ದಶಮಃ ಪರಿಚ್ಛೇದಃ
ಮಾಹೇಶ್ವರಸ್ಯ, ನವವಿಧ ಸ್ಥಲ ಪ್ರಸಂಗಃ,
ಮಾಹೇಶ್ವರ ಸ್ಥಲಂ
|| ಅಗಸ್ತ್ಯ ಉವಾಚ ||
ಭಕ್ತಸ್ಥಲಂ ಸಮಾಖ್ಯಾತಮ್
ಭವತಾ ಗಣನಾಯಕ |
ಕೇನ ವಾ ಧರ್ಮಭೇದೇನ
ಭಕ್ತೋ ಮಾಹೇಶ್ವರೋ ಭವೇತ್ ||10-1
ಗಣನಾಯಕನಾದ ರೇಣುಕನೇ, ತಮ್ಮಿಂದ ಭಕ್ತಸ್ಥಲವು ಚೆನ್ನಾಗಿ ಹೇಳಲ್ಪಟ್ಟಿತು.
ಆ ಭಕ್ತನು ಯಾವ ಧರ್ಮಭೇದದಿಂದ (ಆಚಾರ ವಿಶೇಷದಿಂದ) ಮಾಹೇಶ್ವರನಾಗುವನು?
|
|| ಶ್ರೀ ರೇಣುಕ ಉವಾಚ ||
ಕೇವಲೇ ಸಹಜೇ ದಾನೇ|
ನಿಷ್ಣಾತಃ ಶಿವತತ್ಪರಃ |
ಬ್ರಹ್ಮಾದಿಸ್ಥಾನವಿಮುಖೋ
ಭಕ್ತೋ ಮಾಹೇಶ್ವರಃ ಸ್ಮೃತಃ || 10-2
ಕೇವಲ ಸಹಜದಾನದಲ್ಲಿಯೇ ಕುಶಲನಾದ, ಶಿವನಲ್ಲಿಯೇ ಏಕನಿಷ್ಠೆಯುಳ್ಳವನಾದ ಮತ್ತು ಬ್ರಹ್ಮಾದಿ ಪದವಿಗಳಿಂದ
ವಿಮುಖನಾದ (ನಿಸ್ಪೃಹನಾದ) ಭಕ್ತನೇ ಮಾಹೇಶ್ವರನೆಂದು ಕರೆಸಿಕೊಳ್ಳುತ್ತಾನೆ.
|
ಭಕ್ತೇರ್ಯದಾ ಸಮುತ್ಕರ್ಷೊ
ಭವೇದ್ ವೈರಾಗ್ಯಗೌರವಾತ್ |
ತದಾ ಮಾಹೇಶ್ವರಃ ಪ್ರೋಕ್ತೋ
ಭಕ್ತಃ ಸ್ಥಿರವಿವೇಕವಾನ್ || 10-3
ವೈರಾಗ್ಯದ ಆಧಿಕ್ಯದಿಂದ ಭಕ್ತಿಯಲ್ಲಿ ಯಾವಾಗ ಉತ್ಕರ್ಷ ಉಂಟಾಗುವುದೋ
ಆಗ ಸ್ಥಿರ ವಿವೇಕವುಳ್ಳ ಭಕ್ತನು ಮಾಹೇಶ್ವರನೆಂದು ಕರೆಸಿಕೊಳ್ಳುತ್ತಾನೆ.
|
ಮಾಹೇಶ್ವರಸ್ಥಲಂ ವಕ್ಷ್ಯೇ
ಯಥೋಕ್ತಂ ಶಂಭುನಾ ಪುರಾ |
ಮಾಹೇಶ್ವರಪ್ರಶಂಸಾದೌ
ಲಿಂಗನಿಷ್ಠಾ ತತಃ ಪರಮ್ || 10-4
ಪೂರ್ವದಲ್ಲಿ ಶಂಭುವಿನಿಂದ ಮಾಹೇಶ್ವರಸ್ಥಲವು ಹೇಗೆ ಹೇಳಲ್ಪಟ್ಟಿದೆಯೋ ಅದೇ ರೀತಿಯಲ್ಲಿ ಇಲ್ಲಿ ಹೇಳುತ್ತೇನೆ.
(ಈ ಮಾಹೇಶ್ವರ ಸ್ಥಲದಲ್ಲಿ) ಮೊದಲನೆಯದು ಮಾಹೇಶ್ವರ ಪ್ರಶಂಸಾಸ್ಥಲವು.
|
ಪೂರ್ವಾಶ್ರಯ ನಿರಾಸಶ್ಚ
ತಥಾದ್ವೈತ ನಿರಾಕೃತಿಃ |
ಆಹ್ವಾನವರ್ಜನಂ ಪಶ್ಚಾತ್
ಅಷ್ಟಮೂರ್ತಿನಿರಾಕೃತಿಃ || 10-5
ಅದಾದ ಮೇಲೆ ಲಿಂಗನಿಷ್ಠಾಸ್ಥಲವು. ನಂತರದಲ್ಲಿ ಪೂರ್ವಾಶ್ರಯನಿರಸನಸ್ಥಲವು ಅದರಂತೆ ಅದ್ವೈತನಿರಸನಸ್ಥಲವು,
ಅದಾದ ಮೇಲೆ ಆಹ್ವಾನನಿರಸನಸ್ಥಲವು ಮತ್ತು ಅಷ್ಟಮೂರ್ತಿನಿರಸನಸ್ಥಲವು.
|
ಸರ್ವಗತ್ವ ನಿರಾಸಶ್ಚ
ಶಿವತ್ವಂ ಶಿವಭಕ್ತಯೋಃ |
ಏವಂ ನವವಿಧಂ ಪ್ರೋಕ್ತಮ್
ಮಾಹೇಶ್ವರ ಮಹಾಸ್ಥಲಮ್ || 10-6
ಆಮೇಲೆ ಸರ್ವಗತ್ವ ನಿರಸನಸ್ಥಲವು, ಶಿವತ್ವಸ್ಥಲ
(ಶಿವಜಗನ್ಮಯ ಸ್ಥಲವು) ಮತ್ತು ಶಿವಭಕ್ತಸ್ಥಲ (ಭಕ್ತ ದೇಹಿಕಲಿಂಗಸ್ಥಲ) –
ಹೀಗೆ ಮಾಹೇಶ್ವರಸ್ಥಲದಲ್ಲಿ ಒಂಭತ್ತು ಪ್ರಕಾರದ ಸ್ಥಲಗಳು (ಅವಾಂತರ ಸ್ಥಲಗಳು)
ಹೇಳಲ್ಪಟ್ಟಿವೆ. ಹೇ ಅಗಸ್ತ್ಯ ಮುನಿಯೇ ಕೇಳುವಂತವನಾಗು.
|
ಆದಿತಃ ಕ್ರಮಶೋ ವಕ್ಷ್ಯೇ
ಸ್ಥಲಭೇದಸ್ಯ ಲಕ್ಷಣಮ್ |
ಸಮಾಹಿತೇನ ಮನಸಾ
ಶ್ರೂಯತಾಂ ಭವತಾ ಮುನೇ || 10-7
ಹೀಗೆ ಮಾಹೇಶ್ವರಸ್ಥಲದಲ್ಲಿ ಒಂಭತ್ತು ಪ್ರಕಾರದ ಸ್ಥಲಗಳು (ಅವಾಂತರ ಸ್ಥಲಗಳು) ಹೇಳಲ್ಪಟ್ಟಿವೆ.
ಹೇ ಅಗಸ್ತ್ಯ ಮುನಿಯೇ ಕೇಳುವಂತವನಾಗು.
|
ಇತಿ ಮಾಹೇಶ್ವರ ಸ್ಥಲಂ
ಅಥ ಮಾಹೇಶ್ವರ ಪ್ರಶಂಸಾ ಸ್ಥಲಮ್
|
ವಿಶ್ವಸ್ಮಾ ದಧಿಕೋ ರುದ್ರೋ
ವಿಶ್ವಾನುಗ್ರಹ ಕಾರಕಃ |
ಇತಿ ಯಸ್ಯ ಸ್ಥಿರಾ ಬುದ್ಧಿಃ
ಸ ವೈ ಮಾಹೇಶ್ವರಃ ಸ್ಮೃತಃ || 10-8
ರುದ್ರನು ವಿಶ್ವಕ್ಕಿಂತಲೂ ದೊಡ್ಡವನಾಗಿರುತ್ತಾನೆ ಮತ್ತು ವಿಶ್ವಕ್ಕೆ ಅನುಗ್ರಹವನ್ನು ಮಾಡುವಂತಹವನೂ ಸಹ ಆಗಿರುತ್ತಾನೆ. ಈ ವಿಚಾರದಲ್ಲಿ ಸ್ಥಿರಬುದ್ಧಿಯುಳ್ಳವನು ಯಾವನೋ ಅವನೇ ಮಾಹೇಶ್ವರನೆಂದು ಸ್ಮರಿಸಿಕೊಳ್ಳುವನು (ಕರೆಸಿಕೊಳ್ಳುವನು).
|
ಬ್ರಹ್ಮಾದ್ಯೈರ್ಮಲಿನಪ್ರಾಯೈಃ
ನಿರ್ಮಲೇ ಪರಮೇಶ್ವರೇ |
ಸಾಮ್ಯೋಕ್ತಿಂ ಯೋ ನ ಸಹತೇ
ಸ ವೈ ಮಾಹೇಶ್ವರಾಭಿಧಃ || 10-9
ಮಲಿನಪ್ರಾಯರಾದ (ಒಂದಿಲ್ಲೊಂದು ದೋಷಗಳಿಂದ ಕೂಡಿದ) ಬ್ರಹ್ಮಾದಿ ದೇವತೆಗಳೊಂದಿಗೆ
ನಿರ್ಮಲವಾದ ಶಿವನ ಸಮಾನತೆಯ ಉಕ್ತಿಯನ್ನು ಯಾರು ಸಹಿಸಿಕೊಳ್ಳುವುದಿಲ್ಲವೋ ಅವನೇ ಮಾಹೇಶ್ವರನು.
ಈಶ್ವರಃ ಸರ್ವಭೂತಾನಾಮ್
ಬ್ರಹ್ಮಾದೀನಾಂ ಮಹಾನಿತಿ |
ಬುದ್ಧಿಯೋಗಾತ್ ತದಾಸಕ್ತೋ
ಭಕ್ತೋ ಮಾಹೇಶ್ವರಃ ಸ್ಮೃತಃ || 10-10
ಸಮಸ್ತ ಪ್ರಾಣಿಗಳಿಗೆ ಮತ್ತು ಬ್ರಹ್ಮಾದಿ ದೇವತೆಗಳಿಗೆ ಈಶ್ವರನೇ ದೊಡ್ಡವನು ಎಂಬ ಬುದ್ಧಿಯೋಗದಿಂದ ಈಶ್ವರನಲ್ಲಿ
ಆಸಕ್ತನಾದ ಭಕ್ತನೇ ಮಾಹೇಶ್ವರನೆಂದು ಕರೆಯಲ್ಪಡುವನು.
