ನವಮಃ ಪರಿಚ್ಛೇದಃ

ಭಕ್ತಮಾರ್ಗಕ್ರಿಯಾ-ಉಭಯ-ತ್ರಿವಿಧಸಂಪತ್ತಿ-

(Page – 160)

ಚತುರ್ವಿಧಸಾರಾಯ ದಾನತ್ರಯಸ್ಥಲಪ್ರಸಂಗಃ -

ಅಥ ಭಕ್ತಮಾರ್ಗಕ್ರಿಯಾಸ್ಥಲಮ್

ಭೂತಿ ರುದ್ರಾಕ್ಷ ಸಂಯುಕ್ತೋ

ಲಿಂಗಧಾರೀ ಸದಾಶಿವಃ |

ಪಂಚಾಕ್ಷರ ಜಪೋದ್ಯೋಗೀ

ಶಿವಭಕ್ತ ಇತಿ ಸ್ಮೃತಃ || 9-1

ವಿಭೂತಿ ರುದ್ರಾಕ್ಷಿಗಳನ್ನು ಧರಿಸಿದ, ಇಷ್ಟಲಿಂಗಧಾರಿಯಾದ, ಅಂತೆಯೇ ಸದಾ ಮಂಗಳಸ್ವರೂಪನಾದ ಮತ್ತು ಪಂಚಾಕ್ಷರ ಜಪದಲ್ಲಿ ನಿರತನಾದವನು, ಶಿವಭಕ್ತನೆಂದು ಕರೆಯಲ್ಪಡುತ್ತಾನೆ.

ಶ್ರವಣಂ ಕೀರ್ತನಂ ಶಂಭೋಃ

ಸ್ಮರಣಂ ಪಾದಸೇವನಮ್ |

ಅರ್ಚನಂ ವಂದನಂ ದಾಸ್ಯಮ್

ಸಖ್ಯಮಾತ್ಮನಿವೇದನಮ್ || 9-2

ಏವಂ ನವವಿಧಾ ಭಕ್ತಿಃ

ಪ್ರೋಕ್ತಾ ದೇವೇನ ಶಂಭುನಾ |

ದುರ್ಲಭಾ ಪಾಪಿನಾಂ ಲೋಕೇ

ಸುಲಭಾ ಪುಣ್ಯಕರ್ಮಣಾಮ್ || 9-3

ದೇವಾದಿದೇವನಾದ ಶಂಭುವಿನಿಂದ ಹೇಳಲ್ಪಟ್ಟ ಈ ಶಿವಭಕ್ತಿಯು ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, ವಂದನ, ದಾಸ್ಯ, ಸಖ್ಯ ಮತ್ತು ಆತ್ಮನಿವೇದನ ಎಂಬುದಾಗಿ ಒಂಭತ್ತು ವಿಧವಾಗಿರುತ್ತದೆ. ಈ ಲೋಕದಲ್ಲಿ ಇದು ಪಾಪಿಗಳಿಗೆ ದುರ್ಲಭವಾದುದು, ಪುಣ್ಯಾತ್ಮರಿಗೆ ಸುಲಭವಾದುದಾಗಿದೆ.

ಅಧಮೇ ಚೋತ್ತಮೇ ವಾಪಿ

ಯತ್ರ ಕುತ್ರಚಿ ದೂರ್ಜಿತಾ ||

ವರ್ತತೇ ಶಾಂಕರೀ ಭಕ್ತಿಃ

ಸ ಭಕ್ತ ಇತಿ ಗೀಯತೇ || 9-4

ಅಧಮನೇ (ನೀಚನೇ) ಆಗಿರಲಿ ಅಥವಾ ಉತ್ತಮನೇ ಆಗಿರಲಿ, ಇನ್ನೂ ಬೇರೆ ಯಾರಾದರೂ ಆಗಿರಲಿ, ಅವನಲ್ಲಿ ಶಿವನ ಭಕ್ತಿಯು ಇದ್ದರೆ ಅವನು ಭಕ್ತನೆಂದು ಕರೆಯಲ್ಪಡುತ್ತಾನೆ.

ಭಕ್ತಿಃ ಸ್ಥಿರೀಕೃತಾ ಯಸ್ಮಿನ್

ಮ್ಲೇಚ್ಛೇ ವಾ ದ್ವಿಜಸತ್ತಮೇ |

ಶಂಭೋಃ ಪ್ರಿಯಃ ಸ ವಿಪ್ರಶ್ಚ

ನ ಪ್ರಿಯೋ ಭಕ್ತಿವರ್ಜಿತಃ || 9-5

ಮ್ಲೇಚ್ಛ (ಅನಾಗರೀಕ)ನಾಗಿರಲಿ ಅಥವಾ ಬ್ರಾಹ್ಮಣೋತ್ತಮನೇ ಆಗಿರಲಿ ದೃಢವಾದ ಶಿವಭಕ್ತಿಯು ಯಾರಲ್ಲಿರುವುದೋ ಅವನೇ ಶಂಭುವಿಗೆ ಪ್ರಿಯನು. ಭಕ್ತಿಯಿಲ್ಲದ ವಿಪ್ರನು (ಬ್ರಾಹ್ಮಣನು) ಪ್ರಿಯನಲ್ಲ.

ಸಾ ಭಕ್ತಿರ್ ಧ್ವಿವಿಧಾ ಜ್ಞೇಯಾ

ಬಾಹ್ಯಾಭ್ಯಂತರ ಭೇದತಃ |

ಬಾಹ್ಯಾ ಸ್ಥೂಲಾಂತರಾ ಸೂಕ್ಷ್ಮಾ

ವೀರಮಾಹೇಶ್ವರಾದೃತಾ || 9-6

ಆ ಶಿವಭಕ್ತಿಯು ಬಾಹ್ಯವೆಂತಲೂ (ಹೊರಗಿನ) ಮತ್ತು ಅಭ್ಯಂತರವೆಂತಲೂ (ಅಂತರಂಗ) ಎರಡು ವಿಧವಾಗಿದೆ ಎಂದು ತಿಳಿದುಕೊಳ್ಳಬೇಕು. ಬಾಹ್ಯಭಕ್ತಿಯು ಸ್ಥೂಲವಾದುದು. ಅಂತರಭಕ್ತಿಯು ಸೂಕ್ಷ್ಮವಾದದ್ದು. ಈ ಸೂಕ್ಷ್ಮಭಕ್ತಿಯೇ ವೀರಮಾಹೇಶ್ವರರಿಂದ ಸ್ವೀಕರಿಸಲ್ಪಟ್ಟಿದೆ.

ಸಿಂಹಾಸನೇ ಶುದ್ಧದೇಶೇ

ಸುರಮ್ಯೇ ರತ್ನಚಿತ್ರಿತೇ |

ಶಿವಲಿಂಗಸ್ಯ ಪೂಜಾ ಯಾ

ಸಾ ಬಾಹ್ಯಾ ಭಕ್ತಿರುಚ್ಯತೇ || 9-7

ಸುರಮ್ಯವಾದ (ಮನೋಹರವಾದ) ಶುದ್ಧಪ್ರದೇಶ (ಗೋಮಯಾದಿ ಗಳಿಂದ ಸಾರಿಸಿ ಶುದ್ಧಗೊಳಿಸಿದ ಜಾಗ)ದಲ್ಲಿ ರತ್ನಗಳಿಂದ (ನವ ರತ್ನಗಳಿಂದ) ಅಲಂಕಾರಗೊಳಿಸಿದ ಸಿಂಹಾಸನದಲ್ಲಿ ಕುಳಿತು ಶಿವಲಿಂಗ (ಇಷ್ಟಲಿಂಗ)ವನ್ನು ಪೂಜಿಸುವುದೇ ಅದು ಬಾಹ್ಯ ಭಕ್ತಿಯೆಂದು ಹೇಳಲಾಗಿದೆ.

ಲಿಂಗೇ ಪ್ರಾಣಂ ಸಮಾಧಾಯ

ಪ್ರಾಣೇ ಲಿಂಗಂ ತು ಶಾಂಭವಮ್ |

ಸ್ವಸ್ಥಂ ಮನಸ್ತಥಾ ಕೃತ್ವಾ

ನ ಕಿಂಚಿಚ್ ಚಿಂತಯೇದ್ ಯದಿ || 9-8

ಇನ್ನು ಇಷ್ಟಲಿಂಗದಲ್ಲಿ ತನ್ನ ಪ್ರಾಣವನ್ನು, ಆ ಪ್ರಾಣದಲ್ಲಿ ಶಿವಕಲಾಯುಕ್ತವಾದ ಲಿಂಗವನ್ನು ಅಳವಡಿಸಿಕೊಂಡು, ಅಂದರೆ ಲಿಂಗಪ್ರಾಣಗಳನ್ನು ಸಮರಸ ಮಾಡಿಕೊಂಡು ಮನಸ್ಸನ್ನು ಸ್ಥಿರಗೊಳಿಸಿ,

ಸಾಭ್ಯಂತರಾ ಭಕ್ತಿರಿತಿ

ಪ್ರೋಚ್ಯತೇ ಶಿವಯೋಗಿಭಿಃ |

ಸಾ ಯಸ್ಮಿನ್ ವರ್ತತೇ ತಸ್ಯ

ಜೀವನಂ ಭ್ರಷ್ಟಬೀಜವತ್ || 9-9

ಬೇರಾವ ಚಿಂತನೆಗಳನ್ನೂ ಮಾಡದೆ ಮಾಡುವ ಲಿಂಗ (ಇಷ್ಟಲಿಂಗ) ಪೂಜೆ ಇದು ಆಭ್ಯಂತರ (ಅಂತರಂಗದ) ಭಕ್ತಿಯೆಂದು ಶಿವಯೋಗಿಗಳು ಹೇಳುತ್ತಾರೆ. ಈ ಭಕ್ತಿಯು ಯಾರಲ್ಲಿ ಇರುತ್ತದೆಯೋ ಅವನ ಜೀವನವು ಹುರಿದ ಬೀಜದಂತಾಗುತ್ತದೆ (ಅಂದರೆ ಅವನಿಗೆ ಪುನರ್ಜನ್ಮವಿಲ್ಲ).

ಬಹುನಾತ್ರ ಕಿಮುಕ್ತೇನ

ಗುಹ್ಯಾದ್ ಗುಹ್ಯತರಾ ಪರಾ |

ಶಿವಭಕ್ತಿರ್ ನ ಸಂದೇಹಃ

ತಯಾ ಯುಕ್ತೋ ವಿಮುಚ್ಯತೇ || 9-10

(ಈ ಅಂತರಂಗ ಭಕ್ತಿಯ ಬಗೆಗೆ) ಹೆಚ್ಚಿನ ಮಾತುಗಳಿಂದ ಏನೂ ಪ್ರಯೋಜನವಿಲ್ಲ. ಈ ಭಕ್ತಿಯು ಸರ್ವೊತ್ಕೃಷ್ಟವೂ, ಗುಹ್ಯಕ್ಕಿಂತಲೂ ಗುಹ್ಯ ವಾದುದಾಗಿದೆ (ಅತ್ಯಂತ ಗೌಪ್ಯವಾದುದಾಗಿದೆ). ಈ ಶಿವಭಕ್ತಿಸಂಪನ್ನನು ಮುಕ್ತಿಯನ್ನು ಪಡೆಯುತ್ತಾನೆ. ಇದರಲ್ಲಿ ಯಾವ ಸಂಶಯವೂ ಇಲ್ಲ

ಪ್ರಸಾದಾದೇವ ಸಾ ಭಕ್ತಿಃ

ಪ್ರಸಾದೋ ಭಕ್ತಿಸಂಭವಃ |

ಯಥೈವಾಂಕುರತೋ ಬೀಜಮ್

ಬೀಜತೋ ವಾ ಯಥಾಂಕುರಃ || 9-11

ಬೀಜದಿಂದ ಅಂಕುರ ಮತ್ತು ಅಂಕುರದಿಂದ ಬೀಜ ಹೇಗೆ ಉತ್ಪನ್ನವಾಗುವುದೋ ಹಾಗೆ ಶಿವನ ಪ್ರಸಾದದಿಂದ (ಅನುಗ್ರಹದಿಂದ) ಭಕ್ತಿಯು ಮತ್ತು ಭಕ್ತಿಯಿಂದ ಶಿವನ ಪ್ರಸಾದವು ಉಂಟಾಗುತ್ತದೆ..

