ಷಷ್ಠಃ ಪರಿಚ್ಛೇದಃ -
ಗುರುಕಾರುಣ್ಯಲಿಂಗಧಾರಣಪ್ರಸಂಗಃ
ಅಥ ಗುರುಕಾರುಣ್ಯಸ್ಥಲಮ್
ತತೋ ವಿವೇಕಸಂಪನ್ನೋ
ವಿರಾಗೀ ಶುದ್ಧ ಮಾನಸಃ |
ಜಿಜ್ಞಾಸುಃ ಸರ್ವ ಸಂಸಾರ-
ದೋಷ ಧ್ವಂಸ ಕರಂ ಶಿವಮ್ || 6-1
ಪರಿಶುದ್ಧವಾದ ಮನಸ್ಸುಳ್ಳ (ಪಿಂಡಶಬ್ದ ವಾಚ್ಯನಾದ) ವಿವೇಕ ಸಂಪನ್ನನಾದ
(ಪಿಂಡಜ್ಞಾನಿಯಾದ) ವಿರಾಗಿಯು (ಸಂಸಾರಹೇಯಸ್ಥಲಿಯು) ಬಳಿಕ ಸಂಸಾರದ ಎಲ್ಲ ದೋಷಗಳನ್ನು
ಧ್ವಂಸ ಮಾಡುವ ಶಿವನ ಜಿಜ್ಞಾಸೆಯುಳ್ಳವನಾಗಿ (ಶಿವನನ್ನು ತಿಳಿದುಕೊಳ್ಳುವ ಉತ್ಕಟ ಇಚ್ಛೆಯುಳ್ಳವನಾಗಿ)
ಶ್ರೀ ಗುರುವಿನ ಕಡೆಗೆ ಹೋಗುವನು.
ಉಪೈತಿ ಲೋಕ ವಿಖ್ಯಾತಮ್
ಲೋಭ ಮೋಹ ವಿವರ್ಜಿತಮ್ |
ಆತ್ಮ ತತ್ತ್ವ ವಿಚಾರಜ್ಞಮ್
ವಿಮುಕ್ತ ವಿಷಯ-ಭ್ರಮಮ್ || 6-2
ಲೋಕವಿಖ್ಯಾತನಾದ, ಲೋಭ ಮೋಹವರ್ಜಿತನಾದ,
ಆತ್ಮತತ್ತ್ವ ವಿಚಾರವನ್ನು ಬಲ್ಲ, ವಿಷಯಭ್ರಮೆಯಿಂದ ವಿಮುಕ್ತನಾದ-
ಶಿವಸಿದ್ಧಾಂತ ತತ್ತ್ವಜ್ಞಮ್
ಛಿನ್ನಸಂದೇಹ ವಿಭ್ರಮಮ್ |
ಸರ್ವತಂತ್ರ ಪ್ರಯೋಗಜ್ಞಮ್
ಧಾರ್ಮಿಕಂ ಸತ್ಯವಾದಿನಮ್ || 6-3
ಶಿವ ಸಿದ್ಧಾಂತವನ್ನು ಬಲ್ಲ, ಸಂದೇಹ ಮತ್ತು ವಿಭ್ರಮೆಗಳನ್ನು
ಕತ್ತರಿಸಿ ಹಾಕಿದ, ಸರ್ವತಂತ್ರಗಳ (ಎಲ್ಲ ಶಿವಾಗಮಗಳ)
ಪ್ರಯೋಗವನ್ನು ಬಲ್ಲ, ಧರ್ಮನಿಷ್ಠನಾದ ಮತ್ತು ಸತ್ಯವಾದಿಯಾದ-
ಕುಲ ಕ್ರಮಾ ಗತಾಚಾರಮ್
ಕುಮಾರ್ಗಾಚಾರ ವರ್ಜಿತಮ್ |
ಶಿವಧ್ಯಾನ ಪರಂ ಶಾಂತಮ್
ಶಿವತತ್ತ್ವವಿವೇಕಿನಮ್ || 6-4
ಗುರುವಂಶ ಕ್ರಮದಿಂದ ಬಂದ, ಆಚಾರ (ಸದಾಚಾರ)
ಸಂಪನ್ನನಾದ, ಕುತ್ಸಿತ (ದುರಾಚಾರ) ಆಚಾರಗಳಿಂದ ವರ್ಜಿತನಾದ,
ಶಿವಧ್ಯಾನತತ್ಪರನಾದ, ಶಾಂತ (ಮಾತ್ಸರ್ಯರಹಿತ)ನಾದ, ಶಿವತತ್ತ್ವ ವಿವೇಕವುಳ್ಳ-
ಭಸ್ಮೋದ್ಧೂಲನ ನಿಷ್ಣಾತಮ್
ಭಸ್ಮತತ್ತ್ವ ವಿವೇಕಿನಮ್ |
ತ್ರಿಪುಂಡ್ರ ಧಾರಣೋತ್ಕಂಠಮ್
ಧೃತ ರುದ್ರಾಕ್ಷ ಮಾಲಿಕಮ್ || 6-5
ಭಸ್ಮೋದ್ಧೂಲನ ಕ್ರಿಯೆಯಲ್ಲಿ ನಿಷ್ಣಾತನಾದ, ಭಸ್ಮತತ್ತ್ವವನ್ನು ತಿಳಿದಿರುವ,
ತ್ರಿಪುಂಡ್ರವನ್ನು ಧರಿಸುವಲ್ಲಿ ಅತ್ಯಾಸಕ್ತಿಯುಳ್ಳ, ರುದ್ರಾಕ್ಷಮಾಲೆಯನ್ನು ಧರಿಸಿದ-
ಲಿಂಗಧಾರಣ ಸಂಯುಕ್ತಮ್
ಲಿಂಗಪೂಜಾ ಪರಾಯಣಮ್ |
ಲಿಂಗಾಂಗ ಯೋಗ ತತ್ತ್ವಜ್ಞಮ್
ನಿರೂಢಾದ್ವೈತ ವಾಸನಮ್ |
ಲಿಂಗಾಂಗ ಸ್ಥಲ ಭೇದಜ್ಞಮ್|
ಶ್ರೀಗುರುಂ ಶಿವವಾದಿನಮ್ |6-6
ಲಿಂಗಧಾರಣೆಯಿಂದ ಕೂಡಿದ, ಲಿಂಗಪೂಜಾ ಪರಾಯಣನಾದ,
ಲಿಂಗಾಂಗಯೋಗದ ತತ್ತ್ವವನ್ನು ತಿಳಿದಿರುವ, ಶಿವಾದ್ವೈತ ಭಾವನಾನಿಷ್ಠನಾದ,
ಲಿಂಗಸ್ಥಲ ಅಂಗಸ್ಥಲ ಭೇದವನ್ನು ತಿಳಿದಿರುವ, ಶಿವತತ್ತ್ವವನ್ನು ಬೋಧಿಸುವ
ಶ್ರೀ (ಷಡ್ಗುಣೈಶ್ವರ್ಯ ಸಂಪನ್ನನಾದ) ಗುರುವನ್ನು (ಶಿಷ್ಯಭಾವದಿಂದ) ಆಶ್ರಯಿಸುತ್ತಾನೆ.
ಸೇವೇತ ಪರಮಾಚಾರ್ಯಮ್
ಶಿಷ್ಯೋ ಭಕ್ತಿ ಭಯಾನ್ವಿತಃ |
ಷಣ್ಮಾಸಾನ್ ವತ್ಸರಂ ವಾಪಿ
ಯಾವದೇಷ ಪ್ರಸೀದತಿ || 6-7
ಭಯಭಕ್ತಿಗಳಿಂದ ಕೂಡಿದ ಶರಣಾಗತನಾದ ಶಿಷ್ಯನು ಆರು ತಿಂಗಳವರೆವಿಗೆ ಅಥವಾ
ಒಂದು ವರ್ಷದವರೆವಿಗೆ ಅಥವಾ ಅವನು (ಶ್ರೀ ಗುರುವು)
ಪ್ರಸನ್ನನಾಗುವವರೆವಿಗೆ ಪರಮಾಚಾರ್ಯನ ಸೇವೆಯನ್ನು ಮಾಡಬೇಕು.
ಪ್ರಸನ್ನಂ ಪರಮಾಚಾರ್ಯಮ್
ಭಕ್ತ್ಯಾ ಮುಕ್ತಿ ಪ್ರದರ್ಶಕಮ್ |
ಪ್ರಾರ್ಥಯೇದಗ್ರತಃ ಶಿಷ್ಯಃ
ಪ್ರಾಂಜಲಿರ್ ವಿನಯಾನ್ವಿತಃ || 6-8
ತನ್ನ ಭಕ್ತಿಯಿಂದ ಪ್ರಸನ್ನನಾದ, ಮುಕ್ತಿಮಾರ್ಗವನ್ನು ತೋರಿಸುವ ಪರಮಾಚಾರ್ಯನ ಎದುರಿಗೆ ಶಿಷ್ಯನು ಅಂಜಲಿಬದ್ಧನಾಗಿ (ಹೀಗೆ) ವಿನಯದಿಂದ ಪ್ರಾರ್ಥಿಸಬೇಕು.