ಬ್ರಹ್ಮಾದಿದೇವತಾಜಾಲಮ್
ಮೋಹಿತಂ ಮಾಯಯಾ ಸದಾ |
ಅಶಕ್ತಂ ಮುಕ್ತಿದಾನೇ ತು
ಕ್ಷಯಾತಿಶಯಸಂಯುತಮ್ || 10-11
ಬ್ರಹ್ಮಾದಿ ದೇವತೆಗಳ ಸಮೂಹವು ಯಾವಾಗಲೂ ಮಾಯೆಯಿಂದ ಮೋಹಿತವಾಗಿರುತ್ತದೆ
ಮತ್ತು ಕ್ಷಯಾತಿಶಯಗಳಿಂದ ಕೂಡಿಕೊಂಡಿರುತ್ತದೆ (ಬ್ರಹ್ಮಾದಿ ದೇವತೆಗಳು ಮುಕ್ತಿಯನ್ನು
ಕೊಡಲು ಅಸಮರ್ಥರಾಗಿರುತ್ತಾರೆ).
ಅನಾದಿಮುಕ್ತೋ ಭಗವಾನ್
ಏಕ ಏವ ಮಹೇಶ್ವರಃ |
ಮುಕ್ತಿದಶ್ಚೇತಿ ಯೋ ವೇದ
ಸ ವೈ ಮಾಹೇಶ್ವರಃ ಸ್ಮೃತಃ || 10-12
ಭಗವಂತನಾದ (ಷಡ್ಗುಣೈಶ್ವರ್ಯ ಸಂಪನ್ನನಾದ) ಮಹೇಶ್ವರನೊಬ್ಬನೇ ಅನಾದಿಮುಕ್ತನು
(ನಿತ್ಯಮುಕ್ತನು) ಮತ್ತು ಅವನೇ ಮುಕ್ತಿಯನ್ನು ಕೊಡುವಂತಹವನು ಎಂಬುದಾಗಿ ಯಾರು
ತಿಳಿದುಕೊಳ್ಳುವರೋ ಅವನೇ ಮಾಹೇಶ್ವರನೆಂದು ಕರೆಯಿಸಿಕೊಳ್ಳುವನು.
ಕ್ಷಯಾತಿಶಯಸಂಯುಕ್ತಾ
ಬ್ರಹ್ಮವಿಷ್ಣ್ವಾದಿಸಂಪದಃ |
ತೃಣವನ್ಮನ್ಯತೇ ಯುಕ್ತ್ಯಾ
ವೀರಮಾಹೇಶ್ವರಃ ಸದಾ || 10-13
ಬ್ರಹ್ಮ, ವಿಷ್ಣು ಮೊದಲಾದ ದೇವತೆಗಳ ಸಂಪತ್ತುಗಳು (ಪದವಿಗಳು) ಕ್ಷಯ ಮತ್ತು
ಅತಿಶಯಗಳಿಂದ ಕೂಡಿಕೊಂಡಿವೆ. ಈ ಪದವಿಗಳನ್ನು ಯುಕ್ತಿಯಿಂದ ಯಾವಾಗಲೂ
ಯಾರು ತೃಣಕ್ಕೆ ಸಮಾನವಾಗಿ ತಿಳಿದುಕೊಳ್ಳುತ್ತಾನೆಯೋ ಅವನೇ ವೀರಮಾಹೇಶ್ವರನು.
ಶಬ್ದಸ್ಪರ್ಶಾದಿಸಂಪನ್ನೇ
ಸುಖಲೇಶೇ ತು ನಿಃಸ್ಪೃಹಃ |
ಶಿವಾನಂದೇ ಸಮುತ್ಕಂಠೋ
ವೀರಮಾಹೇಶ್ವರೋ ಭವೇತ್ || 10-14
ಶಬ್ದ ಸ್ಪರ್ಶಾದಿ ವಿಷಯಗಳಿಂದ ಉತ್ಪನ್ನವಾಗುವ ಅಲ್ಪಸುಖದಲ್ಲಿ ನಿಸ್ಪೃಹನಾದ
(ನಿರಾಸಕ್ತನಾದ), ನಿತ್ಯವಾದ ಶಿವಾನಂದವನ್ನು ಪಡೆಯುವಲ್ಲಿ ಉತ್ಕಟವಾದ ಬಯಕೆಯುಳ್ಳವನೇ
ವೀರಮಾಹೇಶ್ವರನಾಗುತ್ತಾನೆ.
ಪರಸ್ತ್ರೀ ಸಂಗ ನಿರ್ಮುಕ್ತಃ
ಪರದ್ರವ್ಯ ಪರಾಙ್ಮುಖಃ |
ಶಿವಾರ್ಥಕಾರ್ಯಸಂಪನ್ನಃ
ಶಿವಾಗಮ ಪರಾಯಣಃ || 10-15
ಪರಸ್ತ್ರೀಸಂಗದಿಂದ ನಿರ್ಮುಕ್ತನಾದ (ಯಾವ ಕಾಲಕ್ಕೂ ಪರಸ್ತ್ರೀ ಸಂಗವನ್ನು ಮಾಡದಿರುವ),
ಪರದ್ರವ್ಯದಿಂದ ಪರಾಙ್ಮುಖನಾದ (ಪರದ್ರವ್ಯದಲ್ಲಿ ಅನಾಸಕ್ತನಾದ), ಸದಾಶಿವನ ಸಂಬಂಧಿ
ಕಾರ್ಯಗಳನ್ನೇ ಮಾಡುವ ಮತ್ತು ಶಿವಾಗಮ ಪರಾಯಣನಾದ (ಶಿವಾಗಮಗಳನ್ನು
ಅಧ್ಯಯನ ಮಾಡುವ)-
ಶಿವಸ್ತುತಿ ರಸಾಸ್ವಾದ-
ಮೋದಮಾನ ಮನಾಃ ಶುಚಿಃ |
ಶಿವೋತ್ಕರ್ಷ ಪ್ರಮಾಣಾನಾಮ್
ಸಂಪಾದನ ಸಮುದ್ಯತಃ || 10-16
ಶಿವಸಂಪತ್ತಿ ರೂಪವಾದ ರಸಾಸ್ವಾದನೆಯಲ್ಲಿ ಸಂತುಷ್ಟವಾದ ಮನಸ್ಸುಳ್ಳವನಾದ,
ಪವಿತ್ರನಾದ, ಶಿವನ ಉತ್ಕರ್ಷದ (ಸರ್ವೊತ್ಕೃಷ್ಟತೆಯ) ಪ್ರಮಾಣಗಳನ್ನು
ಸಂಪಾದಿಸುವುದರಲ್ಲಿ ತೊಡಗಿಕೊಂಡವನಾದ-
ನಿರ್ಮಮೋ ನಿರಹಂಕಾರೋ
ನಿರಸ್ತ ಕ್ಲೇಶ ಪಂಜರಃ |
ಅಸ್ಪೃಷ್ಟ ಮದ ಸಂಬಂಧೋ
ಮಾತ್ಸರ್ಯಾವೇಶ ವರ್ಜಿತಃ || 10-17
ಮಮಕಾರರಹಿತನಾದ, ನಿರಹಂಕಾರಿಯಾದ, ಪಂಚಕ್ಷೇಶಗಳೆಂಬ (ಅವಿದ್ಯಾ, ಅಸ್ಮಿತಾ, ರಾಗ, ದ್ವೇಷ,
ಅಭಿನಿವೇಷ) ಪಂಜರವನ್ನು ತೊಲಗಿಸಿಕೊಂಡ, ಮದಗಳ ಸಂಬಂಧದ ಸೋಂಕು ಇಲ್ಲದ,
ಮಾತ್ಸರ್ಯದ ಆವೇಶಕ್ಕೆ ಅವಕಾಶ ಕೊಡದ-
ನಿರಸ್ತ ಮದನೋನ್ಮೇಷೋ
ನಿರ್ಧೂತ ಕ್ರೋಧವಿಪ್ಲವಃ |
ಸದಾ ಸಂತುಷ್ಟಹೃದಯಃ
ಸರ್ವಪ್ರಾಣಿಹಿತೇರತಃ || 10-18
ಕಾಮೋದ್ರೇಕವನ್ನು ತೊಲಗಿಸಿಕೊಂಡ, ಕ್ರೋಧ (ಕೋಪ)ದ ಬಾಧೆಯನ್ನು ಜಾಡಿಸಿಕೊಂಡ
(ಕಳೆದುಕೊಂಡ), ಯಾವಾಗಲೂ ಸಂತುಷ್ಟವಾದ ಹೃದಯವುಳ್ಳ ಮತ್ತು ಎಲ್ಲ ಪ್ರಾಣಿಗಳಿಗೆ ಹಿತವನ್ನು
ಮಾಡುವ ಪ್ರೀತಿಯುಳ್ಳ-
ನಿವಾರಣ ಸಮುದ್ಯೋಗೀ
ಶಿವಕಾರ್ಯ ವಿರೋಧಿನಾಮ್ |
ಸಹಚಾರೀ ಸದಾಕಾಲಮ್
ಶಿವೋತ್ಕರ್ಷಾಭಿಧಾಯಿಭಿಃ || 10-19
ಶಿವಮಯ ಕಾರ್ಯವನ್ನು ವಿರೋಧಿಸುವವರನ್ನು ನಿವಾರಿಸುವಲ್ಲಿ ಸದಾ ಉದ್ಯೋಗಶೀಲನಾದ,
ಶಿವಾಧಿಕ್ಯವನ್ನು ಹೇಳುವವರೊಂದಿಗೆ ಸದಾಕಾಲದಲ್ಲಿ ಸಹಚಾರಿಯಾದ-
ಶಿವಾಪಕರ್ಷ ಸಂಪ್ರಾಪ್ತೌ
ಪ್ರಾಣತ್ಯಾಗೇಪ್ಯ ಶಂಕಿತಃ |
ಶಿವೈಕ ನಿಷ್ಠಃ ಸರ್ವಾತ್ಮಾ
ವೀರಮಾಹೇಶ್ವರೋ ಭವೇತ್ || 10-20
ಶಿವನಿಗೆ ಅಪಕರ್ಷವು (ನಿಂದೆಯು) ಪ್ರಾಪ್ತವಾದಾಗ (ಅದನ್ನು ದೂರ ಮಾಡಲು)
ಪ್ರಾಣವನ್ನು ತ್ಯಜಿಸಲು ಸಿದ್ಧನಾದ, ಶಿವನಲ್ಲಿಯೇ (ಇಷ್ಟಲಿಂಗದಲ್ಲಿಯೇ) ಏಕನಿಷ್ಠೆಯುಳ್ಳ
ಮತ್ತು ಸರ್ವಾತ್ಮ ಭಾವನೆಯುಳ್ಳ (ಪೂರ್ಣಾಹಂಭಾವವುಳ್ಳ) ಸಾಧಕನೇ
ವೀರಮಾಹೇಶ್ವರನಾಗುವನು.
