂಟಾಗುವ ಶಿವಾನಂದ ಪರಿಸ್ಫೂರ್ತಿಯೇ (ಪರಿಪೂರ್ಣತೆಯೇ) ಮುಕ್ತಿ ಎಂಬುದಾಗಿ ಹೇಳಲ್ಪಡುತ್ತದೆ.

ಇತಿ ಐಕ್ಯಸ್ಥಲಂ

----------------

ಅಥ ಆಚಾರ ಸಂಪತ್ತಿ ಸ್ಥಲಮ್

ಶಿವೈಕ ಭಾವನಾಪನ್ನ-

ಶಿವತ್ವೋ ದೇಹ ವಾನಪಿ |

ದೇಶಿಕೋ ಹಿ ನ ಲಿಪ್ಯೇತ

ಸ್ವಾಚಾರೈಃ ಸೂತಕಾದಿಭಿಃ || 14-16

ಶಿವೈಕ್ಯಭಾವನೆಯಿಂದ(ಶಿವಾದ್ವೈತಭಾವನೆಯಿಂದ)ಪ್ರಾಪ್ತ ಮಾಡಿಕೊಂಡ ಶಿವತ್ವವುಳ್ಳ ದೇಶಿಕನು (ಐಕ್ಯಸ್ಥಲಿಯು) ದೇಹಧಾರಿಯಾಗಿದ್ದರೂ ಸಹ ತನ್ನ ನಿತ್ಯಕ್ರಿಯೆಗಳಿಂದ ಮತ್ತು ಜನನಾದಿ ಪಂಚ (ಜನನ, ಮರಣ, ರಜಃ, ಜಾತಿ, ಉಚ್ಛಿಷ್ಟ) ಸೂತಕಗಳಿಂದ ಲಿಪ್ತನಾಗುವುದಿಲ್ಲ.

#ಶಿವಾದ್ವೈತ ಪರಿಜ್ಞಾನೇ

ಸ್ಥಿತೇ ಸತಿ ಮನಸ್ವಿನಾಮ್ |

ಕರ್ಮಣಾ ಕಿಂ ನು ಭಾವ್ಯಂ ಸ್ಯಾದ್

ಅಕೃತೇನ ಕೃತೇನ ವಾ || 14-17

ಮನಸ್ವಿಗಳಿಗೆ(ಲಿಂಗದಲ್ಲಿ ಐಕ್ಯವಾದ ಮನಸ್ಸುಳ್ಳವರಿಗೆ)ಶಿವಾದ್ವೈತ ಜ್ಞಾನವು ಸ್ಥಿರಗೊಳ್ಳಲು ಅಕೃತ ಕರ್ಮಗಳಿಂದ (ಮಾಡಲೇಬಾರದ ದುಷ್ಕರ್ಮಗಳಿಂದ) ಅಥವಾ ಕೃತ ಕರ್ಮಗಳಿಂದ(ಮಾಡಲೇಬೇಕಾದ ಸತ್ಕರ್ಮಗಳಿಂದ)ಯಾವ ಫಲವೂ ಆಗುವುದಿಲ್ಲ.

ಶಂಭೋರೇಕತ್ವ ಭಾವೇನ

ಸರ್ವತ್ರ ಸಮದರ್ಶನಃ |

ಕುರ್ವನ್ನಪಿ ಮಹಾಕರ್ಮ

ನ ತತ್ಫಲ ಮವಾಪ್ನುಯಾತ್ || 14-18

ಎಲ್ಲೆಡೆಯಲ್ಲಿ ಸಮದರ್ಶಿಯಾದ, ಶಂಭುವಿನಲ್ಲಿ (ಶಿವನಲ್ಲಿ) ಐಕ್ಯಭಾವನೆಯನ್ನು ಹೊಂದಿದ ಐಕ್ಯಸ್ಥಲಿಯು ಮಹಾಕರ್ಮಗಳನ್ನು (ಪುಣ್ಯ ಪಾಪರೂಪವಾದ ಕರ್ಮಗಳನ್ನು) ಮಾಡಿದರೂ ಸಹ, ಅವುಗಳ ಫಲವನ್ನು ಆತನು ಹೊಂದುವುದಿಲ್ಲ.

