ಪಂಚಮಃ ಪರಿಚ್ಛೇದಃ

ಭಕ್ತಸ್ಥಲೇ ಪಿಂಡ-ಪಿಂಡಜ್ಞಾನ ಸಂಸಾರ ಹೇಯ ಸ್ಥಲ ಪ್ರಸಂಗಃ ಸಿದ್ಧಾಂತ ಕಥನಮ್

ಅಥಾಗಸ್ತ್ಯ ವಚಃ ಶ್ರುತ್ವಾ

ರೇಣುಕೋ ಗಣನಾಯಕಃ |

ಧ್ಯಾತ್ವಾ ಕ್ಷಣಂ ಮಹಾದೇವಮ್

ಸಾಂಬಮಾಹ ಸಮಾಹಿತಃ || 5-1

ಬಳಿಕ ಅಗಸ್ತ್ಯರ ಬಿನ್ನಪವನ್ನು ಕೇಳಿ ಗಣನಾಯಕರಾದ ರೇಣುಕರು ಕ್ಷಣಕಾಲ ಸಾಂಬ(ಉಮಾಪತಿ)ನಾದ ಮಹಾದೇವನನ್ನು ಧ್ಯಾನ ಮಾಡಿ ಸಮಾಧಾನ ಚಿತ್ತದಿಂದ ನುಡಿದರು.

ಅಥ ಶ್ರೀರೇಣುಕಶಾಸನಂ ಪ್ರಾರಂಭ0

ಅಥ ಶ್ರೀರೇಣುಕಶಾಸನಂ

ಅಗಸ್ತ್ಯ ಮುನಿಶಾರ್ದೂಲ

ಸಮಸ್ತಾಗಮ ಪಾರಗ |

ಶಿವಜ್ಞಾನ ಕರಂ ವಕ್ಷ್ಯೇ

ಸಿದ್ಧಾಂತಂ ಶ್ರುಣು ಸಾದರಮ್ || 5-2

ಸಮಸ್ತ ಆಗಮಗಳಲ್ಲಿ ಪಾರಂಗತನಾದ, ಮುನಿಗಳಲ್ಲಿ ಶ್ರೇಷ್ಠನಾದ ಎಲೈ ಅಗಸ್ತ್ಯನೇ, ಶಿವಜ್ಞಾನವನ್ನು ಉಂಟುಮಾಡುವ ಸಿದ್ಧಾಂತವನ್ನು ಹೇಳುವೆನು. ಆದರಪೂರ್ವಕವಾಗಿ ಕೇಳು.

ಅಗಸ್ತ್ಯ ಖಲು ಸಿದ್ಧಾಂತಾಃ

ವಿಖ್ಯಾತಾ ರುಚಿಭೇದತಃ |

ಭಿನ್ನಾಚಾರ ಸಮಾಯುಕ್ತಾ

ಭಿನ್ನಾರ್ಥ ಪ್ರತಿ ಪಾದಕಾಃ || 5-3

ಹೇ ಅಗಸ್ತ್ಯನೇ, ಅಭಿರುಚಿಯ ಭೇದದಿಂದ ಭಿನ್ನ ಭಿನ್ನಾಚಾರಗಳಿಂದ ಭಿನ್ನ ಭಿನ್ನ ಅರ್ಥಗಳನ್ನು ವಿವರಿಸುವುದರಿಂದ ಸಿದ್ಧಾಂತಗಳು ಅನೇಕ ವಿಧವಾಗಿ ಪ್ರಖ್ಯಾತವಾಗಿವೆ.

ಸಾಂಖ್ಯಂ ಯೋಗಃ ಪಾಂಚರಾತ್ರಮ್

ವೇದಾಃ ಪಾಶುಪತಂ ತಥಾ |

ಏತಾನಿ ಮಾನ ಭೂತಾನಿ

ನೋಪ ಹನ್ಯಾನಿ ಯುಕ್ತಿ ಭಿಃ || 5-4

ಸಾಂಖ್ಯಶಾಸ್ತ್ರ, ಯೋಗಶಾಸ್ತ್ರ, ಪಾಂಚರಾತ್ರ, ವೇದಗಳು ಹಾಗೂ ಪಾಶುಪತಶಾಸ್ತ್ರ- ಇವೆಲ್ಲಾ ಪ್ರಮಾಣಗಳಾಗಿವೆ. ಆದ್ದರಿಂದ ಇವುಗಳನ್ನು ಯುಕ್ತಿ ತರ್ಕಗಳಿಂದ ಖಂಡಿಸಕೂಡದು.

ವೇದಃ ಪ್ರಧಾನಂ ಸರ್ವೆಷಾಮ್

ಸಾಂಖ್ಯಾದೀನಾಂ ಮಹಾಮುನೇ |

ವೇದಾನುಸರಣಾ ದೇಷಾಮ್

ಪ್ರಾಮಾಣ್ಯ ಮಿತಿ ನಿಶ್ಚಿತಮ್ || 5-5

ಹೇ ಮಹಾಮುನಿಯೇ, ಸಾಂಖ್ಯಾದಿ ಸರ್ವಶಾಸ್ತ್ರಗಳಿಗೆ ವೇದವೇ ಪ್ರಧಾನವಾದುದು. ವೇದವನ್ನು ಅನುಸರಿಸಿದ್ದರಿಂದಲೇ ಇವುಗಳ ಪ್ರಾಮಾಣ್ಯವು ನಿಶ್ಚಿತವಾಗಿರುತ್ತದೆ.

ಪಾಂಚರಾತ್ರಸ್ಯ ಸಾಂಖ್ಯಸ್ಯ

ಯೋಗಸ್ಯ ಚ ತಥಾ ಮುನೇ |

ವೇದೈಕ ದೇಶ ವರ್ತಿತ್ವಮ್

ಶೈವಂ ವೇದ ಮಯಂ ಮತಮ್ || 5-6

ಹೇ ಮುನಿಯೇ, ಪಾಂಚರಾತ್ರರ, ಸಾಂಖ್ಯ ಮತ್ತು ಯೋಗಶಾಸ್ತ್ರಗಳು ವೇದದ ಏಕದೇಶವರ್ತಿಗಳಾಗಿರುತ್ತವೆ. (ವೇದದ ಒಂದು ಭಾಗವನ್ನು ಮಾತ್ರ ಒಪ್ಪುವಂತಹುಗಳಾಗಿವೆ). ಆದರೆ ಶೈವ(ಸಿದ್ಧಾಂತ)ವು ಸಂಪೂರ್ಣವಾಗಿ ವೇದಮಯ ಎನ್ನುವುದು ನಿಗಮಾಗಮ ತಜ್ಞರ ಅಭಿಮತವಾಗಿದೆ.

ವೇದೈಕ ದೇಶ ವರ್ತಿಭ್ಯಃ

ಸಾಂಖ್ಯಾ ದಿಭ್ಯೋ ಮಹಾಮುನೇ |

ಸರ್ವ ವೇದಾನುಸಾರಿತ್ವಾತ್

ಶೈವತಂತ್ರಂ ವಿಶಿಷ್ಯತೇ || 5-7

ಹೇ ಮಹಾಮುನಿಯೇ, ವೇದದ ಒಂದು ಭಾಗವನ್ನು ಒಪ್ಪುತ್ತಿರುವ ಸಾಂಖ್ಯಾದಿ ಶಾಸ್ತ್ರಗಳಿಗಿಂತಲೂ ಸರ್ವ ವೇದಾನುಸಾರಿಯಾದ ಶೈವ (ಸಿದ್ಧಾಂತ) ಶಾಸ್ತ್ರವು ಎಲ್ಲಕ್ಕಿಂತ ವಿಶಿಷ್ಟ (ವಿಲಕ್ಷಣ)ವಾಗಿದೆ.

ಶೈವತಂತ್ರ ಮಿತಿ ಪ್ರೋಕ್ತಮ್

ಸಿದ್ಧಾಂತಾಖ್ಯಂ ಶಿವೋದಿತಮ್ |

ಸರ್ವ ವೇದಾರ್ಥ ರೂಪತ್ವಾತ್

ಪ್ರ್ರಾಮಾಣ್ಯಂ ವೇದವತ್ ಸದಾ || 5-8

ಶಿವನಿಂದ ಉಪದೇಶಿತವಾದ ಶೈವತಂತ್ರವು ಸಿದ್ಧಾಂತವೆಂಬುದಾಗಿ ಹೇಳಲ್ಪಟ್ಟಿದೆ. ಇದು ಸರ್ವವೇದಾರ್ಥಗಳ ಸ್ವರೂಪವಾದ್ದರಿಂದ ಇದು ಯಾವಾಗಲೂ ವೇದದಂತೆ ಪ್ರಮಾಣವಾಗಿರುತ್ತದೆ.

ಆಗಮಾ ಬಹುಧಾ ಪ್ರೋಕ್ತಾಃ

ಶಿವೇನ ಪರಮಾತ್ಮನಾ |

ಶೈವಂ ಪಾಶುಪತಂ ಸೋಮಮ್

ಲಾಕುಲಂ ಚೇತಿ ಭೇದತಃ || 5-9

ಪರಮಾತ್ಮನಾದ ಶಿವನಿಂದ ಉಪದೇಶಿಸಲ್ಪಟ್ಟ ಆಗಮಗಳು ಶೈವ, ಪಾಶುಪತ, ಸೋಮ ಮತ್ತು ಲಾಕುಲವೆಂಬ ವೈವಿಧ್ಯದಿಂದ ಹಲವು ಬಗೆಯಾಗಿವೆ.

ತೇಷು ಶೈವಂ ಚತುರ್ಭೆದಮ್

ತಂತ್ರಂ ಸರ್ವ ವಿನಿಶ್ಚಿತಮ್ |

ವಾಮಂ ಚ ದಕ್ಷಿಣಂ ಚೈವ

ಮಿಶ್ರಂ ಸಿದ್ಧಾಂತ ಸಂಜ್ಞಕಮ್ || 5-10

ಅವುಗಳಲ್ಲಿ ಶೈವಶಾಸ್ತ್ರವು ವಾಮ, ದಕ್ಷಿಣ, ಮಿಶ್ರ ಮತ್ತು ಸಿದ್ಧಾಂತವೆಂಬ ಹೆಸರಿನಿಂದ ನಾಲ್ಕು ವಿಧವಾಗಿರುತ್ತದೆ ಎಂಬುದಾಗಿ ಎಲ್ಲಾ ಆಗಮತಜ್ಞರಿಂದ ನಿಶ್ಚಯಿಸಲ್ಪಟ್ಟಿದೆ.

