ತ್ರಯೋದಶಃ ಪರಿಚ್ಛೇದಃ

ಶರಣಸ್ಯ ಚತುರ್ವಿಧ ಸ್ಥಲ ಪ್ರಸಂಗಃ -ಶರಣಸ್ಥಲಮ್

|| ಅಗಸ್ತ್ಯ ಉವಾಚ ||

ಮಾಹೇಶ್ವರಃ ಪ್ರಸಾದೀತಿ

ಪ್ರಾಣಲಿಂಗೀತಿ ಬೋಧಿತಃ |

ಕಥಮೇಷ ಸಮಾದಿಷ್ಟಃ

ಪುನಃ ಶರಣಸಂಜ್ಞಕಃ || 13-1

ಹೇ ಗಣಾಧೀಶ್ವರನೇ) ಮಾಹೇಶ್ವರನೆಂದೂ, ಪ್ರಸಾದಿಯೆಂದೂ ಬೋಧಿಸಲ್ಪಟ್ಟ ಈ ಪ್ರಾಣಲಿಂಗಿಯೇ ಮತ್ತೆ ಯಾವ ಕಾರಣದಿಂದ ಶರಣನೆಂಬ ಹೆಸರುಳ್ಳವನಾಗಿ ಹೇಳಲ್ಪಡುವನು.

|| ಶ್ರೀ ರೇಣುಕ ಉವಾಚ ||

#ಅಂಗಲಿಂಗೀ ಜ್ಞಾನರೂಪಃ

ಸತೀ ಜ್ಞೇಯಃ ಶಿವಃ ಪತಿಃ |

ಯತ್ಸೌಖ್ಯಂ ತತ್ಸಮಾವೇಶೇ

ತದ್ವಾನ್ ಶರಣನಾಮವಾನ್ || 13-2

ಜ್ಞಾನರೂಪನಾದ (ಶಿವಜ್ಞಾನರೂಪಿಯಾದ) ಅಂಗಲಿಂಗಿಯಾದ ಪ್ರಾಣಲಿಂಗಿಯೇ ಸತಿಯೆಂದು, ಶಿವನು ಪತಿಯೆಂದು ತಿಳಿದುಕೊಂಡು ಇವರಿಬ್ಬರ ಸಮಾವೇಶದಲ್ಲಿ (ಸಮಾನ ಸಮರಸ ರೂಪವಾದ ಸಾಮರಸ್ಯದಲ್ಲಿ) ಯಾವ ಸೌಖ್ಯವುಂಟಾಗುವುದೋ, ಅದನ್ನು ಪಡೆದವನೇ ಶರಣನೆಂದು ಹೆಸರುಳ್ಳವನಾಗುವನು (ಶರಣನಾಗುವನು).

ಸ್ಥಲಮೇತತ್ಸಮಾಖ್ಯಾತಮ್

ಚತುರ್ಧಾ ಧರ್ಮಭೇದತಃ |

ಆದೌ ಶರಣಮಾಖ್ಯಾತಮ್

ತತಸ್ತಾಮ ಸವರ್ಜನಮ್ || 13-3

#ತತೋ ನಿರ್ದೆಶಮುದ್ದಿಷ್ಟಮ್

ಶೀಲಸಂಪಾದನಂ ತತಃ |

ಕ್ರಮಾಲ್ಲಕ್ಷಣಮೇತೇಷಾಮ್

ಕಥಯಾಮಿ ನಿಶಮ್ಯತಾಮ್ || 13-4

ಈ ಶರಣಸ್ಥಲವು ಧರ್ಮಭೇದದಿಂದ (ಆಚಾರ ಭೇದದಿಂದ) ನಾಲ್ಕು ಪ್ರಕಾರವಾಗಿ ಹೇಳಲ್ಪಟ್ಟಿರುತ್ತದೆ. ಅವುಗಳಲ್ಲಿ ಮೊದಲನೆಯದೇ ಶರಣಸ್ಥಲವು. ನಂತರ ತಾಮಸನಿರಸನಸ್ಥಲವು. ಅದಾದ ಬಳಿಕ ನಿರ್ದೆಶಸ್ಥಲವು. ತರುವಾಯ ಶೀಲಸಂಪಾದನ ಸ್ಥಲವು ಹೇಳಲ್ಪಡುತ್ತದೆ. ಇವೆಲ್ಲವುಗಳ ಲಕ್ಷಣಗಳನ್ನು ಕ್ರಮವಾಗಿ ಹೇಳುತ್ತೇವೆ (ಹೇ ಅಗಸ್ತ್ಯನೇ) ನೀನು ಕೇಳು.

ಅಥ ಶರಣಸ್ಥಲಮ್


ಸತೀವ ರಮಣೇ ಯಸ್ತು

ಶಿವೇ ಶಕ್ತಿಂ ವಿಭಾವಯನ್ |

ತದನ್ಯ ವಿಮುಖಃ ಸೋಯಮ್

ಜ್ಞಾತಃ ಶರಣನಾಮವಾನ್ || 13-5

ಪತಿವ್ರತೆಯಾದ ಸತಿಯು ತನ್ನ ರಮಣನ ವಿಷಯದಲ್ಲಿ ಅನನ್ಯವಾಗಿರುವಂತೆ ಶಿವನ ವಿಷಯದಲ್ಲಿ ತನ್ನನ್ನು ಶಕ್ತಿಯನ್ನಾಗಿ (ಸತಿಯನ್ನಾಗಿ) ವಿಭಾವಿಸಿ (ತಿಳಿದು)ತದನ್ಯವಿಮುಖನಾಗಿ(ಶಿವನಿಗೆ ಅನ್ಯವಾದ ದೇವತೆಗಳಿಗೆ ವಿಮುಖನಾಗಿ)ಇರುವನೋ ಅವನೇ ಶರಣನೆಂದು ತಿಳಿಯಲ್ಪಡುವನು.

