ದ್ವಾದಶಃ ಪರಿಚ್ಛೇದಃ
ಪ್ರಾಣಲಿಂಗಿನಃ ಪಂಚವಿಧ ಸ್ಥಲ ಪ್ರಸಂಗಃ -
ಪ್ರಾಣಲಿಂಗಿಸ್ಥಲಮ್
|| ಅಗಸ್ತ್ಯ ಉವಾಚ ||
ಭಕ್ತೋ ಮಾಹೇಶ್ವರ ಶ್ಚೇತಿ
ಪ್ರಸಾದೀತಿ ನಿಬೋಧಿತಃ |
ಏಕ ಏವ ಕಥಂ ಚೈಷಃ
ಪ್ರಾಣಲಿಂಗೀತಿ ಕಥ್ಯತೇ || 12-1
ಹೇ ಗಣಾಧೀಶ್ವರನೇ, ಒಬ್ಬನೇ ಆದ ಸಾಧಕನನ್ನು ಭಕ್ತನೆಂತಲೂ,
ಮಾಹೇಶ್ವರನೆಂತಲೂ ಮತ್ತು ಪ್ರಸಾದಿಯೆಂತಲೂ ತಾವು ಬೋಧಿಸಿದ್ದೀರಿ.
ಆ ಒಬ್ಬನೇ ಆದ ಸಾಧಕನು ಪ್ರಾಣಲಿಂಗಿಯೆಂದು ಹೇಗೆ ತಾನೆ
ಕರೆಸಿಕೊಳ್ಳುವನು?
|| ಶ್ರೀ ರೇಣುಕ ಉವಾಚ ||
ಭಕ್ತೋ ಮಾಹೇಶ್ವರಶ್ಚೈಷ
ಪ್ರಸಾದೀತಿ ಚ ಕೀರ್ತಿತಃ |
ಕರ್ಮ ಪ್ರಾಧಾನ್ಯಯೋಗೇನ
ಜ್ಞಾನ ಯೋಗೋಸ್ಯ ಕಥ್ಯತೇ || 12-2
ಕರ್ಮಯೋಗದ ಪ್ರಾಧಾನ್ಯದಿಂದ ಒಬ್ಬನೇ ಆದ ವ್ಯಕ್ತಿಯು ಭಕ್ತ,
ಮಹೇಶ ಮತ್ತು ಪ್ರಸಾದಿಯೆಂದು ಕೀರ್ತಿಸಲ್ಪಡುತ್ತಾನೆ.
ಅವನಿಗೇನೇ ಈಗ ಜ್ಞಾನಯೋಗವು ಹೇಳಲ್ಪಡುತ್ತದೆ.
ಲಿಂಗಂ ಚಿದಾತ್ಮಕಂ ಬ್ರಹ್ಮ
ತಚ್ಛಕ್ತಿಃ ಪ್ರಾಣ ರೂಪಿಣೀ |
ತದ್ರೂಪಲಿಂಗವಿಜ್ಞಾನೀ
ಪ್ರಾಣಲಿಂಗೀತಿ ಕಥ್ಯತೇ || 12-3
ಚಿದಾತ್ಮಕವಾದ (ಸಂವಿದ್ರೂಪವಾದ) ಬ್ರಹ್ಮವೇ ಲಿಂಗವು.
ಅದರ ಶಕ್ತಿಯೇ ಪ್ರಾಣರೂಪವು. ತದ್ರೂಪವಾದ (ಶಿವ-ಶಕ್ತ್ಯಾತ್ಮಕವಾದ)
ಆ ಪ್ರಾಣಲಿಂಗದ ಅನುಭಾವಿಯೇ ಪ್ರಾಣಲಿಂಗಿಯೆಂದು ಹೇಳಲ್ಪಡುತ್ತಾನೆ.
ಪ್ರಾಣಲಿಂಗಿ ಸ್ಥಲಂ ಚೈತತ್
ಪಂಚಸ್ಥಲ ಸಮನ್ವಿತಮ್ |
ಪ್ರಾಣಲಿಂಗಿ ಸ್ಥಲಂ ಚಾದೌ
ಪ್ರಾಣಲಿಂಗಾರ್ಚನಂ ತತಃ || 12-4
ಈ ಪ್ರಾಣಲಿಂಗಸ್ಥಲವು ಐದು ಅವಾಂತರ ಸ್ಥಲಗಳಿಂದ ಕೂಡಿರುತ್ತದೆ.
ಅವುಗಳಲ್ಲಿ ಮೊದಲನೆಯದು ಪ್ರಾಣಲಿಂಗಿಸ್ಥಲವು.
ಅದಾದ ನಂತರ ಪ್ರಾಣಲಿಂಗಾರ್ಚನ ಸ್ಥಲವು.
ಶಿವಯೋಗ ಸಮಾಧಿಶ್ಚ
ತತೋ ಲಿಂಗ ನಿಜ ಸ್ಥಲಮ್ |
ಅಂಗಲಿಂಗ ಸ್ಥಲಂ ಚಾಥ
ಕ್ರಮಾದೇಷಾಂ ಭಿದೋಚ್ಯತೇ || 12-5
ನಂತರ ಶಿವಯೋಗ ಸಮಾಧಿ ಸ್ಥಲವು. ತರುವಾಯ ಲಿಂಗನಿಜಸ್ಥಲವು. ಅನಂತರ ಅಂಗಲಿಂಗಸ್ಥಲವು. (ಇನ್ನು ಮೇಲೆ) ಕ್ರಮವಾಗಿ ಇವುಗಳ ಭೇದವನ್ನು ಹೇಳಲಾಗುತ್ತದೆ.
ಅಥ ಪ್ರಾಣಲಿಂಗಿಸ್ಥಲಮ್
ಪ್ರಾಣಾಪಾನ ಸಮಾಘಾತಾತ್
ಕಂದಮಧ್ಯಾದ್ಯ ದುತ್ಥಿತಮ್ |
ಪ್ರಾಣಲಿಂಗಂ ತದಾಖ್ಯಾತಮ್
ಪ್ರಾಣಾಪಾನ ನಿರೋಧಿಭಿಃ || 12-6
ಪ್ರಾಣ ಮತ್ತು ಅಪಾನಗಳ ಸಮಾಘಾತದಿಂದ (ಸಂಘಟ್ಟನೆಯಿಂದ)
ಕಂದದ ಮಧ್ಯದಲ್ಲಿ (ನಾಭಿ ಕಂದದ ಮಧ್ಯದಿಂದ) ಉತ್ಪನ್ನವಾದ
ಆ ಜ್ಯೋತಿಯೇ ಪ್ರಾಣಲಿಂಗವೆಂದು ಪ್ರಾಣಾಪಾನ ನಿರೋಧಿಗಳಾದ ಶಿವಯೋಗಿಗಳು ಹೇಳುತ್ತಾರೆ.
