ಸಪ್ತಮಃ ಪರಿಚ್ಛೇದಃ -
ಅಥ ಭಸ್ಮಧಾರಣಸ್ಥಲಮ್ (45 ಶ್ಲೋಕಗಳು)
ಭಸ್ಮಧಾರಣ ಸಂಯುಕ್ತಃ
ಪವಿತ್ರೋ ನಿಯತಾಶಯಃ |
ಶಿವಾಭಿಧಾನಂ ಯತ್ಪ್ರೋಕ್ತಮ್
ಭಾಸನಾದ್ಭಸಿತಂ ತಥಾ || 7-1
ಭಸ್ಮಧಾರಣೆಯಿಂದ ಕೂಡಿದವನು ಪವಿತ್ರನೂ, ಸಂಯಮ ಚಿತ್ತವುಳ್ಳವನೂ ಆಗುವನು.
ಯಾವುದು ಶಿವನ ಅಭಿಧಾನವಾಗಿ (ಶಿವನ ಹೆಸರಾಗಿ) ಹೇಳಲ್ಪಟ್ಟಿದೆಯೋ
ಅದು ಶಿವತತ್ತ್ವವನ್ನು ಪ್ರಕಾಶಗೊಳಿಸುವುದರಿಂದ ಭಸಿತ ವೆಂತಲೂ ಕರೆಯಲ್ಪಡುತ್ತದೆ.
#ಮಹಾಭಸ್ಮೇತಿ ಸಂಚಿಂತ್ಯ
ಮಹಾದೇವಂ ಪ್ರಭಾಮಯಮ್ |
ವರ್ತಂತೇ ಯೇ ಮಹಾಭಾಗಾಃ
ಮುಖ್ಯಾಸ್ತೇ ಭಸ್ಮಧಾರಿಣಃ || 7-2
ಪ್ರಭಾಮಯವಾದ (ಪ್ರಕಾಶ ರೂಪನಾದ) ಮಹದೇವನನ್ನು ಮಹಾಭಸ್ಮವೆಂದು
ಭಾವಿಸಿ ಯಾರು ವರ್ತಿಸುವರೋ ಅಂತಹ ಮಹಾನುಭಾವರು (ಮಹಾನುಭಾವಿಗಳು) ಮುಖ್ಯರಾದ ಭಸ್ಮಧಾರಿಗಳೆಂದು ಕರೆಯಲ್ಪಡುತ್ತಾರೆ. ಇವರೇ ನಿರುಪಾಧಿಕ ಭಸ್ಮಧಾರಿಗಳು.
ಶಿವಾಗ್ನ್ಯಾದಿಸಮುತ್ಪನ್ನಮ್
ಮಂತ್ರನ್ಯಾಸಾದಿಯೋಗತಃ |
ತದುಪಾಧಿಕಮಿತ್ಯಾಹುಃ
ಭಸ್ಮತಂತ್ರ ವಿಶಾರದಾಃ || 7-3
ಪಂಚಬ್ರಹ್ಮ ಮಂತ್ರಗಳ ನ್ಯಾಸಾದಿಗಳ ಸಂಬಂಧದಿಂದ
ಶಿವಮಂತ್ರ ಸಂಸ್ಕೃತವಾದ (ಸಂಸ್ಕಾರಯುತವಾದ) ಅಗ್ನಿಯಲ್ಲಿ ಉತ್ಪನ್ನವಾದ ಭಸ್ಮವನ್ನು ತಂತ್ರ ವಿಶಾರದರು (ಶಿವಾಗಮ ಪ್ರವೀಣರು)
ಸೋಪಾಧಿಕ ಭಸ್ಮವೆಂದು ಕರೆಯುತ್ತಾರೆ.
#ವಿಭೂತಿರ್ ಭಸಿತಂ ಭಸ್ಮ
ಕ್ಷಾರಂ ರಕ್ಷೇತಿ ಭಸ್ಮನಃ |
ಏತಾನಿ ಪಂಚನಾಮಾನಿ
ಹೇತುಭಿಃ ಪಂಚಭಿರ್ ಭೃಶಮ್ || 7-4
ನಿರ್ದಿಷ್ಟವಾದ ಐದು ಕಾರಣಗಳಿಂದ ಈ ಭಸ್ಮಕ್ಕೆ ವಿಭೂತಿ, ಭಸಿತ, ಭಸ್ಮ,
ಕ್ಷಾರ ಮತ್ತು ರಕ್ಷಾ ಎಂಬುದಾಗಿ ಐದು ಹೆಸರುಗಳು ಬಂದಿರುತ್ತವೆ.
ವಿಭೂತಿರ್ ಭೂತಿ ಹೇ ತತ್ ವಾತ್
ಭಸಿತಂ ತತ್ತ್ವಭಾಸನಾತ್ |
ಪಾಪಾನಾಂ ಭರ್ತಸ್ ನಾದ್ಭಸ್ಮ
ಕ್ಷರಣಾತ್ ಕ್ಷಾರಮಾಪದಾಮ್ |
ರಕ್ಷಣಾತ್ ಸರ್ವಭೂತೇಭ್ಯೋ
ರಕ್ಷೇತಿ ಪರಿಗೀಯತೇ || 7-5
ಭೂತಿಗೆ (ಅಣಿಮಾದಿ ಐಶ್ವರ್ಯಕ್ಕೆ) ಕಾರಣವಾಗಿರುವುದರಿಂದ ವಿಭೂತಿಯೆಂದೂ,
ಶಿವತತ್ತ್ವವನ್ನು ಪ್ರಕಾಶಿಸುವುದರಿಂದ ಭಸಿತವೆಂದೂ, ಪಾಪಗಳನ್ನು ಭತ್ರ್ಸನ
ಮಾಡುವುದರಿಂದ (ಬೆದರಿಸುವುದರಿಂದ) ಭಸ್ಮವೆಂದೂ, ಆಪತ್ತುಗಳನ್ನು ನಾಶಮಾಡುವುದರಿಂದ
ಕ್ಷಾರವೆಂದೂ ಮತ್ತು ಎಲ್ಲ ಪ್ರಾಣಿಗಳಿಂದ ರಕ್ಷಣೆ ಮಾಡುವುದರಿಂದ ರಕ್ಷಾ ಎಂಬುದಾಗಿ ಹೇಳಲ್ಪಡುತ್ತದೆ.
#ನಂದಾ ಭದ್ರಾ ಚ ಸುರಭಿಃ
ಸುಶೀಲಾ ಸುಮನಾ ಸ್ತಥಾ |
ಪಂಚ ಗಾವೋ ವಿಭೋರ್ಜಾತಾಃ
ಸದ್ಯೋಜಾತಾದಿ ವಕ್ತ್ರತಃ || 7-6
ವಿಭುವಾದ ಶಿವನ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಮತ್ತು
ಈಶಾನಗಳೆಂಬ ಪಂಚಮುಖಗಳಿಂದ ಕ್ರಮವಾಗಿ ನಂದಾ, ಭದ್ರಾ, ಸುರಭಿ, ಸುಶೀಲಾ ಮತ್ತು ಸುಮನಾ
ಎಂಬ ಐದು ಹೆಸರಿನ ಗೋವುಗಳು ಪ್ರಾದುರ್ಭವಿಸಿದವು (ಪ್ರಕಟಗೊಂಡವು).
ಕಪಿಲಾ ಕೃಷ್ಣಾ ಧವಲಾ
ಧೂಮ್ರಾ ರಕ್ತಾ ತಥೈವ ಚ |
ನಂದಾ ದೀನಾಂ ಗವಾಂ ವರ್ಣಾಃ
ಕ್ರಮೇಣ ಪರಿ ಕೀರ್ತಿ ತಾಃ || 7-7
ಕಪಿಲಾ ಕೃಷ್ಣಾ ಧವಲಾ ಮೇಲೆ ಹೇಳಿದ ನಂದಾ, ಭದ್ರಾ
ಮುಂತಾದ ಪಂಚಗೋವುಗಳು ಕ್ರಮವಾಗಿ ಕಪಿಲ (ಗೋ|||ರೋಚನ),
ಕೃಷ್ಣ (ಕಪ್ಪು), ಧವಳ (ಬಿಳಿ), ಧೂಮ್ರಾ (ಬೂದ), ರಕ್ತ (ಕೆಂಪು) ವರ್ಣದವುಗಳಾಗಿರುತ್ತವೆ.
ಸದ್ಯೋಜಾತಾ ದಿ ವಿಭೂತಿಶ್ಚ
ವಾಮಾದ್ಭಸಿತ ಮೇವ ಚ || 7-8
#ಅಘೋರಾದ್ಭಸ್ಮ ಸಂಜಾತಮ್
ತತ್ಪುರುಷಾತ್ ಕ್ಷಾರಮೇವ ಚ |
ರಕ್ಷಾ ಚೇಶಾನವಕ್ತ್ರಾಚ್ಚ
ನಂದಾದಿದ್ವಾರ ತೋಭವತ್ || 7-9
ಧಾರಯೇನ್ನಿತ್ಯ ಕಾರ್ಯೇಷು
ವಿಭೂತಿಂ ಚ ಪ್ರಯತ್ನತಃ |
ನೈಮಿತ್ತಿಕೇಷು ಭಸಿತಮ್
ಕ್ಷಾರಂ ಕಾಮ್ಯೇಷು ಸರ್ವದಾ || 7-10
ಸದ್ಯೋಜಾತ ಮುಖದಿಂದ ಉಂಟಾದ ನಂದಾಗೋವಿನಿಂದ ವಿಭೂತಿಯು,
ವಾಮದೇವ ಮುಖದಿಂದ ಉಂಟಾದ ಭದ್ರಾಗೋವಿನಿಂದ ಭಸಿತವು, ಅಘೋರ
ಮುಖದಿಂದ ಉಂಟಾದ ಸುರಭಿ ಗೋವಿನಿಂದ ಭಸ್ಮವು, ತತ್ಪುರುಷ
ಮುಖದಿಂದ ಉಂಟಾದ ಸುಶೀಲಾ ಗೋವಿನಿಂದ ಕ್ಷಾರವೂ ಮತ್ತು ಈಶಾನ
ಮುಖದಿಂದ ಜನಿಸಿದ ಸುಮನಾ ಗೋವಿನಿಂದ ರಕ್ಷೆಯು ಉಂಟಾಯಿತು.