ಇತಿ ಮಾಹೇಶ್ವರ ಪ್ರಶಂಸಾಸ್ಥಲಂ
ಅಥ ಲಿಂಗನಿಷ್ಠಾಸ್ಥಲಮ್
ಅಸ್ಯ ಮಾಹೇಶ್ವರ ಸ್ಯೋಕ್ತಮ್
ಲಿಂಗನಿಷ್ಠಾ ಮಹಾಸ್ಥಲಮ್ |
ಪ್ರಾಣಾತ್ಯ ಯೇಪಿ ಸಂಪನ್ನೇ
ಯದತ್ಯಾಜ್ಯಂ ವಿಧೀಯತೇ || 10-21
ಈ ಮಾಹೇಶ್ವರನಿಗೆ ಪ್ರಾಣಕ್ಕೆ ಸಂಕಟವು ಬಂದೊದಗಿದರೂ ಸಹ ಬಿಡಲು ಬಾರದೆ ಇರುವ
ವಿಧಿಯನ್ನು ಹೇಳುವ ಲಿಂಗನಿಷ್ಠಾಮಹಾಸ್ಥಲವನ್ನು ಹೇಳಲಾಗಿದೆ.
ಅಪಗಚ್ಛತು ಸರ್ವಸ್ವಮ್
ಶಿರಶ್ಛೇದನ ಮಸ್ತು ವಾ |
ಮಾಹೇಶ್ವರೋ ನ ಮುಂಚೇತ
ಲಿಂಗಪೂಜಾ ಮಹಾವ್ರತಮ್ || 10-22
ತನ್ನ ಸರ್ವಸಂಪತ್ತೆಲ್ಲವೂ ಹೋದರೂ, ಇಲ್ಲವೇ ಶಿರಶ್ಚೇದನವೇ ಆದರೂ ಮಾಹೇಶ್ವರನು
ಲಿಂಗಪೂಜಾರೂಪವಾದ (ಇಷ್ಟಲಿಂಗ ಪೂಜಾರೂಪವಾದ) ಮಹಾವ್ರತವನ್ನು ಬಿಡಕೂಡದು.
ಲಿಂಗಪೂಜಾಮ ಕೃತ್ವಾ ತು
ಯೇ ನ ಭುಂಜಂತಿ ಮಾನವಾಃ |
ತೇಷಾಂ ಮಹಾತ್ಮನಾಂ ಹಸ್ತೇ
ಮೋಕ್ಷಲಕ್ಷಿರ್ ಉಪಸ್ಥಿತಾ || 10-23
ಇಷ್ಟಲಿಂಗ ಪೂಜೆಯನ್ನು ಮಾಡದೆ ಯಾವ ಮನುಷ್ಯನು ಏನನ್ನೂ ಭುಂಜಿಸು
(ಭೋಜನ ಮಾಡು)ವುದಿಲ್ಲವೋ ಅಂತಹ ಮಹಾತ್ಮರ ಹಸ್ತದಲ್ಲಿ
ಮೋಕ್ಷರೂಪವಾದ ಲಕ್ಷಿ ್ಮಯು ಯಾವಾಗಲೂ ವಾಸವಾಗಿರುತ್ತಾಳೆ.
ಕಿಮನ್ಯೈರ್ ಧರ್ಮ ಕಲಿಲೈಃ
ಕೀಕ-ಷಾರ್ಥ ಪ್ರದಾಯಿಭಿಃ |
ಸಾಕ್ಷಾನ್ಮೋಕ್ಷ ಪ್ರದಃ ಶಂಭೋಃ
ಧರ್ಮೊ ಲಿಂಗಾರ್ಚನಾತ್ಮಕಃ || 10-24
ಕ್ಷುದ್ರಫಲವನ್ನು ಕೊಡುವ ಅನ್ಯ ಕ್ಷುದ್ರಧರ್ಮಾಚರಣೆಗಳಿಂದ ಏನು ಪ್ರಯೋಜನ?
ಶಂಭುವಿನ ಲಿಂಗಾರ್ಚನಾ ರೂಪವಾದ (ಇಷ್ಟಲಿಂಗಾರ್ಚನಾ ರೂಪವಾದ) ಧರ್ಮವು
ಸಾಕ್ಷಾತ್ ಮೋಕ್ಷವನ್ನೇ ಕೊಡುವಂತಹುದು ಆಗಿದೆ.
ಅರ್ಪಿತೇನಾನ್ನಪಾನೇನ
ಲಿಂಗೇ ನಿಯಮಪೂಜಿತೇ |
ಯೇ ದೇಹವೃತ್ತಿಂ ಕುರ್ವಂತಿ
ಮಹಾಮಾಹೇಶ್ವರಾ ಹಿ ತೇ || 10-25
ನಿಯಮದಿಂದ (ಗುರು ಹೇಳಿದ ನಿಯಮಾನುಸಾರವಾಗಿ) ಪೂಜಿತವಾದ
ಇಷ್ಟಲಿಂಗಕ್ಕೆ ಅರ್ಪಿಸಿದ ಅನ್ನಪಾನಾದಿ ಗಳಿಂದಲೇ ಯಾರು ದೇಹ
ವೃತ್ತಿಯನ್ನು ಮಾಡುವರೋ (ಲಿಂಗಾರ್ಚನೆಯನ್ನು ಮಾಡಿ ಅನ್ನಪಾನಾದಿಗಳನ್ನು
ಸ್ವೀಕರಿಸುವರೋ) ಅವರೇ ಮಾಹೇಶ್ವರ ರಾಗಿರುತ್ತಾರೆ.
ಚಿನ್ಮಯೇ ಶಾಂಕರೇ ಲಿಂಗೇ
ಸ್ಥಿರಂ ಯೇಷಾಂ ಮನಃ ಸದಾ |
ವಿಮುಕ್ತೇ-ತರ ಸರ್ವಾರ್ಥಮ್
ತೇ ಶಿವಾ ನಾತ್ರ ಸಂಶಯಃ || 10-26
ಯಾರ ಮನಸ್ಸು ಬೇರಾವ ಪದಾರ್ಥಗಳನ್ನು ಅಪೇಕ್ಷಿಸದೆ (ಸ್ವರ್ಗಾದಿ
ಫಲಗಳನ್ನು ಅಪೇಕ್ಷಿಸದೆ)
ಯಾವಾಗಲೂ ಚಿನ್ಮಯವಾದ ಶಿವಲಿಂಗದಲ್ಲಿಯೇ (ಇಷ್ಟಲಿಂಗಾರ್ಚನೆಯಲ್ಲಿಯೇ) ಸ್ಥಿರವಾಗಿರುವುದೋ
ಅಂತಹ ಮನಸ್ಸುಳ್ಳ ಅವರು ಶಿವಸ್ವರೂಪರೇ ಆಗಿರುತ್ತಾರೆ.
ಇದರಲ್ಲಿ ಯಾವ ಸಂಶಯವೂ ಇರುವುದಿಲ್ಲ.
ಲಿಂಗೇ ಯಸ್ಯ ಮನೋ ಲೀನಮ್
ಲಿಂಗಸ್ತುತಿಪರಾ ಚ ವಾಕ್ |
ಲಿಂಗಾರ್ಚನಪರೌ ಹಸ್ತೌ
ಸ ರುದ್ರೋ ನಾತ್ರ ಸಂಶಯಃ || 10-27
ಯಾವಾತನ ಮನಸ್ಸು ಇಷ್ಟಲಿಂಗ ಪೂಜೆಯಲ್ಲಿಯೇ ತನ್ಮಯ ವಾಗಿರುವುದೋ,
ಯಾವಾತನ ವಾಣಿಯು ಲಿಂಗವನ್ನು ಸ್ತುತಿಸುವುದರಲ್ಲಿಯೇ ತನ್ಮಯವಾಗಿರುವುದೋ
ಮತ್ತು ಯಾವಾತನ ಹಸ್ತಗಳು ಲಿಂಗಾರ್ಚನೆಯಲ್ಲಿಯೇ ನಿರತವಾಗಿರುವುವೊ,
ಅಂತಹವನು ರುದ್ರನೇ ಆಗಿರುತ್ತಾನೆ.
ಇದರಲ್ಲಿ ಯಾವ ಸಂಶಯವೂ ಇಲ್ಲ.
ಲಿಂಗನಿಷ್ಠಸ್ಯ ಕಿಂ ತಸ್ಯ
ಕರ್ಮಣಾ ಸ್ವರ್ಗಹೇತುನಾ |
ನಿತ್ಯಾನಂದ ಶಿವಪ್ರಾಪ್ತಿಃ
ಯಸ್ಯ ಶಾಸ್ತ್ರೇಷು ನಿಶ್ಚಿತಾ || 10-28
ಯಾರಿಗೆ ನಿತ್ಯಾನಂದ ರೂಪವಾದ ಶಿವಪ್ರಾಪ್ತಿಯು ಶಾಸ್ತ್ರಗಳಲ್ಲಿ
ನಿಶ್ಚೈಸಲ್ಪಟ್ಟಿದೆಯೋ ಅಂತಹ ಇಷ್ಟಲಿಂಗದಲ್ಲಿ ನಿಷ್ಠೆಯುಳ್ಳ
ಮಾಹೇಶ್ವರನಿಗೆ ಸ್ವರ್ಗ ಹೇತುಗಳಾದ ಕರ್ಮಗಳಿಂದ ಏನು
ಪ್ರಯೋಜನ?
ಲಿಂಗನಿಷ್ಠಾಪರಂ ಶಾಂತಮ್
ಭೂತಿರುದ್ರಾಕ್ಷ ಸಂಯುತಮ್ |
ಪ್ರಶಂಸಂತಿ ಸದಾಕಾಲಮ್
ಬ್ರಹ್ಮಾದ್ಯಾ ದೇವತಾ ಮುದಾ || 10-29
ವಿಭೂತಿ, ರುದ್ರಾಕ್ಷಗಳನ್ನು ಧರಿಸಿದ ಶಾಂತಸ್ವಭಾವದ ಲಿಂಗನಿಷ್ಠನಾದ
ಮಾಹೇಶ್ವರನನ್ನು ಬ್ರಹ್ಮಾದಿ ದೇವತೆಗಳು ಯಾವಾಗಲೂ ಆನಂದದಿಂದ
ಪ್ರಶಂಸಿಸುತ್ತಿರುತ್ತಾರೆ.