ಶಕ್ತಿ ಪ್ರಧಾನಂ ವಾಮಾಖ್ಯಮ್

ದಕ್ಷಿಣಂ ಭೈರವಾತ್ಮಕಮ್ |

ಸಪ್ತ ಮಾತೃ ಪರಂ ಮಿಶ್ರಮ್

ಸಿದ್ಧಾಂತಂ ವೇದ ಸಮ್ಮತಮ್ || 5-11

ಶಕ್ತಿಯ ಉಪಾಸನೆಯೇ ಪ್ರಧಾನವಾದದ್ದು ವಾಮತಂತ್ರವು, ಭೈರವನ ಉಪಾಸನೆಯೇ ಪ್ರಧಾನವಾದದ್ದು ದಕ್ಷಿಣತಂತ್ರವು, ಬ್ರಾಹ್ಮಿ ಮೊದಲಾದ ಸಪ್ತಮಾತೃಕೆಯರ ಉಪಾಸನೆಯೇ ಪ್ರಧಾನವಾದದ್ದು ಮಿಶ್ರತಂತ್ರವು. ಇನ್ನು ವೇದಸಮ್ಮತವಾದದ್ದೇ ಸಿದ್ಧಾಂತತಂತ್ರವು.

ವೇದ ಧರ್ಮಾಭಿ ಧಾಯಿತ್ವಾತ್

ಸಿದ್ಧಾಂತಾಖ್ಯಃ ಶಿವಾಗಮಃ |

ವೇದ ಬಾಹ್ಯ ವಿರೋಧಿತ್ವಾದ್

ವೇದ ಸಮ್ಮತ ಉಚ್ಯತೇ || 5-12

ಸಿದ್ಧಾಂತವೆಂಬ ಹೆಸರಿನ ಶಿವಾಗಮವು ವೇದೋಕ್ತವಾದ ಧರ್ಮವನ್ನು ಪ್ರತಿಪಾದಿಸುವುದರಿಂದ ಮತ್ತು ವೇದ ಬಾಹ್ಯಗಳಾದ ಚಾರ್ವಾಕಾದಿಗಳನ್ನು ವಿರೋಧಿಸುತ್ತಿರುವುದರಿಂದ ಇದು ವೇದಸಮ್ಮತವೆಂದು ಹೇಳಲ್ಪಟ್ಟಿದೆ.

ವೇದ ಸಿದ್ಧಾಂತ ಯೋರ್ ಐಕ್ಯಮ್

ಏಕಾರ್ಥ ಪ್ರತಿಪಾದನಾತ್ |

ಪ್ರಾಮಾಣ್ಯಂ ಸದೃಶಂ ಜ್ಞೇಯಮ್

ಪಂಡಿತೈ ರೇತಯೋಃ ಸದಾ || 5-13

ವೇದ ಮತ್ತು ಸಿದ್ಧಾಂತಶಾಸ್ತ್ರಗಳಲ್ಲಿ ಒಂದೇ ವಿಷಯ ಪ್ರತಿಪಾದಿಸಲ್ಪಟ್ಟಿರು ವುದರಿಂದ ಪಂಡಿತರು ಇವೆರಡರ ಪ್ರಾಮಾಣ್ಯವನ್ನು ಯಾವಾಗಲೂ ಸಮಾನವಾಗಿಯೇ ತಿಳಿದುಕೊಳ್ಳಬೇಕು.

ಸಿದ್ಧಾಂತಾಖ್ಯೇ ಮಹಾತಂತ್ರೇ

ಕಾಮಿಕಾದ್ಯೇ ಶಿವೋದಿತೇ |

ನಿರ್ದಿಷ್ಟಮ್ ಉತ್ತರೇ ಭಾಗೇ

ವೀರಶೈವ ಮತಂ ಪರಮ್ || 5-14

ಶಿವನಿಂದ ಉಪದೇಶಿಸಲ್ಪಟ್ಟ ಕಾಮಿಕಾದಿ ವಾತುಲಾಂತ್ಯಗಳಾದ ಸಿದ್ಧಾಂತವೆಂಬ ಹೆಸರಿನ ಮಹಾತಂತ್ರದ ಉತ್ತರ ಭಾಗದಲ್ಲಿ ಶ್ರೇಷ್ಠವಾದ ವೀರಶೈವ ಮತವು ಹೇಳಲ್ಪಟ್ಟಿದೆ.

ವಿದ್ಯಾಯಾಂ ಶಿವರೂಪಾಯಾಮ್

ವಿಶೇಷಾದ್ ರಮಣಂ ಯತಃ |

ತಸ್ಮಾದೇತೇ ಮಹಾಭಾಗಾ

ವೀರಶೈವಾ ಇತಿ ಸ್ಮೃತಾಃ || 5-15

ಶಿವರೂಪವಾದ ವಿದ್ಯೆಯಲ್ಲಿ ಯಾರು ವಿಶೇಷವಾಗಿ ರಮಿಸುವರೋ ಅಂತಹ ಭಾಗ್ಯಶಾಲಿಗಳು ವೀರಶೈವರೆಂಬುದಾಗಿ ಸ್ಮರಿಸಲ್ಪಡುತ್ತಾರೆ.

ವೀಶಬ್ದೇ ನೋಚ್ಯತೇ ವಿದ್ಯಾ

ಶಿವಜೀವೈಕ್ಯ ಬೋಧಿಕಾ |

ತಸ್ಯಾಂ ರಮಂತೇ ಯೇ ಶೈವಾ

ವೀರಶೈವಾಸ್ತು ತೇ ಮತಾಃ || 5-16

‘ವೀ’ ಶಬ್ದದಿಂದ ಶಿವ ಮತ್ತು ಜೀವರ ಐಕ್ಯವನ್ನು (ಏಕತ್ವವನ್ನು) ಬೋಧಿಸುವ ವಿದ್ಯೆಯು ಹೇಳಲ್ಪಡುತ್ತದೆ. ಆ ವಿದ್ಯೆಯಲ್ಲಿ ಯಾವ ಶಿವಭಕ್ತರು ರಮಿಸುವರೋ (ಆನಂದವನ್ನು) ಪಡುತ್ತಾರೆಯೋ ಅವರು ವೀರಶೈವರೆಂದು ಕರೆಯಲ್ಪಟ್ಟಿದ್ದಾರೆ.

ವಿದ್ಯಾಯಾಂ ರಮತೇ ಯಸ್ಮಾತ್

ಮಾಯಾಂ ಹೇ ಯಾಂ ಶ್ವವದ್ ರಹೇತ್

ಅನೇನೈವ ನಿರುಕ್ತೇನ

ವೀರಮಾಹೇಶ್ವರಃ ಸ್ಮೃತಃ || 5-17

ಯಾವ ಕಾರಣದಿಂದ ಈ ವಿದ್ಯೆಯಲ್ಲಿ ರಮಿಸುವನೋ, ಹೇಯವಾದ ಮಾಯೆಯನ್ನು ನಾಯಿಯಂತೆ ತ್ಯಾಗ ಮಾಡುವನೋ ಈ ರೀತಿಯಾದ ನಿರ್ವಚನದಿಂದ (ನಿರುಕ್ತಿ) ವೀರಮಾಹೇಶ್ವರನೆಂದು ಸ್ಮರಿಸಲ್ಪಡುತ್ತಾನೆ.

ವೇದಾಂತ ಜನ್ಯಂ ಯಜ್ಜ್ಞಾನಮ್

ವಿದ್ಯೇತಿ ಪರಿಕೀತ್ರ್ಯತೇ |

ವಿದ್ಯಾಯಾಂ ರಮತೇ ತಸ್ಯಾಮ್

ವೀರ ಇತ್ಯ-ಭಿ-ಧೀಯತೇ || 5-18

ವೇದಾಂತ(ಉಪನಿಷತ್)ದಿಂದ ಉತ್ಪನ್ನವಾದ ಯಾವ ಜ್ಞಾನವಿದೆಯೋ ಅದು ವಿದ್ಯೆಯೆಂದು ಹೇಳಲ್ಪಡುತ್ತದೆ. ಆ ವಿದ್ಯೆಯಲ್ಲಿ ಯಾರು ರಮಿಸುತ್ತಾರೆಯೋ ಅವರು ‘ವೀರ’ ಎಂದು ಹೇಳಿಸಿಕೊಳ್ಳುವರು.

ಶೈವೈರ್ ಮಾಹೇಶ್ವರೈ ಶ್ಚೈವ

ಕಾರ್ಯಮಂತರ್ಬಹಿಃ ಕ್ರಮಾತ್ |

ಶಿವೋ ಮಹೇಶ್ವರಶ್ಚೇತಿ

ನಾತ್ಯಂತ ಮಿಹ ಭಿದ್ಯತೇ || 5-19

ಶೈವ(ವೀರಶೈವ)ರಿಂದ ಮತ್ತು ಮಾಹೇಶ್ವರ (ವೀರಮಾಹೇಶ್ವರ)ರಿಂದ ಮಾಡಲ್ಪಡುವ ಕ್ರಿಯೆಯು (ಇಷ್ಟಲಿಂಗೋಪಾಸನೆಯು) ಕ್ರಮವಾಗಿ ಅಂತರಂಗ ಮತ್ತು ಬಹಿರಂಗದ್ದು ಎಂದು ತಿಳಿದುಕೊಳ್ಳಬೇಕು.


ಶಿವ ಮತ್ತು ಮಹೇಶ್ವರ ಇವರೀರ್ವರಲ್ಲಿ ಹೇಗೆ ಅತ್ಯಂತವಾಗಿ ಭೇದವಿರುವುದಿಲ್ಲವೋ ಅದರಂತೆ ವೀರಶೈವ ಮತ್ತು ವೀರಮಾಹೇಶ್ವರರಲ್ಲಿ ಪರಸ್ಪರ ಭೇದವಿರುವುದಿಲ್ಲ (ಏಕಾಂತದಲ್ಲಿ ಇಷ್ಟಲಿಂಗಪೂಜೆ ಮಾಡುವವರು ವೀರಶೈವರಾದರೆ, ಜನರಿಗೆ ಮಾರ್ಗದರ್ಶನ ಮಾಡುವುದಕ್ಕಾಗಿ ಬಹಿರಂಗದಲ್ಲಿ ಇಷ್ಟಲಿಂಗ ಪೂಜೆಯನ್ನು ಮಾಡುವವರು ವೀರಮಾಹೇಶ್ವರರೆಂದು ತಿಳಿಯಲಾಗಿದೆ).