ಭೋ ಕಲ್ಯಾಣ ಮಹಾಭಾಗ
ಶಿವಜ್ಞಾನ ಮಹೋದಧೇ |
ಆಚಾರ್ಯವರ್ಯ ಸಂಪ್ರಾಪ್ತಮ್
ರಕ್ಷ ಮಾಂ ಭವ ರೋಗಿಣಮ್ || 6-9
ಕಲ್ಯಾಣಸ್ವರೂಪನಾದ, ಮಹಾಭಾಗ (ಶ್ರೇಷ್ಠ)ನಾದ,
ಶಿವಜ್ಞಾನ ಸಾಗರನಾದ ಹೇ ಆಚಾರ್ಯ ಶ್ರೇಷ್ಠನೇ, ನಿನ್ನ ಬಳಿಗೆ ಬಂದಿರುವ ಭವರೋಗಿಯಾದ ನನ್ನನ್ನು ರಕ್ಷಿಸು.
ಇತಿ ಶುದ್ಧೇನ ಶಿಷ್ಯೇಣ
ಪ್ರಾರ್ಥಿತಃ ಪರಮೋ ಗುರುಃ |
ಶಕ್ತಿಪಾತಂ ಸಮಾಲೋಕ್ಯ
ದೀಕ್ಷಯಾ ಯೋಜಯೇದಮುಮ್ || 6-10
ಹೀಗೆ ಶುದ್ಧನಾದ ಶಿಷ್ಯನಿಂದ ಪ್ರಾರ್ಥಿಸಲ್ಪಟ್ಟ ಪರಮಗುರುವು ಅವನಲ್ಲಿಯ
(ಶಿಷ್ಯನಲ್ಲಿಯ) ಶಕ್ತಿಪಾತದ (ಶಿವಭಕ್ತಿಯ) ಲಕ್ಷಣಗಳನ್ನು ಚೆನ್ನಾಗಿ ನೋಡಿ
ಅವನಿಗೆ ದೀಕ್ಷೆಯನ್ನು ಮಾಡಬೇಕು.
ದೀಯತೇ ಚ ಶಿವಜ್ಞಾನಮ್
ಕ್ಷೀಯತೇ ಪಾಶಬಂಧನಮ್ |
ಯಸ್ಮಾದ ಸಮಾಖ್ಯಾತಾ
ದೀಕ್ಷೇತೀಯಂ ವಿಚಕ್ಷಣೈಃ || 6-11
ಯಾವುದರಿಂದ ಶಿವಜ್ಞಾನವು ಕೊಡಲ್ಪಡುತ್ತದೆಯೋ ಮತ್ತು ಪಾಶಬಂಧವು
ಕ್ಷಯಿಸಲ್ಪಡುತ್ತದೆಯೋ ಅದಕ್ಕೆ (ಆ ಸಂಸ್ಕಾರಕ್ಕೆ) ವಿಚಕ್ಷಣರು (ಶಿವಾಗಮ ವಿಶಾರದರು)
ದೀಕ್ಷೆಯೆಂದು ಕರೆಯುತ್ತಾರೆ.
ಸಾ ದೀಕ್ಷಾ ತ್ರಿವಿಧಾ ಪ್ರೋಕ್ತಾ
ಶಿವಾಗಮ ವಿಶಾರದೈಃ |
ವೇಧಾರೂಪಾ ಕ್ರಿಯಾರೂಪಾ
ಮಂತ್ರರೂಪಾ ಚ ತಾಪಸ || 6-12
ಯಾವುದರಿಂದ ಶಿವಜ್ಞಾನವು ಕೊಡಲ್ಪಡುತ್ತದೆಯೋ ಮತ್ತು ಪಾಶಬಂಧವು
ಕ್ಷಯಿಸಲ್ಪಡುತ್ತದೆಯೋ ಅದಕ್ಕೆ (ಆ ಸಂಸ್ಕಾರಕ್ಕೆ) ವಿಚಕ್ಷಣರು (ಶಿವಾಗಮ ವಿಶಾರದರು)
ದೀಕ್ಷೆಯೆಂದು ಕರೆಯುತ್ತಾರೆ. ಸಾ ದೀಕ್ಷಾ ತ್ರಿವಿಧಾ ಪ್ರೋಕ್ತಾ
ಗುರೋ-ರಾ ಲೋಕ ಮಾತ್ರೇಣ
ಹಸ್ತ ಮಸ್ತಕ ಯೋಗತಃ |
ಯಃ ಶಿವತ್ತ್ವ ಸಮಾವೇಶೋ
ವೇಧಾ ದೀಕ್ಷೇತಿ ಸಾ ಮತಾ || 6-13
ಶ್ರೀಗುರುವಿನ ಆಲೋಕನ (ಕೃಪಾಕಟಾಕ್ಷ ವೀಕ್ಷಣ) ಮಾತ್ರದಿಂದ ಮತ್ತು ಹಸ್ತ ಮಸ್ತಕ
ಸಂಯೋಗದಿಂದ ಯಾವ ಶಿವತ್ವವು ಸಮಾವೇಶಗೊಳ್ಳುವುದೋ,
ಅದು ವೇಧಾದೀಕ್ಷೆಯೆಂದು ಸಮ್ಮತವಾಗಿದೆ.
ಮಾಂತ್ರೀ ದೀಕ್ಷೇತಿ ಸಾ ಪ್ರೋಕ್ತಾ
ಮಂತ್ರ ಮಾತ್ರೋಪದೇಶಿನೀ |
ಕುಂಡಮಂಡಲಿ ಕೋ ಪೇತಾ
ಕ್ರಿಯಾದೀಕ್ಷಾ ಕ್ರಿಯೋತ್ತರಾ || 6-14
ಮಂತ್ರವನ್ನು ಮಾತ್ರ ಉಪದೇಶಿಸಲ್ಪಡುವ ದೀಕ್ಷೆಯು ಮಂತ್ರದೀಕ್ಷೆಯೆಂದು ಹೇಳಲ್ಪಡುತ್ತದೆ.
ಕುಂಡಮಂಡಲಗಳನ್ನು ರಚಿಸಿ ಕ್ರಿಯಾಪ್ರಧಾನವಾಗಿ ಮಾಡಲ್ಪಡುವ ದೀಕ್ಷೆಯು ಕ್ರಿಯಾದೀಕ್ಷೆಯು.
ಶುಭಮಾಸೇ ಶುಭತಿಥೌ
ಶುಭಕಾಲೇ ಶುಭೇಹನಿ |
ವಿಭೂತಿಂ ಶಿವಭಕ್ತೇಭ್ಯೋ
ದತ್ತ್ವಾ ತಾಂಬೂಲ ಪೂರ್ವಕಮ್ || 6-15
ಶುಭ (ಮಾಘಾದಿ) ಮಾಸಗಳಲ್ಲಿ, ಶುಭ (ಭದ್ರಾದಿ) ತಿಥಿಗಳಲ್ಲಿ, ಶುಭ (ಅಮೃತಾದಿ) ಕಾಲಗಳಲ್ಲಿ,
ಶುಭ (ಸೋಮ, ಶುಕ್ರಾದಿ) ವಾರದಲ್ಲಿ ಶಿವಭಕ್ತರಿಗೆ ತಾಂಬೂಲಪೂರ್ವಕವಾದ ವಿಭೂತಿಯನ್ನು ಕೊಟ್ಟು-
ಯಥಾವಿಧಿ ಯಥಾಯೋಗಮ್
ಶಿಷ್ಯಮಾನೀಯ ದೇಶಿಕಃ |
ಸ್ನಾತಂ ಶುಕ್ಲಾಂಬರಧರಮ್
ದಂತಧಾವನ ಪೂರ್ವಕಮ್ || 6-16
ಮಂಡಲೇ ಸ್ಥಾಪಯೇಚ್ಛಿಷ್ಯಮ್
ಪ್ರಾಮ್ ಮುಖಂ ತಮ್ ದಮುಖಃ |
ಶಿವಸ್ಯ ನಾಮ ಕೀರ್ತಿಂ ಚ
ಚಿಂತಾಮಪಿ ಚ ಕಾರಯೇತ್ || 6-17
ದಂತಧಾವನವನ್ನು ಮಾಡಿ (ಹಲ್ಲುಜ್ಜಿ) ಸ್ನಾನ ಮಾಡಿ, ಶುಭ್ರವಾದ ಮಡಿಯನ್ನುಟ್ಟ
ಶಿಷ್ಯನನ್ನು ದೇಶಿಕನು ಕರೆತಂದು ಮಂಡಲ (ಸ್ವಸ್ತಿಕ ಮಂಡಲ)ದಲ್ಲಿ ಪೂರ್ವ ಇಲ್ಲವೇ
ಉತ್ತರಮುಖವಾಗಿ ಕೂಡಿಸಬೇಕು ಮತ್ತು ಶಿವನ ಚಿಂತನೆಯನ್ನು
ಹಾಗೂ ಶಿವನಾಮ ಸಂಕೀರ್ತನೆಯನ್ನು ಮಾಡಿಸಬೇಕು.
