ಏಕಾದಶಃ ಪರಿಚ್ಛೇದಃ

ಪ್ರಸಾದಿನಃ ಸಪ್ತವಿಧ ಸ್ಥಲ ಪ್ರಸಂಗಃ ಪ್ರಸಾದಿ ಸ್ಥಲಮ್

|| ಅಗಸ್ತ್ಯ ಉವಾಚ ||

ಉಕ್ತೋ ಮಾಹೇಶ್ವರಃ ಸಾಕ್ಷಾತ್

ಲಿಂಗನಿಷ್ಠಾದಿಧರ್ಮವಾನ್ |

ಕಥಮೇಷ ಪ್ರಸಾದೀತಿ

ಕಥ್ಯತೇ ಗಣನಾಯಕ || 11-1

ಹೇ ಗಣನಾಯಕನಾದ ರೇಣುಕನೇ, ಲಿಂಗನಿಷ್ಠಾದಿ ಧರ್ಮಗಳುಳ್ಳ ಸಾಕ್ಷಾತ್ ಮಾಹೇಶ್ವರನ ಸ್ವರೂಪವನ್ನು ನೀನು ಹೇಳಿದೆ. ಈ ಮಾಹೇಶ್ವರನು ಹೇಗೆ ತಾನೇ ಪ್ರಸಾದಿಯಾಗುತ್ತಾನೆ?

|| ಶ್ರೀ ರೇಣುಕ ಉವಾಚ ||

ಲಿಂಗನಿಷ್ಠಾದಿ ಭಾವೇನ

ಧ್ವಸ್ತಪಾಪ ನಿಬಂಧನಃ |

ಮನಃ ಪ್ರಸಾದ ಯೋಗೇನ

ಪ್ರಸಾದೀತ್ಯೇಷ ಕಥ್ಯತೇ || 11-2

ಲಿಂಗನಿಷ್ಠಾದಿ ಸ್ಥಲಗಳನ್ನು ಭಾವಿಸುವುದರಿಂದ (ತಿಳಿದು ಆಚರಿಸುವುದರಿಂದ) ಪಾಪಬಂಧನವನ್ನು ಧ್ವಂಸಮಾಡಿಕೊಂಡ, ಅಂತೆಯೇ ಮನಸ್ಸನ್ನು ಪ್ರಸನ್ನವಾಗಿಟ್ಟುಕೊಂಡ ಈ ಮಾಹೇಶ್ವರನು ಪ್ರಸಾದಿಯೆಂದು ಹೇಳಲ್ಪಡುತ್ತಾನೆ.

ಪ್ರಸಾದಿ ಸ್ಥಲ ಮಿತ್ಯೇತತ್

ಅಸ್ಯ ಮಾಹಾತ್ಮ್ಯಬೋಧಕಮ್ |

ಅಂತರ ಸ್ಥಲ ಭೇದೇನ

ಸಪ್ತಧಾ ಪರಿಕೀರ್ತಿತಮ್ || 11-3

ಈ ಪ್ರಸಾದಿ ಸ್ಥಲವು ಅದರ ಮಹಾತ್ಮ್ಯ ಬೋಧಕಗಳಾದ ಏಳು ವಿಧವಾದ ಅಂತರಸ್ಥಲ ಭೇದವುಳ್ಳದ್ದಾಗಿ ಹೇಳಲ್ಪಟ್ಟಿದೆ.

ಪ್ರಸಾದಿ ಸ್ಥಲ ಮಾದೌ ತು

ಗುರು ಮಾಹಾತ್ಮ್ಯಕಂ ತತಃ |

ತತೋ ಲಿಂಗ ಪ್ರಶಂಸಾ ಚ

ತತೋ ಜಂಗಮ ಗೌರವಮ್ || 11-4

ಮೊದಲನೆಯದು ಪ್ರಸಾದಿಸ್ಥಲವು, ತದನಂತರ ಗುರುಮಹಾತ್ಮ್ಯಸ್ಥಲವು, ಅದಾದ ಮೇಲೆ ಲಿಂಗಪ್ರಶಂಶಾಸ್ಥಲವು. ತದನಂತರದಲ್ಲಿ ಜಂಗಮಗೌರವಸ್ಥಲವು (ಜಂಗಮಮಹಾತ್ಮ್ಯ ಸ್ಥಲವು)

ತತೋ ಭಕ್ತಸ್ಯ ಮಾಹಾತ್ಮ್ಯಮ್

ತತಃ ಶರಣಕೀರ್ತನಮ್ |

ಶಿವಪ್ರಸಾದ ಮಾಹಾತ್ಮ್ಯಮ್

ಇತಿ ಸಪ್ತ ಪ್ರಕಾರಕಮ್ |

ಕ್ರಮಾಲ್ಲಕ್ಷಣ ಮೇತೇಷಾಮ್

ಕಥಯಾಮಿ ಮಹಾ ಮುನೇ || 11-5

ನಂತರ ಭಕ್ತಮಹಾತ್ಮ್ಯ ಸ್ಥಲವು. ಅದಾದ ಮೇಲೆ ಶರಣ ಮಹಾತ್ಮ್ಯಸ್ಥಲವು. ನಂತರ ಶಿವಪ್ರಸಾದಮಹಾತ್ಮ್ಯ ಸ್ಥಲವು. -ಹೀಗೆ ಇದು ಏಳು ಪ್ರಕಾರದ ಅವಾಂತರ ಸ್ಥಲಗಳಿಂದ ಕೂಡಿಕೊಂಡಿರುತ್ತದೆ.

ಅಥ ಪ್ರಸಾದಿ ಸ್ಥಲಮ್

ನೈರ್ಮಲ್ಯಂ ಮನಸೋ ಲಿಂಗಮ್

ಪ್ರಸಾದ ಇತಿ ಕಥ್ಯತೇ |

ಶಿವಸ್ಯ ಲಿಂಗರೂಪಸ್ಯ

ಪ್ರಸಾದಾದೇವ ಸಿದ್ಧ್ಯತಿ || 11-6

ಮನಸ್ಸಿನ ನಿರ್ಮಲತೆಯ ಚಿಹ್ನವೇ ಪ್ರಸಾದವೆಂದು ಕರೆಯಲ್ಪಡುತ್ತದೆ. ಇದು (ಮನಸ್ಸಿನ ನಿರ್ಮಲತೆಯು) ಲಿಂಗರೂಪನಾದ ಶಿವನ ಪ್ರಸಾದದಿಂದಲೇ (ಪ್ರಸಾದವನ್ನು ಸ್ವೀಕರಿಸುವುದರಿಂದಲೇ) ಸಿದ್ಧವಾಗುತ್ತದೆ.

ಶಿವ ಪ್ರಸಾದಂ ಯದ್ದ್ರವ್ಯಮ್

ಶಿವಾಯ ವಿನಿವೇದಿತಮ್ |

ನಿರ್ಮಾಲ್ಯಂ ತತ್ತು ಶೈವಾನಾಮ್

ಮನೋ ನೈರ್ಮಲ್ಯ ಕಾರಣಮ್ || 11-7

ಶಿವನಿಗೆ ನೈವೇದ್ಯ ಮಾಡಲ್ಪಟ್ಟ ಯಾವ ಪದಾರ್ಥವಿರುತ್ತಿದೆಯೋ ಅದುವೇ ಶಿವಪ್ರಸಾದವು. ಆ ಶಿವಪ್ರಸಾದ ರೂಪವಾದ ನಿರ್ಮಾಲ್ಯವು ಶಿವಭಕ್ತರ ಮನೋನೈರ್ಮಲ್ಯಕ್ಕೆ ಕಾರಣವಾಗಿರುತ್ತದೆ.

ಮನಃ ಪ್ರಸಾದ ಸಿದ್ಧ್ಯರ್ಥಮ್

ನಿರ್ಮಲ ಜ್ಞಾನ ಕಾರಣಮ್ |

ಶಿವ ಪ್ರಸಾದಂ ಸ್ವೀಕುರ್ವನ್

ಪ್ರಸಾದೀತ್ಯೇಷ ಕಥ್ಯತೇ || 11-8

ನಿರ್ಮಲ ಜ್ಞಾನಕ್ಕೆ ಕಾರಣೀಭೂತವಾದ ಶಿವಪ್ರಸಾದವನ್ನು ಮನಸ್ಸಿನ ಪ್ರಸನ್ನತೆಗಾಗಿ ಸ್ವೀಕರಿಸುವ ಮಾಹೇಶ್ವರನೇ ಪ್ರಸಾದಿಯೆಂದು ಕರೆಯಲ್ಪಡುತ್ತಾನೆ.

ಅನ್ನಶುದ್ಧ್ಯಾ ಹಿ ಸರ್ವೆಷಾಮ್

ತತ್ತ್ವಶುದ್ಧಿ ರುದಾಹೃತಾ |

ವಿಶುದ್ಧ ಮನ್ನಜಾತಂ ಹಿ

ಯಚ್ಛಿವಾಯ ಸಮರ್ಪಿತಮ್ || 11-9

ಅನ್ನಶುದ್ಧಿಯಿಂದಲೇ ಎಲ್ಲ ಜೀವಿಗಳ ತತ್ತ್ವಶುದ್ಧಿಯು (ದೇಹೇಂದ್ರಿಯಾದಿಗಳ ಶುದ್ಧಿಯು) ಹೇಳಲ್ಪಟ್ಟಿದೆ. ಶಿವನಿಗೆ ಸಮರ್ಪಿತವಾದ ಯಾವುದು ಶಿವನಿಗೆ ಸಮರ್ಪಿತವಾಗುವುದೋ, ಅದುವೆ ಶುದ್ಧವಾದ ಅನ್ನವು.

ತದೇವ ಸರ್ವಕಾಲಂ ತು

ಭುಂಜಾನೋ ಲಿಂಗತತ್ಪರಃ |

ಮನಃಪ್ರಸಾದಮತುಲಮ್

ಲಭತೇ ಜ್ಞಾನಕಾರಣಮ್ || 11-10

ಲಿಂಗನಿಷ್ಠವಾದ (ಪ್ರಸಾದಿಸ್ಥಲದ ಸಾಧಕನು) ಯಾವಾಗಲೂ ಆ ಲಿಂಗಾರ್ಪಿತವಾದ ಅನ್ನವನ್ನು ಭುಂಜಿಸುವವನಾಗಿ ಜ್ಞಾನಕ್ಕೆ ಕಾರಣವಾದ ಅಸದೃಶವಾದ ಮನಸ್ಸಿನ ಪ್ರಸನ್ನತೆಯನ್ನು ಪಡೆದುಕೊಳ್ಳುತ್ತಾನೆ.