#ಪರಿಜ್ಞಾತೇ ಶಿವೇ ಸಾಕ್ಷಾತ್

ಕೋ ವಾನ್ಯಮಭಿಕಾಂಕ್ಷತಿ |

ನಿಧಾನೇ ಮಹತಿ ಪ್ರಾಪ್ತೇ

ಕಃ ಕಾಚಂ ಯಾಚತೇನ್ಯತಃ || 13-6

ಶಿವನನ್ನು ಸಾಕ್ಷಾತ್ (ಪ್ರತ್ಯಕ್ಷವಾಗಿ) ತಿಳಿದುಕೊಂಡ ಮೇಲೆ ಯಾರು ತಾನೇ ಅನ್ಯದೇವರನ್ನು ಬಯಸುವನು. ಮಹತ್ತರವಾದ ನಿಧಿಯು ಪ್ರಾಪ್ತವಾಗಿರಲು ಅನ್ಯರಿಂದ ಯಾರು ತಾನೇ ಕಾಚನ್ನು (ಗಾಜನ್ನು) ಯಾಚಿಸಬಲ್ಲನು?

ಶಿವಾನಂದಂ ಸಮಾಸಾದ್ಯ

ಕೋ ವಾನ್ಯಮುಪತಿಷ್ಠತೇ |

ಗಂಗಾಮೃತಂ ಪರಿತ್ಯಜ್ಯ

ಕಃ ಕಾಂಕ್ಷೇನ್ಮೃಗತೃಷ್ಣಿಕಾಮ್ || 13-7

ಶಿವಾನಂದವನ್ನು ಪಡೆದುಕೊಂಡ ಮೇಲೆ ಯಾರು ತಾನೇ ಅನ್ಯದೇವರನ್ನು ಆಶ್ರಯಿಸುವರು? ಗಂಗಾಮೃತವನ್ನು ತ್ಯಜಿಸಿ ಮೃಗ ಮರೀಚಿಕೆಯನ್ನು (ಮೃಗಜಲವನ್ನು) ಯಾರು ತಾನೇ ಅಪೇಕ್ಷಿಸಬಲ್ಲರು?

#ಸಂಸಾರತಿಮಿರಚ್ಛೇದೇ

ವಿನಾ ಶಂಕರಭಾಸ್ಕರಮ್ |

ಪ್ರಭವಂತಿ ಕಥಂ ದೇವಾಃ

ಖದ್ಯೋತಾ ಇವ ದೇಹಿನಾಮ್ || 13-8

ಜೀವಿಗಳ ಸಂಸಾರವೆಂಬ ಕತ್ತಲೆಯನ್ನು ಕಳೆಯಲು ಶಂಕರನೆಂಬ ಸೂರ್ಯನ ಹೊರತಾಗಿ ಖದ್ಯೋತದಂತಿರುವ (ಮಿಂಚು ಹುಳುಗಳಂತಿರುವ) ಇತರ ದೇವತೆಗಳು ಹೇಗೆ ತಾನೇ ಸಮರ್ಥರಾಗಬಲ್ಲರು?

ಸಂಸಾರಾರ್ತಃ ಶಿವಂ ಯಾಯಾದ್

ಬ್ರಹ್ಮಾದ್ಯೈಃ ಕಿಂ ಫಲಂ ಸುರೈಃ |

ಚಕೋರಸ್ತೃಷಿತಃ ಪಶ್ಯೇತ್

ಚಂದ್ರಂ ಕಿಂ ತಾರಕಾ ಅಪಿ || 13-9

ಸಂಸಾರದಿಂದ ನೊಂದಾತನು ಶಿವನಿಗೇನೆ ಶರಣಾಗತನಾಗಬೇಕು. ಬ್ರಹ್ಮಾದಿ ಉಳಿದ ದೇವತೆಗಳಿಂದ ಏನು ಫಲ? ನೀರಡಿಸಿದ ಚಕೋರವು ಚಂದ್ರನನ್ನು ನೋಡುವುದಲ್ಲದೆ ತಾರೆಗಳನ್ನು ನೋಡುವುದೇ?