ವಿಭೂತಿ ಪಟ್ಟಂ ದತ್ತ್ವಾಗ್ರೇ
ಯಥಾಸ್ಥಾನಂ ಯಥಾವಿಧಿ |
ಪಂಚಬ್ರಹ್ಮ ಮಯೈಸ್ತತ್ರ
ಸ್ಥಾಪಿತೈಃ ಕಲಶೋದಕೈಃ || 6-18
ವಿಧಿಪೂರ್ವಕವಾಗಿ (ಶಾಸ್ತ್ರೋಕ್ತ ಪದ್ಧತಿಯಂತೆ) ಆಯಾ ಸ್ಥಾನ (ಮಸ್ತಕಾದಿ)ಗಳಲ್ಲಿ
ತ್ರಿಪುಂಡ್ರ ಪಟ್ಟವನ್ನು ಧರಿಸಿ, ಅವನ ಮುಂದೆ ಪಂಚಬ್ರಹ್ಮ ಪ್ರತೀಕಗಳಾಗಿ
ಸ್ಥಾಪಿಸಲ್ಪಟ್ಟ ಕಲಶ (ಪಂಚ ಕಲಶ)ಗಳ ಉದಕದಿಂದ-
ಆಚಾರ್ಯಃ ಸಮಮೃತ್ವಿಗ್ಭಿಃ
ತ್ರಿಃ ಶಿಷ್ಯ ಮಭಿಷಿಂಚಯೇತ್ |
ಅಭಿಷಿಚ್ಯ ಗುರುಃ ಶಿಷ್ಯಮ್
ಆಸೀನಂ ಪರಿತಃ ಶುಚಿಮ್ || 6-19
ತತಃ ಪಂಚಾಕ್ಷರೀಂ ಶೈವೀಮ್
ಸಂಸಾರ ಭಯ ತಾರಿಣೀಮ್ || 6-20
ಆಚಾರ್ಯನು ಋತ್ವಿಜರಿಂದೊಡಗೂಡಿ ಶಿಷ್ಯನಿಗೆ ಮೂರು ಬಾರಿ ಅಭಿಷೇಕವನ್ನು ಮಾಡಬೇಕು.
ಹೀಗೆ ಅಭಿಷೇಕವನ್ನು ಮಾಡಿ ಗುರುವು ತನ್ನ ಸಮೀಪದಲ್ಲಿ ಶುಚಿರ್ಭೂತನಾಗಿ ಕುಳಿತಿರುವ ಶಿಷ್ಯನಿಗೆ-
ತಸ್ಯ ದಕ್ಷಿಣ ಕರ್ಣೆ ತು
ನಿಗೂಢಮಪಿ ಕೀರ್ತಯೇತ್ |
ಛಂದೋ ರೂಪಮ್ ಋಷಿಂ ಚಾಸ್ಯ
ದೇವತಾ ನ್ಯಾಸ ಪದ್ಧತಿಮ್ || 6-21
ಅನಂತರ ಸಂಸಾರಭಯವನ್ನು ದೂರ ಮಾಡುವ, ಶಿವ ಸಂಬಂಧಿಯಾದ ಪಂಚಾಕ್ಷರ ಮಂತ್ರವನ್ನು (ಶಿವ ಪಂಚಾಕ್ಷರಿ ಮಂತ್ರವನ್ನು)
ಆ ಶಿಷ್ಯನ ಬಲ ಗಿವಿಯಲ್ಲಿ ನಿಗೂಢ (ಗುಪ್ತ)ವಾಗಿ ಹೇಳಬೇಕು. ಅದರಂತೆ ಆ ಮಂತ್ರದ ಛಂದಸ್ಸು, ರೂಪ, ಋಷಿ, ದೇವತೆ
ಮತ್ತು ಅದರ ನ್ಯಾಸ ಪದ್ಧತಿಯನ್ನು ಹೇಳಬೇಕು.
ಇತಿ ಗುರುಕಾರುಣ್ಯಸ್ಥಲಮ್
ಅಥ ಲಿಂಗಧಾರಣ ಸ್ಥಲಮ್
ಸ್ಫಾಟಿಕಂ ಶೈಲಜಂ ವಾಪಿ
ಚಂದ್ರಕಾಂತ ಮಯಂ-ತು ವಾ |
ಬಾಣಂ-ವಾ ಸೂರ್ಯಕಾಂತಂ ವಾ
ಲಿಂಗಮೇಕಂ ಸಮಾ-ಹರೇತ್ || 6-22
ಸ್ಪಟಿಕ, ಶ್ರೀಶೈಲಪರ್ವತ ಶಿಲೆ, ಚಂದ್ರಕಾಂತಶಿಲೆ,
ಸೂರ್ಯಕಾಂತ ಶಿಲೆ ಮತ್ತು ನರ್ಮದಾ ಬಾಣಲಿಂಗ –
ಇವುಗಳಲ್ಲಿ ಯಾವುದಾದರೊಂದು ಶಿಲೆಯಿಂದ ನಿರ್ಮಿತವಾದ ಲಿಂಗವನ್ನು (ದೀಕ್ಷೆಗಾಗಿ) ತೆಗೆದುಕೊಳ್ಳಬೇಕು.
ಸರ್ವ ಲಕ್ಷಣ ಸಂಪನ್ನೇ
ತಸ್ಮಿನ್ ಲಿಂಗೇ ವಿಶೋಧಿತೇ |
ಪೀಠಸ್ಥಿತೇ ಅಭಿಷಿಕ್ತೇ ಚ
ಗಂಧ ಪುಷ್ಪಾ ದಿ ಪೂಜಿತೇ |
ಮಂತ್ರಪೂತೇ ಕಲಾಂ ಶೈವೀಮ್
ಯೋಜಯೇದ್ವಿಧಿನಾ ಗುರುಃ || 6-23
ಶಿಷ್ಯಸ್ಯ ಪ್ರಾಣಮಾದಾಯ
ಲಿಂಗೇ ತತ್ರ ನಿಧಾಪಯೇತ್ | 6-24
ಸರ್ವ ಲಕ್ಷಣಗಳಿಂದ ಕೂಡಿದ, ಶಾಸ್ತ್ರವಿಧಿಯಿಂದ ಪರಿಶುದ್ಧಗೊಳಿಸಿದ ಹಸ್ತಪೀಠದಲ್ಲಿರಿಸಿ ಅಭಿಷೇಕವನ್ನು
ಮಾಡಿದ ಮತ್ತು ಗಂಧ ಪುಷ್ಪಾದಿಗಳಿಂದ ಪೂಜಿಸಲ್ಪಟ್ಟ,
ಮಂತ್ರದಿಂದ ಸಂಸ್ಕರಿಸಲ್ಪಟ್ಟ
ಆ ಲಿಂಗದಲ್ಲಿ ಶ್ರೀಗುರುವು ವಿಧ್ಯುಕ್ತವಾಗಿ ಶಿವಕಲೆಯನ್ನು (ಶಿಷ್ಯನ ಚಿತ್ಕಳೆಯನ್ನು) ಸಂಯೋಜಿಸಬೇಕು
(ಹಸ್ತ ಮಸ್ತಕ ಸಂಯೋಗ ದಿಂದ). ಆ ಲಿಂಗದಲ್ಲಿಯೇ ಶಿಷ್ಯನ ಪ್ರಾಣವನ್ನೂ ಸಹ ತೆಗೆದುಕೊಂಡು ಪ್ರತಿಷ್ಠಿಸಬೇಕು.
ತಲ್ಲಿಂಗಂ ತಸ್ಯ ತು ಪ್ರಾಣೇ
ಸ್ಥಾಪಯೇ ದೇಕ ಭಾವತಃ |
ಏವಂ ಕೃತ್ವಾ ಗುರುರ್ ಲಿಂಗಮ್
ಶಿಷ್ಯಹಸ್ತೇ ನಿಧಾಪಯೇತ್ || 6-25
ಅದರಂತೆ ಆ ಶಿಷ್ಯನ ಪ್ರಾಣದಲ್ಲಿ ಆ ಲಿಂಗವನ್ನು ಏಕಭಾವದಿಂದ
(ತಾದಾತ್ಮ್ಯ ಭಾವದಿಂದ) ಸ್ಥಾಪಿಸಬೇಕು. ಹೀಗೆ ಮಾಡಿ ಶ್ರೀಗುರುವು ಶಿಷ್ಯನ ಹಸ್ತದಲ್ಲಿ ಆ ಲಿಂಗವನ್ನು ಕೊಡಬೇಕು.