#ಪ್ರಾಯಶ್ಚಿತ್ತೇಷು ಸರ್ವೆಷು
ಭಸ್ಮ ನಾಮ ಯಥಾವಿಧಿ |
ರಕ್ಷಾ ಚ ಮೋಕ್ಷ ಕಾರ್ಯೆಷು
ಪ್ರಯೋಕ್ತವ್ಯಾ ಸದಾ ಬುಧೈಃ || 7-11
ನಿತ್ಯಕರ್ಮಗಳಲ್ಲಿ ವಿಭೂತಿಯನ್ನು, ನೈಮಿತ್ತಿಕ ಕರ್ಮಗಳಲ್ಲಿ ಭಸಿತವನ್ನು ಮತ್ತು
ಕಾಮ್ಯಕರ್ಮಗಳಲ್ಲಿ ಯಾವಾಗಲೂ ಪ್ರಯತ್ನಪೂರ್ವಕವಾಗಿ ಕ್ಷಾರವನ್ನು ಧರಿಸಿಕೊಳ್ಳಬೇಕು.
ಎಲ್ಲ ವಿಧವಾದ ಪ್ರಾಯಶ್ಚಿತ್ತ ಕರ್ಮಗಳಲ್ಲಿ ಭಸ್ಮವನ್ನು ಮತ್ತು ಮೋಕ್ಷ ಕಾರ್ಯಗಳಲ್ಲಿ
ರಕ್ಷೆಯನ್ನು ಪಂಡಿತರು ವಿಧಿವತ್ತಾಗಿ ಯಾವಾಗಲೂ ಪ್ರಯೋಗಿಸಬೇಕು.
ನಂದಾದೀನಾಂ ತು ಯೇ ವರ್ಣಾಃ
ಕಪಿಲಾದ್ಯಾಃ ಪ್ರ ಕೀರ್ತಿ ತಾಃ |
ತ ಏವ ವರ್ಣಾ ವಿಖ್ಯಾತಾ
ಭೂತ್ಯಾದೀನಾಂ ಯಥಾಕ್ರಮಮ್ |7-12
#ಭಸ್ಮೋತ್ಪಾದನಮ್ ಉದ್ದಿಷ್ಟಮ್
ಚತುರ್ಧಾ ತಂತ್ರ ವೇದಿಭಿಃ |
ಕಲ್ಪಂಚೈವಾನು ಕಲ್ಪಂ ತು-
ಉಪಕಲ್ಪ ಮ ಕಲ್ಪಕಮ್ || 7-13
ಏಷಾಮಾದಿಮಮ್ ಉತ್ಕೃಷ್ಟಮ್
ಅನ್ಯತ್ ಸರ್ವಮ ಭಾ ವತಃ |
ಯಥಾ ಶಾಸ್ತ್ರೋಕ್ತ ವಿಧಿನಾ
ಗೃಹೀತ್ವಾ ಗೋಮಯಂ ನವಮ್ |14
ನಂದಾದಿ ಗೋವುಗಳಿಗೆ ಯಾವ ಕಪಿಲಾದಿ ವರ್ಣಗಳು ಹೇಳಲಾಗಿದೆಯೋ ಅವೇ ವರ್ಣಗಳೇ ಕ್ರಮವಾಗಿ ವಿಭೂತ್ಯಾದಿಗಳಿಗೂ ಹೇಳಲಾಗಿದೆ.
ತಂತ್ರಜ್ಞಾನಿಗಳು (ಆಗಮ ವಿಶಾರದರು) ಭಸ್ಮದ ಉತ್ಪಾದನೆಯನ್ನು ಕಲ್ಪ, ಅನುಕಲ್ಪ, ಉಪಕಲ್ಪ ಮತ್ತು ಅಕಲ್ಪವೆಂಬುದಾಗಿ ನಾಲ್ಕು
ಪ್ರಕಾರವಾಗಿ ಹೇಳಿದ್ದಾರೆ. ಇವುಗಳಲ್ಲಿ ಮೊದಲನೆಯದೇ (ಕಲ್ಪ ಭಸ್ಮವೇ) ಉತ್ಕೃಷ್ಟವಾಗಿದೆ.
ಉಳಿದವುಗಳನ್ನು ಇದು ಇಲ್ಲದಿದ್ದಾಗ ಉಪಯೋಗಿಸಬಹುದಾಗಿದೆ. ನೂತನವಾದ ಗೋಮಯವನ್ನು (ಸಗಣಿಯನ್ನು)
ಶಾಸ್ತ್ರದಲ್ಲಿ ಹೇಳಿದ ವಿಧಿಯಂತೆ ತೆಗೆದುಕೊಳ್ಳಬೇಕು.
#ಸದ್ಯೇನ ವಾಮದೇವೇನ
ಕುರ್ಯಾತ್ಪಿಂಡ ಮನುತ್ತಮಮ್ |
ಶೋಷಯೇತ್ ಪುರುಷೇಣೈವ
ದಹೇದ್ ಘೋರಾಚ್ಛಿವಾಗ್ನಿನಾ |
ತತ ಈಶಾನ ಮಂತ್ರೇಣ
ಬಿಲ್ವಪಾತ್ರೇ ನಿಧಾ-ಪ-ಯೇತ್ | 7-15
ಸದ್ಯೋಜಾತ ಮಂತ್ರವನ್ನು ಹೇಳುತ್ತಾ ಹೊಸದಾದ ಗೋಮಯವನ್ನು ತೆಗೆದುಕೊಂಡು, ವಾಮದೇವ ಮಂತ್ರದಿಂದ ಉತ್ತಮವಾದ ಪಿಂಡೆ ಯನ್ನು (ಉಂಡೆಯನ್ನು) ಮಾಡಬೇಕು. ತತ್ಪುರುಷಮಂತ್ರದಿಂದ ಒಣಗಿಸಬೇಕು.
ಅದರಂತೆ ಅಘೋರ ಮಂತ್ರದಿಂದ ಅದನ್ನು ಅಗ್ನಿ ಯಲ್ಲಿ ದಹಿಸಬೇಕು (ಸುಡಬೇಕು).ಅನಂತರ ಈಶಾನಮಂತ್ರವನ್ನು ಹೇಳುತ್ತಾ (ಸುಟ್ಟ ಗೋಮಯವನ್ನು) ಬಿಲ್ವದ ಪಾತ್ರೆಯಲ್ಲಿ ಇರಿಸ ಬೇಕು.
ಕಲ್ಪಂ ತದ್ಭಸ್ಮ ವಿಜ್ಞೇಯಮ್
ಅನುಕಲ್ಪ ಮಥೋಚ್ಯತೇ || 7-16
ಇದುವೆ ಕಲ್ಪಭಸ್ಮವೆಂದು ತಿಳಿಯಬೇಕು. ಇನ್ನು ಮುಂದೆ ಅನುಕಲ್ಪ ವಿಧಿಯು ಹೇಳಲಾಗಿದೆ.
#ವನೇಷು ಗೋಮಯಂ ಯಚ್ಚ
ಶುಷ್ಕಂ ಚೂರ್ಣಿಕೃತಂ ತಥಾ |
ದಗ್ಧಂ ಚೈ ವಾನು ಕಲ್ಪಾಖ್ಯಮ್
ಆಪಣಾದಿಗತಂ ತು ಯತ್ || 7-17
ವಸ್ತ್ರೇಣೋತ್ತಾರಿತಂ ಭಸ್ಮ
ಗೋ ಮೂತ್ರಾ ಬದ್ಧಪಿಂಡಿತಮ್ |
ದಗ್ಧಂ ಪ್ರಾಗುಕ್ತ ವಿಧಿನಾ
ಭವೇದ್ಭಸ್ಮೋಪ ಕಲ್ಪಕಮ್ || 7-18
ವನದಲ್ಲಿ (ಅಡವಿಯಲ್ಲಿ)ಒಣಗಿದ ಗೋಮಯವನ್ನು ತೆಗೆದುಕೊಂಡು ಚೂರ್ಣ ಮಾಡಿ ಸುಟ್ಟಿರುವ ಭಸ್ಮವೇ ಅನುಕಲ್ಪ ವೆಂಬ ಹೆಸರಿನ ಭಸ್ಮವಾಗಿದೆ.
ಅಂಗಡಿಯಲ್ಲಿರುವಂತಹ ಯಾವ ಭಸ್ಮವೋ ಅದನ್ನು ವಸ್ತ್ರದಲ್ಲಿ ಸೋಸಿ, ಗೋಮೂತ್ರದಿಂದ ಉಂಡೆಯನ್ನು ಕಟ್ಟಿ ಮೇಲೆ ಹೇಳಿದ ವಿಧಿಯಂತೆ ಸುಟ್ಟು
ತಯಾರಾದ ಭಸ್ಮವೇ ಉಪಕಲ್ಪ ಭಸ್ಮವಾಗಿದೆ.