#ಶಿವ ಏವ ಸಮಸ್ತಾನಾಮ್

ಶರಣ್ಯಃ ಶರಣಾರ್ಥಿನಾಮ್ |

ಸಂಸಾರೋಗ ದಷ್ಟಾನಾಮ್

ಸರ್ವಜ್ಞಃ ಸರ್ವದೋಷಹಾ || 13-10

ಶಿವಜ್ಞಾನೇ ಸಮುತ್ಪನ್ನೇ

ಪರಾನಂದಃ ಪ್ರಕಾಶತೇ |

ತದಾಸಕ್ತಮನಾ ಯೋಗೀ

ನಾನ್ಯತ್ರ ರಮತೇ ಸುಧೀಃ || 13-11

ಸಂಸಾರವೆಂಬ ಉರಗದಿಂದ (ಸರ್ಪದಿಂದ) ಕಚ್ಚಲ್ಪಟ್ಟು ಅಂತೆಯೇ ಶರಣಾಗತರಾದ ಎಲ್ಲ ಜೀವಿಗಳ ಸರ್ವದೋಷಗಳನ್ನು ದೂರ ಮಾಡುವ ಸರ್ವಜ್ಞನಾದ ಶಿವನೋರ್ವನೇ ಶರಣ್ಯನಾಗಿದ್ದಾನೆ (ಶರಣಾಗತ ರಕ್ಷಕನಾಗಿದ್ದಾನೆ). ಶಿವಜ್ಞಾನವು ಉಂಟಾಗಲು ಪರಾನಂದವು (ಶಿವಾನಂದವು) ಪ್ರಕಾಶಿಸುತ್ತದೆ. ಆ ಪ್ರಕಾಶದಲ್ಲಿ ಆಸಕ್ತವಾದ ಮನಸ್ಸುಳ್ಳ ಜ್ಞಾನಿಯಾದ ಯೋಗಿಯು, ಬೇರೆ ಕಡೆಯಲ್ಲಿ ರಮಿಸುವುದಿಲ್ಲ (ಆನಂದಿಸುವುದಿಲ್ಲ).

#ತಸ್ಮಾತ್ ಸರ್ವಪ್ರಯತ್ನೇನ

ಶಂಕರಂ ಶರಣಂ ಗತಃ |

ತದನಂತ ಸುಖಂ ಪ್ರಾಪ್ಯ

ಮೋದತೇ ನಾನ್ಯಚಿಂತಯಾ || 13-12

ಆದ್ದರಿಂದ ಸರ್ವಪ್ರಯತ್ನಗಳನ್ನು ಮಾಡಿ ಶಂಕರನಿಗೆ ಶರಣಾಗತನಾದ ಶರಣನು ಶಿವನ ಅನಂತ ಸುಖವನ್ನು ಪಡೆದು ಬೇರೆ (ಯಾವ) ಚಿಂತೆಗಳಿಲ್ಲದೆ ಆನಂದಿಸುತ್ತಿರುತ್ತಾನೆ.

ಇತಿ ಶರಣಸ್ಥಲಂ

----------------------

ಅಥ ತಾಮಸನಿರಸನಸ್ಥಲಮ್

ಶಿವಾಸಕ್ತ ಪರಾನಂದ-

ಮೋದಿನಾ ಗುರುಣಾ ಯತಃ |

ನಿರಸ್ಯಂತೇ ತಮೋಭಾವಾಃ

ಸ ತಾಮಸ ನಿರಾಸಕಃ || 13-13

ಶಿವಾಸಕ್ತಿಯಿಂದ (ಶಿವಸಾಮ್ಯದಿಂದ) ಉಂಟಾದ ಪರಮಾನಂದದಿಂದಮೋದಿಸುತ್ತಿದ್ದ (ಆನಂದಪಡುತ್ತಿದ್ದ) ಅಂತೆಯೇ ಶ್ರೇಷ್ಠವಾದ ಶರಣಸ್ಥಲದ ಸಾಧಕನು ತನ್ನಲ್ಲಿ ಉಂಟಾಗುವ ತಮೋಗುಣದ ಭಾವನೆಗಳನ್ನು ನಿರಾಕರಿಸಿಕೊಳ್ಳುತ್ತಾನೆ. ಆದ್ದರಿಂದ ಅವನನ್ನು ತಾಮಸನಿರಾಸಕನೆಂದು ಕರೆಯುತ್ತಾರೆ.

#ಯಸ್ಯ ಜ್ಞಾನಂ ತಮೋಮಿಶ್ರಮ್

ನ ತಸ್ಯ ಗತಿರಿಷ್ಯತೇ |

ಸತ್ತ್ವಂ ಹಿ ಜ್ಞಾನಯೋಗಸ್ಯ

ನೈರ್ಮಲ್ಯಂ ವಿದುರುತ್ತಮಾಃ || 13-14

ಯಾರ ಜ್ಞಾನವು ತಮೋಗುಣ ಮಿಶ್ರವಾಗಿರುತ್ತದೆಯೋ ಅವರಿಗೆ ಸದ್ಗತಿಯು ದೊರೆಯುವುದಿಲ್ಲ. ಅಂತೆಯೇ ಉತ್ತಮರು (ಸತ್ಪುರುಷರು) ಸತ್ವಗುಣವೇ ಜ್ಞಾನವನ್ನು ನಿರ್ಮಲವಾಗಿರಿಸುವುದು ಎಂಬುದಾಗಿ ತಿಳಿದಿರುತ್ತಾರೆ.