ಪ್ರಾಣವದ್ಧಾರಣೀಯಂ ತತ್
ಪ್ರಾಣಲಿಂಗಮಿದಂ ತವ |
ಕದಾಚಿತ್ ಕೃತ್ರಚಿದ್ವಾಪಿ
ನ ವಿಯೋಜಯ ದೇಹತಃ || 6-26
ಹೇ ಶಿಷ್ಯನೇ, ಇದು ನಿನ್ನ ಪ್ರಾಣಲಿಂಗವು. ಇದನ್ನು ನೀನು ನಿನ್ನ ಪ್ರಾಣದಂತೆ ಧರಿಸಬೇಕು ಎಂದೂ, ಎಲ್ಲಿಯೂ ಇದನ್ನು ನಿನ್ನ ದೇಹದಿಂದ ಅಗಲಿಸಬೇಡ.
ಯದಿ ಪ್ರಮಾದಾತ್ ಪತಿತೇ
ಲಿಂಗೇ ದೇಹಾನ್ ಮಹೀತಲೇ |
ಪ್ರಾಣಾನ್ ವಿಮುಂಚ ಸಹಸಾ
ಪ್ರಾಪ್ತಯೇ ಮೋಕ್ಷಸಂಪದಃ || 6-27
ಒಂದು ವೇಳೆ ಪ್ರಮಾದದಿಂದ(ಎಚ್ಚರಿಕೆ ಇಲ್ಲದಿರುವುದರಿಂದ)ಲಿಂಗವು
ದೇಹದಿಂದ ಕಳಚಿ ಭೂಮಿಯಮೇಲೆ ಬಿದ್ದದ್ದೇ ಆದರೆ ಮೋಕ್ಷ ಸಂಪತ್ತಿನ ಪ್ರಾಪ್ತಿಗಾಗಿ ಕೂಡಲೇ
ಪ್ರಾಣವನ್ನು ತ್ಯಾಗಮಾಡು(ದೀಕ್ಷೆಯಿಂದ ಪಡೆದ ಲಿಂಗವನ್ನು ಪ್ರಾಣಕ್ಕಿಂತಲೂ ಮಿಗಿಲಾಗಿ ಪ್ರೀತಿಸು ಎಂಬ ಭಾವ).
ಇತಿ ಸಂಬೋಧಿತಃ ಶಿಷ್ಯೋ
ಗುರುಣಾ ಶಾಸ್ತ್ರವೇದಿನಾ |
ಧಾರಯೇಚ್ಛಾಂಕರಂ ಲಿಂಗಮ್
ಶರೀರೇ ಪ್ರಾಣಯೋಗತಃ || 6-28
ಶಾಸ್ತ್ರ (ವೀರಶೈವ ಶಾಸ್ತ್ರ)ವನ್ನು ಬಲ್ಲಂತಹ ಶ್ರೀ ಗುರುವಿನಿಂದ ಈ ರೀತಿಯಾಗಿ ಸಂಬೋಧಿಸಲ್ಪಟ್ಟ
(ತಿಳಿ ಹೇಳಲ್ಪಟ್ಟ) ಶಿಷ್ಯನು ಆ ಇಷ್ಟಲಿಂಗವನ್ನು ಪ್ರಾಣವಿರುವವರೆಗೆ ತನ್ನ ದೇಹದ ಮೇಲೆ ಧರಿಸಿಕೊಂಡಿರಬೇಕು.
ಲಿಂಗಸ್ಯ ಧಾರಣಂ ಪುಣ್ಯಮ್
ಸರ್ವ ಪಾಪ ಪ್ರಣಾಶನಮ್ |
ಆದೃತಂ ಮುನಿಭಿಃ ಸರ್ವೆಃ
ಆಗಮಾರ್ಥ ವಿಶಾರದೈಃ || 6-29
ಇಷ್ಟಲಿಂಗವನ್ನು ಧರಿಸುವುದರಿಂದ ಪುಣ್ಯದ ಪ್ರಾಪ್ತಿಯಾಗುವುದು
ಮತ್ತು ಎಲ್ಲಾ ಪಾಪಗಳು ನಾಶ ಹೊಂದುವವು.
(ಅಂತೆಯೇ) ಶಿವಾಗಮಗಳ ಅರ್ಥವನ್ನು ತಿಳಿದ ವಿಶಾರದರಾದ
(ನಿಪುಣರಾದ) ಎಲ್ಲ ಮುನಿಗಳು ಇದನ್ನು ಅಂಗೀಕರಿಸಿದ್ದಾರೆ.
ಲಿಂಗಧಾರಣ ಮಾಖ್ಯಾತಮ್
ದ್ವಿಧಾ ಸರ್ವಾರ್ಥ ಸಾಧಕೈಃ |
ಬಾಹ್ಯಮಾಭ್ಯಂತರಂ ಚೇತಿ
ಮುನಿಭಿರ್ ಮೋಕ್ಷ ಕಾಂಕ್ಷಿಭಿಃ || 6-30
ಸರ್ವ ಪುರುಷಾರ್ಥ ಸಾಧಕರಾದ, ಮೋಕ್ಷಾಕಾಂಕ್ಷಿಗಳಾದ ಮುನಿಗಳಿಂದ
ಈ ಲಿಂಗಧಾರಣೆಯು ಬಾಹ್ಯ ಮತ್ತು ಆಭ್ಯಂತರ
(ಬಹಿರಂಗ ಮತ್ತು ಅಂತರಂಗ)ವೆಂಬುದಾಗಿ ಎರಡು ಪ್ರಕಾರ ಹೇಳಲ್ಪಟ್ಟಿದೆ.
ಚಿದ್ರೂಪಂ ಪರಮಂ ಲಿಂಗಮ್
ಶಾಂಕರಂ ಸರ್ವಕಾರಣಮ್ |
ಯತ್ ತಸ್ಯ ಧಾರಣಂ ಚಿತ್ತೇ
ತದಾಂತರ ಮುದಾಹೃತಮ್ || 6-31
ಸರ್ವಕ್ಕೂ ಕಾರಣೀಭೂತವಾದ, ಶಿವಸಂಬಂಧವಾದ ಯಾವ ಚಿದ್ರೂಪವಾದ
(ಅರಿವಿನ ಸ್ವರೂಪದ) ಆ ಪರಮಲಿಂಗವನ್ನು ಚಿತ್ತದಲ್ಲಿ
ಧರಿಸಿಕೊಳ್ಳುವುದೇ ಅಂತರಲಿಂಗಧಾರಣವೆಂದು ಹೇಳಲಾಗಿದೆ.
ಚಿದ್ರೂಪಂ ಹಿ ಪರಂ ತತ್ತ್ವಮ್
ಶಿವಾಖ್ಯಂ ವಿಶ್ವಕಾರಣಮ್ |
ನಿರಸ್ತವಿಶ್ವ ಕಾಲುಷ್ಯಮ್
ನಿಷ್ಕಲಂ ನಿರ್ವಿಕಲ್ಪಕಮ್ || 6-32
ಸರ್ವಕ್ಕೂ ಕಾರಣೀಭೂತವಾದ, ಶಿವಸಂಬಂಧವಾದ ಯಾವ ಚಿದ್ರೂಪವಾದ (ಅರಿವಿನ ಸ್ವರೂಪದ)
ಆ ಪರಮಲಿಂಗವನ್ನು ಚಿತ್ತದಲ್ಲಿ ಧರಿಸಿಕೊಳ್ಳುವುದೇ ಅಂತರಲಿಂಗಧಾರಣವೆಂದು ಹೇಳಲಾಗಿದೆ.
ಸತ್ತಾನಂದ ಪರಿಸ್ಫೂರ್ತಿ-
ಸಮುಲ್ಲಾಸ ಕಲಾಮಯಮ್ |
ಅಪ್ರಮೇಯಮ ನಿರ್ದೆಶ್ಯಮ್
ಮುಮುಕ್ಷುಭಿರು ಪಾಸಿತಮ್ || 6-33
ಆ ಪರತತ್ವವು ಸತ್ತಾನಂದಗಳ ಪರಿಸ್ಫೂರ್ತಿ (ಸತ್, ಚಿತ್, ಆನಂದ)ಯೆಂಬ ಸಮುಲ್ಲಾಸ ರೂಪವಾದ ಕಲಾಶಕ್ತಿಯಿಂದ ಯುಕ್ತವಾಗಿದೆ.
ಅದು ಪ್ರಮಾಣಗಳಿಗೆ ಅಗಮ್ಯವೂ, ಅನಿರ್ದೆಶ್ಯವೂ ಆಗಿದೆ. ಆದರೂ ಮುಮುಕ್ಷುಗಳಿಂದ ಉಪಾಸಿಸಲು ಅರ್ಹವಾದುದಾಗಿದೆ.