#ಅನ್ಯೈರ್ ಆಪಾದಿತಂ ಭಸ್ಮ
ಅಕಲ್ಪಮಿತಿ ನಿಶ್ಚಿತಮ್ |
ಏಷ್ವೇ ಕತಮ ಮಾದಾಯ
ಪಾತ್ರೇಷು ಕಲಶಾದಿಷು || 7-19
ತ್ರಿಸಂಧ್ಯಮ್ ಆಚರೇತ್ ಸ್ನಾನಮ್
ಯಥಾಸಂಭವಮೇವ ವಾ |
ಸ್ನಾನಕಾಲೇ ಕರೌ ಪಾದೌ
ಪ್ರಕ್ಷಾಲ್ಯ ವಿಮಲಾಂಭಸಾ || 7-20
ಅನ್ಯರಿಂದ ತಯಾರಿಸಲ್ಪಟ್ಟ ಭಸ್ಮವು ಅಕಲ್ಪ ಭಸ್ಮವೆಂದು ನಿಶ್ಚಿತವಾಗಿ ತಿಳಿದುಕೊಳ್ಳಬೇಕು.
ಹೀಗೆ ಈ ನಾಲ್ಕು ಭಸ್ಮಗಳನ್ನು ಬೇರೆ ಬೇರೆ ಪಾತ್ರೆಗಳಲ್ಲಿ ಇರಿಸಬೇಕು.
ಇವುಗಳಲ್ಲಿ ಯಾವುದಾದರೊಂದನ್ನು ತೆಗೆದುಕೊಂಡು ಮೂರು ಸಂಧ್ಯಾಕಾಲಗಳಲ್ಲಿ (ಪ್ರಾತಃ, ಮಧ್ಯಾಹ್ನ, ಸಾಯಂ)
ಅಥವಾ ತನಗೆ ಸಾಧ್ಯವಾದಷ್ಟು ವೇಳೆ ಭಸ್ಮಸ್ನಾನವನ್ನು ಆಚರಿಸಬೇಕು.
ಭಸ್ಮಸ್ನಾನ ಪೂರ್ವದಲ್ಲಿ ನಿರ್ಮಲವಾದ ನೀರಿನಿಂದ ಹಸ್ತಪಾದಗಳನ್ನು ತೊಳೆದು ಕೊಳ್ಳಬೇಕು.
#ವಾಮ ಹಸ್ತ ತಲೇ-ಭಸ್ಮ
ಕ್ಷಿಪ್ತ್ವಾಚ್ಛಾ ದ್ಯಾನ್ಯ ಪಾಣಿನಾ |
ಅಷ್ಟ ಕೃತ್ವಾಥ ಮೂಲೇನ
ಮೌನೀ ಭಸ್ಮಾಭಿಮಂತ್ರ್ಯ ಚ || 7-21
ಶಿರ ಈಶಾನ ಮಂತ್ರೇಣ
ಪುರುಷೇಣ ಮುಖಂ ತಥಾ |
ಹೃತ್ಪ್ರದೇಶ-ಮಘೋರೇಣ
ವಾಮದೇವೇನ ಗುಹ್ಯಕಮ್ || 7-22
ಎಡಹಸ್ತದ ಅಂಗೈಯಲ್ಲಿ ಭಸ್ಮವನ್ನಿಟ್ಟು ಬಲಹಸ್ತದಿಂದ ಮುಚ್ಚಿ ಮೌನಿಯಾಗಿ ಮೂಲಮಂತ್ರದಿಂದ
(ಪಂಚಾಕ್ಷರ ಮಂತ್ರದಿಂದ) ಎಂಟು ಸಾರಿ ಅಭಿಮಂತ್ರಿಸಿ (ಜಪವನ್ನು ಮಾಡಿ),
ಈಶಾನಮಂತ್ರದಿಂದ ಮಸ್ತಕವನ್ನು, ತತ್ಪುರುಷ ಮಂತ್ರದಿಂದ ಮುಖವನ್ನು,
ಅಘೋರಮಂತ್ರದಿಂದ ಹೃದಯ ಪ್ರದೇಶವನ್ನು, ವಾಮದೇವ ಮಂತ್ರದಿಂದ ಗುಹ್ಯ ಸ್ಥಾನವನ್ನು-
#ಪಾದೌ ಸದ್ಯೇನ ಸರ್ವಾಂಗಮ್
ಪ್ರಣವೇನೈವ ಸೇಚಯೇತ್ |
ಭಸ್ಮನಾ ವಿಹಿತಂ ಸ್ನಾನಮ್
ಇದಮ್ ಆಗ್ನೇಯ ಮುತ್ತಮಮ್ || 7-23
ಸದ್ಯೋಜಾತ ಮಂತ್ರದಿಂದ ಪಾದಗಳನ್ನು,
ಪ್ರಣವದಿಂದ ಸರ್ವಾಂಗಗಳಲ್ಲಿ ಭಸ್ಮವನ್ನು ಸಿಂಪಡಿಸಿಕೊಳ್ಳಬೇಕು
(ಭಸ್ಮ ಸ್ನಾನವನ್ನು ಮಾಡಬೇಕು). ಭಸ್ಮದಿಂದ ಮಾಡಿದ ಈ ಸ್ನಾನವು
ಉತ್ತಮವಾದ ಆಗ್ನೇಯ ಸ್ನಾನ (ಅಗ್ನಿ ಸ್ನಾನ)ವೆಂದು ಕರೆದಿದೆ.
ಸ್ನಾನೇಷು ವಾರುಣಾದ್ಯೇಷು
ಮುಖ್ಯಮೇತನ್ ಮಲಾಪಹಮ್ |
ಭಸ್ಮಸ್ನಾನವತಾಂ ಪುಂಸಾಮ್
ಯಥಾಯೋಗಂ ದಿನೇ ದಿನೇ || 7-24
ನೀರು ಮೊದಲಾದವುಗಳಿಂದ ಮಾಡುವ (ಏಳು ವಿಧ ಸ್ನಾನಗಳಲ್ಲಿ) ಸರ್ವ ಮಲವನ್ನು ದೂರ ಮಾಡುವ
ಈ ಭಸ್ಮಸ್ನಾನವೇ ಮುಖ್ಯವಾದುದಾಗಿದೆ. ಶಾಸ್ತ್ರೋಕ್ತಪದ್ಧತಿಯಂತೆ ದಿನದಿನವೂ ಭಸ್ಮಸ್ನಾನ ಮಾಡುವ ಜನರಿಗೆ
#ವಾರುಣಾದ್ಯೈರಲಂ ಸ್ನಾನೈಃ
ಬಾಹ್ಯದೋಷಾಪಹಾರಿಭಿಃ |
ಆಗ್ನೇಯಂ ಭಸ್ಮನಾ ಸ್ನಾನಮ್
ಯತಿ ಭಿಸ್ತು ವಿಧೀಯತೇ || 7-25
ಬಾಹ್ಯ (ಹೊರಗಿನ) ದೋಷಗಳನ್ನು ಪರಿಹರಿಸಲು ವಾರುಣಾದಿ (ಜಲಾದಿ)
ಸ್ನಾನಗಳು ಸಾಕು (ಅಂದರೆ ಇದು ಹೆಚ್ಚು ಪ್ರಯೋಜನಕಾರಿಯಲ್ಲ).
ಅಂತೆಯೇ ಆಗ್ನೇಯ ಸ್ನಾನವೆಂದು ಹೇಳಲ್ಪಡುವ ಭಸ್ಮಸ್ನಾನವು ಯತಿಗಳಿಂದ ವಿಧಿಸಲ್ಪಟ್ಟಿದೆ.
ಆದ್ರ ಸ್ನಾನಾತ್ ಪರಂ ಭಸ್ಮ
ಆರ್ದ್ರೆ ಜಂತು ವಧೋ ಧ್ರುವಮ್ |
ಆರ್ಧಂ ತು ಪ್ರಕೃತಿಂ ವಿದ್ಯಾತ್
ಪ್ರಕೃತಿಂ ಬಂಧನಂ ವಿದುಃ || 7-26
ಬಾಹ್ಯ (ಹೊರಗಿನ) ದೋಷಗಳನ್ನು ಪರಿಹರಿಸಲು ವಾರುಣಾದಿ (ಜಲಾದಿ)
ಸ್ನಾನಗಳು ಸಾಕು (ಅಂದರೆ ಇದು ಹೆಚ್ಚು ಪ್ರಯೋಜನಕಾರಿಯಲ್ಲ).
ಅಂತೆಯೇ ಆಗ್ನೇಯ ಸ್ನಾನವೆಂದು ಹೇಳಲ್ಪಡುವ ಭಸ್ಮಸ್ನಾನವು ಯತಿಗಳಿಂದ ವಿಧಿಸಲ್ಪಟ್ಟಿದೆ.