ಯಥಾ ಯ(ತ)ಥಾ ನ ಭಿದ್ಯಂತೇ

ಶೈವಾ ಮಾಹೇಶ್ವರಾ ಅಪಿ |

ಶಿವಾಶ್ರಿತೇಷು ತೇ ಶೈವಾಃ

ಜ್ಞಾನ ಯಜ್ಞ ರತಾಃ ನರಾಃ || 5-20

ವೀರಶೈವಾಃ ಷಡ್ಭೇದಾಃ

ಮಾಹೇಶ್ವರಾಃ ಸಮಾಖ್ಯಾತಾಃ

ಕರ್ಮ ಯಜ್ಞ ರತಾ ಭುವಿ |

ತಸ್ಮಾದಾಭ್ಯಂತರೇ ಕುರ್ಯುಃ

ಶೈವಾಃ ಮಾಹೇಶ್ವರಾಃ ಬಹಿಃ || 5-21

ಶಿವ ಮತ್ತು ಮಹೇಶ್ವರರು ಹೇಗೆ ಭಿನ್ನರಲ್ಲವೋ ಅದರಂತೆ ವೀರಶೈವರು ಮತ್ತು ವೀರಮಾಹೇಶ್ವರರು ಸಹ ಪರಸ್ಪರ ಭಿನ್ನರಾಗಿರುವುದಿಲ್ಲ. ಶಿವನನ್ನು ಆಶ್ರಯಿಸುವವರಲ್ಲಿ ಯಾವ ಮನುಷ್ಯರು ಜ್ಞಾನಯಜ್ಞದಲ್ಲಿ ತತ್ಪರರೋ ಅವರು ವೀರಶೈವರೆನಿಸಿಕೊಳ್ಳುವರು. ಕರ್ಮಯಜ್ಞದಲ್ಲಿ ತತ್ಪರರಾದವರು ಈ ಭೂಮಿಯೊಳಗೆ ವೀರಮಾಹೇಶ್ವರರೆಂದು ಪ್ರಸಿದ್ಧರಾಗಿರುವರು. ಆದ್ದರಿಂದ ವೀರಶೈವರು ಅಂತರಂಗದಲ್ಲಿ ಶಿವಲಿಂಗಾರ್ಚನೆಯನ್ನು ಮತ್ತು ವೀರಮಾಹೇಶ್ವರರು ಬಹಿರಂಗದಲ್ಲಿ ಇಷ್ಟಲಿಂಗಾರ್ಚನೆಯನ್ನು ಮಾಡಿಕೊಳ್ಳುವರು. (ಈ ರೀತಿಯಲ್ಲಿ ವೀರಶೈವರು ವೀರಮಾಹೇಶ್ವರರಿಬ್ಬರೂ ಜ್ಞಾನಿಗಳಾಗಿ ಅನುಭಾವಿಗಳಾದರೂ, ವೀರಶೈವನು ಜ್ಞಾನಿಯಾಗಿ ತನ್ನ ಪಾಡಿಗೆ ತಾನು ಇರುತ್ತಾನೆ. ಆದರೆ ವೀರಮಾಹೇಶ್ವರನು ತನ್ನ ಅನುಭವ ಜ್ಞಾನವನ್ನು ಜಗತ್ತಿಗೆ ಹಂಚಲು ಕ್ರಿಯಾಪ್ರಧಾನನಾಗಿರುತ್ತಾನೆ)

ಇತಿ ಸಿದ್ಧಾಂತ ಕಥನಮ್

ವೀರಶೈವಾಸ್ತು ಷಡ್ಭೇದಾಃ

ಸ್ಥಲಧರ್ಮವಿಭೇದತಃ |

ಭಕ್ತಾದಿ ವ್ಯವಹಾರೇಣ

ಪ್ರೋಚ್ಯಂತೇ ಶಾಸ್ತ್ರ ಪಾರಗೈಃ || 5-22

ಸ್ಥಲಗಳ ಭೇದದಿಂದ, ಭಕ್ತ ಮಾಹೇಶ್ವರಾದಿ ವ್ಯವಹಾರದಿಂದ ವೀರಶೈವರು ಆರು ವಿಧವಾಗಿದ್ದಾರೆ (ಷಡ್ಭೇಧ) ಎಂದು ಶಾಸ್ತ್ರಪಾರಂಗತರು ಹೇಳುತ್ತಾರೆ.

ಶಾಸ್ತ್ರಂ ತು ವೀರಶೈವಾನಾಮ್

ಷಡ್ ವಿಧಂ ಸ್ಥಲ ಭೇದತಃ |

ಧರ್ಮಭೇದ ಸಮಾಯೋಗಾತ್

ಅಧಿಕಾರಿ-ವಿ-ಭೇದತಃ || 5-23

ವೀರಶೈವರ ಶಾಸ್ತ್ರವು ಸ್ಥಲಭೇದದಿಂದ ಮತ್ತು ಆಯಾ ಸ್ಥಲಗಳ ಧರ್ಮಭೇದದಿಂದ ಹಾಗೂ ಅಧಿಕಾರಿ ಭೇದದಿಂದ ಆರು ಪ್ರಕಾರವಾಗಿರುತ್ತವೆ.

ಆದೌ ಭಕ್ತ ಸ್ಥಲಂ ಪ್ರೋಕ್ತಮ್

ತತೋ ಮಾಹೇಶ್ವರಸ್ಥಲಮ್ |

ಪ್ರಸಾದಿ ಸ್ಥಲ ಮನ್ಯತ್ತು

ಪ್ರಾಣ ಲಿಂಗಿ ಸ್ಥಲಂ ತತಃ |

ಶರಣ ಸ್ಥಲ ಮಾಖ್ಯಾತಮ್

ಷಷ್ಠ ಮೈಕ್ಯ ಸ್ಥಲಂ ಮತಮ್ || 5-24

ಮೊದಲನೆಯದು ಭಕ್ತಸ್ಥಲವೆಂದು ಹೇಳಲ್ಪಟ್ಟಿದೆ. ಆನಂತರ ಮಾಹೇಶ್ವರ ಸ್ಥಲವು ಮತ್ತೊಂದು ಪ್ರಸಾದಿಸ್ಥಲವು, ನಂತರ ಪ್ರಾಣಲಿಂಗಿಸ್ಥಲವು, ಆಮೇಲೆ ಶರಣ ಸ್ಥಲವು. ಆರನೆಯದು ಐಕ್ಯಸ್ಥಲವೆಂದುದಾಗಿ ಸಮ್ಮತವಾಗಿದೆ.

ಇತಿ ವೀರಶೈವಾಃ ಷಡ್ಭೇದಾಃ

ಭಕ್ತ ಸ್ಥಲಮ್

ಭಕ್ತಸ್ಥಲಂ ಪ್ರವಕ್ಷ್ಯಾಮಿ

ಪ್ರಥಮಂ ಕಲಶೋದ್ಭವ |

ತದವಾಂತರ ಭೇದಾಂಶ್ಚ

ಸಮಾಹಿತ ಮನಾಃ ಶ್ರುಣು || 5-25

ಹೇ ಕಲಶೋದ್ಭವನಾದ ಅಗಸ್ತ್ಯನೇ, ಮೊದಲಿಗೆ ಭಕ್ತಸ್ಥಲವನ್ನು ಹೇಳುತ್ತೇನೆ ಮತ್ತು ಅದರ ಅವಾಂತರ ಸ್ಥಲಗಳ ಭೇದವನ್ನೂ ಸಹ ಹೇಳುವೆನು. ಸಮಾಧಾನ ಮನಸ್ಕನಾಗಿ ಕೇಳು.

ಶೈವೀ ಭಕ್ತಿಃ ಸಮುತ್ಪನ್ನಾ

ಯಸ್ಯಾಸೌ ಭಕ್ತ ಉಚ್ಯತೇ |

ತಸ್ಯಾನುಷ್ಠೇಯಧರ್ಮಾಣಾ-

ಮುಕ್ತಿರ್ ಭಕ್ತಸ್ಥಲಂ ಮತಮ್ || 5-26

ಯಾವನಿಗೆ ಶಿವನಲ್ಲಿ ಭಕ್ತಿಯು ಉತ್ಪನ್ನವಾಗಿದೆಯೋ ಅವನು ಭಕ್ತನೆಂದು ಹೇಳಲ್ಪಡುತ್ತಾನೆ. ಅವನ ಅನುಷ್ಠಾನಕ್ಕೆ ಯೋಗ್ಯಗಳಾದ ಧರ್ಮಗಳನ್ನು ಹೇಳುವುದೇ ಭಕ್ತಸ್ಥಲವೆಂದು ಸಮ್ಮತವಾಗಿದೆ.

ಅವಾಂತರಸ್ಥಲಾನ್ಯತ್ರ

ಪ್ರಾಹುಃ ಪಂಚದಶೋತ್ತಮಾಃ |

ಪಿಂಡತಾ ಪಿಂಡವಿಜ್ಞಾನಮ್

ಸಂಸಾರಗುಣ ಹೇಯತಾ || 5-27

ದೀಕ್ಷಾ ಲಿಂಗಧೃತಿ ಶ್ಚೈವ

ವಿಭೂತೇರಪಿ ಧಾರಣಮ್ |

ರುದ್ರಾಕ್ಷ ಧಾರಣಂ ಪಶ್ಚಾತ್

ಪಂಚಾಕ್ಷರ ಜಪ ಸ್ತಥಾ || 5-28

ಭಕ್ತಮಾರ್ಗ ಕ್ರಿಯಾ ಚೈವ

ಗುರೋರ್ ಲಿಂಗಸ್ಯ ಚಾರ್ಚನಮ್ |

ಜಂಗಮಸ್ಯ ತಥಾ ಹ್ಯೇಷಾಮ್

ಪ್ರಸಾದ ಸ್ವೀಕೃತಿ ಸ್ತಥಾ || 5-29

ಅತ್ರ ದಾನತ್ರಯಂ ಪ್ರೋಕ್ತಮ್

ಸೋಪಾಧಿನಿರುಪಾಧಿಕಮ್ |

ಸಹಜಂ ಚೇತಿ ನಿರ್ದಿಷ್ಟಮ್

ಸಮಸ್ತಾಗಮ ಪಾರಗೈಃ || 5-30

ಏತಾನಿ ಶಿವಭಕ್ತಸ್ಯ

ಕರ್ತವ್ಯಾನಿ ಪ್ರಯತ್ನತಃ || 5-31

ಈ ಭಕ್ತಸ್ಥಲದಲ್ಲಿ ಹದಿನೈದು ಅವಾಂತರ ಸ್ಥಲಗಳಿವೆ ಎಂದು ಹೇಳಲಾಗಿದೆ. ಅವು ಯಾವುವೆಂದರೆ ಪಿಂಡಸ್ಥಲ, ಪಿಂಡಜ್ಞಾನಸ್ಥಲ, ಸಂಸಾರಹೇಯಸ್ಥಲ, ಗುರುಕಾರುಣ್ಯಸ್ಥಲ, ಲಿಂಗಧಾರಣಸ್ಥಲ, ವಿಭೂತಿಧಾರಣಸ್ಥಲ, ರುದ್ರಾಕ್ಷಧಾರಣಸ್ಥಲ, ಪಂಚಾಕ್ಷರಜಪಸ್ಥಲ, ಭಕ್ತಮಾರ್ಗಕ್ರಿಯಾಸ್ಥಲ, ಗುರು-ಲಿಂಗಾರ್ಚನಸ್ಥಲ (ಉಭಯಸ್ಥಲ), ಗುರು-ಲಿಂಗ-ಜಂಗಮಾರ್ಚನಸ್ಥಲ (ತ್ರಿವಿಧ ಸಂಪತ್ತಿಸ್ಥಲ), ಗುರು-ಲಿಂಗ-ಜಂಗಮ-ಪ್ರಸಾದ ಸ್ಥಲ (ಚತುರ್ವಿಧ ಸಾರಾಯಸ್ಥಲ), ತ್ರಿವಿಧ ದಾನಸ್ಥಲ (ಸೋಪಾಧಿದಾನ, ನಿರುಪಾಧಿದಾನ, ಸಹಜದಾನಸ್ಥಲ). ಹೀಗೆ ಎಲ್ಲ ಆಗಮಗಳ ಪಾರಂಗತರಿಂದ ನಿರ್ದೆಶಿಸಲ್ಪಟ್ಟಿವೆ. ಪ್ರತಿಯೊಬ್ಬ ಶಿವಭಕ್ತನು ಈ ಹದಿನೈದು ಸ್ಥಲಗಳ ಆಚರಣೆಗಳನ್ನು ಪ್ರಯತ್ನಪೂರ್ವಕವಾಗಿ ಮಾಡಬೇಕಾದ ಕರ್ತವ್ಯಗಳಾಗಿವೆ.