ಪರಂ ಬ್ರಹ್ಮ ಮಹಾಲಿಂಗಮ್
ಪ್ರಪಂಚಾತೀತಮವ್ಯಯಮ್ |
ತದೇವ ಸರ್ವಭೂತಾನಾಮ್
ಅಂತಸ್ತ್ರಿಸ್ಥಾನಗೋಚರಮ್ || 6-34
ಪ್ರಪಂಚಕ್ಕೆ ಅತೀತವಾದ, ಅವ್ಯಯವಾದ (ಅವಿನಾಶಿಯಾದ) ಪರಬ್ರಹ್ಮವೆಂದು
ಕರೆಯಲ್ಪಡುವ ಆ ಮಹಾಲಿಂಗವು ಸರ್ವಜೀವಿಗಳ ಅಂತರಂಗದ ಮೂರು ಸ್ಥಾನಗಳಲ್ಲಿ ಅದೇ ಗೋಚರಿಸುತ್ತದೆ.
ಮೂಲಾಧಾರೇ ಚ ಹೃದಯೇ
ಭ್ರೂಮಧ್ಯೇ ಸರ್ವದೇಹಿನಾಮ್ |
ಜ್ಯೋತಿರ್ಲಿಂಗಂ ಸದಾ ಭಾತಿ
ಯದ್ ಬ್ರಹ್ಮೇತ್ಯಾ ಹುರಾಗಮಾಃ || 6-35
ಶಿವಾಗಮಗಳಲ್ಲಿ ಬ್ರಹ್ಮವೆಂದು ಕರೆಯಿಸಿಕೊಳ್ಳುವ ಆ ಜ್ಯೋತಿರ್ಲಿಂಗವು ಸರ್ವಜೀವಿಗಳ ಮೂಲಾಧಾರ (ಆಧಾರ ಚಕ್ರ),
ಹೃದಯ (ಅನಾಹತ ಚಕ್ರ) ಮತ್ತು ಭ್ರೂಮಧ್ಯ (ಆಜ್ಞಾ ಚಕ್ರ)ಗಳಲ್ಲಿ ಯಾವಾಗಲೂ ಪ್ರಕಾಶಿಸುತ್ತದೆ.
ಅಪರಿಚ್ಛಿನ್ನಮವ್ಯಕ್ತಮ್
ಲಿಂಗಂ ಬ್ರಹ್ಮ ಸನಾತನಮ್ |
ಉಪಾಸನಾರ್ಥ ಮಂತಃಸ್ಥಮ್
ಪರಿಚ್ಛಿನ್ನಂ ಸ್ವಮಾಯ ಯಾ || 6-36
ಅಪರಿಚ್ಛಿನ್ನ (ಅಖಂಡ)ವಾದ, ಅವ್ಯಕ್ತವಾದ, ಸನಾತನವಾದ (ಯಾವಾಗಲೂ ಇರುವ), ಪರಬ್ರಹ್ಮ ಸ್ವರೂಪವಾದ,
ಅಂತಸ್ಥವಾದ ಆ ಲಿಂಗವು ತನ್ನ ಮಾಯಾಶಕ್ತಿಯಿಂದ ಉಪಾಸನೆಗೋಸ್ಕರ ಪರಿಚ್ಛಿನ್ನವಾಯಿತು
(ಖಂಡಿತವಾಯಿತು). (ಇದು ಸರ್ವಾತ್ಮಭಾವವಾಗಿದೆ).
ಲಯಂ ಗಚ್ಛತಿ ಯತ್ರೈವ
ಜಗದೇ ತಚ್ ಚರಾಚರಮ್ |
ಪುನಃ ಪುನಃ ಸಮುತ್ಪತ್ತಿಮ್
ತಲ್ಲಿಂಗಂ ಬ್ರಹ್ಮ ಶಾಶ್ವತಮ್ || 6-37
ಚರಾಚರಾತ್ಮಕವಾದ ಈ ಜಗತ್ತು ಎಲ್ಲಿ ಪುನಃ ಪುನಃ ಉತ್ಪತ್ತಿಯಾಗುವುದೋ
ಮತ್ತು ಲಯವಾಗುವುದೋ ಆ ಶಾಶ್ವತವಾದ ಬ್ರಹ್ಮವೇ ಲಿಂಗವೆಂದು ಕರೆಯಿಸಿಕೊಳ್ಳುವುದು.
ತಸ್ಮಾಲ್ಲಿಂಗಮ್ ಇತಿ ಖ್ಯಾತಮ್
ಸತ್ತಾನಂದಚಿದಾತ್ಮಕಮ್ |
ಬೃಹತ್ತ್ವಾದ್ ಬೃಂಹಣತ್ವಾಚ್ಚ
ಬ್ರಹ್ಮ ಶಬ್ದಾ ಭಿಧೇಯಕಮ್ || 6-38
ಆದ್ದರಿಂದ ಸಚ್ಚಿದಾನಂದ ಸ್ವರೂಪವಾದ ಆ ಪರಮತತ್ತ್ವವು
ಲಿಂಗವೆಂಬುದಾಗಿ ಖ್ಯಾತಿಯನ್ನು ಪಡೆಯಿತು. ವಿಶ್ವಕ್ಕಿಂತಲೂ
ಬೃಹದಾಕಾರ ವಾಗಿರುವುದರಿಂದ ಮತ್ತು ವಿಶ್ವಕ್ಕೆ ಮಹಾಪೋಷಕವಾಗಿರುವುದರಿಂದ
ಇದು ಬ್ರಹ್ಮಶಬ್ದಕ್ಕೆ ಅಭಿಧೇಯವಾಗಿರುತ್ತದೆ (ಇದನ್ನು ಬ್ರಹ್ಮವೆಂದು ಕರೆಯಲಾಗಿದೆ).
ಆಧಾರೇ ಹೃದಯೇ ವಾಪಿ
ಭ್ರೂಮಧ್ಯೇ ವಾ ನಿರಂತರಮ್ |
ಜ್ಯೋತಿರ್ಲಿಂಗಾನುಸಂಧಾನಮ್
ಆಂತರಂ ಲಿಂಗಧಾರಣಮ್ || 6-39
ಮೂಲಾಧಾರ, ಹೃದಯ ಮತ್ತು ಭ್ರೂಮಧ್ಯದಲ್ಲಿ ನಿರಂತರವಾಗಿ
ಜ್ಯೋತಿರ್ಲಿಂಗದ ಅನುಸಂಧಾನವನ್ನು ಮಾಡುವುದೇ ಅಂತರಂಗದ ಲಿಂಗಧಾರಣೆಯು.
ಆಧಾರೇ ಕನಕಪ್ರಖ್ಯಮ್
ಹೃದಯೇ ವಿದ್ರುಮಪ್ರಭಮ್ |
ಭ್ರೂಮಧ್ಯೇ ಸ್ಫಟಿಕಚ್ಛಾಯಮ್
ಲಿಂಗಂ ಯೋಗೀ ವಿಭಾವಯೇತ್ || 6-40
ಯೋಗಿಯು ಅಂತರ ಲಿಂಗಾನುಸಂಧಾನವನ್ನು ಮಾಡುವಾಗ ಆಧಾರಚಕ್ರದಲ್ಲಿ ಸ್ವರ್ಣವರ್ಣದ,
ಹೃದಯದ ಅನಾಹತಚಕ್ರದಲ್ಲಿ ವಿದ್ರುಮ (ಹವಳ)ದ ಕಾಂತಿಯ ಮತ್ತು ಭ್ರೂಮಧ್ಯದ ಆಜ್ಞಾಚಕ್ರದಲ್ಲಿ ಸ್ಫ್ಪಟಿಕವರ್ಣದ ಲಿಂಗವನ್ನು ಭಾವಿಸಬೇಕು.
ನಿರುಪಾಧಿಕಮಾಖ್ಯಾತಮ್
ಲಿಂಗಸ್ಯಾಂತರಧಾರಣಮ್ |
ವಿಶಿಷ್ಟಂ ಕೋಟಿಗುಣಿತಮ್
ಬಾಹ್ಯಲಿಂಗಸ್ಯ ಧಾರಣಾತ್ || 6-41
ಅಂತರಂಗದಲ್ಲಿಯ ಈ ಲಿಂಗಧಾರಣೆಯು ನಿರುಪಾಧಿಕ ಲಿಂಗಧಾರಣೆಯೆಂದು ಖ್ಯಾತವಾಗಿದೆ.
ಇದು ಬಾಹ್ಯಲಿಂಗಧಾರಣೆಗಿಂತಲೂ ಕೋಟಿ ಪಾಲು ಮಿಗಿಲಾದುದು ಆಗಿದೆ.