ಪ್ರಸಾದಪೂರ್ವಿಕಾ ಯೇಯಮ್

ಭಕ್ತಿರ್ಮುಕ್ತಿ ವಿಧಾಯಿನೀ |

ನೈವ ಸಾ ಶಕ್ಯತೇ ಪ್ರಾಪ್ತುಮ್

ನರೈರೇಕೇನ ಜನ್ಮನಾ || 9-12

ಪ್ರಸಾದ ಪೂರ್ವಕವಾದ (ಶಿವಾನುಗ್ರಹದಿಂದ ಲಭಿಸಿರುವ) ಯಾವ ಭಕ್ತಿ ಇರುವುದೋ ಅದು ಮುಕ್ತಿದಾಯಕವಾಗಿರುತ್ತದೆ. ಅಂತಹ ಆ ಭಕ್ತಿಯು ಮನುಷ್ಯರಿಗೆ ಒಂದೇ ಜನ್ಮದಲ್ಲಿ ಪಡೆಯಲು ಸಾಧ್ಯವಾಗುವುದಿಲ್ಲ

ಅನೇಕಜನ್ಮಶುದ್ಧಾನಾಮ್

ಶ್ರೌತಸ್ಮಾರ್ತಾನುವರ್ತಿನಾಮ್ |

ವಿರಕ್ತಾನಾಂ ಪ್ರಬುದ್ಧಾನಾಮ್

ಪ್ರಸೀದತಿ ಮಹೇಶ್ವರಃ || 9-13

ಅನೇಕ ಜನ್ಮಜನ್ಮಾಂತರಗಳಲ್ಲಿ (ಶಿವಪೂಜಾದಿಗಳಿಂದ) ಪರಿಶುದ್ಧ ರಾದವರಿಗೆ ಶ್ರುತಿ ಮತ್ತು ಸ್ಮೃತಿಗಳಲ್ಲಿ ಹೇಳಲ್ಪಟ್ಟ (ನಿತ್ಯ, ನೈಮಿತ್ತಿಕ) ಕರ್ಮಗಳನ್ನು ಅಚರಿಸಿದವರಿಗೆ, ವಿರಕ್ತರಾದವರಿಗೆ, ಶಿವಜ್ಞಾನ ಸಂಪನ್ನರಾದ ಪ್ರಬುದ್ಧರಿಗೆ ಮಹೇಶ್ವರನು ಪ್ರಸನ್ನನಾಗುತ್ತಾನೆ.

ಪ್ರಸನ್ನೇ ಸತಿ ಮುಕ್ತೋಭೂತ್

ಮುಕ್ತಃ ಶಿವಸಮೋ ಭವೇತ್ |

ಅಲ್ಪಭಕ್ತ್ಯಾಪಿ ಯೋ ಮತ್ರ್ಯಃ

ತಸ್ಯ ಜನ್ಮತ್ರಯಾತ್ಪರಮ್ || 9-14

ಶಿವನು ಪ್ರಸನ್ನನಾಗಲು ಸಾಧಕನು ಮುಕ್ತನಾಗುತ್ತಾನೆ. ಮುಕ್ತನಾದವನು ಶಿವನಿಗೆ ಸಮಾನನಾಗುತ್ತಾನೆ (ಶಿವ ಸ್ವರೂಪನಾಗುತ್ತಾನೆ). ಯಾವನು ಅಲ್ಪಭಕ್ತಿಯುಳ್ಳವನಾಗಿರುವನೋ ಅವನಿಗೆ ಮೂರು ಜನ್ಮಗಳ ನಂತರ ಮುಕ್ತಿ ಲಭಿಸುತ್ತದೆ.

ನ ಯೋನಿಯಂತ್ರಪೀಡಾ ವೈ

ಭವೇನ್ನೈವಾತ್ರ ಸಂಶಯಃ |

ಸಾಂಗಾ ನ್ಯೂ ನಾ ಚ ಯಾ ಸೇವಾ

ಸಾ ಭಕ್ತಿರಿತಿ ಕಥ್ಯತೇ || 9-15

ಹೀಗೆ ನವವಿಧ ಅಂಗಗಳಿಂದ (ಭಕ್ತಿಗಳಿಂದ) ಪರಿಪುಷ್ಟವಾದದ್ದೇ ಸಾಂಗಾ (ಪೂರ್ಣ)ಭಕ್ತಿಯು. ಇನ್ನು ಇವುಗಳಲ್ಲಿ ಯಾವುದಾದರೊಂದು ಭಕ್ತಿಯು ಕೊರತೆ ಯಾದಲ್ಲಿ ಅದು ನ್ಯೂನಾಭಕ್ತಿಯೆಂದು ಕರೆಯಲ್ಪಡುತ್ತದೆ. ಈ ಭಕ್ತಿಯುಳ್ಳವನಿಗೆ ಯೋನಿಯಂತ್ರದ ಪೀಡೆಯು (ಪುನರ್ಜನ್ಮವು) ಆಗುವುದಿಲ್ಲ. ಇದರಲ್ಲಿ ಯಾವ ಸಂಶಯವೂ ಇಲ್ಲ.

ಸಾ ಪುನರ್ಭಿದ್ಯತೇ ತ್ರೇಧಾ|

ಮನೋ ವಾಕ್ಕಾಯಸಾಧನೈಃ |

ಶಿವರೂಪಾದಿ ಚಿಂತಾ ಯಾ|

ಸಾ ಸೇವಾ ಮಾನಸೀ ಸ್ಮೃತಾ |

ಜಪಾದಿ ವಾಚಿಕೀ ಸೇವಾ

ಕರ್ಮಪೂಜಾ ಚ ಕಾಯಿಕೀ || 9-16

ಆ ಭಕ್ತಿಯು ಮತ್ತೆ ಮಾನಸಿಕ ಭಕ್ತಿ, ವಾಚಿಕ ಭಕ್ತಿ ಮತ್ತು ಕಾಯಿಕೀಭಕ್ತಿಯೆಂಬುದಾಗಿ ಮೂರು ಪ್ರಕಾರವಾಗಿರುವುದು. ಮನಸ್ಸಿನಲ್ಲಿ ಶಿವನ ಸ್ವರೂಪಾದಿಗಳನ್ನು ಧ್ಯಾನಿಸುವ ಮಾನಸಿಕ ಸೇವೆಯೇ ಮಾನಸಿಕ ಭಕ್ತಿಯೆಂದು ಕರೆಯಲ್ಪಡುತ್ತದೆ. ವಾಣಿಯಿಂದ ಶಿವಪಂಚಾಕ್ಷರ ಮಂತ್ರದ ಜಪ ಮತ್ತು ಶಿವಸ್ತೋತ್ರಾದಿಗಳ ಪಠಣವನ್ನು ಮಾಡುವುದೇ ವಾಚಿಕ ಭಕ್ತಿಯು. ಇನ್ನು ಶರೀರದಿಂದ ಮಾಡಲ್ಪಟ್ಟ ಕರ್ಮ ಪ್ರಧಾನವಾದ(ಇಷ್ಟಲಿಂಗ) ಪೂಜೆಯೇ ಕಾಯಿಕೀ ಭಕ್ತಿಯೆಂದು ಹೇಳಲ್ಪಡುತ್ತದೆ.

ಬಾಹ್ಯಮಾಭ್ಯಂತರಂ ಚೈವ

ಬಾಹ್ಯಾಭ್ಯಂತರಮೇವ ವಾ |

ಮನೋವಾಕ್ಕಾಯಭೇದೈಶ್ಚ

ತ್ರಿಧಾ ತದ್ಭಜನಂ ವಿದುಃ || 9-17

ಈ ಪೂರ್ವದಲ್ಲಿ ಹೇಳಿದ (ಕಾಯಿಕೀ, ವಾಚಿಕ, ಮಾನಸಿಕ) ಭಕ್ತಿಗಳು ಬಾಹ್ಯವೆಂತಲೂ, ಆಭ್ಯಂತರ (ಅಂತರಂಗ)ವೆಂತಲೂ ಮತ್ತು ಬಾಹ್ಯಾಭ್ಯಂತರ ವೆಂತಲೂ, ಪ್ರತಿಯೊಂದೂ ಮೂರು ಮೂರು ಪ್ರಕಾರವಾಗಿರುತ್ತದೆ.

ಮನೋ ಮಹೇಶಧ್ಯಾನಾಢ್ಯಮ್

ನಾನ್ಯಧ್ಯಾನರತಂ ಮನಃ |

ಶಿವನಾಮರತಾ ವಾಣೀ

ವಾಙ್ಮತಾ ಚೈವ ನೇತರಾ || 9-18

ಮಹೇಶನ (ಶಿವನ) ಧ್ಯಾನದಲ್ಲಿ ಆಸಕ್ತವಾದ ಮನಸ್ಸೇ ನಿಜವಾದ ಮನಸ್ಸು. ಅನ್ಯ ಧ್ಯಾನಾಸಕ್ತವಾದ ಮನಸ್ಸು ಮನಸ್ಸಲ್ಲ. ಶಿವನಾಮದಲ್ಲಿ ನಿರತವಾದ (ಜಪಾಸಕ್ತವಾದ) ವಾಣಿಯೇ ನಿಜವಾದ ವಾಣಿಯು, ಅನ್ಯರ ಸ್ತುತಿಯಲ್ಲಿ ನಿರತವಾದ ವಾಣಿಯು ವಾಣಿಯಲ್ಲ.

ಲಿಂಗೈಃ ಶಿವಸ್ಯ ಚೋದ್ದಿಷ್ಟೈಃ

ತ್ರಿಪುಂಡ್ರಾದಿಭಿರಂಕಿತಃ|

ಶಿವೋಪಚಾರ ನಿರತಃ |

ಕಾಯಃ ಕಾಯೋ ನ ಚೇತರಃ |9-19

ಇದೇ ಪ್ರಕಾರ ಶಿವಲಾಂಛನಗಳಾದ ಶಿವಲಿಂಗ, ರುದ್ರಾಕ್ಷಿ, ತ್ರಿಪುಂಡ್ರಾದಿಗಳನ್ನು ಧರಿಸಿ ಶಿವನ ಉಪಚಾರದಲ್ಲಿ (ಶಿವಪೂಜೆಯಲ್ಲಿ) ನಿರತವಾದ ಕಾಯವೇ ನಿಜವಾದ ಕಾಯವು. ಇದಕ್ಕೆ ವಿಪರೀತವಾದದ್ದು ಕಾಯವೇ ಅಲ್ಲ.

ಅನ್ಯಾತ್ಮವಿದಿತಂ ಬಾಹ್ಯಮ್

ಶಂಭೋರಭ್ಯರ್ಚನಾದಿಕಮ್ |

ತದೇವ ತು ಸ್ವಸಂವೇದ್ಯಮ್

ಆಭ್ಯಂತರಮುದಾಹೃತಮ್ |

ಮನೋ ಮಹೇಶಪ್ರವಣಮ್

ಬಾಹ್ಯಾಭ್ಯಂತರಮುಚ್ಯತೇ || 9-20

ಅನ್ಯರಿಗೆ ಗೋಚರವಾಗುವ ಶಂಭುವಿನ ಅರ್ಚನಾದಿಗಳು ಬಾಹ್ಯಭಕ್ತಿಯಾಗಿದೆ. ಅದುವೆ ಕೇವಲ ಸ್ವಸಂವೇದ್ಯವಾದರೆ (ತನಗೆ ಮಾತ್ರ ತಿಳಿದರೆ) ಅದು ಆಭ್ಯಂತರ ಭಕ್ತಿಯೆಂದು ಹೇಳಲ್ಪಡುತ್ತದೆ. ಮಹೇಶನ ಧ್ಯಾನ ಹಾಗೂ ಅರ್ಚನಾಸಕ್ತವಾದ ಮನವು ಬಾಹ್ಯಾಭ್ಯಂತರವೆಂದು ಹೇಳಲ್ಪಡುತ್ತದೆ.

ಪಂಚಧಾ ಕಥ್ಯತೇ ಸದ್ಭಿಃ

ತದೇವ ಭಜನಂ ಪುನಃ |

ತಪಃ ಕರ್ಮ ಜಪೋ ಧ್ಯಾನಮ್

ಜ್ಞಾನಂ ಚೇತ್ಯನುಪೂರ್ವಕಮ್ || 9-21

ತಪಸ್ಸು, ಕರ್ಮ, ಜಪ, ಧ್ಯಾನ ಮತ್ತು ಜ್ಞಾನ ಎಂಬುದಾಗಿ ಆ (ಮೇಲೆ ಹೇಳಿದ) ಭಕ್ತಿಯು ಮತ್ತೆ ಐದು ಪ್ರಕಾರವಾಗಿ (ಪಂಚಧಾ) ಹೇಳಲ್ಪಡುತ್ತದೆ.

ಶಿವಾರ್ಥೆ ದೇಹಸಂಶೋಷಃ

ತಪಃಕೃಚ್ಛ್ರಾದಿ ನೋ ಮತಮ್ |

ಶಿವಾರ್ಚಾ ಕರ್ಮ ವಿಜ್ಞೇಯಮ್

ಬಾಹ್ಯಂ ಯಾಗಾದಿ ನೋಚ್ಯತೇ || 9-22

ಶಿವಪೂಜೆಗಾಗಿ ದೇಹವನ್ನು ಶೋಷಣೆಗೊಳಿಸುವುದು (ದೇಹ ದಂಡಿಸುವುದು) ತಪಸ್ಸು. ಆದರೆ ಕೃಚ್ಛ್ರಚಾಂದ್ರಾಯಣಾದಿ ವ್ರತಗಳು ತಪಸ್ಸಲ್ಲ. ಇಷ್ಟಲಿಂಗಾರ್ಚನೆಯೇ ನಿತ್ಯಕರ್ಮವೆಂದು ತಿಳಿದುಕೊಳ್ಳಬೇಕು. ಬಾಹ್ಯಗಳಾದ ಯಾಗಾದಿ ನಿತ್ಯಕರ್ಮಗಳಲ್ಲ.