ಅಥ ಪಿಂಡಸ್ಥಲಮ್

ಬಹುಜನ್ಮಕೃತೈಃ ಪುಣ್ಯೈಃ

ಪ್ರಕ್ಷೀಣೇ ಪಾಪಪಂಜರೇ |

ಶುದ್ಧಾಂತಃಕರಣೋ ದೇಹೀ

ಪಿಂಡಶಬ್ದೇನ ಗೀಯತೇ || 5-32

ಬಹು ಜನ್ಮಗಳಲ್ಲಿ ಮಾಡಿದ ಪುಣ್ಯವಿಶೇಷದಿಂದ ಪಾಪವೆಂಬ ಪಂಜರವು ಕ್ಷೀಣವಾಗಲು, ಶುದ್ಧವಾದ ಅಂತಕರಣವುಳ್ಳ ದೇಹಿ (ಜೀವಿ)ಯು ಪಿಂಡ ಶಬ್ದದಿಂದ ಕರೆಯಲ್ಪಡುತ್ತಾನೆ.

ಶಿವಶಕ್ತಿ ಸಮುತ್ಪನ್ನೇ

ಪ್ರಪಂಚೇಸ್ಮಿನ್ ವಿಶಿಷ್ಯತೇ |

ಪುಣ್ಯಾಧಿಕಃ ಕ್ಷೀಣಪಾಪಃ

ಶುದ್ಧಾತ್ಮಾ ಪಿಂಡನಾಮಕಃ || 5-33

ಶಿವ-ಶಕ್ತಿಯರಿಂದ ಉತ್ಪನ್ನವಾದ ಈ ಪ್ರಪಂಚದಲ್ಲಿ ಅಧಿಕ ಪುಣ್ಯವಂತನಾದ ಮತ್ತು ಪಾಪವನ್ನು ಕ್ಷಯಿಸಿಕೊಂಡ ಪಿಂಡ ಎಂಬ ಹೆಸರಿನ ಶುದ್ಧಾತ್ಮನು ವಿಶಿಷ್ಟವಾಗಿ ಕಲ್ಪಿಸಲ್ಪಡುತ್ತಾನೆ (ಎಲ್ಲರಿಗಿಂತ ಎದ್ದು ಕಾಣುತ್ತಾನೆ).

ಏಕ ಏವ ಶಿವಃ ಸಾಕ್ಷಾತ್

ಚಿದಾನಂದ ಮಯೋ ವಿಭುಃ|

ನಿರ್ವಿಕಲ್ಪೋ ನಿರಾಕಾರೋ

ನಿರ್ಗುಣೋ ನಿಷ್ಪ್ರ ಪಂಚಕಃ |

ಅನಾದ್ಯ ವಿದ್ಯಾ ಸಂಬಂಧಾತ್|

ತದಂಶೋಜೀವ ನಾಮಕಃ|34

ಒಬ್ಬನೇ ಒಬ್ಬನಾಗಿರುವ ಶಿವನು ಸಾಕ್ಷಾತ್ ಚಿದಾನಂದಮಯನೂ, ವ್ಯಾಪಕನೂ (ವಿಭುವು), ನಿರ್ವಿಕಲ್ಪನೂ (ವಿಕಲ್ಪವೆಂದರೆ ವಸ್ತು ಶೂನ್ಯವಾದ ಶಬ್ದಜ್ಞಾನಾವಲಂಬಿ ಮನೋವೃತ್ತಿ), ನಿರಾಕಾರನೂ, ನಿರ್ಗುಣನೂ (ಸತ್ವ, ರಜ, ತಮೋಗುಣಗಳಿಗೆ ಅತೀತನು), ನಿಷ್ಪ್ರಪಂಚಕನೂ (ಮಾಯಿಕ ಪ್ರಪಂಚ ಶೂನ್ಯನೂ) ಆಗಿದ್ದಾನೆ. ಅನಾದಿಯಾದ ಅವಿದ್ಯೆಯ ಸಂಬಂಧವಾಗುವುದರಿಂದ ಆ ಸಚ್ಚಿದಾನಂದಮಯನಾದ ಶಿವನ ಅಂಶವೇ ಜೀವ ಎಂಬ ಹೆಸರಿನಿಂದ ಕರೆಯಲ್ಪಡುತ್ತಾನೆ.

ದೇವತಿರ್ಯಙ್ಮನುಷ್ಯಾದಿ-

ಜಾತಿಭೇದೇ ವ್ಯವಸ್ಥಿತಃ |

ಮಾಯೀ ಮಹೇಶ್ವರ ಸ್ತೇಷಾಮ್

ಪ್ರೇರಕೋ ಹೃದಿ ಸಂಸ್ಥಿತಃ || 5-35

ಆ ಜೀವನೇ ದೇವ, ಕ್ರಿಮಿಕೀಟ ಮತ್ತು ಮನುಷ್ಯ ಮೊದಲಾದ (84 ಲಕ್ಷ ಪ್ರಕಾರವಾದ) ಜಾತಿಗಳ ಭೇದದಲ್ಲಿ ವ್ಯವಸ್ಥಿತನಾಗಿದ್ದಾನೆ. ಮಾಯಾಶಕ್ತಿ ವಿಶಿಷ್ಟನಾದ ಮಹೇಶ್ವರನು ಆ ಎಲ್ಲ ಜೀವಿಗಳಿಗೆ ಪ್ರೇರಕನಾಗಿ ಅವುಗಳ ಹೃದಯದಲ್ಲಿ ನೆಲೆಸಿದ್ದಾನೆ.

ಚಂದ್ರಕಾಂತೇ ಯಥಾ ತೋಯಮ್

ಸೂರ್ಯಕಾಂತೇ ಯಥಾನಲಃ |

ಬೀಜೇ ಯಥಾಂಕುರಃ ಸಿದ್ಧಃ

ತಥಾತ್ಮನಿ ಶಿವಃ ಸ್ಥಿತಃ || 5-36

ಚಂದ್ರಕಾಂತ ಶಿಲೆಯಲ್ಲಿ ಹೇಗೆ ನೀರು ಇರುತ್ತದೆಯೋ, ಸೂರ್ಯಕಾಂತ ಶಿಲೆಯಲ್ಲಿ ಹೇಗೆ ಅಗ್ನಿ ಇರುತ್ತದೆಯೋ, ಬೀಜದಲ್ಲಿ ಹೇಗೆ ಅಂಕುರವಿರುವುದೋ ಹಾಗೆ ಜೀವಾತ್ಮನಲ್ಲಿ ಶಿವನು ನೆಲೆಸಿದ್ದಾನೆ.

ಆತ್ಮತ್ವಮೀಶ್ವರತ್ವಂ ಚ

ಬ್ರಹ್ಮಣ್ಯೇಕತ್ರ ಕಲ್ಪಿತಮ್ |

ಬಿಂಬತ್ವಂ ಪ್ರತಿಬಿಂಬತ್ವಮ್

ಯಥಾ ಪೂಷಣಿ ಕಲ್ಪಿತಮ್ || 5-37

ಹೇಗೆ ಸೂರ್ಯನಲ್ಲಿ ಬಿಂಬತ್ವವು ಮತ್ತು ಪ್ರತಿಬಿಂಬತ್ವವು ಕಲ್ಪಿಸಲ್ಪಟ್ಟಿರುವುದೋ ಹಾಗೇ ಬ್ರಹ್ಮನಲ್ಲಿ ಆತ್ಮತ್ವ (ಜೀವಾತ್ಮ)ವು ಮತ್ತು ಈಶ್ವರತ್ವವು ಕಲ್ಪಿಸಲ್ಪಟ್ಟಿದೆ.

ಗುಣತ್ರಯ ವಿಭೇದೇನ

ಪರತತ್ತ್ವೇ ಚಿದಾತ್ಮನಿ |

ಭೋಕ್ತೃತ್ವಂ ಚೈವ ಭೋಜ್ಯತ್ವಮ್

ಪ್ರೇರಕತ್ವಂ ಚ ಕಲ್ಪಿತಮ್ || 5-38

ಪರತತ್ತ್ವವಾದ ಚಿದ್ರೂಪವಾದ ಶುದ್ಧ ಚೈತನ್ಯದಲ್ಲಿ ಸತ್ವಾದಿ ಗುಣತ್ರಯಗಳ ಭೇದದಿಂದ ಭೋಕ್ತೃತ್ವ, ಭೋಜ್ಯತ್ವ ಮತ್ತು ಪ್ರೇರಕತ್ವಗಳು ಕಲ್ಪಿಸಲ್ಪಟ್ಟಿವೆ.

ಗುಣತ್ರಯಾತ್ಮಿಕಾ ಶಕ್ತಿಃ

ಬ್ರಹ್ಮನಿಷ್ಠಾ ಸನಾತನೀ |

ತದ್ವೈಷಮ್ಯಾತ್ ಸಮುತ್ಪನ್ನಾ

ತಸ್ಮಿನ್ ವಸ್ತುತ್ರಯಾಭಿಧಾ || 5-39

ಪರಬ್ರಹ್ಮದಲ್ಲಿ ಸನಾತನವಾಗಿರುವ (ಯಾವಾಗಲೂ ಇರುವ) ತ್ರಿಗುಣಾತ್ಮಕ ಶಕ್ತಿಯು ತನ್ನಲ್ಲಿಯ ಸತ್ವಾದಿ ಗುಣಗಳ ವೈಷಮ್ಯದಿಂದ (ತರತಮ ಭಾವದಿಂದ) ಆ ಪರಬ್ರಹ್ಮದಲ್ಲಿ ಮೂರು ವಸ್ತುಗಳಾಗಿ ಪರಿಣಮಿಸುತ್ತದೆ.

ಕಿಂಚಿತ್ಸತ್ತ್ವರಜೋರೂಪಮ್

ಭೋಕ್ತೃಸಂಜ್ಞಕಮುಚ್ಯತೇ|

ಅತ್ಯಂತ ತಾಮಸೋಪಾಧಿ-

ರ್ಭೊಜ್ಯಮಿತ್ಯ ಭಿಧೀಯತೇ|

ಪರತತ್ತ್ವಮಯೋಪಾಧಿಃ

ಬ್ರಹ್ಮ ಚೈತನ್ಯಮೀಶ್ವರಃ|| 5-40

ಕಿಂಚಿತ್ (ಸ್ವಲ್ಪ) ಸತ್ವಗುಣ ಮತ್ತು ಸ್ವಲ್ಪ ರಜೋಗುಣಗಳಿಂದ ಉತ್ಪನ್ನವಾದ ರೂಪವು ಭೋಕ್ತೃವೆಂಬ ಹೆಸರಿನಿಂದ ಹೇಳಲ್ಪಡುತ್ತದೆ. ಅತ್ಯಂತ ತಮೋಗುಣ ಉಪಾಧಿಯಿಂದ ಭೋಜ್ಯವೆಂಬುದಾಗಿ ಹೇಳಲ್ಪಡುತ್ತದೆ. ಶುದ್ಧ ಸತ್ವಗುಣದ ಉಪಾಧಿಯಿಂದ ಆ ಬ್ರಹ್ಮಚೈತನ್ಯವೇ ಈಶ್ವರನೆಂದು ಕರೆಯಿಸಿಕೊಳ್ಳುತ್ತದೆ.

