ಅಷ್ಟಮಃ ಪರಿಚ್ಛೇದಃ

ಪಂಚಾಕ್ಷರೀಜಪಸ್ಥಲಪ್ರಸಂಗಃ

(49 ಶ್ಲೋಕಗಳು)

|| ಶ್ರೀ ರೇಣುಕ ಉವಾಚ ||

ಧೃತಶ್ರೀಭೂತಿ ರುದ್ರಾಕ್ಷಃ

ಪ್ರಯತೋ ಲಿಂಗಧಾರಕಃ |

ಜಪೇತ್ ಪಂಚಾಕ್ಷರೀವಿದ್ಯಾಮ್

ಶಿವತತ್ತ್ವಪ್ರಬೋಧಿನೀಮ್ || 8-1

ಶ್ರೀ (ಮಂಗಳಕರವೂ, ಸಂಪ್ರದಾಯಕವೂ ಆದ) ವಿಭೂತಿ ರುದ್ರಾಕ್ಷಗಳನ್ನು ಧರಿಸಿ ಪವಿತ್ರನಾದ ಇಷ್ಟಲಿಂಗಧಾರಿಯು ಶಿವತತ್ತ್ವವನ್ನು ಬೋಧಿಸುವ ಪಂಚಾಕ್ಷರೀ ವಿದ್ಯೆಯನ್ನು (ಮಂತ್ರವನ್ನು) ಜಪಿಸಬೇಕು.

#ಶಿವತತ್ತ್ವಾತ್ ಪರಂ ನಾಸ್ತಿ

ಯಥಾ ತತ್ತ್ವಾಂತರಂ ಮಹತ್ |

ತಥಾ ಪಂಚಾಕ್ಷರೀಮಂತ್ರಾತ್

ನಾಸ್ತಿ ಮಂತ್ರಾಂತರಂ ಮಹತ್ || 8-2

ಶಿವತತ್ತ್ವಕ್ಕಿಂತಲೂ ಪರ(ಶ್ರೇಷ್ಠ)ವಾದ ಬೇರೊಂದು ಮಹತ್ತರ (ಮಹಿಮಾನ್ವಿತ)ವಾದ ತತ್ತ್ವವು ಹೇಗೆ ಇರುವುದಿಲ್ಲವೋ ಹಾಗೆಯೇ ಪಂಚಾಕ್ಷರೀ ಮಂತ್ರಕ್ಕಿಂತಲೂ ಮಹತ್ತರವಾದ ಬೇರೊಂದು ಮಂತ್ರವು ಇರುವುದಿಲ್ಲ.

ಜ್ಞಾತೇ ಪಂಚಾಕ್ಷರೀಮಂತ್ರೇ

ಕಿಂ ವಾ ಮಂತ್ರಾಂತರೈಃ ಫಲಮ್ |

ಜ್ಞಾತೇ ಶಿವೇ ಜಗನ್ಮೂಲೇ

ಕಿಂ ಫಲಂ ದೇವತಾಂತರೈಃ || 8-3

ಜಗತ್ತಿಗೆ ಮೂಲ ಕಾರಣನಾದ ಶಿವನನ್ನು ತಿಳಿದುಕೊಂಡ ಬಳಿಕ ಬೇರೆ ಬೇರೆ ದೇವರುಗಳನ್ನು ತಿಳಿದುಕೊಳ್ಳುವ ಅವಶ್ಯಕತೆ ಹೇಗೆ ಇರುವುದಿಲ್ಲವೋ ಹಾಗೆ ಪಂಚಾಕ್ಷರೀ ಮಂತ್ರವನ್ನು ತಿಳಿದುಕೊಂಡ ಬಳಿಕ ಮಂತ್ರಾಂತರಗಳನ್ನು (ಬೇರೆ ಬೇರೆ ಮಂತ್ರಗಳನ್ನು) ತಿಳಿದುಕೊಳ್ಳುವುದರಿಂದ ಏನು ಫಲ?

#ಸಪ್ತಕೋಟಿಷು ಮಂತ್ರೇಷು

ಮಂತ್ರಃ ಪಂಚಾಕ್ಷರೋ ಮಹಾನ್ |

ಬ್ರಹ್ಮವಿಷ್ಣ್ವಾದಿದೇವೇಷು

ಯಥಾ ಶಂಭುರ್ಮಹತ್ತರಃ || 8-4

ಬ್ರಹ್ಮ, ವಿಷ್ಣು ಮೊದಲಾದ ದೇವರುಗಳಲ್ಲಿ ಶಂಭುವು ಹೇಗೆ ಮಹತ್ತರ (ಸರ್ವೊತ್ತಮ)ನಾಗಿರುವನೋ ಅದರಂತೆ ಸಪ್ತಕೋಟಿ ಮಂತ್ರಗಳಲ್ಲಿ ಪಂಚಾಕ್ಷರ ಮಂತ್ರವೇ ಸರ್ವೊತ್ತಮವಾಗಿದೆ.

ಅಶೇಷಜಗತಾಂ ಹೇತುಃ

ಪರಮಾತ್ಮಾ ಮಹೇಶ್ವರಃ |

ತಸ್ಯ ವಾಚಕಮಂತ್ರೋಯಮ್

ಸರ್ವಮಂತ್ರೈಕ ಕಾರಣಮ್ || 8-5

ಸಕಲ ಬ್ರಹ್ಮಾಂಡಗಳಿಗೆ ಪರಮಾತ್ಮನಾದ ಮಹೇಶ್ವರನು ಹೇತು (ಕಾರಣ)ವಾಗಿರುವಂತೆ ಅವನ ವಾಚಕ ಮಂತ್ರವಾದ

#ತಸ್ಯಾಭಿಧಾನಮಂತ್ರೋಯಮ್

ಅಭಿಧೇಯಶ್ಚ ಸ ಸ್ಮೃತಃ |

ಅಭಿಧಾನಾಭಿಧೇಯತ್ವಾತ್

ಮಂತ್ರಾತ್ ಸಿದ್ಧಃ ಪರಃ ಶಿವಃ || 8-6

ಈ ಪಂಚಾಕ್ಷರ ಮಂತ್ರವು ಎಲ್ಲ ಮಂತ್ರಗಳಿಗೆ ಮೂಲಕಾರಣವಾಗಿದೆ.

ನಮಃ ಶಬ್ದಂ ವದೇತ್ ಪೂರ್ವಮ್

ಶಿವಾಯೇತಿ ತತಃ ಪರಮ್ |

ಮಂತ್ರಃ ಪಂಚಾಕ್ಷರೋ ಹ್ಯೇಷ

ಸರ್ವಶ್ರುತಿ ಶಿರೋಗತಃ || 8-7

ನಮಃ ಎಂಬ ಶಬ್ದವನ್ನು ಪೂರ್ವದಲ್ಲಿ (ಮೊದಲು) ಹೇಳಬೇಕು. ಅನಂತರ ಶಿವಾಯ ಎಂಬುದಾಗಿ ಹೇಳಬೇಕು. (ನಮಃ ಶಿವಾಯ ಇದುವೇ ಪಂಚಾಕ್ಷರ ಮಂತ್ರವು). ಈ ಪಂಚಾಕ್ಷರ ಮಂತ್ರವು ಸಕಲ ಶ್ರುತಿ(ವೇದ)ಗಳ ಶಿಖಾಮಣಿಯಾಗಿದೆ.