ಜಪಃ ಪಂಚಾಕ್ಷರಾಭ್ಯಾಸಃ

ಪ್ರಣವಾಭ್ಯಾಸ ಏವ ವಾ |

ರುದ್ರಾಧ್ಯಾಯಾದಿಕಾಭ್ಯಾಸೋ

ನ ವೇದಾಧ್ಯಯನಾದಿಕಮ್ || 9-23

ಪಂಚಾಕ್ಷರ ಮಂತ್ರದ ಅಭ್ಯಾಸವೂ (ಪುನಃ ಪುನಃ ಆವೃತ್ತಿಯು) ಪ್ರಣವದ (ಓಂಕಾರದ) ಅಥವಾ ರುದ್ರಾಧ್ಯಾಯಾದಿಗಳ ಅಭ್ಯಾಸವು ಜಪವೆಂದು ಕರೆಯಲ್ಪಡುತ್ತದೆ. ವೇದಾಧ್ಯಯನಾದಿಗಳು ಜಪವಲ್ಲ.

ಧ್ಯಾನಂ ಶಿವಸ್ಯ ರೂಪಾದಿ-

ಚಿಂತಾ ನಾತ್ಮಾದಿಚಿಂತನಮ್ |

ಶಿವಾಗಮಾರ್ಥವಿಜ್ಞಾನಮ್

ಜ್ಞಾನಂ ನಾನ್ಯಾರ್ಥವೇದನಮ್ |

ಇತಿ ಪಂಚಪ್ರಕಾರೋಯಮ್

ಶಿವಯಜ್ಞಃ ಪ್ರಕೀರ್ತಿತಃ || 9-24

ಶಿವನ ರೂಪಾದಿಗಳ ಚಿಂತನೆಯೇ ಧ್ಯಾನವು. ಆತ್ಮಾದಿಗಳ ಚಿಂತನವು ಧ್ಯಾನವಲ್ಲ. ಶಿವಾಗಮಗಳ ಅರ್ಥವನ್ನು ತಿಳಿದುಕೊಳ್ಳುವುದೇ ಜ್ಞಾನವು. ಬೇರೆ ಶಾಸ್ತ್ರಗಳನ್ನು ತಿಳಿದುಕೊಳ್ಳುವುದು ಜ್ಞಾನವಲ್ಲ. ಹೀಗೆ ಈ ಶಿವಯಜ್ಞವು ಐದು ಪ್ರಕಾರವಾಗಿ (ತಪ, ಕರ್ಮ, ಜಪ, ಧ್ಯಾನ ಮತ್ತು ಜ್ಞಾನ) ಕೀರ್ತಿಸಲ್ಪಟ್ಟಿದೆ.

ಅನೇನ ಪಂಚಯಜ್ಞೇನ

ಯಃ ಪೂಜಯತಿ ಶಂಕರಮ್ |

ಭಕ್ತ್ಯಾ ಪರಮಯಾ ಯುಕ್ತಃ

ಸ ವೈ ಭಕ್ತ ಇತೀರಿತಃ || 9-25

ಈ ಮೇಲೆ ಹೇಳಿದ ಪಂಚಯಜ್ಞದಿಂದ ಯಾವನು ಶಂಕರ(ಶಿವ)ನನ್ನು ಪೂಜಿಸುತ್ತಾನೆಯೋ ಅವನು ಪರಮಶ್ರೇಷ್ಠವಾದ ಭಕ್ತಿಯಿಂದ ಕೂಡಿದವನಾಗಿ ಭಕ್ತನೆನಿಸಿಕೊಳ್ಳುತ್ತಾನೆ.

ಪೂಜನಾಚ್ಛಿವಭಕ್ತಸ್ಯ

ಪುಣ್ಯಾ ಗತಿರವಾಪ್ಯತೇ |

ಅವಮಾನಾನ್ಮಹಾಘೋರೋ

ನರಕೋ ನಾತ್ರ ಸಂಶಯಃ || 9-26

ಶಿವಭಕ್ತನನ್ನು ಪೂಜಿಸುವುದರಿಂದ ಸದ್ಗತಿಯು ಪ್ರಾಪ್ತವಾಗುತ್ತದೆ. ಆದರೆ ಅವನಿಗೆ ಅವಮಾನವನ್ನು ಮಾಡಿದರೆ ಮಹಾಘೋರ (ಮಹಾಭಯಂಕರ)ವಾದ ನರಕವು ಪ್ರಾಪ್ತವಾಗುವುದು. ಇದರಲ್ಲಿ ಯಾವ ಸಂಶಯವೂ ಇಲ್ಲ.

ಶಿವಭಕ್ತೋ ಮಹಾತೇಜಾಃ

ಶಿವಭಕ್ತಿಪರಾಙ್ಮುಖಾನ್ |

ನ ಸ್ಪೃಶೇನ್ನೈವ ವೀಕ್ಷೇತ

ನ ತೈಃ ಸಹ ವಸೇತ್ ಕ್ವಚಿತ್ || 9-27

ಮಹಾತೇಜಸ್ವಿಯಾದ ಶಿವಭಕ್ತನು ಶಿವಭಕ್ತಿ ಪರಾಙ್ಮುಖರನ್ನು (ಶಿವಭಕ್ತಿ ವಿಹೀನರನ್ನು) ಮುಟ್ಟಕೂಡದು, ನೋಡಕೂಡದು ಮತ್ತು ಎಲ್ಲಿಯೂ ಅವರೊಂದಿಗೆ ಸಹವಾಸವನ್ನು ಮಾಡಕೂಡದು (ಇಲ್ಲಿ ಪಂಚಾಚಾರಗಳಲ್ಲಿಯ ಲಿಂಗಾಚಾರ, ಸದಾಚಾರ, ಶಿವಾಚಾರ, ಭೃತ್ಯಾಚಾರ, ಗಣಾಚಾರಗಳ ವಿಚಾರವನ್ನು ಹೇಳಲಾಗಿದೆ. ಚಂದ್ರಜ್ಞಾನಾಗಮ ಮತ್ತು ಪರಮರಹಸ್ಯದಿಂದ ವಿಚಾರಪ್ರತಿಪಾದನೆ ನಡೆದಿದೆ).

ಯದಾ ದೀಕ್ಷಾಪ್ರವೇಶಃ ಸ್ಯಾತ್

ಲಿಂಗಧಾರಣಪೂರ್ವಕಃ |

ತದಾಪ್ರಭೃತಿ ಭಕ್ತೋಸೌ

ಪೂಜಯೇತ್ ಸ್ವ್ವಾಗಮಸ್ಥಿತಾನ್ || 9-28

ಶಿವಭಕ್ತನು (ಗುರುವಿನಿಂದ) ದೀಕ್ಷಾಸಂಸ್ಕಾರವನ್ನು ಹೊಂದಿ ಯಾವಾಗ ಲಿಂಗಧಾರಣೆಯನ್ನು ಮಾಡಿಕೊಳ್ಳುವನೋ ಅಂದಿನಿಂದ ಅವನು ಶಿವಾಗಮಗಳಲ್ಲಿ ಹೇಳಿದ ಆಚಾರಗಳನ್ನು ಪರಿಪಾಲಿಸುವವರನ್ನು (ಶಿವಾಚಾರ್ಯರನ್ನು, ಶಿವಶರಣರನ್ನು, ಶಿವಭಕ್ತರನ್ನು) ಪೂಜಿಸಬೇಕು.

ಸ್ವಮಾರ್ಗಾಚಾರನಿರತಾಃ

ಸಜಾತೀಯಾ ದ್ವಿಜಾಸ್ತು ಯೇ |

ತೇಷಾಂ ಗೃಹೇಷು ಭುಂಜೀತ

ನೇತರೇಷಾಂ ಕದಾಚನ || 9-29

ತನ್ನ ಆಚಾರ ವಿಚಾರಗಳಿಗೆ ಹೊಂದಿಕೆಯಾಗುವ (ಶಿವಾಚಾರ ಸಂಪನ್ನರಾದ) ದೀಕ್ಷಾ ಸಂಸ್ಕಾರವನ್ನು ಹೊಂದಿದ ತನ್ನ ಕುಲಬಾಂಧವರ ಮನೆಯಲ್ಲಿ ಭುಂಜಿಸಬೇಕೇ ವಿನಃ (ಊಟ ಮಾಡಬೇಕೇ ವಿನಃ) ಅನ್ಯರ ಮನೆಯಲ್ಲಿ ಎಂದೂ ಮಾಡಬಾರದು.

ಸ್ವಮಾರ್ಗಾಚಾರವಿಮುಖೈಃ

ಭವಿಭಿಃ ಪ್ರಾಕೃತಾತ್ಮಭಿಃ |

ಪ್ರೇಷಿತಂ ಸಕಲಂ ದ್ರವ್ಯಮ್

ಆತ್ಮಲೀನಮಪಿ ತ್ಯಜೇತ್ || 9-30

ಶಿವಭಕ್ತನು ಸ್ವಮಾರ್ಗಾಚಾರಕ್ಕೆ (ತನ್ನ ವೀರಶೈವಾಚಾರಕ್ಕೆ) ವಿಮುಖರಾದ ಭವಿಗಳಿಂದ (ಅಲಿಂಗಿಗಳಿಂದ) ಕಳುಹಿಸಲ್ಪಟ್ಟ ದ್ರವ್ಯವು ತನ್ನ ಸ್ವಾಧೀನವಾಗಿದ್ದರೂ ಅದೆಲ್ಲವನ್ನೂ ತ್ಯಾಗ ಮಾಡಬೇಕು.

ನಾರ್ಚಯೇದನ್ಯದೇವಾಂಸ್ತು

ನ ಸ್ಮರೇನ್ನ ಚ ಕೀರ್ತಯೇತ್ |

ನ ತನ್ನಿವೇದ್ಯಮಶ್ನೀಯಾತ್

ಶಿವಭಕ್ತೋ ದೃಢವ್ರತಃ || 9-31

ದೃಢವ್ರತನಾದ (ಶಿವೈಕ್ಯವ್ರತ ಸಂಪನ್ನನಾದ) ಶಿವಭಕ್ತನು ಶಿವನ ಹೊರತಾಗಿ ಅನ್ಯದೇವತೆಗಳನ್ನು ಅರ್ಚಿಸಕೂಡದು. ಅವರನ್ನು ಸ್ಮರಿಸಲೂ ಕೂಡದು ಮತ್ತು ಅನ್ಯದೇವರ ಗುಣಗಾನವನ್ನೂ ಸಹ ಮಾಡಕೂಡದು ಮತ್ತು ಅನ್ಯದೇವರಿಗೆ ಅರ್ಪಿಸಿದ ನೈವೇದ್ಯವನ್ನೂ ಸಹ ತಾನು ಸ್ವೀಕರಿಸ ಬಾರದು.

ಯದ್ಗೃಹೇಷ್ವನ್ಯದೇವೋಸ್ತಿ

ತದ್ಗೃಹಾಣಿ ಪರಿತ್ಯಜೇತ್ |

ನಾನ್ಯದೇವಾರ್ಚಕಾನ್ ಮರ್ತ್ಯಾನ್

ಪೂಜಾಕಾಲೇ ನಿರೀಕ್ಷಯೇತ್ || 9-32

ಯಾವ ಮನೆಗಳಲ್ಲಿ ಶಿವನ ಹೊರತಾದ ಅನ್ಯದೇವತೆಗಳಿರುವವೋ ಆ ಮನೆಗಳನ್ನು ತ್ಯಾಗ ಮಾಡಬೇಕು (ಶಿವಭಕ್ತನು ಆ ಮನೆಗಳಲ್ಲಿ ಪ್ರವೇಶ ಮಾಡಕೂಡದು). ಅದರಂತೆ ಶಿವನ ಹೊರತಾಗಿ ಅನ್ಯದೇವರನ್ನು ಅರ್ಚಿಸುವ ಮನುಷ್ಯರನ್ನು ಇಷ್ಟಲಿಂಗ ಪೂಜಾಕಾಲದಲ್ಲಿ ನೋಡಕೂಡದು.

ಸದಾ ಶಿವೈಕನಿಷ್ಠಾನಾಮ್

ವೀರಶೈವಾಧ್ವವರ್ತಿನಾಮ್ |

ನಹಿ ಸ್ಥಾವರಲಿಂಗಾನಾಮ್

ನಿರ್ಮಾಲ್ಯಾದ್ಯುಪಯುಜ್ಯತೇ || 9-33

ಯಾವಾಗಲೂ ಶಿವನಲ್ಲಿ ಏಕನಿಷ್ಠೆಯನ್ನು ಹೊಂದಿರುವ ವೀರಶೈವ ಧರ್ಮಾನುಯಾಯಿಗಳು ಸ್ಥಾವರಲಿಂಗಗಳ ನಿರ್ಮಾಲ್ಯಾದಿಗಳನ್ನು (ಪತ್ರೆ, ಪುಷ್ಪ, ಪ್ರಸಾದಗಳನ್ನು) ಉಪಯೋಗಿಸಕೂಡದು.