#ಪ್ರಕೃತೇಸ್ತು ಪ್ರಹಾಣಾರ್ಥಮ್
ಭಸ್ಮನಾ ಸ್ನಾನ ಮಿಷ್ಯತೇ |
ಬ್ರಹ್ಮಾದ್ಯಾ ವಿಬುಧಾಃ ಸರ್ವೆ
ಮುನಯೋ ನಾರದಾ ದಯಃ || 7-27
ಯೋಗಿನಃ ಸನಕಾದ್ಯಾಶ್ಚ
ಬಾಣಾದ್ಯಾ ದಾನವಾ ಅಪಿ|
ಭಸ್ಮ ಸ್ನಾನ ಯುತಾಃ ಸರ್ವೆ |
ಶಿವಭಕ್ತಿ ಪರಾಯಣಾಃ |
ನಿರ್ಮುಕ್ತ ದೋಷ ಕಲಿಲಾಃ
ನಿತ್ಯಶುದ್ಧಾ ಭವಂತಿ ಹಿ || 7-28
ಪ್ರಕೃತಿಯಿಂದ ಬಿಡುಗಡೆ ಹೊಂದಲು ಭಸ್ಮಸ್ನಾನವನ್ನು ಸ್ವೀಕರಿಸಲಾಗಿದೆ.
ಬ್ರಹ್ಮನೇ ಮೊದಲಾದ ವಿಬುಧರು (ದೇವತೆಗಳು), ನಾರದನೇ ಮೊದಲಾದ ಮುನಿಗಳು,
ಸನಕನೇ ಮೊದಲಾದ ಯೋಗಿಗಳು ಮತ್ತು ಬಾಣಾಸುರನೇ ಮೊದಲಾದ ಎಲ್ಲಾ ದಾನವರು,
ಶಿವಭಕ್ತಿ ಪರಾಯಣರಾದ ಇವರೆಲ್ಲರೂ ಭಸ್ಮಸ್ನಾನವನ್ನು ಮಾಡಿರುವವರಾಗಿರುತ್ತಾರೆ.
ಅವರೆಲ್ಲರೂ ದೋಷಸಮೂಹದಿಂದ ಮುಕ್ತರಾಗಿ ನಿತ್ಯ ಶುದ್ಧರಾಗಿರುತ್ತಾರೆ.
#ನಮಶ್ಶಿವಾಯೇತಿ ಭಸ್ಮ
ಕೃತ್ವಾ ಸಪ್ತಾ-ಭಿ ಮಂತ್ರಿತಮ್ |
ಉದ್ಧೂಲಯೇತ್ ತೇನ ದೇಹಮ್
ತ್ರಿಪುಂಡ್ರಂ ಚಾಪಿ ಧಾರಯೇತ್ || 7-29
ನಮಃಶಿವಾಯ ಎಂಬ ಮಂತ್ರದಿಂದ ಭಸ್ಮವನ್ನು ಏಳು ಸಾರಿ ಅಭಿಮಂತ್ರಿಸಿ, ಅದರಿಂದ ಶರೀರವನ್ನು ಉದ್ಧೂಲನ ಮಾಡಿಕೊಳ್ಳಬೇಕು
(ಭಸ್ಮದ ಕಣಗಳನ್ನು ದೇಹದ ಮೇಲೆ ಸಿಂಪಡಿಸಿಕೊಳ್ಳಬೇಕು) ಮತ್ತು ತ್ರಿಪುಂಡ್ರವನ್ನು (ಮೂರು ಬೆರಳಿನ ಭಸ್ಮವನ್ನು) ಧರಿಸಬೇಕು.
ಸರ್ವಾಂಗೋದ್ಧೂಲನಂ ಚಾಪಿ
ನ ಸಮಾನಂ ತ್ರಿಪುಂಡ್ರಕೈಃ |
ತಸ್ಮಾತ್ ತ್ರಿಪುಂಡ್ರ-ಮೇ-ವೈಕಮ್
ಲಿಖೇದುದ್ಧೂಲನಂ ವಿನಾ || 7-30
#ತ್ರಿಪುಂಡ್ರಂ ಧಾರಯೇನ್ನಿತ್ಯಮ್
ಭಸ್ಮನಾ ಸಜಲೇನ ಚ |
ಸ್ಥಾನೇಷು ಪಂಚ ದಶಸು
ಶರೀರೇ ಸಾಧಕೋತ್ತಮಃ || 7-31
ಸರ್ವಾಂಗದಲ್ಲಿ ಉದ್ಧೂಲನವನ್ನು ಮಾಡಿಕೊಂಡರೂ, ಅದು ತ್ರಿಪುಂಡ್ರಕ್ಕೆ ಸಮಾನಗಲಾರದು. ಆದ್ದರಿಂದ ಉದ್ಧೂಲನ ಇಲ್ಲದೆ ಕೇವಲ ತ್ರಿಪುಂಡ್ರವನ್ನೇ ಧರಿಸಬೇಕು.
ಉದಕದೊಡನೆ ಕೂಡಿದ ಭಸ್ಮದಿಂದ ದೇಹದಲ್ಲಿ ಹದಿನೈದು ಸ್ಥಾನಗಳಲ್ಲಿ ಸಾಧಕ ಶ್ರೇಷ್ಠನು ತ್ರಿಪುಂಡ್ರವನ್ನು ಯಾವಾಗಲೂ
(ಪಂಚಾಕ್ಷರ ಪ್ರಣವ ಮಂತ್ರೋಚ್ಚಾರಣೆಯಿಂದ) ಧರಿಸಬೇಕು.
ಉತ್ತಮಾಂಗೇ ಲಲಾಟೇ ಚ
ಶ್ರವಣ ದ್ವಿತಯೇ ತಥಾ|
ಗಲೇ ಭುಜ ದ್ವಯೇಚೈವ
ಹೃದಿ ನಾಭೌ ಚ ಪೃಷ್ಠಕೇ|| 7-32
#ಬಾಹುಯುಗ್ಮೇ ಕಕುದ್ದೇಶೇ
ಮಣಿಬಂಧದ್ವಯೇ ತಥಾ |
ತ್ರಿಪುಂಡ್ರಂ ಭಸ್ಮನಾ ಧಾರ್ಯಮ್
ಮೂಲಮಂತ್ರೇಣ ಸಾಧಕೈಃ || 7-33
ಸಾಧಕನು ತನ್ನ ಶರೀರದ ಮಸ್ತಕ, ಹಣೆ, ಎರಡು ಕಿವಿಗಳು, ಕಂಠ, ಎರಡು ಭುಜಗಳು, ಹೃದಯ,
ನಾಭಿ, ಬೆನ್ನು, ಎರಡು ಬಾಹುಗಳು, ಹೆಗಲು, ಎರಡು ಮುಂಗೈಗಳು- ಹೀಗೆ (ಈ ಹದಿನೈದು ಸ್ಥಾನಗಳಲ್ಲಿ)
ಪಂಚಾಕ್ಷರ ಮಂತ್ರವನ್ನು ಪಠಿಸುತ್ತಾ ಭಸ್ಮದಿಂದ ತ್ರಿಪುಂಡ್ರವನ್ನು ಧರಿಸಿಕೊಳ್ಳಬೇಕು
ವಾಮ ಹಸ್ತ ತಲೇ ಭಸ್ಮ
ಕ್ಷಿಪ್ತ್ವಾಚ್ಛಾದ್ಯಾನ್ಯ ಪಾಣಿನಾ |
ಅಗ್ನಿರಿತ್ಯಾ-ದಿ ಮಂತ್ರೇಣ
ಸ್ಪೃಶನ್ ವಾರಾ-ಭಿಮಂತ್ರ್ಯ ಚ || 7-34
#ತ್ರಿಪುಂಡ್ರ ಮುಕ್ತ ಸ್ಥಾನೇಷು
ದಧ್ಯಾತ್ ಸಜಲ ಭಸ್ಮನಾ |
ಶಿವಂ ಶಿವಂಕರಂ ಶಾಂತಮ್
ಸ ಪ್ರಾಪ್ನೋತಿ ನ ಸಂಶಯಃ || 7-35
ತನ್ನ ಎಡಗೈಯಲ್ಲಿ ಭಸ್ಮವನ್ನಿಟ್ಟುಕೊಂಡು ಬಲಗೈನಿಂದ ಅದನ್ನು ಮುಚ್ಚಿ,
ಅಗ್ನಿರಿತಿ ಭಸ್ಮ ಮುಂತಾದ ಮಂತ್ರಗಳಿಂದ ಭಸ್ಮವನ್ನು ಸ್ಪರ್ಶಿಸಿ, ಉದಕದಿಂದ ಏಳು ಸಾರಿ
ಅಭಿಮಂತ್ರಿಸಬೇಕು ಮತ್ತು ನೀರಿನಿಂದ ಮಿಶ್ರಿತವಾದ ಭಸ್ಮದಿಂದ ಮೇಲೆ ಹೇಳಿದ ಸ್ಥಾನಗಳಲ್ಲಿ ತ್ರಿಪುಂಡ್ರವನ್ನೂ ಧರಿಸಬೇಕು.
ಹೀಗೆ ಮಾಡಿದವನು ಶಾಂತನೂ, ಮಂಗಳಕರನೂ ಆದ ಶಿವನನ್ನು ಪಡೆದುಕೊಳ್ಳುತ್ತಾನೆ. ಇದರಲ್ಲಿ ಯಾವ ಸಂಶಯವೂ ಇಲ್ಲ.