ಆತ್ಮಭೋಗಾಯ ನಿಯತಮ್

ಯದ್ಯದ್ ದ್ರವ್ಯಂ ಸಮಾಹಿತಮ್ |

ತತ್ತತ್ ಸಮಪ್ರ್ಯ ದೇವಾಯ

ಭುಂಜೀತಾತ್ಮ ವಿಶುದ್ಧಯೇ || 11-11

ತನ್ನ ಭೋಗಕ್ಕಾಗಿ ಯಾವ ಯಾವ ದ್ರವ್ಯಗಳು ನಿಯತವಾಗಿವೆಯೋ (ನಿಶ್ಚಿತವಾಗಿವೆಯೋ) ತಾನು ಸಂಪಾದಿಸಿದ (ತಾನು ದುಡಿದು ಗಳಿಸಿದ) ಆ ಎಲ್ಲ ದ್ರವ್ಯಗಳನ್ನು ತನ್ನ ಆತ್ಮಶುದ್ಧಿಗಾಗಿ (ಮನಸ್ಸಿನ ಶುದ್ಧಿಗಾಗಿ) ದೇವನಿಗೆ (ತನ್ನ ಇಷ್ಟಲಿಂಗಕ್ಕೆ) ಸಮರ್ಪಿಸಿ ಭುಂಜಿಸಬೇಕು (ಸ್ವೀಕರಿಸಬೇಕು).

ನಿತ್ಯ ಸಿದ್ಧೇನ ದೇವೇನ

ಭಿಷಜಾ ಜನ್ಮರೋಗಿಣಾಮ್ |

ಯದ್ಯತ್ ಪ್ರಸಾದಿತಂ ಭುಕ್ತ್ವಾ

ತತ್ತಜ್ಜನ್ಮ ರಸಾಯನಮ್ || 11-12

ಜನ್ಮರೋಗಿಗಳಿಗೆ (ಭವರೋಗಿಗಳಿಗೆ) ವೈದ್ಯನಾದ, ನಿತ್ಯಸಿದ್ಧನಾದ (ಇಷ್ಟಲಿಂಗದಲ್ಲಿ ಸದಾ ಸನ್ನಿಹಿತನಾದ) ದೇವನಿಗೆ (ಶಿವನಿಗೆ) ಯಾವ ಯಾವ ಪದಾರ್ಥವು ಅರ್ಪಿಸಿ ಪ್ರಸಾದವಾಗಿರುವುದೋ ಅದನ್ನು ಸೇವಿಸುವುದು ಭವರೋಗಕ್ಕೆ ದಿವ್ಯಔಷಧವು.

ಆರೋಗ್ಯಕಾರಣಂ ಪುಂಸಾಮ್

ಅಂತಃಕರಣಶುದ್ಧಿದಮ್ |

ತಾಪತ್ರಯಮಹಾರೋಗ-

ಸಮುದ್ಧರಣಭೇಷಜಮ್ || 11-13

(ಈ ಪ್ರಸಾದವು) ಎಲ್ಲ ಜೀವಿಗಳ ಆರೋಗ್ಯಕ್ಕೆ ಕಾರಣವಾಗಿರುತ್ತದೆ. ಅಂತಃಕರಣದ ಶುದ್ಧಿಯನ್ನು ಮಾಡುತ್ತದೆ. ತಾಪತ್ರಯಗಳೆಂಬ ಮಹಾರೋಗವನ್ನು ನಿರ್ಮೂಲನ ಮಾಡುವ ದಿವ್ಯಔಷಧವಾಗಿರುತ್ತದೆ.

ವಿದ್ಯಾವೈಶದ್ಯಕರಣಮ್

ವಿನಿಪಾತ ವಿಘಾತನಮ್ |

ದ್ವಾರಂ ಜ್ಞಾನಾವತಾರಸ್ಯ

ಮೋಹಚ್ಛೇದಸ್ಯ ಕಾರಣಮ್ || 11-14

(ಈ ಪ್ರಸಾದವು) ವಿದ್ಯೆಯ ವಿಕಾಸಕ್ಕೆ ಕಾರಣವಾಗಿರುತ್ತದೆ. ವಿನಿಪಾತಗಳ (ಸಂಕಟಗಳ) ನಾಶಕವು ಆಗಿರುತ್ತದೆ. ಜ್ಞಾನದ ಆಗಮಕ್ಕೆ ಮಹಾದ್ವಾರವಾಗಿದ್ದು ಮೋಹವನ್ನು ನಾಶಗೊಳಿಸಲು ಕಾರಣವಾಗಿರುತ್ತದೆ.

ವೈರಾಗ್ಯ ಸಂಪದೋ ಮೂಲಮ್

ಮಹಾನಂದಪ್ರವರ್ಧನಮ್ |

ದುರ್ಲಭಂ ಪಾಪಚಿತ್ತಾನಾಮ್

ಸುಲಭಂ ಶುದ್ಧಕರ್ಮಣಾಮ್ || 11-15

ಈ ಪ್ರಸಾದವು) ವೈರಾಗ್ಯವೆಂಬ ಸಂಪತ್ತಿಗೆ ಮೂಲಕಾರಣವಾಗಿರುತ್ತದೆ. ಮಹಾನಂದವನ್ನು ಹೆಚ್ಚಿಸುತ್ತದೆ. ಇದು ಪಾಪಿಗಳಿಗೆ ದುರ್ಲಭವಾಗಿದ್ದು ಶುದ್ಧ ಕರ್ಮವುಳ್ಳವರಿಗೆ (ಪುಣ್ಯಾತ್ಮರಿಗೆ) ಸುಲಭವಾಗುತ್ತದೆ.

ಆದೃತಂ ಬ್ರಹ್ಮವಿಷ್ಣ್ವಾದ್ಯೈಃ

ವಸಿಷ್ಠಾದ್ಯೈಶ್ಚ ತಾಪಸೈಃ |

ಶಿವಸ್ವೀಕೃತಮನ್ನಾದ್ಯಮ್

ಸ್ವೀಕಾರ್ಯಂ ಸಿದ್ಧಿಕಾಂಕ್ಷಿಭಿಃ || 11-16

ಬ್ರಹ್ಮ, ವಿಷ್ಣು ಮೊದಲಾದ ದೇವತೆಗಳಿಂದ ಮತ್ತು ವಸಿಷ್ಠ ಮೊದಲಾದ ತಪಸ್ವಿಗಳಿಂದ (ಮುನಿಗಳಿಂದ) ಈ ಪ್ರಸಾದವು ಸ್ವೀಕರಿಸಲ್ಪಟ್ಟಿದೆ. ಆದ್ದರಿಂದ ಸಿದ್ಧಿಕಾಂಕ್ಷಿಗಳು(ಮೋಕ್ಷಾಪೇಕ್ಷಿಗಳು)ಶಿವನಿಗೆ ಅರ್ಪಿಸಿದ ಅನ್ನಾದಿಗಳನ್ನು ಸ್ವೀಕರಿಸಬೇಕು.

ಪತ್ರಂ ಪುಷ್ಪಂ ಫಲಂ ತೋಯಮ್

ಯಚ್ಛಿವಾಯ ನಿವೇದಿತಮ್ |

ತತ್ತತ್ ಸ್ವೀಕಾರಯೋಗೇನ

ಸರ್ವಪಾಪ ಕ್ಷಯೋ ಭವೇತ್ || 11-17

ಶಿವನಿಗೆ ನಿವೇದಿಸಿದ (ಅರ್ಪಿಸಿದ) ಪತ್ರೆ, ಪುಷ್ಪ, ಫಲ ಮತ್ತು ಜಲ-ಇವುಗಳನ್ನು ಸ್ವೀಕರಿಸುವುದರಿಂದ ಸರ್ವಪಾಪಗಳ ಕ್ಷಯವು ಆಗುತ್ತದೆ.

ಯಥಾ ಶಿವಪ್ರಸಾದಾನ್ನಮ್

ಸ್ವೀಕಾರ್ಯಂ ಲಿಂಗ ತತ್ಪರೈಃ |

ತಥಾ ಗುರೋಃ ಪ್ರಸಾದಾನ್ನಮ್

ತಥೈವ ಶಿವಯೋಗಿನಾಮ್ || 11-18

ಲಿಂಗತತ್ಪರರಾದ (ಲಿಂಗನಿಷ್ಠರಾದ ಪ್ರಸಾದಿಸ್ಥಲದ ಸಾಧಕರು) ಯಾವ ರೀತಿಯಾಗಿ ಶಿವನ ಪ್ರಸಾದರೂಪವಾದ ಅನ್ನವನ್ನು ಸ್ವೀಕರಿಸುತ್ತಾರೆಯೋ ಹಾಗೆಯೇ ಗುರುವಿನ ಮತ್ತು ಶಿವಯೋಗಿಗಳ ಪ್ರಸಾದಾನ್ನವನ್ನು ಸಹ ಸ್ವೀಕರಿಸಬೇಕು (ಲಿಂಗ, ಗುರು, ಜಂಗಮ ಪ್ರಸಾದಗಳನ್ನು ಸ್ವೀಕರಿಸಬೇಕು).

ಇತಿ ಪ್ರಸಾದಿಸ್ಥಲಂ

----------------

ಅಥ ಗುರುಮಾಹಾತ್ಮ್ಯಸ್ಥಲಮ್

ಗುರುರೇವಾತ್ರ ಸರ್ವೆಷಾಮ್

ಕಾರಣಂ ಸಿದ್ಧಿಕರ್ಮಣಾಮ್ |

ಗುರುರೂಪೋ ಮಹಾದೇವೋ

ಯತಃ ಸಾಕ್ಷಾದುಪಸ್ಥಿತಃ || 11-19

ಈ ಲೋಕದಲ್ಲಿ ಎಲ್ಲರ ಸಿದ್ಧಿಕರ್ಮಗಳಿಗೆ (ಭೋಗ, ಮೋಕ್ಷ, ಸಿದ್ಧಿಗಳಿಗೆ) ಗುರುವೇ ಕಾರಣನು. ಏಕೆಂದರೆ ಮಹಾದೇವನೇ ಸಾಕ್ಷಾತ್ ಗುರು ಸ್ವರೂಪವಾಗಿ ಉಪಸ್ಥಿತನಾಗಿದ್ದಾನೆ (ಪ್ರತ್ಯಕ್ಷವಾಗಿ ಇದ್ದಾನೆ).