ಯತ್ರ ಸ್ಥಾವರಲಿಂಗಾನಾಮ್

ಅಪಾಯಃ ಪರಿವರ್ತತೇ |

ಅಥವಾ ಶಿವಭಕ್ತಾನಾಮ್

ಶಿವಲಾಂಛನ ಧಾರಿಣಾಮ್ || 9-34

ಮಂದಿರಗಳಲ್ಲಿಯ ಸ್ಥಾವರಲಿಂಗಗಳಿಗೆ ಅಥವಾ ಶೈವ ಲಾಂಛನಗಳನ್ನು (ಇಷ್ಟಲಿಂಗ, ಭಸ್ಮ, ರುದ್ರಾಕ್ಷ) ಧರಿಸಿದ ಶಿವಭಕ್ತರಿಗೆ-

ತತ್ರ ಪ್ರಾಣಾನ್ ವಿಹಾಯಾಪಿ

ಪರಿಹಾರಂ ಸಮಾಚರೇತ್ |

ಶಿವಾರ್ಥಂ ಮುಕ್ತಜೀವಶ್ಚೇತ್

ಶಿವಸಾಯುಜ್ಯಮಾಪ್ಪ್ನುಯಾತ್ || 9-35

ಎಲ್ಲಿ ಅಪಾಯವು ಸಂಭವಿಸುವುದೋ ಅಲ್ಲಿ ತನ್ನ ಪ್ರಾಣಗಳನ್ನು ತ್ಯಜಿಸಿಯಾದರೂ ಆ ಅಪಾಯವನ್ನು ಪರಿಹರಿಸಬೇಕು. ಶಿವನಿಗಾಗಿ ತನ್ನ ಜೀವವನ್ನು (ಪ್ರಾಣವನ್ನು) ಕಳೆದುಕೊಂಡದ್ದೇ ಆದರೆ ಅವನು ಶಿವಸಾಯುಜ್ಯವನ್ನು ಪಡೆಯುವನು.

ಶಿವನಿಂದಾಕರಂ ದೃಷ್ಟ್ವಾ

ಘಾತಯೇದಥವಾ ಶಪೇತ್ |

ಸ್ಥಾನಂ ವಾ ತತ್ಪರಿತ್ಯಜ್ಯ

ಗಚ್ಛೇದ್ ಯದ್ಯಕ್ಷಮೋ ಭವೇತ್ || 9-36

ಶಿವಭಕ್ತನಾದವನು, ಶಿವನಿಂದಕರನ್ನು ಕಂಡಾಗ ಅವನನ್ನು ಸಂಹರಿಸಬೇಕು ಅಥವಾ ಕಠೋರ ಶಬ್ದಗಳಿಂದ ಶಪಿಸಬೇಕು. ಒಂದು ವೇಳೆ ಇವೆರಡನ್ನೂ ಮಾಡಲು ಅಸಮರ್ಥನಾಗಿದ್ದರೆ ಆ ಸ್ಥಾನವನ್ನು ತ್ಯಜಿಸಿ ಹೋಗಬೇಕು.

ಯತ್ರ ಚಾಚಾರನಿಂದಾಸ್ತಿ

ಕದಾಚಿತ್ತತ್ರ ನ ವ್ರಜೇತ್ |

ಯದ್ಗೃಹೇ ಶಿವನಿಂದಾಸ್ತಿ

ತದ್ಗೃಹಾಣಿ ಪರಿತ್ಯಜೇತ್ || 9-37

ಯಾವ ಸ್ಥಾನದಲ್ಲಿ ಆಚಾರಾದಿಗಳ (ಶಿವಾಚಾರಾದಿಗಳ) ನಿಂದೆಯು ಆಗುತ್ತದೆಯೋ ಅಲ್ಲಿ ಎಂದೂ ಹೋಗಬಾರದು ಮತ್ತು ಯಾರ ಮನೆಯಲ್ಲಿ ಶಿವನಿಂದೆಯು ನಡೆಯುತ್ತದೆಯೋ ಆ ಮನೆಗಳನ್ನು (ಶಿವಭಕ್ತನು) ತ್ಯಜಿಸಬೇಕು.

ಯಃ ಸರ್ವಭೂತಾಧಿಪತಿಮ್

ವಿಶ್ವೇಶಾನಂ ವಿನಿಂದತಿ |

ನ ತಸ್ಯ ನಿಷ್ಕೃತಿಃ ಶಕ್ಯಾ

ಕರ್ತುಂ ವರ್ಷಶತೈರಪಿ || 9-38

ಸರ್ವಭೂತಗಳಿಗೆ (ಪ್ರಾಣಿಗಳಿಗೆ) ಅಧಿಪತಿಯಾದ ವಿಶ್ವೇಶ(ಶಿವ)ನನ್ನು ವಿಶೇಷವಾಗಿ ಯಾರು ನಿಂದಿಸುತ್ತಾರೆಯೋ ಅವರು ಆ ನಿಂದೆ ಯಿಂದುಂಟಾದ ದೋಷವನ್ನು ಕಳೆದುಕೊಳ್ಳಲು ಒಂದು ನೂರು ವರ್ಷ ನಿಷ್ಕೃತಿ (ಪ್ರಾಯಶ್ಚಿತ್ತವನ್ನು) ಯನ್ನು ಮಾಡಿಕೊಂಡರೂ ಸಾಧ್ಯವಿಲ್ಲ.

ಶಿವಪೂಜಾಪರೋ ಭೂತ್ವಾ

ಪೂರ್ವಕರ್ಮ ವಿಸರ್ಜಯೇತ್ |

ಅಥವಾ ಪೂರ್ವಕರ್ಮ ಸ್ಯಾತ್

ಸಾ ಪೂಜಾ ನಿಷ್ಫಲಾ ಭವೇತ್ || 9-39

ಶಿವಪೂಜೆ (ಇಷ್ಟಲಿಂಗ ಪೂಜೆ)ಯಲ್ಲಿ ತತ್ಪರನಾದವನು ತನ್ನ ಪೂರ್ವಕರ್ಮಗಳನ್ನು ವಿಸರ್ಜಿಸಬೇಕು. ಒಂದು ವೇಳೆ ಪೂರ್ವಕರ್ಮಗಳನ್ನೇ ಮಾಡುತ್ತಿದ್ದರೆ ಆ ಶಿವಪೂಜೆಯು ನಿಷ್ಫಲವಾಗುವುದು.

ಉತ್ತಮಾಂ ಗತಿಮಾಶ್ರಿತ್ಯ

ನೀಚಾಂ ವೃತ್ತಿಂ ಸಮಾಶ್ರಿತಃ |

ಆರೂಢಪತಿತೋ ಜ್ಞೇಯಃ

ಸರ್ವಕರ್ಮಬಹಿಷ್ಕೃತಃ || 9-40

(ಶಿವಪೂಜಾರೂಪವಾದ) ಉನ್ನತವಾದ ಮಾರ್ಗವನ್ನು ಆಶ್ರಯಿಸಿದ ಮೇಲೆ ಕೆಳಮಟ್ಟದ ಕರ್ಮಗಳನ್ನು ಆಚರಿಸತೊಡಗಿದರೆ ಅವನು ಸರ್ವಕರ್ಮ ಬಹಿಷ್ಕೃತನೂ (ಎಲ್ಲ ಕರ್ಮಗಳನ್ನು ಮಾಡಲು ಅಯೋಗ್ಯನು) ಮತ್ತು ಆರೂಢಪತಿತನೆಂಬುದಾಗಿ ತಿಳಿಯಬೇಕು.

ಪಂಚಾಕ್ಷರೋಪದೇಶೀ ಚ

ನರಸ್ತುತಿಕರೋ ಯದಿ

ಸೋಲಿಂಗೀ ಸ ದುರಾಚಾರೀ

ಕುಕವಿಃ ಸ ತು ವಿಶ್ರುತಃ || 9-41

(ಸದ್ಗುರುವಿನಿಂದ) ಪಂಚಾಕ್ಷರ ಮಹಾಮಂತ್ರದ ಉಪದೇಶವನ್ನು ಪಡೆದವನು ಒಂದು ವೇಳೆ ಸಾಮಾನ್ಯ ಮನುಷ್ಯರ ಸ್ತುತಿಯನ್ನು ಮಾಡಿದರೆ ಅವನು ಅಲಿಂಗಿಯೆಂತಲೂ, ದುರಾಚಾರಿಯೆಂತಲೂ, ಕುಕವಿಯೆಂತಲೂ ಕರೆಯಲ್ಪಡುತ್ತಾನೆ

ಚರ್ಮಪಾತ್ರೇ ಜಲಂ ತೈಲಮ್

ನ ಗ್ರಾಹ್ಯಂ ಭಕ್ತಿತತ್ಪರೈಃ |

ಗೃಹ್ಯತೇ ಯದಿ ಭಕ್ತೇನ

ರೌರವಂ ನರಕಂ ವ್ರಜೇತ್ || 9-42

ಶಿವಭಕ್ತಿಯಲ್ಲಿ ತತ್ಪರರಾದವರು ಚರ್ಮಪಾತ್ರೆಗಳಲ್ಲಿ ನೀರು, ಎಣ್ಣೆ ಮುಂತಾದವುಗಳನ್ನು ತೆಗೆದುಕೊಳ್ಳಬಾರದು. ಒಂದು ವೇಳೆ ಶಿವಭಕ್ತನು ಹಾಗೆ ತೆಗೆದುಕೊಂಡರೆ ರೌರವ ನರಕವನ್ನು ಹೊಂದುವನು.

ನ ತಸ್ಯ ಸೂತಕಂ ಕಿಂಚಿತ್-

ಪ್ರಾಣಲಿಂಗಾಂಗಸಂಗಿನಃ |

ಜನ್ಮನೋತ್ಥಂ ಮೃತೋತ್ಥಂ ಚ

ವಿದ್ಯತೇ ಪರಮಾರ್ಥತಃ || 9-43

ತನ್ನಂಗದಲ್ಲಿನ ಪ್ರಾಣಲಿಂಗವನ್ನು ಸಂಬಂಧಮಾಡಿಕೊಂಡ ಪ್ರಾಣಲಿಂಗಿ ಯಾದ ಶಿವಭಕ್ತನಿಗೆ ಜನನ ಸಂಬಂಧಿಯಾದ ಮತ್ತು ಮರಣಸಂಬಂಧಿಯಾದ ಕಿಂಚಿತ್ (ಸ್ವಲ್ಪ) ಸೂತಕವೂ ಪರಮಾರ್ಥ (ನಿಜ)ವಾಗಿ ಇರುವುದಿಲ್ಲ.

ಲಿಂಗಾರ್ಚನರತಾಯಾಶ್ಚ

ಋತೌ ನಾರ್ಯಾ ನ ಸೂತಕಮ್ |

ತಥಾ ಪ್ರಸೂತಿಕಾಯಾಶ್ಚ

ಸೂತಕಂ ನೈವ ವಿದ್ಯತೇ || 9-44

ಲಿಂಗಾರ್ಚನೆಯಲ್ಲಿ ನಿರತರಾಗಿರುವ ವೀರಶೈವ ಸ್ತ್ರೀಯರಿಗೆ ಋತುಕಾಲದಲ್ಲಿ ಉಂಟಾದ ರಜಸ್ಸೂತಕವಾಗಲಿ ಮತ್ತು ಹೆರಿಗೆಯಿಂದುಂಟಾದ ಪ್ರಸೂತಿಕಾ ಸೂತಕವಾಗಲಿ (ಜನನ ಸೂತಕವಾಗಲಿ) ಇರುವುದಿಲ್ಲ.

ಗೃಹೇ ಯಸ್ಮಿನ್ ಪ್ರಸೂತಾ ಸ್ತ್ರೀ

ಸೂತಕಂ ನಾತ್ರ ವಿದ್ಯತೇ |

ಶಿವಪಾದಾಂಬುಸಂಸ್ಪರ್ಶಾತ್

ಸರ್ವಪಾಪಂ ಪ್ರಣಶ್ಯತಿ || 9-45

ಯಾವ ಮನೆಯಲ್ಲಿ ಹೆಣ್ಣುಮಗಳು ಪ್ರಸೂತಳಾಗಿರುತ್ತಾಳೆಯೋ (ಹೆರಿಗೆಯನ್ನು ಮಾಡಿಸಿಕೊಂಡಿರುವಳೋ) ಅಲ್ಲಿ ಸೂತಕವು ಇರುವುದಿಲ್ಲ. ಶಿವಜ್ಞಾನಿಗಳ (ಸದ್ಗುರುಗಳ) ಪಾದೋದಕದ ಸ್ಪರ್ಶದಿಂದ ಎಲ್ಲ ಪಾಪವು ನಾಶವಾಗುತ್ತದೆ.

ಶಿವಸ್ಥಾನಾನಿ ತೀರ್ಥಾನಿ

ವಿಶಿಷ್ಟಾನಿ ಶಿವಾರ್ಚಕಃ |

ಶಿವಯಾತ್ರೋತ್ಸವಂ ನಿತ್ಯಮ್

ಸೇವೇತ ಪರಯಾ ಮುದಾ || 9-46

ಶಿವಾರ್ಚಕನಾದ (ಇಷ್ಟಲಿಂಗಾರ್ಚಕನಾದ) ಶಿವಭಕ್ತನು ಶಿವಸ್ಥಾನಗಳಾದ (ಶಿವನಿವಾಸ ಕ್ಷೇತ್ರಗಳಾದ ಕಾಶಿ, ಕೇದಾರ ಮುಂತಾದ ಕ್ಷೇತ್ರಗಳ) ವಿಶಿಷ್ಟಗಳಾದ ಗಂಗಾ ಮುಂತಾದ ತೀರ್ಥಗಳಲ್ಲಿನ (ಸ್ನಾನಗಳನ್ನು ಮಾಡಿ) ಅಲ್ಲಿ ನಡೆಯುವ ಯಾತ್ರೋತ್ಸವಗಳಲ್ಲಿ ಪರಮ ಸಂತೋಷದಿಂದ ಸೇವೆಯನ್ನು ಮಾಡಬೇಕು.