#ಸುಕೃತೀ ದುಷ್ಕೃತೀ ವಾಪಿ

ಬ್ರಾಹ್ಮಣೋ ವಾಂತ್ಯಜೋಪಿ ವಾ |

ಶಿವೈಕಭಾವ ಯುಕ್ತಾನಾಮ್

ಸದೃಶೋ ಭವತಿ ಧ್ರುವಮ್ || 14-19

ಸುಕೃತಿಯೇ (ಪುಣ್ಯಾತ್ಮನೇ) ಆಗಲಿ, ದುಷ್ಕೃತಿಯೇ (ಪಾಪಾತ್ಮನೇ) ಆಗಲಿ, ಬ್ರಾಹ್ಮಣನೇ ಆಗಿರಲಿ ಅಥವಾ ಅಂತ್ಯಜನೇ ಆಗಿರಲಿ ಇವರೆಲ್ಲರೂ ಶಿವೈಕ್ಯಭಾವನೆಯಿಂದ ಕೂಡಿದ(ಶಿವಾದ್ವೈತ ಭಾವವುಳ್ಳ)ಐಕ್ಯಸ್ಥಲಿಗೆ ನಿಶ್ಚಯವಾಗಿ ಸಮರಾಗಿ ಕಾಣುತ್ತಾರೆ.

ವರ್ಣಾಶ್ರಮ ಸದಾಚಾರೈಃ

ಜ್ಞಾನಿನಾಂ ಕಿಂ ಪ್ರಯೋಜನಮ್ |

ಲೌಕಿಕಸ್ತು ಸದಾಚಾರಃ

ಪಲಾಭಾವೇಪಿ ಭಾವ್ಯತೇ || 14-20

ಜ್ಞಾನಿಗಳಿಗೆ ಬ್ರಾಹ್ಮಣಾದಿ ವರ್ಣಗಳ ಮತ್ತು ಬ್ರಹ್ಮಚರ್ಯಾದಿ ಆಶ್ರಮಗಳ ಸದಾಚಾರಗಳಿಂದ ಏನೂ ಪ್ರಯೋಜನವಿರುವುದಿಲ್ಲ. ಆದರೂ ಸಹ ಲೌಕಿಕವಾದ ಸದಾಚಾರವು (ನಿತ್ಯ, ನೈಮಿತ್ತಿಕ ಕರ್ಮಗಳನ್ನು) ಫಲವಿಲ್ಲದೆ ಇದ್ದರೂ ಸಹ ವಿಧಿಸಲ್ಪಟ್ಟಿದೆ.

#ನಿರ್ದಗ್ಧ ಕರ್ಮಬೀಜಸ್ಯ

ನಿರ್ಮಲಜ್ಞಾನ ವಹ್ನಿನಾ |

ದೇಹಿವದ್ ಭಾಸ ಮಾನಸ್ಯ

ದೇಹಯಾತ್ರಾ ತು ಲೌಕಿಕೀ || 14-21

ನಿರ್ಮಲವಾದ ಜ್ಞಾನಾಗ್ನಿಯಿಂದ ಕರ್ಮಬೀಜಗಳನ್ನು ಸುಟ್ಟುಕೊಂಡಿರುವ ಐಕ್ಯಸ್ಥಲಿಯು ದೇಹಧಾರಿಯಂತೆ ಭಾಸವಾಗುತ್ತಿದ್ದರೂ ಸಹ ಅವನ ದೇಹಯಾತ್ರೆಯು (ದೇಹದಿಂದಾಗುವ ವ್ಯವಹಾರಗಳು) ಅವು ಲೌಕಿಕವಾದವುಗಳು (ಪ್ರಕೃತಿ ಸಂಬಂಧವಾದವುಗಳು) ಆಗಿವೆ.

ಶಿವಜ್ಞಾನ ಸಮಾಪನ್ನ-

ಸ್ಥಿರ ವೈರಾಗ್ಯ ಲಕ್ಷಣಃ |

ಸ್ವಕರ್ಮಣಾ ನ ಲಿಪ್ಯೇತ

ಪದ್ಮಪತ್ರ ಮಿವಾಂಭಸಾ || 14-22

ಶಿವಜ್ಞಾನವನ್ನು ಪಡೆದ ಮತ್ತು ಸ್ಥಿರವಾದ ವೈರಾಗ್ಯದ ಲಕ್ಷಣವುಳ್ಳ ಐಕ್ಯಸ್ಥಲಿಯು ನೀರಿನಲ್ಲಿರುವ ಕಮಲದಂತೆ ತನ್ನ ಕರ್ಮಗಳಿಂದ (ಕರ್ಮಫಲಗಳಿಂದ) ಲಿಪ್ತನಾಗುವುದಿಲ್ಲ.