ಪ್ರಾಣೋ ಯತ್ರ ಲಯಂ ಯಾತಿ
ಭಾಸ್ಕರೇ ತುಹಿನಂ ಯಥಾ |
ತತ್ಪ್ರಾಣಲಿಂಗ ಮುದ್ದಿಷ್ಟಮ್
ತದ್ಧಾರೀ ಸ್ಯಾತ್ ತದಾಕೃತಿಃ || 12-7
ಸೂರ್ಯನಲ್ಲಿ ಮಂಜು ಕರಗುವಂತೆ ಯಾವ ಜ್ಯೋತಿಯಲ್ಲಿ ಪ್ರಾಣವು ಲಯವಾಗುವುದೋ ಅದುವೇ ಪ್ರಾಣಲಿಂಗವೆಂದು ಹೇಳಲ್ಪಡುವುದು. ಅದನ್ನು ಧರಿಸಿದವನು ಪ್ರಾಣಲಿಂಗಿಯಾಗುತ್ತಾನೆ.
ಜ್ಞಾನಿನಾಂ ಯೋಗಯುಕ್ತಾನಾಮ್
ಅಂತಃ ಸ್ಫುರತಿ ದೀಪವತ್ |
ಚಿದಾಕಾರಂ ಪರಂ ಬ್ರಹ್ಮ-
ಲಿಂಗಮಜ್ಞೈರ್ನ ಭಾವ್ಯತೇ || 12-8
ಶಿವಯೋಗಯುಕ್ತರಾದ ಜ್ಞಾನಿಗಳ ಅಂತರಂಗದಲ್ಲಿ (ಹೃದಯದಲ್ಲಿ) ಚಿದ್ರೂಪವಾದ ಪರಬ್ರಹ್ಮವು ದೀಪದಂತೆ ಸ್ಫುರಿಸುವುದು. ಈ ಪ್ರಾಣಲಿಂಗವು ಅಜ್ಞರಿಂದ ಭಾವಿಸಲು ಸಾಧ್ಯವಾಗುವುದಿಲ್ಲ.
ಅಂತಃಸ್ಥಿತಂ ಪರಂ ಲಿಂಗಮ್
ಜ್ಯೋತೀರೂಪಂ ಶಿವಾತ್ಮಕಮ್ |
ವಿಹಾಯ ಬಾಹ್ಯಲಿಂಗಸ್ಥಾ
ವಿಮೂಢಾ ಇತಿ ಕೀರ್ತಿತಾಃ || 12-9
ಅಂತರಂಗದಲ್ಲಿರುವ ಜ್ಯೋತಿರೂಪವಾದ, ಶಿವಾತ್ಮಕವಾದ, ಶ್ರೇಷ್ಠವಾದ ಆ ಪ್ರಾಣಲಿಂಗವನ್ನು ಬಿಟ್ಟು ಬಾಹ್ಯ (ಸ್ಥಾವರ) ಲಿಂಗದಲ್ಲಿ ಆಸಕ್ತರಾದವರು ಮೂಢರೆಂದು ಕರೆಸಿಕೊಳ್ಳುತ್ತಾರೆ.
ಸಂವಿಲ್ಲಿಂಗ ಪರಾಮರ್ಶಿ
ಬಾಹ್ಯ ವಸ್ತು ಪರಾಙ್ಮುಖಃ |
ಯಃ ಸದಾ ವರ್ತತೇ ಯೋಗೀ
ಪ್ರಾಣಲಿಂಗೀ ಸ ಉಚ್ಯತೇ || 12-10
ಆದ್ದರಿಂದ ಯಾವಾಗಲೂ ಬಾಹ್ಯವಸ್ತುಗಳಲ್ಲಿ (ಸ್ಥಾವರಲಿಂಗ ಮತ್ತು ಅದರ ಪೂಜಾ ಪರಿಕರಗಳಲ್ಲಿ) ಪರಾಙ್ಮುಖನಾಗಿ ಸಂವಿಲ್ಲಿಂಗದ (ಜ್ಞಾನರೂಪವಾದ ಪ್ರಾಣಲಿಂಗದ) ಪರಾಮರ್ಶಿಯಾಗಿರುವ (ಆ ವಿಚಾರದಲ್ಲೇ ಇರುವ) ಯೋಗಿಯು ಪ್ರಾಣಲಿಂಗಿಯೆಂದು ಕರೆಯಲ್ಪಡುತ್ತಾನೆ.
ಮಾಯಾವಿಕಲ್ಪಜಂ ವಿಶ್ವಮ್
ಹೇಯಂ ಸಂಚಿಂತ್ಯ ನಿತ್ಯಶಃ |
ಚಿದಾನಂದಮಯೇ ಲಿಂಗೇ
ವಿಲೀನಃ ಪ್ರಾಣಲಿಂಗವಾನ್ || 12-11
ಮಾಯವಿಕಲ್ಪದಿಂದ ಜನಿಸಿದ (ಮಾಯೆಯ ಗುಣಭೇದಗಳಿಂದ ಹುಟ್ಟಿದ) ಈ ವಿಶ್ವವು ಹೇಯವಾದುದು ಎಂಬುದಾಗಿ ನಿತ್ಯವೂ ಚಿಂತಿಸುತ್ತಾ, ಚಿದಾನಂದ ರೂಪವಾದ ಪ್ರಾಣಲಿಂಗದಲ್ಲಿಯೇ ವಿಲೀನನಾದವನು).
ಸತ್ತಾ ಪ್ರಾಣಮಯೀ ಶಕ್ತಿಃ
ಸದ್ರೂಪಂ ಪ್ರಾಣ ಲಿಂಗಕಮ್ |
ತತ್ಸಾಮರಸ್ಯ ವಿಜ್ಞಾನಾತ್
ಪ್ರಾಣಲಿಂಗೀತಿ ಕಥ್ಯತೇ || 12-12
(ಮನೋಲಯ ಮಾಡಿಕೊಂಡವನು) ಪ್ರಾಣಲಿಂಗಿಯು (ತಾನು ಚಿದ್ರೂಪನಾಗಿದ್ದೇನೆ ಎಂಬ ತನ್ನ ಚೈತನ್ಯದ ಅರಿವುಳ್ಳಾತನೇ ಪ್ರಾಣಲಿಂಗಿಯು ಸತ್ತಾತ್ಮಕ ಭಾವರೂಪವಾದುದು ಪ್ರಾಣಮಯೀ ಶಕ್ತಿಯು, ಸದ್ರೂಪವಾದುದು ಪ್ರಾಣಲಿಂಗವು. ಇವೆರಡರ ಸಾಮರಸ್ಯದ ವಿಜ್ಞಾನವುಳ್ಳವನೇ (ಅನುಭವವುಳ್ಳವನೇ) ಪ್ರಾಣಲಿಂಗಿಯೆಂದು ಕರೆಸಿಕೊಳ್ಳುವನು (ಸದ್ವಸ್ತು ಭಾವವೇ ಸತ್ತೇ ಅದುವೇ ಶಕ್ತಿ ಸದ್ವಸ್ತು ಶಿವ ಸತ್ತಾಭಾವವೇ ಶಕ್ತಿ. ಇವೆರಡಕ್ಕೂ ದೀಪ-ದೀಪ್ತಿಗಳಂತೆ ಅವಿನಾಭಾವವಿದೆಯೆಂಬುದೇ ವಿಜ್ಞಾನ. ಈ ವಿಜ್ಞಾನವುಳ್ಳವನೇ ಪ್ರಾಣಲಿಂಗಿಯು).