ಶಿವಕ್ಷೇತ್ರೋತ್ಸವಮಹಾ-

ಯಾತ್ರಾದರ್ಶನಕಾಂಕ್ಷಿಣಾಮ್ |

ಮಾರ್ಗೆನ್ನಪಾನ ದಾನಂ ಚ

ಕುರ್ಯಾನ್ಮಾಹೇಶ್ವರೋ ಜನಃ || 9-47

ಶಿವಕ್ಷೇತ್ರ ದರ್ಶನಕ್ಕಾಗಿ ಹೊರಟಿರುವ ಮಹಾಯಾತ್ರಿಗಳಿಗೆ ಮಾರ್ಗದಲ್ಲಿ ಮಾಹೇಶ್ವರನು ಅನ್ನ ನೀರುಗಳ ದಾನವನ್ನು ಮಾಡಬೇಕು.

ನಾನ್ನತೋಯಸಮಂ ದಾನಮ್

ನ ಚಾಹಿಂಸಾಪರಂ ತಪಃ |

ತಸ್ಮಾನ್ಮಾಹೇಶ್ವರೋ ನಿತ್ಯಮ್

ಅನ್ನತೋಯಪ್ರದೋ ಭವೇತ್ || 9-48

ಅಹಿಂಸೆಗೆ ಸಮನಾದ ತಪವು ಹೇಗೆ ಬೇರೆ ಇಲ್ಲವೋ ಹಾಗೆ ಅನ್ನ ನೀರುಗಳ ದಾನಕ್ಕೆ ಸಮವಾದ ದಾನವು ಬೇರೊಂದಿರುವುದಿಲ್ಲ. ಆದ್ದರಿಂದ ಮಾಹೇಶ್ವರನು ಪ್ರತಿದಿನವೂ ಅನ್ನ ನೀರುಗಳನ್ನು ದಾನ ಮಾಡಬೇಕು.

ಸ್ವಮಾರ್ಗಾಚಾರವರ್ತಿಭ್ಯಃ

ಸ್ವಜಾತಿಭ್ಯಃ ಸದಾ ವ್ರತೀ |

ದದ್ಯಾತ್ ತೇಭ್ಯಃ ಸಮಾದದ್ಯಾತ್

ಕನ್ಯಾಂ ಕುಲಸಮುದ್ಭವಾಮ್ || 9-49

ಶಿವಾಚಾರವ್ರತಸಂಪನ್ನನಾದ ಶಿವಭಕ್ತನು ತನ್ನ ಮಾರ್ಗಾಚಾರದಲ್ಲಿ ವರ್ತಿಸುತ್ತಿರುವ ಮತ್ತು ಸ್ವಜಾತೀಯರಿಗೆ ತನ್ನ ಕುಲದಲ್ಲಿ ಹುಟ್ಟಿದ ಕನ್ಯೆಯನ್ನು ಕೊಡಬೇಕು ಮತ್ತು ಅವರಿಂದ ಅಂತಹುದೇ ಕನ್ಯೆಯನ್ನು ತಾನೂ ತೆಗೆದುಕೊಳ್ಳಬೇಕು.

ಏವಮಾಚಾರಸಂಯುಕ್ತೋ

ವೀರಶೈವೋ ಮಹಾವ್ರತೀ |

ಪೂಜಯೇತ್ ಪರಯಾ ಭಕ್ತ್ಯಾ

ಗುರುಂಲಿಂಗಂ ಚ ಸಂತತಮ್ || 9-50

ಹೀಗೆ ಆಚಾರಯುಕ್ತನೂ, ಮಹಾವ್ರತಿಯೂ ಆದ ವೀರಶೈವನು ಪರಮ ಭಕ್ತಿಯಿಂದ ಯಾವಾಗಲೂ ಗುರುವನ್ನು ಮತ್ತು ಲಿಂಗವನ್ನು ಪೂಜೆಮಾಡಬೇಕು.

ಇತಿ ಭಕ್ತಮಾರ್ಗಕ್ರಿಯಾಸ್ಥಲಂ

ಅಥ ಉಭಯಸ್ಥಲಮ್

ಗುರೋರಭ್ಯರ್ಚನೇನಾಪಿ

ಸಾಕ್ಷಾದಭ್ಯರ್ಚಿತಃ ಶಿವಃ |

ತಯೋರ್ನಾಸ್ತಿ ಭಿದಾ ಕಿಂಚಿತ್

ಏಕತ್ವಾತ್ ತತ್ತ್ವರೂಪತಃ || 9-51

ಗುರುವನ್ನು ಅರ್ಚಿಸಿದರೆ ಸಾಕ್ಷಾತ್ ಶಿವನೇ ಅರ್ಚಿಸಲ್ಪಡುತ್ತಾನೆ. ಅವರಿಬ್ಬರಲ್ಲಿ ತಾತ್ವಿಕವಾಗಿ ಏಕತ್ವವಿರುವುದರಿಂದ ಅವರಲ್ಲಿ ಭೇದವು ಕಿಂಚಿತ್ತೂ ಇರುವುದಿಲ್ಲ.

ಯಥಾ ದೇವೇ ಜಗನ್ನಾಥೇ

ಸರ್ವಾನುಗ್ರಹಕಾರಕೇ |

ತಥಾ ಗುರುವರೇ ಕುರ್ಯಾತ್

ಉಪಚಾರಾನ್ ದಿನೇ ದಿನೇ || 9-52

ಸರ್ವರ ಮೇಲೆ ಅನುಗ್ರಹವನ್ನು ಮಾಡುತ್ತಿರುವ ಜಗನ್ನಾಥನಾದ ದೇವನಲ್ಲಿ ಪ್ರತಿದಿನವೂ ಶಿವಭಕ್ತನು ಹೇಗೆ ಉಪಚಾರಗಳನ್ನು ಮಾಡುತ್ತಾನೆಯೋ ಅದರಂತೆ ಅವನು ಗುರುವಿಗೂ ಮಾಡಬೇಕು.

ಅಪ್ರತ್ಯಕ್ಷೊ ಮಹಾದೇವಃ

ಸರ್ವೆಷಾಮಾತ್ಮಮಾಯಯಾ |

ಪ್ರತ್ಯಕ್ಷೊ ಗುರು ರೂಪೇಣ

ವರ್ತತೇ ಭಕ್ತಿಸಿದ್ಧಯೇ || 9-53

ತನ್ನ ಮಾಯೆಯ ಕಾರಣದಿಂದ ಸರ್ವರಿಗೂ ಅಪ್ರತ್ಯಕ್ಷನಾದ ಮಹಾದೇವನು (ಪರಮೇಶ್ವರನು) ಭಕ್ತರ ಭಕ್ತಿಸಿದ್ಧಿಗಾಗಿ ಗುರುರೂಪದಿಂದ ಪ್ರತ್ಯಕ್ಷವಾಗಿ ಇರುತ್ತಾನೆ.

ಶಿವಜ್ಞಾನಂ ಮಹಾಘೋರ-

ಸಂಸಾರಾರ್ಣವತಾರಕಮ್ |

ದೀಯತೇ ಯೇನ ಸ ಗುರುಃ

ಕಸ್ಯ ವಂದ್ಯೋ ನ ಜಾಯತೇ || 9-54

ಮಹಾಭಯಾನಕವಾದ ಸಂಸಾರ ಸಾಗರವನ್ನು ದಾಟಿಸುವ ಶಿವಜ್ಞಾನವನ್ನು ಯಾರು ಪಡೆದುಕೊಂಡಿರುತ್ತಾರೆಯೋ ಮತ್ತು ಆ ಜ್ಞಾನವನ್ನು ಕೊಡುತ್ತಾನೆಯೋ ಅಂತಹ ಗುರುವು ಯಾರಿಗೆ ತಾನೇ ವಂದ್ಯ (ಪೂಜ್ಯ)ನಾಗುವುದಿಲ್ಲ? (ಅವನು ಎಲ್ಲರಿಗೂ ವಂದ್ಯನಾಗಿರುತ್ತಾನೆ).

ಯತ್ಕಟಾಕ್ಷಕಲಾಮಾತ್ರಾತ್

ಪರಮಾನಂದ ಲಕ್ಷಣಮ್ |

ಲಭ್ಯತೇ ಶಿವರೂಪತ್ವಮ್

ಸ ಗುರುಃ ಕೇನ ನಾರ್ಚಿತಃ || 9-55

ಕೇವಲ ಯಾರ ಕೃಪಾಕಟಾಕ್ಷ ಮಾತ್ರದಿಂದಲೇ ಪರಮಾನಂದ ಲಕ್ಷಣ (ಸ್ವರೂಪ)ವಾದ ಶಿವಸ್ವರೂಪವು ಲಭ್ಯ(ಪ್ರಾಪ್ತ)ವಾಗುತ್ತದೆಯೋ ಅಂತಹ ಗುರುವು ಯಾರಿಂದ ತಾನೇ ಅರ್ಚಿಸಲ್ಪಡುವುದಿಲ್ಲ (ಸರ್ವರಿಂದಲೂ ಅರ್ಚಿಸಲ್ಪಡುತ್ತಾನೆ).

ಹಿತಮೇವ ಚರೇನ್ನಿತ್ಯಮ್

ಶರೀರೇಣ ಧನೇನ ಚ |

ಆಚಾರ್ಯಸ್ಯೋಪ ಶಾಂತಸ್ಯ

ಶಿವಜ್ಞಾನ ಮಹಾನಿಧೇಃ || 9-56

ಶಿವಜ್ಞಾನದ ಮಹಾನಿಕ್ಷೇಪನೂ, ಶಾಂತನೂ ಆಗಿರುವ ಆಚಾರ್ಯನಿಗೆ (ಗುರುವಿಗೆ) ಶಿಷ್ಯನಾದವನು ತನ್ನ ಶರೀರ ಮತ್ತು ಧನದಿಂದ ನಿತ್ಯವೂ ಹಿತವನ್ನೇ ಉಂಟುಮಾಡಬೇಕು.

ಗುರೋರಾಜ್ಞಾಂ ನ ಲಂಘೇತ

ಸಿದ್ಧಿಕಾಮೀ ಮಹಾಮತಿಃ |

ತದಾಜ್ಞಾಲಂಘನೇನಾಪಿ

ಶಿವಾಜ್ಞಾಚ್ಛೇದಕೋ ಭವೇತ್ || 9-57

ಮೋಕ್ಷದ ಸಿದ್ಧಿಯನ್ನು ಅಪೇಕ್ಷಿಸುವ ಮಹಾಮತಿಯಾದ (ವಿವೇಕ ಸಂಪನ್ನನಾದ) ಶಿಷ್ಯನು ಗುರುವಿನ ಆಜ್ಞೆಯನ್ನು ಉಲ್ಲಂಘಿಸಕೂಡದು. (ಒಂದು ವೇಳೆ) ಗುರುವಿನ ಆಜ್ಞೆಯನ್ನು ಉಲ್ಲಂಘಿಸಿದರೆ ಶಿವನ ಆಜ್ಞೆಯನ್ನು ಉಲ್ಲಂಘಿಸಿದಂತಾಗುತ್ತದೆ.

ಇತಿ ಉಭಯಸ್ಥಲಂ

ಅಥ ತ್ರಿವಿಧ ಸಂಪತ್ತಿ ಸ್ಥಲಮ್

ಯಥಾ ಗುರೌ ಯಥಾ ಲಿಂಗೇ

ಭಕ್ತಿಮಾನ್ ಪರಿವರ್ತತೇ |

ಜಂಗಮೇ ಚ ತಥಾ ನಿತ್ಯಮ್

ಭಕ್ತಿಂ ಕುರ್ಯಾದ್ ವಿಚಕ್ಷಣಃ || 9-58

ವಿಚಕ್ಷಣನಾದ (ವಿವೇಕ ಸಂಪನ್ನನಾದ ಶಿವಭಕ್ತನು) ಗುರುವಿನಲ್ಲಿ ಹಾಗೂ ತನ್ನ ಲಿಂಗ (ಇಷ್ಟಲಿಂಗ)ದಲ್ಲಿ ಯಾವ ರೀತಿಯಾಗಿ ಭಕ್ತಿಸಂಪನ್ನನಾಗಿರುತ್ತಾನೆಯೋ ಅದರಂತೆ ಪ್ರತಿದಿನವೂ ಜಂಗಮನ ಮೇಲೆಯೂ ಭಕ್ತಿಯನ್ನು ಮಾಡಬೇಕು.

#ಏಕ ಏವ ಶಿವಃ ಸಾಕ್ಷಾತ್

ಸರ್ವಾನುಗ್ರಹಕಾರಕಃ |

ಗುರುಜಂಗಮಲಿಂಗಾತ್ಮಾ

ವರ್ತತೇ ಭುಕ್ತಿಮುಕ್ತಿದಃ || 9-59

ಒಬ್ಬನೇ ಆದ ಶಿವನು ಸ್ವತಃ ಗುರು ಜಂಗಮ ಲಿಂಗವೆಂಬ ತ್ರಿವಿಧ ಸ್ವರೂಪವನ್ನು ತಾಳಿ ಭಕ್ತರಿಗೆ ಭುಕ್ತಿಮುಕ್ತಿಗಳನ್ನು ಅನುಗ್ರಹಿಸುತ್ತಾನೆ.