ಮಧ್ಯಾಂಗುಲಿ ತ್ರಯೇಣೈವ
ಸ್ವ ದಕ್ಷಿಣ ಕರಸ್ಯ ತು |
ಷಡಂಗು ಲಾಯತಂ ಮಾನಮ್
ಅಪಿ ವಾಲಿಕ ಮಾನಕಮ್ || 7-36
#ನೇತ್ರಯುಗ್ಮ ಪ್ರಮಾಣೇನ
ಫಾಲೇ ದಧ್ಯಾತ್ ತ್ರಿಪುಂಡ್ರಕಮ್ |
ಮಧ್ಯಮಾನಾಮಿಕಾಂಗುಷ್ಠೈಃ
ಅನುಲೋಮ ವಿಲೋಮತಃ || 7-37
#ಧಾರಯೇದ್ಯಸ್ತ್ರಿ ಪುಂಡ್ರಾಂಕಮ್
ಸ ರುದ್ರೋ ನಾತ್ರ ಸಂಶಯಃ || 7-38
ತನ್ನ ಬಲಗೈಯ ನಡುವಿನ ಮೂರು ಬೆರಳುಗಳಿಂದ ಆರು ಅಂಗುಲ ಉದ್ದವಾಗಿ ಅಥವಾ ಹಣೆಯ ಪ್ರಮಾಣದಲ್ಲಿ
ಎರಡೂ ಕಣ್ಣುಗಳ ಕಡೆದಂಡೆಗಳ ಪ್ರಮಾಣದಲ್ಲಾಗಲಿ ಹಣೆಯಲ್ಲಿ ತ್ರಿಪುಂಡ್ರವನ್ನು ಧರಿಸಬೇಕು ಅಥವಾ ಬಲಗೈಯ
ಮಧ್ಯಮ, ಅನಾಮಿಕ ಮತ್ತು ಅಂಗುಷ್ಠ – ಈ ಮೂರು ಬೆರಳುಗಳಿಂದಲಾದರೂ ಅನುಲೋಮ ವಿಲೋಮ ಪದ್ಧತಿಯಂತೆ
ಯಾರು ತ್ರಿಪುಂಡ್ರವನ್ನು ಹಣೆಯಲ್ಲಿ ಧರಿಸಿಕೊಳ್ಳುತ್ತಾರೆಯೋ ಅವರು ರುದ್ರರೇ ಆಗುತ್ತಾರೆ. ಇದರಲ್ಲಿ ಸಂಶಯವಿಲ್ಲ.
ಋಜು ಶ್ವೇತ ಮನುವ್ಯಾಪ್ತಮ್
ಸ್ನಿಗ್ಧಂ ಶ್ರೋತ್ರ ಪ್ರಮಾಣಕಮ್ |
ಏವಂ ಸಲಕ್ಷಣೋ ಪೇತಮ್
ತ್ರಿಪುಂಡ್ರಂ ಸರ್ವಸಿದ್ಧಿದಮ್ || 7-39
ಸರಳವೂ, ಶುಭ್ರವೂ, ಅಖಂಡವೂ, ನುಣುಪಾಗಿಯೂ, ಎರಡೂ ಕಿವಿಗಳ
ಪ್ರಮಾಣದಲ್ಲಿಯೂ, ಹೀಗೆ ಸುಲಕ್ಷಣದಿಂದ ಕೂಡಿದ ತ್ರಿಪುಂಡ್ರವು ಸರ್ವ ಸಿದ್ಧಿದಾಯಕವಾಗಿದೆ.
#ಪ್ರಾತಃಕಾಲೇ ಚ ಮಧ್ಯಾಹ್ನೇ
ಸಾಯಾ ಹ್ನೇ ಚ ತ್ರಿಪುಂಡ್ರಕಮ್ |
ಕದಾಚಿದ್ಭಸ್ಮ ನಾ ಕುರ್ಯಾತ್
ಸ ರುದ್ರೋ ನಾತ್ರ ಸಂಶಯಃ || 7-40
ಪ್ರಾತಃಕಾಲ ಮಧ್ಯಾಹ್ನ ಮತ್ತು ಸಾಯಂಕಾಲದಲ್ಲಿ – ಹೀಗೆ (ಮೂರು ಕಾಲದಲ್ಲಿ) ಇಲ್ಲವೇ ಯಾವುದಾದರೂ
ಒಂದು ಕಾಲದಲ್ಲಿ ತ್ರಿಪುಂಡ್ರವನ್ನು ಧರಿಸಿಕೊಂಡರೆ ಅವನು ರುದ್ರ ಸ್ವರೂಪನೇ ಆಗುತ್ತಾನೆ. ಇದರಲ್ಲಿ ಯಾವ ಸಂಶಯವೂ ಇಲ್ಲ.
ಏವಂವಿಧಂ ವಿಭೂತ್ಯಾ ಚ
ಕುರುತೇ ಯಸ್ ತ್ರಿಪುಂಡ್ರಕಮ್ |
ಸ ರೌದ್ರ ಧರ್ಮ ಸಂಯುಕ್ತಃ
ತ್ರಯೀಮಯ ಇತಿ ಶ್ರುತಿಃ || 7-41
ಪೂರ್ವೊಕ್ತ ವಿಧಿಯಂತೆ ವಿಭೂತಿಯಿಂದ ಯಾರು ತ್ರಿಪುಂಡ್ರವನ್ನು ಧರಿಸುತ್ತಾರೆಯೋ
ಅವನು ರುದ್ರಧರ್ಮ (ಶಿವಾಚಾರ) ದಿಂದ ಕೂಡಿದ ತ್ರಯೀಮಯ (ತ್ರಿವೇದ ಸ್ವರೂಪ)ನೆಂದು ಶ್ರುತಿಗಳು ಸಾರುತ್ತಿವೆ.
#ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ
ದೇವಾಃ ಶಕ್ರಪುರೋಗಮಾಃ |
ತ್ರಿಪುಂಡ್ರಂ ಧಾರಯಂತ್ಯೇವ
ಭಸ್ಮನಾ ಪರಿಕಲ್ಪಿತಮ್ || 7-42
ಬ್ರಹ್ಮ, ವಿಷ್ಣು, ರುದ್ರ ಮತ್ತು ಶಕ್ರ (ಇಂದ್ರ)ನೇ ಮೊದಲಾದ ದೇವತೆಗಳು
ಭಸ್ಮದಿಂದ ಪರಿಕಲ್ಪಿತವಾದ (ಮಾಡಿದ) ತ್ರಿಪುಂಡ್ರವನ್ನು ಧರಿಸುತ್ತಾರೆ.
ವಸಿಷ್ಠಾದ್ಯಾ ಮಹಾಭಾಗಾಃ
ಮುನಯಃ ಶ್ರುತಿಕೋವಿದಾಃ |
ಧಾರಯಂತಿ ಸದಾಕಾಲಮ್
ತ್ರಿಪುಂಡ್ರಂ ಭಸ್ಮನಾ ಕೃತಮ್ || 7-43
ಅದರಂತೆ ಶ್ರುತಿಕೋವಿದರು (ವೇದಶಾಸ್ತ್ರ ಪಾರಂಗತರಾದ) ಮಹಾನುಭಾವಿಗಳಾದ
ವಸಿಷ್ಠಾದಿ ಮುನಿಗಳು ಸದಾ ಕಾಲದಲ್ಲಿ ಭಸ್ಮದ ತ್ರಿಪುಂಡ್ರವನ್ನು ಧರಿಸಿಕೊಳ್ಳುತ್ತಾರೆ. ಶೈವಾಗಮೇಷು ವೇದೇಷು
#ಶೈವಾಗಮೇಷು ವೇದೇಷು
ಪುರಾಣೇಷ್ವ ಅಖಿಲೇಷು ಚ |
ಸ್ಮೃತೀತಿಹಾಸ ಕಲ್ಪೇಷು
ವಿಹಿತಂ ಭಸ್ಮಪುಂಡ್ರಕಮ್|
ಧಾರಣೀಯಂ ಸಮಸ್ತಾನಾಮ್
ಶೈವಾನಾಂ ಚ ವಿಶೇಷತಃ || 7-44
ಕಾಮಿಕಾದಿ ವಾತುಲಾಂತ್ಯವಾದ 28 ಶಿವಾಗಮಗಳಲ್ಲಿ,
ಎಲ್ಲಾ ವೇದಗಳಲ್ಲಿ ಸಮಸ್ತ ಪುರಾಣಗಳಲ್ಲಿ ಮತ್ತು ಸ್ಮೃತಿ ಇತಿಹಾಸ
ಕಲ್ಪಶಾಸ್ತ್ರಗಳಲ್ಲಿ ಭಸ್ಮ ತ್ರಿಪುಂಡ್ರವು ವಿಧಿಸಲ್ಪಟ್ಟಿದೆ.
ಆದ್ದರಿಂದ ಸಮಸ್ತರೂ ಮತ್ತು ವಿಶೇಷವಾಗಿ (ವೀರ)ಶೈವರು (ಶಿವಭಕ್ತರು) ಧರಿಸಿಕೊಳ್ಳಬೇಕು.
ನಾಸ್ತಿಕೋ ಭಿನ್ನಮರ್ಯಾದೋ
ದುರಾಚಾರ ಪರಾಯಣಃ |
ಭಸ್ಮ ತ್ರಿಪುಂಡ್ರಧಾರೀ ಚೇತ್
ಮುಚ್ಯತೇ ಸರ್ವಕಿಲ್ಬಿಷೈಃ || 7-45
ನಾಸ್ತಿಕನೂ, ಶಾಸ್ತ್ರನಿಯಮಗಳನ್ನು ಉಲ್ಲಂಘಿಸಿದವನೂ, ದುರಾಚಾರದಲ್ಲಿ
ಆಸಕ್ತ ನಾದವನೂ ಸಹ ಭಸ್ಮದ ತ್ರಿಪುಂಡ್ರವನ್ನು ಧರಿಸಿದರೆ ಅವನು ಎಲ್ಲಾ ಕಿಲ್ಪಿಷ (ಪಾಪ)ಗಳಿಂದ ಮುಕ್ತನಾಗುತ್ತಾನೆ.