ಇತಿ ಲಿಂಗನಿಷ್ಠಾಸ್ಥಲಂ
ಅಥ ಪೂರ್ವಾಶ್ರಯನಿರಸನಸ್ಥಲಮ್
ಲಿಂಗೈಕ ನಿಷ್ಠ ಹೃದಯಃ
ಸದಾ ಮಾಹೇಶ್ವರೋ ಜನಃ |
ಪೂರ್ವಾಶ್ರಯ ಗತಾನ್ ಧರ್ಮಾನ್
ತ್ಯಜೇತ್ ಸ್ವಾಚಾರ ರೋಧಕಾನ್||1030
ಯಾವಾಗಲೂ ತನ್ನ ಹೃದಯದಲ್ಲಿ ಇಷ್ಟಲಿಂಗದ ಬಗ್ಗೆ ನಿಷ್ಠೆಯುಳ್ಳ
ಮಾಹೇಶ್ವರನು ತನ್ನ ಸಮಯಾಚಾರಕ್ಕೆ (ವೀರಶೈವ ಸಿದ್ಧಾಂತದ ಆಚರಣೆಗಳಿಗೆ)
ವಿರೋಧಿಗಳಾದ ತನ್ನ ಪೂರ್ವಾಶ್ರಯದ ಧರ್ಮಾಚರಣೆಗಳನ್ನು ತ್ಯಜಿಸಬೇಕು.
ಸ್ವಜಾತಿಕುಲಜಾನ್ ಧರ್ಮಾನ್
ಲಿಂಗನಿಷ್ಠಾವಿರೋಧಿನಃ |
ತ್ಯಜನ್ ಮಾಹೇಶ್ವರೋ ಜ್ಞೇಯಃ
ಪೂರ್ವಾಶ್ರಯ ನಿರಾಸಕಃ || 10-31
ಇಷ್ಟಲಿಂಗ ನಿಷ್ಠೆಗೆ ವಿರೋಧಿಗಳಾದ ತನ್ನ ಪೂರ್ವದ ಜಾತಿ ಮತ್ತು ಕುಲಕ್ಕೆ
ಸಂಬಂಧಿಸಿದ ಧರ್ಮಗಳನ್ನು (ಜನನ ಮರಣ ಸೂತಕಗಳನ್ನು ಪಾಲಿಸುವ ಧರ್ಮಗಳನ್ನು)
ಬಿಡುವ ಮಾಹೇಶ್ವರನೇ ಪೂರ್ವಾಶ್ರಯ ನಿರಾಸಕನೆಂದು ತಿಳಿದುಕೊಳ್ಳಬೇಕು.
ಶಿವಸಂಸ್ಕಾರಯೋಗೇನ
ವಿಶುದ್ಧಾನಾಂ ಮಹಾತ್ಮನಾಮ್ |
ಕಿಂ ಪೂರ್ವಕಾಲಿಕೈರ್ ಧರ್ಮೈ:
ಪ್ರಾಕೃತಾನಾಂ ಹಿ ತೇ ಮತಾಃ ||10-32
ಶಿವಸಂಸ್ಕಾರದ ಯೋಗದಿಂದ ಪರಿಶುದ್ಧರಾದ ಮಹಾತ್ಮರಿಗೆ ಪೂರ್ವಕಾಲದ
ಧರ್ಮಗಳಿಂದ ಏನು ಪ್ರಯೋಜನ? ಆ ಪೂರ್ವದ ಧರ್ಮಗಳು ಪಾಕೃತರಿಗೆ
(ಶಿವದೀಕ್ಷಾ ಸಂಸ್ಕಾರ ರಹಿತರಿಗೆ) ಸಮ್ಮತಗಳಾಗಿರುತ್ತವೆ.
ಶಿವಸಂಸ್ಕಾರಯೋಗೇನ
ಶಿವಧರ್ಮಾನುಷಂಗಿಣಾಮ್ |
ಪ್ರಾಕೃತಾನಾಂ ನ ಧರ್ಮೆಷು
ಪ್ರವೃತ್ತಿರ್ ಉಪಪದ್ಯತೇ || 10-33
ಶಿವಸಂಸ್ಕಾರ ಯೋಗದಿಂದ ಶಿವಧರ್ಮವನ್ನು ಅನುಷ್ಠಾನ ಮಾಡುವವರಿಗೆ
ಪ್ರಾಕೃತಗಳಾದ ಧರ್ಮಗಳಲ್ಲಿ ಪ್ರವೃತ್ತಿಯು ಸಂಭವಿಸುವುದಿಲ್ಲ.
ವಿಶುದ್ಧಾಃ ಪ್ರಾಕೃತಾಶ್ಚೇತಿ
ದ್ವಿವಿಧಾ ಮಾನುಷಾಃ ಸ್ಮೃತಾಃ |
ಶಿವಸಂಸ್ಕಾರಿಣಃ ಶುದ್ಧಾಃ
ಪ್ರಾಕೃತಾ ಇತರೇ ಮತಾಃ || 10-34
ವಿಶುದ್ಧರು ಮತ್ತು ಪ್ರಾಕೃತರು ಎಂಬುದಾಗಿ ಮನುಷ್ಯರು
ಎರಡು ವಿಧವಾಗಿ ಪರಿಗಣಿಸಲ್ಪಟ್ಟಿದ್ದಾರೆ. (ಇವರಲ್ಲಿ) ಶಿವದೀಕ್ಷಾ
ಸಂಸ್ಕಾರವನ್ನು ಹೊಂದಿದವರು ಶುದ್ಧರು, ಅದನ್ನು ಹೊಂದದೇ
ಇರುವ ಇತರರು ಪ್ರಾಕೃತರೆಂದು ಸಮ್ಮತರಾಗುತ್ತಾರೆ.
ವರ್ಣಾಶ್ರಮಾದಿ ಧರ್ಮಾಣಾಮ್
ವ್ಯವಸ್ಥಾ ಹಿ ದ್ವಿಧಾ ಮತಾ |
ಏಕಾ ಶಿವೇನ ನಿರ್ದಿಷ್ಟಾ
ಬ್ರಹ್ಮಣಾ ಕಥಿತಾ ಪರಾ || 10-35
ವರ್ಣಾಶ್ರಮಾದಿ ಧರ್ಮಗಳ ವ್ಯವಸ್ಥೆಯು ಎರಡು ವಿಧವಾಗಿ ಇರುತ್ತದೆ.
ಒಂದನೆಯದು ಶಿವನಿಂದ ನಿರ್ದಿಷ್ಟವಾದದ್ದು. ಎರಡನೆಯದು ಬ್ರಹ್ಮನಿಂದ ಹೇಳಲ್ಪಟ್ಟಿದ್ದು.
ಶಿವೋಕ್ತಧರ್ಮನಿಷ್ಠಾ ತು
ಶಿವಾಶ್ರಮ ನಿಷೇವಿಣಾಮ್ |
ಶಿವಸಂಸ್ಕಾರ ಹೀನಾನಾಮ್
ಧರ್ಮಃ ಪೈತಾಮಹಃ ಸ್ಮೃತಃ || 10-36
ಶಿವಾಶ್ರಮದಲ್ಲಿ ತತ್ಪರರಾದ ಶಿವಭಕ್ತರಿಗೆ (ವೀರಶೈವರಿಗೆ)
ಶಿವನಿಂದ ಹೇಳಿದ ಧರ್ಮಗಳಲ್ಲಿ ನಿಷ್ಠೆ ಇರಬೇಕು. ಶಿವಸಂಸ್ಕಾರವಿಲ್ಲದವರಿಗೆ
ಬ್ರಹ್ಮನಿಂದ ಪ್ರತಿಪಾದಿತವಾದ ಧರ್ಮವು ವಿಹಿತವಾದುದು.
ಶಿವಸಂಸ್ಕಾರ ಯುಕ್ತೇಷು
ಜಾತಿಭೇದೋ ನ ವಿದ್ಯತೇ |
ಕಾಷ್ಠೇಷು ವಹ್ನಿ ದಗ್ಧೇಷು
ಯಥಾ ರೂಪಂ ನ ವಿದ್ಯತೇ || 10-37
ಅಗ್ನಿಯಿಂದ ಸುಡಲ್ಪಟ್ಟ ಕಟ್ಟಿಗೆಗಳಲ್ಲಿ ಅವುಗಳ ಪೂರ್ವದ
ರೂಪವು ಹೇಗೆ ಗೋಚರಿಸುವುದಿಲ್ಲವೋ ಅದರಂತೆ ಶಿವದೀಕ್ಷಾಸಂಸ್ಕಾರವನ್ನು
ಹೊಂದಿದವರಲ್ಲಿ (ವೀರಶೈವರಲ್ಲಿ) ಅವರ ಪೂರ್ವದ ಜಾತಿಭೇದಗಳು
ಉಳಿದಿರುವುದಿಲ್ಲ.
ತಸ್ಮಾತ್ಸರ್ವ ಪ್ರಯತ್ನೇನ
ಶಿವ ಸಂಸ್ಕಾರ ಸಂಯುತಃ |
ಜಾತಿ ಭೇದಂ ನ ಕುರ್ವಿತ
ಶಿವಭಕ್ತೇ ಕದಾಚನ || 10-38
ಆದ್ದರಿಂದ ಸರ್ವಪ್ರಯತ್ನದಿಂದ ಶಿವಸಂಸ್ಕಾರವನ್ನು ಹೊಂದಿದ ಶಿವಭಕ್ತನಲ್ಲಿ
ಎಂದೂ ಜಾತಿಭೇದವನ್ನು ಮಾಡಕೂಡದು.
ಇತಿ ಪೂರ್ವಾಶ್ರಯ ನಿರಸನ ಸ್ಥಲಂ
--------------------------
ಅಥ ಸರ್ವಾದ್ವೈತ ನಿರಸನ ಸ್ಥಲಮ್
ಪೂಜ್ಯ ಪೂಜಕಯೋರ್ಲಿಂಗ-
ಜೀವಯೋರ್ಭೆದ ವರ್ಜನೇ |
ಪೂಜಾಕರ್ಮಾದ್ಯ ಸಂಪತ್ತೇಃ
ಲಿಂಗನಿಷ್ಠಾ ವಿರೋಧತಃ || 10-39
ಪೂಜ್ಯ ಪೂಜಕರಾದ ಲಿಂಗ ಮತ್ತು ಜೀವರುಗಳ ಮಧ್ಯದಲ್ಲಿ
ಭೇದವನ್ನು ಮಾಡದೆ ಇದ್ದರೆ, ಲಿಂಗನಿಷ್ಠೆಗೆ ವಿರೋಧವಾಗುವುದಲ್ಲದೆ,
ಪೂಜಾದಿ ಕರ್ಮಗಳು ಸಹ ಸಂಭವಿಸುವುದಿಲ್ಲ.
ಸರ್ವಾದ್ವೈತ ವಿಚಾರಸ್ಯ
ಜ್ಞಾನಾಭಾವೇ ವ್ಯವಸ್ಥಿತೇಃ |
ಭವೇನ್ಮಾಹೇಶ್ವರಃ ಕರ್ಮೀ
ಸರ್ವಾದ್ವೈತನಿರಾಸಕಃ || 10-40
ಸರ್ವಾದ್ವೈತ ವಿಚಾರಕ್ಕೆ ಬೇಕಾದ ತತ್ತ್ವಜ್ಞಾನದ ಅಭಾವವು ಇವನಲ್ಲಿ
ಇರುವುದರಿಂದ ಕರ್ಮಿಯಾದ (ಇಷ್ಟಲಿಂಗಪೂಜಾ ಕರ್ಮಿಯಾದ)
ಮಾಹೇಶ್ವರನು ಸರ್ವಾದ್ವೈತ ನಿರಾಸಕನು ಆಗುತ್ತಾನೆ.