ಭೋಕ್ತಾ ಭೋಜ್ಯಂ ಪ್ರೇರಯಿತಾ

ವಸ್ತುತ್ರಯಮಿದಂ ಸ್ಮೃತಮ್ |

ಅಖಂಡೇ ಬ್ರಹ್ಮಚೈತನ್ಯೇ

ಕಲ್ಪಿತಂ ಗುಣಭೇದತಃ || 5-41

ಅಖಂಡವಾದ ಬ್ರಹ್ಮಚೈತನ್ಯದಲ್ಲಿ ಸತ್ವಾದಿ ಗುಣ ಭೇದದಿಂದ ಭೋಕ್ತಾ (ಜೀವ), ಭೋಜ್ಯ (ವಿಷಯ) ಮತ್ತು ಪ್ರೇರಯಿತಾ (ಪ್ರೇರಕನಾದ ಈಶ್ವರ) ಎಂಬ ವಸ್ತುತ್ರಯಗಳು ಕಲ್ಪಿಸಲ್ಪಟ್ಟಿದೆ.

ಅತ್ರ ಪ್ರೇರಯಿತಾ ಶಂಭುಃ

ಶುದ್ಧೋಪಾಧಿರ್ಮಹೇಶ್ವರಃ |

ಸಮ್ಮಿಶ್ರೋಪಾಧಯಃ ಸರ್ವೆ

ಭೋಕ್ತಾರಃ ಪಶವಃ ಸ್ಮೃತಾಃ || 5-42

ಇಲ್ಲಿ ಪ್ರೇರಕನಾದ ಶಂಭುವು ಶುದ್ಧ ಉಪಾಧಿಯಿಂದ ಕೂಡಿದವನಾಗಿ ಮಹೇಶ್ವರನೆಂದು ಕರೆಯಲ್ಪಡುತ್ತಾನೆ. ಮಿಶ್ರ ಉಪಾಧಿಯುಳ್ಳವರಾದ ಮತ್ತು ಭೋಕ್ತೃಗಳಾದ ಎಲ್ಲ ಜೀವಿಗಳು ಪಶುಗಳೆಂದು ಕರೆಯಿಸಿಕೊಳ್ಳುತ್ತಾರೆ.

ಭೋಜ್ಯಮವ್ಯಕ್ತಮಿತ್ಯುಕ್ತಮ್

ಶುದ್ಧತಾಮಸರೂಪಕಮ್|

ಸರ್ವಜ್ಞಃ ಪ್ರೇರಕಃ ಶಂಭುಃ|

ಕಿಂಚಿಜ್ಜ್ಞೋ ಜೀವ ಉಚ್ಯತೇ|

ಅತ್ಯಂತ ಗೂಢ ಚೈತನ್ಯಮ್

ಜಡಮ ವ್ಯಕ್ತ ಮುಚ್ಯತೇ || 5-43

ಶುದ್ಧ ತಮೋರೂಪವಾದ ಭೋಜ್ಯವು (ವಿಷಯವು) ಅವ್ಯಕ್ತವೆಂದು ಹೇಳಲ್ಪಡುತ್ತದೆ. ಪ್ರೇರಕನಾದ ಶಂಭುವು ಸರ್ವಜ್ಞನಾಗಿರುತ್ತಾನೆ. ಜೀವನು ಕಿಂಚಿಜ್ಞರೆಂದು ಹೇಳಿಸಿಕೊಳ್ಳುವನು. ಅತ್ಯಂತ ಗೂಢ ಚೈತನ್ಯರೂಪವಾದದ್ದು (ಭೋಜ್ಯವು) ಅವ್ಯಕ್ತವೆಂದು ಹೇಳಲಾಗಿದೆ.

ಉಪಾಧಿಃ ಪುನರಾಖ್ಯಾತಃ

ಶುದ್ಧಾಶುದ್ಧವಿಭೇದತಃ |

ಶುದ್ಧೋಪಾಧಿಃ ಪರಾ ಮಾಯಾ

ಸ್ವಾಶ್ರಯಾ ಮೋಹಕಾರಿಣೀ || 5-44

ಉಪಾಧಿಯು ಪುನಃ ಶುದ್ಧ ಮತ್ತು ಅಶುದ್ಧವೆಂಬ ಭೇದದಿಂದ (ಎರಡು ವಿಧವಾಗಿ) ಹೇಳಲ್ಪಟ್ಟಿದೆ. ಶುದ್ಧವಾದ ಉಪಾಧಿಯೇ ಪರಾ (ಮಾಹಾ)ಮಾಯೆಯು ತಾನು ಆಶ್ರಯಿಸಿರುವ ಪ್ರೇರಕನಾದ ಶಂಭುವಿನ ಮೇಲೆ ತನ್ನ ಮೋಹವನ್ನು ಬೀರುವುದಿಲ್ಲ.

ಅಶುದ್ಧೋಪಾಧಿ ರಪ್ಯೇವಮ್

ಅವಿದ್ಯಾಶ್ರಯ ಮೋಹಿನೀ |

ಅವಿದ್ಯಾ ಶಕ್ತಿ ಭೇದೇನ

ಜೀವಾಃ ಬಹು ವಿಧಾಃ ಸ್ಮೃತಾಃ || 5-45

ಇದೇ ಪ್ರಕಾರ ಅಶುದ್ಧೋಪಾಧಿಯಾದ ಅವಿದ್ಯೆಯು ತಾನು ಆಶ್ರಯಿಸಿರುವ ಜೀವಿಯ ಮೇಲೆ ತನ್ನ ಮೋಹವನ್ನು ಬೀರುತ್ತದೆ. ಈ ಅವಿದ್ಯಾಶಕ್ತಿಯ ಭೇದದಿಂದ ಜೀವಿಗಳು ಅನೇಕ ವಿಧವಾಗಿ ಹೇಳಲ್ಪಟ್ಟಿದ್ದಾರೆ.

ಮಾಯಾ ಶಕ್ತಿ ವಶಾದೀಶೋ

ನಾನಾ ಮೂರ್ತಿ ಧರಃ ಪ್ರಭುಃ |

ಸರ್ವಜ್ಞಃ ಸರ್ವಕರ್ತಾ ಚ

ನಿತ್ಯಮುಕ್ತೋ ಮಹೇಶ್ವರಃ || 5-46

ಸರ್ವ ಸಮರ್ಥನಾಗಿರುವಂತಹ ಈಶನು (ಈಶ್ವರನು) ಮಾಯಾಶಕ್ತಿಯ ಉಪಾಧಿಯಿಂದ ನಾನಾ ಲೀಲಾಮೂರ್ತಿ (ಸದ್ಯೋಜಾತಾದಿ ಲೀಲಾ ವಿಗ್ರಹ)ಗಳನ್ನು ಧರಿಸುತ್ತಾನೆ. ಈ ಮಹೇಶ್ವರನು ಸರ್ವಜ್ಞನು, ಸರ್ವಕರ್ತೃವು ಮತ್ತು ನಿತ್ಯಮುಕ್ತನು ಆಗಿರುತ್ತಾನೆ.

ಕಿಂಚಿತ್ಕರ್ತಾ ಚ ಕಿಂಚಿಜ್ಜ್ಞೋ

ಬದ್ಧೋನಾದಿಶರೀರವಾನ್ |

ಅವಿದ್ಯಾಮೋಹಿತಾಃ ಜೀವಾಃ

ಬ್ರಹ್ಮೈಕ್ಯಜ್ಞಾನವರ್ಜಿತಾಃ || 5-47

ಅವಿದ್ಯಾಮೋಹಿತರಾದ ಜೀವರು ಕಿಂಚಿತ್ಕರ್ತರು, ಕಿಂಚಿತಜ್ಞರೂ, ಬದ್ಧರೂ, ಅನಾದಿಶರೀರವುಳ್ಳವರೂ ಮತ್ತು ಬ್ರಹ್ಮೈಕಜ್ಞಾನವರ್ಜಿತರೂ ಆಗಿರುತ್ತಾರೆ.

ಪರಿಭ್ರಮಂತಿ ಸಂಸಾರೇ

ನಿಜಕರ್ಮಾನುಸಾರತಃ |

ದೇವತಿರ್ಯಙ್ಮನುಷ್ಯಾದಿ-

ನಾನಾ ಯೋನಿ ವಿಭೇದತಃ || 5-48

(ಈ ಜೀವರು) ತಮ್ಮ ತಮ್ಮ ನಿಜಕರ್ಮಾನುಸಾರವಾಗಿ ತಿರ್ಯಕ್, ಮನುಷ್ಯ ಮತ್ತು ದೇವ ಮುಂತಾದ ನಾನಾ ಯೋನಿಗಳ ಭೇದದಿಂದ ಸಂಸಾರದಲ್ಲಿ ಪರಿಭ್ರಮಿಸುತ್ತಾರೆ.

ಚಕ್ರ ನೇಮಿ ಕ್ರಮೇಣೈವ

ಭ್ರಮಂತಿ ಹಿ ಶರೀರಿಣಃ |

ಜಾತ್ಯಾಯು ರ್ಭೊಗವೈಷಮ್ಯ-

ಕಾರಣಂ ಕರ್ಮ ಕೇವಲಮ್ || 5-49

ಶರೀರಧಾರಿಗಳಾದ ಜೀವಿಗಳು ಚಕ್ರದಲ್ಲಿರುವ ಅರೆಗಳಂತೆ (ನಾನಾ ಯೋನಿಗಳಲ್ಲಿ) ತಿರುಗುತ್ತಿರುತ್ತಾರೆ. ಈ ಜೀವಿಗಳ ಜಾತಿ (ಜನ್ಮ), ಆಯುಷ್ಯ ಮತ್ತು ಭೋಗಗಳ ವೈಷಮ್ಯಕ್ಕೆ ಕೇವಲ (ಅವರವರ) ಕರ್ಮವೇ ಕಾರಣವಾಗಿರುತ್ತದೆ.