ನಿಷ್ಕಲೋ ಹಿ ಮಹಾದೇವೋ

ನಿತ್ಯಜ್ಞಾನಮಹೋದಧಿಃ |

ಸಕಲೋ ಗುರುರೂಪೇಣ

ಸರ್ವಾನುಗ್ರಾಹಕೋ ಭವೇತ್ || 11-20

ಯಃ ಶಿವಃ ಸ ಗುರುರ್ಜ್ಞೆಯೋ

ಯೋ ಗುರುಃ ಸ ಶಿವಃ ಸ್ಮೃತಃ |

ನ ತಯೋರಂತರಂ ಕುರ್ಯಾದ್

ಜ್ಞಾನಾವಾಪ್ತೌ ಮಹಾಮತಿಃ || 11-21

ಯಾವನು ಶಿವನೋ ಅವನೇ ಗುರುವೆಂದು ತಿಳಿದುಕೊಳ್ಳಬೇಕು. ಮಹಾಮತಿಯಾದ ಪ್ರಸಾದಿಯು ಜ್ಞಾನದ ಪ್ರಾಪ್ತಿಗಾಗಿ ಅವರೀರ್ವರಲ್ಲಿ ಅಂತರವನ್ನು (ಭೇದವನ್ನು) ಮಾಡಬಾರದು. ನಿತ್ಯಜ್ಞಾನದ ಮಹೋದಧಿಯಾದ (ಮಹಾಸಾಗರನಾದ) ಮಹಾದೇವನು ನಿಷ್ಕಲನಾಗಿರುತ್ತಾನೆ (ನಿರಾಕಾರವಾಗಿರುತ್ತಾನೆ). ಅವನೇ ಸಕಲನಾಗಿ (ಸಾಕಾರನಾಗಿ) ಗುರುರೂಪದಿಂದ ಸರ್ವರನ್ನು ಅನುಗ್ರಹಿಸುತ್ತಾನೆ. (ಸ್ವಸ್ವರೂಪಜ್ಞಾನ ರೂಪವಾದ ಅನುಗ್ರಹವನ್ನು ಮಾಡುತ್ತಾನೆ ಹಾಗೂ ಭೋಗ ಮೋಕ್ಷಗಳನ್ನೂ ಸಹ ಅನುಗ್ರಹಿಸುತ್ತಾನೆ).

ಹಸ್ತಪಾದಾದಿಸಾಮ್ಯೇನ

ನೇತರೈಃ ಸದೃಶಂ ವದೇತ್ |

ಆಚಾರ್ಯಂ ಜ್ಞಾನದಂ ಶುದ್ಧಮ್

ಶಿವರೂಪತಯಾ ಸ್ಥಿತಮ್ || 11-22

ಜ್ಞಾನವನ್ನು ಕೊಡುವ ಶುದ್ಧನಾದ ಶಿವಸ್ವರೂಪದಲ್ಲಿರುವ ಆಚಾರ್ಯನನ್ನು (ಗುರುವನ್ನು) ಹಸ್ತ ಪಾದಗಳ ಸಾಮ್ಯತೆಯಿಂದ ಇತರರೊಂದಿಗೆ ಸಮಾನನೆಂದು ಹೇಳಕೂಡದು.

ಆಚಾರ್ಯಸ್ಯಾವಮಾನೇನ

ಶ್ರೇಯಃ ಪ್ರಾಪ್ತಿರ್ವಿಹನ್ಯತೇ |

ತಸ್ಮಾನ್ನಿಃಶ್ರೇಯಸಪ್ರಾಪ್ತ್ಯೈ

ಪೂಜಯೇತ್ ತಂ ಸಮಾಹಿತಃ || 11-23

ಆಚಾರ್ಯನ (ಗುರುವಿನ) ಅವಮಾನವನ್ನು ಮಾಡುವುದರಿಂದ ಶ್ರೇಯಸ್ಸಿನ ಪ್ರಾಪ್ತಿಯು (ಮೋಕ್ಷಪ್ರಾಪ್ತಿಯು) ಉಂಟಾಗುವುದಿಲ್ಲ. ಆದ್ದರಿಂದ ಮುಕ್ತಿಯ ಪ್ರಾಪ್ತಿಗಾಗಿ ಆ ಗುರುವನ್ನು ಸಮಾಧಾನವಾದ ಮನಸ್ಸಿನಿಂದ ಪೂಜಿಸಬೇಕು.

ಗುರುಭಕ್ತಿವಿಹೀನಸ್ಯ

ಶಿವಭಕ್ತಿರ್ನ ಜಾಯತೇ |

ತತಃ ಶಿವೇ ಯಥಾ ಭಕ್ತಿಃ

ತಥಾ ಭಕ್ತಿರ್ಗುರಾವಪಿ || 11-24

ಗುರುಭಕ್ತಿ ಇಲ್ಲದವನಿಗೆ ಶಿವಭಕ್ತಿಯು ಉಂಟಾಗುವುದಿಲ್ಲ. ಆದ್ದರಿಂದ ಶಿವನಲ್ಲಿ ಯಾವ ರೀತಿಯಾಗಿ ಭಕ್ತಿಯನ್ನು ಮಾಡುವನೋ ಅದರಂತೆ ಗುರುವಿನಲ್ಲಿಯೂ ಭಕ್ತಿಯನ್ನು ಮಾಡಬೇಕು.

ಇತಿ ಗುರುಮಾಹಾತ್ಮ್ಯಸ್ಥಲಂ

-------------------

ಅಥ ಲಿಂಗಮಾಹಾತ್ಮ್ಯಸ್ಥಲಮ್

ಗುರು ಮಾಹಾತ್ಮ್ಯ ಯೋಗೇನ

ನಿಜ ಜ್ಞಾನಾತಿರೇಕತಃ |

ಲಿಂಗಸ್ಯಾಪಿ ಚ ಮಾಹಾತ್ಮ್ಯಮ್

ಸರ್ವೊತ್ಕೃಷ್ಟಂ ವಿಭಾವ್ಯತೇ || 11-25

ಗುರುಮಹಾತ್ಮ್ಯೆಯ ದೆಸೆಯಿಂದ ಮತ್ತು ನಿಜವಾದ ಜ್ಞಾನದ ಅತಿರೇಕದಿಂದ (ತನಗುಂಟಾದ ಶಿವಜ್ಞಾನದ ಅತಿಶಯದಿಂದ) ಲಿಂಗದ ಮಹಾತ್ಮೆಯೂ ಸಹ ಸರ್ವೊತ್ಕೃಷ್ಟವಾಗಿ ತೋರುತ್ತದೆ.

ಶಿವಸ್ಯ ಬೋಧಲಿಂಗಂ ಯದ್

ಗುರು ಬೋಧಿತಚೇತಸಾ |

ತದೇವ ಲಿಂಗಂ ವಿಜ್ಞೇಯಮ್

ಶಾಂಕರಂ ಸರ್ವಕಾರಣಮ್ || 11-26

ಶಿವನ ಚಿದ್ರೂಪದ ಚಿಹ್ನವೇ ಶಾಂಕರಲಿಂಗವು. ಇದುವೆ ಎಲ್ಲಕ್ಕೂ ಕಾರಣವಾಗಿರುತ್ತದೆ. ಇದನ್ನು ಗುರುವಿನ ಬೋಧನೆಯಿಂದುಂಟಾದ ಅರಿವಿನಿಂದಲೇ ತಿಳಿದುಕೊಳ್ಳಬೇಕು.

ಪರಂ ಪವಿತ್ರಮಮಲಮ್

ಲಿಂಗಂ ಬ್ರಹ್ಮ ಸನಾತನಮ್ |

ಶಿವಾಭಿಧಾನಂ ಚಿನ್ಮಾತ್ರಮ್

ಸದಾನಂದಂ ನಿರಂಕುಶಮ್ || 11-27

ಪರಮ ಪವಿತ್ರವೂ, ನಿರ್ಮಲವೂ, ಸನಾತನವೂ ಆದ ಬ್ರಹ್ಮತತ್ತ್ವವೇ ಲಿಂಗವು. ಚಿದ್ರೂಪವಾದ ಸದಾನಂದ ರೂಪವಾದ ಶಿವನೆಂಬ ಹೆಸರುಳ್ಳ ಆ ಲಿಂಗವು ನಿರಂಕುಶವಾದುದಾಗಿದೆ (ಈ ಲಿಂಗತತ್ತ್ವವೇ ಸರ್ವರ ಮೇಲೆ ಶಾಸನ ಮಾಡುವುದರಿಂದ, ಇದರ ಮೇಲೆ ಶಾಸನ ಮಾಡುವವರು ಬೇರಾರೂ ಇರುವುದಿಲ್ಲ).

ಕಾರಣಂ ಸರ್ವ ಲೋಕಾನಾಮ್

ವೇದಾನಾಮಪಿ ಕಾರಣಮ್ |

ಪೂರಣಂ ಸರ್ವತತ್ತ್ವಸ್ಯ

ತಾರಣಂ ಜನ್ಮವಾರಿಧೇಃ || 11-28

ಈ ಲಿಂಗವು ಸರ್ವಲೋಕಗಳಿಗೆ (ಹದಿನಾಲ್ಕು ಭುವನಗಳ ನಿರ್ಮಾಣಕ್ಕೆ) ಕಾರಣವಾಗಿದೆ. ವೇದಗಳ ಉತ್ಪತ್ತಿಗೂ ಸಹ ಇದುವೇ ಕಾರಣವಾಗಿದೆ. ಸರ್ವತತ್ತ್ವಗಳನ್ನೊಳಗೊಂಡ ಪರಿಪೂರ್ಣ ತತ್ತ್ವವಾಗಿದೆ ಮತ್ತು ಜನ್ಮವಾರಿಧಿಯನ್ನು (ಸಂಸಾರ ಸಾಗರವನ್ನು) ತಾರಣಗೊಳಿಸುವುದಾಗಿದೆ (ದಾಟಿಸುವಂತಹುದಾಗಿದೆ).

ಜ್ಯೋತಿರ್ಮಯಮ ನಿರ್ದೆಶ್ಯಮ್

ಯೋಗಿನಾಮಾತ್ಮ ನಿ ಸ್ಥಿತಮ್ |

ಕಥಂ ವಿಜ್ಞಾಯತೇ ಲೋಕೇ

ಮಹಾಗುರುದಯಾಂ ವಿನಾ || 11-29

ಯೋಗಿಗಳ ಹೃದಯದಲ್ಲಿರುವ ಜ್ಯೋತಿರ್ಮಯವಾದ (ಪ್ರಕಾಶಮಾನ ವಾದ), ಅನಿರ್ದೆಶ್ಯವಾದ (ತೋರಿಸಲು ಬಾರದಿರುವ ಆ ಲಿಂಗತತ್ತ್ವವು) ಈ ಲೋಕದಲ್ಲಿ ಮಹಾಗುರುವಿನ ದಯವಿಲ್ಲದೆ ಹೇಗೆ ತಾನೇ ತಿಳಿದುಕೊಳ್ಳಲು ಸಾಧ್ಯ ?