ಪ್ರೇರಕಂ ಶಂಕರಂ ಬುದ್ಧ್ವಾ
ಪ್ರೇರ್ಯಮಾತ್ಮಾನಮೇವ ಚ |
ಭೇದಾತ್ ತಂ ಪೂಜಯೇನ್ನಿತ್ಯಮ್
ನ ಚಾದ್ವೈತಪರೋ ಭವೇತ್ || 10-41
ಶಂಕರನನ್ನು ಪ್ರೇರಕನನ್ನಾಗಿ ಮತ್ತು ತನ್ನನ್ನು ಪ್ರೇರ್ಯನನ್ನಾಗಿ
ತಿಳಿದು ಪ್ರತಿದಿನವೂ ಭೇದದಿಂದಲೇ ಆ ಶಿವನನ್ನು (ಆ ಇಷ್ಟಲಿಂಗವನ್ನು)
ಪೂಜಿಸಬೇಕು. ಅದ್ವೈತ ಪರನಾಗ ಕೂಡದು.
ಪತಿಃ ಸಾಕ್ಷಾನ್ ಮಹಾದೇವಃ
ಪಶುರೇಷ ತದಾಶ್ರಯಃ |
ಅನಯೋಃ ಸ್ವಾಮಿಭೃತ್ಯತ್ವಮ್
ಅಭೇದೇ ಕಥಮಿಷ್ಯತೇ || 10-42
ಮಹಾದೇವನು ಸಾಕ್ಷಾತ್ ಪತಿಯಾಗಿರುತ್ತಾನೆ. ಅವನ ಆಶ್ರಯದಲ್ಲಿರುವ ಜೀವನು
ಪಶುವಾಗಿರುತ್ತಾನೆ. ಇವರೀರ್ವರಲ್ಲಿಯ ಸ್ವಾಮಿ ಮತ್ತು ಭೃತ್ಯಕಭಾವವು ಅಭೇದ ಭಾವನೆ
ಇದ್ದಾಗ ಹೇಗೆ ತಾನೇ ಸಂಬಂಧಿಸೀತು?
ಸಾಕ್ಷಾತ್ಕೃತಂ ಪರಂ ತತ್ತ್ವಮ್
ಯದಾ ಭವತಿ ಬೋಧತಃ |
ತದಾದ್ವೈತಸಮಾಪತ್ತಿಃ
ಜ್ಞಾನಹೀನಸ್ಯ ನ ಕ್ವಚಿತ್ || 10-43
ತತ್ತ್ವಬೋಧೆಯಿಂದ ಯಾವಾಗ ಪರತತ್ತ್ವವು ಸಾಕ್ಷಾತ್ಕಾರವಾಗುವುದೋ ಆಗ
ಅದ್ವೈತ ಸ್ಥಿತಿಯು ಪ್ರಾಪ್ತವಾಗುವುದು. ಆದರೆ ಜ್ಞಾನಹೀನನಾದವನಿಗೆ ಅದು
ಎಂದೂ ಉಂಟಾಗುವುದಿಲ್ಲ.
ಭೇದಸ್ಯ ಕರ್ಮಹೇತುತ್ವಾದ್
ವ್ಯವಹಾರಃ ಪ್ರವರ್ತತೇ |
ಲಿಂಗಪೂಜಾದಿಕರ್ಮಸ್ಥೋ
ನ ಚಾದ್ವೈತಂ ಸಮಾಚರೇತ್ || 10-44
ಭೇದ ವ್ಯವಹಾರವು (ಜೀವೇಶ್ವರರ ಭೇದ ವ್ಯವಹಾರವು)
ಕರ್ಮಕ್ಕೆ ಹೇತುವಾಗಿರುತ್ತದೆ (ಶಿವಪೂಜಾದಿ ಕರ್ಮಕ್ಕೆ ಕಾರಣವಾಗಿ
ಪ್ರವರ್ತವಾಗಿರುತ್ತದೆ). ಆದ್ದರಿಂದ ಲಿಂಗಪೂಜಾದಿ ಕರ್ಮದಲ್ಲಿ
ನಿರತನಾದ ಮಾಹೇಶ್ವರನು ಅದ್ವೈತವನ್ನು ಆಚರಿಸಕೂಡದು.
ಪೂಜಾದಿವ್ಯವಹಾರಃ ಸ್ಯಾತ್
ಭೇದಾಶ್ರಯತಯಾ ಸದಾ |
ಲಿಂಗಪೂಜಾ ಪರಸ್ ತಸ್ಮಾತ್
ನಾದ್ವೈತೇ ನಿರತೋ ಭವೇತ್ || 10-45
ಶಿವಪೂಜಾದಿ ವ್ಯವಹಾರವು ಭೇದವನ್ನು ಆಶ್ರಯಿಸಿಯೇ ಉಂಟಾಗುತ್ತದೆ.
ಆದ್ದರಿಂದ ಯಾವಾಗಲೂ ಲಿಂಗಪೂಜಾಪರನಾದ ಮಾಹೇಶ್ವರನು ಅದ್ವೈತದಲ್ಲಿ
ನಿರತನಾಗಕೂಡದು (ಆಸಕ್ತನಾಗಕೂಡದು).
ಇತಿ ಸರ್ವಾದ್ವೈತ ನಿರಸನಸ್ಥಲಂ
------------------------
ಅಥ ಆಹ್ವಾನ ನಿರಸನಸ್ಥಲಮ್
ಲಿಂಗಾರ್ಚನ ಪರಃ ಶುದ್ಧಃ
ಸರ್ವಾದ್ವೈತ ನಿರಾಸಕಃ |
ಸ್ವೇಷ್ಟಲಿಂಗೇ ಶಿವಾಕಾರೇ
ನ ತಮಾವಾಹ-ಯೇ-ಚ್ಛಿವಮ್ || 10-46
ಲಿಂಗಾರ್ಚನೆಯಲ್ಲಿ ತತ್ಪರನಾದ, ಅಂತೆಯೇ ಪರಿಶುದ್ಧನಾದ,
ಈ ಸರ್ವಾದ್ವೈತ ನಿರಾಸಕನು ಶಿವಸ್ವರೂಪವಾದ ತನ್ನ ಇಷ್ಟಲಿಂಗದಲ್ಲಿ
ಆ ಶಿವನನ್ನು ಆಹ್ವಾನ ಮಾಡಕೂಡದು.
ಯದಾ ಶಿವಕಲಾ ಯುಕ್ತಮ್
ಲಿಂಗಂ ದದ್ಯಾ ನ್ ಮಹಾಗುರುಃ |
ತದಾರಭ್ಯ ಶಿವಸ್ತತ್ರ
ತಿಷ್ಠತ್ಯಾಹ್ವಾನ ಮತ್ರ ಕಿಮ್ || 10-47
ಮಹಾಗುರುವು ಶಿವಕಲಾಯುಕ್ತವಾದ ಲಿಂಗವನ್ನು ಯಾವಾಗ ಕೊಡುವನೋ
ಆವಾಗಲಿಂದ ಆ ಶಿವಲಿಂಗದಲ್ಲಿ ಶಿವನು ಇರುವುದರಿಂದ ಮತ್ತೆ ಆಹ್ವಾನವನ್ನು
ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ.
ಸಸಂಸ್ಕಾರೇಷು ಲಿಂಗೇಷು
ಸದಾ ಸನ್ನಿಹಿತಃ ಶಿವಃ |
ತತ್ರಾಹ್ವಾನಂ ನ ಕರ್ತವ್ಯಮ್
ಪ್ರತಿಪತ್ತಿ ವಿರೋಧಕಮ್ || 10-48
ಸಂಸ್ಕಾರಯುಕ್ತವಾದ ಶಿವಲಿಂಗಗಳಲ್ಲಿ ಶಿವನು ಯಾವಾಗಲೂ ಸನ್ನಿಹಿತನಾಗಿರುತ್ತಾನೆ.
ಆದ್ದರಿಂದ ಪ್ರತಿಪತ್ತಿಗೆ (ಭಕ್ತಿಗೆ) ವಿರೋಧವಾದ ಆಹ್ವಾನವನ್ನು ಮಾಡಕೂಡದು.
ನಾಹ್ವಾನಂ ನ ವಿಸರ್ಗಂ ಚ
ಸ್ವೇಷ್ಟಲಿಂಗೇ ತು ಕಾರಯೇತ್ |
ಲಿಂಗನಿಷ್ಠಾಪರೋ ನಿತ್ಯಮ್
ಇತಿ ಶಾಸ್ತ್ರಸ್ಯ ನಿಶ್ಚಯಃ || 10-49
ಲಿಂಗನಿಷ್ಠಾ ಪರನಾದವನು ನಿತ್ಯವೂ ತನ್ನ ಇಷ್ಟಲಿಂಗದಲ್ಲಿ ಆಹ್ವಾನವನ್ನಾಗಲೀ ಮತ್ತು ವಿಸರ್ಜನೆಯನ್ನಾಗಲೀ
ಮಾಡಕೂಡದು. ಹೀಗೆ ಶಾಸ್ತ್ರದ ನಿರ್ಣಯವಿರುತ್ತದೆ.
ಇತಿ ಆಹ್ವಾನ ನಿರಸನ ಸ್ಥಲಂ
------------------------
ಅಥ ಅಷ್ಟಮೂರ್ತಿನಿರಸನಸ್ಥಲಮ್
ಯಥಾತ್ಮಶಿವಯೋರೈಕ್ಯಮ್
ನ ಮತಂ ಕರ್ಮಸಂಗಿನಃ |
ತಥಾ ಶಿವಾತ್ ಪೃಥಿವ್ಯಾದೇಃ
ಅದ್ವೈತಮಪಿ ನೇಷ್ಯತೇ || 10-50
ಕರ್ಮಸಂಗಿಯಾದ (ಇಷ್ಟಲಿಂಗ ಪೂಜಾರೂಪ ಕರ್ಮನಿಷ್ಠನಾದ) ಮಾಹೇಶ್ವರನ
ಮತ್ತು ಶಿವನ ಐಕ್ಯವು ಹೇಗೆ ಸಮ್ಮತವಲ್ಲವೋ ಅದರಂತೆ ಶಿವನೊಂದಿಗೆ
ಪೃಥಿವ್ಯಾದಿ ಮಹಾಭೂತಗಳ ಅದ್ವೈತವೂ ಸಹ ಅಪೇಕ್ಷಿತವಲ್ಲ.
ಪೃಥಿವ್ಯಾದ್ಯಷ್ಟ ಮೂರ್ತಿತ್ವಮ್
ಈಶ್ವರಸ್ಯ ಪ್ರಕೀರ್ತಿತಮ್ |
ತದಧಿಷ್ಠಾತೃ ಭಾವೇನ
ನ ಸಾಕ್ಷಾದೇಕ ಭಾವತಃ || 10-51
ಪೃಥಿವ್ಯಾದಿಗಳು ಈಶ್ವರನ ಅಷ್ಟಮೂರ್ತಿಗಳೆಂದು ಹೇಳಲ್ಪಟ್ಟಿವೆ.