ಏತೇಷಾಂ ದೇಹಿನಾಂ ಸಾಕ್ಷೀ

ಪ್ರೇರಕಃ ಪರಮೇಶ್ವರಃ |

ಏತೇಷಾಂ ಭ್ರಮತಾಂ ನಿತ್ಯಮ್

ಕರ್ಮಯಂತ್ರ ನಿಯಂತ್ರಣೇ || 5-50

ಪ್ರೇರಕನಾದ ಪರಮೇಶ್ವರನು ದೇಹಧಾರಿಗಳಾದ ಜೀವಿಗಳಿಗೆ ಸಾಕ್ಷೀರೂಪವಾಗಿರುತ್ತಾನೆ. ಸಂಸಾರದಲ್ಲಿ ನಿತ್ಯವೂ ತಿರುಗುತ್ತಿರುವ ಎಲ್ಲ ಜೀವಿಗಳ ಕರ್ಮಯಂತ್ರವನ್ನು ಅವನೇ ನಿಯಂತ್ರಿಸುತ್ತಾನೆ. (ಈಶ್ವರನು ಜೀವಿಗಳ ಕರ್ಮಗಳಿಗೆ ಸಾಕ್ಷಿಯೂ ಪ್ರೇರಕ ಮತ್ತು ನಿಯಂತ್ರಕನಾಗಿದ್ದಾನೆ).

ದೇಹಿನಾಂ ಪ್ರೇರಕಃ ಶಂಭುಃ

ಹಿತ ಮಾರ್ಗೊಪದೇಶಕಃ |

ಪುನರಾವೃತ್ತಿ ರಹಿತ-

ಮೋಕ್ಷಮಾರ್ಗೊ ಪದೇಶಕಃ || 5-51

ದೇಹಧಾರಿಗಳಾದ ಜೀವಿಗಳಿಗೆ ಪ್ರೇರಕನಾಗಿರುವ ಶಂಭುವು ಹಿತಮಾರ್ಗೊಪದೇಶಕನೂ ಆಗಿದ್ದಾನೆ ಮತ್ತು ಪುನರಾವೃತ್ತಿರಹಿತವಾದ ಮೋಕ್ಷಮಾರ್ಗದ ಉಪದೇಶಕನೂ ಆಗಿರುತ್ತಾನೆ.

ಸ್ವಕರ್ಮ ಪರಿಪಾಕೇನ

ಪ್ರಕ್ಷೀಣ ಮಲ ವಾಸನಃ |

ಶಿವ ಪ್ರಸಾದಾಜ್ಜೀ ವೋಯಮ್

ಜಾಯತೇ ಶುದ್ಧಮಾನಸಃ || 5-52

ಈ ಜೀವನು ತನ್ನ ಕರ್ಮಗಳು ಪರಿಪಾಕವಾದಾಗ, ಮಲವಾಸನೆಗಳು ಕ್ಷೀಣವಾದಾಗ ಮತ್ತು ಶಿವನ ಅನುಗ್ರಹವು ಪ್ರಾಪ್ತವಾದಾಗ ಶುದ್ಧ ಮಾನಸನಾಗುತ್ತಾನೆ.

ಶುದ್ಧಾಂತಃಕರಣೇ ಜೀವೇ

ಶುದ್ಧಕರ್ಮವಿಪಾಕತಃ |

ಜಾಯತೇ ಶಿವಕಾರುಣ್ಯಾತ್

ಪ್ರಸ್ಫುಟಾ ಭಕ್ತಿರೈಶ್ವರೀ || 5-53

ಕರ್ಮವಿಪಾಕದಿಂದ ಶುದ್ಧಾಂತಃಕರಣನಾದ ಜೀವಾತ್ಮನಲ್ಲಿ ಶಿವಕಾರುಣ್ಯದಿಂದ ಈಶ್ವರ ವಿಷಯಿಕವಾದ ಧೃಢವಾದ ಭಕ್ತಿಯು ಉಂಟಾಗುತ್ತದೆ.

ಜಂತುರಂತ್ಯ ಶರೀರೋ ಸೌ

ಪಿಂಡ ಶಬ್ದಾಭಿ ಧೇಯಕಃ || 5-54

ಹೀಗೆ ಶುದ್ಧಾಂತಃಕರಣಿಯಾದ ಪಿಂಡಶಬ್ದ ವಾಚ್ಯನಾದ ಈ ಜೀವನು ಅಂತ್ಯಶರೀರಿ (ಚರಮದೇಹಿ)ಯೆಂದು ಕರೆಯಲ್ಪಡುತ್ತಾನೆ.

ಇತಿ ಪಿಂಡಸ್ಥಲಂ

ಅಥ ಪಿಂಡ ಜ್ಞಾನ ಸ್ಥಲಮ್

ಶರೀರಾತ್ಮ ವಿವೇಕೇನ

ಪಿಂಡಜ್ಞಾನೀ ಸ ಕಥ್ಯತೇ |

ಶರೀರಮೇವ ಚಾರ್ವಾಕೈಃ

ಆತ್ಮೇತಿ ಪರಿಕೀರ್ ತ್ಯತೇ || 5-55

ಶರೀರ ಮತ್ತು ಆತ್ಮಗಳ ವಿವೇಕವನ್ನು ಪಡೆದವನು ಪಿಂಡಜ್ಞಾನಿಯೆಂದು ಹೇಳಲ್ಪಡುತ್ತಾನೆ. ಚಾರ್ವಾಕ ದರ್ಶನದವರು ಶರೀರವೇ ಆತ್ಮವೆಂದು ಹೇಳುತ್ತಾರೆ.

ಇಂದ್ರಿಯಾಣಾಂ ತಥಾತ್ಮ ತ್ವಮ್

ಅಪರೈಃ ಪರಿಭಾಷ್ಯತೇ |

ಬುದ್ಧಿತತ್ತ್ವ ಗತೈರ್ ಭೌದ್ಧೈಃ

ಬುದ್ಧಿರಾತ್ಮೇತಿ ಗೀಯತೇ || 5-56

ಬೇರೆ ಕೆಲವರು ಇಂದ್ರಿಯಗಳೇ ಆತ್ಮವೆಂಬುದಾಗಿ ಪ್ರತಿಪಾದಿಸುತ್ತಾರೆ. ಬುದ್ಧಿತತ್ತ್ವವಾದಿಗಳಾದ ಬೌದ್ಧರು ಬುದ್ಧಿಯೇ ಆತ್ಮವೆಂದು ಪ್ರತಿಪಾದಿಸುತ್ತಾರೆ.

ನೇಂದ್ರಿಯಾಣಾಂ ನ ದೇಹಸ್ಯ

ನ ಬುದ್ಧೇರಾತ್ಮ ತಾ ಭವೇತ್ |

ಅಹಂ ಪ್ರತ್ಯಯ ವೇದ್ಯತ್ವಾತ್

ಅನುಭೂತ ಸ್ಮೃತೇರಪಿ || 5-57

ಆತ್ಮವು ಅಹಂ ಪ್ರತ್ಯಯಕ್ಕೆ ವೇದ್ಯವಾಗಿದೆ. ಅದೇ ರೀತಿಯಾದ ಅನುಭವ ಮತ್ತು ಸ್ಮೃತಿಗಳೂ ಸಹ ಇರುವುದರಿಂದ ಇಂದ್ರಿಯಗಳಾಗಲಿ, ದೇಹಗಳಾಗಲಿ ಮತ್ತು ಬುದ್ಧಿಯೇ ಆಗಲಿ ಇವು ಆತ್ಮವಾಗಲಾರವು- (ಏಕೆಂದರೆ ಇವು ಅಹಂ ಪ್ರತ್ಯಯಕ್ಕೆ ವೇದ್ಯವಾಗಿದೆ. ಮಮ ಪ್ರತ್ಯಯಕ್ಕೆ ವೇದ್ಯವಾಗಿರುವುದಿಲ್ಲ. ಅಂತೆಯೇ ಇವು ಅನಾತ್ಮಗಳು).

ಶರೀರೇಂದ್ರಿಯ ಬುದ್ಧಿಭ್ಯೋ

ವ್ಯತಿರಿಕ್ತಃ ಸನಾತನಃ |

ಆತ್ಮಸ್ಥಿತಿ ವಿವೇಕೀ ಯಃ

ಪಿಂಡಜ್ಞಾನೀ ಸ ಕಥ್ಯತೇ || 5-58

ಶರೀರ, ಇಂದ್ರಿಯ ಮತ್ತು ಬುದ್ಧಿಗಳಿಗಿಂತ ಭಿನ್ನವಾಗಿರುವ ಸನಾತನವಾದ ಆತ್ಮದ ಅಸ್ತಿತ್ವವನ್ನು ವಿವೇಕದಿಂದ ಯಾರು ತಿಳಿದುಕೊಳ್ಳುವರೋ ಅವರು ಪಿಂಡಜ್ಞಾನಿಯೆಂದು ಕರೆಯಲ್ಪಡುತ್ತಾರೆ.

ನಶ್ವರಾಣಿ ಶರೀರಾಣಿ

ನಾನಾರೂಪಾಣಿ ಕರ್ಮಣಾ |

ಆಶ್ರಿತೋ ನಿತ್ಯ ಏ ವಾಸೌ

ಇತಿ ಜಂತೋರ್ ವಿವೇಕಿತಾ || 5-59

ಶರೀರಗಳು ನಶ್ವರವಾದವುಗಳು ಮತ್ತು ಕರ್ಮದ ತಾರತಮ್ಯದಿಂದ ನಾನಾ ಪ್ರಕಾರಗಳಾಗಿರುತ್ತವೆ. ಇಂತಹ ಶರೀರದಲ್ಲಿರುವ ಆತ್ಮವು ನಿತ್ಯವಾದುದು ಎಂಬ ತಿಳುವಳಿಕೆಯೇ ಜೀವಿಯ ವಿವೇಕವಾಗಿದೆ.

ಶರೀರಾತ್ ಪೃಥ ಗಾತ್ಮಾನಮ್

ಆತ್ಮಭ್ಯಃ ಪೃಥ ಗೀಶ್ವರಮ್ |

ಪ್ರೇರಕಂ ಯೋ ವಿಜಾನಾತಿ

ಪಿಂಡಜ್ಞಾ ನೀತಿ ಕಥ್ಯತೇ || 5-60

ಶರೀರಕ್ಕಿಂತಲೂ ಆತ್ಮವು ಭಿನ್ನವಾದುದು. ಆತ್ಮಕ್ಕಿಂತಲೂ (ಜೀವಾತ್ಮ ರಿಗಿಂತಲೂ) ಈಶ್ವರನು ಭಿನ್ನನಾಗಿದ್ದಾನೆ ಮತ್ತು ಪ್ರೇರಕನಾಗಿದ್ದಾನೆ ಎಂಬುದಾಗಿ ತಿಳಿದವನು ಪಿಂಡಜ್ಞಾನಿ ಎಂದು ಕರೆಯಲ್ಪಡುತ್ತಾನೆ.

ಇತಿ ಪಿಂಡಜ್ಞಾನ ಸ್ಥಲಂ

ಅಥ ಸಂಸಾರ ಹೇಯಸ್ಥಲಮ್

ನಿರಸ್ತಹೃತ್ಕಲಂಕಸ್ಯ

ನಿತ್ಯಾನಿತ್ಯವಿವೇಕಿನಃ |

ಸಂಸಾರಹೇಯತಾಬುದ್ಧಿಃ

ಜಾಯತೇ ವಾಸನಾ ಬಲಾತ್ || 5-61

ಹೃದಯದ ಕಲಂಕವನ್ನು ಕಳೆದುಕೊಂಡು ನಿತ್ಯಾನಿತ್ಯ ವಿವೇಕಿಯಾದ ಜೀವಿಗೆ ಶುಭವಾಸನಾ ಬಲದಿಂದ ಸಂಸಾರದಲ್ಲಿ ಹೇಯಬುದ್ಧಿಯು ಉಂಟಾಗುತ್ತದೆ.