ಯೇ ಧಾರಯಂತಿ ಹೃದಯೇ
ಲಿಂಗಂ ಚಿದ್ರೂಪಮೈಶ್ವರಮ್ |
ನ ತೇಷಾಂ ಪುನರಾವೃತ್ತಿಃ
ಘೋರ ಸಂಸಾರ ಮಂಡಲೇ || 6-42
ಯಾರು ತನ್ನ ಹೃದಯದಲ್ಲಿ ಚಿದ್ರೂಪವಾದ ಈಶ್ವರ ಸಂಬಂಧಿಯಾದ ಲಿಂಗವನ್ನು
ಧರಿಸುತ್ತಾರೆಯೋ ಅವರಿಗೆ ಈ ಘೋರ ಸಂಸಾರಮಂಡಲದಲ್ಲಿ ಪುನರಾವೃತ್ತಿಯು (ಪುನರ್ಜನ್ಮವು) ಇರುವುದಿಲ್ಲ.
ಅಂತರ್ಲಿಂಗಾನುಸಂಧಾನಮ್
ಆತ್ಮವಿದ್ಯಾಪರಿಶ್ರಮಃ |
ಗುರೂಪಾಸನಶಕ್ತಿಶ್ಚ
ಕಾರಣಂ ಮೋಕ್ಷಸಂಪದಾಮ್ || 6-43
ಗುರುಸೇವೆಯನ್ನು ಮಾಡುವ ಶಕ್ತಿಯು, ಆತ್ಮವಿದ್ಯೆಯ ಪರಿಶ್ರಮವು
(ಶ್ರವಣ, ಮನನ, ನಿಧಿಧ್ಯಾಸನಗಳು) ಮತ್ತು ಅಂತರ್ಲಿಂಗಾನುಸಂಧಾನ –
ಇವು ಮೂರು ಮೋಕ್ಷಸಂಪತ್ತನ್ನು ಪಡೆಯುವ ಕಾರಣಗಳು (ಸಾಧನಗಳು).
ವೈರಾಗ್ಯಜ್ಞಾನಯುಕ್ತಾನಾಮ್
ಯೋಗಿನಾಂ ಸ್ಥಿರಚೇತಸಾಮ್ |
ಅಂತರ್ಲಿಂಗಾನು ಸಂಧಾನೇ
ರುಚಿರ್ಬಾಹ್ಯೇ ನ ಜಾಯತೇ || 6-44
ವೈರಾಗ್ಯ ಮತ್ತು ಜ್ಞಾನದಿಂದ ಕೂಡಿದ ಸ್ಥಿರಚಿತ್ತವುಳ್ಳ ಯೋಗಸಾಧಕರಿಗೆ
ಅಂತರ್ಲಿಂಗಾನುಸಂಧಾನದಲ್ಲಿಯೇ ಅಭಿರುಚಿ ಉಂಟಾಗುವುದು. ಬಾಹ್ಯಲಿಂಗದಲ್ಲಿ ಅಭಿರುಚಿ ಉಂಟಾಗುವುದಿಲ್ಲ.
ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ
ವಾಸವಾದ್ಯಾಶ್ಚ ಲೋಕಪಾಃ |
ಮುನಯಃ ಸಿದ್ಧಗಂಧರ್ವಾಃ
ದಾನವಾ ಮಾನವಾಸ್ತಥಾ || 6-45
ಬ್ರಹ್ಮನೂ, ವಿಷ್ಣುವೂ, ರುದ್ರನೂ, ವಾಸವಾದಿ (ಇಂದ್ರಾದಿ) ಲೋಕಪಾಲಕರು (ದಿಕ್ಪಾಲಕರು),
ಮುನಿಗಳು, ಸಿದ್ಧರು, ಗಂಧರ್ವರು ಹಾಗೆಯೇ ದಾನವರು ಮತ್ತು ಮಾನವರು-
ಸರ್ವೆ ಚ ಜ್ಞಾನಯೋಗೇನ
ಸರ್ವಕಾರಣಕಾರಣಮ್ |
ಪಶ್ಯಂತಿ ಹೃದಯೇ ಲಿಂಗಮ್
ಪರಮಾನಂದಲಕ್ಷಣಮ್ || 6-46
ಇವರೆಲ್ಲರೂ ಜ್ಞಾನಯೋಗದಿಂದ ಸಮಸ್ತ ಕಾರಣಗಳಿಗೆ ಕಾರಣನಾದ,
ಪರಮಾನಂದ ಲಕ್ಷಣವುಳ್ಳ (ಸ್ವರೂಪವಾದ) ಲಿಂಗವನ್ನು ತಮ್ಮ ಹೃದಯದಲ್ಲಿಯೇ ಕಾಣುತ್ತಾರೆ.
ತಸ್ಮಾತ್ಸರ್ವಪ್ರಯತ್ನೇನ
ಶಾಂಕರಂ ಲಿಂಗಮುತ್ತಮಮ್ |
ಅಂತರ್ ವಿಭಾವಯೇದ್ ವಿದ್ವಾನ್
ಅಶೇಷಕ್ಲೇಶ ಮುಕ್ತಯೇ || 6-47
ಆದ್ದರಿಂದ ಸರ್ವಪ್ರಯತ್ನದಿಂದ ಉತ್ತಮವಾದ ಶಿವಲಿಂಗವನ್ನು (ಜ್ಯೋತಿರ್ಲಿಂಗವನ್ನು)
ಜ್ಞಾನಿಯು ತನ್ನ ಸಮಸ್ತ ಕ್ಲೇಶಗಳ ಮುಕ್ತಿಗಾಗಿ ಅಂತರಂಗದಲ್ಲಿ ಭಾವಿಸಬೇಕು (ಧ್ಯಾನಿಸಬೇಕು).
ಅಂತರ್ ಧಾರಯಿತುಂ ಲಿಂಗಮ್
ಅಶಕ್ತಃ ಶಕ್ತ ಏವ ವಾ |
ಬಾಹ್ಯಂ ಚ ಧಾರಯೇಲ್ಲಿಂಗಮ್
ತದ್ರೂಪಮಿತಿ ನಿಶ್ಚಯಾತ್ || 6-48
ಜ್ಯೋತಿರ್ಲಿಂಗವನ್ನು ಅಂತರಂಗದಲ್ಲಿ ಧರಿಸಲು ಶಕ್ತನಾಗಲಿ ಅಥವಾ ಅಶಕ್ತನೇ
ಆಗಿರಲಿ, ಅವನು ಬಾಹ್ಯಲಿಂಗವನ್ನು ಆ ಜ್ಯೋತಿರ್ಲಿಂಗದ ಸ್ವರೂಪವೆಂತಲೇ ನಿಶ್ಚಯಿಸಿ ಧರಿಸಬೇಕು.
ಲಿಂಗಂ ತು ತ್ರಿವಿಧಂ ಪ್ರೋಕ್ತಮ್
ಸ್ಥೂಲಂ ಸೂಕ್ಷ್ಮಂ ಪರಾತ್ಪರಮ್ |
ಇಷ್ಟಲಿಂಗಮಿದಂ ಸ್ಥೂಲಮ್
ಯದ್ ಬಾಹ್ಯೇ ಧಾರ್ಯತೇತನೌ 6-49
ಈ ಲಿಂಗವು ಸ್ಥೂಲ, ಸೂಕ್ಷ್ಮ ಮತ್ತು ಪರಾತ್ಪರ (ಕಾರಣ) ಎಂಬುದಾಗಿ ಮೂರು ಪ್ರಕಾರವಾಗಿ ಹೇಳಲ್ಪಟ್ಟಿದೆ.
ಯಾವುದು ಬಾಹ್ಯ ತನುವಿನಲ್ಲಿ ಧರಿಸಲ್ಪಟ್ಟಿದೆಯೋ ಆ ಸ್ಥೂಲವಾದ ಲಿಂಗವು ಇಷ್ಟಲಿಂಗವಾಗಿದೆ.
ಪ್ರಾಣಲಿಂಗಮಿದಂ ಸೂಕ್ಷ್ಮಮ್
ಯದಂತರ್ಭಾವನಾಮಯಮ್ |
ಪರಾತ್ಪರಂ ತು ಯತ್ಪ್ರೋಕ್ತಮ್
ತೃಪ್ತಿಲಿಂಗಂ ತದುಚ್ಯತೇ || 6-50
ಸೂಕ್ಷ್ಮವಾದ ಲಿಂಗವೇ ಪ್ರಾಣಲಿಂಗವು. ಯಾವುದು ಅಂತರಂಗದಲ್ಲಿ
ಭಾವಮಯವಾಗಿರುವುದೋ ಅದು ಪರಾತ್ಪ್ಪರಲಿಂಗ.
ಅದುವೇ ತೃಪ್ತಿಲಿಂಗವೆಂದು, ಭಾವಲಿಂಗವೆಂದು ಹೇಳಲ್ಪಡುತ್ತದೆ.