ಬ್ರಹ್ಮಣಾ ವಿಷ್ಣುನಾ ಪೂರ್ವಮ್

ಯಲ್ಲಿಂಗಂ ಜ್ಯೋತಿ ರಾತ್ಮಕಮ್ |

ಅಪರಿಚ್ಛೇದ್ಯಮಭವತ್

ಕೇನ ವಾ ಪರಿಚೋದ್ಯತೇ || 11-30

ಪೂರ್ವದಲ್ಲಿ ಜ್ಯೋತಿರೂಪವಾದ ಆ ಲಿಂಗವು ಬ್ರಹ್ಮ ಮತ್ತು ವಿಷ್ಣುಗಳಿಂದ ತಿಳಿದುಕೊಳ್ಳಲು ಅಸಾಧ್ಯವಾಯಿತು. ಅಂತಹ ಆ ಲಿಂಗವು ಯಾರಿಂದ ತಾನೇ ತಿಳಿದುಕೊಳ್ಳಲು ಸಾಧ್ಯವಾದೀತು?

ಬಹುನಾತ್ರ ಕಿಮುಕ್ತೇನ

ಲಿಂಗಂ ಬ್ರಹ್ಮ ಸನಾತನಮ್ |

ಯೋಗಿನೋ ಯತ್ರ ಲೀಯಂತೇ

ಮುಕ್ತಪಾಶ ನಿಬಂಧನಾಃ || 11-31

ಈ ಲಿಂಗದ ವಿಷಯದಲ್ಲಿ ಬಹಳಷ್ಟು ಹೇಳುವುದರಿಂದ ಏನು ಪ್ರಯೋಜನ? ಪಾಶಬಂಧನದಿಂದ ಮುಕ್ತರಾದ ಯೋಗಿಗಳು ಎಲ್ಲಿ ಲೀನವಾಗುತ್ತಾರೆಯೋ ಸನಾತನವಾದ ಆ ಬ್ರಹ್ಮತತ್ತ್ವವೇ ಲಿಂಗವು.

ಪೀಠಿಕಾ ಪರಮಾ ಶಕ್ತಿಃ

ಲಿಂಗಂ ಸಾಕ್ಷಾತ್ ಪರಃ ಶಿವಃ |

ಶಿವಶಕ್ತಿ ಸಮಾಯೋಗಮ್

ವಿಶ್ವಂ ಲಿಂಗಂ ತದುಚ್ಯತೇ || 11-32

ಪೀಠಿಕೆಯು (ಪಾಣಿಬಟ್ಟಲು) ಪರಮ ಶಕ್ತಿಸ್ವರೂಪವಾದುದು. ಲಿಂಗವು (ಬಾಣವು) ಸಾಕ್ಷಾತ್ ಪರಶಿವನ ಸ್ವರೂಪವಾಗಿರುತ್ತದೆ. ಈ ಶಿವ-ಶಕ್ತಿ ಸಂಯುಕ್ತವಾದ ಲಿಂಗವೇ ವಿಶ್ವವೆಂಬುದಾಗಿ ಹೇಳಲ್ಪಟ್ಟಿರುತ್ತದೆ (ಅಖಂಡ ಚೈತನ್ಯಾತ್ಮಕ ಶಕ್ತಿ ಸ್ವರೂಪವಾದದ್ದೇ ಈ ವಿಶ್ವವು ಎಂದು ತಿಳಿದುಕೊಳ್ಳಬೇಕು).

ಬ್ರಹ್ಮಾದಯಃ ಸುರಾಃ ಸರ್ವೆ

ಮುನಯಃ ಶೌನಕಾದಯಃ |

ಶಿವಲಿಂಗಾರ್ಚನಾ ದೇವ

ಸ್ವಂ ಸ್ವಂ ಪದಮವಾಪ್ನುಯುಃ || 11-33

ಬ್ರಹ್ಮನೇ ಮೊದಲಾದ ಎಲ್ಲ ದೇವತೆಗಳು ಮತ್ತು ಶೌನಕಾದಿ ಮುನಿಗಳು ಈ ಶಿವಲಿಂಗಾರ್ಚನೆಯಿಂದಲೇ ತಮ್ಮ ತಮ್ಮ ಪದವಿಗಳನ್ನು ಪ್ರಾಪ್ತ ಮಾಡಿಕೊಳ್ಳುತ್ತಾರೆ.

ವಿಶ್ವಾಧಿಪತ್ವಮ್ ಈಶಸ್ಯ

ಲಿಂಗಮೂರ್ತೆಃ ಸ್ವಭಾವಜಮ್ |

ಅನನ್ಯದೇವ-ಸಾ-ದೃಶ್ಯಮ್

ಶ್ರುತಿರಾಹ ಸನಾತನೀ || 11-34

ಅನ್ಯದೇವತೆಗಳೊಡನೆ ಸಾದೃಶ್ಯತ್ವವು ಇಲ್ಲದಿರುವ ವಿಶ್ವಾಧಿಪತ್ವವು ಲಿಂಗಮೂರ್ತಿಯಾದ ಈಶ್ವರನಿಗೆ ಸ್ವಭಾವ ಸಿದ್ಧವಾದದ್ದು ಎಂದು ಸನಾತನವಾದ ಶ್ರುತಿಯು ಹೇಳುತ್ತದೆ.

ಇತಿ ಲಿಂಗಮಾಹಾತ್ಮ್ಯ ಸ್ಥಲಂ

--------------------

ಅಥ ಜಂಗಮ ಮಾಹಾತ್ಮ್ಯ ಸ್ಥಲಮ್

ಗುರುಶಿಷ್ಯ ಸಮಾರೂಢ-

ಲಿಂಗಮಾಹಾತ್ಮ್ಯ ಸಂಪದಃ |

ಸರ್ವಂ ಚಿದ್ರೂಪ ವಿಜ್ಞಾನಾತ್

ಜಂಗಮಾಧಿಕ್ಯ ಮುಚ್ಯತೇ || 11-35

ಗುರು ಶಿಷ್ಯರಲ್ಲಿ ಸಮಾರೂಢವಾದ (ನೆಲೆಗೊಂಡ) ಲಿಂಗಮಾಹಾತ್ಮ್ಯ ರೂಪವಾದ ಸಂಪತ್ತಿನಿಂದ (ಜ್ಞಾನಸಂಪತ್ತಿನಿಂದ) ಸರ್ವವೆಲ್ಲವೂ ಚಿದ್ರೂಪವೆಂಬ ವಿಜ್ಞಾನ ಉಂಟಾಗಲು (ಅನುಭವ ಉಂಟಾಗಲು) ಅದುವೇ ಜಂಗಮಾಧಿಕ್ಯವೆಂದು ಹೇಳಲ್ಪಡುತ್ತದೆ.

ಜಾನಂತ್ಯತಿಶಯಾದ್ ಯೇ ತು

ಶಿವಂ ವಿಶ್ವಪ್ರಕಾಶಕಮ್ |

ಸ್ವಸ್ವರೂಪತಯಾ ತೇ ತು

ಜಂಗಮಾ ಇತಿ ಕೀರ್ತಿತಾಃ || 11-36

ವಿಶ್ವಪ್ರಕಾಶಕನಾದ ಶಿವನನ್ನು ಯಾರು ತನ್ನ ಸ್ವಸ್ವರೂಪನನ್ನಾಗಿ ವಿಶೇಷವಾಗಿ ತಿಳಿದುಕೊಳ್ಳುತ್ತಾರೆಯೋ ಅವರು ಜಂಗಮರೆಂದು ಕೀರ್ತಿಸಲ್ಪಡುತ್ತಾರೆ.

ಯೇ ಪಶ್ಯಂತಿ ಜಗಜ್ಜಾಲಮ್

ಚಿದ್ರೂಪಂ ಶಿವಯೋಗತಃ |

ನಿರ್ದೂತ ಮಲ ಸಂಸ್ಪರ್ಶಾಃ

ತೇ ಸ್ಮೃತಾಃ ಶಿವಯೋಗಿನಃ || 11-37

ಯಾರು ಶಿವಯೋಗದಿಂದ ಈ ಜಗಜ್ಜಾಲವನ್ನು ಚಿದ್ರೂಪವಾಗಿ ಕಾಣುತ್ತಾರೆಯೋ ಮತ್ತು ಆಣವಾದಿ ಮಲಗಳ ಸಂಬಂಧವನ್ನು ನಿಶ್ಯೇಶವಾಗಿ ಕಳೆದುಕೊಂಡ ಆ ಜಂಗಮರೇ ಶಿವಯೋಗಿಗಳೆಂದು ಕರೆಸಿಕೊಳ್ಳುತ್ತಾರೆ.

ಘೋರ ಸಂಸಾರ ತಿಮಿರ-

ಪರಿ ಧ್ವಂಸ ನ ಕಾರಣಮ್ |

ಯೇಷಾಮಸ್ತಿ ಶಿವಜ್ಞಾನಮ್

ತೇ ಮತಾಃ ಶಿವಯೋಗಿನಃ || 11-38

ಘೋರವಾದ (ಭಯಂಕರವಾದ) ಸಂಸಾರರೂಪವಾದ ಕತ್ತಲೆಯನ್ನು ಪರಿಧ್ವಂಸ ಮಾಡಲು (ಸಮೂಲ ನಾಶಮಾಡಲು) ಕಾರಣವಾದ ಶಿವಜ್ಞಾನವು ಯಾರಲ್ಲಿ ಇರುತ್ತದೆಯೋ ಅವರೇ ಶಿವಯೋಗಿಗಳೆಂದು ಕರೆಯಿಸಿಕೊಳ್ಳುತ್ತಾರೆ.

ಜಿತಕಾಮಾ ಜಿತಕ್ರೋಧಾ

ಮೋಹಗ್ರಂಥಿ ವಿಭೇದಿನಃ |

ಸಮಲೋಷ್ಟಾಶ್ಮ ಕನಕಾಃ

ಸಾಧವಃ ಶಿವಯೋಗಿನಃ || 11-39

ಕಾಮ ಕ್ರೋಧಾದಿಗಳನ್ನು ಗೆದ,್ದ ಮೋಹಗ್ರಂಥಿಯನ್ನು ಭೇದಿಸಿಕೊಂಡ (ಮೋಹ ನಾಶಮಾಡಿಕೊಂಡ), ಮಣ್ಣು, ಕಲ್ಲು, ಬಂಗಾರಗಳನ್ನು ಸಮನಾಗಿ ತಿಳಿದುಕೊಂಡ ಸಾಧುಗಳೇ (ಸಜ್ಜನರೇ) ಶಿವಯೋಗಿಗಳು.

ಸಮೌ ಶತ್ರೌ ಚ ಮಿತ್ರೇ ಚ

ಸಾಕ್ಷಾತ್ಕೃತಶಿವಾತ್ಮಕಾಃ |

ನಿಃಸ್ಪೃಹಾ ನಿರಹಂಕಾರಾ

ವರ್ತಂತೇ ಶಿವಯೋಗಿನಃ || 11-40

ನಿರಹಂಕಾರಿಗಳೂ, ನಿಸ್ಪೃಹರೂ ಆದ ಮತ್ತು ಶಿವನನ್ನು ತನ್ನ ಆತ್ಮರೂಪವಾಗಿ ಸಾಕ್ಷಾತ್ಕರಿಸಿಕೊಂಡ ಶಿವಯೋಗಿಗಳು ಶತ್ರುಗಳಲ್ಲಿ ಮತ್ತು ಮಿತ್ರರಲ್ಲಿ ಸಮನಾಗಿ ವರ್ತಿಸುತ್ತಾರೆ.