#ಗಚ್ಛಂಸ್ತಿ ಷ್ಠನ್ ಸ್ವಪನ್ ವಾಪಿ

ಜಾಗ್ರನ್ ವಾಪಿ ಮಹಾಮತಿಃ |

ಶಿವಜ್ಞಾನ ಸಮಾ ಯೋಗಾತ್

ಶಿವ ಪೂಜಾ ಪರಃ ಸದಾ || 14-23

ಮಹಾಮತಿಯು (ಐಕ್ಯಸ್ಥಲಿಯು) ನಡೆಯುತ್ತಿದ್ದರೂ, ನಿಂತಿದ್ದರೂ, ಮಲಗಿದ್ದರೂ, ಎಚ್ಚರಗೊಂಡಿದ್ದರೂ ಮತ್ತು ಇನ್ನಾವ ಕಾರ್ಯಗಳನ್ನೇ ಮಾಡುತ್ತಿದ್ದರೂ ಅವನು ಶಿವಜ್ಞಾನಯುಕ್ತನಾಗಿರುವುದರಿಂದ ಯಾವಾಗಲೂ ಶಿವಪೂಜೆಯನ್ನೇ ಮಾಡುತ್ತಿರುತ್ತಾನೆ.

ಯದ್ಯತ್ಪಶ್ಯತಿ ಸಾಮೋದಮ್

ವಸ್ತು ಲೋಕೇಷು ದೇಶಿಕಃ |

ಶಿವ ದರ್ಶನ ಸಂಪತ್ತಿಃ

ತತ್ರ ತತ್ರ ಮಹಾತ್ಮನಃ || 14-24

ದೇಶಿಕನು (ಐಕ್ಯಸ್ಥಲಿಯು) ಈ ಲೋಕದಲ್ಲಿ ಯಾವ ಯಾವ ವಸ್ತುವನ್ನು ಪ್ರೀತಿಯಿಂದ ನೋಡುತ್ತಾನೆಯೋ ಅವೆಲ್ಲವುಗಳಲ್ಲಿ ಮಹಾತ್ಮನಾದ ಅವನಿಗೆ ಶಿವದರ್ಶನ ಸಂಪತ್ತಿಯೇ ಪ್ರಾಪ್ತವಾಗುವುದು.

#ಯದ್ಯ ಚ್ಚಿಂತ ಯತೇ ಯೋಗೀ

ಮನಸಾ ಶುದ್ಧ ಭಾವನಃ |

ತತ್ತ ಚ್ಛಿವ ಮಯತ್ವೇನ

ಶಿವ ಧ್ಯಾನ ಮುದಾಹೃತಮ್ || 14-25

ಶುದ್ಧ ಭಾವದ (ನಿರ್ಮಲವಾದ ಭಾವನೆಯುಳ್ಳ) ಐಕ್ಯಸ್ಥಲದ ಯೋಗಿಯು ತನ್ನ ಮನಸ್ಸಿನಿಂದ ಏನೇನು ಚಿಂತಿಸುತ್ತಾನೆಯೋ ಅದೆಲ್ಲವೂ ಶಿವಮಯ ವಾಗಿರುವುದರಿಂದ ಅದನ್ನು (ಅವನ ಚಿಂತನೆಯನ್ನು) ಶಿವಧ್ಯಾನವೆಂತಲೇ ಹೇಳಲಾಗುವುದು.

ಯತ್ಕಿಂಚಿದ್ ಭಾಷಿತಂ ಲೋಕೇ

ಸ್ವೇಚ್ಛಯಾ ಶಿವ ಯೋಗಿನಾ |

ಶಿವ ಸ್ತೋತ್ರ ಮಿದಂ ಸರ್ವಮ್

ಯಸ್ಮಾತ್ ಸರ್ವಾತ್ಮಕಃ ಶಿವಃ || 14-26

ಶಿವಯೋಗಿಯು ಈ ಲೋಕದಲ್ಲಿ ಸ್ವೇಚ್ಛೆಯಿಂದ (ತನ್ನ ಇಚ್ಛೆಯಿಂದ) ಏನನ್ನೇ ಮಾತನಾಡಿದರೂ ಸಹ ಅದೆಲ್ಲವೂ ಶಿವಸ್ತೋತ್ರವೇ ಆಗಿರುತ್ತದೆ. ಏಕೆಂದರೆ ಶಿವನು ಸರ್ವಾತ್ಮಕನಾಗಿರುತ್ತಾನೆ.

#ಯಾ ಯಾ ಚೇಷ್ಟಾ ಸಮುತ್ಪನ್ನಾ

ಜಾಯತೇ ಶಿವ ಯೋಗಿನಾಮ್ |

ಸಾ ಸಾ ಪೂಜಾ ಮಹೇಶಸ್ಯ

ಸರ್ವದಾ ತದ್ಗತಾತ್ಮನಾಮ್ || 14-27

ಶಿವತಾದಾತ್ಮ್ಯವನ್ನು ಹೊಂದಿದ ಶಿವಯೋಗಿಗಳಿಂದ ಯಾವಾಗಲೂ ಯಾವ ಯಾವ ಚೇಷ್ಟೆಗಳು (ಕ್ರಿಯೆಗಳು) ಉತ್ಪನ್ನವಾಗುವುವೋ, ಅವೆಲ್ಲವೂ ಮಹೇಶನಾದ ಶಿವನ ಪೂಜೆಯೇ ಆಗಿರುತ್ತವೆ.