ಭಾವನಾತೀತಮವ್ಯಕ್ತಮ್
ಪರಬ್ರಹ್ಮ ಶಿವಾಭಿಧಮ್ |
ಇಷ್ಟಲಿಂಗಮಿದಂ ಸಾಕ್ಷಾತ್|
ಅನಿಷ್ಟ ಪರಿಹಾರತಃ |
ಧಾರಯೇ ದವ ಧಾನೇನ
ಶರೀರೇ ಸರ್ವದಾ ಬುಧಃ || 6-51
ಅವ್ಯಕ್ತವೂ (ರೂಪಾದಿಗಳಿಲ್ಲದ), ಭಾವನೆಗೆ ಅತೀತವಾದುದೂ ಆ ಪರಶಿವನೆಂಬ ಹೆಸರಿನ ಆ ಪರಬ್ರಹ್ಮವೇ ಈ ಇಷ್ಟಲಿಂಗವು.
ಇದು ಸಾಕ್ಷಾತ್ ಅನಿಷ್ಟ (ಸಂಸಾರದ ಪಾಶ ಲಕ್ಷಣವಾದ ಅನಿಷ್ಟ)ವನ್ನು ಪರಿಹರಿಸುವುದರಿಂದ ಬುಧನು (ಜ್ಞಾನಿಯು)
ಯಾವಾಗಲೂ ಅವಧಾನದಿಂದ (ಎಚ್ಚರಿಕೆಯಿಂದ) ಶರೀರದ ಮೇಲೆ ಇದನ್ನು ಧರಿಸಬೇಕು.
ಮೂರ್ಧ್ನಿ ವಾ ಕಂಠದೇಶೇ ವಾ
ಕಕ್ಷೇ ವಕ್ಷಃಸ್ಥಲೇಪಿ ವಾ |
ಕುಕ್ಷೌ ಹಸ್ತಸ್ಥಲೇ ವಾಪಿ
ಧಾರಯೇಲ್ಲಿಂಗ ಮೈಶ್ವರಮ್ || 6-52
ಮಸ್ತಕದಲ್ಲಿ, ಕಂಠದೇಶದಲ್ಲಿ (ಕೊರಳಲ್ಲಿ), ಕಕ್ಷೆಯಲ್ಲಿ (ಬಗಲಲ್ಲಿ),
ವಕ್ಷ ಸ್ಥಲದಲ್ಲಿ (ಎದೆಯ ಮೇಲೆ), ಕುಕ್ಷಿಯಲ್ಲಿ (ಉದರದ ಮೇಲೆ) ಅಥವಾ ಹಸ್ತದಲ್ಲಿಯೇ
ಆಗಲಿ ಈಶ್ವರ ಸಂಬಂಧಿಯಾದ ಲಿಂಗವನ್ನು (ಇಷ್ಟಲಿಂಗವನ್ನು) ಧರಿಸಬೇಕು.
ನಾಭೇರಧಸ್ತಾಲ್ಲಿಂಗಸ್ಯ
ಧಾರಣಂ ಪಾಪಕಾರಣಮ್ |
ಜಟಾಗ್ರೇ ತ್ರಿಕಭಾಗೇ ಚ
ಮಲಸ್ಥಾನೇ ನ ಧಾರಯೇತ್ || 6-53
ನಾಭಿಗಿಂತಲೂ ಕೆಳಗೆ ಲಿಂಗವನ್ನು ಧರಿಸುವುದು ಪಾಪಕ್ಕೆ ಕಾರಣವು. ಜಟೆಯ ಅಗ್ರ ಭಾಗದಲ್ಲಿ,
ತ್ರಿಕಜಾಗದಲ್ಲಿ (ಬೆನ್ನು ಮೇಲೆ) ಮತ್ತು ಮಲಸ್ಥಾನಗಳಲ್ಲಿ ಲಿಂಗವನ್ನು ಧರಿಸಬಾರದು.
ಲಿಂಗಧಾರೀ ಸದಾ ಶುದ್ಧೋ
ನಿಜಲಿಂಗಂ ಮನೋರಮಮ್ |
ಅರ್ಚಯೇದ್ ಗಂಧಪುಷ್ಪಾದ್ಯೈಃ
ಕರಪೀಠೇ ಸಮಾಹಿತಃ ||6-54
ಲಿಂಗ(ಇಷ್ಟಲಿಂಗ)ಧಾರಿಯು ಸದಾ ಕಾಲದಲ್ಲಿ ಶುದ್ಧನಾಗಿರುತ್ತಾನೆ.
ಅವನು ಮನೋಹರವಾದ ತನ್ನ ಇಷ್ಟಲಿಂಗವನ್ನು ಕರಪೀಠದಲ್ಲಿರಿಸಿಕೊಂಡು
ಸಮಾಧಾನ ಚಿತ್ತನಾಗಿ (ಏಕಾಗ್ರ ಮನಸ್ಸಿನಿಂದ) ಗಂಧ ಪುಷ್ಪಾದಿಗಳಿಂದ ಪೂಜಿಸಬೇಕು.
ಬಾಹ್ಯ ಪೀಠಾರ್ಚನಾ ದೇತತ್
ಕರಪೀಠಾರ್ಚನಂ ವರಮ್ |
ಸರ್ವೆಷಾಂ ವೀರಶೈವಾನಾಮ್
ಮುಮುಕ್ಷೂಣಾಂ ನಿರಂತರಮ್ || 6-55
ಮುಮುಕ್ಷುಗಳಾದ ಎಲ್ಲ ವೀರಶೈವರಿಗೆ ಬಾಹ್ಯಪೀಠದಲ್ಲಿ (ಇಷ್ಟಲಿಂಗವನ್ನಿರಿಸಿ)
ಪೂಜೆ ಮಾಡುವುದಕ್ಕಿಂತಲೂ ಕರಪೀಠದಲ್ಲಿರಿಸಿ ಅರ್ಚಿಸುವುದೇ ವರವು (ಶ್ರೇಷ್ಠವಾದುದು).
ಬ್ರಹ್ಮವಿಷ್ಣ್ವಾದಯೋ ದೇವಾಃ
ಮುನಯೋ ಗೌತಮಾದಯಃ |
ಧಾರಯಂತಿ ಸದಾ ಲಿಂಗಮ್
ಉತ್ತಮಾಂಗೇ ವಿಶೇಷತಃ || 6-56
ಬ್ರಹ್ಮ, ವಿಷ್ಣುವೇ ಮೊದಲಾದ ದೇವತೆಗಳು, ಗೌತಮಾದಿ ಮುನಿಗಳು ವಿಶೇಷವಾಗಿ
ಯಾವಾಗಲೂ ತಮ್ಮ ಉತ್ತಮಾಂಗದಲ್ಲಿ (ಮಸ್ತಕದಲ್ಲಿ) ಇಷ್ಟಲಿಂಗವನ್ನು ಧರಿಸುತ್ತಾರೆ.
ಲಕ್ಷ್ಮ್ಯಾದಿಶಕ್ತಯಃ ಸರ್ವಾಃ
ಶಿವಭಕ್ತಿವಿಭಾವಿತಾಃ |
ಧಾರಯಂತ್ಯಲಿಕಾಗ್ರೇಷು
ಶಿವಲಿಂಗಮಹರ್ನಿಶಮ್ ||6-57
ಶಿವಭಕ್ತಿಯುತರಾದ ಲಕ್ಷಿ ರಮಯೇ ಮೊದಲಾದ ಎಲ್ಲಾ ಶಕ್ತಿದೇವತೆಯರು
ತಮ್ಮ ಹಣೆಯ ಮೇಲೆ ಹಗಲಿರುಳು ಇಷ್ಟಲಿಂಗವನ್ನು ಧರಿಸಿಕೊಂಡಿರುತ್ತಾರೆ.
ವೇದಶಾಸ್ತ್ರಪುರಾಣೇಷು
ಕಾಮಿಕಾದ್ಯಾಗಮೇಷು ಚ |
ಲಿಂಗಧಾರಣಮಾಖ್ಯಾತಮ್
ವೀರಶೈವಸ್ಯ ನಿಶ್ಚಯಾತ್ || 6-58
ವೇದ, ಶಾಸ್ತ್ರ ಹಾಗೂ ಪುರಾಣಗಳಲ್ಲಿ ಮತ್ತು ಕಾಮಿಕಾದಿ
ವಾತುಲಾಂತಗಳಾದ 28 ಶಿವಾಗಮಗಳಲ್ಲಿ ವೀರಶೈವನಿಗೆ ಲಿಂಗಧಾರಣೆಯು ನಿಶ್ಚಿತವಾಗಿ ಹೇಳಲಾಗಿದೆ.