ಲಿಂಗಂ ಚ ದ್ವಿವಿಧಂ ಪ್ರೋಕ್ತಮ್

ಜಂಗಮಾಜಂಗಮಾತ್ಮನಾ |

ಅಜಂಗಮೇ ಯಥಾ ಭಕ್ತಿಃ

ಜಂಗಮೇ ಚ ತಥಾ ಸ್ಮೃತಾ || 9-60

ಲಿಂಗವು ಜಂಗಮಲಿಂಗವೆಂತಲೂ, ಅಜಂಗಮಲಿಂಗವೆಂತಲೂ ಎರಡು ವಿಧವಾಗಿರುತ್ತದೆ. ಅಜಂಗಮಲಿಂಗದಲ್ಲಿ (ಸ್ಥಿರಲಿಂಗದಲ್ಲಿ) ಯಾವ ರೀತಿಯಾಗಿ ಭಕ್ತಿಯು ಮಾಡಲ್ಪಡುತ್ತದೆಯೋ ಅದರಂತೆ ಜಂಗಮಲಿಂಗದಲ್ಲಿಯೂ, ಭಕ್ತಿಯನ್ನು ಮಾಡಬೇಕು.

#ಅಜಂಗಮಂ ತು ಯಲ್ಲಿಂಗಮ್

ಮೃಚ್ಛಿಲಾದಿವಿನಿರ್ಮಿತಮ್ |

ತದ್ವರಂ ಜಂಗಮಂ ಲಿಂಗಮ್

ಶಿವಯೋಗೀತಿ ವಿಶ್ರುತಮ್ || 9-61

ಮೃತ್ (ಮಣ್ಣು), ಶಿಲಾ (ಕಲ್ಲು) ಮುಂತಾದವುಗಳಿಂದ ನಿರ್ಮಿಸಲ್ಪಟ್ಟ ಯಾವ ಲಿಂಗವಿದೆಯೋ ಅದು ಅಜಂಗಮ ಲಿಂಗವು. ಅದಕ್ಕಿಂತಲೂ ಶ್ರೇಷ್ಠವಾದದ್ದು ಜಂಗಮಲಿಂಗವು. ಅದುವೇ ಶಿವಯೋಗಿಯೆಂದು ಸುಪ್ರಸಿದ್ಧವಾಗಿರುತ್ತದೆ.

ಅಚರೇ ಮಂತ್ರಸಂಸ್ಕಾರಾತ್

ಲಿಂಗೇ ವಸತಿ ಶಂಕರಃ |

ಸದಾಕಾಲಂ ವಸತ್ಯೇವ

ಚರಲಿಂಗೇ ಮಹೇಶ್ವರಃ || 9-62

ಅಚರಲಿಂಗದಲ್ಲಿ (ಅಜಂಗಮ ಲಿಂಗದಲ್ಲಿ) ಮಂತ್ರಸಂಸ್ಕಾರದಿಂದ ಶಂಕರನು ಅಲ್ಲಿ ವಾಸವಾಗಿರುತ್ತಾನೆ. ಇನ್ನು ಚರಲಿಂಗದಲ್ಲಿ (ಶಿವಯೋಗಿಯಲ್ಲಿ) ಮಹೇಶ್ವರನು ಸದಾಕಾಲದಲ್ಲಿಯೂ (ಯಾವಾಗಲೂ) ವಾಸವಾಗಿರುತ್ತಾನೆ.

#ಶಿವಯೋಗಿನಿ ಯದ್ದತ್ತಮ್

ತದಕ್ಷಯಫಲಂ ಭವೇತ್ |

ತಸ್ಮಾತ್ ಸರ್ವಪ್ರಯತ್ನೇನ

ತಸ್ಮೈ ದೇಯಂ ಮಹಾತ್ಮನೇ || 9-63

ಶಿವಯೋಗಿಗೆ ಕೊಡಲ್ಪಟ್ಟ ದಾನದಿಂದ ಅಕ್ಷಯವಾದ ಫಲವು ಪ್ರಾಪ್ತಿಯಾಗುತ್ತದೆ. ಆದ್ದರಿಂದ ಸರ್ವಪ್ರಯತ್ನವನ್ನು ಮಾಡಿ ಮಹಿಮಾಶಾಲಿಯಾದ (ಮಹಾತ್ಮನಾದ) ಆ ಶಿವಯೋಗಿಗೆ ದಾನವನ್ನು ಮಾಡಬೇಕು.

ಯತ್ಫಲಂ ಲಭತೇ ಜಂತುಃ

ಪೂಜಯಾ ಶಿವಯೋಗಿನಃ |

ತದಕ್ಷಯಮಿತಿ ಪ್ರೋಕ್ತಮ್

ಸಕಲಾಗಮಪಾರಗೈಃ || 9-64

ಶಿವಯೋಗಿಗಳ ಪೂಜೆಯಿಂದ ಜೀವಿಗೆ ಯಾವ ಫಲವು ಲಭಿಸುತ್ತದೆಯೋ ಅದು ಅಕ್ಷಯವೆಂದು ಸಕಲಾಗಮ ಪಾರಂಗತರು (ಆಗಮತಜ್ಞರು) ಹೇಳುತ್ತಾರೆ.

#ನಾವಮನ್ಯೇತ ಕುತ್ರಾಪಿ

ಶಿವಯೋಗಿನಮಾಗತಮ್ |

ಅವಮಾನಾದ್ಭವೇತ್ತಸ್ಯ

ದುರ್ಗತಿಶ್ಚ ನ ಸಂಶಯಃ || 9-65

(ತನ್ನ ಮನೆಗೆ) ಬಂದಂಥ ಶಿವಯೋಗಿಯನ್ನು ಎಲ್ಲಿಯೂ (ಅಂತರಂಗ ಬಹಿರಂಗಗಳಲ್ಲಿ) ಅವಮಾನಗೊಳಿಸಬಾರದು. ಅವನ ಅವಮಾನವನ್ನು ಮಾಡಿದರೆ ದುರ್ಗತಿಯಾಗುವುದರಲ್ಲಿ ಸಂದೇಹವಿಲ್ಲ.

ಶಿವಯೋಗೀ ಶಿವಃ ಸಾಕ್ಷಾತ್

ಇತಿ ಕೈಂಕರ್ಯ ಭಕ್ತಿತಃ |

ಪೂಜಯೇದಾದರೇಣೈವ

ಯಥಾ ಲಿಂಗಂ ಯಥಾ ಗುರುಃ || 9-66

ಶಿವಭಕ್ತನು ಲಿಂಗವನ್ನು ಮತ್ತು ಗುರುವನ್ನು ಯಾವ ಪ್ರಕಾರವಾಗಿ ಆದರದಿಂದ ಪೂಜಿಸುತ್ತಾನೆಯೋ ಅದರಂತೆಯೇ ಶಿವಯೋಗಿಯನ್ನೂ ಸಹ ಸಾಕ್ಷಾತ್ ಶಿವನೆಂದೇ ಭಾವಿಸಿ ಆತನನ್ನು ಕಿಂಕರಭಕ್ತಿಯಿಂದ ಹಾಗೂ ಆದರದಿಂದ ಪೂಜಿಸಬೇಕು.

ಇತಿ ತ್ರಿವಿಧಸಂಪತ್ತಿಸ್ಥಲಂ

ಅಥ ಪ್ರಸಾದ ಸ್ವೀಕಾರ ಸ್ಥಲಮ್

ಪಾದೋದಕಂ ಯಥಾ ಭಕ್ತ್ಯಾ

ಸ್ವೀಕರೋತಿ ಮಹೇಶಿತುಃ |

ತಥಾ ಶಿವಾತ್ಮನೋರ್ನಿತ್ಯಮ್

ಗುರುಜಂಗಮಯೋರಪಿ || 9-67

ಶಿವಭಕ್ತನಾದವನು ಮಹೇಶನ (ಇಷ್ಟಲಿಂಗದ) ಪಾದೋದಕವನ್ನು ಹೇಗೆ ಭಕ್ತಿಯಿಂದ ಸ್ವೀಕರಿಸುತ್ತಾನೆಯೋ, ಹಾಗೆಯೇ ಶಿವಾತ್ಮ ಸ್ವರೂಪರಾದ ಗುರು ಜಂಗಮರ ಪಾದೋದಕವನ್ನೂ ಸಹ ನಿತ್ಯವೂ ಸ್ವೀಕರಿಸಬೇಕು.

#ಸರ್ವಮಂಗಲಮಾಂಗಲ್ಯಮ್

ಸರ್ವಪಾವನಪಾವನಮ್ |

ಸರ್ವಸಿದ್ಧಿಕರಂ ಪುಂಸಾಮ್

ಶಂಭೋಃ ಪಾದಾಂಬುಧಾರಣಮ್| 9-68

ಶಂಭುವಿನ (ಇಷ್ಟಲಿಂಗದ) ಪಾದೋದಕವನ್ನು ಧರಿಸುವುದು (ಸ್ವೀಕರಿಸುವುದು) ಎಲ್ಲ ಮಂಗಳಗಳಿಗೆ ಮಂಗಲಕರವು, ಎಲ್ಲ ಪಾವನಗಳಿಗೆ ಪಾವನವೂ (ಅತಿ ಪವಿತ್ರವೂ) ಮತ್ತು ಪುರುಷರಿಗೆ (ಸಾಧಕರಿಗೆ) ಸರ್ವಸಿದ್ಧಿಯನ್ನು ಕೊಡುವಂತಹುದೂ ಆಗಿದೆ.

ಶಿರಸಾ ಧಾರಯೇದ್ಯಸ್ತು

ಪತ್ರಂ ಪುಷ್ಪಂ ಶಿವಾರ್ಪಿತಮ್ |

ಪ್ರತಿಕ್ಷಣಂ ಭವೇತ್ ತಸ್ಯ

ಪೌಂಡರೀಕಕ್ರಿಯಾಫಲಮ್ || 9-69

ಶಿವನಿಗೆ ಸಮರ್ಪಿತವಾದ ಪತ್ರ ಪುಷ್ಪಾದಿಗಳನ್ನು ಯಾರು ತನ್ನ ಶಿರದ ಮೇಲೆ ಧರಿಸಿಕೊಳ್ಳುವರೋ (ಧನ್ಯತಾಭಾವದಿಂದ ಸ್ಪರ್ಶಿಸಿಕೊಳ್ಳುವರೋ) ಅಂತಹವರು ಪ್ರತಿಕ್ಷಣದಲ್ಲಿಯೂ ಪೌಂಡರೀಕಯಾಗದ ಫಲವನ್ನು ಪಡೆದುಕೊಳ್ಳುತ್ತಾರೆ.

#ಭುಂಜೀಯಾದ್ ರುದ್ರಭುಕ್ತಾನ್ನಮ್

ರುದ್ರಪೀತಂ ಜಲಂ ಪಿಬೇತ್ |

ರುದ್ರಾಘ್ರಾತಂ ಸದಾ ಜಿಘ್ರೇತ್

ಇತಿ ಜಾಬಾಲಿಕೀ ಶ್ರುತಿಃ || 9-70

ರುದ್ರ ಭುಕ್ತವಾದ (ರುದ್ರನಿಗೆ ಎಡೆಮಾಡಿದ) ಅನ್ನವನ್ನು ಭುಂಜಿಸಬೇಕು. ರುದ್ರಪೀತವಾದ (ರುದ್ರನಿಗೆ ಅರ್ಪಿಸಿದ) ನೀರನ್ನು ಕುಡಿಯಬೇಕು. ರುದ್ರನಿಗೆ ಅರ್ಪಿಸಿದ ಪುಷ್ಪಾದಿ ದ್ರವ್ಯಗಳನ್ನು ಮೂಸಬೇಕು ಎಂಬುದಾಗಿ ಜಾಬಾಲಿಕೀ ಶ್ರುತಿಯಲ್ಲಿ ಪ್ರತಿಪಾದಿಸಲಾಗಿದೆ.

ಅರ್ಪಯಿತ್ವಾ ನಿಜೇ ಲಿಂಗೇ

ಪತ್ರಂ ಪುಷ್ಪಂ ಫಲಂ ಜಲಮ್ |

ಅನ್ನಾದ್ಯಂ ಸರ್ವಭೋಜ್ಯಂ ಚ

ಸ್ವೀಕುರ್ಯಾದ್ ಭಕ್ತಿಮಾನ್ನರಃ || 9-71

ಭಕ್ತಿಸಂಪನ್ನನಾದ ಮನುಷ್ಯನು ಪತ್ರೆ, ಪುಷ್ಪ, ಫಲ, ಜಲ ಮತ್ತು ಅನ್ನ ಮುಂತಾದ ಎಲ್ಲ ಭೋಜ್ಯ ಪದಾರ್ಥಗಳನ್ನು ನಿಜಲಿಂಗಕ್ಕೆ (ತನ್ನ ಇಷ್ಟಲಿಂಗಕ್ಕೆ) ಅರ್ಪಿಸಿ ಸ್ವೀಕರಿಸಬೇಕು (ಭುಂಜಿಸಬೇಕು).