ಇತಿ ಆಚಾರ ಸಂಪತ್ತಿ ಸ್ಥಲಂ

-----------------------

ಅಥ ಏಕ ಭಾಜನ ಸ್ಥಲಮ್

ವಿಶ್ವಂ ಶಿವಮಯಂ ಚೇತಿ

ಸದಾ ಭಾವಯತೋ ಧಿಯಾ |

ಶಿವೈಕ ಭಾಜನಾತ್ ಮತ್ವಾತ್

ಏಕಭಾಜನ ಮುಚ್ಯತೇ || 14-28

ಈ ವಿಶ್ವವೆಲ್ಲವೂ ಶಿವಮಯವೆಂದು ತನ್ನ ಬುದ್ಧಿಯಿಂದ ಯಾವಾಗಲೂ ಭಾವಿಸುತ್ತಿದ್ದ ಐಕ್ಯಸ್ಥಲಿಗೆ ಶಿವನೋರ್ವನೇ ಏಕೈಕ ಆಶ್ರಯ ನಾಗಿರುವುದರಿಂದ ಅವನು ಏಕಭಾಜನನೆಂದು ಕರೆಯಲ್ಪಡುತ್ತಾನೆ.(ಉದಾಹರಣೆ : ಭಾಜನ= ಪಾತ್ರ, ಶಿವನು ಜೀವಾತ್ಮನು ಒಂದೇ ಪಾತ್ರರಾಗಿದ್ದಾರೆ. ಲಿಂಗೈಕ್ಯನೂ, ಈ ವಿಶ್ವ ಎರಡೂ ಸಹ ಶಿವನಲ್ಲಿರುವುದರಿಂದ ಇವನು (ಲಿಂಗೈಕ್ಯನು) ಏಕಭಾಜನ ಸ್ಥಲಿ ಯಾಗಿದ್ದಾನೆ.)

#ಸ್ವಸ್ಯ ಸರ್ವಸ್ಯ ಲೋಕಸ್ಯ

ಶಿವಸ್ಯಾದ್ವೈತ ದರ್ಶನಾತ್ |

ಏಕಭಾಜನ ಯೋಗೇನ

ಪ್ರಸಾದೈಕ್ಯ ಮತಿರ್ಭವೇತ್ || 14-29

ಈ ಲಿಂಗೈಕ್ಯಸ್ಥಲಿಯು ತನ್ನನ್ನು ಸಕಲ ವಿಶ್ವವನ್ನು ಮತ್ತು ಶಿವನನ್ನು ಒಂದಾಗಿ ನೋಡುವುದರಿಂದ ತನಗುಂಟಾದ ಏಕಭಾಜನ ಸ್ಥಿತಿಯಿಂದ ಪ್ರಸಾದೈಕ್ಯಮತಿ ಯುಳ್ಳವನಾಗುತ್ತಾನೆ (ಪ್ರಸಾದದಲ್ಲಿ ಐಕ್ಯಮತಿಯುಳ್ಳವನಾಗುತ್ತಾನೆ).

ಶಿವೇ ವಿಶ್ವಮಿದಂ ಸರ್ವಮ್

ಶಿವಃ ಸರ್ವತ್ರ ಭಾಸತೇ |

ಆಧಾರಾಧೇಯ ಭಾವೇನ

ಶಿವಸ್ಯ ಜಗತಃ ಸ್ಥಿತಿಃ || 14-30

ಈ ಎಲ್ಲ ವಿಶ್ವವು ಶಿವನಲ್ಲಿ ಇರುತ್ತದೆ. ಶಿವನು ಎಲ್ಲ ಕಡೆಗಿರುತ್ತಾನೆ. ಶಿವ ಮತ್ತು ಜಗತ್ತು – ಇವರೀರ್ವರಲ್ಲಿ ಆಧಾರ ಮತ್ತು ಅಧೇಯಭಾವದ ಸ್ಥಿತಿ ಇರುತ್ತದೆ (ಶಿವನು ಆಧಾರ, ಜಗತ್ತು ಆಧೇಯವೆಂದು ತಿಳಿದುಕೊಳ್ಳಬೇಕು).