ಇತಿ ಪ್ರಾಣಲಿಂಗಿ ಸ್ಥಲಂ
------------------
ಅಥ ಪ್ರಾಣಲಿಂಗಾರ್ಚನ ಸ್ಥಲಮ್
ಅಂತರ್ಗತಂ ಚಿದಾಕಾರಮ್
ಲಿಂಗಂ ಶಿವಮಯಂ ಪರಮ್ |
ಪೂಜ್ಯತೇ ಭಾವ ಪುಷ್ಪೈರ್ಯತ್
ಪ್ರಾಣಲಿಂಗಾರ್ಚನಂ ಹಿ ತತ್ || 12-13
ಅಂತರ್ಗತವಾದ (ಅಂತರಂಗದಲ್ಲಿರುವ) ಚಿದಾಕಾರ ರೂಪವಾದ ಸರ್ವಶ್ರೇಷ್ಠವಾದ, ಶಿವರೂಪವಾದ, ಪ್ರಾಣಲಿಂಗವನ್ನು ಭಾವಪುಷ್ಪಗಳಿಂದ ಮಾಡುವ ಯಾವ ಪೂಜೆಯಿದೆಯೋ ಅದುವೇ ಪ್ರಾಣಲಿಂಗಾರ್ಚನೆಯು.
ಅಂತಃ ಪವನ ಸಂಸ್ಪೃಷ್ಟೇ
ಸುಸೂಕ್ಷ್ಮಾಂಬರ ಶೋಭಿತೇ |
ಮೂರ್ಧನ್ಯ ಚಂದ್ರ ವಿಗಲತ್
ಸುಧಾ ಸೇಕಾತಿ ಶೀತಲೇ || 12-14
ಬದ್ಧೇಂದ್ರಿಯ ನವದ್ವಾರೇ
ಬೋಧದೀಪೇ ಹೃದಾಲಯೇ |
ಪದ್ಮಪೀಠೇ ಸಮಾಸೀನಮ್
ಚಿಲ್ಲಿಂಗಂ ಶಿವ ವಿಗ್ರಹಮ್ |
ಭಾವಯಿತ್ವಾ ಸದಾಕಾಲಮ್
ಪೂಜಯೇದ್ ಭಾವ ವಸ್ತುಭಿಃ || 12-15
ನವದ್ವಾರಗಳನ್ನು ಬಂಧಿಸಿಕೊಂಡು ಧ್ಯಾನಾಸಕ್ತ್ತನಾಗಿ ಕುಳಿತ ಸಾಧಕನು
ಬ್ರಹ್ಮರಂಧ್ರದಲ್ಲಿರುವ ಚಂದ್ರಮಂಡಲದಿಂದ ಸ್ರವಿಸುವ ಅಮೃತದ ಧಾರೆಯಿಂದ
ಶೀತಲವಾದ, ಅತ್ಯಂತ ಸೂಕ್ಷ್ಮವಾದ, ಆಕಾಶದಿಂದ ಶೋಭಿತವಾದ,
ಅಂತರಂಗದ ಪ್ರಾಣವಾಯುವಿನಿಂದ ಆವರಿಸಲ್ಪಟ್ಟ ಹೃದಯಮಂಟಪದಲ್ಲಿ,
ಶಿವಸ್ವರೂಪವಾದ ಜ್ಞಾನದೀಪವಾಗಿರುವ, ಅಷ್ಟದಳ ಕಮಲದಲ್ಲಿ
ಸಮಾಸೀನನಾಗಿರುವ ಚಿಲ್ಲಿಂಗವನ್ನು (ಪ್ರಾಣ ಲಿಂಗವನ್ನು) ಸದಾಕಾಲದಲ್ಲಿ
ಭಾವಿಸಿ, ಭಾವನಾಮಯ ವಸ್ತುಗಳಿಂದ ಪೂಜಿಸಬೇಕು.
ಕ್ಷಮಾಭಿಷೇಕ ಸಲಿಲಮ್
ವಿವೇಕೋ ವಸ್ತ್ರ ಮುಚ್ಯತೇ |
ಸತ್ಯಮಾಭರಣಂ ಪ್ರೋಕ್ತಮ್
ವೈರಾಗ್ಯಂ ಪುಷ್ಪ ಮಾಲಿಕಾ || 12-16
ಈ ಪ್ರಾಣಲಿಂಗ ಪೂಜೆಗೆ ಕ್ಷಮೆಯೇ ಅಭಿಷೇಕ ಜಲವು,
ವಿವೇಕವೇ ವಸ್ತ್ರವು, ಸತ್ಯ ನುಡಿಯುವುದೇ ಆಭರಣ,
ವೈರಾಗ್ಯವೇ ಪುಷ್ಪಮಾಲೆಯು,
ಗಂಧಃ ಸಮಾಧಿ ಸಂಪತ್ತಿಃ
ಅಕ್ಷತಾ ನಿರಹಂಕೃತಿಃ |
ಶ್ರದ್ಧಾಧೂಪೋ ಮಹಾಜ್ಞಾನಮ್
ಜಗದ್ಭಾಸಿ ಪ್ರದೀಪಿಕಾ || 12-17
ಗಂಧವೇ ಸಮಾಪತ್ತಿಯು, ನಿರಹಂಕಾರವೇ ಅಕ್ಷತೆಯು,
ಶ್ರದ್ಧೆಯೇ ಧೂಪವು, ಜಗತ್ತನ್ನು ಬೆಳಗುವ ಮಹಾಜ್ಞಾನವೇ
ದೀಪವು,
ಭ್ರಾಂತಿಮೂಲ ಪ್ರಪಂಚಸ್ಯ
ನಿವೇದ್ಯಂ ತನ್ನಿ ವೇದನಮ್ |
ಮೌನಂ ಘಂಟಾ ಪರಿಸ್ಪಂದಃ
ತಾಂಬೂಲಂ ವಿಷಯಾರ್ಪಣಮ್|| 12-18
ಭ್ರಾಂತಿಮೂಲವಾದ ಪ್ರಪಂಚವನ್ನು ನಿವೇದಿಸುವುದೇ ನೈವೇದ್ಯವು
(ನಾನು, ನನ್ನದೆಂಬ ತಪ್ಪು ಭಾವನೆಯನ್ನು ನಿವೇದಿಸುವುದು).
ವಿಷಯ ಭ್ರಾಂತಿ ರಾಹಿತ್ಯಮ್
ತತ್ಪ್ರದಕ್ಷಿಣ ಕಲ್ಪನಾ |
ಬುದ್ಧೇಸ್ತದಾತ್ಮಿಕಾ ಶಕ್ತಿಃ
ನಮಸ್ಕಾರ ಕ್ರಿಯಾ ಮತಾ || 12-19
ಈ ಪ್ರಕಾರವಾದ ದೋಷರಹಿತವಾದ ಶುದ್ಧಭಾವನೆಗಳೆಂಬ ಉಪಚಾರದಿಂದ ಅಂತರ್ಮುಖ ಮನಸ್ಸುಳ್ಳವನಾಗಿ ಅಂತರಂಗದ ಪ್ರಾಣಲಿಂಗವನ್ನು ಪೂಜಿಸಬೇಕು.