#ಗುರುತ್ವಾತ್ ಸರ್ವಭೂತಾನಾಮ್

ಶಂಭೋರಮಿತತೇಜಸಃ |

ತಸ್ಮೈ ನಿವೇದಿತಂ ಸರ್ವಮ್

ಸ್ವೀಕಾರ್ಯಂ ತತ್ಪರಾಯಣೈಃ || 9-72

ಅಪರಿಮಿತ ತೇಜಸ್ಸುಳ್ಳ ಶಂಭುವು ಸರ್ವಪ್ರಾಣಿಗಳಿಗೆ ಗುರುವಾಗಿರುತ್ತಾನೆ (ಜ್ಞಾನ ಕೊಟ್ಟವನಾಗಿರುತ್ತಾನೆ). ಆದ್ದರಿಂದ ತತ್ಪರಾಯಣರಾದವನು (ಅವನಲ್ಲಿ ಶ್ರದ್ಧೆಯುಳ್ಳವರು) ಅವನಿಗೆ ನಿವೇದಿಸಿದ (ನೈವೇದ್ಯವನ್ನು ಮಾಡಿದ) ಸರ್ವವನ್ನು ಸ್ವೀಕರಿಸಬೇಕು.

ಯೇ ಲಿಂಗಧಾರಿಣೋ ಲೋಕೇ

ಯೇ ಶಿವೈಕಪರಾಯಣಾಃ |

ತೇಷಾಂ ತು ಶಿವನಿರ್ಮಾಲ್ಯಮ್

ಉಚಿತಂ ನಾನ್ಯಜಂತುಷು || 9-73

ಈ ಲೋಕದಲ್ಲಿ ಯಾರು ಇಷ್ಟಲಿಂಗಧಾರಿಗಳೋ ಮತ್ತು ಯಾರು ಶಿವನೊಬ್ಬನಲ್ಲಿಯೇ ಪರಾಯಣರೋ (ಭಕ್ತಿಸಂಪನ್ನರೋ) ಅವರಿಗೆ ಮಾತ್ರ ಶಿವನಿರ್ಮಾಲ್ಯವು ಉಚಿತವಾದುದು (ಸೇವಿಸಲು ಯೋಗ್ಯವಾದುದು). ಆದರೆ ಬೇರೆ ಜೀವಿಗಳಿಗೆ(ಶಿವಭಕ್ತರಲ್ಲದವರುಗಳಿಗೆ)ಅದು ಉಚಿತವಾದುದಲ್ಲ.

#ಅನ್ನಜಾತೇ ತು ಭಕ್ತೇನ

ಭುಜ್ಯಮಾನೇ ಶಿವಾರ್ಪಿತೇ |

ಸಿಕ್ಥೇ ಸಿಕ್ಥೇಶ್ವಮೇಧಸ್ಯ

ಯತ್ಫಲಂ ತದವಾಪ್ಯತೇ || 9-74

ಶಿವಭಕ್ತನಾದವನು ಶಿವನಿಗೆ ಅರ್ಪಿತವಾದ ಅನ್ನಾದಿಗಳನ್ನು ಭೋಜಿಸಿದ್ದೇ ಆದರೆ ತುತ್ತು ತುತ್ತಿಗೆ ಅವನಿಗೆ ಒಂದೊಂದು ಅಶ್ವಮೇಧಯಜ್ಞದ ಫಲವು ಪ್ರಾಪ್ತಿಯಾಗುತ್ತದೆ.

ನಿರ್ಮಾಲ್ಯಂ ನಿರ್ಮಲಂ ಶುದ್ಧಮ್

ಶಿವೇನ ಸ್ವೀಕೃತಂ ಯತಃ |

ನಿರ್ಮಲೈಸ್ತತ್ಪರೈರ್ಧಾರ್ಯಮ್

ನಾನ್ಯೈಃ ಪ್ರಾಕೃತಜಂತುಭಿಃ | 9-75

ಶಿವನಿಂದ ಸ್ವೀಕೃತವಾದ್ದರಿಂದ ನಿರ್ಮಾಲ್ಯವೂ ಶುದ್ಧವೂ ಆಗಿರುತ್ತದೆ. ಆದ್ದರಿಂದ ನಿರ್ಮಲವಾದ ಶಿವತತ್ಪರರಿಂದಲೇ (ಶಿವಭಕ್ತರಿಂದಲೇ) ಅದು ಧರಿಸಲ್ಪಡುತ್ತದೆ. ಪ್ರಾಕೃತ (ಸಾಮಾನ್ಯ) ಜೀವಿಗಳು ಅದನ್ನು ಧರಿಸಲು ಯೋಗ್ಯರಲ್ಲ.

#ಶಿವಭಕ್ತಿ ವಿಹೀನಾನಾಮ್

ಜಂತೂನಾಂ ಪಾಪಕರ್ಮಣಾಮ್ |

ವಿಶುದ್ಧೇ ಶಿವನಿರ್ಮಾಲ್ಯೇ

ನಾಧಿಕಾರೋಸ್ತಿ ಕುತ್ರಚಿತ್ || 9-76

ಶಿವಭಕ್ತಿವಿಹೀನರಾದ (ಶಿವಭಕ್ತಿ ಇಲ್ಲದ) ಪಾಪಕರ್ಮಿಗಳಾದ ಜೀವಿಗಳಿಗೆ ವಿಶುದ್ಧವಾದ (ಪರಿಶುದ್ಧವಾದ) ಶಿವನಿರ್ಮಾಲ್ಯದಲ್ಲಿ ಎಲ್ಲಿಯೂ ಅಧಿಕಾರವಿರುವುದಿಲ್ಲ.

ಶಿವಲಿಂಗಪ್ರಸಾದಸ್ಯ

ಸ್ವೀಕಾರಾದ್ಯತ್ಫಲಂ ಭವೇತ್ |

ತಥಾ ಪ್ರಸಾದಸ್ವೀಕಾರಾದ್

ಗುರುಜಂಗಮಯೋರಪಿ || 9-77

ಶಿವಲಿಂಗದ (ಇಷ್ಟಲಿಂಗದ) ಪ್ರಸಾದವನ್ನು ಸ್ವೀಕರಿಸುವುದರಿಂದ ಯಾವ ಫಲವು ಉಂಟಾಗುವುದೋ (ದೊರೆಯುವುದೋ) ಅದೇ ಫಲವೇ ಗುರು ಮತ್ತು ಜಂಗಮ ಪ್ರಸಾದವನ್ನು ಸ್ವೀಕರಿಸುವುದರಿಂದ ಉಂಟಾಗುವುದು.

#ತಸ್ಮಾದ್ ಗುರುಂ ಮಹಾದೇವಮ್

ಶಿವಯೋಗಿನಮೇವ ಚ |

ಪೂಜಯೇತ್ ತತ್ಪ್ರಸಾದಾನ್ನಮ್

ಭುಂಜೀಯಾತ್ ಪ್ರತಿವಾಸರಮ್|| 9-78

ಆದ್ದರಿಂದ ಗುರುವನ್ನು, ಮಹಾದೇವನನ್ನು (ಇಷ್ಟಲಿಂಗವನ್ನು) ಮತ್ತು ಶಿವಯೋಗಿಯನ್ನು ಪ್ರತಿದಿನವೂ ಪೂಜಿಸಬೇಕು ಹಾಗೂ ಅವರ ಪ್ರಸಾದಾನ್ನವನ್ನು ಭುಂಜಿಸಬೇಕು.

ದಾನತ್ರಯಸ್ಥಲಮ್

ಅಥ ಸೋಪಾಧಿದಾನಸ್ಥಲಮ್

ಶಿವಲಿಂಗೇ ಶಿವಾಚಾರ್ಯೆ

ಶಿವಯೋಗಿನಿ ಭಕ್ತಿಮಾನ್ |

ದಾನಂ ಕುರ್ಯಾದ್ ಯಥಾಶಕ್ತಿ-

ತತ್ಪ್ರಸಾದಯುತಃ ಸದಾ || 9-79

ಭಕ್ತಿಸಂಪನ್ನನಾದ ಸಾಧಕನು ಶಿವಲಿಂಗದ, ಶಿವಾರ್ಚಾಯರ ಮತ್ತು ಶಿವಯೋಗಿಗಳ (ಗುರು, ಲಿಂಗ, ಜಂಗಮಗಳ) ಪ್ರಸಾದವನ್ನು ಪಡೆದುಕೊಂಡವನಾಗಿ ಯಾವಾಗಲೂ ತನ್ನ ಶಕ್ತ್ಯಾನುಸಾರವಾಗಿ ಅವರಿಗೆ ದಾನವನ್ನು ಮಾಡಬೇಕು.

#ದಾನಂ ಚ ತ್ರಿವಿಧಂ ಪ್ರೋಕ್ತಮ್

ಸೋಪಾಧಿನಿರುಪಾಧಿಕಮ್ |

ಸಹಜಂ ಚೇತಿ ಸರ್ವೆಷಾಮ್

ಸರ್ವತಂತ್ರ ವಿಶಾರದೈಃ || 9-80

ಸರ್ವತಂತ್ರಗಳ ವಿಶಾರದರು (ಶಿವಾಗಮ ತಜ್ಞರು) ಎಲ್ಲ ಶಿವಭಕ್ತರಿಗಾಗಿ ಸೋಪಾಧಿಕ ದಾನ, ನಿರುಪಾಧಿಕ ದಾನ ಮತ್ತು ಸಹಜ ದಾನವೆಂಬುದಾಗಿ ಮೂರು ವಿಧವಾದ ದಾನಗಳನ್ನು ಹೇಳಿದ್ದಾರೆ.

ಫಲಾಭಿಸಂಧಿಸಂಯುಕ್ತಮ್

ದಾನಂ ಯದ್ವಿಹಿತಂ ಭವೇತ್ |

ತತ್ ಸೋಪಾಧಿಕಮಾಖ್ಯಾತಮ್

ಮುಮುಕ್ಷುಭಿರನಾದೃತಮ್ || 9-81

ಕೇವಲ ಫಲದ ಅಭಿಲಾಷೆಯಿಂದ ಕೂಡಿಕೊಂಡು ಮಾಡಿದ ದಾನವು ಸೋಪಾಧಿಕ ದಾನವೆಂದು ಹೇಳಲ್ಪಡುತ್ತದೆ. ಮುಮುಕ್ಷುಗಳು ಈ ರೀತಿಯ ದಾನವನ್ನು ಉಪೇಕ್ಷಿಸುತ್ತಾರೆ.

ಇತಿ ಸೋಪಾಧಿದಾನಸ್ಥಲಂ

ಅಥ ನಿರುಪಾಧಿದಾನಸ್ಥಲಮ್

ಫಲಾಭಿಸಂಧಿನಿರ್ಮುಕ್ತಮ್

ಈಶ್ವರಾರ್ಪಿತಕಾಂಕ್ಷಿತಮ್ |

ನಿರುಪಾಧಿಕಮಾಖ್ಯಾತಮ್

ದಾನಂ ದಾನವಿಶಾರದೈಃ || 9-82

ದಾನವನ್ನು ಸ್ವೀಕರಿಸುವವನು, ದಾನವನ್ನು ಕೊಡುವವನು ಮತ್ತು ದಾನವಾಗಿ ಕೊಡುವ ವಸ್ತು – ಇವೆಲ್ಲವುಗಳು ಶಿವಸ್ವರೂಪಗಳೆಂದು ಚಿಂತಿಸಿ ತನ್ನಲ್ಲಿ ಅಕರ್ತೃತ್ವ ಭಾವನೆಯನ್ನು ತಾಳಿಕೊಡುವ ದಾನವೇ ಸಹಜದಾನವು.

ಇತಿ ನಿರುಪಾಧಿದಾನಸ್ಥಲಂ

ಅಥ ಸಹಜದಾನಸ್ಥಲಮ್

ಆದಾತೃದಾತೃದೇಯಾನಾಮ್

ಶಿವಭಾವಂ ವಿಚಿಂತಯನ್ |

ಆತ್ಮನೋಕರ್ತೃಭಾವಂ ಚ

ಯದ್ ದತ್ತಂ ಸಹಜಂ ಭವೇತ್ || 9-83

ಈ ಸಹಜದಾನವು ಉತ್ಕೃಷ್ಟವಾದುದು ಮತ್ತು ಎಲ್ಲ ದಾನಗಳಲ್ಲಿ ಉತ್ತಮೋತ್ತಮವಾಗಿರುತ್ತದೆ. ಇಂತಹ ದಾನವನ್ನು ಮಾಡಿದ ಜೀವಿಗಳಿಗೆ ಇದು ಶಿವಜ್ಞಾನಪ್ರದಾಯಕವೂ ಮತ್ತು ಜನ್ಮರೋಗ ನಿವರ್ತಕವೂ(ಭವರೊಗ ನಿವಾರಕವೂ) ಆಗಿರುತ್ತದೆ.