#ಚಿದೇಕ ಭಾಜನಂ ಯಸ್ಯ

ಚಿತ್ತವೃತ್ತೇಃ ಶಿವಾತ್ಮಕಮ್ |

ನಾನ್ಯತ್ ತಸ್ಯ ಕಿಮೇತೇನ

ಮಾಯಾ ಮೂಲೇನ ವಸ್ತುನಾ || 14-31

ಯಾರ ಚಿತ್ತವೃತ್ತಿಯು (ಮನೋವ್ಯಾಪಾರವು) ಶಿವಾತ್ಮಕವೂ (ಶಿವಸ್ವರೂಪವೂ) ಮತ್ತು ಚಿದೇಕಭಾಜನವೂ (ಚಿದ್ರೂಪವನ್ನೇ ಆಶ್ರಯವಾಗಿ ಪಡೆದಿರುವುದೋ) ಆ ಐಕ್ಯಸ್ಥಲಿಗೆ ಮಾಯಾ ಮೂಲವಾದ ಈ ಪ್ರಪಂಚದಿಂದ ಏನು ಪ್ರಯೋಜನ?

ಚಿತ್ಪ್ರಕಾಶ ಯತೇ ವಿಶ್ವಮ್

ತದ್ವಿನಾ ನಾಸ್ತಿ ವಸ್ತು ಹಿ |

ಚಿದೇಕ ನಿಷ್ಠ ಚಿತ್ತಾನಾಮ್

ಕಿಂ ಮಾಯಾ ಪರಿಕಲ್ಪಿತೈಃ || 14-32

ಚೈತನ್ಯವೇ ವಿಶ್ವವನ್ನು ಪ್ರಕಾಶಿಸುತ್ತದೆ. ಆ ಚೈತನ್ಯದ ಹೊರತಾಗಿ ಯಾವ ವಸ್ತುವೂ ಅಸ್ತಿತ್ವದಲ್ಲಿರುವುದಿಲ್ಲ. ಆದ್ದರಿಂದ ಚಿದೇಕನಿಷ್ಠ ಚಿತ್ತನಾದ (ಚೈತನ್ಯದಲ್ಲಿಯೇ ತತ್ಪರವಾದ ಚಿತ್ತವುಳ್ಳ) ಐಕ್ಯಸ್ಥಲಿಗೆ ಮಾಯಾಕಲ್ಪಿತವಾದ ಈ ಪ್ರಾಪಂಚಿಕ ವಸ್ತುಗಳಿಂದ ಯಾವ ಪ್ರಯೋಜನವೂ ಇರುವುದಿಲ್ಲ.

#ವೃತ್ತಿಶೂನ್ಯೇ ಸ್ವಹೃದಯೇ

ಶಿವಲೀನೇ ನಿರಾಕುಲೇ |

ಯಃ ಸದಾ ವರ್ತತೇ ಯೋಗೀ

ಸ ಮುಕ್ತೋ ನಾತ್ರ ಸಂಶಯಃ || 14-33

ವೃತ್ತಿಶೂನ್ಯವಾದ (ಅನ್ಯ ವ್ಯವಹಾರವಿಲ್ಲದಿರುವ), ನಿರಾಕುಲವಾದ (ಕ್ಷೊಭೆರಹಿತವಾದ) ಮತ್ತು ಶಿವನಲ್ಲಿಯೇ ಲೀನವಾದ ತನ್ನ ಹೃದಯದಲ್ಲಿಯೇ ಯಾವ (ಐಕ್ಯಸ್ಥಲದ) ಯೋಗಿಯು ವರ್ತಿಸುತ್ತಾನೆಯೋ ಅವನು ಮುಕ್ತನೆಂಬುವುದರಲ್ಲಿ ಯಾವ ಸಂಶಯವಿಲ್ಲ.

ಇತಿ ಏಕಭಾಜನ ಸ್ಥಲಂ

------------------------

ಅಥ ಸಹ ಭೋಜನ ಸ್ಥಲಮ್

ಗುರೋಃ ಶಿವಸ್ಯ ಶಿಷ್ಯಸ್ಯ

ಸ್ವಸ್ವರೂಪ ತಯಾ ಸ್ಮೃತಿಃ |

ಸಹಭೋಜನ ಮಾಖ್ಯಾತಮ್

ಸರ್ವಗ್ರಾಸಾತ್ಮ ಭಾವತಃ || 14-34

ಗುರುವನ್ನು, ಶಿವನನ್ನು ಮತ್ತು ಶಿಷ್ಯನನ್ನು ಸ್ವಸ್ವರೂಪವಾಗಿ (ತನ್ನ ಆತ್ಮದೊಂದಿಗೆ ಅಭಿನ್ನವಾಗಿ) ತಿಳಿದುಕೊಂಡು ಸರ್ವ ಗ್ರಾಸಾತ್ಮಭಾವದಿಂದ (ಎಲ್ಲವನ್ನು ಒಟ್ಟುಗೂಡಿಸಿ ಗ್ರಹಿಸುವ ದೆಸೆಯಿಂದ)ಇರುವ ಐಕ್ಯಸ್ಥಲಿಯು ಸಹಭೋಜನನೆಂದು ಕರೆಯಲ್ಪಡುತ್ತಾನೆ.