ಇತಿ ಭಸ್ಮಧಾರಣಸ್ಥಲಂ
ಅಥ ರುದ್ರಾಕ್ಷಧಾರಣಸ್ಥಲಮ್
ಭಸ್ಮನಾ ವಿಹಿತಸ್ನಾನಃ
ತ್ರಿಪುಂಡ್ರಾಂಕಿತಮಸ್ತಕಃ |
ಶಿವಾರ್ಚನಪರೋ ನಿತ್ಯಮ್
ರುದ್ರಾಕ್ಷಮಪಿ ಧಾರಯೇತ್ || 7-46
ಭಸ್ಮಸ್ನಾನವನ್ನು ಮಾಡಿ, ಮಸ್ತಕದಲ್ಲಿ ತ್ರಿಪುಂಡ್ರವನ್ನು ಧರಿಸಿದ
ಶಿವಾಚಾರಣೆಯಲ್ಲಿ ತತ್ಪರನಾದ ಸಾಧಕನು ನಿತ್ಯವೂ ರುದ್ರಾಕ್ಷವನ್ನೂ ಸಹ ಧರಿಸಬೇಕು.
#ರುದ್ರಾಕ್ಷ ಧಾರಣಾ ದೇವ
ಮುಚ್ಯಂತೇ ಸರ್ವಪಾತಕೈಃ |
ದುಷ್ಟ ಚಿತ್ತಾ ದುರಾಚಾರಾ
ದುಷ್ಪ್ರಜ್ಞಾ ಅಪಿ ಮಾನವಾಃ || 7-47
ದುಷ್ಟಚಿತ್ತವುಳ್ಳ, ದುರಾಚಾರಿಗಳಾದ ಮತ್ತು ಹೀನಬುದ್ಧಿಯುಳ್ಳ ಮಾನವರೂ
ಕೂಡ ರುದ್ರಾಕ್ಷಗಳನ್ನು ಧರಿಸಿದ ಮಾತ್ರದಿಂದ ಸರ್ವಪಾತಕಗಳಿಂದ ಮುಕ್ತರಾಗುತ್ತಾರೆ.
ಪುರಾ ತ್ರಿಪುರಸಂಹಾರೇ
ತ್ರಿನೇತ್ರೋ ಜಗತಾಂ ಪತಿಃ |
ಉದಪಶ್ಯತ್ ಪುರಾಂ ಯೋಗಮ್
ಉನ್ಮೀಲಿತವಿಲೋಚನಃ || 7-48
ತ್ರಿನೇತ್ರ ಧಾರಿಯಾದ ಜಗತ್ತಿನ ಪತಿಯಾದ ಶಿವನು ಪೂರ್ವಕಾಲದಲ್ಲಿ
ತ್ರಿಪುರಾಸುರನನ್ನು ಸಂಹಾರ ಮಾಡುವುದಕ್ಕಾಗಿ,
ಉನ್ಮೀಲಿತ ಲೋಚನನಾಗಿ (ತೆರೆದ ಮೂರು ಕಣ್ಣುಗಳುಳ್ಳವನಾಗಿ)
ಪುರಗಳ ಯೋಗವನ್ನು (ತ್ರಿಪುರಗಳ ಕೂಡುವಿಕೆಯನ್ನು) ಮೇಲ್ಮುಖವಾಗಿ ನೋಡಿದನು.
#ನಿಪೇತುಸ್ತಸ್ಯ ನೇತ್ರೇಭ್ಯೋ
ಬಹವೋ ಜಲಬಿಂದವಃ |
ತೇಭ್ಯೋ ಜಾತಾ ಹಿ ರುದ್ರಾಕ್ಷಾಃ
ರುದ್ರಾಕ್ಷಾ ಇತಿ ಕೀರ್ತಿತಾಃ || 7-49
(ಹೀಗೆ ನೋಡುತ್ತಿರುವ) ಆ ಶಿವನ ಮೂರು ಕಣ್ಣುಗಳಿಂದ ಬಹಳಷ್ಟು
ಜಲಬಿಂದುಗಳು ಭುವಿಯ ಮೇಲೆ ಬಿದ್ದವು. ಆ ಜಲಬಿಂದುಗಳಿಂದಲೇ
ನಿಶ್ಚಯವಾಗಿ ರುದ್ರಾಕ್ಷಗಳು ಉತ್ಪನ್ನವಾದವು. ಅಂತೆಯೇ ಅವುಗಳು ರುದ್ರಾಕ್ಷಗಳೆಂದು ಪ್ರಸಿದ್ಧವಾಗಿವೆ.
ರುದ್ರನೇತ್ರಸಮುತ್ಪನ್ನಾ
ರುದ್ರಾಕ್ಷಾ ಲೋಕ ಪಾವನಾಃ |
ಅಷ್ಟತ್ರಿಂಶತ್ ಪ್ರಭೇದೇನ
ಭವಂತ್ಯುತ್ಪತ್ತಿ ಭೇದತಃ || 7-50
ರುದ್ರನ ನೇತ್ರಗಳಿಂದ ಉತ್ಪನ್ನಗಳಾದ ರುದ್ರಾಕ್ಷಗಳು ಲೋಕ
ಪಾವನಗಳಾಗಿವೆ (ಜೀವಿಗಳನ್ನು ಪವಿತ್ರಗೊಳಿಸುವಂತಹುಗಳಾಗಿವೆ).
ಇವುಗಳು ಉತ್ಪತ್ತಿಯ ಭೇದದಿಂದ ಮೂವತ್ತೆಂಟು ಪ್ರಕಾರಗಳಾಗಿರುತ್ತವೆ
#ನೇತ್ರಾತ್ ಸೂರ್ಯಾತ್ಮನಃ ಶಂಭೋಃ
ಕಪಿಲಾ ದ್ವಾದಶೋದಿತಾಃ |
ಶ್ವೇತಾಃ ಷೋಡಶ ಸಂಜಾತಾಃ
ಸೋಮ ರೂಪಾದ್ವಿಲೋಚನಾತ್ || 7-51
ಶಂಭುವಿನ (ಶಿವನ) ಸೂರ್ಯನೇತ್ರದಿಂದ ಕಪಿಲವರ್ಣದ (ಕಂದುಬಣ್ಣದ)
ಹನ್ನೆರಡು ಪ್ರಕಾರದ ರುದ್ರಾಕ್ಷಿಗಳು, ಸೋಮಲೋಚನದಿಂದ (ಚಂದ್ರನೇತ್ರದಿಂದ)
ಶ್ವೇತವರ್ಣದ (ಬಿಳಿ ಬಣ್ಣದ) ಹದಿನಾರು ಪ್ರಕಾರದ ರುದ್ರಾಕ್ಷಿಗಳು ಉತ್ಪನ್ನವಾದವು.
ಕೃಷ್ಣಾ ದಶ ವಿಧಾ ಜಾತಾ
ವಹ್ನಿರೂಪಾದ್ವಿಲೋಚನಾತ್ |
ಏವಮುತ್ಪತ್ತಿ ಭೇದೇನ
ರುದ್ರಾಕ್ಷಾ ಬಹುಧಾ ಸ್ಮೃತಾಃ || 7-52
ಶಿವನ ಅಗ್ನಿನೇತ್ರದಿಂದ (ಹಣೆಗಣ್ಣಿನಿಂದ) ಕೃಷ್ಣವರ್ಣದ (ಕಪ್ಪುಬಣ್ಣದ)
ಹತ್ತು ಪ್ರಕಾರದ ರುದ್ರಾಕ್ಷಿಗಳು ಉತ್ಪನ್ನವಾದವು. ಹೀಗೆ ಉತ್ಪತ್ತಿಯ ಭೇದದಿಂದ ರುದ್ರಾಕ್ಷಗಳು ಬಹು ವಿಧವಾಗಿ ಹೇಳಲ್ಪಟ್ಟಿವೆ.
#ಅಚ್ಛಿದ್ರಂ ಕನಕಪ್ರಖ್ಯಮ್
ಅನನ್ಯ ಧೃತಮುತ್ತಮಮ್ |
ರುದ್ರಾಕ್ಷಂ ಧಾರಯೇತ್ ಪ್ರಾಜ್ಞಃ
ಶಿವಪೂಜಾ ಪರಾಯಣಃ || 7-53
ಛಿದ್ರವಲ್ಲದ (ಹುಳ ಬಿದ್ದು ತೂತು ಬೀಳದ), ಬಂಗಾರದ ಕಾಂತಿಯುಳ್ಳ,
ಇನ್ನೊಬ್ಬರಿಂದ ಧರಿಸದೆ ಇರುವ ರುದ್ರಾಕ್ಷವು ಶ್ರೇಷ್ಠವಾದುದು.
ಶಿವಪೂಜಾ ಪರಾಯಣನಾದ ಪ್ರಜ್ಞಾಶಾಲಿಯು (ಬುದ್ಧಿವಂತನು) ರುದ್ರಾಕ್ಷವನ್ನು ಧರಿಸಬೇಕು.