ಶಮೋ ದಮೋ ವಿವೇಕಶ್ಚ

ವೈರಾಗ್ಯಂ ಪೂರ್ಣಭಾವನಾ |

ಕ್ಷಾಂತಿಃ ಕಾರುಣ್ಯಸಂಪತ್ತಿಃ

ಶ್ರದ್ಧಾ ಸತ್ಯಸಮುದ್ಭವಾ || 13-15

#ಶಿವಭಕ್ತಿಃ ಪರೋ ಧರ್ಮಃ

ಶಿವಜ್ಞಾನಸ್ಯ ಬಾಂಧವಾಃ |

ಏತೈರ್ಯುಕ್ತೋ ಮಹಾಯೋಗೀ

ಸಾತ್ತ್ವಿಕಃ ಪರಿಕೀರ್ತಿತಃ || 13-16

ಶಮೆ (ಅಂತರಿಂದ್ರಿಯ ನಿಗ್ರಹ), ದಮೆ (ಬಹಿರಿಂದ್ರಿಯ ನಿಗ್ರಹ), ವಿವೇಕ (ನಿತ್ಯಾನಿತ್ಯ ವಸ್ತು ವಿವೇಕ), ವೈರಾಗ್ಯ (ವಿಷಯ ವೈರಾಗ್ಯ), ಪೂರ್ಣಭಾವನೆ (ಅಖಂಡ ಧ್ಯಾನ), ಕ್ಷಾಂತಿ (ಕ್ಷಮೆ), ಕಾರುಣ್ಯ (ದಯೆ) ಮುಂತಾದ ಸಂಪತ್ತುಗಳು (ಅಧ್ಯಾತ್ಮಿಕ ಸಂಪತ್ತುಗಳು) ಸತ್ಯದಲ್ಲಿಯ ವಿಶ್ವಾಸ, ಶಿವಭಕ್ತಿ, ಪರೋಧರ್ಮ (ಶ್ರೇಷ್ಠವಾದ ಶಿವಾಚಾರಗಳು) – ಇವೆಲ್ಲವುಗಳು ಶಿವಜ್ಞಾನದ ಬಂಧುಗಳು. ಇವುಗಳಿಂದ (ಈ ಸದ್ಗುಣಗಳಿಂದ) ಕೂಡಿಕೊಂಡಿದ್ದ ಮಹಾಯೋಗಿಯೇ ಸಾತ್ವಿಕನೆಂದು ಹೇಳಿಸಿಕೊಳ್ಳುವನು.

ಕಾಮಕ್ರೋಧ ಮಹಾಮೋಹ-

ಮದ ಮಾತ್ಸರ್ಯ ವಾರಣಾಃ |

ಶಿವಜ್ಞಾನ ಮೃಗೇಂದ್ರಸ್ಯ

ಕಥಂ ತಿಷ್ಠಂತಿ ಸನ್ನಿಧೌ || 13-17

ಕಾಮ, ಕ್ರೋಧ, ಮೋಹ, ಮದ ಮತ್ತು ಮಾತ್ಸರ್ಯಗಳೆಂಬ ಆನೆಗಳು ಶಿವಜ್ಞಾನವೆಂಬ ಮೃಗೇಂದ್ರದ (ಸಿಂಹದ) ಸನ್ನಿಧಿಯಲ್ಲಿ ಹೇಗೆ ತಾನೇ ನಿಲ್ಲಲು ಸಾಧ್ಯ?

#ಯತ್ರ ಕುತ್ರಾಪಿ ವಾ ದ್ವೇಷ್ಟಿ

ಪ್ರಪಂಚೇ ಶಿವರೂಪಿಣಿ |

ಶಿವದ್ವೇಷೀ ಸ ವಿಜ್ಞೇಯೋ

ರಜಸಾವಿಷ್ಟ ಮಾನಸಃ || 13-18

ಶಿವರೂಪಿಣಿಯಾದ (ಶಿವಸ್ವರೂಪವಾದ) ಈ ಪ್ರಪಂಚದಲ್ಲಿ ಎಲ್ಲಿಯೇ ಆಗಲಿ ಅಥವಾ ಯಾರನ್ನೇ ಆಗಲಿ ಯಾರು ದ್ವೇಷಿಸುವರೋ ರಜೋಗುಣಿಯಾದ ಅವನು ಶಿವದ್ವೇಷಿಯೆಂದೂ ಮತ್ತು ರಜೋಗುಣಿಯೆಂದೂ ತಿಳಿದುಕೊಳ್ಳಬೇಕು.

ಯೋ ದ್ವೇಷ್ಟಿ ಸಕಲಾನ್ ಲೋಕಾನ್

ಯೋ ವಾಹಂಕುರುತೇ ಸದಾ |

ಯೋ ಸತ್ಯಭಾವನಾ ಯುಕ್ತಃ

ಸ ತಾಮಸ ಇತಿ ಸ್ಮೃತಃ || 13-19

ಯಾವನು ಲೋಕದ ಸಕಲಜೀವಿಗಳನ್ನು ದ್ವೇಷಿಸುವನೋ, ಯಾವಾಗಲೂ ಅಹಂಕಾರದಿಂದ ಕೂಡಿರುವನೋ ಮತ್ತು ಯಾವನು ಅಸತ್ಯ ಭಾವನೆಯಿಂದ ಯುಕ್ತನಾಗಿರುವನೋ (ಅಸತ್ಯ ವಸ್ತುಗಳ ಧ್ಯಾನಾಸಕ್ತನಾಗಿರುವನೋ) ಅವನು ತಾಮಸನೆಂದು ಕರೆಯಿಸಿಕೊಳ್ಳುವನು.

#ತಮೋ ಮೂಲಾ ಹಿ ಸಂಜಾತಾ

ರಾಗ ದ್ವೇಷಾದಿ ಪಾದಪಾಃ |

ಶಿವಜ್ಞಾನ ಕುಠಾರೇಣ

ಛೇದ್ಯಂತೇ ಹಿ ನಿರಂತರಮ್ || 13-20

ರಾಗ ದ್ವೇಷಾದಿಗಳೆಂಬ ಪಾದಪಗಳು (ಗಿಡಗಳು) ತಮೋ (ಗುಣ) ಮೂಲಕವಾಗಿಯೇ ಹುಟ್ಟುತ್ತವೆ. ಅವುಗಳು ಶಿವಜ್ಞಾನವೆಂಬ ಕುಠಾರದಿಂದ ನಿರಂತರವಾಗಿ ಛೇದಿಸಲ್ಪಡುತ್ತವೆ (ಕತ್ತರಿಸಲ್ಪಡುತ್ತವೆ).