#ಶಿವಂ ವಿಶ್ವಂ ಗುರುಂ ಸಾಕ್ಷಾದ್

ಯೋಜಯೇನ್ನಿತ್ಯ ಮಾತ್ಮನಿ |

ಏಕತ್ವೇನ ಚಿದಾಕಾರೇ

ತದಿದಂ ಸಹ ಭೋಜನಮ್ || 14-35

ಚಿದಾಕಾರರೂಪವಾದ ತನ್ನ ಆತ್ಮದಲ್ಲಿ ಶಿವನನ್ನು, ವಿಶ್ವವನ್ನು ಮತ್ತು ಗುರುವನ್ನು ಏಕತ್ವದಿಂದ ಸಾಕ್ಷಾತ್ ಯೋಜಿಸುವ (ಸಾಕ್ಷಾತ್ ತಿಳಿದುಕೊಳ್ಳುವ) ಸ್ಥಿತಿಯೇ ಸಹಭೋಜನವು.

ಅಯಂ ಶಿವೋ ಗುರುಶ್ಚೈಷ

ಜಗದೇತ ಚ್ಚರಾ ಚರಮ್ |

ಅಹಂ ಚೇತಿ ಮತಿರ್ಯಸ್ಯ

ನಾಸ್ತ್ಯಸೌ ವಿಶ್ವ ಭೋಜಕಃ || 14-36

ಇವನು ಶಿವನು, ಇವನು ಗುರುವು, ಇದು ಚರಾಚರವಾದ ಜಗತ್ತು ಮತ್ತು ನಾನು ಎಂಬ ಭೇದಬುದ್ಧಿಯು ಯಾರಲ್ಲಿ ಇರುತ್ತದೆಯೋ ಅವನು ವಿಶ್ವಭೋಜಕನಾಗನು (ಅವನು ಸಹಭೋಜನಸ್ಥಲಿಯಲ್ಲ).

#ಅಹಂ ಭೃತ್ಯಃ ಶಿವಃ ಸ್ವಾಮೀ

ಶಿಷ್ಯೋಹಂ ಗುರುರೇವ ವೈ |

ಇತಿ ಯಸ್ಯ ಮತಿರ್ನಾಸ್ತಿ

ಸ ಚಾದ್ವೈತ ಪದೇ ಸ್ಥಿತಃ || 14-37

ನಾನು ಭೃತ್ಯನು (ಸೇವಕನು), ಶಿವನು ಸ್ವಾಮಿಯು, ನಾನು ಶಿಷ್ಯನು, ಅವನು ಗುರುವು.-ಈ ಪ್ರಕಾರದ ಭೇದಬುದ್ಧಿಯು ಯಾರಿಗೆ ಇರುವುದಿಲ್ಲವೋ ಅವನು ಅದ್ವೈತ ಸ್ಥಾನದಲ್ಲಿರುತ್ತಾನೆ.

ಪರಾ ಹಂತಾಮಯೇ ಸ್ವಾತ್ಮ-

ಪಾವಕೇ ವಿಶ್ವ ಭಾಸ್ವತಿ |

ಇದಂತಾ ಹವ್ಯ ಹೋಮೇನ

ವಿಶ್ವ ಹೋಮೀತಿ ಕಥ್ಯತೇ || 14-38

ವಿಶ್ವಭಾಸಕವಾದ (ವಿಶ್ವವನ್ನು ಬೆಳಗುವ) ಪರಾಹಂತರೂಪವಾದ ತನ್ನ ಆತ್ಮವೆಂಬ ಅಗ್ನಿಯಲ್ಲಿ ಇದಂ ರೂಪವಾದ ಎಲ್ಲವನ್ನು ಹೋಮ ಮಾಡುವವನು ವಿಶ್ವಹೋಮಿಯೆಂದು ಕರೆಯಲ್ಪಡುತ್ತಾನೆ.

#ಅಹಂ ಶಿವೋ ಗುರುಶ್ಚಾಹಮ್

ಅಹಂ ವಿಶ್ವಂ ಚರಾಚರಮ್ |

ಯಯಾ ವಿಜ್ಞಾಯತೇ ಸಮ್ಯಕ್

ಪೂರ್ಣಾ ಹಂತೇತಿ ಸಾ ಸ್ಮೃತಾ || 14-39

ನಾನೇ ಶಿವನು, ನಾನೇ ಗುರುವು, ನಾನೇ ಚರಾಚರವಾದ ವಿಶ್ವವು ಎಂಬುದಾಗಿ ಯಾವುದರಿಂದ ಚೆನ್ನಾಗಿ ತಿಳಿಯಲ್ಪಡುತ್ತದೆಯೋ ಅದುವೇ ಪೂರ್ಣಾಹಂತವೆಂದು ಕರೆಯಲ್ಪಡುತ್ತದೆ.