ಯಥಾಸ್ಥಾನಂ ಯಥಾವಕ್ತ್ರಮ್
ಯಥಾಯೋಗಂ ಯಥಾವಿಧಿ |
ರುದ್ರಾಕ್ಷಧಾರಣಂ ವಕ್ಷ್ಯೇ
ರುದ್ರಸಾಯುಜ್ಯಸಿದ್ಧಯೇ || 7-54
ರುದ್ರ (ಶಿವ) ಸಾಯುಜ್ಯ ರೂಪವಾದ ಮುಕ್ತಿಯ ಪ್ರಾಪ್ತಿಗಾಗಿ ದೇಹದ
ಯಾವ ಸ್ಥಾನದಲ್ಲಿ ಎಷ್ಟು ಎಷ್ಟು ಮುಖಗಳ ಎಷ್ಟು ರುದ್ರಾಕ್ಷಿಗಳನ್ನು
ಯಾವ ಕ್ರಮದಲ್ಲಿ ಶಾಸ್ತ್ರೋಕ್ತ ವಿಧಿಯಂತೆ ಧರಿಸುವ ಬಗೆಯನ್ನು ಹೇಳುತ್ತೇನೆ.
#ಶಿಖಾಯಾಮೇಕ ಮೇಕಾಸ್ಯಮ್
ರುದ್ರಾಕ್ಷಂ ಧಾರಯೇದ್ ಬುಧಃ |
ದ್ವಿತ್ರಿದ್ವಾ ದಶವಕ್ತ್ರಾಣಿ
ಶಿರಸಿ ತ್ರೀಣಿ ಧಾರಯೇತ್ || 7-55
ಶಿಖಾ ಸ್ಥಾನದಲ್ಲಿ ಒಂದು ಮುಖದ ಒಂದು ರುದ್ರಾಕ್ಷಿಯನ್ನು; ಎರಡು,
ಮೂರು ಮತ್ತು ಹನ್ನೆರಡು ಮುಖಗಳುಳ್ಳ ಮೂರು ರುದ್ರಾಕ್ಷಿಗಳನ್ನು
ಮಸ್ತಕದಲ್ಲಿ ಬುದ್ಧಿವಂತನು ಧರಿಸಬೇಕು.
ಷಟ್ತ್ರಿಂಶ ದ್ಧಾರಯೇನ್ಮೂರ್ಧ್ನಿ
ನಿತ್ಯಮೇಕಾ ದಶಾನನಾನ್ |
ದಶಸಪ್ತ ಪಂಚವಕ್ತ್ರಾನ್
ಷಟ್ ಷಟ್ಕರ್ಣದ್ವಯೇ ವಹೇತ್ || 7-56
ಹನ್ನೊಂದು ಮುಖದ ಮೂವತ್ತಾರು ರುದ್ರಾಕ್ಷಿಗಳನ್ನು ತಲೆಯ ಮೇಲೆ ಧರಿಸಬೇಕು.
ಅದರಂತೆ ಹತ್ತು, ಏಳು ಮತ್ತು ಐದು ಮುಖದ ಎರೆಡೆರಡು ರುದ್ರಾಕ್ಷಿಗಳಂತೆ
ಪ್ರತಿಯೊಂದು ಕಿವಿಯಲ್ಲಿ ಆರು ಆರು ರುದ್ರಾಕ್ಷಿಗಳನ್ನು ಧರಿಸಬೇಕು.
#ಷಡಷ್ಟವದನಾನ್ ಕಂಠೇ
ದ್ವಾತ್ರಿಂಶದ್ಧಾರಯೇತ್ ಸದಾ |
ಪಂಚಾಶದ್ಧಾರಯೇದ್ ವಿದ್ವಾನ್
ಚತುರ್ವಕ್ತ್ರಾಣಿ ವಕ್ಷಸಿ || 7-57
ಇದೇ ಪ್ರಕಾರ ಆರು ಮತ್ತು ಎಂಟು ಮುಖದ ಹದಿನಾರು ಹದಿನಾರರಂತೆ 32 ರುದ್ರಾಕ್ಷಗಳನ್ನು
ಕಂಠದಲ್ಲಿ ಯಾವಾಗಲೂ ಧರಿಸಬೇಕು. ನಾಲ್ಕು ಮುಖದ ಐವತ್ತು ರುದ್ರಾಕ್ಷಿಗಳ(ಮಾಲೆಯ)ನ್ನು ಎದೆಯ ಮೇಲೆ ಧರಿಸಬೇಕು.
ತ್ರಯೋದಶಮುಖಾನ್ ಬಾಹ್ವೋಃ
ಧರೇತ್ ಷೋಡಶ ಷೋಡಶ |
ಪ್ರತ್ಯೇಕಂ ದ್ವಾದಶ ವಹೇತ್
ನವಾಸ್ಯಾನ್ ಮಣಿಬಂಧಯೋಃ || 7-58
ಹದಿಮೂರು ಮುಖದ ಹದಿನಾರು ಹದಿನಾರು ರುದ್ರಾಕ್ಷಿಗಳನ್ನು ಎರಡೂ ರೆಟ್ಟೆಗಳಲ್ಲಿ
ಧಾರಣೆ ಮಾಡಬೇಕು. ಒಂಭತ್ತು ಮುಖದ ಹನ್ನೆರಡು, ಹನ್ನೆರಡು ರುದ್ರಾಕ್ಷಿಗಳನ್ನು ಎರಡೂ ಮುಂಗೈಗಳಲ್ಲಿ ಧರಿಸಿಕೊಳ್ಳಬೇಕು.
#ಚತುರ್ದಶಮುಖಂ ಯಜ್ಞ-
ಸೂತ್ರಮಷ್ಟೋತ್ತರಂ ಶತಮ್ |
ಧಾರಯೇತ್ ಸರ್ವಕಾಲಂ ತು
ರುದ್ರಾಕ್ಷಂ ಶಿವಪೂಜಕಃ || 7-59
ಶಿವಪೂಜಕನು ಹದಿನಾಲ್ಕು ಮುಖದ ಒಂದನೂರು
ಎಂಟು ರುದ್ರಾಕ್ಷಿ ಗಳನ್ನು ಯಜ್ಞಸೂತ್ರದಂತೆ ಸರ್ವಕಾಲದಲ್ಲೂ ಧರಿಸಬೇಕು.
ಏವಂ ರುದ್ರಾಕ್ಷಧಾರೀ ಯಃ
ಸರ್ವಕಾಲೇ ತು ವರ್ತತೇ |
ತಸ್ಯ ಪಾಪಕಥಾ ನಾಸ್ತಿ
ಮೂಢಸ್ಯಾಪಿ ನ ಸಂಶಯಃ || 7-60
ಈ ರೀತಿಯಲ್ಲಿ (ಪೂರ್ವದಲ್ಲಿ ಹೇಳಿದ ಶಾಸ್ತ್ರೀಯ ಪದ್ಧತಿಗನುಸಾರವಾಗಿ) ಯಾರು
ಯಾವಾಗಲೂ ರುದ್ರಾಕ್ಷಿ ಧರಿಸಿ ಕೊಂಡಿರುತ್ತಾರೆಯೋ ಅವನು ಮೂಢನಾಗಿದ್ದರೂ
ಅವನಿಗೆ ಪಾಪದ ಸಂಬಂಧವೇ ಇರುವುದಿಲ್ಲ. ಇದರಲ್ಲಿ ಸಂಶಯವಿಲ್ಲ
#ಬ್ರಹ್ಮಹಾ ಮದ್ಯಪಾಯೀ ಚ |
ಸ್ವರ್ಣಹೃದ್ ಗುರುತಲ್ಪ ಗಃ|
ಮಾತೃಹಾ ಪಿತೃಹಾ ಚೈವ |
ಭ್ರೂಣಹಾ ಕೃತಘಾತಕಃ |
ರುದ್ರಾಕ್ಷಧಾರಣಾದೇವ |
ಮುಚ್ಯತೇ ಸರ್ವಪಾತಕೈಃ || 7-61
ಬ್ರಹ್ಮಹತ್ಯೆ, ಮದ್ಯಪಾನ, ಸ್ವರ್ಣಹರಣ, ಗುರುಪತ್ನಿಗಮನ,
ಮಾತೃಹತ್ಯೆ, ಪಿತೃಹತ್ಯೆ, ಭ್ರೂಣಹತ್ಯೆ ಮತ್ತು ವಿಶ್ವಾಸಘಾತ ಮುಂತಾದ
ಪಾತಕಗಳನ್ನಾಚರಿಸಿದವನೂ ಸಹ ರುದ್ರಾಕ್ಷಧಾರಣದಿಂದಲೇ ಎಲ್ಲ ಪಾತಕಗಳಿಂದ ಮುಕ್ತನಾಗುತ್ತಾನೆ.
ದರ್ಶನಾತ್ ಸ್ಪರ್ಶನಾಚ್ಚೈವ
ಸ್ಮರಣಾದಪಿ ಪೂಜನಾತ್ |
ರುದ್ರಾಕ್ಷ ಧಾರಣಾ ಲ್ಲೋಕೇ
ಮುಚ್ಯಂತೇ ಪಾತಕೈರ್ಜನಾಃ || 7-62
ರುದ್ರಾಕ್ಷಿಗಳನ್ನು ನೋಡುವುದರಿಂದ, ಮುಟ್ಟುವುದರಿಂದ,
ಸ್ಮರಿಸುವುದರಿಂದ, ಪೂಜಿಸುವುದರಿಂದ ಮತ್ತು ಧರಿಸುವುದರಿಂದ
ಈ ಲೋಕದ ಜನರು ಪಾತಕಗಳಿಂದ ಬಿಡುಗಡೆ ಹೊಂದುತ್ತಾರೆ.