ಶಿವಜ್ಞಾನೇ ಸಮುತ್ಪನ್ನೇ

ಸಹಸ್ರಾದಿತ್ಯ ಸನ್ನಿಭೇ |

ಕುತಸ್ತ ಮೋವಿಕಾರಾಸ್ಯುಃ

ಮಹತಾಂ ಶಿವಯೋಗಿನಾಮ್ || 13-21

ಸಾವಿರ ಸೂರ್ಯರ ಪ್ರಕಾಶಕ್ಕೆ ಸಮವಾದ ಶಿವಜ್ಞಾನವು ಉತ್ಪನ್ನವಾಗಲು ಅಂತಹ ಜ್ಞಾನವುಳ್ಳ ಮಹಾತ್ಮರಾದ ಶಿವಯೋಗಿಗಳಿಗೆ (ಶಿವಶರಣರಿಗೆ) ತಮೋಗುಣದ ವಿಕಾರಗಳು ಹೇಗೆ ತಾನೇ ಉಂಟಾಗುವುವು?

ಇತಿ ತಾಮಸ ನಿರಸನ ಸ್ಥಲಂ

---------------------------

ಅಥ ನಿರ್ದೆಶಸ್ಥಲಮ್

ನಿರಾಕೃತ್ಯ ತಮೋಭಾಗಮ್

ಸಂಸಾರಸ್ಯ ಪ್ರವರ್ತಕಮ್ |

ನಿರ್ದಿಶ್ಯತೇ ತು ಯಜ್ಜ್ಞಾನಮ್

ಸ ನಿರ್ದೆಶ ಇತಿ ಸ್ಮೃತಃ | 13-22

ಸಂಸಾರದ ಪ್ರವೃತ್ತಿಗೆ ಕಾರಣವಾದ ತಮೋಗುಣವನ್ನು ನಿರಾಕರಿಸಿ ಯಾವ ಜ್ಞಾನವು ನಿರ್ದೆಶಿಸಲ್ಪಡುವುದೋ (ಹೇಳಲ್ಪಡುವುದೋ) ಆ ಸ್ಥಲಕ್ಕೆ ನಿರ್ದೆಶಸ್ಥಲವೆಂದು ಕರೆಯಲಾಗಿದೆ.

#ಗುರುರೇವ ಪರಂ ತತ್ತ್ವಮ್

ಪ್ರಕಾಶಯತಿ ದೇಹಿನಾಮ್ |

ಕೋ ವಾ ಸೂರ್ಯಂ ವಿನಾ ಲೋಕೇ

ತಮಸೋ ವಿನಿವರ್ತಕಃ || 13-23

ಸೂರ್ಯನ ಹೊರತಾಗಿ ಈ ಜಗತ್ತಿನಲ್ಲಿ ಕತ್ತಲೆಯನ್ನು ನಿವಾರಿಸುವವನು ಹೇಗೆ ಬೇರೆ ಯಾರೂ ಇರುವುದಿಲ್ಲವೊ ಅದರಂತೆ ಎಲ್ಲ ಜೀವಿಗಳಿಗೆ ಗುರುವೇ ಪರತತ್ತ್ವವನ್ನು ಪ್ರಕಾಶಿಸುವನು (ತೋರಿಸುವನು).

ಅಂತರೇಣ ಗುರುಂ ಸಿದ್ಧಮ್

ಕಥಂ ಸಂಸಾರ ನಿಷ್ಕೃತಿಃ |

ನಿದಾನಜ್ಞಂ ವಿನಾ ವೈದ್ಯಮ್

ಕಿಂ ವಾ ರೋಗೋ ನಿವರ್ತತೇ ||13-24

ಸಿದ್ಧನಾದ (ಶಿವಜ್ಞಾನವುಳ್ಳ) ಗುರುವಿನ ಹೊರತಾಗಿ ಸಂಸಾರದ ನಿಷ್ಕೃತಿಯು (ನಿವೃತ್ತಿಯು) ಹೇಗೆ ತಾನೇ ಸಾಧ್ಯವಾದೀತು? ನಿದಾನವನ್ನು ಬಲ್ಲ (ರೋಗದ ಕಾರಣವರಿತು ಔಷಧವನ್ನು ಕೊಡಬಲ್ಲ) ವೈದ್ಯನ ಹೊರತಾಗಿ ರೋಗದ ನಿವಾರಣೆಯು ಹೇಗೆ ಸಾಧ್ಯ?

#ಅಜ್ಞಾನಮಲಿನಂ ಚಿತ್ತ-

ದರ್ಪಣಂ ಯೋ ವಿಶೋಧಯೇತ್ |

ಪ್ರಜ್ಞಾ ವಿಭೂತಿ ಯೋಗೇನ

ತಮಾಹುರ್ ಗುರುಸತ್ತಮಮ್ || 13-25

ಅಜ್ಞಾನದಿಂದ ಮಲಿನವಾದ ಚಿತ್ತವೆಂಬ ದರ್ಪಣವನ್ನು ಪ್ರಜ್ಞೆಯೆಂಬ ವಿಭೂತಿಯಿಂದ ಯಾರು ಸ್ವಚ್ಛಗೊಳಿಸುವರೋ ಅವರನ್ನು ಗುರುಶ್ರೇಷ್ಠರೆಂದು ಹೇಳುವರು.