#ಆದಿತಃ ಪರಿಶುದ್ಧತ್ವಾತ್

ಮಲತ್ರಯ ವಿಯೋಗತಃ |

ಶಿವ ಇತ್ಯುಚ್ಯತೇ ಶಂಭುಃ

ಚಿದಾನಂದ ಘನಃ ಪ್ರಭುಃ || 8-8

ಆದಿಕಾಲದಿಂದಲೂ (ಮೊದಲಿನಿಂದಲೂ) ಮಲತ್ರಯಗಳ ಸಂಬಂಧವಿಲ್ಲದಿರುವುದರಿಂದ ಸದಾ ಪರಿಶುದ್ಧನಾಗಿರುವ ಸಚ್ಚಿದಾನಂದ ಘನ (ಸ್ವರೂಪ)ನು, ಪ್ರಭುವಾದ (ಸ್ವತಂತ್ರನೂ ಆದ) ಶಂಭುವೇ ಶಿವನೆಂದು ಕರೆಯಲ್ಪಡುತ್ತಾನೆ.

ಆಸ್ಪ ದತ್ವಾದ ಶೇಷಾಣಾಮ್

ಮಂಗಲಾನಾಂ ವಿಶೇಷತಃ |

ಶಿವಶಬ್ದಾಭಿ ಧೇಯೋ ಹಿ

ದೇವದೇವ ಸ್ತ್ರಿಯಂಬಕಃ || 8-9

ಅಶೇಷಗಳಿಗೆ (ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗೆ) ಆಸ್ಪದನಾಗಿರುವ, ವಿಶೇಷವಾಗಿ ಎಲ್ಲ ಮಂಗಲಗಳಿಗೂ ಆಶ್ರಯನಾಗಿರುವುದರಿಂದ ತ್ರಿಯಂಬಕನು (ಮುಕ್ಕಣ್ಣನು) ಆದ, ದೇವಾದಿ ದೇವನಾದ ಮಹಾದೇವನು ಶಿವ ಶಬ್ದದಿಂದ ಅಭಿಧೇಯನಾಗಿರುತ್ತಾನೆ. (ಶಿವನೆಂಬ ಹೆಸರಿನಿಂದ ಕರೆಯಲ್ಪಡುತ್ತಾನೆ).

#ಶಿವ ಇತ್ಯಕ್ಷರ ದ್ವಂದ್ವಮ್

ಪರಬ್ರಹ್ಮಪ್ರಕಾಶಕಮ್ |

ಮುಖ್ಯವೃತ್ತ್ಯಾ ತದನ್ಯೇಷಾಮ್

ಶಬ್ದಾನಾಂ ಗುಣವೃತ್ತಯಃ || 8-10

ಶಿವ ಎಂಬ ಎರಡು ಅಕ್ಷರಗಳು ಮುಖ್ಯವೃತ್ತಿಯಿಂದ (ಸಾಕ್ಷಾತ್) ಪರಬ್ರಹ್ಮ ಪ್ರಕಾಶಕವಾಗಿರುತ್ತವೆ. (ಪರಶಿವ ಬ್ರಹ್ಮವನ್ನು ತಿಳಿಸುವಂತಹುಗಳಾಗಿವೆ). ಶಿವನ (ಉಳಿದ ನೀಲಕಂಠ, ಮೃತ್ಯುಂಜಯ ಮುಂತಾದ) ಉಳಿದ ನಾಮಗಳು ಅವನ ಗುಣಗಳನ್ನು ಹೇಳುವುದರ ಮೂಲಕ ಅವನನ್ನು ತಿಳಿಸುತ್ತವೆ

ತಸ್ಮಾನ್ಮುಖ್ಯತರಂ ನಾಮ

ಶಿವ ಇತ್ಯಕ್ಷರದ್ವಯಮ್ |

ಸಚ್ಚಿದಾನಂದ ರೂಪಸ್ಯ

ಶಂಭೋ ರಮಿತ ತೇಜಸಃ |

ಏತನ್ನಾಮಾವಲಂಬೇನ

ಮಂತ್ರಃ ಪಂಚಾಕ್ಷರಃ ಸ್ಮೃತಃ || 8-11

ಅಪರಿಮಿತ ತೇಜಸ್ವಿಯೂ, ಸಚ್ಚಿದಾನಂದ ಸ್ವರೂಪನೂ ಆದ ಶಂಭುವಿಗೆ ಶಿವನೆಂಬ ಎರಡು ಅಕ್ಷರಗಳು ಮುಖ್ಯವಾದ ನಾಮಗಳಾಗಿವೆ. ಈ ಶಿವನೆಂಬ ಹೆಸರನ್ನು ಅವಲಂಬಿಸಿಯೇ ಪಂಚಾಕ್ಷರ ಮಂತ್ರವು ಹೇಳಲ್ಪಟ್ಟಿದೆ.

#ಯಸ್ಮಾದತಃ ಸದಾ ಜಪ್ಯೋ

ಮೋಕ್ಷಾಕಾಂಕ್ಷಿ ಭಿ ರಾದರಾತ್ || 8-12

ಯಥಾನಾದಿರ್ಮಹಾದೇವಃ

ಸಿದ್ಧಃ ಸಂಸಾರಮೋಚಕಃ |

ತಥಾ ಪಂಚಾಕ್ಷರೋ ಮಂತ್ರಃ

ಸಂಸಾರ ಕ್ಷಯ ಕಾರಕಃ || 8-13

ಶಿವನಾಮದಿಂದ ಕೂಡಿರುವುದರಿಂದ ಮೋಕ್ಷಾಪೇಕ್ಷಿಗಳು ಯಾವಾಗಲೂ ಈ ಮಂತ್ರವನ್ನು ಜಪಿಸಬೇಕು. ಅನಾದಿಯಾದ ಮಹಾದೇವನು ಸಂಸಾರ ಮೋಚಕನೆಂದು (ಸಂಸಾರದಿಂದ ಮುಕ್ತಗೊಳಿಸುವನೆಂದು) ಪ್ರಸಿದ್ಧವಾಗಿರುವಂತೆ ಈ ಪಂಚಾಕ್ಷರ ಮಂತ್ರವು ಸಂಸಾರ ಕ್ಷಯಕಾರಕವಾಗಿರುತ್ತದೆ (ಸಂಸಾರವನ್ನು ಕ್ಷಯಿಸುವಂತಹುದ್ದಾಗಿರುತ್ತದೆ).