ದುರ್ಲಭಂ ಹಿ ಶಿವಜ್ಞಾನಮ್

ದುರ್ಲಭಂ ಶಿವಚಿಂತನಮ್ |

ಯೇಷಾಮೇತದ್ ದ್ವಯಂ ಚಾಸ್ತಿ

ತೇ ಹಿ ಸಾಕ್ಷಾಚ್ಛಿವಾತ್ಮಕಾಃ || 11-41

ಶಿವಜ್ಞಾನವು ದುರ್ಲಭವಾದುದು. ಶಿವಚಿಂತನೆಯೂ ಸಹ ದುರ್ಲಭವಾದುದೇ. ಯಾರು ಇವೆರಡನ್ನೂ ಮಾಡುತ್ತಾರೆಯೋ (ಶಿವಜ್ಞಾನ ಮತ್ತು ಶಿವಚಿಂತನೆಯನ್ನು ಮಾಡುತ್ತಾರೆಯೋ) ಅವರು ನಿಶ್ಚಿತವಾಗಿ ಸಾಕ್ಷಾತ್ ಶಿವಸ್ವರೂಪರೇ ಆಗಿರುತ್ತಾರೆ.

ಪಾದಾಗ್ರರೇಣವೋ ಯತ್ರ

ಪತಂತಿ ಶಿವಯೋಗಿನಾಮ್ |

ತದೇವ ಸದನಂ ಪುಣ್ಯಮ್

ಪಾವನಂ ಗೃಹ ಮೇಧಿನಾಮ್ || 11-42

ಶಿವಯೋಗಿಗಳ ಪಾದದ ತುದಿಯಲ್ಲಿರುವ ಧೂಳಿನಕಣವು ಯಾರ ಮನೆಯಲ್ಲಿ ಬೀಳುವುದೋ ಆ ಗೃಹಸ್ಥರ ಮನೆಯೇ ಪವಿತ್ರವಾದ ಪುಣ್ಯಕ್ಷೇತ್ರವಾಗುವುದು.

ಸರ್ವಸಿದ್ಧಿಕರಂ ಪುಂಸಾಮ್

ದರ್ಶನಂ ಶಿವಯೋಗಿನಾಮ್ |

ಸ್ಪರ್ಶನಂ ಪಾಪ ಶಮನಮ್

ಪೂಜನಂ ಮುಕ್ತಿಸಾಧನಮ್ || 11-43

ಶಿವಯೋಗಿಗಳ ದರ್ಶನವು ಎಲ್ಲ ಜೀವಿಗಳಿಗೆ ಸಕಲಸಿದ್ಧಿಯನ್ನುಂಟು ಮಾಡುವುದು. ಅವರ ಸ್ಪರ್ಶವು ಪಾಪವನ್ನು ಶಮನ ಮಾಡುವುದು. ಅವರನ್ನು ಪೂಜಿಸುವುದರಿಂದ ಮುಕ್ತಿಯು ಲಭಿಸುವುದು.

ಮಹತಾಂ ಶಿವತಾತ್ಪರ್ಯ-

ವೇದಿನಾಮ್ ಅನುಮೋದಿನಾಮ್ |

ಕಿಂ ವಾ ಫಲಂ ನ ಸಿದ್ಧ್ಯೇತ

ಸಂಪರ್ಕಾಚ್ಛಿವ ಯೋಗಿನಾಮ್ || 11-44

ಶಿವತತ್ತ್ವದ ತಾತ್ಪರ್ಯಗಳನ್ನು (ರಹಸ್ಯಾರ್ಥವನ್ನು) ತಿಳಿದಿರುವ ಮತ್ತು ಅದನ್ನು ಅನುಭವಿಸಿ ಆನಂದಿಸುತ್ತಿರುವ ಶಿವಯೋಗಿಗಳ ಸಂಪರ್ಕದಿಂದ ಯಾವ ಫಲವು ತಾನೇ ಸಿದ್ಧಿಸುವುದಿಲ್ಲ?

ಇತಿ ಜಂಗಮ ಮಾಹಾತ್ಮ್ಯ ಸ್ಥಲಂ

----------------------

ಅಥ ಭಕ್ತ ಮಾಹಾತ್ಮ್ಯ ಸ್ಥಲಮ್

ಗುರೋರ್ಲಿಂಗಸ್ಯ ಮಾಹಾತ್ಮ್ಯ-

ಕಥನಾಚ್ಛಿವ ಯೋಗಿನಾಮ್ |

ಸಿದ್ಧಂ ಭಕ್ತಸ್ಯ ಮಾಹಾತ್ಮ್ಯಮ್

ತಥಾಪ್ಯೇಷ ಪ್ರಶಸ್ಯತೇ || 11-45

ಶ್ರೀಗುರುವಿನ, ಲಿಂಗದ ಮತ್ತು ಶಿವಯೋಗಿಗಳ ಮಹಾತ್ಮ್ಯವನ್ನು ಹೇಳುವುದರಿಂದ ಭಕ್ತನ ಮಹಾತ್ಮ್ಯವು ಸಿದ್ಧವಾಗುತ್ತದೆ. ಆದರೂ ಸಹ ಅದನ್ನು ಪ್ರಶಂಸಿಸಲಾಗುವುದು.

ಯೇ ಭಜಂತಿ ಮಹಾದೇವಮ್

ಪರಮಾತ್ಮಾ ನಮವ್ಯಯಮ್ |

ಕರ್ಮಣಾ ಮನಸಾ ವಾಚಾ

ತೇ ಭಕ್ತಾ ಇತಿ ಕೀರ್ತಿತಾಃ || 11-46

ಅವ್ಯಯನೂ (ನಾಶರಹಿತನೂ), ಪರಮಾತ್ಮನೂ (ಸರ್ವಾತ್ಮನೂ) ಆದ ಮಹಾದೇವನನ್ನು ಯಾರು ಕ್ರಿಯೆ, ವಾಣಿ ಮತ್ತು ಮನಸ್ಸುಗಳಿಂದ (ತ್ರಿಕರಣಗಳಿಂದ) ಭಜಿಸುತ್ತಾರೆಯೋ (ಪೂಜಿಸುತ್ತಾರೆಯೋ) ಅವರೇ ಭಕ್ತರೆಂದು ಹೇಳಲ್ಪಡುತ್ತಾರೆ.

ದುರ್ಲಭಾ ಹಿ ಶಿವೇ ಭಕ್ತಿಃ

ಸಂಸಾರ ಭಯತಾರಿಣೀ |

ಸಾ ಯತ್ರ ವರ್ತತೇ ಸಾಕ್ಷಾತ್

ಸ ಭಕ್ತಃ ಪರಿಗೀಯತೇ || 11-47

ಸಂಸಾರ ಭಯದಿಂದ ಪಾರು ಮಾಡುವ ಶಿವನಲ್ಲಿರುವ ಭಕ್ತಿಯು ನಿಶ್ಚಯವಾಗಿ ದುರ್ಲಭವಾದುದು. ಆ ಭಕ್ತಿಯು ಯಾರಲ್ಲಿ ಸಾಕ್ಷಾತ್ (ಪ್ರತ್ಯಕ್ಷವಾಗಿ) ಇರುತ್ತದೆಯೋ ಅವನೇ ಭಕ್ತನೆಂದು ವಿಶೇಷವಾಗಿ ಹೇಳಲ್ಪಡುತ್ತಾನೆ.

ಕಿಂ ವೇದೈಃ ಕಿಂ ತತಃ ಶಾಸ್ತ್ರೈಃ

ಕಿಂ ಯಜ್ಞೈಃ ಕಿಂ ತಪೋವ್ರತೈಃ |

ನಾಸ್ತಿ ಚೇಚ್ಛಾಂಕರೀ ಭಕ್ತಿಃ

ದೇಹಿನಾಂ ಜನ್ಮ ರೋಗಿಣಾಮ್ || 11-48

ಜನ್ಮರೋಗಿಗಳಾದ (ಭವರೋಗ ಪೀಡಿತರಾದ) ದೇಹಿಗಳಿಗೆ (ಜೀವಾತ್ಮರುಗಳಿಗೆ) ಶಾಂಕರೀ ಭಕ್ತಿಯು (ಶಿವಭಕ್ತಿಯು) ಇಲ್ಲದೆ ಇದ್ದರೆ, ವೇದಗಳ ಅಧ್ಯಯನದಿಂದ, ಅದರಂತೆ ಶಾಸ್ತ್ರಗಳ ಅಧ್ಯಯನದಿಂದ, ಯಜ್ಞಗಳಿಂದ (ಶಿವಪೂಜಾದಿಗಳಿಂದ) ಮತ್ತು ತಪೋವ್ರತಗಳಿಂದ ಏನೂ ಪ್ರಯೋಜನವಾಗಲಾರದು (ಭಕ್ತಿ ಇಲ್ಲದೆ ಮಾಡಿದ ಎಲ್ಲ ಕ್ರಿಯೆಗಳು ವ್ಯರ್ಥವಾಗುತ್ತವೆ).

ಶಿವಭಕ್ತಿ ವಿಹೀನಸ್ಯ

ಸುಕೃತಂ ಚಾಪಿ ನಿಷ್ಫಲಮ್ |

ವಿಪರೀತಫಲಂ ಚ ಸ್ಯಾದ್

ದಕ್ಷಸ್ಯಾಪಿ ಮಹಾಧ್ವರೇ || 11-49

ಶಿವಭಕ್ತಿ ಇಲ್ಲದವನ ಪುಣ್ಯಕರ್ಮವೂ ಕೂಡ ನಿಷ್ಫಲವಾಗುತ್ತದೆ ಮತ್ತು ಮಹಾಯಜ್ಞವನ್ನು ಮಾಡಿದ ದಕ್ಷ ಬ್ರಹ್ಮನಂತೆ ವಿಪರೀತ ಫಲವನ್ನು ಕೊಡುವಂತಹುದು ಸಹ ಆಗುತ್ತದೆ.

ಅತ್ಯಂತ ಪಾಪ ಕರ್ಮಾಪಿ

ಶಿವಭಕ್ತ್ಯಾ ವಿಶುದ್ಧ್ಯತಿ |

ಚಂಡೋ ಯಥಾ ಪುರಾ ಭಕ್ತ್ಯಾ

ಪಿತೃಹಾಪಿ ಶಿವೋ ಭವತ್ || 11-50

ಅತ್ಯಂತ ಪಾಪಕರ್ಮವನ್ನು ಮಾಡಿದವನೂ ಸಹ ಶಿವಭಕ್ತಿಯಿಂದ ಪರಿಶುದ್ಧನಾಗುತ್ತಾನೆ. ಹೇಗೆಂದರೆ ಪೂರ್ವಕಾಲದಲ್ಲಿ ಚಂಡನೆಂಬುವನು ತನ್ನ ತಂದೆಯನ್ನು ಕೊಂದರೂ ಸಹ ತಾನು ಮಾಡಿದ ಶಿವಭಕ್ತಿಯಿಂದ ಶಿವಸ್ವರೂಪನಾದನು.