ಅಪರೋಕ್ಷಿತ ತತ್ತ್ವಸ್ಯ

ಜೀವನ್ಮುಕ್ತ ಸ್ವಭಾವಿನಃ |

ಗುರೋಃ ಕಟಾಕ್ಷೇ ಸಂಸಿದ್ಧೇ

ಕೋವಾಲೋಕೇಷು ದುರ್ಲಭಃ || 13-26

ಶಿವತತ್ತ್ವವನ್ನು ಅಪರೋಕ್ಷಗೊಳಿಸಿಕೊಂಡ (ಸಾಕ್ಷಾತ್ಕರಿಸಿಕೊಂಡ) ಜೀವನ್ಮುಕ್ತ ಲಕ್ಷಣದಿಂದ ಕೂಡಿದ ಗುರುವಿನ ಕೃಪಾಕಟಾಕ್ಷವು ದೊರೆತರೆ ಮೂರೂ ಲೋಕಗಳಲ್ಲಿ ಯಾವ ವಸ್ತುವು ತಾನೇ ದುರ್ಲಭವಾದೀತು.

#ಕೈವಲ್ಯ ಕಲ್ಪತರವೋ

ಗುರವಃ ಕರುಣಾಲಯಾಃ |

ದುರ್ಲಭಾ ಹಿ ಜಗತ್ಯಸ್ಮಿನ್

ಶಿವಾದ್ವೈತ ಪರಾಯಣಾಃ || 13-27

ಕೈವಲ್ಯವನ್ನು ಕೊಡುವುದಕ್ಕೆ ಕಲ್ಪವೃಕ್ಷದಂತಿರುವ, ಕರುಣಾಲಯರಾದ (ದಯಾನಿಧಿಗಳಾದ), ಶಿವಾದ್ವೈತ ತತ್ತ್ವದಲ್ಲಿ ತತ್ಪರರಾದ ಗುರುಗಳು ಈ ಜಗತ್ತಿನಲ್ಲಿ ನಿಶ್ಚಯವಾಗಿ ದುರ್ಲಭರಾಗಿರುತ್ತಾರೆ.

ಕ್ಷೀರಾಬ್ಧಿರಿವ ಸಿಂಧೂನಾಮ್

ಸುಮೇರುರಿವ ಭೂಭೃತಾಮ್ |

ಗ್ರಹಾಣಾಮಿವ ತಿಗ್ಮಾಂಶುಃ

ಮಣೀನಾಮಿವ ಕೌಸ್ತುಭಃ || 13-28

#ದ್ರುಮಾಣಾಮಿವ ಭದ್ರಶ್ರೀಃ

ದೇವಾನಾಮಿವ ಶಂಕರಃ |

ಗುರುಃ ಶಿವಃ ಪರಃ ಶ್ಲಾಘ್ಯೋ

ಗುರೂಣಾಂ ಪ್ರಾಕೃತಾತ್ಮನಾಮ್ || 13-29

ಸಾಗರಗಳಲ್ಲಿ ಕ್ಷೀರಸಾಗರದಂತೆ, ಪರ್ವತಗಳಲ್ಲಿ ಸುಮೇರುಪರ್ವತದಂತೆ, ನವಗ್ರಹಗಳಲ್ಲಿ ಸೂರ್ಯನಂತೆ, ಮಣಿಗಳಲ್ಲಿ ಕೌಸ್ತುಭಮಣಿಯಂತೆ, ಮರಗಳಲ್ಲಿ ಚಂದನಮರದಂತೆ (ಗಂಧದ ಮರದಂತೆ), ದೇವತೆಗಳಲ್ಲಿ ಶಂಕರನಂತೆ, ಪ್ರಾಕೃತರಾದ ಗುರುಗಳಲ್ಲಿ ಶಿವಸ್ವರೂಪನಾದ ಗುರು ಶ್ಲಾಘ್ಯನಾಗಿದ್ದಾನೆ (ಸ್ತುತ್ಯನಾಗಿದ್ದಾನೆ ಅಥವಾ ಶ್ರೇಷ್ಠನಾಗಿದ್ದಾನೆ).

ಇತಿ ನಿರ್ದೆಶಸ್ಥಲಂ

------------------------

ಅಥ ಶೀಲ ಸಂಪಾದನಸ್ಥಲಮ್

ಜಿಜ್ಞಾಸಾ ಶಿವತತ್ತ್ವಸ್ಯ

ಶೀಲಮಿತ್ಯುಚ್ಯತೇ ಬುಧೈಃ |

ನಿರ್ದೆಶ್ಯಯೋಗಾ ದಾರ್ಯಾಣಾಮ್

ತದ್ವಾನ್ ಶೀಲೀತಿ ಕಥ್ಯತೇ || 13-30

ಆರ್ಯರ (ಗುರುಗಳ) ನಿರ್ದೆಶಯೋಗದಿಂದ (ನಿರ್ದೆಶದಿಂದ) ಶಿವತತ್ತ್ವವನ್ನು ತಿಳಿದುಕೊಳ್ಳುವ ಜಿಜ್ಞಾಸೆಯೇ (ಉತ್ಕಟವಾದ ಇಚ್ಛೆಯೇ) ಶೀಲವೆಂಬುದಾಗಿ ಜ್ಞಾನಿಗಳಿಂದ ಹೇಳಲಾಗಿದೆ. ಆ ಶೀಲವುಳ್ಳವನೇ ‘ಶೀಲಿ’ ಎಂದು ಕರೆಯಲ್ಪಡುತ್ತಾನೆ.