#ಪಂಚಭೂತಾನಿ ಸರ್ವಾಣಿ

ಪಂಚ ತನ್ಮಾತ್ರಕಾಣಿ ಚ |

ಜ್ಞಾನೇಂದ್ರಿಯಾಣಿ ಪಂಚಾಪಿ

ಪಂಚ ಕರ್ಮೆಂದ್ರಿಯಾಣಿ ಚ || 8-14

ಪಂಚ ಬ್ರಹ್ಮಾಣಿ ಪಂಚಾಪಿ

ಕೃತ್ಯಾನಿ ಸಹಕಾರಣೈಃ |

ಬೋಧ್ಯಾನಿ ಪಂಚ ಭಿರ್ವರ್ಣೆಃ

ಪಂಚಾಕ್ಷರ ಮಹಾಮನೋಃ || 8-15

ಪಂಚಮಹಾಭೂತಗಳು (ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ), ಪಂಚತನ್ಮಾತ್ರಗಳು (ಗಂಧ, ರಸ, ರೂಪ, ಸ್ಪರ್ಶ, ಶಬ್ದ), ಪಂಚಜ್ಞಾನೇಂದ್ರಿಯಗಳು (ಘ್ರಾಣ, ರಸನ, ಚಕ್ಷು, ಚರ್ಮ, ಶ್ರೋತ್ರ), ಪಂಚ ಕರ್ಮೆಂದ್ರಿಯಗಳು (ಪಾಯು, ಉಪಸ್ಥ, ಪಾದ, ಪಾಣಿ, ವಾಕ್), ಪಂಚಬ್ರಹ್ಮರು (ಈಶಾನ, ತತ್ಪುರುಷ, ಅಘೋರ, ವಾಮದೇವ, ಸದ್ಯೋಜಾತ) ಮತ್ತು ಪಂಚಕೃತ್ಯಗಳು (ಅನುಗ್ರಹ, ತಿರೋಧಾನ, ಲಯ, ಸ್ಥಿತಿ, ಸೃಷ್ಟಿ) - ಇವೆಲ್ಲವುಗಳು ಪಂಚಾಕ್ಷರ ಮಹಾಮಂತ್ರದ ಪಂಚವರ್ಣಗಳಿಂದ ಬೋಧ್ಯಗಳಾಗಿವೆ (ನಮಃ ಶಿವಾಯ ಎಂಬ ಪಂಚಾಕ್ಷರಗಳೇ ಈ ಎಲ್ಲಾ ಸೃಷ್ಟಿಗೆ ಮೂಲ ಕಾರಣ).

#ಪಂಚಧಾ ಪಂಚಧಾ ಯಾನಿ

ಪ್ರಸಿದ್ಧಾನಿ ವಿಶೇಷತಃ |

ತಾನಿ ಸರ್ವಾಣಿ ವಸ್ತೂನಿ

ಪಂಚಾಕ್ಷರಮಯಾನಿ ಹಿ || 8-16

ಈ ಪ್ರಪಂಚದಲ್ಲಿ ವಿಶೇಷವಾಗಿ ಐದು ಐದರ ಗುಂಪುಗಳಾಗಿರುವ ವಸ್ತುಗಳೆಲ್ಲವೂ ಪಂಚಾಕ್ಷರಮಯಗಳೇ ಆಗಿರುತ್ತವೆ (ಪಂಚಾಕ್ಷರ ಮಂತ್ರದಿಂದಲೇ ಪ್ರಾದುರ್ಭವಿಸಿರುತ್ತವೆ).

ಓಂಕಾರಪೂರ್ವೊ ಮಂತ್ರೋಯಮ್

ಪಂಚಾಕ್ಷರ ಮಯಃ ಪರಃ |

ಶೈವಾಗಮೇಷು ವೇದೇಷು

ಷಡಕ್ಷರ ಇತಿ ಸ್ಮೃತಃ || 8-17

ಶ್ರೇಷ್ಠವಾದ ಈ ಪಂಚಾಕ್ಷರ ಮಹಾಮಂತ್ರವು ಓಂಕಾರದಿಂದ ಕೂಡಿಕೊಂಡಾಗ ವೇದಗಳಲ್ಲಿ ಮತ್ತು ಶೈವಾಗಮಗಳಲ್ಲಿ ಷಡಕ್ಷರ ಎಂದು ಕರೆಯಲ್ಪಡುತ್ತದೆ.

#ಮಂತ್ರ ನ್ಯಾಸಾದಿ ಭೂತೇನ

ಪ್ರಣವೇನ ಮಹಾಮನೋಃ |

ಪ್ರಬೋಧ್ಯತೇ ಮಹಾದೇವಃ

ಕೇವಲಶ್ಚಿತ್ಸುಖಾತ್ಮಕಃ || 8-18

ಷಡಕ್ಷರ ಮಹಾಮಂತ್ರದ ಅಕ್ಷರಗಳು ಇರಿಸುವಿಕೆಯಲ್ಲಿ ಮೊದಲಿನ ಅಕ್ಷರವಾದ ಪ್ರಣವವೇ (ಓಂಕಾರವೇ) ಸಚ್ಚಿದಾನಂದ ಸ್ವರೂಪನಾದ ಕೇವಲ ಮಹಾದೇವನನ್ನೇ ಬೋಧಿಸುತ್ತದೆ.

ಪ್ರಣವೇನೈ ಕವರ್ಣೆನ

ಪರಬ್ರಹ್ಮ ಪ್ರಕಾಶ್ಯತೇ |

ಅದ್ವಿತೀಯಂ ಪರಾನಂದಮ್

ಶಿವಾಖ್ಯಂ ನಿಷ್ಪ್ರಪಂಚಕಮ್ || 8-19

ಅದ್ವಿತೀಯವಾದ (ಒಂದೇ ಒಂದಾದ) ಪರಮಾನಂದ ಸ್ವರೂಪವು ನಿಷ್ಪ್ರಪಂಚಕವು (ಪ್ರಾಪಂಚಿಕ ಭೇದ ಶೂನ್ಯವು) ಆದ ಶಿವನೆಂಬ ಹೆಸರಿನ ಪರಬ್ರಹ್ಮವು ಪ್ರಣವವೊಂದರಿಂದಲೇ ಪ್ರಕಾಶಿಸುತ್ತದೆ

#ಪರಮಾತ್ಮಮನುರ್ಜ್ಞೆಯಃ

ಸೋಹಂರೂಪಃ ಸನಾತನಃ |

ಜಾಯತೇ ಹಂಸಯೋರ್ ಲೋಪಾತ್

ಓಮಿತ್ಯೇಕಾಕ್ಷರೋ ಮನುಃ || 8-20

ಸೋಹಂ ಎಂಬುವುದು ಶಿವ-ಜೀವರ ಅಭೇದವನ್ನು ಬೋಧಿಸುವ ಪರಮಾತ್ಮ ರೂಪವಾದ ಮಂತ್ರವಾಗಿರುತ್ತದೆ. ಇದು ಸನಾತನ (ನಿತ್ಯ) ವಾದುದು ಆಗಿದೆ. ಮಂತ್ರದಲ್ಲಿಯ ಹಕಾರ ಮತ್ತು ಸಕಾರಗಳು ಲೋಪವಾದಾಗ ಓಂಕಾರವೆಂಬ ಏಕಾಕ್ಷರ ಮಂತ್ರವು ಪ್ರಕಟವಾಗುತ್ತದೆ