ಐಹಿಕೇ ಕ್ಷಣಿಕೇ ಸೌಖ್ಯೇ

ಪುತ್ರದಾರಾದಿಸಂಭವೇ |

ಕ್ಷಯಿತ್ವಾದಿಯುತೇ ಸ್ವರ್ಗೆ

ಕಸ್ಯ ವಾಂಛಾ ವಿವೇಕಿನಃ || 5-62

ಪತ್ನಿಪುತ್ರಾದಿಗಳ ಸಂಗದಿಂದುಂಟಾಗುವ ಐಹಿಕವಾದ ಮತ್ತು ಕ್ಷಣಿಕವಾದ ಸುಖದಲ್ಲಿ ಮತ್ತು ಕ್ಷಯಪತನಾದಿ ದೋಷಗಳಿಂದ ಕೂಡಿದ ಸ್ವರ್ಗಸುಖದಲ್ಲಿ ಯಾವ ವಿವೇಕಿಗೆ ಇಚ್ಛೆಯುಂಟಾದೀತು?

ಜಾತಸ್ಯ ಹಿ ಧ್ರುವೋ ಮೃತ್ಯುಃ

ಧ್ರುವಂ ಜನ್ಮ ಮೃತಸ್ಯ ಚ |

ಜಂತುರ್ಮರಣಜನ್ಮಾಭ್ಯಾಮ್

ಪರಿ ಭ್ರಮತಿ ಚಕ್ರವತ್ || 5-63

ಹುಟ್ಟಿದವನಿಗೆ ಮರಣವೆಂಬುದು ನಿಯತವಾದುದು. ಮೃತವಾದವನಿಗೆ ಜನನವೂ ನಿಶ್ಚಿತವು. ಆದ್ದರಿಂದ ಜೀವಾತ್ಮನು (ಜಂತು) ಈ ಹುಟ್ಟು ಸಾವುಗಳ ಅಧೀನನಾಗಿ ಚಕ್ರದಂತೆ ಸುತ್ತುತ್ತಿರುವನು (ಪರಿಭ್ರಮಿಸುತ್ತಿರುವನು).

ಮತ್ಸ್ಯ ಕೂರ್ಮ ವರಾಹಾಂಗೈಃ

ನೃಸಿಂಹ ಮನುಜಾದಿಭಿಃ |

ಜಾತೇನ ನಿಧನಂ ಪ್ರಾಪ್ತಮ್

ವಿಷ್ಣುನಾಪಿ ಮಹಾತ್ಮನಾ || 5-64

ಮಹಾಮಹಿಮನಾದ ವಿಷ್ಣುಪರಮಾತ್ಮನೂ ಸಹ ಮತ್ಸ್ಯ, ಕೂರ್ಮ, ವರಾಹ, ನೃಸಿಂಹ, ಮನುಷ್ಯ ಮುಂತಾದ ಜನ್ಮಗಳಲ್ಲಿ (ಅವತಾರಗಳಲ್ಲಿ) ಮರಣವನ್ನು ಹೊಂದಿದನು.

ಭೂತ್ವಾ ಕರ್ಮ ವಶಾಜ್ಜಂತುಃ

ಬ್ರಾಹ್ಮಣಾದಿಷು ಜಾತಿಷು |

ತಾಪತ್ರಯ ಮಹಾವಹ್ನಿ-

ಸಂತಾಪಾದ್ ದಹ್ಯತೇ ಭೃಶಮ್ || 5-65

ಜೀವಾತ್ಮನು (ಜಂತು) ತನ್ನ ಅನಾದಿಕರ್ಮದ ದೆಸೆಯಿಂದ, ಬ್ರಾಹ್ಮಣ-ಕ್ಷತ್ರಿಯಾದಿ ನಾನಾ ಜಾತಿಗಳಲ್ಲಿ ಜನ್ಮ ತಾಳಿ (ಆಧ್ಯಾತ್ಮಿಕಾದಿ) ತಾಪತ್ರಯಗಳೆಂಬ ಬೆಂಕಿಯ ಬೇಗೆಯಲ್ಲಿ ಬಲವಾಗಿ ಬೆಂದು ಹೋಗುವನು (ಈ ಶ್ಲೋಕದಲ್ಲಿ ಲೋಕಾರೂಢಿಯಲ್ಲಿರುವ ಬ್ರಾಹ್ಮಣಾದಿ ವರ್ಣಗಳಲ್ಲಿ ಜನ್ಮ ತಾಳಲು ಅವರವರ ಪೂರ್ವಕರ್ಮಗಳೇ ಕಾರಣ ಎಂದು ಹೇಳಲಾಗಿದೆ. ಯಾರು ಯಾವುದೇ ವರ್ಣದವರಾಗಿದ್ದರೂ ಅವರೆಲ್ಲರೂ ಈ ಲಿಂಗಧಾರಣೆ, ಲಿಂಗಪೂಜೆಯ ಮುಖಾಂತರ ಲಿಂಗಸ್ವರೂಪರೇ ಆಗುವರೆಂಬ ವಿಚಾರವನ್ನು ಮುಂದಿನ ಪರಿಚ್ಛೇದಗಳಲ್ಲಿ ಶ್ರೀ ಶಿವಯೋಗಿ ಶಿವಾಚಾರ್ಯರು ನಿರೂಪಿಸಿದ್ದಾರೆ. ಆದ್ದರಿಂದ ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥವು ವರ್ಣಾಶ್ರಮ ಧರ್ಮವನ್ನು ಪ್ರತಿಪಾದಿಸಿಲ್ಲ).

ಕರ್ಮ ಮೂಲೇನ ದುಃಖೇನ

ಪೀಡ್ಯಮಾನಸ್ಯ ದೇಹಿನಃ |

ಆಧ್ಯಾತ್ಮಿಕಾದಿನಾ ನಿತ್ಯಮ್

ಕುತ್ರ ವಿಶ್ರಾಂತಿರಿಷ್ಯತೇ || 5-66

ಕರ್ಮದ ಮೂಲಕವಾಗಿ ಪ್ರಾಪ್ತವಾಗುವ ಆಧ್ಯಾತ್ಮಿಕಾದಿ (ಅಧ್ಯಾತ್ಮಿಕ, ಆಧಿಭೌತಿಕ ಮತ್ತು ಆಧಿದೈವಿಕಗಳೆಂಬ) ಮೂರು ಪ್ರಕಾರದ ದುಃಖದಿಂದ ನಿತ್ಯವೂ ಪೀಡಿಸಲ್ಪಡುತ್ತಿರುವ ಜೀವಾತ್ಮರಿಗೆ ಎಲ್ಲಿ ತಾನೆ ವಿಶ್ರಾಂತಿಯನ್ನು ಇಚ್ಛಿಸಲು ಸಾಧ್ಯ

ಆಧ್ಯಾತ್ಮಿಕಂ ತು ಪ್ರಥಮಮ್

ದ್ವಿತೀಯಂ ಚಾಧಿ ಭೌತಿಕಮ್ |

ಆಧಿ ದೈವಿಕ ಮನ್ಯಚ್ಚ

ದುಃಖ ತ್ರಯ ಮಿದಂ ಸ್ಮೃತಮ್ || 5-67

ಮೊದಲನೆಯದು ಆಧ್ಯಾತ್ಮಿಕ ದುಃಖ. ಎರಡನೆಯದು ಆಧಿಭೌತಿಕ ದುಃಖ ಮತ್ತೊಂದು ಆಧಿದೈವಿಕ ದುಃಖ. ಹೀಗೆ ಇವು ಮೂರೂ ದುಃಖತ್ರಯಗಳೆಂದು ಹೇಳಲ್ಪಟ್ಟಿವೆ.

ಆಧ್ಯಾತ್ಮಿಕಂ ದ್ವಿಧಾ ಪ್ರೋಕ್ತಮ್

ಬಾಹ್ಯಾಭ್ಯಂತರ ಭೇದತಃ |

ವಾತಪಿತ್ಥಾದಿಜಂ ದುಃಖಮ್

ಬಾಹ್ಯಮಾಧ್ಯಾತ್ಮಿಕಂ ಮತಮ್ || 5-68

ಆಧ್ಯಾತ್ಮಿಕ ದುಃಖವು ಬಾಹ್ಯ ಮತ್ತು ಅಭ್ಯಂತರವೆಂದು ಎರಡು ವಿಧವಾಗಿ ಹೇಳಲ್ಪಟ್ಟಿದೆ. ವಾತ ಪಿತ್ತಾದಿಗಳಿಂದ ಉತ್ಪನ್ನವಾದ (ರೋಗಗಳಿಂದುಂಟಾದವು) ದುಃಖವು ಬಾಹ್ಯ ಆಧ್ಯಾತ್ಮಿಕ ದುಃಖವೆಂದು ಸಮ್ಮತಿಸಲ್ಪಟ್ಟಿದೆ.

ರಾಗದ್ವೇಷಾದಿಸಂಪನ್ನಮ್

ಆಂತರಂ ಪರಿಕೀತ್ರ್ಯತೇ |

ಆಧಿಭೌತಿಕಮೇತದ್ಧಿ

ದುಃಖಂ ರಾಜಾದಿಭೂತಜಮ್|| 5-69

ರಾಗದ್ವೇಷಾದಿಗಳಿಂದ ಉಂಟಾಗುವ ದುಃಖವು ಅಭ್ಯಂತರ ಆಧ್ಯಾತ್ಮಿಕ ದುಃಖವೆಂದು ಕೀರ್ತಿಸಲ್ಪಡುತ್ತದೆ. ರಾಜನಿಂದ ಮತ್ತು ಕ್ರೂರಪ್ರಾಣಿಗಳಿಂದ ಉಂಟಾಗುವ ದುಃಖ ಆಧಿಭೌತಿಕ ದುಃಖವು.

ಆಧಿದೈವಿಕ ಮಾಖ್ಯಾತಮ್

ಗ್ರಹಯಕ್ಷಾದಿ ಸಂಭವಮ್ |

ದುಃಖೈ ರೇತೈ ರುಪೇತಸ್ಯ

ಕರ್ಮಬದ್ಧಸ್ಯ ದೇಹಿನಃ|

ಸ್ವರ್ಗೆ ವಾ ಯದಿ ವಾ ಭೂಮೌ

ಸುಖಲೇಶೋ ನ ವಿದ್ಯತೇ || 5-70

ನವಗ್ರಹ ಮತ್ತು ಭೂತಭೇತಾಳಾದಿಗಳಿಂದ ಉತ್ಪನ್ನವಾಗುವ ದುಃಖ ಆಧಿದೈವಿಕ ದುಃಖವೆಂದು ಹೇಳಲ್ಪಡುತ್ತದೆ. ಈ ದುಃಖಗಳಿಂದ ಕೂಡಿರುವ ಮತ್ತು ಕರ್ಮ(ಪುಣ್ಯ, ಪಾಪ)ದಿಂದ ಬದ್ಧಿತನಾದ ಜೀವಿಗೆ ಸ್ವರ್ಗದಲ್ಲಿಯೇ ಆಗಲಿ ಅಥವಾ ಭೂಲೋಕದಲ್ಲಿಯೇ ಆಗಲಿ ಕಿಂಚಿತ್ತೂ ಸುಖವು ಇರುವುದಿಲ್ಲ.