#ಪ್ರಪನ್ನಾರ್ತಿಹರೇ ದೇವೇ

ಪರಮಾತ್ಮ ನಿ ಶಂಕರೇ |

ಭಾವಸ್ಯ ಸ್ಥಿರತಾಯೋಗಃ

ಶೀಲಮಿತ್ಯುಚ್ಯತೇ ಬುಧೈಃ || 13-31

ಪ್ರಪನ್ನರಾದವರ (ಮೊರೆ ಹೊಕ್ಕವರ) ಅರ್ತಿಹರನಾದ (ದುಃಖವನ್ನು ದೂರಮಾಡುವ) ದೇವನಾದ ಮತ್ತು ಪರಮಾತ್ಮನಾದ ಶಂಕರನಲ್ಲಿ ತನ್ನ ಭಾವನೆಯನ್ನು ಸ್ಥಿರಗೊಳಿಸುವ ಯೋಗವೇ ‘ಶೀಲ’ವೆಂಬುದಾಗಿ ಜ್ಞಾನಿಗಳು ಹೇಳುತ್ತಾರೆ.

ಶೀಲಂ ಶಿವೈಕವಿಜ್ಞಾನಮ್

ಶಿವಧ್ಯಾನೈಕ ತಾನತಾ |

ಶಿವಪ್ರಾಪ್ತಿ ಸಮುತ್ಕಂಠಾ

ತದ್ಯೋಗೀ ಶೀಲವಾನ್ ಸ್ಮೃತಃ || 13-32

ಶಿವನೊಬ್ಬನನ್ನೇ ತಿಳಿದುಕೊಳ್ಳುವುದು, ಶಿವಧ್ಯಾನದಲ್ಲಿ ಏಕಾಗ್ರತೆಯು ಮತ್ತು ಶಿವನನ್ನು ಪ್ರಾಪ್ತಿಮಾಡಿಕೊಳ್ಳುವಲ್ಲಿ ಉತ್ಕಟವಾದ ಬಯಕೆಯೇ ‘ಶೀಲ’ವೆಂದು ಕರೆಯಲಾಗುವುದು. ಆ ‘ಶೀಲ’ವುಳ್ಳವನೇ ‘ಶೀಲವಾನ’ನೆಂದು ಹೇಳಿಸಿಕೊಳ್ಳುವನು.

#ಶಿವಾದನ್ಯತ್ರ ವಿಜ್ಞಾನೇ

ವೈಮುಖ್ಯಂ ಯಸ್ಯ ಸುಸ್ಥಿರಮ್ |

ತದಾಸಕ್ತ ಮನೋವೃತ್ತಿಃ

ತಮಾಹುಃ ಶೀಲಭಾಜನಮ್ || 13-33

ಶಿವನನ್ನು ಹೊರತುಪಡಿಸಿ ಅನ್ಯದೇವತೆಗಳನ್ನು ತಿಳಿದುಕೊಳ್ಳುವ ವಿಷಯದಲ್ಲಿ ವಿಮುಖತೆಯು ಯಾರಲ್ಲಿ ಸುಸ್ಥಿರವಾಗಿರುವುದೋ ಮತ್ತು ಯಾರು ಶಿವನೊಬ್ಬನಲ್ಲಿಯೇ ಆಸಕ್ತವಾದ ಮನೋವೃತ್ತಿಯುಳ್ಳವನೋ, ಅವನಿಗೆ ‘ಶೀಲಭಾಜನ’ನೆಂದು ಕರೆಯುವರು.

ಪತಿವ್ರತಾಯಾ ಯಚ್ಛೀಲಮ್

ಪತಿರಾಗಾತ್ ಪ್ರಶಸ್ಯತೇ |

ತಥಾ ಶಿವಾನುರಾಗೇಣ

ಸುಶೀಲೋಭಕ್ತ ಉಚ್ಯತೇ || 13-34

ಪತಿವ್ರತೆಯಾದ ಹೆಣ್ಣುಮಗಳ ಶೀಲವು ಪತಿಯ ಮೇಲಿನ ಪ್ರೀತಿಯಿಂದ ಹೇಗೆ ಪ್ರಶಂಸಿಸಲ್ಪಡುತ್ತದೆಯೋ ಅದರಂತೆಯೇ ಶಿವನ ಮೇಲಿನ ಅನುರಾಗದಿಂದಲೇ ಸುಶೀಲನು ಅಭಕ್ತನೆಂದು (ಶಿವನಿಂದ ಅವಿಭಕ್ತನೆಂದು, ಶಿವನಿಂದ ಬೇರ್ಪಡದವನೆಂದು) ಹೇಳಲಾಗುವನು.

#ಪತಿಂ ವಿನಾ ಯಥಾ ಸ್ತ್ರೀಣಾಮ್

ಸೇವಾನ್ಯಸ್ಯ ತು ಗರ್ಹಣಾ |

ಶಿವಂ ವಿನಾ ತಥಾನ್ಯೇಷಾಮ್

ಸೇವಾ ನಿಂದ್ಯಾ ಕೃತಾತ್ಮನಾಮ್ || 13-35

ಸ್ತ್ರೀಯರಿಗೆ ಪತಿಯನ್ನು ಹೊರತುಪಡಿಸಿ ಅನ್ಯರ (ಪರಪುರುಷರ) ಸೇವೆಯು ಹೇಗೆ ಗರ್ಹಣೀಯವಾದುದೋ (ನಿಂದಿತವಾದದ್ದೋ) ಅದರಂತೆ ಕೃತಾತ್ಮರಿಗೆ (ಕೃತಕೃತ್ಯರಾದ ಶರಣಸ್ಥಲ ಸಾಧಕರಿಗೆ)ಶಿವನನ್ನು ಹೊರತುಪಡಿಸಿ ಅನ್ಯದೇವರ ಸೇವೆಯು ನಿಂದನೀಯವಾಗಿದೆ.