ಸುಕೃತಂ ದುಷ್ಕೃತಂ ಚಾಪಿ

ಶಿವಭಕ್ತಸ್ಯ ನಾಸ್ತಿ ಹಿ |

ಶಿವಭಕ್ತಿ ವಿಹೀನಾನಾಮ್

ಕರ್ಮಪಾಶ ನಿಬಂಧನಮ್ || 11-51

ಶಿವಭಕ್ತನಾದವನಿಗೆ ಸುಕೃತ (ಪುಣ್ಯ)ವೇ ಆಗಲಿ, ದುಷ್ಕೃತ (ಪಾಪ)ವೇ ಆಗಲಿ ಇರುವುದಿಲ್ಲ. (ಆದರೆ) ಶಿವಭಕ್ತಿ ಇಲ್ಲದವರಿಗೆ ಕರ್ಮಪಾಶದ ಬಂಧನವು ಉಂಟಾಗುವುದು.

ಶಿವಾಶ್ರಿತಾ ನಾಂ ಜಂತೂನಾಮ್

ಕರ್ಮಣಾ ನಾಸ್ತಿ ಸಂಗಮಃ |

ವಾಜಿನಾಂ ದಿನ ನಾಥಸ್ಯ

ಕಥಂ ತಿಮಿರಜಂ ಭಯಮ್ || 11-52

ದಿನನಾಥನ (ಸೂರ್ಯನ) ವಾಜಿಗಳಿಗೆ (ಕುದುರೆಗಳಿಗೆ) ಹೇಗೆ ಕತ್ತಲೆಯಿಂದ ಉಂಟಾದ ಭಯವು ಇರುವುದಿಲ್ಲವೋ ಅದರಂತೆ ಶಿವನನ್ನು ಆಶ್ರಯಿಸಿದ ಜೀವಿಗಳಿಗೆ ಪುಣ್ಯ-ಪಾಪ ಕರ್ಮಗಳ ಸಂಗವು ಇರುವುದಿಲ್ಲ.

ನಿರೋದ್ಧುಂ ನ ಕ್ಷಮಂ ಕರ್ಮ

ಶಿವಭಕ್ತಾನ್ ವಿಶೃಂಖಲಾನ್ |

ಕಥಂ ಮತ್ತಗಜಾನ್ ರುಂಧೇತ್

ಶೃಂಖಲಾ ಬಿಸ ತಂತುಜಾ || 11-53

ತಾವರೆಯ ತಂತುಗಳಿಂದ ನಿರ್ಮಿಸಿದ ಶೃಂಖಲೆಯು (ಸರಪಳಿಯು) ಮದೋನ್ಮತ್ತವಾದ ಆನೆಯನ್ನು ಹೇಗೆ ತಡೆದು ನಿಲ್ಲಿಸಲಾರದೋ ಹಾಗೆ ವಿಶೃಂಖಲರಾದ (ಮಲ ಬಂಧನದಿಂದ ಮುಕ್ತರಾದ) ಶಿವಭಕ್ತರನ್ನು ಕರ್ಮಗಳು ತಡೆಯಲು ಸಮರ್ಥವಾಗುವುದಿಲ್ಲ.

ಬ್ರಾಹ್ಮಣಃ ಕ್ಷತ್ರಿಯೋ ವಾಪಿ

ವೈಶ್ಯೋ ವಾ ಶೂದ್ರ ಏವ ವಾ |

ಅಂತ್ಯ ಜೋ ವಾ ಶಿವೇ ಭಕ್ತಃ

ಶಿವವನ್ಮಾನ್ಯ ಏವ ಸಃ || 11-54

ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಇಲ್ಲವೆ ಅಂತ್ಯಜ – ಇವರಲ್ಲಿ ಯಾರೇ ಆದರೂ ಶಿವನಲ್ಲಿ ಭಕ್ತಿಯುಳ್ಳವನಾದರೆ ಅವನು ಶಿವನಂತೆಯೇ ಮಾನ್ಯನಾಗುತ್ತಾನೆ (ಗೌರವ ಯೋಗ್ಯನಾಗುತ್ತಾನೆ).

ಶಿವಭಕ್ತಿ ಸಮಾವೇಶೇ

ಕ್ವ ಜಾತಿ ಪರಿಕಲ್ಪನಾ |

ಇಂಧನೇಷ್ವಗ್ನಿ ದಗ್ಧೇಷು

ಕೋ ವಾ ಭೇದಃ ಪ್ರಕೀತ್ರ್ಯತೇ || 11-55

ಅಗ್ನಿಯಿಂದ ದಗ್ಧಗಳಾದ ಇಂಧನಗಳಲ್ಲಿ (ವಿವಿಧ ಕಟ್ಟಿಗೆಗಳಲ್ಲಿ) ಜಾತಿಭೇದವು ಹೇಗೆ ಹೇಳಲು ಬರುವುದಿಲ್ಲವೋ ಅದರಂತೆ ಶಿವಭಕ್ತಿಯು ಸಮಾವೇಶವಾದ ಮೇಲೆ (ಶಿವಭಕ್ತಿಯ ಪ್ರವೇಶವಾದ ಮೇಲೆ) ಪೂರ್ವದ ಬ್ರಾಹ್ಮಣಾದಿ ಜಾತಿಗಳ ಪರಿಕಲ್ಪನೆಯು ಉಂಟಾಗುವುದಿಲ್ಲ.

ಶುದ್ಧಾ ನಿಯಮ ಸಂಯುಕ್ತಾಃ

ಶಿವಾರ್ಪಿತ ಫಲಾಗಮಾಃ |

ಅರ್ಚಯಂತಿ ಶಿವಂ ಲೋಕೇ

ವಿಜ್ಞೇಯಾಸ್ತೇ ಗಣೇಶ್ವರಾಃ || 11-56

ಶುದ್ಧರಾಗಿ (ದೀಕ್ಷೆಯಿಂದ ಪರಿಶುದ್ಧರಾಗಿ) ನಿಯಮಯುಕ್ತರಾಗಿ (ಶಿವಾರ್ಚನೆಯ ನೇಮ ಸಂಪನ್ನರಾಗಿ) ಎಲ್ಲ ಫಲಗಳನ್ನು ಶಿವನಿಗೆ ಸಮರ್ಪಿಸಿ ಯಾರು ಈ ಲೋಕದಲ್ಲಿ ಶಿವನನ್ನು ಅರ್ಚಿಸುತ್ತಾರೆಯೋ ಅವರು ಗಣೇಶ್ವರರೆಂತಲೇ (ಶಿವಗಣರೆಂತಲೇ) ತಿಳಿದುಕೊಳ್ಳಬೇಕು.

ಇತಿ ಭಕ್ತಮಾಹಾತ್ಮ್ಯಸ್ಥಲಂ

--------------------

ಅಥ ಶರಣ ಮಾಹಾತ್ಮ್ಯ ಸ್ಥಲಮ್

ಗುರುಲಿಂಗಾದಿ ಮಾಹಾತ್ಮ್ಯ-

ಬೋಧಾನ್ವೇಷಣ ಸಂಗತಃ |

ಸರ್ವಾತ್ಮನಾ ಶಿವಾ ಪತ್ತಿಃ

ಶರಣ ಸ್ಥಾನ ಮುಚ್ಯತೇ || 11-57

ಗುರು ಲಿಂಗಾದಿ ಮಾಹಾತ್ಮ್ಯದ (ಗುರು, ಲಿಂಗ, ಜಂಗಮ ಮತ್ತು ಭಕ್ತ ಮಾಹಾತ್ಮ್ಯದ) ಬೋಧನಾನ್ವೇಷಣ ಸಂಗದಿಂದ (ಸಂಶೋಧನಾತ್ಮಕ ತಿಳುವಳಿಕೆಯ ಸಂಬಂಧದಿಂದ) ಮತ್ತು ಸರ್ವಾತ್ಮಭಾವದಿಂದ ಶಿವನಿಗೆ ಶರಣಾಗತನಾದವನೇ ಶರಣಸ್ಥಾನದವನೆಂದು ಕರೆಯಲ್ಪಡುತ್ತಾನೆ.

ಬ್ರಹ್ಮಾದಿ ವಿಬುಧಾನ್ ಸರ್ವಾನ್

ಮುಕ್ತ್ವಾ ಪ್ರಾಕೃತ ವೈಭವಾನ್ |

ಪ್ರಪದ್ಯತೇ ಶಿವಂ ಯತ್ತು

ಶರಣಂ ತಮುದಾಹೃತಮ್ || 11-58

ಬ್ರಹ್ಮ ವಿಷ್ಣ್ವಾದಿ ಎಲ್ಲ ದೇವತೆಗಳನ್ನು ಪ್ರಾಕೃತ ವೈಭವವುಳ್ಳವರನ್ನಾಗಿ (ಪ್ರಾಕೃತಿಕ ಸಂಪತ್ತುಳ್ಳವರನ್ನಾಗಿ) ತಿಳಿದು ಯಾರು ಶಿವನಿಗೆ ಶರಣಾಗತ ನಾಗುತ್ತಾನೆಯೋ ಅವನು ಶರಣನೆಂದು ಉದಾಹರಿಸಲ್ಪಡುವನು.

ಶರಣ್ಯಃ ಸರ್ವ ಭೂತಾನಾಮ್

ಶಂಕರಃ ಶಶಿಶೇಖರಃ |

ಸರ್ವಾತ್ಮನಾ ಪ್ರಪನ್ನಸ್ತಮ್

ಶರಣಾಗತ ಉಚ್ಯತೇ || 11-59

ಸರ್ವಭೂತಗಳಿಗೆ (ಎಲ್ಲಾ ಪ್ರಾಣಿಗಳಿಗೆ) ಶಶಿಶೇಖರನಾದ (ಚಂದ್ರಧರನಾದ) ಶಂಕರನು ಸಂರಕ್ಷಕನು. ಆದ್ದರಿಂದ ಸರ್ವಾತ್ಮಭಾವದಿಂದ ಆ ಶಂಕರನಿಗೆ ಪ್ರಪನ್ನನಾದವನೇ (ಮೊರೆ ಹೊಕ್ಕವನೆ) ಶರಣಾಗತನೆಂದು ಹೇಳಲ್ಪಡುತ್ತಾನೆ.