ಏವಂವಿಧೈರ್ ಭಾವಶುದ್ಧೈಃ
ಉಪಚಾರೈರ ದೂಷಿತೈಃ |
ಪ್ರತ್ಯುನ್ಮುಖ ಮನಾಭೂತ್ವಾ
ಪೂಜಯೇಲ್ಲಿಂಗ ಮಾಂತರಮ್ |12-20
ಮೌನವೇ ಘಂಟಾನಾದವು, ಶಬ್ದ ಸ್ಪರ್ಶಾದಿ ವಿಷಯಗಳನ್ನು
ಅರ್ಪಿಸುವುದೇ ತಾಂಬೂಲ ಸಮರ್ಪಣೆಯು, ವಿಷಯಭ್ರಾಂತಿಯನ್ನು
ಕಳೆದುಕೊಳ್ಳುವುದೇ ಪ್ರದಕ್ಷಿಣೆಯು, ಬುದ್ಧಿಯನ್ನು ತಾದಾತ್ಮ್ಯಗೊಳಿಸುವುದೇ ನಮಸ್ಕಾರವು.
ಇತಿ ಪ್ರಾಣಲಿಂಗಾರ್ಚನ ಸ್ಥಲಂ
------------------------
ಅಥ ಶಿವಯೋಗ ಸಮಾಧಿ ಸ್ಥಲಮ್
ಅಂತಃಕ್ರಿಯಾರತಸ್ಯಾಸ್ಯ
ಪ್ರಾಣಲಿಂಗಾರ್ಚನ ಕ್ರಮೈಃ |
ಶಿವಾತ್ಮಧ್ಯಾನ ಸಂಪತ್ತಿಃ
ಸಮಾಧಿರಿತಿ ಕಥ್ಯತೇ || 12-21
ಪ್ರಾಣಲಿಂಗಾರ್ಚನ ಕ್ರಮದ ಅಂತರಂಗಕ್ರಿಯೆಯಲ್ಲಿ ರತನಾದ
ಈ ಪ್ರಾಣಲಿಂಗಿಗೆ ಉಂಟಾದ ಶಿವಾತ್ಮ ಧ್ಯಾನಸಂಪತ್ತಿಯೇ
(ಶಿವ-ಜೀವರ ಸಮಾನ ಸಮರಸ ರೂಪವಾದ ಧ್ಯಾನವೇ)
ಸಮಾಧಿಯೆಂದು ಹೇಳಲ್ಪಡುತ್ತದೆ.
ಸರ್ವತತ್ತ್ವೋ ಪರಿಗತಮ್
ಸಚ್ಚಿದಾನಂದ ಭಾಸುರಮ್ |
ಸ್ವಪ್ರಕಾಶ ಮನಿರ್ದೆಶ್ಯಮ್
ಅವಾಙ್ಮನಸ ಗೋಚರಮ್ || 12-22
ಉಮಾಖ್ಯಯಾ ಮಹಾಶಕ್ತ್ಯಾ
ದೀಪಿತಂ ಚಿತ್ಸ್ವರೂಪಯಾ |
ಹಂಸರೂಪಂ ಪರಾತ್ಮಾನಮ್
ಸೋಹಂಭಾವೇನ ಭಾವಯೇತ್ |
ತದೇಕತಾನತಾಸಿದ್ಧಿಃ
ಸಮಾಧಿಃ ಪರಮೋ ಮತಃ || 12-23
36 ತತ್ತ್ವಗಳ ಅಗ್ರಭಾಗದಲ್ಲಿರುವ, ಸಚ್ಚಿದಾನಂದ ಸ್ವರೂಪನಾದ,
ಸ್ವಯಂಪ್ರಕಾಶರೂಪನಾದ, ತೋರಿಸಲು ಬಾರದೆ ಇರುವ,
ವಾಣಿ ಮತ್ತು ಮನಸ್ಸುಗಳಿಗೆ ಅಗೋಚರನಾದ,
ಚಿತ್ಸ್ವರೂಪಿಣಿಯಾದ ಉಮಾ ಎಂಬ ಹೆಸರಿನ ಮಹಾಶಕ್ತಿಯಿಂದ
ಪ್ರಕಾಶಿಸುತ್ತಿರುವ, ಹಂಸರೂಪನಾದ ಆ ಪರಮಾತ್ಮನನ್ನು ಸೋಹಂ
ಎಂಬ ಭಾವನೆಯಿಂದ ಭಾವಿಸಬೇಕು. (ಈ ಭಾವನೆಯಿಂದುಂಟಾದ) ತಾದಾತ್ಮ್ಯಸಿದ್ಧಿಯೇ ಶ್ರೇಷ್ಠವಾದ ಸಮಾಧಿಯೆಂದು ಸಮ್ಮತವಾಗಿದೆ.
ಪರಬ್ರಹ್ಮ ಮಹಾಲಿಂಗಮ್
ಪ್ರಾಣೋ ಜೀವಃ ಪ್ರಕೀರ್ತಿತಃ |
ತದೇಕಭಾವಮನನಾತ್
ಸಮಾಧಿಸ್ಥಃ ಪ್ರಕೀರ್ತಿತಃ || 12-24
ಮಹಾಲಿಂಗವೆಂದರೆ ಪರಬ್ರಹ್ಮವು, ಪ್ರಾಣವೆಂದರೆ ಜೀವನೆಂದು
ಹೇಳಲ್ಪಟ್ಟಿದೆ. ಅವೆರಡರ ಐಕ್ಯ ಭಾವನಾರೂಪವಾದ ಮನನದಿಂದ
ಸಮಾಧಿಸ್ಥನೆಂದು ಕರೆಯಲ್ಪಡುತ್ತಾನೆ (ಪ್ರಾಣಾರೂಢಾತ್ ಭವೇತ್ ಜೀವಃ
ಎಂಬ ಆಗಮೋಕ್ತಿ ಇದೆ).
ಅಂತಃ ಷಟ್ಚಕ್ರ ರೂಢಾನಿ
ಪಂಕಜಾನಿ ವಿಭಾವಯೇತ್ |
ಬ್ರಹ್ಮಾದಿ ಸ್ಥಾನ ಭೂತಾನಿ
ಭ್ರೂಮಧ್ಯಾಂತಾನಿ ಮೂಲತಃ || 12-25
ಅಂತರಂಗದಲ್ಲಿ (ಜೀವೇಶ್ವರರಿಗೆ ಆಶ್ರಯವಾದ ಸೂಕ್ಷ್ಮದೇಹದಲ್ಲಿ) ಮೂಲದಿಂದ
(ಮೂಲಾಧಾರದಿಂದ) ಭ್ರೂಮಧ್ಯದವರೆವಿಗೆ (ಆಜ್ಞಾಚಕ್ರದವರೆವಿಗೆ)
ಇರುವ ಆರು ಚಕ್ರಗಳಲ್ಲಿ ಆರೂಢಿಸಿರುವ (ಇರುವ) ಆರು ರೀತಿಯ
ಕಮಲಗಳನ್ನು ಭಾವಿಸಬೇಕು.
ಭ್ರೂಮಧ್ಯಾ ದೂಧ್ರ್ವಭಾಗೇ ತು
ಸಹಸ್ರದಲ ಮಂಬುಜಮ್ |
ಭಾವಯೇತ್ತತ್ರ ವಿಮಲಮ್
ಚಂದ್ರಬಿಂಬಂ ತದಂತರೇ || 12-26
ಭ್ರೂಮಧ್ಯದ ಊಧ್ರ್ವಭಾಗದಲ್ಲಿ (ಬ್ರಹ್ಮರಂಧ್ರದಲ್ಲಿ) ಸಹಸ್ರದಲದ ಕಮಲವನ್ನು ಭಾವಿಸಬೇಕು.