ಬಹುನಾತ್ರ ಕಿಮುಕ್ತೇನ

ಶಿವಜ್ಞಾನೈಕ ನಿಷ್ಠತಾ |

ಶೀಲಮಿತ್ಯುಚ್ಯತೇ ಸದ್ಭಿಃ

ಶೀಲವಾಂಸ್ತತ್ಪರೋ ಮತಃ || 13-36

ಶೀಲದ ವಿಷಯದಲ್ಲಿ ಹೆಚ್ಚು ಹೇಳುವುದರಿಂದ ಏನು ಪ್ರಯೋಜನ? ಶಿವಜ್ಞಾನೈಕ ನಿಷ್ಠತೆಯೇ(ಶಿವಜ್ಞಾನವೊಂದರಲ್ಲಿಯೇ ನಿಷ್ಠೆ ಇರುವಿಕೆಯೇ) ‘ಶೀಲ’ವೆಂದು ಸತ್ಪುರುಷರಿಂದ ಹೇಳಲ್ಪಡುತ್ತದೆ. ಆದ್ದರಿಂದ ‘ಶೀಲವಂತ’ನನ್ನು ಶಿವಜ್ಞಾನತತ್ಪರನೆಂದು ತಿಳಿದು ಕೊಳ್ಳಬೇಕು.

#ಶಿವಾತ್ಮಬೋಧೈಕ ರತಃ ಸ್ಥಿರಾಶಯಃ

ಶಿವಂ ಪ್ರಪನ್ನೋ ಜಗತಾಮಧೀಶಮ್ |

ಶಿವೈಕ ನಿಷ್ಠಾಹಿತ ಶೀಲಭೂಷಣಃ

ಶಿವೈಕ್ಯವಾನೇಷ ಹಿ ಕಥ್ಯತೇ ಬುಧೈಃ-37

ಶಿವಾತ್ಮಬೋಧೆಯಲ್ಲಿಯೇ (ಲಿಂಗ-ಅಂಗಗಳ ಐಕ್ಯಜ್ಞಾನದಲ್ಲಿ) ಏಕರತನಾಗಿ (ನಿಷ್ಠೆಯುಳ್ಳವನಾಗಿ), ಜಗತ್ತಿಗೆ ಅಧೀಶ್ವರನಾದ (ಜಗತ್ತಿಗೆ ಒಡೆಯನಾದ) ಶಿವನಿಗೆ ಪ್ರಪನ್ನನಾದ (ರಕ್ಷಕನೆಂದು ಮೊರೆಹೊಕ್ಕ), ಸ್ಥಿರಾಶಯನಾದ (ದೃಢವಾದ ಭಾವನೆಯುಳ್ಳ), ಶಿವನಲ್ಲಿ ತನ್ನ ಏಕನಿಷ್ಠೆಯೆಂಬ ‘ಶೀಲ’ವನ್ನೇ ಆಭರಣವನ್ನಾಗಿಮಾಡಿಕೊಂಡಶರಣಸ್ಥಲದ ಸಾಧಕನನ್ನು ಶಿವೈಕ್ಯನೆಂದು ಬುಧರು(ಜ್ಞಾನಿಗಳು) ಹೇಳುತ್ತಾರೆ.

ಇತಿ ಶೀಲಸಂಪಾದನ ಸ್ಥಲಂ

ಓಂ ತತ್ಸತ್ ಇತಿ

ಶ್ರೀ ಶಿವಗೀತೇಷು ಸಿದ್ಧಾಂತಾಗಮೇಷು ಶಿವಾದ್ವೈತವಿದ್ಯಾಯಾಂ

ಶಿವಯೋಗಶಾಸ್ತ್ರೇ ಶ್ರೀರೇಣುಕಾಗಸ್ತ್ಯಸಂವಾದೇ ವೀರಶೈವಧರ್ಮನಿರ್ಣಯೇ

ಶ್ರೀಶಿವಯೋಗಿಶಿವಾಚಾರ್ಯವಿರಚಿತೇ ಶ್ರೀಸಿದ್ಧಾಂತಶಿಖಾಮಣೌ

ಶರಣಸ್ಥಲೇ ಶರಣಸ್ಥಲಾದಿಚತುರ್ವಿಧಸ್ಥಲ ಪ್ರಸಂಗೋ ನಾಮ

ತ್ರಯೋದಶಃ ಪರಿಚ್ಛೇದಃ ||

ಇಲ್ಲಿಗೆ ಶೀಲಸಂಪಾದನಸ್ಥಲವು ಮುಗಿಯಿತು ಓಂ ತತ್ಸತ್ ಇತಿ ಶ್ರೀ ಶಿವನಿಂದ ಉಪದೇಶಿಸಲ್ಪಟ್ಟು ಶ್ರೀ ಸಿದ್ಧಾಂತಾಗಮಗಳಲ್ಲಿಯ ಶಿವಾದ್ವೈತವಿದ್ಯಾರೂಪವೂ, ಶಿವಯೋಗಶಾಸ್ತ್ರವೂ, ಶ್ರೀ ರೇಣುಕಾಗಸ್ತ್ಯ ಸಂವಾದರೂಪವೂ, ಶ್ರೀವೀರಶೈವಧರ್ಮನಿರ್ಣಯವೂ, ಶ್ರೀ ಶಿವಯೋಗಿ ಶಿವಾಚಾರ್ಯ ವಿರಚಿತವೂ ಆದ ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿ ಶರಣಸ್ಥಲದಲ್ಲಿಯ ಶರಣಸ್ಥಲಾದಿ ನಾಲ್ಕು ವಿಧ ಸ್ಥಲಪ್ರಸಂಗವೆಂಬ ಹೆಸರಿನ ಹದಿಮೂರನೆಯ ಪರಿಚ್ಛೇದವು ಮುಗಿದುದು.