ಪ್ರಣವೇನೈವ ಮಂತ್ರೇಣ

ಬೋಧ್ಯತೇ ನಿಷ್ಕಲಃ ಶಿವಃ |

ಪಂಚಾಕ್ಷರೇಣ ಮಂತ್ರೇಣ

ಪಂಚಬ್ರಹ್ಮ ತನುಸ್ತಥಾ || 8-21

ಈ ಪ್ರಣವ (ಓಂಕಾರ) ಮಂತ್ರದಿಂದ ನಿಷ್ಕಲನಾದ ಶಿವನು ಬೋಧಿಸಲ್ಪಡುತ್ತಾನೆ. ಅದರಂತೆ ಪಂಚಾಕ್ಷರ ಮಂತ್ರದಿಂದ ಶಿವನ ಸದ್ಯೋಜಾತಾದಿ ಪಂಚಬ್ರಹ್ಮ ಸ್ವರೂಪವು ಹೇಳಲ್ಪಡುತ್ತದೆ.

#ನಿಷ್ಕಲಃ ಸಂವಿದಾಕಾರಃ

ಸಕಲೋ ವಿಶ್ವಮೂರ್ತಿಕಃ |

ಉಭಯಾತ್ಮಾ ಶಿವೋ ಮಂತ್ರೇ

ಷಡಕ್ಷರಮಯೇ ಸ್ಥಿತಃ || 8-22

ನಿಷ್ಕಲನಾದ ಶಿವನು ಸಂವಿತ್ (ಜ್ಞಾನ, ಪ್ರಜ್ಞಾ) ಸ್ವರೂಪನು ಆಗಿರುತ್ತಾನೆ. ಸಕಲನಾದ ಪಂಚಬ್ರಹ್ಮನು ವಿಶ್ವ ಸ್ವರೂಪನಾಗಿರುತ್ತಾನೆ. ಹೀಗೆ ಈ ಷಡಕ್ಷರ ಮಂತ್ರದಿಂದ ಶಿವನ ಉಭಯ ರೂಪಗಳು (ನಿಷ್ಕಲ, ಸಕಲ ಸ್ವರೂಪಗಳು, ನಿರಾಕಾರ, ಸಾಕಾರ) ನಿರೂಪಿತವಾಗುತ್ತವೆ.

ಮೂಲಂ ವಿದ್ಯಾ ಶಿವಃ ಶೈವಂ

ಸೂತ್ರಂ ಪಂಚಾಕ್ಷರ ಸ್ತಥಾ |

ಏತಾನಿ ನಾಮಧೇಯಾನಿ

ಕೀರ್ತಿತಾನಿ ಮಹಾಮನೋಃ ||8-23

#ಪಂಚಾಕ್ಷರೀಮಿಮಾಂ ವಿದ್ಯಾಮ್

ಪ್ರಣವೇನ ಷಡಕ್ಷರೀಮ್ |

ಜಪೇತ್ ಸಮಾಹಿತೋ ಭೂತ್ವಾ

ಶಿವಪೂಜಾಪರಾಯಣಃ || 8-24

ಈ ಮಹಾಮಂತ್ರಕ್ಕೆ ಮೂಲಮಂತ್ರ, ವಿದ್ಯಾಮಂತ್ರ, ಶಿವಮಂತ್ರ, ಶೈವಸೂತ್ರ ಮಂತ್ರ ಮತ್ತು ಪಂಚಾಕ್ಷರಮಂತ್ರ ಎಂಬುದಾಗಿ ಐದು ಹೆಸರುಗಳು ಪ್ರಸಿದ್ಧವಾಗಿವೆ (ಪ್ರಪಂಚದ ಮೂಲ ಕಾರಣವಾಗಿರುವುದರಿಂದ ಮೂಲಮಂತ್ರ, ಈ ಮಂತ್ರದ ಜಪದಿಂದ ಶಿವ-ಜೀವೈಕ್ಯ ವಿದ್ಯೆಯು ಪ್ರಾಪ್ತವಾಗುವುದರಿಂದ ವಿದ್ಯಾಮಂತ್ರ, ಸರ್ವರಿಗೂ ಮಂಗಲವನ್ನುಂಟು ಮಾಡುವುದರಿಂದ ಶಿವಮಂತ್ರ, ಶಿವನ ಸಂಬಂಧಿಯಾದ ಸರ್ವ ವಿಷಯಂಗಳು ಇದರಲ್ಲಿ ಸೂತ್ರರೂಪವಾಗಿ ನಿರೂಪಿತವಾಗಿರುವುದರಿಂದ ಶೈವಸೂತ್ರ ಮಂತ್ರ, ಐದು ಅಕ್ಷರಗಳಿರುವುದರಿಂದ ಪಂಚಾಕ್ಷರ ಮಂತ್ರ).

ಪ್ರಾಣಾಯಾ ಮತ್ರಯಂ ಕೃತ್ವಾ

ಪ್ರಾಙ್ಮುಖೋದಙ್ಮುಖೋಪಿ ವಾ |

ಚಿಂತಯನ್ ಹೃದಯಾಂಭೋಜೇ

ದೇವದೇವಂ ತ್ರಿಯಂಬಕಮ್ || 8-25

#ಸರ್ವಾಲಂಕಾರಸಂಯುಕ್ತಮ್

ಸಾಂಬಂ ಚಂದ್ರಾರ್ಧಶೇಖರಮ್ |

ಜಪೇದೇತಾಂ ಮಹಾವಿದ್ಯಾಮ್

ಶಿವರೂಪಾಮನನ್ಯಧೀಃ || 8-26

ಶಿವಪೂಜಾ ಪರಾಯಣನಾದ (ಶಿವಪೂಜಾನಿಷ್ಠನಾದ)ವನು ಪ್ರಣವದಿಂದ ಕೂಡಿದ ಈ ಪಂಚಾಕ್ಷರ ಮಂತ್ರವನ್ನು (ಷಡಕ್ಷರ ಮಂತ್ರವನ್ನು) ಸಮಾಧಾನಚಿತ್ತನಾಗಿ ಜಪವನ್ನು ಮಾಡಬೇಕು. (ಶಿವಪೂಜಾನಿರತನಾದವನು) ಪೂರ್ವ ಇಲ್ಲವೇ ಉತ್ತರಮುಖವಾಗಿ ಕುಳಿತು, ಮೂರು ಸಾರಿ ಪ್ರಾಣಾಯಾಮವನ್ನು ಮಾಡಬೇಕು. ಆಮೇಲೆ ತನ್ನ ಹೃದಯ ಕಮಲದಲ್ಲಿ ಸರ್ವಾಲಂಕಾರಯುಕ್ತನಾದ ಸಾಂಬ (ಉಮಾಸಮೇತ)ನಾದ, ಚಂದ್ರಧರನಾದ, ಮುಕ್ಕಣ್ಣನಾದ, ಮಂಗಲಸ್ವರೂಪನಾದ, ದೇವದೇವನಾದ ಮಹಾದೇವನನ್ನು ಧ್ಯಾನಿಸುತ್ತಾ ಅನನ್ಯವಾದ ಮನಸ್ಸಿನಿಂದ ಷಡಕ್ಷರ ಮಹಾಮಂತ್ರವನ್ನು ಜಪಿಸಬೇಕು.