ಆ ಕಮಲದಲ್ಲಿ ನಿರ್ಮಲವಾದ ಚಂದ್ರಬಿಂಬವನ್ನು ಭಾವಿಸಿ
ಸೂಕ್ಷ್ಮರಂಧ್ರಂ ವಿಜಾನೀಯಾತ್
ತತ್ಕೈಲಾಸ ಪದಂ ವಿದುಃ |
ತತ್ರಸ್ಥಂ ಭಾವಯೇಚ್ಛಂಭುಮ್
ಸರ್ವಕಾರಣ ಕಾರಣಮ್ || 12-27
ಅದರ ಒಳಗೆ ಸೂಕ್ಷ್ಮರಂಧ್ರವಿರುವುದನ್ನು ತಿಳಿದುಕೊಳ್ಳಬೇಕು.
ಅದುವೇ ಕೈಲಾಸ ಸ್ಥಾನವು. ಅದರಲ್ಲಿರುವ ಸರ್ವಕಾರಣಗಳಿಗೆ
ಕಾರಣವಾದ ಶಂಭುವನ್ನು ಭಾವಿಸಬೇಕು.
ಬಹಿರ್ವಾಸನಯಾ ವಿಶ್ವಮ್
ವಿಕಲ್ಪಾರ್ಥಂ ಪ್ರಕಾಶತೇ |
ಅಂತರ್ವಾಸಿತ ಚಿತ್ತಾನಾಮ್
ಆತ್ಮಾನಂದಃ ಪ್ರಕಾಶತೇ || 12-28
ಬಹಿರಂಗದ ವಾಸನೆಯಿಂದ (ಶಬ್ದ, ಸ್ಪರ್ಶಾದಿ ವಿಷಯ
ವಾಸನೆಯಿಂದ) ವಿಶ್ವವು ವಿಕಲ್ಪರೂಪವಾಗಿ (ಬೇಕು ಬೇಡೆಂಬ
ರೂಪವಾಗಿ) ಪ್ರಕಾಶಿಸುತ್ತದೆ. ಅಂತರಂಗದ ವಾಸನೆಯಿಂದ
(ಶಿವೋಹಂ ಭಾವದಿಂದ) ಕೂಡಿದ ಚಿತ್ತವುಳ್ಳವರಿಗೆ
ಆತ್ಮಾನಂದವು ಪ್ರಕಾಶಿಸುತ್ತದೆ.
ಆತ್ಮಾರಣಿ ಸಮುತ್ಥೇನ
ಪ್ರಮೋದ ಮಥನಾತ್ ಸುಧೀಃ |
ಜ್ಞಾನಾಗ್ನಿನಾ ದಹೇತ್ ಸರ್ವಮ್
ಪಾಶಜಾಲಂ ಜಗನ್ಮಯಮ್ || 12-29
ಬುದ್ಧಿವಂತನಾದ ಪ್ರಾಣಲಿಂಗಿಯು ಆತ್ಮವೆಂಬ ಅರಣಿ
(ಅಗ್ನಿಪ್ರಾಕಟ್ಯಕ್ಕೆ ಉಪಯೋಗಿಸುವ ಎರಡು ಕಟ್ಟಿಗೆಗಳು)ಯ
ಮೇಲೆ ಪ್ರಮೋದದ ಮಥನದಿಂದ (ಶಿವೋಹಂ ಭಾವನೆಯಿಂದುಂಟಾದ
ಆನಂದದ ವಿಚಾರ ಮಥನದಿಂದ) ಉತ್ಪನ್ನವಾದ ಜ್ಞಾನಾಗ್ನಿಯಿಂದ ಜಗತ್ತಿನ ಎಲ್ಲ ಪಾಶಜಾಲವನ್ನು ಸುಡುವನು.
ಸಂಸಾರ ವಿಷವೃಕ್ಷಸ್ಯ
ಪಂಚಕ್ಲೇಶ ಪಲಾಶಿನಃ |
ಛೇದನೇ ಕರ್ಮಮೂಲಸ್ಯ
ಪರಶುಃ ಶಿವಭಾವನಾ || 12-30
ಪಂಚಕ್ಲೇಶ (ಅವಿದ್ಯಾ, ಅಸ್ಮಿತಾ, ರಾಗ, ದ್ವೇಷ, ಅಭಿನಿವೇಷ)
ಗಳೆಂಬ ಪಲಾಶಗಳಿಂದ (ಎಲೆಗಳಿಂದ ಕೂಡಿದ)
ಕರ್ಮಕ್ಕೆ ಕಾರಣವಾದ ಸಂಸಾರವೆಂಬ ವಿಷವೃಕ್ಷವನ್ನು
ಕತ್ತರಿಸಿ ಹಾಕಲು ಶಿವಭಾವವೇ (ಶಿವೋಹಂ ಭಾವವೇ) ಪರಶುವಾಗಿರುತ್ತದೆ (ಕೊಡಲಿಯಾಗಿರುತ್ತದೆ).
ಅಜ್ಞಾನರಾಕ್ಷಸೋನ್ಮೇಷ-
ಕಾರಿಣಃ ಸಂಹೃತಾತ್ಮನಃ |
ಶಿವಧ್ಯಾನಂ ತು ಸಂಸಾರ-
ತಮಸಶ್ಚಂಡಭಾಸ್ಕರಃ |
ತದೇಕತಾನತಾಸಿದ್ಧಿಃ
ಸಮಾಧಿಃ ಪರಮೋ ಮತಃ || 12-31
ಆತ್ಮನನ್ನು ಆವರಿಸಿದ ಅಜ್ಞಾನವೆಂಬ ರಾಕ್ಷಸನ ಕಣ್ಣುಗಳನ್ನು
ತೆರೆಯಿಸಿದ, ಸಂಸಾರ ವೆಂಬ ಗಾಢಾಂಧಕಾರವನ್ನು ದೂರ ಮಾಡಲು
ಶಿವಧ್ಯಾನವು ಪ್ರಚಂಡವಾದ ಸೂರ್ಯ ನೋಪಾದಿಯಲ್ಲಿರುತ್ತದೆ.
ಶಿವನೊಂದಿಗೆ ಏಕತಾನತೆ, ಅಂದರೆ ತಾದಾತ್ಮ್ಯ ರೂಪವಾದ
ಸಿದ್ಧಿಯನ್ನು ಪಡೆದುಕೊಳ್ಳುವುದೇ ಶ್ರೇಷ್ಠವಾದ ಸಮಾಧಿಯೆಂದು ಕರೆಯಲ್ಪಡುವುದು.