ಆದರೆ ಸಾಕ್ಷಾತ್ ಪೃಥಿವ್ಯಾದಿಗಳೇ ಈಶ್ವರನಲ್ಲ.
ಅವುಗಳಿಗೆ ಅಧಿಷ್ಠಾತೃವಾದವನೇ ಈಶ್ವರನು.
ಪೃಥ್ವ್ಯಾದಿಕಮಿದಂ ಸರ್ವಮ್
ಕಾರ್ಯಂ ಕರ್ತಾ ಮಹೇಶ್ವರಃ |
ನೈತತ್ ಸಾಕ್ಷಾನ್ಮಹೇಶೋಯಮ್
ಕುಲಾಲೋ ಮೃತ್ತಿಕಾ ಯಥಾ || 10-52
ಪೃಥಿವ್ಯಾದಿಗಳೆಲ್ಲವೂ ಕಾರ್ಯರೂಪವಾದವುಗಳು. ಮಹೇಶ್ವರನು ಅವುಗಳ
ಕರ್ತೃವಾಗಿದ್ದಾನೆ. ಕುಂಬಾರನು ಮಣ್ಣಿಗಿಂತ ಭಿನ್ನವಾಗಿರುವಂತೆ ಈ ಪೃಥಿವ್ಯಾದಿ ಗಳಿಗಿಂತ ಮಹೇಶ್ವರನು ಭಿನ್ನನಾಗಿದ್ದಾನೆ.
ಪೃಥಿವ್ಯಾದ್ಯಾತ್ಮ ಪರ್ಯಂತ-
ಪ್ರಪಂಚೋ ಹ್ಯಷ್ಟಧಾ ಸ್ಥಿತಃ |
ತನುರೀಶಸ್ಯ ಚಾತ್ಮಾಯಮ್
ಸರ್ವತತ್ತ್ವನಿಯಾಮಕಃ || 10-53
ಪೃಥ್ವಿಯನ್ನೇ ಮೊದಲು ಮಾಡಿಕೊಂಡು ಆತ್ಮಪರ್ಯಂತವಾದ
(ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಸೂರ್ಯ, ಚಂದ್ರ, ಜೀವಾತ್ಮ)
ಪ್ರಪಂಚವು ಎಂಟು ಪ್ರಕಾರವಾಗಿರುತ್ತದೆ. ಈ ಎಂಟು ಪರಮಾತ್ಮನ
ಶರೀರಗಳು, ಸರ್ವತತ್ತ್ವ ನಿಯಾಮಕನಾದ ಪರಮಾತ್ಮನು
ಇವೆಲ್ಲವುಗಳ ಆತ್ಮರೂಪವಾಗಿರುತ್ತಾನೆ.
ಶರೀರ ಭೂತಾದೇತಸ್ಮಾತ್
ಪ್ರಪಂಚಾತ್ ಪರಮೇಷ್ಠಿನಃ |
ಆತ್ಮಭೂತಸ್ಯ ದೇವಸ್ಯ
ನಾಭೇದೋ ನ ಪೃಥಕ್ ಸ್ಥಿತಿಃ || 10-54
ಪರಶಿವನ ಶರೀರ ರೂಪವಾದ ಈ ಪ್ರಪಂಚಕ್ಕಿಂತಲೂ ಅವುಗಳ
ಆತ್ಮರೂಪವಾದ ದೇವನು (ಶಿವನು) ಅವುಗಳೊಂದಿಗೆ ಅಭಿನ್ನನೂ
ಅಲ್ಲ, ಅವುಗಳಂತೆ ಭಿನ್ನನೂ ಅಲ್ಲ.
ಅಚೇತನತ್ವಾತ್ ಪೃಥ್ವ್ಯಾದೇಃ
ಅಜ್ಞತ್ವಾದ್ ಆತ್ಮನ ಸ್ತಥಾ |
ಸರ್ವಜ್ಞಸ್ಯ ಮಹೇಶಸ್ಯ
ನೈಕ ರೂಪತ್ವ ಮಿಷ್ಯತೇ || 10-55
ಪೃಥಿವ್ಯಾದಿಗಳು ಅಚೇತನಗಳಾಗಿರುವುದರಿಂದ (ಜಡಗಳಾಗಿರುವುದರಿಂದ)
ಮತ್ತು ಆತ್ಮನು (ಜೀವಾತ್ಮನು) ಅಲ್ಪಜ್ಞನಾಗಿರುವುದರಿಂದ,
ಸರ್ವಜ್ಞನಾದ ಮಹೇಶನೊಂದಿಗೆ ಇವುಗಳ ಏಕರೂಪತೆಯನ್ನು
ಇಚ್ಛಿಸಲಾಗುವುದಿಲ್ಲ.
ಇತಿ ಯಶ್ಚಿಂತಯೇನ್ನಿತ್ಯಮ್
ಪೃಥ್ವ್ಯಾದೇರಷ್ಟ ಮೂರ್ತಿತಃ |
ವಿಲಕ್ಷಣಂ ಮಹಾದೇವಮ್
ಸೋಷ್ಟಮೂರ್ತಿ ನಿರಾಸಕಃ || 10-56
ಈ ರೀತಿಯಾಗಿ ಪೃಥ್ವಿಯೇ ಮೊದಲಾದ ಆತ್ಮ ಪರ್ಯಂತಗಳಾದ
ಅಷ್ಟಮೂರ್ತಿಗಳಿಗಿಂತಲೂ ಮಹಾದೇವನು ವಿಲಕ್ಷಣನಾಗಿದ್ದಾನೆ
ಎಂಬುದಾಗಿ ಯಾವನು ನಿತ್ಯವೂ ಚಿಂತಿಸುವನೋ
ಅವನು ಅಷ್ಟಮೂರ್ತಿ ನಿರಾಸಕನು.
ಅಥ ಅಷ್ಟಮೂರ್ತಿ ನಿರಸನ ಸ್ಥಲಮ್
-------------------------
ಅಥ ಸರ್ವಗತ್ವನಿರಸನ ಸ್ಥಲಮ್
ಸರ್ವಗತ್ವೇ ಮಹೇಶಸ್ಯ
ಸರ್ವತ್ರಾರಾಧನಂ ಭವೇತ್ |
ನ ಲಿಂಗಮಾತ್ರೇ ತನ್ನಿಷ್ಠೋ
ನ ಶಿವಂ ಸರ್ವಗಂ ಸ್ಮರೇತ್ || 10-57
ಮಹೇಶನು ಸರ್ವಗತನಾದರೆ (ಎಲ್ಲೆಡೆ ಇರುವವನಾದರೆ) ಎಲ್ಲೆಡೆಯಲ್ಲಿ
ಆರಾಧನೆಯನ್ನು (ಪೂಜೆಯನ್ನು) ಮಾಡಬೇಕಾಗುವುದು. ಕೇವಲ
ಇಷ್ಟಲಿಂಗದಲ್ಲಿ ಆರಾಧನೆಯನ್ನು ಮಾಡಲಿಕ್ಕಾಗುವುದಿಲ್ಲ.
ಆದ್ದರಿಂದ ಲಿಂಗನಿಷ್ಠನಾದ ಮಾಹೇಶ್ವರನು ಶಿವನನ್ನು
ಸರ್ವಗತನನ್ನಾಗಿ ಸ್ಮರಿಸ ಕೂಡದು.
ಸರ್ವಗೋಪಿ ಸ್ಥಿತಃ ಶಂಭುಃ
ಸ್ವಾಧಾರೇ ಹಿ ವಿಶೇಷತಃ |
ತಸ್ಮಾದನ್ಯತ್ರ ವಿಮುಖಃ
ಸ್ವೇಷ್ಟಲಿಂಗೇ ಯಜೇಚ್ಛಿವಮ್ || 10-58
ಶಂಭುವು ಸರ್ವವ್ಯಾಪಿಯಾಗಿದ್ದರೂ ಆಧಾರವಾದ ಇಷ್ಟಲಿಂಗದಲ್ಲಿ
ಅವನ ವಿಶೇಷ ಸ್ಥಿತಿಯು ಇರುತ್ತದೆ. ಆದ್ದರಿಂದ ಅನ್ಯ ಸ್ಥಾನಗಳಿಂದ
ವಿಮುಖನಾಗಿ (ಮಾಹೇಶ್ವರನು) ತನ್ನ ಇಷ್ಟಲಿಂಗದಲ್ಲಿ ಶಿವನನ್ನು
ಪೂಜಿಸಬೇಕು.
ಶಿವಃ ಸರ್ವಗತಶ್ಚಾಪಿ
ಸ್ವಾಧಾರೇ ವ್ಯಜ್ಯತೇ ಭೃಶಮ್ |
ಶಮೀಗರ್ಭೆ ಯಥಾ ವಹ್ನಿಃ
ವಿಶೇಷೇಣ ವಿಭಾವ್ಯತೇ || 10-59
ಅಗ್ನಿಯು ಎಲ್ಲ ಮರಗಳಲ್ಲಿ ಅಡಕವಾಗಿದ್ದರೂ, ಬನ್ನಿಯ ಮರದೊಳಗೆ
ಅದು ವಿಶೇಷವಾಗಿ ಭಾಸವಾಗುವಂತೆ (ತೋರುವಂತೆ), ಸರ್ವಗತನಾದ
ಶಿವನೂ ಸಹ ತನಗೆ ಆಧಾರವಾದ
ಇಷ್ಟಲಿಂಗದಲ್ಲಿ ವಿಶೇಷವಾಗಿ ಅಭಿವ್ಯಕ್ತನಾಗುತ್ತಾನೆ.
ಸರ್ವಗತ್ವಂ ಮಹೇಶಸ್ಯ
ಸರ್ವಶಾಸ್ತ್ರವಿನಿಶ್ಚಿತಮ್ |
ತಥಾಪ್ಯಾಶ್ರಯಲಿಂಗಾದೌ
ಪೂಜಾರ್ಥಮಧಿಕಾ ಸ್ಥಿತಿಃ || 10-60
ಮಹೇಶನು ಸರ್ವವ್ಯಾಪಕನೆಂಬುದು ಸರ್ವಶಾಸ್ತ್ರಗಳಿಂದ ನಿಶ್ಚಯಿಸಲಾಗಿದೆ.
ಆದರೂ ಸಹ ತನಗೆ ಆಧಾರವಾದ ಇಷ್ಟಲಿಂಗದಲ್ಲಿಯೇ ಪೂಜಿಸಿಕೊಳ್ಳಲು
ಅವನ ಅಸ್ತಿತ್ವವು ವಿಶೇಷವಾಗಿ ಇರುತ್ತದೆ.