ತಟಿತ್ಸು ವೀಚಿ ಮಾಲಾಸು

ಪ್ರದೀಪಸ್ಯ ಪ್ರಭಾಸು ಚ |

ಸಂಪತ್ಸು ಕರ್ಮ ಮೂಲಾಸು

ಕಸ್ಯ ವಾ ಸ್ಥಿರತಾಮತಿಃ || 5-71

ಕೋಲ್ಮಿಂಚುಗಳಂತೆ, ನೀರಿನ ತೆರೆಗಳ ಸಾಲುಗಳಂತೆ ಮತ್ತು ದೀಪದ ಜ್ವಾಲೆಗಳಂತೆ ಅಸ್ಥಿರಗಳಾದ ಕರ್ಮಮೂಲದ ಸಂಪತ್ತುಗಳಲ್ಲಿ ಯಾರಿಗೆ ತಾನೇ ಅವುಗಳ ಬಗ್ಗೆ ಸ್ಥಿರಬುದ್ಧಿಯುಂಟಾದೀತು?

ಮಲಕೋಶೇ ಶರೀರೇಸ್ಮಿನ್

ಮಹಾದುಃಖ ವಿವರ್ಧನೇ |

ತಟಿದಂಕುರ ಸಂಕಾಶೇ

ಕೋ ವಾ ರುಚ್ಯೇತ ಪಂಡಿತಃ || 5-72

ಮಲಮೂತ್ರಗಳ ಕೋಶವಾಗಿರುವ, ಮಹಾದುಃಖವನ್ನು ವರ್ಧಿಸುವ, ಕೋಲ್ಮಿಂಚಿನಂತೆ ಕ್ಷಣಕಾಲ ತೋರಿ ಇಲ್ಲದಂತಾಗುವ ಈ ಶರೀರದಲ್ಲಿ ಯಾವ ಪಂಡಿತನು ತಾನೇ ಪ್ರೀತಿಪಡುವನು?

ನಿತ್ಯಾನಂದ ಚಿದಾಕಾರಮ್

ಆತ್ಮತತ್ತ್ವಂ ವಿಹಾಯ ಕಃ |

ವಿವೇಕೀ ರಮತೇ ದೇಹೇ

ನಶ್ವರೇ ದುಃಖಭಾಜನೇ || 5-73

ನಿತ್ಯವೂ, ಆನಂದರೂಪನೂ, ಚಿದಾಕಾರಸ್ವರೂಪನೂ ಆದ ಆತ್ಮತತ್ತ್ವವನ್ನು ಬಿಟ್ಟು ಯಾವ ವಿವೇಕಿಯು ದುಃಖಾಶ್ರಯವಾದ ಮತ್ತು ನಶ್ವರವಾದ ದೇಹದಲ್ಲಿ ರಮಿಸಬಲ್ಲನು.

ವಿವೇಕೀ ಶುದ್ಧಹೃದಯೋ

ನಿಶ್ಚಿತಾತ್ಮ ಸುಖೋದಯಃ |

ದುಃಖಹೇತೌ ಶರೀರೇಸ್ಮಿನ್

ಕಲತ್ರೇ ಚ ಸುತೇಷು ಚ || 5-74

ಸುಹೃತ್ಸು ಬಂಧುವರ್ಗೆಷು

ಧನೇಷು ಕುಲ ಪದ್ಧತೌ |

ಅನಿತ್ಯ ಬುದ್ಧ್ಯಾ ಸರ್ವತ್ರ

ವೈರಾಗ್ಯಂ ಪರಮಶ್ನುತೇ || 5-75

ಶುದ್ಧ ಹೃದಯವುಳ್ಳವನು ಆತ್ಮಸುಖದಲ್ಲಿ ನಿಶ್ಚಯವನ್ನು ತಾಳಿದ ವಿವೇಕಿಯು ದುಃಖಕ್ಕೆ ಕಾರಣೀಭೂತವಾದ ಈ ಶರೀರದಲ್ಲಿ, ಹೆಂಡತಿಯಲ್ಲಿ, ಮಕ್ಕಳಲ್ಲಿ, ಸ್ನೇಹಿತರಲ್ಲಿ, ಬಂಧುಬಾಂಧವರಲ್ಲಿ, ಧನಕನಕಾದಿಗಳಲ್ಲಿ ಮತ್ತು ತನ್ನ ಕುಲಪದ್ಧತಿಯಲ್ಲಿ ಅನಿತ್ಯ ಬುದ್ಧಿಯುಳ್ಳವನಾಗಿ ಈ ಎಲ್ಲವುಗಳಲ್ಲಿ ವೈರಾಗ್ಯವನ್ನು ಹೊಂದುವನು.

ವಿವೇಕಿನೋ ವಿರಕ್ತಸ್ಯ

ವಿಷಯೇ ಷ್ವಾತ್ಮ ರಾಗಿಣಃ |

ಸಂಸಾರ ದುಃಖ ವಿಚ್ಛೇದ-

ಹೇತೌ ಬುದ್ಧಿಃ ಪ್ರವರ್ತತೇ || 5-76

ವಿಷಯ (ಶಬ್ದ, ಸ್ಪರ್ಶ, ರೂಪ, ರಸ, ಗಂಧ)ಗಳಲ್ಲಿ ವೈರಾಗ್ಯವನ್ನು ಹೊಂದಿದ, ತನ್ನಾತ್ಮನಲ್ಲಿ ಅನುಗ್ರಹವುಳ್ಳವನಾದ ವಿವೇಕಿಯ ಬುದ್ಧಿಯು ಸಂಸಾರದುಃಖವನ್ನು ಕತ್ತರಿಸಿ ಹಾಕುವ ಉಪಾಯವನ್ನು ಹುಡುಕುವುದರಲ್ಲಿ ಪ್ರವೃತ್ತವಾಗುತ್ತದೆ.

ನಿತ್ಯಾನಿತ್ಯ ವಿವೇಕಿನಃ

ಸುಕೃತಿನಃ ಶುದ್ಧಾಶಯಸ್ಯಾತ್ಮನೋ

ಬ್ರಹ್ಮೋಪೇಂದ್ರ ಮಹೇಂದ್ರಮುಖ್ಯ

ವಿಭವೇಷ್ವ ಸ್ಥಾಯಿತಾಂ ಪಶ್ಯತಃ |

ನಿತ್ಯಾನಂದಪದೇನಿರಾಕೃತ

ಜಗತ್ಸಂಸಾರದುಃಖೋದಯೇ

ಸಾಂಬೇ ಚಂದ್ರಶಿರೋಮಣೌ

ಸಮುದಯೇದ್ ಭಕ್ತಿರ್ ಭವಧ್ವಂಸಿನೀ|| 5-77

ಸತ್ಕರ್ಮ ಪರಾಯಣನೂ, ನಿರ್ಮಲಾಂತಃಕರಣನೂ, ನಿತ್ಯಾನಿತ್ಯ ವಿವೇಕಿಯೂ, ಬ್ರಹ್ಮ, ವಿಷ್ಣು, ಮಹೇಂದ್ರ ಮೊದಲಾದ ದೇವತೆಗಳ ವೈಭವಗಳನ್ನು ಸಹ ಕ್ಷಣಿಕವಾಗಿ ಕಾಣುವ ಜೀವಾತ್ಮನಿಗೆ, ನಿತ್ಯಾನಂದಕ್ಕೆ ಸ್ಥಾನವಾಗಿರುವ ಸಂಸಾರ ದುಃಖವನ್ನು ನಿರಾಕರಿಸಿದ ಚಂದ್ರಧರನಾದ ಸಾಂಬನಲ್ಲಿ (ಉಮಾಸಹಿತ ಶಿವನಲ್ಲಿ) ಭವಧ್ವಂಸಿಯಾದ ಭಕ್ತಿಯುಂಟಾಗುವುದು.

ಇತಿ ಸಂಸಾರಹೇಯಸ್ಥಲಂ ಪರಿಸಮಾಪ್ತಂ

ಇತಿ ಅಗಸ್ತ್ಯಪ್ರಾರ್ಥನಾ ಪರಿಸಮಾಪ್ತಂ ಓಂ ತತ್ಸತ್ ಇತಿ

ಶ್ರೀ ಶಿವಗೀತೇಷು ಸಿದ್ಧಾಂತಾಗಮೇಷು -

ಶಿವಾದ್ವೈತವಿದ್ಯಾಯಾಂ ಶಿವಯೋಗಶಾಸ್ತ್ರೇ,

ಶ್ರೀ ರೇಣುಕಾಗಸ್ತ್ಯ ಸಂವಾದೇ

ಶ್ರೀವೀರಶೈವಧರ್ಮ ನಿರ್ಣಯೇ,

ಶ್ರೀಶಿವಯೋಗಿ ಶಿವಾಚಾರ್ಯ ವಿರಚಿತೇ

ಶ್ರೀಸಿದ್ಧಾಂತ ಶಿಖಾಮಣೌ

ಭಕ್ತಸ್ಥಲೇ ಪಿಂಡಾದಿಸ್ಥಲ ತ್ರಯ

ಪ್ರಸಂಗೋ ನಾಮ ಪಂಚಮಃ ಪರಿಚ್ಛೇದಃ

ಓಂ ತತ್ಸತ್ ಇಲ್ಲಿಗೆ ಶ್ರೀ ಶಿವನಿಂದ ಉಪದೇಶಿಸಲ್ಪಟ್ಟ ಶ್ರೀ ಸಿದ್ಧಾಂತಾಗಮಗಳಲ್ಲಿಯ ಶಿವಾದ್ವೈತವಿದ್ಯಾರೂಪವೂ, ಶಿವಯೋಗಶಾಸ್ತ್ರವೂ, ಶ್ರೀ ರೇಣುಕಾಗಸ್ತ್ಯ ಸಂವಾದ ರೂಪವೂ ಶ್ರೀ ವೀರಶೈವಧರ್ಮ ನಿರ್ಣಯವೂ, ಶ್ರೀ ಶಿವಯೋಗಿ ಶಿವಾಚಾರ್ಯವಿರಚಿತವೂ ಆದ ಶ್ರೀಸಿದ್ಧಾಂತಶಿಖಾಮಣಿಯಲ್ಲಿ ಭಕ್ತಸ್ಥಲದಲ್ಲಿಯ ಪಿಂಡಾದಿ ಮೂರುಸ್ಥಲಗಳ ಪ್ರಸಂಗವೆಂಬ ಹೆಸರಿನ ಐದನೆಯ ಪರಿಚ್ಛೇದವು ಮುಗಿದುದು.