ಋಗಿತ್ಯಾಹ ಪವಿತ್ರಂ ತೇ
ವಿತತಂ ಬ್ರಹ್ಮಣಸ್ಪತೇ |
ತಸ್ಮಾತ್ಪವಿತ್ರಂ ತಲ್ಲಿಂಗಮ್
ಧಾರ್ಯಂ ಶೈವಮನಾಮಯಮ್ || 6-59
ಬ್ರಹ್ಮಪದ ವಾಚ್ಯವಾದ ಇಷ್ಟಲಿಂಗದಲ್ಲಿ ಅಧಿಷ್ಠಿತವಾದ ಪರಶಿವ ತತ್ತ್ವರೂಪವಾದ ಹೇ ಬ್ರಹ್ಮಣಸ್ಪತೇ, ನಿನ್ನ
ಸ್ವರೂಪವು ವ್ಯಾಪಕವಾದುದು ಮತ್ತು ನೀನು ಪವಿತ್ರವಾಗಿರುವೆ ಎಂಬುದಾಗಿ ಋಗ್ವೇದವು ಹೇಳುತ್ತದೆ. ಆದ್ದರಿಂದ
ಅನಾಮಯವಾದ (ದೋಷರಹಿತವಾದ) ಶಿವರೂಪವಾದ ಪವಿತ್ರವಾದ ಆ ಲಿಂಗವನ್ನು ಧರಿಸಬೇಕು.
ಬ್ರಹ್ಮೇತಿ ಲಿಂಗಮಾಖ್ಯಾತಮ್
ಬ್ರಹ್ಮಣಃ ಪತಿರೀಶ್ವರಃ |
ಪವಿತ್ರಂ ತದ್ಧಿ ವಿಖ್ಯಾತಮ್
ತತ್ಸಂಪರ್ಕಾತ್ ತನುಃ ಶುಚಿಃ || 6-60
ಬ್ರಹ್ಮನ (ಸೃಷ್ಟಿಕರ್ತನ) ಪತಿಯು ಈಶ್ವರನು. ಅವನೇ ಬ್ರಹ್ಮನೆಂತಲೂ, ಲಿಂಗವೆಂತಲೂ ಹೇಳಲ್ಪಡುತ್ತದೆ.
ಈ ಕಾರಣ ಆ ಲಿಂಗವು ಪವಿತ್ರವೆಂದು ವಿಖ್ಯಾತವಾಗಿದೆ.
ಅಂತೆಯೇ ಅದರ ಸಂಪರ್ಕದಿಂದ ತನುವು (ಶರೀರವು, ಪಂಚಕ್ಲೇಶರಹಿತವಾಗಿ) ಶುಚಿಯಾಗಿರುತ್ತದೆ.
ಅತಪ್ತತನುರಜ್ಞೋ ವೈ
ಆಮಃ ಸಂಸ್ಕಾರವರ್ಜಿತಃ |
ದೀಕ್ಷಯಾ ರಹಿತಃ ಸಾಕ್ಷಾತ್
ನಾಪ್ನುಯಾಲ್ಲಿಂಗಮುತ್ತಮಮ್ || 6-61
ತನುವೆಂದರೆ (ಪಂಚಕ್ಲೇಶರಹಿತವಾದ) ದೇಹವಾಗಿದೆ. ಅತಪ್ತ ತನುವು
(ಪಿಂಡಸ್ಥಲಿಯಾಗದವನು, ತಪೋರಹಿತನು) ಅಜ್ಞನು (ಪಿಂಡಜ್ಞಾನ ಸ್ಥಲಿಯಲ್ಲದವನು),
ಆಮನು (ಅಪರಿಪಕ್ವನು, ವೈರಾಗ್ಯವಿಲ್ಲದವನು, ಅರ್ಥಾತ್ ಸಂಸಾರಹೇಯಸ್ಥಲಕ್ಕೆ ಭಾಜನನಾಗದವನು),
ಸಂಸ್ಕಾರ ರಹಿತನು ಮತ್ತು ದೀಕ್ಷೆ ಹೊಂದದವನು ಸಾಕ್ಷಾತ್ ತಾನೇ ಉತ್ತಮವಾದ ಲಿಂಗವನ್ನು ಧರಿಸಕೂಡದು.
ಅಘೋರಾಪಾಪಕಾಶೀತಿ
ಯಾ ತೇ ರುದ್ರ ಶಿವಾ ತನೂಃ |
ಯಜುಷಾ ಗೀಯತೇ ಯಸ್ಮಾತ್
ತಸ್ಮಾಚ್ಛೈವೋಘವರ್ಜಿತಃ || 6-62
ಹೇ ರುದ್ರನೇ, ನಿನ್ನ ಮಂಗಲಸ್ವರೂಪವಾದ, ಲಿಂಗರೂಪವಾದ
ಯಾವ ತನುವುಂಟೋ ಅದು ಅಘೋರವು (ಶಾಂತವೂ),
ಅಪಾಪಕಾಶಿಯು (ಪಾಪರಹಿತ ಭಕ್ತರ ದೇಹದ ಮೇಲೆ ಪ್ರಕಾಶಿಸುವಂತಹದು)
ಎಂಬುದಾಗಿ ಯಜುರ್ವೆದದಲ್ಲಿ ಹೇಳಲ್ಪಟ್ಟಿದೆ. ಆದ್ದರಿಂದ ಶೈವನು
(ಇಷ್ಟಲಿಂಗ ಧಾರಿಯು) ಅಘವರ್ಜಿತನು (ಪಾಪರಹಿತನು) ಆಗಿರುತ್ತಾನೆ.
ಯೋ ಲಿಂಗಧಾರೀ ನಿಯತಾಂತರಾತ್ಮಾ
ನಿತ್ಯಂ ಶಿವಾರಾಧನಬದ್ಧಚಿತ್ತಃ |
ಸ ಧಾರಯೇತ್ ಸರ್ವಮಲಾಪಹತ್ಯೈ
ಭಸ್ಮಾಮಲಂ ಚಾರು ಯಥಾ ಪ್ರಯೋಗಮ್ ||6-63
ವಂಶಸ್ಥವೃತ್ತಮ್ ಇಷ್ಟಲಿಂಗಧಾರಿಯಾದವನು ನಿಯಂತ್ರಿತವಾದ ಅಂತರಾತ್ಮ (ಮನಸ್ಸುಳ್ಳವನಾಗಿ) ನಿತ್ಯವೂ,
ಶಿವನ ಆರಾಧನೆಯಲ್ಲಿ ಬದ್ಧಚಿತ್ತನಾಗಿ ಸರ್ವಮಲಗಳ ನಿವೃತ್ತಿಗಾಗಿ ಸುಂದರವಾದ,
ನಿರ್ಮಲವಾದ ಭಸ್ಮವನ್ನು ಶಾಸ್ತ್ರೋಕ್ತ ರೀತಿಯಲ್ಲಿ ಧರಿಸಿಕೊಳ್ಳಬೇಕು.
ಇತಿ ಲಿಂಗಧಾರಣಸ್ಥಲಂ ಪರಿಸಮಾಪ್ತಂ
ಓಂ ತತ್ಸತ್ ಇತಿ
ಶ್ರೀ ಶಿವಗೀತೇಷು ಸಿದ್ಧಾಂತಾಗಮೇಷು -
ಶಿವಾದ್ವೈತವಿದ್ಯಾಯಾಂ ಶಿವಯೋಗಶಾಸ್ತ್ರೇ,
ಶ್ರೀ ರೇಣುಕಾಗಸ್ತ್ಯ ಸಂವಾದೇ
ಶ್ರೀವೀರಶೈವಧರ್ಮ ನಿರ್ಣಯೇ,
ಶ್ರೀಶಿವಯೋಗಿ ಶಿವಾಚಾರ್ಯ ವಿರಚಿತೇ ಶ್ರೀಸಿದ್ಧಾಂತ ಶಿಖಾಮಣೌ
ಗುರುಕಾರುಣ್ಯಸ್ಥಲ ಲಿಂಗಧಾರಣಸ್ಥಲ
ಪ್ರಸಂಗೋ ನಾಮ ಷಷ್ಠಃ ಪರಿಚ್ಛೇದಃ||
ಓಂ ತತ್ಸತ್ ಇತಿ
ಶ್ರೀ ಶಿವನಿಂದ ಉಪದೇಶಿಸಲ್ಪಟ್ಟ ಶ್ರೀ ಸಿದ್ಧಾಂತಾಗಮಗಳಲ್ಲಿಯ ಶಿವಾದ್ವೈತ ವಿದ್ಯಾರೂಪವೂ,
ಶಿವಯೋಗ ಶಾಸ್ತ್ರವು ಶ್ರೀ ರೇಣುಕಾಗಸ್ತ್ಯ ಸಂವಾದವೂ ಶ್ರೀ ವೀರಶೈವ ಧರ್ಮ ನಿರ್ಣಯವೂ
ಶ್ರೀಶಿವಯೋಗಿ ಶಿವಾಚಾರ್ಯ ವಿರಚಿತವೂ ಆದ ಶ್ರೀ ಸಿದ್ಧಾಂತಶಿಖಾಮಣಿಯಲ್ಲಿ,
ಭಕ್ತಸ್ಥಲದಲ್ಲಿಯ ಗುರುಕಾರುಣ್ಯ ಸ್ಥಲ, ಲಿಂಗಧಾರಣ ಸ್ಥಲ ಪ್ರಸಂಗವೆಂಬ ಹೆಸರಿನ
ಆರನೆಯ ಪರಿಚ್ಛೇದವು ಮುಗಿದುದು.