ಇತಿ ಶಿವಯೋಗ ಸಮಾಧಿ ಸ್ಥಲಂ
------------------------
ಅಥ ಲಿಂಗನಿಜ ಸ್ಥಲಮ್
ಸ್ವಾಂತಸ್ಥಶಿವಲಿಂಗಸ್ಯ
ಪ್ರತ್ಯಕ್ಷಾನುಭವಸ್ಥಿತಿಃ |
ಯಸ್ಯೈವ ಪರಲಿಂಗಸ್ಯ
ನಿಜಮಿತ್ಯುಚ್ಯತೇ ಬುಧೈಃ || 12-32
ತನ್ನ ಅಂತರಂಗದಲ್ಲಿರುವ (ಹೃದಯಕಮಲದಲ್ಲಿರುವ)
ಶಿವಲಿಂಗದ (ಪ್ರಾಣಲಿಂಗದ) ಪ್ರತ್ಯಕ್ಷವಾದ ಅನುಭವದ
ಸ್ಥಿತಿಯೇ ಆ ಪರಲಿಂಗದ (ಮಹಾಲಿಂಗದ) ನಿಜಸ್ವರೂಪವೆಂದು
ಹೇಳಲ್ಪಡುತ್ತದೆ.
ಬ್ರಹ್ಮವಿಷ್ಣ್ವಾದಯೋ ದೇವಾಃ
ಸರ್ವೆ ವೇದಾದಯ ಸ್ತಥಾ |
ಲೀಯಂತೇ ಯತ್ರ ಗಮ್ಯಂತೇ
ತಲ್ಲಿಂಗಂ ಬ್ರಹ್ಮ ಕೇವಲಮ್ || 12-33
ಬ್ರಹ್ಮ, ವಿಷ್ಣು ಮೊದಲಾದ ದೇವತೆಗಳು ಮತ್ತು ಎಲ್ಲಾ
ಸಕಲ ವೇದಾಗಮಾದಿಗಳು ಯಾವುದರಲ್ಲಿ ಲೀನಗೊಳ್ಳುವುವೋ
ಮತ್ತು ಯಾವುದರಿಂದ ಹೊರಹೊಮ್ಮುವವೋ, ಆ ಪರಬ್ರಹ್ಮವೇ
ಲಿಂಗವು.
ಚಿದಾನಂದಮಯಃ ಸಾಕ್ಷಾತ್
ಶಿವ ಏವ ನಿರಂಜನಃ |
ಲಿಂಗಮಿತ್ಯುಚ್ಯತೇ ನಾನ್ಯದ್
ಯತಃ ಸ್ಯಾದ್ವಿಶ್ವ ಸಂಭವಃ || 12-34
ಯಾವುದರಿಂದ ವಿಶ್ವೋತ್ಪತ್ತಿಯು ಆಗುವುದೋ
ಮತ್ತು ಯಾವುದು ಸಚ್ಚಿದಾನಂದ ಸ್ವರೂಪವೋ,
ನಿರಂಜನವೋ (ದೋಷರಹಿತವೂ) ಆದ ಅದು
ಸಾಕ್ಷಾತ್ ಶಿವನೇ ಆಗಿದೆ. ಬೇರೆ ಯಾವುದೂ ಇಲ್ಲ.
ಬಹುನಾತ್ರ ಕಿಮುಕ್ತೇನ
ಲಿಂಗಮಿತ್ಯುಚ್ಯತೇ ಬುಧೈಃ |
ಶಿವಾಭಿಧಂ ಪರಂ ಬ್ರಹ್ಮ
ಚಿದ್ರೂಪಂ ಜಗದಾಸ್ಪದಮ್ || 12-35
ಹೆಚ್ಚಿಗೆ ಹೇಳುವುದರಿಂದ ಏನು ಪ್ರಯೋಜನ? ಜಗತ್ತಿಗೆ
ಆಶ್ರಯವಾದ ಚಿದ್ರೂಪವಾದ ಶಿವನೆಂಬ ಅಭಿಧಾನವುಳ್ಳ
ಪರಬ್ರಹ್ಮವೆ ಲಿಂಗವೆಂಬುದಾಗಿ ಬುಧರು (ಜ್ಞಾನಿಗಳು)
ಹೇಳುತ್ತಾರೆ.
ವೇದಾಂತವಾಕ್ಯಜಾಂ ವಿದ್ಯಾಮ್
ಲಿಂಗಮಾಹುಸ್ತಥಾಪರೇ |
ತದಸದ್ಜ್ಞೇಯರೂಪತ್ವಾತ್
ಲಿಂಗಸ್ಯ ಬ್ರಹ್ಮರೂಪಿಣಃ || 12-36
ಬೇರೆಯವರು (ವೇದಾಂತಿಗಳು) ವೇದಾಂತ ವಾಕ್ಯಗಳಿಂದ
(ಪ್ರಜ್ಞಾನಂ ಬ್ರಹ್ಮ, ತತ್ತ್ವಮಸಿ, ಅಹಂ ಬ್ರಹ್ಮಾಸ್ಮಿ – ಅಯಮಾತ್ಮಾಬ್ರಹ್ಮ,
ಈ ಮಹಾವಾಕ್ಯಗಳಿಂದ) ಉತ್ಪನ್ನವಾದ ವಿದ್ಯೆಯನ್ನು ಲಿಂಗವೆಂದು ಕರೆಯುತ್ತಾರೆ. ಆದರೆ ಅದು ಅಸತ್ಯ (ಏಕೆಂದರೆ ಪರಬ್ರಹ್ಮರೂಪವಾದ ಲಿಂಗವು ಆ ವೇದಾಂತಜನ್ಯ ಜ್ಞಾನಕ್ಕೆ ಜ್ಞೇಯ ರೂಪವಾಗಿರುತ್ತದೆ).
ಅವ್ಯಕ್ತಂ ಲಿಂಗಮಿತ್ಯಾಹುಃ
ಜಗತಾಂ ಮೂಲ ಕಾರಣಮ್ |
ಲಿಂಗೀ ಮಹೇಶ್ವರಶ್ಚೇತಿ
ಮತಮೇತದಸಂಗತಮ್ || 12-37
ಜಗತ್ತಿಗೆ ಮೂಲಕಾರಣವಾದ ಅವ್ಯಕ್ತವನ್ನು (ಪ್ರಕೃತಿಯನ್ನು)
ಲಿಂಗವೆಂದು ಹೇಳುವರು ಮತ್ತು ಮಹೇಶ್ವರನನ್ನು ಲಿಂಗಿಯೆಂದು
ಕರೆಯುವರು. ಸಾಂಖ್ಯರ ಈ ಮತವು ಅಸಂಗತವಾದುದು.
ನ ಸೂರ್ಯೊ ಭಾತಿ ತತ್ರೇಂದುಃ
ನ ವಿದ್ಯುನ್ನ ಚ ಪಾವಕಃ |
ನ ತಾರಕಾ ಮಹಾಲಿಂಗೇ
ದ್ಯೋತಮಾನೇ ಪರಾತ್ಮನಿ || 12-38
ಪರಮಾತ್ಮರೂಪವಾದ ಆ ಮಹಾಲಿಂಗವು ಪ್ರಕಾಶಮಾನವಾಗುತ್ತಿರಲು
ಅಲ್ಲಿ ಸೂರ್ಯನಾಗಲಿ, ಚಂದ್ರನಾಗಲಿ, ವಿದ್ಯುತ್ತೇ ಆಗಲಿ, ಅಗ್ನಿಯೇ
ಆಗಲಿ, ನಕ್ಷತ್ರಗಳೇ ಆಗಲಿ, ಪ್ರಕಾಶಿಸಲಾರವು (ಆ ಮಹಾಲಿಂಗದ ಪ್ರಕಾಶದ ಮುಂದೆ ಸೂರ್ಯ ಚಂದ್ರಾದಿಗಳು ನಿಸ್ತೇಜ ವಾಗಿರುತ್ತಾರೆ).