ಆಧಾರ ವಹ್ನೌ ಚಿದ್ರೂಪೇ

ಭೇದಜಾತಂ ಜಗದ್ಧವಿಃ |

ಜುಹೋತಿ ಜ್ಞಾನ ಯಜ್ವಾ ಯಃ

ಸ ಜ್ಞೇಯೋ ವಿಶ್ವ ಹವ್ಯಭುಕ್ || 14-40

ಚಿದ್ರೂಪವಾದ ಅತ್ಮವೆಂಬ ಆಧಾರ ಅಗ್ನಿಯಲ್ಲಿ ಜಗತ್ತಿನ ಭೇದ ಸಮೂಹವೆಂಬ ಹವಿಸ್ಸನ್ನು ಯಾವಾತನು ಹೋಮ ಮಾಡುವನೋ ಅವನು ಜ್ಞಾನಯಜ್ವಾ (ಜ್ಞಾನಯಜ್ಞ ದೀಕ್ಷಿತನೆಂತಲೂ)ಮತ್ತು ವಿಶ್ವಹವ್ಯಭುಕ್ (ವಿಶ್ವವೆಂಬ ಹವಿಸ್ಸನ್ನು ಭುಂಜಿಸುವವನು)ಎಂದು ತಿಳಿದುಕೊಳ್ಳಬೇಕು.

#ಚಿದಾಕಾರೇ ಪರಾಕಾಶೇ

ಪರಮಾನಂದ ಭಾಸ್ವತಿ |

ವಿಲೀನ ಚಿತ್ತ ವೃತ್ತೀನಾಮ್

ಕಾ ವಾ ವಿಶ್ವಕ್ರಮಸ್ಥಿತಿಃ || 14-41

ಪರಾಕಾಶದಲ್ಲಿ (ಸರ್ವೊತ್ಕೃಷ್ಟವಾದ ಆಜ್ಞೆಯೆಂಬ ಸಂಜ್ಞೆಯುಳ್ಳ ಊಧ್ರ್ವ ಹೃದಯಾಕಾಶದಲ್ಲಿ), ಚಿದಾಕಾರರೂಪವುಳ್ಳ (ಅರಿವೇ ಸ್ವರೂಪವಾಗುಳ್ಳ) ಪರಮಾನಂದ ರೂಪವಾದ ಸೂರ್ಯನಲ್ಲಿ (ಪರಮಾನಂದ ರೂಪವಾದ ಮಹಾಲಿಂಗವೆಂಬ ಮಹಾಬೆಳಗಿನಲ್ಲಿ) ತನ್ನ ಚಿತ್ತವೃತ್ತಿಗಳನ್ನು ಅಡಗಿಸಿಕೊಂಡಿರುವ ಐಕ್ಯಸ್ಥಲಿಗೆ ವಿಶ್ವಕ್ರಮದ ಸ್ಥಿತಿಯು, ಜಗತ್ತಿನ ವ್ಯವಹಾರವು ಯಾವುದೂ ಇರುವುದಿಲ್ಲ.

ನಿರಸ್ತ ವಿಶ್ವ ಸಂಬಾಧೇ

ನಿಷ್ಕಲಂಕೇ ಚಿದಂಬರೇ |

ಭಾವಯೇಲ್ಲೀನ ಮಾತ್ಮಾನಮ್

ಸಾಮರಸ್ಯ ಸ್ವಭಾವತಃ || 14-42

ನಿರಾಕರಿಸಲ್ಪಟ್ಟು ವಿಶ್ವ ಸಂಬಾಧೆಯುಳ್ಳ (ಜಗತ್ತಿನ ಎಲ್ಲ ಬಾಧೆಗಳನ್ನು ತೊಲಗಿಸಿಕೊಂಡ), ನಿಷ್ಕಲಂಕವಾದ (ಕಲಂಕರಹಿತವಾದ), ಚಿದಾಕಾಶರೂಪವಾದ ಮಹಾಲಿಂಗದಲ್ಲಿ ಸಾಮರಸ್ಯ ಭಾವದಿಂದ ತನ್ನನ್ನು ಐಕ್ಯನನ್ನಾಗಿ ಭಾವಿಸಬೇಕು.