ಸಹಜಂ ದಾನಮುತ್ಕೃಷ್ಟಮ್

ಸರ್ವದಾನೋತ್ತಮೋತ್ತಮಮ್ |

ಶಿವಜ್ಞಾನಪ್ರದಂ ಪುಂಸಾಮ್

ಜನ್ಮರೋಗ ನಿವರ್ತಕಮ್ || 9-84

ಈ ಸಹಜದಾನವು ಉತ್ಕೃಷ್ಟವಾದುದು ಮತ್ತು ಎಲ್ಲ ದಾನಗಳಲ್ಲಿ ಉತ್ತಮೋತ್ತಮವಾಗಿರುತ್ತದೆ. ಇಂತಹ ದಾನವನ್ನು ಮಾಡಿದ ಜೀವಿಗಳಿಗೆ ಇದು ಶಿವಜ್ಞಾನಪ್ರದಾಯಕವೂ ಮತ್ತು ಜನ್ಮರೋಗ ನಿವರ್ತಕವೂ(ಭವರೊಗ ನಿವಾರಕವೂ) ಆಗಿರುತ್ತದೆ.

ಶಿವಾಯ ಶಿವಭಕ್ತಾಯ

ದೀಯತೇ ಯದಿ ಕಿಂಚನ |

ಭಕ್ತ್ಯಾ ತದಪಿ ವಿಖ್ಯಾತಮ್

ಸಹಜಂ ದಾನಮುತ್ತಮಮ್ || 9-85

ಶಿವನಿಗೆ ಅಥವಾ ಶಿವಭಕ್ತರಿಗೆ ಅತ್ಯಂತ ಭಕ್ತಿಯಿಂದ ಏನನ್ನೇ ಕೊಟ್ಟರೂ ಅದು ಸಹ ಉತ್ತಮವಾದ ಸಹಜದಾನವೆಂತಲೇ ಕರೆಯಲ್ಪಡುತ್ತದೆ.

ದಾನಾತ್ ಸ್ವರ್ಣಸಹಸ್ರಸ್ಯ

ಸತ್ಪಾತ್ರೇ ಯತ್ಫಲಂ ಭವೇತ್ |

ಏಕಪುಷ್ಪಪ್ರದಾನೇನ

ಶಿವೇ ತತ್ಫಲಮಿಷ್ಯತೇ || 9-86

ಒಂದು ಸಾವಿರ ಸುವರ್ಣ (ನಾಣ್ಯ) ಮುದ್ರೆಗಳನ್ನು ಸತ್ಪಾತ್ರರಲ್ಲಿ ದಾನ ಮಾಡಿದರೆ ಯಾವ ಫಲವು ಉಂಟಾಗುವುದೋ ಅದೇ ಫಲವು ಶಿವಲಿಂಗಕ್ಕೆ ಒಂದು ಪುಷ್ಪವನ್ನು ಸಮರ್ಪಿಸುವುದರಿಂದಲೂ ಪಡೆಯಬಹುದಾಗಿದೆ.

ಶಿವ ಏವ ಪರಂ ಪಾತ್ರಮ್

ಸರ್ವವಿದ್ಯಾನಿಧಿರ್ಗುರುಃ |

ತಸ್ಮೈ ದತ್ತಂ ತು ಯತ್ಕಿಂಚಿತ್

ತದನಂತಫಲಂ ಭವೇತ್ || 9-87

ಸರ್ವವಿದ್ಯೆಗಳ ನಿಧಿಯಾದ, ಸರ್ವರಿಗೂ ಗುರುಸ್ಥಾನದಲ್ಲಿರುವ ಶಿವನೋರ್ವನೇ ಸರ್ವೊತ್ಕೃಷ್ಟವಾದ ಸತ್ಪಾತ್ರನಾಗಿದ್ದಾನೆ. (ಆದ್ದರಿಂದ) ಅವನಿಗೆ ಕೊಟ್ಟ ಯಾವುದೇ ವಸ್ತುವು ಸಹ ಅನಂತ ಫಲಗಳನ್ನು ಕೊಡುತ್ತದೆ.

ಶಿವಯೊಗೀ ಶಿವಃ ಸಾಕ್ಷಾತ್

ಶಿವಜ್ಞಾನಮಹೋದಧಿಃ |

ಯತ್ಕಿಂಚಿದ್ ದೀಯತೇ ತಸ್ಮೈ

ತದ್ದಾನಂ ಪಾರಮಾರ್ಥಿಕಮ್ ||9-88

ಶಿವಜ್ಞಾನ ಸಾಗರನಾದ ಶಿವಯೋಗಿಯು ಸಾಕ್ಷಾತ್ ಶಿವನೇ ಆಗಿರುತ್ತಾನೆ. ಅವನಿಗೆ ಏನನ್ನೇ ಸ್ವಲ್ಪ ದಾನ ಮಾಡಿದರೂ ಆ ದಾನವು ಪಾರಮಾರ್ಥಿಕವಾದ ಸಹಜದಾನವೇ ಆಗಿದೆ

ಶಿವಯೋಗೀ ಮಹತ್ಪಾತ್ರಮ್

ಸರ್ವೆಷಾಂ ದಾನಕರ್ಮಣಿ |

ತಸ್ಮಾನ್ನಾಸ್ತಿ ಪರಂ ಕಿಂಚಿತ್

ಪಾತ್ರಂ ಶಾಸ್ತ್ರವಿಚಾರತಃ || 9-89

ದಾನ ಮಾಡುವವರೆಲ್ಲರಿಗೂ ಶಿವಯೋಗಿಯೋರ್ವನೇ ಮಹತ್ಪಾತ್ರ ನಾಗಿದ್ದಾನೆ. ಆದ್ದರಿಂದ ಶಾಸ್ತ್ರದ ವಿಚಾರ ದೃಷ್ಟಿಯಿಂದ ಆ ಶಿವಯೋಗಿಗಿಂತಲೂ ಶ್ರೇಷ್ಠರಾದ ಪಾತ್ರರು ಯಾರೂ ಇರುವುದಿಲ್ಲ.

ಭಿಕ್ಷಾಮಾತ್ರಪ್ರದಾನೇನ

ಶಾಂತಾಯ ಶಿವಯೋಗಿನೇ |

ಯತ್ಫಲಂ ಲಭ್ಯತೇ ನೈತದ್

ಯಜ್ಞಕೋಟಿಶತೈರಪಿ || 9-90

ಶಾಂತಸ್ವಭಾವದ (ರಾಗದ್ವೇಷರಹಿತನಾದ) ಶಿವಯೋಗಿಗೆ ಒಂದು ತುತ್ತು ಭಿಕ್ಷಾನ್ನವನ್ನು ಕೊಡುವುದರಿಂದ ಯಾವ ಫಲವು ಲಭಿಸುವುದೋ ಅದು ಒಂದು ಕೋಟಿ ಯಜ್ಞವನ್ನು ಮಾಡಿದರೂ ಸಹ ಲಭಿಸುವುದಿಲ್ಲ.

ಶಿವಯೋಗಿನಿ ಸಂತೃಪ್ತೇ

ತೃಪ್ತೋ ಭವತಿ ಶಂಕರಃ |

ತತ್ತೃಪ್ತ್ಯಾ ತನ್ಮಯಂ ವಿಶ್ವಮ್

ತೃಪ್ತಿಮೇತಿ ಚರಾಚರಮ್ || 9-91

ಶಿವಯೋಗಿಯು ಸಂತೃಪ್ತನಾದರೆ ಶಂಕರನೇ ತೃಪ್ತನಾಗುತ್ತಾನೆ. ಶಂಕರನು ತೃಪ್ತನಾಗುವುದರಿಂದ ಅವನಲ್ಲಿ ಅಡಗಿರುವ ಚರಾಚರ ವಿಶ್ವವೆಲ್ಲವೂ ತೃಪ್ತವಾಗುತ್ತದೆ

ತಸ್ಮಾತ್ ಸರ್ವಪ್ರಯತ್ನೇನ

ಯೇನ ಕೇನಾಪಿ ಕರ್ಮಣಾ |

ತೃಪ್ತಿಂ ಕುರ್ಯಾತ್ ಸದಾಕಾಲಮ್

ಅನ್ನಾದ್ಯೆ ಃ ಶಿವಯೋಗಿನಃ || 9-92

ಆದ್ದರಿಂದ (ಪ್ರತಿಯೊಬ್ಬರೂ) ಎಲ್ಲ ಪ್ರಯತ್ನವನ್ನು ಮಾಡಿ ಯಾವುದಾದ ರೊಂದು ಕ್ರಿಯೆಯಿಂದ ಯಾವಾಗಲೂ ಶಿವಯೋಗಿಯನ್ನು ಅನ್ನಾದಿಗಳಿಂದ ತೃಪ್ತಿಪಡಿಸಬೇಕು.

ನಿರುಪಾಧಿಕ ಚಿದ್ರೂಪ-

ಪರಾನಂದಾತ್ಮವಸ್ತುನಿ |

ಸಮಾಪ್ತಂ ಸಕಲಂ ಯಸ್ಯ

ಸ ದಾನೀ ಶಂಕರಃ ಸ್ವಯಮ್ || 9-93

ಉಪಾಧಿರಹಿತವಾದ, ಚಿದ್ರೂಪವಾದ, ಪರಾನಂದ ಸ್ವರೂಪವಾದ ಆತ್ಮ ವಸ್ತುವಿನಲ್ಲಿ ಯಾವ ದಾನಿಯ ಸಕಲ ವಸ್ತುಗಳು ಸಮಾಪ್ತವಾಗುವವೋ, ಆ ದಾನಿಯು ಸ್ವಯಂ ಶಂಕರನೇ ಆಗಿರುತ್ತಾನೆ.

ಉಕ್ತಾಖಿಲಾಚಾರಪರಾಯಣೋ ಸೌ

ಸದಾ ವಿತನ್ವನ್ ಸಹಜಂ ತು ದಾನಮ್ |

ಬ್ರಹ್ಮಾದಿಸಂಪತ್ಸು ವಿರಕ್ತಚಿತ್ತೋ

ಭಕ್ತೋ ಹಿ ಮಾಹೇಶ್ವರತಾಮುಪೈತಿ -||94

ಭಕ್ತಸ್ಥಲದಲ್ಲಿ ಹೇಳಿದ ಎಲ್ಲಾ ಆಚಾರಗಳಲ್ಲಿ (ಪಿಂಡಸ್ಥಲಾದಿ ಸಹಜದಾನ ಸ್ಥಲದವರೆಗಿನ) ಪರಾಯಣನಾದ (ನಿಷ್ಠನಾದ) ಈ ಭಕ್ತಸ್ಥಲಸಾಧಕನು ಯಾವಾಗಲೂ ಸಹಜದಾನವನ್ನೇ ಮಾಡುವಂತಹವನಾಗಿ ಬ್ರಹ್ಮ, ವಿಷ್ಣು ಮೊದಲಾದ ದೇವತೆಗಳ ಸಂಪತ್ತುಗಳಲ್ಲಿ ವಿರಕ್ತಚಿತ್ತನಾದ (ನಿಸ್ಪೃಹನಾದ) ಭಕ್ತನೇ ಮಾಹೇಶ್ವರ ಸ್ಥಿತಿಯನ್ನು ಹೊಂದುತ್ತಾನೆ.

ಓಂ ತತ್ಸತ್ ಇತಿ

ಶ್ರೀ ಶಿವಗೀತೇಷು ಸಿದ್ಧಾಂತಾಗಮೇಷು

ಶಿವಾದ್ವೈತ ವಿದ್ಯಾಯಾಂ ಶಿವಯೋಗ ಶಾಸ್ತ್ರೇ

ಶ್ರೀ ರೇಣುಕಾಗಸ್ತ್ಯ ಸಂವಾದೇ ವೀರಶೈವ ಧರ್ಮನಿರ್ಣಯೇ

ಶ್ರೀ ಶಿವಯೋಗಿ ಶಿವಾಚಾರ್ಯವಿರಚಿತೇ

ಶ್ರೀ ಸಿದ್ಧಾಂತ ಶಿಖಾಮಣೌ ಭಕ್ತಸ್ಥಲೇ

ಭಕ್ತಮಾರ್ಗಕ್ರಿಯಾ ಸ್ಥಲಾದಿ ಸಪ್ತವಿಧ ಸ್ಥಲ

ಪ್ರಸಂಗೋ ನಾಮ ನವಮಃ ಪರಿಚ್ಛೇದಃ ||

ಓಂ ತತ್ಸತ್ ಇತಿ ಶ್ರೀ ಶಿವನಿಂದ ಉಪದೇಶಿಸಲ್ಪಟ್ಟು ಶ್ರೀ ಸಿದ್ಧಾಂತಾಗಮಗಳಲ್ಲಿಯ ಶಿವಾದ್ವೈತವಿದ್ಯಾರೂಪವೂ, ಶಿವಯೋಗಶಾಸ್ತ್ರವೂ, ಶ್ರೀ ರೇಣುಕಾಗಸ್ತ್ಯಸಂವಾದ ರೂಪವೂ, ಶ್ರೀ ವೀರಶೈವಧರ್ಮ ನಿರ್ಣಯವೂ, ಶ್ರೀ ಶಿವಯೋಗಿ ಶಿವಾಚಾರ್ಯ ವಿರಚಿತವೂ ಆದ ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿ ಭಕ್ತಸ್ಥಲದಲ್ಲಿಯ ಭಕ್ತಮಾರ್ಗಕ್ರಿಯಾಸ್ಥಲಾದಿ ಏಳು ವಿಧ ಸ್ಥಲ ಪ್ರಸಂಗವೆಂಬ ಹೆಸರಿನ ಒಂಭತ್ತನೆಯ ಪರಿಚ್ಛೇದವು ಮುಗಿದುದು