ವಿಮುಕ್ತ ಭೋಗ ಲಾಲಸ್ಯೋ

ದೇವತಾಂತರ ನಿಸ್ಪೃಹಃ |

ಶಿವಮಭ್ಯರ್ಥಯನ್ ಮೋಕ್ಷಮ್

ಶರಣಾರ್ಥಿತಿ ಗೀಯತೇ || 11-60

ಭೋಗದ ಲಾಲಸೆಯಿಂದ ಮುಕ್ತನಾದ (ಬ್ರಹ್ಮಾದಿ ಪದವಿಗಳ ಅಪೇಕ್ಷೆ ಇಲ್ಲದ), ಬೇರೆ ಯಾವ ದೇವನಲ್ಲಿಯೂ ಪ್ರೀತಿ ಇಲ್ಲದ ಅಂತೆಯೇ ಮೋಕ್ಷಕ್ಕಾಗಿ ಶಿವನನ್ನೇ ಪ್ರಾರ್ಥಿಸುವವನು ಶರಣಾರ್ಥಿಯೆಂದು ಹೇಳಲ್ಪಡುತ್ತಾನೆ.

ಯೇ ಪ್ರಪನ್ನಾ ಮಹಾದೇವಮ್

ಮನೋವಾಕ್ಕಾಯ ಕರ್ಮಭಿಃ |

ತೇಷಾಂ ತು ಕರ್ಮ ಜಾತೇನ

ಕಿಂ ವಾ ದೇವಾದಿ ತರ್ಪಣೈಃ || 11-61

ಮನಸ್ಸು, ವಾಣಿ ಮತ್ತು ಕಾಯದ ಕರ್ಮಗಳಿಂದ (ಕ್ರಿಯೆಗಳಿಂದ) ಯಾರು ಮಹಾದೇವನಿಗೆ ಪ್ರಪನ್ನರಾಗುತ್ತಾರೆಯೋ (ಶರಣಾಗತ ರಾಗುತ್ತಾರೆಯೋ) ಅವರಿಗೆ ಬೇರೆ ಕರ್ಮಸಮೂಹಗಳಿಂದ ಅಥವಾ ಬೇರೆ ದೇವರ ತರ್ಪಣದಿಂದ(ಪೂಜೆಗಳಿಂದ)ಯಾವ ಪ್ರಯೋಜನ ಇಲ್ಲ

ಸರ್ವೆಷಾಮಪಿ ಯಜ್ಞಾನಾಮ್

ಕ್ಷಯಃ ಸ್ವರ್ಗಃ ಫಲಾಯತೇ |

ಅಕ್ಷಯಂ ಫಲ ಮಾಪ್ನೋತಿ

ಪ್ರಪನ್ನಃ ಪರಮೇಶ್ವರಮ್ || 11-62

ಎಲ್ಲ ಯಜ್ಞಗಳಿಗೆ ಕ್ಷಯವಾದ ಸ್ವರ್ಗವೇ ಫಲವಾಗಿರುತ್ತದೆ. ಆದರೆ ಪರಮೇಶ್ವರನಿಗೆ ಪ್ರಪನ್ನನಾದವನು (ಶರಣಾದವನು) ಅಕ್ಷಯವಾದ ಫಲವನ್ನು ಹೊಂದುತ್ತಾನೆ.

ಪ್ರಪನ್ನ ಪಾರಿಜಾತಸ್ಯ

ಭವಸ್ಯ ಪರಮಾತ್ಮನಃ |

ಪ್ರಪತ್ತ್ಯಾ ಕಿಂ ನ ಜಾಯೇತ

ಪಾಪಿನಾಮಪಿ ದೇಹಿನಾಮ್ || 11-63

ಪ್ರಪನ್ನರಾದವರಿಗೆ (ಶರಣಾಗತರಾದವರಿಗೆ) ಪಾರಿಜಾತ ವೃಕ್ಷವಾಗಿರುವ (ಕಲ್ಪವೃಕ್ಷವಾಗಿರುವ) ಪರಬ್ರಹ್ಮ ಸ್ವರೂಪನಾದ ಶಿವನಿಗೆ, ಪಾಪಿಗಳಾದ ಜೀವಿಗಳೂ ಸಹ ಶರಣಾಗತರಾದರೆ ಏನು ತಾನೇ ಆಗುವುದಿಲ್ಲ? (ಅವರಿಗೆ ಸಕಲ ಸಿದ್ಧಿಗಳು ದೊರೆಯುತ್ತವೆ ಎಂಬುದು ತಾತ್ಪರ್ಯ).

ಪ್ರಪನ್ನಾನಾಂ ಮಹಾದೇವಮ್

ಪರಿಪಕ್ವಾಂತ ರಾತ್ಮನಾಮ್ |

ಜನ್ಮೈವ ಜನ್ಮ ನಾನ್ಯೇಷಾಮ್

ವೃಥಾ ಜನನ ಸಂಗಿನಾಮ್ || 11-64

ಪರಿಪಕ್ವವಾದ ಅಂತಃಕರಣವುಳ್ಳ ಮತ್ತು ಮಹಾದೇವನಿಗೆ ಪ್ರಪನ್ನರಾದವರ ಜನ್ಮವೇ ನಿಜವಾದ ಜನ್ಮವು. ಇದಕ್ಕೆ ಹೊರತಾಗಿ ಜನ್ಮವನ್ನು ತಾಳಿದ ಅನ್ಯರ ಜನ್ಮವು ವ್ಯರ್ಥವಾದುದಾಗಿದೆ (ಶಿವನಿಗೆ ಶರಣಾಗುವುದರಿಂದಲೇ ಜನ್ಮದ ಸಾಫಲ್ಯವು).

ದುರ್ಲಭಂ ಮಾನುಷಂ ಪ್ರಾಪ್ಯ

ಜನನಂ ಜ್ಞಾನ ಸಾಧನಮ್ |

ಯೇ ನ ಜಾನಂತಿ ದೇವೇಶಮ್

ತೇಷಾಮಾತ್ಮಾ ನಿರರ್ಥಕಃ || 11-65

ಜ್ಞಾನಕ್ಕೆ ಸಾಧನವಾದ ಮತ್ತು ದುರ್ಲಭವಾದ ಮನುಷ್ಯ ಜನ್ಮವನ್ನು ಪಡೆದುಕೊಂಡ ಬಳಿಕ ದೇವೇಶನನ್ನು (ಶಿವನನ್ನು) ತಿಳಿದುಕೊಳ್ಳುವುದಿಲ್ಲವೋ ಅವರ ಜೀವನವು ನಿರರ್ಥಕವಾದುದಾಗಿದೆ.

ತತ್ಕುಲಂ ಹಿ ಸದಾ ಶುದ್ಧಮ್

ಸಫಲಂ ತಸ್ಯ ಜೀವಿತಮ್ |

ಯಸ್ಯ ಚಿತ್ತಂ ಶಿವೇ ಸಾಕ್ಷಾದ್

ವಿಲೀನಮ ಬಹಿರ್ಮುಖಮ್ || 11-66

ಯಾವ ಶರಣನ ಚಿತ್ತವು ಬಹಿರ್ಮುಖವಾಗದೆ ಸಾಕ್ಷಾತ್ ಶಿವನಲ್ಲಿಯೇ ವಿಲೀನವಾಗಿರುವುದೋ ಆ ಶರಣನ ಕುಲವೇ ಸದಾ ಶುದ್ಧವಾದುದು ಮತ್ತು ಅವನ ಜೀವನವೇ ಸಫಲವಾದುದಾಗಿದೆ (ಸಾರ್ಥಕವಾದುದಾಗಿದೆ).

ಇತಿ ಶರಣ ಮಾಹಾತ್ಮ್ಯಸ್ಥಲಂ

-----------------------

ಅಥ ಪ್ರಸಾದ ಮಾಹಾತ್ಮ್ಯ ಸ್ಥಲಮ್

ಗುರುಲಿಂಗಾದಿ ಮಾಹಾತ್ಮ್ಯ-

ವಿಶೇಷಾನುಭವ ಸ್ಥಿತಿಃ |

ಯಸ್ಮಾಚ್ಛಿವ ಪ್ರಸಾದಾತ್ ಸ್ಯಾತ್

ತದಸ್ಯ ಮಹಿಮೋಚ್ಯತೇ || 11-67

ಗುರುಲಿಂಗಾದಿಗಳ ಮಾಹಾತ್ಮ್ಯವನ್ನು (ಶ್ರೀಗುರು, ಲಿಂಗ, ಜಂಗಮ, ಭಕ್ತ ಮತ್ತು ಶರಣರ ಮಾಹಾತ್ಮ್ಯವನ್ನು) ವಿಶೇಷವಾಗಿ ಅನುಭವಿಸುವ ಸ್ಥಿತಿಯು ಯಾವ ಶಿವಪ್ರಸಾದದಿಂದ ಪ್ರಾಪ್ತವಾಗುವುದೋ ಆ ಶಿವಪ್ರಸಾದದ ಮಹಿಮೆಯು ಈಗ ಹೇಳಲ್ಪಡುತ್ತದೆ.

ಸದಾ ಲಿಂಗೈಕ ನಿಷ್ಠಾನಾಮ್

ಗುರು ಪೂಜಾನು ಷಂಗಿಣಾಮ್ |

ಪ್ರಪನ್ನಾನಾಂ ವಿಶುದ್ಧಾನಾಮ್

ಪ್ರಸೀದತಿ ಮಹೇಶ್ವರಃ || 11-68

ಪ್ರಸಾದೋಪಿ ಮಹೇಶಸ್ಯ

ದುರ್ಲಭಃ ಪರಿಕೀತ್ರ್ಯತೇ |

ಘೊರ ಸಂಸಾರ ಸಂತಾಪ-

ನಿವೃತ್ತಿರ್ಯೆನ ಜಾಯತೇ || 11-69

ಯಾವಾಗಲೂ ಲಿಂಗದಲ್ಲಿಯೇ ಏಕನಿಷ್ಠೆಯುಳ್ಳ, ಗುರುಪೂಜೆಯಲ್ಲಿ ಅನುಷಂಗಿಗಳಾದ (ತತ್ಪರರಾದ), ವಿಶುದ್ಧರಾದ (ಪರಿಶುದ್ಧರಾದ) ಮತ್ತು ಪ್ರಪನ್ನರಾದವರ ಮೇಲೆ (ಅನನ್ಯ ಶರಣಾಗತರಾದವರ ಮೇಲೆ) ಮಹೇಶ್ವರನು ಪ್ರಸನ್ನನಾಗುತ್ತಾನೆ.