ನಿತ್ಯಂ ಭಾಸಿ ತದೀಯಸ್ತ್ವಮ್
ಯಾ ತೇ ರುದ್ರ ಶಿವಾ ತನೂಃ |
ಅಘೋರಾಪಾಪಕಾಶೀತಿ
ಶ್ರುತಿರಾಹ ಸನಾತನೀ || 10-61
ಹೇ ರುದ್ರನೇ, ನಿನ್ನ ಲಿಂಗರೂಪವಾದ ಯಾವ ಶರೀರವಿದೆಯೋ
ಅದು ಅಘೋರವಾದದ್ದು (ಶಾಂತವಾದುದು) ಮತ್ತು ಪಾಪರಹಿತರಾದ
ಭಕ್ತರ ದೇಹದ ಮೇಲೆ ಯಾವಾಗಲೂ ಪ್ರಕಾಶಿಸುವಂತಹುದು
ಎಂಬುದಾಗಿ ಸನಾತನವಾದ ಶ್ರುತಿಯು ಹೇಳುವುದು.
ಆದ್ದರಿಂದ ನೀನು ನಿತ್ಯವೂ ಭಕ್ತರ ದೇಹದಲ್ಲಿ
ಭಾಸಿಸುವೆ (ತೋರುವೆ).
ತಸ್ಮಾತ್ ಸರ್ವಪ್ರಯತ್ನೇನ
ಸರ್ವಸ್ಥಾನ ಪರಾಙ್ಮುಖಃ |
ಸ್ವೇಷ್ಟಲಿಂಗೇ ಮಹಾದೇವಮ್
ಪೂಜಯೇತ್ ಪೂಜಕೋತ್ತಮಃ || 10-62
ಆದ್ದರಿಂದ ಉತ್ತಮ ಪೂಜಕನಾದ ಮಾಹೇಶ್ವರನು ಎಲ್ಲ ಪ್ರಯತ್ನಗಳನ್ನು
ಮಾಡಿ ಸರ್ವಸ್ಥಾನಗಳಿಂದ (ಬಹಿರಂಗದ) ಪರಾಙ್ಮುಖನಾಗಿ (ವಿಮುಖನಾಗಿ)
ತನ್ನ ಇಷ್ಟಲಿಂಗದಲ್ಲಿಯೇ ಮಹಾದೇವನನ್ನು ಪೂಜಿಸಬೇಕು.
ಶಿವಸ್ಯ ಸರ್ವಗತ್ವೇಪಿ
ಸರ್ವತ್ರ ರತಿವರ್ಜಿತಃ |
ಸ್ವೇಷ್ಟಲಿಂಗೇ ಯಜನ್ ದೇವಮ್
ಸರ್ವಗತ್ವನಿರಾಸಕಃ || 10-63
ಶಿವನು ಸರ್ವತ್ರ ವ್ಯಾಪಕನಾಗಿದ್ದರೂ ಎಲ್ಲೆಡೆ ರತಿವರ್ಜಿತನಾದ
(ಭಕ್ತಿ ವರ್ಜಿತನಾದ) ಮಾಹೇಶ್ವರನು ತನ್ನ ಇಷ್ಟಲಿಂಗದಲ್ಲಿಯೇ
ಶಿವನನ್ನು ಪೂಜಿಸುತ್ತಾ ಸರ್ವಗತ್ವ ನಿರಾಸಕನು ಆಗುವನು.
ಇತಿ ಸರ್ವಗತ್ವನಿರಸನಸ್ಥಲಂ
--------------------
ಅಥ ಶಿವಜಗನ್ಮಯಸ್ಥಲಮ್
ಪೂಜಾವಿಧೌ ನಿಯಮ್ಯತ್ವಾತ್
ಲಿಂಗಮಾತ್ರೇ ಸ್ಥಿತಂ ಶಿವಮ್ |
ಪೂಜಯನ್ನಪಿ ದೇವಸ್ಯ
ಸರ್ವಗತ್ವಂ ವಿಭಾವಯೇತ್ || 10-64
(ಶಿವ)ಪೂಜಾವಿಧಿಯಲ್ಲಿ ನಿಯಮಿಸಿದಂತೆ ಇಷ್ಟಲಿಂಗ ಮಾತ್ರದಲ್ಲಿರುವ
ಶಿವನನ್ನು ಪೂಜಿಸುತ್ತಿದ್ದರೂ ಮಾಹೇಶ್ವರನು ಆ ದೇವನನ್ನು
(ಶಿವನನ್ನು) ಸರ್ವಗತನನ್ನಾಗಿ ಭಾವಿಸಬೇಕು.
ಯಸ್ಮಾದೇತತ್ ಸಮುತ್ಪನ್ನಮ್
ಮಹಾದೇವಾಚ್ಚರಾಚರಮ್ |
ತಸ್ಮಾದೇತನ್ನ ಭಿದ್ಯೇತ
ಯಥಾ ಕುಂಭಾದಿಕಂ ಮೃದಃ || 10-65
ಮಣ್ಣಿನಿಂದ ಮಾಡಿದ ಮಡಿಕೆಗಳು ಮಣ್ಣಿನಿಂದ ಭಿನ್ನವಾಗಿರದಂತೆ
ಮಹಾದೇವನಿಂದ ಸಮುತ್ಪನ್ನವಾದ ಈ ಚರಾಚರ ಪ್ರಪಂಚವು
ಅವನಿಂದ ಭಿನ್ನವಾಗಿರುವುದಿಲ್ಲ.
ಶಿವತತ್ತ್ವಾತ್ ಸಮುತ್ಪನ್ನಮ್
ಜಗದಸ್ಮಾನ್ನ ಭಿದ್ಯತೇ |
ಫೇನೋರ್ಮಿಬುದ್ಬುದಾಕಾರಮ್
ಯಥಾ ಸಿಂಧೋರ್ನ ಭಿದ್ಯತೇ || 10-66
ಸಮುದ್ರದಲ್ಲಿ ಹುಟ್ಟಿದ ನೆರೆತೆರೆ ಬುದ್ಬುದಗಳು ಸಮುದ್ರಕ್ಕಿಂತಲೂ
ಭಿನ್ನವಾಗಿರದಂತೆ, ಶಿವತತ್ತ್ವದಿಂದ ಉತ್ಪನ್ನವಾದ ಜಗತ್ತೂ ಸಹ
ಶಿವನಿಂದ ಭಿನ್ನವಾಗಿರುವುದಿಲ್ಲ.
ತಂತುಗಳಿಂದ (ಎಳೆಗಳಿಂದ) ಉತ್ಪನ್ನವಾದ ಪಟವು (ವಸ್ತ್ರವು) ಹೇಗೆ ತಂತುಮಯವಾಗಿರುವುದೋ ಅದರಂತೆ ಶಿವನಿಂದ ಉತ್ಪನ್ನವಾದ ಈ ಚರಾಚರ ಪ್ರಪಂಚವು ಶಿವಸ್ವರೂಪವೇ ಆಗಿರುತ್ತದೆ.
ಯಥಾ ತಂತುಭಿರುತ್ಪನ್ನಃ
ಪಟಸ್ತಂತುಮಯಃ ಸ್ಮೃತಃ |
ತಥಾ ಶಿವಾತ್ ಸಮುತ್ಪನ್ನಮ್
ಶಿವ ಏವ ಚರಾಚರಮ್ || 10-67
ತಂತುಗಳಿಂದ (ಎಳೆಗಳಿಂದ) ಉತ್ಪನ್ನವಾದ ಪಟವು (ವಸ್ತ್ರವು)
ಹೇಗೆ ತಂತುಮಯವಾಗಿರುವುದೋ ಅದರಂತೆ ಶಿವನಿಂದ ಉತ್ಪನ್ನವಾದ ಈ ಚರಾಚರ ಪ್ರಪಂಚವು ಶಿವಸ್ವರೂಪವೇ ಆಗಿರುತ್ತದೆ.
ಆತ್ಮಶಕ್ತಿ ವಿಕಾಸೇನ
ಶಿವೋ ವಿಶ್ವಾತ್ಮನಾ ಸ್ಥಿತಃ |
ಕುಟೀಭಾವಾದ್ ಯಥಾ ಭಾತಿ
ಪಟಃ ಸ್ವಸ್ಯ ಪ್ರಸಾರಣಾತ್ || 10-68
ಪಟವು ತನ್ನ ಪ್ರಸಾರಣದಿಂದ ಕುಟಿ (ಡೇರೆ) ರೂಪವನ್ನು ಹೇಗೆ
ತಾಳುವುದೋ ಅದರಂತೆ ತನ್ನ ಶಕ್ತಿಯ ವಿಕಾಸದಿಂದ ಶಿವನು
ವಿಶ್ವಾತ್ಮನಾಗಿರುತ್ತಾನೆ.
ತಸ್ಮಾಚ್ಛಿವಮಯಂ ಸರ್ವಮ್
ಜಗದೇತಚ್ಚರಾಚರಮ್ |
ತದಭಿನ್ನತಯಾ ಭಾತಿ
ಸರ್ಪತ್ವಮಿವ ರಜ್ಜುತಃ || 10-69
ರಜ್ಜುವು (ಹಗ್ಗವು) ಸರ್ಪತ್ವವನ್ನು ಪಡೆದು ರಜ್ಜುವಿನೊಂದಿಗೆ ಅಭಿನ್ನವಾಗಿ
ತೋರುವಂತೆ ಚರಾಚರವಾದ ಸರ್ವಜಗತ್ತು ಶಿವಮಯವಾಗಿ ತೋರುವುದು.
ರಜ್ಜೌ ಸರ್ಪತ್ವವದ್ ಭಾತಿ
ಶುಕ್ತೌ ಚ ರಜತತ್ವವತ್ |
ಚೋರತ್ವವದಪಿ ಸ್ಥಾಣೌ
ಮರೀಚ್ಯಾಂ ಚ ಜಲತ್ವವತ್ || 10-70
ರಜ್ಜುವಿನಲ್ಲಿ ಸರ್ಪತ್ವವು, ಶುಕ್ತಿಯಲ್ಲಿ ರಜತ್ವವು, ಸ್ಥಾಣುವಿನಲ್ಲಿ
(ಮೋಟು ಮರದಲ್ಲಿ) ಚೋರತ್ವವು ಮತ್ತು ಮೃಗಮರೀಚಿಕೆಯಲ್ಲಿ
ಜಲತ್ವವು,
ಗಂಧರ್ವಪುರವದ್ವ್ಯೋಮ್ನಿ
ಸಚ್ಚಿದಾನಂದಲಕ್ಷಣೇ |
ನಿರಸ್ತಭೇದಸದ್ಭಾವೇ
ಶಿವೇ ವಿಶ್ವಂ ವಿರಾಜತೇ || 10-71
ಆಕಾಶದಲ್ಲಿ ಗಂಧರ್ವಪುರವು ತೋರುವಂತೆ ಸಚ್ಚಿದಾನಂದ
ಲಕ್ಷಣನಾದ ಭೇದರಹಿತನಾದ ಶಿವನಲ್ಲಿ ವಿಶ್ವವು ವಿರಾಜಿಸುತ್ತದೆ.