ಜಪಸ್ತು ತ್ರಿವಿಧಃ ಪ್ರೋಕ್ತೋ

ವಾಚಿಕೋಪಾಂಶುಮಾನಸಃ |

ಶ್ರೂಯತೇ ಯಸ್ತು ಪಾಶ್ರ್ವಸ್ಥೈಃ

ಯಥಾ ವರ್ಣ ಸಮನ್ವಯಃ || 8-27

#ವಾಚಿಕಃ ಸ ತು ವಿಜ್ಞೇಯಃ

ಸರ್ವಪಾಪ ಪ್ರಭಂಜನಃ |

ಈಷತ್ ಸ್ಪ್ರುಷ್ಟ್ವಾ ಧರ ಪುಟಮ್

ಯೋ ಮಂದಮ್ ಅಭಿಧೀಯತೇ || 8-28

ಪಾಶ್ರ್ವಸ್ಥೈರ ಶ್ರುತಃ ಸೋಯಮ್

ಉಪಾಂಶುಃ ಪರಿಕೀರ್ತಿತಃ |

ಅಸ್ಪೃಷ್ಟ್ವಾ ಧರಮಸ್ಪಂದಿ|

ಜಿಹ್ವಾಗ್ರಂ ಯೋಂತರಾತ್ಮನಾ |

ಭಾವ್ಯತೇ ವರ್ಣರೂಪೇಣ

ಸಮಾನಸ ಇತಿ ಸ್ಮೃತಃ || 8-29

ಜಪವು ವಾಚಿಕ, ಉಪಾಂಶು ಮತ್ತು ಮಾನಸಿಕವೆಂಬುದಾಗಿ ಮೂರು ವಿಧವಾಗಿ ಹೇಳಲ್ಪಟ್ಟಿದೆ. ಸಮೀಪದ ವ್ಯಕ್ತಿಗೆ ಮಂತ್ರದ ಅಕ್ಷರಗಳು ಕೇಳುತ್ತಿದ್ದರೆ ಅದು ವಾಚಿಕ ಜಪವೆಂದು ನಿಶ್ಚಯವಾಗಿ ತಿಳಿದುಕೊಳ್ಳಬೇಕು. ಇದು ಸರ್ವಪಾಪ ನಾಶಕವಾಗಿರುತ್ತದೆ. ಎರಡೂ ತುಟಿಗಳನ್ನು ಸೂಕ್ಷ್ಮವಾಗಿ ಸ್ಪರ್ಶಿಸಿ ಸಮೀಪದ ವ್ಯಕ್ತಿಗೆ ಕೇಳದ ಹಾಗೆ ನಿಧಾನವಾಗಿ ಮಾಡುವ ಜಪವೇ ಉಪಾಂಶು ಜಪವೆಂದು ಕೀರ್ತಿಸಲ್ಪಡುತ್ತದೆ. ತುಟಿ ಹಾಗೂ ನಾಲಿಗೆಯ ತುದಿಯನ್ನು ಸ್ಪಂದಿಸದೆ (ಅಲ್ಲಾಡಿಸದೆ) ತನ್ನೊಳಗೆ ಮನಸ್ಸನ್ನು ಮಂತ್ರಾಕ್ಷರ ರೂಪದಲ್ಲಿ ಭಾವಿಸುವುದೇ ಮಾನಸಿಕ ಜಪವು.

#ಯಾವಂತಃ ಕರ್ಮ ಯಜ್ಞಾದ್ಯಾ

ವ್ರತದಾನ ತಪಾಂಸಿ ಚ |

ಸರ್ವೆ ತೇ ಜಪಯಜ್ಞಸ್ಯ

ಕಲಾಂ ನಾರ್ಹಂತಿ ಷೋಡಶೀಮ್ || 8-30

ವ್ರತ, ದಾನ ಮತ್ತು ತಪಸ್ಸುಗಳೆಂಬ ಎಷ್ಟು ಕರ್ಮಯಜ್ಞಗಳಿರುವುವೋ ಅವೆಲ್ಲವೂ ಜಪಯಜ್ಞದ ಷೋಡಶಭಾಗಕ್ಕೂ ಸಮಾನವಾಗಲಾರದು (16ನೆಯ ಒಂದು ಭಾಗಕ್ಕೂ ಸಮನಾಗುವುದಿಲ್ಲ).

ಮಾಹಾತ್ಮ್ಯಂ ವಾಚಿಕಸ್ಯೈತತ್

ಜಪಯಜ್ಞಸ್ಯ ಕೀರ್ತಿತಮ್ |

ತಸ್ಮಾಚ್ಛತಗುಣೋಪಾಂಶುಃ

ಸಹಸ್ರೋ ಮಾನಸಃ ಸ್ಮೃತಃ|31

ವಾಚಿಕ ಜಪಯಜ್ಞದ ಮಹಾತ್ಮ್ಯವು ಮೊದಲು ಹೇಳಲ್ಪಟ್ಟಿತು. ವಾಚಿಕ ಜಪದ ನೂರುಪಾಲು ಹೆಚ್ಚು ಫಲದಾಯಕವಾದದ್ದು ಉಪಾಂಶು ಜಪವು. ಇನ್ನು ಸಾವಿರ ಪಾಲು ಹೆಚ್ಚು ಫಲದಾಯಕವಾದದ್ದು ಮಾನಸಿಕ ಜಪವೆಂದು ಹೇಳಲಾಗಿದೆ.

#ವಾಚಿಕಾತ್ ತದುಪಾಂಶೋಶ್ಚ

ಜಪಾದಸ್ಯ ಮಹಾಮನೋಃ |

ಮಾನಸೋ ಹಿ ಜಪಃ ಶ್ರೇಷ್ಠೋ

ಘೋರಸಂಸಾರನಾಶಕಃ || 8-32

(ಷಡಕ್ಷರ ಮಹಾಮಂತ್ರದ) ವಾಚಿಕ ಜಪ ಮತ್ತು ಉಪಾಂಶು ಜಪಕ್ಕಿಂತಲೂ ಘೋರ ಸಂಸಾರನಾಶಕವಾದ ಮಾನಸಿಕ ಜಪವೇ ನಿಶ್ಚಯವಾಗಿ ಶ್ರೇಷ್ಠವಾದುದು.