ಬ್ರಾಹ್ಮಣೋ ವಾಂತ್ಯಜೋ ವಾಪಿ
ಮೂರ್ಖೊ ವಾ ಪಂಡಿತೋಪಿ ವಾ |
ರುದ್ರಾಕ್ಷಧಾರಣಾದೇವ
ಮುಚ್ಯತೇ ಸರ್ವಪಾತಕೈಃ || 7-63
ಬ್ರಾಹ್ಮಣನಾಗಲಿ, ಅಂತ್ಯಜನಾಗಲಿ, ಮೂರ್ಖನೇ ಆಗಲಿ ಅಥವಾ
ಪಂಡಿತನೇ ಆಗಿರಲಿ ಅವನು ರುದ್ರಾಕ್ಷಧಾರಣದಿಂದಲೇ ಎಲ್ಲ
ಪಾತಕಗಳಿಂದ ಮುಕ್ತನಾಗುತ್ತಾನೆ.
ಗವಾಂ ಕೋಟಿಪ್ರದಾನಸ್ಯ |
ಯತ್ಫಲಂ ಭುವಿ ಲಭ್ಯತೇ |
ತತ್ಫಲಂ ಲಭತೇ ಮರ್ತ್ಯೊ:
ನಿತ್ಯಂ ರುದ್ರಾಕ್ಷಧಾರಣಾತ್ || 7-64
ಕೋಟಿ ಗೋದಾನವನ್ನು ಮಾಡಿದರೆ ಯಾವ ಫಲವು ಲಭ್ಯವಾಗುವುದೋ ಈ ಭೂಲೋಕದಲ್ಲಿ
ನಿತ್ಯವೂ ರುದ್ರಾಕ್ಷಿಯನ್ನು ಧರಿಸಿದ ಮನುಷ್ಯನು ಅದೇ ಫಲವನ್ನು ಪಡೆಯುತ್ತಾನೆ.
#ಮೃತ್ಯುಕಾಲೇ ತು ರುದ್ರಾಕ್ಷಮ್
ನಿಷ್ಪೀಡ್ಯ ಸಹ ವಾರಿಣಾ|
ಯಃ ಪಿಬೇಚ್ಚಿಂತಯನ್ ರುದ್ರಮ್|
ರುದ್ರಲೋಕಂ ಸ ಗಚ್ಛತಿ || 7-65
ಮರಣ ಸಮಯದಲ್ಲಿ ರುದ್ರಾಕ್ಷವನ್ನು ನೀರಿನೊಂದಿಗೆ ತೇಯ್ದು ರುದ್ರನನ್ನು
ಚಿಂತಿಸುತ್ತಾ ಯಾರು ಅದನ್ನು ಪಾನ ಮಾಡುತ್ತಾರೆಯೋ ಅವರು ರುದ್ರಲೋಕವನ್ನು ಹೊಂದುವರು.
ಭಸ್ಮೋದ್ಧೂಲಿತಸರ್ವಾಂಗಾಃ
ಧೃತರುದ್ರಾಕ್ಷಮಾಲಿಕಾಃ |
ಯೇ ಭವಂತಿ ಮಹಾತ್ಮಾನಃ
ತೇ ರುದ್ರಾ ನಾತ್ರ ಸಂಶಯಃ || 7-66
ಸರ್ವಾಂಗಗಳಲ್ಲಿ ಭಸ್ಮೋದ್ಧೂಲನೆಯನ್ನು ಮಾಡಿಕೊಂಡು ರುದ್ರಾಕ್ಷ
ಮಾಲೆಗಳನ್ನು ಯಾವ ಮಹಾತ್ಮರು ಧರಿಸುತ್ತಾರೆಯೋ ಅವರು ನಿಃಸಂಶಯವಾಗಿ ರುದ್ರರೇ ಆಗಿರುತ್ತಾರೆ.
#ನಿತ್ಯಾನಿ ಕಾಮ್ಯಾನಿ ನಿಮಿತ್ತಜಾನಿ
ಕರ್ಮಾಣಿ ಸರ್ವಾಣಿ ಸದಾಪಿ ಕುರ್ವನ್|
ಯೋಭಸ್ಮರುದ್ರಾಕ್ಷಧರೋ ಯದಿ ಸ್ಯಾದ್|
ದ್ವಿಜೋ ನ ತಸ್ಯಾಸ್ತಿ ಫಲೋಪಪತ್ತಿಃ || 7-67
ಯಾವ ದ್ವಿಜನು ಯಾವಾಗಲೂ ನಿತ್ಯನೈಮಿತ್ತಿಕ ಮತ್ತು
ಕಾಮ್ಯಾದಿ ಕರ್ಮಗಳನ್ನು ತಪ್ಪದೆ ಮಾಡುತ್ತಿದ್ದರೂ ಭಸ್ಮ ರುದ್ರಾಕ್ಷಗಳನ್ನು ಧರಿಸಿಕೊಂಡಿರದಿದ್ದರೆ ಅವನಿಗೆ ಆ ಕರ್ಮದ ಫಲಗಳು ದೊರೆಯುವುದಿಲ್ಲ.
ಸರ್ವೆಷು ವರ್ಣಾಶ್ರಮ ಸಂಗತೇಷು
ನಿತ್ಯಂ ಸದಾಚಾರಪರಾಯಣೇಷು |
ಶ್ರುತಿಸ್ಮೃತಿಭ್ಯಾಮಿಹ ಚೋದ್ಯಮಾನೋ
ವಿಭೂತಿರುದ್ರಾಕ್ಷಧರಃ ಸಮಾನಃ||7-68
ಎಲ್ಲಾ ವರ್ಣಗಳಲ್ಲಿ, ಎಲ್ಲ ಆಶ್ರಮಗಳಲ್ಲಿ ಇದ್ದುಕೊಂಡು ಯಾವಾಗಲೂ ಸದಾಚಾರ ಪಾರಾಯಣರಾಗಿರುವ ಜನರಲ್ಲಿ ಯಾವನು
ವಿಭೂತಿ ರುದ್ರಾಕ್ಷಿಗಳನ್ನು ಧರಿಸಿಕೊಂಡಿರುವನೋ ಅವನೊಬ್ಬನೇ ಗೌರವಾನ್ವಿತನು.
ವೇದಶಾಸ್ತ್ರಗಳಿಂದ ಹೊಗಳಲ್ಪಡುವವನೂ ಆಗುತ್ತಾನೆ
(ಎಲ್ಲಾ ವರ್ಣಾಶ್ರಮಗಳಲ್ಲಿ ಭಸ್ಮ ರುದ್ರಾಕ್ಷಗಳನ್ನು ಧರಿಸಿದವನೇ ಶ್ರೇಷ್ಠ ಎಂಬುದು ತಾತ್ಪರ್ಯ).
ಇತಿ ರುದ್ರಾಕ್ಷಧಾರಣಸ್ಥಲಂ ಓಂ ತತ್ಸತ್ ಇತಿ
ಶ್ರೀ ಶಿವಗೀತೇಷು ಸಿದ್ಧಾಂತಾಗಮೇಷು
ಶಿವಾದ್ವೈತ ವಿದ್ಯಾಯಾಂ ಶಿವಯೋಗಶಾಸ್ತ್ರೇ
ಶ್ರೀ ರೇಣುಕಾಗಸ್ತ್ಯಸಂವಾದೇ ವೀರಶೈವ ಧರ್ಮನಿರ್ಣಯೇ
ಶಿವಯೋಗಿ ಶಿವಾಚಾರ್ಯ ವಿರಚಿತೇ ಶ್ರೀ ಸಿದ್ಧಾಂತಶಿಖಾಮಣೌ
ಭಕ್ತ ಸ್ಥಲೇ ಭಸ್ಮ ರುದ್ರಾಕ್ಷ ಧಾರಣ ಸ್ಥಲ ಪ್ರಸಂಗೋ ನಾಮ
ಸಪ್ತಮಃ ಪರಿಚ್ಛೇದಃ ||
ಇಲ್ಲಿಗೆ ರುದ್ರಾಕ್ಷಧಾರಣಸ್ಥಲವು ಮುಗಿಯಿತು.
ಓಂ ತತ್ಸತ್ ಇತಿ ಶ್ರೀ ಶಿವನಿಂದ ಉಪದೇಶಿಸಲ್ಪಟ್ಟು ಶ್ರೀ ಸಿದ್ಧಾಂತಾಗಮಗಳಲ್ಲಿಯ ಶಿವಾದ್ವೈತ ವಿದ್ಯಾರೂಪವೂ ಶಿವಯೋಗಶಾಸ್ತ್ರವೂ
ಶ್ರೀ ರೇಣುಕಾಗಸ್ತ್ಯಸಂವಾದ ರೂಪವೂ
ಶ್ರೀ ವೀರಶೈವಧರ್ಮನಿರ್ಣಯವೂ ಶ್ರೀ ಶಿವಯೋಗಿಶಿವಾಚಾರ್ಯ ವಿರಚಿತವೂ ಆದ
ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿ ಭಕ್ತಸ್ಥಲದಲ್ಲಿಯ ಭಸ್ಮ-ರುದ್ರಾಕ್ಷಧಾರಣಸ್ಥಲ ಪ್ರಸಂಗ ಎಂಬ ಹೆಸರಿನ ಏಳನೆಯ ಪರಿಚ್ಛೇದವು ಮುಗಿದುದು.