ಜ್ಯೋತಿರ್ಮಯಂ ಪರಂ ಲಿಂಗಮ್
ಶ್ರುತಿರಾಹ ಶಿವಾತ್ಮಕಮ್ |
ತಸ್ಯ ಭಾಸಾ ಸರ್ವಮಿದಮ್
ಪ್ರತಿಭಾತಿ ನ ಸಂಶಯಃ || 12-39
ಶಿವಸ್ವರೂಪವಾದ ಆ ಪರಲಿಂಗವು ಜ್ಯೋತಿರ್ಮಯವೆಂದು
ಶ್ರುತಿಯು ಹೇಳುತ್ತದೆ. (ಅಂತೆಯೇ) ಇದೆಲ್ಲವೂ ಅವನ
ಪ್ರಕಾಶದಿಂದಲೇ ಪ್ರಕಾಶಿಸುತ್ತಿರುತ್ತದೆ. ಇದರಲ್ಲಿ ಯಾವ
ಸಂಶಯವೂ ಇಲ್ಲ.
ಲಿಂಗಾನ್ನಾಸ್ತಿ ಪರಂ ತತ್ತ್ವಮ್
ಯದಸ್ಮಾಜ್ಜಾಯತೇ ಜಗತ್ |
ಯದೇತದ್ರೂಪತಾಂ ಧತ್ತೇ
ಯದತ್ರ ಲಯಮಶ್ನುತೇ || 12-40
ಲಿಂಗತತ್ತ್ವಕ್ಕಿಂತಲೂ ಶ್ರೇಷ್ಠವಾದ ಬೇರೊಂದು ತತ್ತ್ವವಿಲ್ಲ.
ಈ ಚರಾಚರ ವಿಶ್ವವೆಲ್ಲವೂ ಆ ಲಿಂಗತತ್ತ್ವದಿಂದಲೇ
ಉತ್ಪನ್ನವಾಗಿದೆ. ಆ ಲಿಂಗತತ್ತ್ವದಲ್ಲಿ ಇರುವಂಥಾದ್ದೇ
ಆಗಿದೆ ಮತ್ತು ಅಲ್ಲಿಯೇ ಎಲ್ಲವೂ ಲಯಗೊಳ್ಳುವುದು.
ತಸ್ಮಾಲ್ಲಿಂಗಂ ಪರಂ ಬ್ರಹ್ಮ
ಸಚ್ಚಿದಾನಂದ ಲಕ್ಷಣಮ್ |
ನಿಜರೂಪಮಿತಿ ಧ್ಯಾನಾತ್
ತದವಸ್ಥಾ ಪ್ರಜಾಯತೇ || 12-41
ಆದ್ದರಿಂದ ಸಚ್ಚಿದಾನಂದ ಲಕ್ಷಣರೂಪವಾದ ಲಿಂಗವೇ ಪರಬ್ರಹ್ಮವು.
ಆ ಲಿಂಗವೇ ತನ್ನ ನಿಜರೂಪವೆಂದು ಧ್ಯಾನಿಸುವುದರಿಂದ ಲಿಂಗನಿಜಸ್ಥಿತಿಯು
ಪ್ರಾಪ್ತವಾಗುತ್ತದೆ.
ಇತಿ ಲಿಂಗ ನಿಜ ಸ್ಥಲಂ
-------------------
ಅಥ ಅಂಗ ಲಿಂಗ ಸ್ಥಲಮ್
ಜ್ಞಾನಮಂಗಮಿತಿ ಪ್ರಾಹುಃ
ಜ್ಞೇಯಂ ಲಿಂಗಂ ಸನಾತನಮ್ |
ವಿದ್ಯತೇ ತದ್ದ್ವಯಂ ಯಸ್ಯ
ಸೋಂಗ ಲಿಂಗೀತಿ ಕೀರ್ತಿತಃ || 12-42
ಜ್ಞಾನವುಳ್ಳವನೇ ಅಂಗನೆಂದು ಹೇಳುತ್ತಾರೆ. ಸನಾತನವಾದ
ಲಿಂಗವು, ಜ್ಞೇಯವೆಂಬುದಾಗಿ ಕರೆಯಲ್ಪಡುತ್ತದೆ. ಇವೆರಡೂ
ಯಾರಿಗೆ ಇರುತ್ತವೆಯೋ ಅವನು ಅಂಗಲಿಂಗಿಯೆಂದು ಕರೆಯಲ್ಪಡುತ್ತಾನೆ.
ಅಂಗೇ ಲಿಂಗಂ ಸಮಾ ರೂಢಮ್
ಲಿಂಗೇ ಚಾಂಗ ಮುಪಸ್ಥಿತಮ್ |
ಏತದಸ್ತಿ ದ್ವಯಂ ಯಸ್ಯ
ಸ ಭವೇದ್ ಅಂಗಲಿಂಗವಾನ್ || 12-43
ಅಂಗದಲ್ಲಿ ಲಿಂಗವು ಸಮಾರೂಢವಾಗಿದೆ (ಸಮರಸವಾಗಿದೆ) ಮತ್ತು ಲಿಂಗದಲ್ಲಿ ಅಂಗವು ಉಪಸ್ಥಿತವಾಗಿದೆ (ಸಮರಸವಾಗಿದೆ). ಇವೆರಡೂ ಯಾರಲ್ಲಿ ಇರುತ್ತವೆಯೋ ಅವನೇ ಅಂಗಲಿಂಗಿಸ್ಥಲಿಯಾಗಿದ್ದಾನೆ
(ಅಂಗದಲ್ಲಿ ಲಿಂಗವನ್ನು, ಲಿಂಗದಲ್ಲಿ ಅಂಗವನ್ನು – ಹೀಗೆ ಇವೆರಡರ ಸಾಮರಸ್ಯ ಸ್ಥಿತಿಯನ್ನು ಪಡೆದವನೇ ಅಂಗಲಿಂಗಿ).
ಜ್ಞಾತ್ವಾ ಯಃ ಸತತಂ ಲಿಂಗಮ್
ಸ್ವಾಂತಸ್ಥಂ ಜ್ಯೋತಿರಾತ್ಮಕಮ್ |
ಪೂಜಯೇದ್ ಭಾವಯನ್ನಿತ್ಯಮ್
ತಂ ವಿದ್ಯಾದಂಗಲಿಂಗಿನಮ್ || 12-44
ತನ್ನ ಹೃದಯ ಕಮಲದಲ್ಲಿದ್ದ ಜ್ಯೋತಿರ್ಮಯವಾದ ಲಿಂಗವನ್ನು ತಿಳಿದುಕೊಂಡು (ಶ್ರುತಿ, ಗುರು, ಸ್ವಾನುಭವಗಳಿಂದ) ನಿತ್ಯವೂ ಯಾವಾತನು ಅದನ್ನು ಪೂಜಿಸುವನೋ ಮತ್ತು ಭಾವಿಸುವನೋ ಅವನನ್ನು ಅಂಗಲಿಂಗಿಯೆಂದು ತಿಳಿದುಕೊಳ್ಳಬೇಕು.