ಏತೇಷ್ವೇಕೇನ ವಿಧಿನಾ

ಯಥಾಭಾವಂ ಯಥಾಕ್ರಮಮ್ |

ಜಪೇತ್ ಪಂಚಾಕ್ಷರೀಮೇತಾಮ್

ವಿದ್ಯಾಂ ಪಾಶವಿಮುಕ್ತಯೇ || 8-33

ಈ ಮೇಲೆ ಹೇಳಿದ ವಿಧಿಗಳಲ್ಲಿ ಕ್ರಮವಾಗಿ ಒಂದೊಂದು ವಿಧಿಯಿಂದ ಭಾವಪೂರ್ಣವಾಗಿ, ಪಾಶದ ವಿಮುಕ್ತಿಗಾಗಿ (ಮಲ, ಮಾಯಾ, ಕರ್ಮಪಾಶಗಳ ನಿವೃತ್ತಿಗಾಗಿ) ಈ ಪಂಚಾಕ್ಷರೀ ವಿದ್ಯೆಯನ್ನು (ಮಂತ್ರವನ್ನು) ಜಪಿಸಬೇಕು.

#ಅನೇನ ಮೂಲಮಂತ್ರೇಣ

ಶಿವಲಿಂಗಂ ಪ್ರಪೂಜಯೇತ್ |

ನಿತ್ಯಂ ನಿಯಮಸಂಪನ್ನಃ

ಪ್ರಯತಾತ್ಮಾ ಶಿವಾತ್ಮಕಃ || 8-34

ನಿಯಮ ಸಂಪನ್ನನಾಗಿ (ಯಮ ನಿಯಮಾದಿಗಳಿಂದ ಕೂಡಿದವನಾಗಿ), ಪ್ರತಿನಿತ್ಯವೂ ಶಿವಭಾವಸಂಪನ್ನನಾಗಿ ಪ್ರಯತ್ನ ಪೂರ್ವಕ ಈ ಮೂಲಮಂತ್ರದಿಂದ (ಪಂಚಾಕ್ಷರ ಮಂತ್ರದಿಂದ) ತನ್ನ ಶಿವಲಿಂಗವನ್ನು (ಇಷ್ಟಲಿಂಗವನ್ನು) ಪೂಜಿಸಬೇಕು.

ಭಕ್ತ್ಯಾ ಪಂಚಾಕ್ಷರೇಣೈವ

ಯಃ ಶಿವಂ ಸಕೃದರ್ಚಯೇತ್ |

ಸೋಪಿ ಗಚ್ಛೇಚ್ಛಿವಸ್ಥಾನಮ್

ಮಂತ್ರಸ್ಯಾಸ್ಯೈವ ಗೌರವಾತ್ || 8-35

ಭಕ್ತಿಯುತನಾಗಿ ಯಾರು ಈ ಪಂಚಾಕ್ಷರ ಮಂತ್ರದಿಂದಲೇ ಶಿವನನ್ನು (ಇಷ್ಟಲಿಂಗವನ್ನು) ಒಂದು ಬಾರಿಯಾದರೂ ಪೂಜಿಸುವರೋ ಅವರು ಈ ಮಂತ್ರದ ಮಹಿಮೆಯಿಂದ ಶಿವಲೋಕವನ್ನು ಹೊಂದುವರು.

#ಅಬ್ಭಕ್ಷಾ ವಾಯುಭಕ್ಷಾಶ್ಚ

ಯೇ ಚಾನ್ಯೇ ವ್ರತ ಕರ್ಷಿತಾಃ |

ತೇಷಾಮೇತೈವ್ರತೈರ್ನಾಸ್ತಿ

ಶಿವಲೋಕಸಮಾಗಮಃ || 8-36

ಅಬ್ಭಕ್ಷಾ (ಜಲಹಾರಿಗಳಾಗಿ), ವಾಯು ಆಹಾರಿಗಳಾಗಿ ಯಾರು ಬೇರೆ ಬೇರೆ ವ್ರತಗಳಿಂದ (ಕೃಚ್ಛ್ರ ಚಾಂದ್ರಾಯಣಾದಿ ವ್ರತಗಳಿಂದ) ಕೃಶಗೊಂಡವರಿಗೆ ಅವರ ಆ ವ್ರತಗಳಿಂದ ಶಿವಲೋಕ ಪ್ರಾಪ್ತಿಯು ಆಗುವುದಿಲ್ಲ.

ತಸ್ಮಾತ್ತಪಾಂಸಿ ಯಜ್ಞಾಶ್ಚ

ವ್ರತಾನಿ ನಿಯಮಾಸ್ತಥಾ |

ಪಂಚಾಕ್ಷರಾರ್ಚನಸ್ಯೈತೇ

ಕೋಟ್ಯಂಶೇನಾಪಿ ನೋ ಸಮಾಃ || 8-37

ಆದ್ದರಿಂದ ತಪಸ್ಸು, ಯಜ್ಞ, ವ್ರತ ಹಾಗೂ ನಿಯಮಾದಿಗಳ ಫಲಗಳು ಪಂಚಾಕ್ಷರ ಮಹಾಮಂತ್ರದಿಂದ ಶಿವನನ್ನು ಪೂಜಿಸಿದ ಫಲದ ಕೋಟಿಯ ಒಂದು ಭಾಗಕ್ಕೆ ಸಮವಾಗಲಾರದು.

#ಅಶುದ್ಧೋ ವಾ ವಿಶುದ್ಧೋ ವಾ

ಸಕೃತ್ ಪಂಚಾಕ್ಷರೇಣ ಯಃ |

ಪೂಜಯೇತ್ ಪತಿತೋ ವಾಪಿ

ಮುಚ್ಯತೇ ನಾತ್ರ ಸಂಶಯಃ || 8-38

ಅಶುದ್ಧನೇ ಆಗಿರಲಿ, ಪರಿಶುದ್ಧನೇ ಆಗಿರಲಿ ವ್ರತಭ್ರಷ್ಟನಾದ ಪತಿತನೇ ಆಗಿರಲಿ, ಒಂದು ಸಾರಿ ಈ ಪಂಚಾಕ್ಷರ ಮಂತ್ರವನ್ನು ಪಠಿಸುತ್ತಾ ಶಿವಲಿಂಗ (ಇಷ್ಟಲಿಂಗ)ವನ್ನು ಪೂಜಿಸಿದರೆ ಅವನು ಮುಕ್ತನಾಗುವುದರಲ್ಲಿ ಸಂಶಯವಿಲ್ಲ.