ಪತ್ರಶಾಖಾದಿರೂಪೇಣ
ಯಥಾ ತಿಷ್ಠತಿ ಪಾದಪಃ |
ತಥಾ ಭೂಮ್ಯಾದಿರೂಪೇಣ
ಶಿವ ಏಕೋ ವಿರಾಜತೇ || 10-72
ಪಾದಪವು (ವೃಕ್ಷವು) ಹೇಗೆ ಪತ್ರ ಶಾಖಾದಿ ರೂಪದಲ್ಲಿ ಇರುವುದೋ
ಅದರಂತೆ ಭೂಮ್ಯಾದಿಗಳ ರೂಪದಲ್ಲಿ ಒಬ್ಬನೇ
ಆದ ಶಿವನು ವಿರಾಜಿಸುತ್ತಾನೆ.
ಇತಿ ಶಿವಜಗನ್ಮಯಸ್ಥಲಮ್
------------------------
ಅಥ ಭಕ್ತದೇಹಿಕಲಿಂಗಸ್ಥಲಮ್
ಸಮಸ್ತಜಗದಾತ್ಮಾಪಿ
ಶಂಕರಃ ಪರಮೇಶ್ವರಃ |
ಭಕ್ತಾನಾಂ ಹೃದಯಾಂಭೋಜೇ
ವಿಶೇಷೇಣ ವಿರಾಜತೇ || 10-73
ಶಂಕರನಾದ (ಸರ್ವರಿಗೂ ಸುಖವನ್ನು ಕೊಡುವ) ಪರಮೇಶ್ವರನು ಸಮಸ್ತ ಜಗದಾತ್ಮವಾಗಿದ್ದರೂ (ಜಗತ್ತನ್ನು ವ್ಯಾಪಿಸಿಕೊಂಡಿದ್ದರೂ) ಭಕ್ತರ ಹೃದಯಕಮಲದಲ್ಲಿ ಇವನು ವಿಶೇಷವಾಗಿ ವಿರಾಜಿಸುತ್ತಾನೆ.
ಕೈಲಾಸೇ ಮಂದರೇ ಚೈವ
ಹಿಮಾದ್ರೌ ಕನಕಾಚಲೇ |
ಹೃದಯೇಷು ಚ ಭಕ್ತಾನಾಮ್
ವಿಶೇಷೇಣ ವ್ಯವಸ್ಥಿತಃ || 10-74
ಕೈಲಾಸ ಪರ್ವತ, ಮಂದಾರ ಪರ್ವತ, ಹಿಮಾಲಯ,
ಕನಕಾಚಲ (ಮೇರು ಪರ್ವತ) ಗಳಲ್ಲಿ ಮತ್ತು ಭಕ್ತರ
ಹೃದಯದಲ್ಲಿ ಶಿವನು ವಿಶೇಷವಾಗಿ ವಾಸಿಸುತ್ತಾನೆ.
ಸರ್ವಾತ್ಮಾಪಿ ಪರಿಚ್ಛಿನ್ನೋ
ಯಥಾ ದೇಹೇಷು ವರ್ತತೇ |
ತಥಾ ಸ್ವಕೀಯಭಕ್ತೇಷು
ಶಂಕರೋ ಭಾಸತೇ ಸದಾ || 10-75
ಶಂಕರನು ಸರ್ವಾತ್ಮನಾಗಿದ್ದರೂ ಸಹ ಎಲ್ಲಾ ಜೀವಿಗಳ
ದೇಹದಲ್ಲಿ ಪರಿಚ್ಛಿನ್ನನಾಗಿ ಹೇಗೆ ಇರುವನೋ ಹಾಗೆ ತನ್ನ ಭಕ್ತರಲ್ಲಿ
(ಭಕ್ತರ ಹೃದಯದಲ್ಲಿ) ಯಾವಾಗಲೂ ಪ್ರಕಾಶಿಸುತ್ತಾನೆ.
ನಿತ್ಯಂ ಭಾತಿ ತ್ವದೀಯೇಷು
ಯಾ ತೇ ರುದ್ರ ಶಿವಾ ತನೂಃ |
ಅಘೋರಾಪಾಪಕಾಶೀತಿ
ಶ್ರುತಿರಾಹ ಸನಾತನೀ || 10-76
ಹೇ ರುದ್ರನೇ, ನಿನ್ನ ಲಿಂಗರೂಪವಾದ ಯಾವ ಶರೀರವಿದೆಯೋ
ಅದು ಅಘೋರವಾದುದು (ಶಾಂತವಾದುದು) ಮತ್ತು ಪಾಪರಹಿತರಾದ
ಭಕ್ತರ ದೇಹದ ಮೇಲೆ ಯಾವಾಗಲೂ ಪ್ರಕಾಶಿಸುವಂತಹುದು ಎಂಬುದಾಗಿ ಸನಾತನವಾದ ಶ್ರುತಿಯು ಹೇಳುವುದು. ಆದ್ದರಿಂದ ನೀನು ನಿತ್ಯವೂ ಭಕ್ತರ ದೇಹದಲ್ಲಿ ಭಾವಿಸುವೆ (ತೋರುವೆ).
ವಿಶುದ್ಧೇಷು ವಿರಕ್ತೇಷು
ವಿವೇಕಿಷು ಮಹಾತ್ಮಸು |
ಶಿವಸ್ತಿಷ್ಠತಿ ಸರ್ವಾತ್ಮಾ
ಶಿವಲಾಂಛನಧಾರಿಷು || 10-77
ವಿಶುದ್ಧರಲ್ಲಿ (ಪರಿಶುದ್ಧರಲ್ಲಿ), ವಿರಕ್ತರಲ್ಲಿ, ವಿವೇಕಿಗಳಲ್ಲಿ,
ಮಹಾತ್ಮರಲ್ಲಿ ಮತ್ತು ಶಿವಲಾಂಛನಧಾರಿಗಳಲ್ಲಿ ಸರ್ವಾತ್ಮನಾದ
ಶಿವನು ಇರುತ್ತಾನೆ.
ನಿತ್ಯಂ ಸಂತೋಷಯುಕ್ತಾನಾಮ್
ಜ್ಞಾನ ನಿರ್ಧೂತಕರ್ಮಣಾಮ್ |
ಮಾಹೇಶ್ವರಾಣಾಮಂತಃಸ್ಥೋ
ವಿಭಾತಿ ಪರಮೇಶ್ವರಃ || 10-78
ಸಂತೋಷಯುಕ್ತರಾದ, ಜ್ಞಾನದಿಂದ ಕರ್ಮವನ್ನು ಕಳೆದುಕೊಂಡ
ಮಾಹೇಶ್ವರರ ಅಂತರಂಗದಲ್ಲಿ ಪರಮೇಶ್ವರನು ನಿತ್ಯವಾಗಿ
(ಯಾವಾಗಲೂ) ವಿಶೇಷವಾಗಿ ಭಾಸಿಸುತ್ತಾನೆ (ಪ್ರಕಾಶಿಸುತ್ತಾನೆ).
ಅನ್ಯತ್ರ ಶಂಭೋ ರತಿಮಾತ್ರಶೂನ್ಯೋ
ನಿಜೇಷ್ಟಲಿಂಗೇ ನಿಯತಾಂತರಾತ್ಮಾ |
ಶಿವಾತ್ಮಕಂ ವಿಶ್ವಮಿದಂ ವಿಬುಧ್ಯನ್
ಮಾಹೇಶ್ವರೋ ಸೌಭವತಿ ಪ್ರಸಾದೀ||10-79
ಬೇರೆಡೆಯಲ್ಲಿ ಶಂಭುವಿನ ಪ್ರೀತಿ ಇಲ್ಲದಿರುವ, ತನ್ನ ಇಷ್ಟಲಿಂಗದಲ್ಲಿಯೇ
ಏಕಾಗ್ರವಾದ ಮನಸ್ಸುಳ್ಳ, ಈ ವಿಶ್ವವನ್ನು ಶಿವಸ್ವರೂಪವೆಂದು
ತಿಳಿದುಕೊಂಡ ಆ ಮಾಹೇಶ್ವರನೇ ಪ್ರಸಾದಿಯಾಗುವನು.
ಇತಿ ಭಕ್ತದೇಹಿಕಲಿಂಗಸ್ಥಲಮ್ ಪರಿಸಮಾಪ್ತಂ
ಓಂ ತತ್ಸತ್ ಇತಿ
ಶ್ರೀ ಶಿವಗೀತೇಷು ಸಿದ್ಧಾಂತಾಗಮೇಷು
ಶಿವಾದ್ವೈತವಿದ್ಯಾಯಾಂ ಶಿವಯೋಗಶಾಸ್ತ್ರೇ
ಶ್ರೀರೇಣುಕಾಗಸ್ತ್ಯಸಂವಾದೇ ವೀರಶೈವಧರ್ಮನಿರ್ಣಯೇ
ಶ್ರೀಶಿವಯೋಗಿಶಿವಾಚಾರ್ಯವಿರಚಿತೇ ಶ್ರೀಸಿದ್ಧಾಂತಶಿಖಾಮಣೌ
ಮಾಹೇಶ್ವರಸ್ಥಲೇ ಮಾಹೇಶ್ವರಪ್ರಶಂಸಾದಿ
ನವವಿಧಸ್ಥಲಪ್ರಸಂಗೋ ನಾಮ ದಶಮಃ ಪರಿಚ್ಛೇದಃ ||
ಇಲ್ಲಿಗೆ ಭಕ್ತದೇಹಿಕಲಿಂಗಸ್ಥಲವು ಮುಗಿಯಿತು.
ಓಂ ತತ್ಸತ್ ಇತಿ ಶ್ರೀ ಶಿವನಿಂದ ಉಪದೇಶಿಸಲ್ಪಟ್ಟು ಶ್ರೀ ಸಿದ್ಧಾಂತಾಗಮಗಳಲ್ಲಿಯ ಶಿವಾದ್ವೈತವಿದ್ಯಾರೂಪವೂ, ಶಿವಯೋಗಶಾಸ್ತ್ರವೂ,
ಶ್ರೀ ರೇಣುಕಾಗಸ್ತ್ಯಸಂವಾದ ರೂಪವೂ, ಶ್ರೀ ವೀರಶೈವಧರ್ಮನಿರ್ಣಯವೂ,
ಶ್ರೀ ಶಿವಯೋಗಿ ಶಿವಾಚಾರ್ಯ ವಿರಚಿತವೂ ಆದ ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿ
ಮಾಹೇಶ್ವರಸ್ಥಲದಲ್ಲಿಯ ಮಾಹೇಶ್ವರಪ್ರಶಂಸಾದಿ ಒಂಭತ್ತು ವಿಧ ಸ್ಥಲಪ್ರಸಂಗವೆಂಬ ಹೆಸರಿನ ಹತ್ತನೆಯ ಪರಿಚ್ಛೇದ ಮುಗಿದುದು.