ಜ್ಞಾಯತೇ ಲಿಂಗಮೇವೈಕಮ್
ಸರ್ವೆಃ ಶಾಸ್ತ್ರೆಃ ಸನಾತನೈಃ |
ಬ್ರಹ್ಮೇತಿ ವಿಶ್ವಧಾಮೇತಿ
ವಿಮುಕ್ತೇಃ ಪದಮಿತ್ಯಪಿ || 12-45
ಸನಾತನಗಳಾದ (ಅನಾದಿಗಳಾದ) ಎಲ್ಲ ಶಾಸ್ತ್ರಗಳು
ಒಂದೇ ಆದ ಲಿಂಗವನ್ನು ಬ್ರಹ್ಮವೆಂತಲೂ, ವಿಶ್ವಕ್ಕೆ ಆಧಾರವೆಂತಲೂ,
ಮುಕ್ತಿಯ ಸ್ಥಾನವೆಂತಲೂ ಹೇಳುತ್ತವೆ.
ಮುಕ್ತಿ ರೂಪಮಿದಂ ಲಿಂಗಮ್
ಇತಿ ಯಸ್ಯ ಮನಃಸ್ಥಿತಿಃ |
ಸ ಮುಕ್ತೋ ದೇಹ ಯೋಗೇಪಿ
ಸ ಜ್ಞಾನೀ ಸ ಮಹಾಗುರುಃ || 12-46
ಈ ಲಿಂಗವು ಮುಕ್ತಿಸ್ವರೂಪವಾದುದು ಎಂಬುದಾಗಿ ಯಾರ ಮನಸ್ಸಿನ
ಸ್ಥಿತಿ ಇರುತ್ತದೆಯೋ ಅವನು ದೇಹ ಸಂಬಂಧಿಯಾಗಿದ್ದರೂ ಮುಕ್ತನೇ
ಆಗಿರುತ್ತಾನೆ. ಅವನೇ ಜ್ಞಾನಿಯು ಮತ್ತು ಅವನೇ ಮಹಾಗುರುವು.
ಅನಾದಿ ನಿಧನಂ ಲಿಂಗಮ್
ಕಾರಣಂ ಜಗತಾಮಿತಿ |
ಯೇ ನ ಜಾನಂತಿ ತೇ ಮೂಢಾ
ಮೋಕ್ಷ ಮಾರ್ಗ ಬಹಿಷ್ಕೃತಾಃ || 12-47
ಆದಿ ಅಂತ್ಯಗಳಿಲ್ಲದ ಆ ಲಿಂಗವು ಜಗತ್ತಿಗೆ ಕಾರಣವಾಗಿರುತ್ತದೆ.
ಈ ರೀತಿಯಾಗಿ ಯಾರು ತಿಳಿದುಕೊಳ್ಳುವುದಿಲ್ಲವೋ ಅವರು
ಮೂಢರೆಂತಲೂ, ಮೋಕ್ಷಮಾರ್ಗ ಬಹಿಷ್ಕೃತರೆಂತಲೂ
(ಮೋಕ್ಷಮಾರ್ಗಕ್ಕೆ ಅನರ್ಹರೆಂತಲೂ) ತಿಳಿದುಕೊಳ್ಳಬೇಕು.
ಯಃ ಪ್ರಾಣಲಿಂಗಾರ್ಚನ ಭಾವಪೂರ್ವೆರ್-
ಧರ್ಮೆ ರುಪೇತಃ ಶಿವಭಾವಿತಾತ್ಮಾ |
ಸ ಏವ ತುರ್ಯಃ ಪರಿ ಕೀರ್ತಿತೋಸೌ
ಸಂವಿದ್ವಿಪಾಕಾ ಚ್ಛರಣಾ ಭಿಧಾನಃ || 12-48
ಪ್ರಾಣಲಿಂಗಾರ್ಚನ ಸ್ಥಲದಲ್ಲಿ ಹೇಳಿದ ಭಾವಪೂರ್ಣವಾದ
ಧರ್ಮಗಳಿಂದ (ಕ್ಷಮಾದಿ ಸದ್ಗುಣಗಳಿಂದ) ಯಾವನು ಕೂಡಿದವನಾಗಿರುತ್ತಾನೆಯೋ
ಮತ್ತು ತುರ್ಯಾವಸ್ಥೆಯಲ್ಲಿರುತ್ತಾನೆಯೋ ಅಂತಹ ಪ್ರಾಣಲಿಂಗಿಸ್ಥಲದ
ಸಾಧಕನೇ ಜ್ಞಾನದ ಪರಿಪಕ್ವ ಸ್ಥಿತಿಯಿಂದ ಶರಣನೆಂದು ಕರೆಯಲ್ಪಡುತ್ತಾನೆ.
ಇತಿ ಅಂಗಲಿಂಗಸ್ಥಲಮ್ ಪರಿಸಮಾಪ್ತಂ
ಓಂ ತತ್ಸತ್ ಇತಿ
ಶ್ರೀ ಶಿವಗೀತೇಷು ಸಿದ್ಧಾಂತಾಗಮೇಷು
ಶಿವಾದ್ವೈತ ವಿದ್ಯಾಯಾಂ ಶಿವಯೋಗಶಾಸ್ತ್ರೇ
ಶ್ರೀರೇಣುಕಾಗಸ್ತ್ಯ ಸಂವಾದೇ
ವೀರಶೈವ ಧರ್ಮನಿರ್ಣಯೇ ಶಿವಯೋಗಿ ಶಿವಾಚಾರ್ಯವಿರಚಿತೇ
ಶ್ರೀ ಸಿದ್ಧಾಂತಶಿಖಾಮಣೌ ಪ್ರಾಣಲಿಂಗಿ ಸ್ಥಲೇ ಪ್ರಾಣಲಿಂಗಿ ಸ್ಥಲಾದಿ
ಪಂಚ ವಿಧ ಸ್ಥಲ ಪ್ರಸಂಗೋ ನಾಮ
ದ್ವಾದಶಃ ಪರಿಚ್ಛೇದಃ||
ಇಲ್ಲಿಗೆ ಅಂಗಲಿಂಗಸ್ಥಲವು ಮುಗಿಯಿತು
ಓಂ ತತ್ಸತ್ ಇತಿ ಶ್ರೀ ಶಿವನಿಂದ ಉಪದೇಶಿಸಲ್ಪಟ್ಟು ಶ್ರೀ ಸಿದ್ಧಾಂತಾಗಮಗಳಲ್ಲಿಯ ಶಿವಾದ್ವೈತವಿದ್ಯಾರೂಪವೂ,
ಶಿವಯೋಗಶಾಸ್ತ್ರವೂ, ಶ್ರೀ ರೇಣುಕಾಗಸ್ತ್ಯಸಂವಾದರೂಪವೂ,
ಶ್ರೀ ವೀರಶೈವಧರ್ಮನಿರ್ಣಯವೂ, ಶ್ರೀ ಶಿವಯೋಗಿ ಶಿವಾಚಾರ್ಯ ವಿರಚಿತವೂ
ಆದ ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿ ಪ್ರಾಣಲಿಂಗಿಸ್ಥಲದ ಪ್ರಾಣಲಿಂಗಿಸ್ಥಲಾದಿ
ಪಂಚವಿಧಸ್ಥಲ ಪ್ರಸಂಗನಾಮದ ಹನ್ನೆರಡನೆಯ ಪರಿಚ್ಛೇದವು ಮುಗಿದುದು.