#ಸೈಷಾ ವಿದ್ಯಾ ಪರಾ ಜ್ಞೇಯಾ

ಸತ್ತಾನಂದ ಪ್ರಕಾಶಿನೀ |

ಮುಕ್ತಿ ರಿತ್ಯುಚ್ಯತೇ ಸದ್ಭಿಃ

ಜಗನ್ಮೋಹನಿ ವರ್ತಿನೀ || 14-43

ಸಚ್ಚಿದಾನಂದ ಸ್ವರೂಪವನ್ನು ಪ್ರಕಾಶಿಸುವ ಪರಾವಿದ್ಯೆಯನ್ನೇ (ಜ್ಞಾನವನ್ನೇ) ಶ್ರೇಷ್ಠವೆಂದು ತಿಳಿದುಕೊಳ್ಳಬೇಕು. ಜಗತ್ತಿನ ಮೋಹವನ್ನು ನಿವಾರಿಸುವ ಆ ವಿದ್ಯೆಯಿಂದಲೇ ಮುಕ್ತಿ ಸಿಗುವುದೆಂದು ಸಜ್ಜನರು ಹೇಳುತ್ತಾರೆ.

ಭಕ್ತಾದಿ ಧಾಮಾರ್ಪಿತ ಧರ್ಮ ಯೋಗಾತ್

ಪ್ರಾಪ್ತೈಕ ಭಾವಃ ಪರಮಾದ್ಭುತೇನ |

ಶಿವೇನ ಚಿದ್ವ್ಯೋ ಮಮಯೇನ ಸಾಕ್ಷಾತ್

ಮೋಕ್ಷಶ್ರಿಯೋ ಭಾಜನ ತಾಮುಪೈತಿ|1444

ಭಕ್ತಸ್ಥಲಾದಿಗಳಲ್ಲಿ ಹೇಳಿದ ಧರ್ಮಗಳನ್ನು (ಸದಾಚಾರಗಳನ್ನು) ಆಚರಿಸುವುದರಿಂದ, ಚಿದಾಕಾಶರೂಪವಾದ ಸಾಕ್ಷಾತ್ ಶಿವನೊಡನೆ ಪರಮಾದ್ಭುತವಾದ ರೂಪದಲ್ಲಿ ಐಕ್ಯಭಾವನೆಯನ್ನು ಹೊಂದಿ ಮೋಕ್ಷಶ್ರೀಗೆ ಭಾಜನನಾಗುತ್ತಾನೆ.

ಇತಿ ಸಹಭೋಜನಸ್ಥಲಮ್ ಪರಿಸಾಮಪ್ತಂ ಓಂ ತತ್ಸತ್ ಇತಿ

ಶ್ರೀ ಶಿವಗೀತೇಷು ಸಿದ್ಧಾಂತಾಗಮೇಷು

ಶಿವಾದ್ವೈತವಿದ್ಯಾಯಾಂ ಶಿವಯೋಗಶಾಸ್ತ್ರೇ

ಶ್ರೀರೇಣುಕಾಗಸ್ತ್ಯಸಂವಾದೇ ವೀರಶೈವಧರ್ಮನಿರ್ಣಯೇ

ಶ್ರೀಶಿವಯೋಗಿಶಿವಾಚಾರ್ಯವಿರಚಿತೇ ಶ್ರೀಸಿದ್ಧಾಂತಶಿಖಾಮಣೌ

ಐಕ್ಯಸ್ಥಲೇ ಐಕ್ಯಸ್ಥಲಾದಿ ಚತುರ್ವಿಧ ಸ್ಥಲ ಪ್ರಸಂಗೋ-ನಾಮ

ಚತುರ್ದಶಃ ಪರಿಚ್ಛೇದಃ ||

ಇಲ್ಲಿಗೆ ಸಹಭೋಜನಸ್ಥಲವು ಮುಗಿಯಿತು ಓಂ ತತ್ಸತ್ ಇತಿ ಶ್ರೀ ಶಿವನಿಂದ ಉಪದೇಶಿಸಲ್ಪಟ್ಟು, ಶ್ರೀ ಸಿದ್ಧಾಂತಾಗಮಗಳಲ್ಲಿಯ ಶಿವಾದ್ವೈತವಿದ್ಯಾರೂಪವೂ, ಶಿವಯೋಗಶಾಸ್ತ್ರವೂ, ಶ್ರೀ ರೇಣುಕಾಗಸ್ತ್ಯಸಂವಾದರೂಪವೂ, ಶ್ರೀ ವೀರಶೈವಧರ್ಮನಿರ್ಣಯವೂ, ಶ್ರೀ ಶಿವಯೋಗಿ ಶಿವಾಚಾರ್ಯ ವಿರಚಿತವಾದ ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿ ಐಕ್ಯಸ್ಥಲದಲ್ಲಿಯ ಐಕ್ಯಸ್ಥಲಾದಿ ನಾಲ್ಕು ವಿಧ ಸ್ಥಲಪ್ರಸಂಗವೆಂಬ ಹೆಸರಿನ ಹದಿನಾಲ್ಕನೆಯ ಪರಿಚ್ಛೇದವು ಮುಗಿದುದು.ತ