ಸಕೃದುಚ್ಚಾರಮಾತ್ರೇಣ

ಪಂಚಾಕ್ಷರಮಹಾಮನೋಃ |

ಸರ್ವೆಷಾಮಪಿ ಜಂತೂನಾಮ್

ಸರ್ವಪಾಪಕ್ಷಯೋ ಭವೇತ್ || 8-39

ಈ ಪಂಚಾಕ್ಷರ ಮಹಾಮಂತ್ರವನ್ನು ಒಂದೇ ಒಂದು ಸಾರಿ ಉಚ್ಚರಿಸಿದರೂ ಎಲ್ಲಾ ಜೀವಿಗಳ ಎಲ್ಲ ವಿಧ ಪಾಪಗಳು ನಾಶವಾಗುತ್ತವೆ.

#ಅನ್ಯೇಪಿ ಬಹವೋ ಮಂತ್ರಾ

ವಿದ್ಯಂತೇ ಸಕಲಾಗಮೇ |

ಭೂಯೋ ಭೂಯಃ ಸಮಭ್ಯಾಸಾತ್

ಪುರುಷಾರ್ಥಪ್ರದಾಯಿನಃ || 8-40

ಸಕಲ ಶಿವಾಗಮಗಳಲ್ಲಿ ಬೇರೆ ಬೇರೆ ಪ್ರಕಾರದ ಅನೇಕ ಮಂತ್ರಗಳು ಇವೆ. ಅವುಗಳು ಮೇಲಿಂದ ಮೇಲೆ ಜಪಾಭ್ಯಾಸವನ್ನು ಮಾಡಿದಾಗ ಮಾತ್ರ ಪುರುಷಾರ್ಥ (ಧರ್ಮ, ಅರ್ಥ, ಕಾಮ, ಮೋಕ್ಷ)ಗಳನ್ನು ಕೊಡುವಂತಹುಗಳಾಗಿವೆ.

ಏಷ ಮಂತ್ರೋ ಮಹಾಶಕ್ತಿಃ

ಈಶ್ವರಪ್ರತಿಪಾದಕಃ |

ಸಕೃದುಚ್ಚಾರಣಾದೇವ

ಸರ್ವಸಿದ್ಧಿಪ್ರದಾಯಕಃ || 8-41

ಈಶ್ವರನನ್ನು ಪ್ರತಿಪಾದಿಸುವ (ಈಶ್ವರ ರೂಪವನ್ನು ಹೇಳುವ) ಈ ಪಂಚಾಕ್ಷರ ಮಹಾಮಂತ್ರವು ಮಹಾಶಕ್ತಿಶಾಲಿಯಾದುದಾಗಿದೆ. ಅಂತೆಯೇ ಒಂದೇ ಸಾರಿ ಉಚ್ಚರಿಸಿದರೂ ಸಕಲ ಸಿದ್ಧಿಗಳನ್ನು ಕೊಡುವಂತಹುದ್ದಾಗಿದೆ.

#ಪಂಚಾಕ್ಷರೀಂ ಸಮುಚ್ಚಾರ್ಯ

ಪುಷ್ಪಂ ಲಿಂಗೇ ವಿನಿಕ್ಷಿಪೇತ್ |

ಯಸ್ತಸ್ಯ ವಾಜಪೇಯಾನಾಮ್

ಸಹಸ್ರಫಲಮಿಷ್ಯತೇ || 8-42

ಈ ಪಂಚಾಕ್ಷರ ಮಹಾಮಂತ್ರವನ್ನು ಉಚ್ಚರಿಸುತ್ತಾ ಒಂದು ಪುಷ್ಪವನ್ನು ಶಿವಲಿಂಗಕ್ಕೆ ಸಮರ್ಪಿಸಿದರೆ ವಾಜಪೇಯಿ ಯಾಗದ ಸಾವಿರ ಪಾಲು ಹೆಚ್ಚು ಫಲವು ಪ್ರಾಪ್ತವಾಗುತ್ತದೆ.

ಅಗ್ನಿಹೋತ್ರಂ ತ್ರಯೋ ವೇದಾ

ಯಜ್ಞಾಶ್ಚ ಬಹುದಕ್ಷಿಣಾಃ |

ಪಂಚಾಕ್ಷರಜಪಸ್ಯೈತೇ

ಕೋಟ್ಯಂಶೇನಾಪಿ ನೋ ಸಮಾಃ || 8-43

ಪ್ರತಿನಿತ್ಯ ಮಾಡುವ ಅಗ್ನಿಹೋತ್ರ ಯಾಗ, ಮೂರು ವೇದಗಳ ಅಧ್ಯಯನ, ಬಹುದಕ್ಷಿಣೆಯುಳ್ಳ ಜ್ಯೋತಿಷ್ಟೋಮಾದಿ ಯಾಗಗಳ ಫಲಗಳು ಪಂಚಾಕ್ಷರೀ ಮಂತ್ರದಿಂದ ಪ್ರಾಪ್ತವಾಗುವ ಫಲದ ಕೋಟಿಯ ಒಂದು ಭಾಗಕ್ಕೂ ಸಮವಾಗಲಾರವು.

#ಪುರಾ ಸಾನಂದಯೋಗೀಂದ್ರಃ

ಶಿವಜ್ಞಾನಪರಾಯಣಃ |

ಪಂಚಾಕ್ಷರಂ ಸಮುಚ್ಚಾರ್ಯ

ನಾರಕಾನುದತಾರಯತ್ || 8-44

ಪೂರ್ವಕಾಲದಲ್ಲಿ ಶಿವಜ್ಞಾನ ಪರಾಯಣನಾದ (ಶಿವಜ್ಞಾನ ನಿಷ್ಠನಾದ) ಸಾನಂದನೆಂಬ ಯೋಗಿವರ್ಯನು ಪಂಚಾಕ್ಷರ ಮಹಾಮಂತ್ರವನ್ನು ಉಚ್ಚರಿಸಿ ನರಕದಲ್ಲಿರುವವರನ್ನು ಉದ್ಧರಿಸಿದನು.

ಸಿದ್ಧ್ಯಾ ಪಂಚಾಕ್ಷರಸ್ಯಾಸ್ಯ

ಶತಾನಂದಃ ಪುರಾ ಮುನಿಃ |

ನರಕಂ ಸ್ವರ್ಗಮಕರೋತ್

ಸಂಗಿರಸ್ಯಾಪಿ ಪಾಪಿನಃ || 8-45

ಪೂರ್ವಕಾಲದಲ್ಲಿ ಶತಾನಂದನೆಂಬ ಮುನಿಯು ಈ ಪಂಚಾಕ್ಷರಮಂತ್ರದ ಸಿದ್ಧಿಯಿಂದ ಸಂಗಿರನೆಂಬ ಪಾಪಿಯ ಸಲುವಾಗಿ ನರಕವನ್ನೇ ಸ್ವರ್ಗವನ್ನಾಗಿ ಮಾಡಿದನು.