ಯಜ್ಞಾಸ್ತ ಪಾಂಸಿ ಮಂತ್ರಾಣಾಮ್

ಜಪಶ್ಚಿಂತಾ ಪ್ರಬೋಧನಮ್ |

ಪ್ರಸಾದಾರ್ಥಂ ಮಹೇಶಸ್ಯ

ಕೀರ್ತಿತಾನಿ ನ ಸಂಶಯಃ || 11-70

ಯಾವ ಪ್ರಸಾದದಿಂದ ಘೋರವಾದ ಸಂಸಾರದ ಸಂತಾಪವು ನಿವೃತ್ತಿಯಾಗುತ್ತದೆಯೋ, ಮಹೇಶನ ಆ ಪ್ರಸಾದವೂ ಸಹ ದುರ್ಲಭವೆಂಬುದಾಗಿ ಹೇಳಲ್ಪಟ್ಟಿದೆ.

ಪ್ರಸಾದಮೂಲಾ ಸರ್ವೆಷಾಮ್

ಭಕ್ತಿರವ್ಯ ಭಿಚಾರಿಣೀ |

ಶಿವ ಪ್ರಸಾದ ಹೀನಸ್ಯ

ಭಕ್ತಿಶ್ಚಾಪಿ ನ ಸಿದ್ಧ್ಯತಿ || 11-71

ಅವ್ಯಭಿಚಾರಿಣಿಯಾದ (ಅನನ್ಯವಾದ) ಶಿವಭಕ್ತಿಯು ಎಲ್ಲರಿಗೂ ಶಿವಪ್ರಸಾದದ ಮೂಲಕವಾಗಿಯೇ ದೊರೆಯುತ್ತದೆ. ಶಿವಪ್ರಸಾದಹೀನರಾದವರಿಗೆ ಈ ಭಕ್ತಿಯೂ ಸಹ ಸಿದ್ಧಿಸುವುದಿಲ್ಲ.

ಗರ್ಭಸ್ಥೋ ಜಾಯಮಾನೋ ವಾ

ಜಾತೋ ವಾ ಬ್ರಾಹ್ಮಣೋಥವಾ |

ಅಂತ್ಯಜೋ ವಾಪಿ ಮುಚ್ಯೇತ

ಪ್ರಸಾದೇ ಸತಿ ಶಾಂಕರೇ || 11-72

ಶಂಕರನ ಪ್ರಸಾದವು ಪ್ರಾಪ್ತವಾಗಲು ಗರ್ಭದಲ್ಲಿರುವ ಪಿಂಡವಾಗಲಿ, ಆಗ ತಾನೆ ಹುಟ್ಟುತ್ತಿರುವ ಶಿಶುವಾಗಲಿ, ಹುಟ್ಟಿದ ಮನುಷ್ಯನಾಗಲಿ ಅಥವಾ ಅವನು ಬ್ರಾಹ್ಮಣನೇ ಇರಲಿ, ಇಲ್ಲವೇ ಅಂತ್ಯಜನೇ ಇರಲಿ ಅವನು ಮುಕ್ತನೇ ಸರಿ.

ಬ್ರಹ್ಮಾದ್ಯಾ ವಿಬುಧಾಃ ಸರ್ವೆ

ಸ್ವಸ್ವಸ್ಥಾನ ನಿವಾಸಿನಃ |

ನಿತ್ಯಸಿದ್ಧಾ ಭವಂತ್ಯೇವ

ಪ್ರಸಾದಾತ್ ಪಾರಮೇಶ್ವರಾತ್ |11-73

ತಮ್ಮ ತಮ್ಮ ಸ್ಥಾನನಿವಾಸಿಗಳಾದ ಬ್ರಹ್ಮ ವಿಷ್ಣು ಮೊದಲಾದ ಎಲ್ಲ ದೇವತೆಗಳು ಪರಮೇಶ್ವರನ ಪ್ರಸಾದದಿಂದಲೇ ನಿತ್ಯಸಿದ್ಧರಾಗಿರುತ್ತಾರೆ.

ಪ್ರಸಾದೇ ಶಾಂಭವೇ ಸಿದ್ಧೇ

ಪರಮಾನಂದ ಕಾರಣೇ |

ಸರ್ವಂ ಶಿವ ಮಯಂ ವಿಶ್ವಮ್

ದೃಶ್ಯತೇ ನಾತ್ರ ಸಂಶಯಃ || 11-74

ಪರಮಾನಂದಕ್ಕೆ ಕಾರಣೀಭೂತವಾದ ಶಂಭುವಿನ ಪ್ರಸಾದವು ಸಿದ್ಧಿಯಾಗಲು (ಪ್ರಾಪ್ತವಾಗಲು) ಸರ್ವ ವಿಶ್ವವೆಲ್ಲವೂ ಶಿವಮಯವಾಗಿ ತೋರುತ್ತದೆ. ಇದರಲ್ಲಿ ಯಾವ ಸಂಶಯವೂ ಇಲ್ಲ.

ಸಂಸಾರ ಚಕ್ರ ನಿರ್ವಾಹ-

ನಿಮಿತ್ತಂ ಕರ್ಮ ಕೇವಲಮ್ |

ಪ್ರಸಾದೇನ ವಿನಾ ಶಂಭೋಃ

ನ ಕಸ್ಯಾಪಿ ನಿವರ್ತತೇ || 11-75

ಸಂಸಾರವೆಂಬ ಚಕ್ರದ ನಿರ್ವಹಣೆಗೆ (ಚಲನೆಗೆ) ಕೇವಲ ಕರ್ಮವೇ ನಿಮಿತ್ತ ಕಾರಣವಾಗಿರುತ್ತದೆ (ಯಾವುದೇ ವ್ಯಕ್ತಿಯ ಈ ಕರ್ಮವು). ಶಂಭುವಿನ ಪ್ರಸಾದದ ಹೊರತಾಗಿ ನಿವೃತ್ತಿಯಾಗುವುದಿಲ್ಲ.

ಬಹುನಾತ್ರ ಕಿಮುಕ್ತೇನ

ನಾಸ್ತಿ ನಾಸ್ತಿ ಜಗತ್ ತ್ರಯೇ |

ಸಮಾನ ಮಧಿಕಂ ಚಾಪಿ

ಪ್ರಸಾದಸ್ಯ ಮಹೇಶಿತುಃ || 11-76

ಈ ಪ್ರಸಾದದ ವಿಷಯದಲ್ಲಿ ಬಹಳ ಹೇಳುವುದರಿಂದ ಏನು ಪ್ರಯೋಜನ? ಮೂರು ಲೋಕದಲ್ಲಿ ಮಹೇಶನ ಪ್ರಸಾದಕ್ಕೆ ಸಮವಾದದ್ದಾಗಲಿ, ಅದಕ್ಕಿಂತಲೂ ಅಧಿಕವಾದದ್ದಾಗಲಿ ಯಾವುದೂ ಇರುವುದಿಲ್ಲ.

ಶಿವಪ್ರಸಾದೇ ಸತಿಯೋಗ ಭಾಜಿ

ಸರ್ವಂ ಶಿವೈಕಾತ್ಮ ತಯಾವಿಭಾತಿ |

ಸ್ವಕರ್ಮಮುಕ್ತಃ ಶಿವಭಾವಿತಾತ್ಮಾ

ಸ ಪ್ರಾಣಲಿಂಗೀತಿ ನಿಗದ್ಯತೇಸೌ || 11-77

ಯೋಗಭಾಜಿ (ಸಾಮರಸ್ಯ ರೂಪವಾದ ಶಿವಯೋಗವನ್ನು ಪಡೆದವನಿಗೆ) ಶಿವಪ್ರಸಾದವು ಪ್ರಾಪ್ತವಾಗಲು, ಎಲ್ಲವೂ ಶಿವಾತ್ಮಕವಾಗಿಯೇ ತೋರುವುದು. ಸ್ವಕರ್ಮಗಳಿಂದ ಮುಕ್ತನಾದ ಪ್ರಸಾದಿಸ್ಥಲದ ಸಾಧಕನು ಶಿವಭಾವಿತಾತ್ಮನಾಗಿ (ಶಿವಸ್ವರೂಪವನ್ನು ತಿಳಿದು) ಅವನು ಪ್ರಾಣಲಿಂಗಿ ಎಂಬುದಾಗಿ ಹೇಳಲ್ಪಡುತ್ತಾನೆ.

ಇತಿ ಪ್ರಸಾದಮಾಹಾತ್ಮ್ಯಸ್ಥಲಮ್ ಪರಿಸಮಾಪ್ತಂ

ಓಂ ತತ್ಸತ್ ಇತಿ

ಶ್ರೀ ಶಿವಗೀತೇಷು ಸಿದ್ಧಾಂತಾಗಮೇಷು

ಶಿವಾದ್ವೈತ ವಿದ್ಯಾಯಾಂ ಶಿವಯೋಗಶಾಸ್ತ್ರೇ –

ಶ್ರೀರೇಣುಕಾಗಸ್ತ್ಯ ಸಂವಾದೇ ವೀರಶೈವ ಧರ್ಮನಿರ್ಣಯೇ

ಶ್ರೀಶಿವಯೋಗಿಶಿವಾಚಾರ್ಯವಿರಚಿತೇ

ಶ್ರೀಸಿದ್ಧಾಂತಶಿಖಾಮಣೌ

ಪ್ರಸಾದಿಸ್ಥಲೇ ಪ್ರಸಾದಿಸ್ಥಲಾದಿ ಸಪ್ತವಿಧ ಸ್ಥಲ

ಪ್ರಸಂಗೋ ನಾಮ ಏಕಾದಶಃ ಪರಿಚ್ಛೇದಃ ||

ಇಲ್ಲಿಗೆ ಪ್ರಸಾದಮಾಹಾತ್ಮ್ಯ ಸ್ಥಲವು ಮುಗಿಯಿತು. ಓಂ ತತ್ಸತ್ ಇತಿ ಶ್ರೀ ಶಿವನಿಂದ ಉಪದೇಶಿಸಲ್ಪಟ್ಟು ಶ್ರೀ ಸಿದ್ಧಾಂತಾಗಮಗಳಲ್ಲಿಯ ಶಿವಾದ್ವೈತವಿದ್ಯಾರೂಪವೂ, ಶಿವಯೋಗಶಾಸ್ತ್ರವೂ, ಶ್ರೀ ರೇಣುಕಾಗಸ್ತ್ಯಸಂವಾದರೂಪವೂ, ಶ್ರೀ ವೀರಶೈವಧರ್ಮನಿರ್ಣಯವೂ, ಶ್ರೀ ಶಿವಯೋಗಿ ಶಿವಾಚಾರ್ಯ ವಿರಚಿತವೂ ಆದ ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿ ಪ್ರಸಾದಿಸ್ಥಲದಲ್ಲಿಯ ಪ್ರಸಾದಿಸ್ಥಲಾದಿ ಏಳು ವಿಧ ಸ್ಥಲಪ್ರಸಂಗವೆಂಬ ಹೆಸರಿನ ಹನ್ನೊಂದನೆಯ ಪರಿಚ್ಛೇದವು ಮುಗಿದುದು.