#ಉಪಮನ್ಯುಃ ಪುರಾ ಯೋಗೀ

ಮಂತ್ರೇಣಾನೇನ ಸಿದ್ಧಿಮಾನ್ |

ಲಬ್ಧವಾನ್ ಪರಮೇಶಾನಾತ್

ಶೈವಶಾಸ್ತ್ರಪ್ರವಕ್ತೃತಾಮ್ || 8-46

ಈ ಪಂಚಾಕ್ಷರ ಮಹಾಮಂತ್ರದಿಂದ ಸಿದ್ಧಿಯನ್ನು ಪಡೆದ ಉಪಮನ್ಯು ಎಂಬ ಹೆಸರಿನ ಯೋಗಿಯು ಪೂರ್ವಕಾಲದಲ್ಲಿ ಶಿವನಿಂದ ಶೈವಶಾಸ್ತ್ರದ ಆಚಾರ್ಯ ಪದವಿಯನ್ನು ಪಡೆದುಕೊಂಡನು.

ವಸಿಷ್ಠವಾಮದೇವಾದ್ಯಾ

ಮುನಯೋ ಮುಕ್ತಕಿಲ್ಬಿಷಾಃ |

ಮಂತ್ರೇಣಾನೇನ ಸಂಸಿದ್ಧಾ

ಮಹಾತೇಜಸ್ವಿನೋಭವನ್ || 8-47

ಈ ಪಂಚಾಕ್ಷರ ಮಹಾಮಂತ್ರದ ಜಪದಿಂದ ವಸಿಷ್ಠ ವಾಮದೇವಾದಿ ಮುನಿಗಳು ಪಾಪಮುಕ್ತರಾಗಿ ಅನೇಕ ಸಿದ್ಧಿಗಳನ್ನು ಪಡೆದುಕೊಂಡರಲ್ಲದೆ ಮಹಾತೇಜಸ್ವಿಗಳೂ (ಶಾಪಾನುಗ್ರಹ ಸಮರ್ಥರೂ) ಆಗಿದ್ದರು.

#ಬ್ರಹ್ಮಾದೀನಾಂ ಚ ದೇವಾನಾಮ್

ಜಗತ್ಸೃಷ್ಟ್ಯಾದಿಕರ್ಮಣಿ |

ಮಂತ್ರಸ್ಯಾಸ್ಯೈವ ಮಾಹಾತ್ಮ್ಯಾತ್

ಸಾಮಥ್ರ್ಯಮುಪಜಾಯತೇ || 8-48

ಬ್ರಹ್ಮ, ವಿಷ್ಣು ಮೊದಲಾದ ದೇವತೆಗಳು ಈ ಪಂಚಾಕ್ಷರ ಮಹಾಮಂತ್ರದ ಜಪದ ಮಹಾತ್ಮ್ಯದಿಂದ ಈ ಜಗತ್ತಿನ ಸೃಷ್ಟಿ, ಸ್ಥಿತಿ ಮತ್ತು ಸಂಹಾರ ಕ್ರಿಯೆಗಳನ್ನು ಮಾಡಲು ಸಮರ್ಥರಾಗುತ್ತಾರೆ

ಕಿಮಿಹ ಬಹುಭಿರುಕ್ತೈರ್

ಮಂತ್ರಮೇವಂ ಮಹಾತ್ಮಾ

ಪ್ರಣವ ಸಹಿತಮಾದೌ

ಯಸ್ತು ಪಂಚಾಕ್ಷರಾಖ್ಯಮ್ |

#ಜಪತಿ ಪರಮಭಕ್ತ್ಯಾ

ಪೂಜಯನ್ ದೇವದೇವಮ್

ಸಗತ ದುರಿತಬಂಧೋ

ಮೋಕ್ಷಲಕ್ಷ್ಮೀಂ ಪ್ರಯಾತಿ || 8-49

ಇಲ್ಲಿ ಪಂಚಾಕ್ಷರ ಮಂತ್ರದ ವಿಷಯವಾಗಿ ಹೆಚ್ಚಿಗೆ ಹೇಳುವುದರಿಂದ ಏನು ಪ್ರಯೋಜನ? ಯಾವ ಮಹಾತ್ಮನು ದೇವನಾದ ಮಹಾದೇವನನ್ನು ಪೂಜಿಸುತ್ತಾ ಪರಮ ಭಕ್ತಿಯಿಂದ ಪ್ರಣವಾಕ್ಷರವೇ ಮೊದಲುಳ್ಳ ಪಂಚಾಕ್ಷರ ಮಹಾಮಂತ್ರವನ್ನು (ಓಂ ನಮಃ ಶಿವಾಯ ಮಂತ್ರವನ್ನು) ಜಪಿಸುತ್ತಾನೆ, ಅವನು ದುರಿತ (ಪಾಪ)ಬಂಧನದಿಂದ ಬಿಡುಗಡೆಯಾಗಿ ಮೋಕ್ಷಲಕ್ಷ್ಮಿಯನ್ನು ಪಡೆದುಕೊಳ್ಳುತ್ತಾನೆ.

ಓಂ ತತ್ಸತ್ ಇತಿ

ಶ್ರೀ ಶಿವಗೀತೇಷು ಸಿದ್ಧಾಂತಾಗಮೇಷು ಶಿವಾದ್ವೈತ ವಿದ್ಯಾಯಾಂ ಶಿವಯೋಗಶಾಸ್ತ್ರೇ

ಶ್ರೀ ರೇಣುಕಾಗಸ್ತ್ಯಸಂವಾದೇ

ವೀರಶೈವಧರ್ಮ ನಿರ್ಣಯೇ ಶಿವಯೋಗಿ ಶಿವಾಚಾರ್ಯ ವಿರಚಿತೇ

ಶ್ರೀಸಿದ್ಧಾಂತಶಿಖಾಮಣೌ ಭಕ್ತಸ್ಥಲೇ ಪಂಚಾಕ್ಷರ ಜಪಸ್ಥಲಪ್ರಸಂಗೋ ನಾಮ

ಅಷ್ಟಮಃ ಪರಿಚ್ಛೇದಃ ||

ಓಂ ತತ್ಸತ್ ಇತಿ ಶ್ರೀ ಶಿವನಿಂದ ಉಪದೇಶಿಸಲ್ಪಟ್ಟು ಶ್ರೀ ಸಿದ್ಧಾಂತಾ ಗಮಗಳಲ್ಲಿಯ ಶಿವಾದ್ವೈತವಿದ್ಯಾರೂಪವೂ, ಶಿವಯೋಗ ಶಾಸ್ತ್ರವೂ, ಶ್ರೀ ರೇಣುಕಾಗಸ್ತ್ಯಸಂವಾದ ರೂಪವೂ, ಶ್ರೀ ಶಿವಯೋಗಿ ಶಿವಾಚಾರ್ಯವಿರಚಿತವೂ ಆದ ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿ ಭಕ್ತಸ್ಥಲದಲ್ಲಿಯ ಪಂಚಾಕ್ಷರಜಪಸ್ಥಲ ಪ್ರಸಂಗವೆಂಬ ಹೆಸರಿನ ಎಂಟನೆಯ ಪರಿಚ್ಛೇದವು ಮುಗಿದುದು