ಚತುರ್ಥಃ ಪರಿಚ್ಛೇದಃ
ರೇಣುಕಾಗಸ್ತ್ಯ-ದರ್ಶನ ಪ್ರಸಂಗಃ
ರೇಣುಕ ಭೂಲೋಕಾ-ವ-ತರಣಮ್ (13 ಶ್ಲೋಕಗಳು)
ಅಥ ತ್ರಿಲಿಂಗವಿಷಯೇ
ಕೊಲ್ಲಿಪಾಕ್ಯಭಿಧೇ ಪುರೇ |
ಸೋಮೇಶ್ವರ ಮಹಾಲಿಂಗಾತ್
ಪ್ರಾದುರಾ ಸೀತ್-ಸ ರೇಣುಕಃ ||4-1
ಅನಂತರದಲ್ಲಿ ಆ ರೇಣುಕಗಣೇಶ್ವರನು ತ್ರಿಲಿಂಗ ವಿಷಯ
(ತ್ರಿಲಿಂಗದೇಶ)ದಲ್ಲಿರುವ ಕೊಲ್ಲಿಪಾಕವೆಂಬ ಹೆಸರುಳ್ಳ ಪುರದಲ್ಲಿ
ಸೋಮೇಶ್ವರನೆಂಬ ಮಹಾಲಿಂಗದಲ್ಲಿ ಪ್ರಾದುರ್ಭಾವವಾದನು (ಅವತರಿಸಿದನು).
ಪ್ರಾದುರ್ ಭೂತಂ ತಮಾಲೋಕ್ಯ
ಶಿವಲಿಂಗಾತ್ ತ್ತ್ರಿಲಿಂಗಜಾಃ |
ವಿಸ್ಮಿತಾಃ ಪ್ರಾಣಿನಃ ಸರ್ವೆ
ಬಭೂ-ವು-ರತಿ ತೇಜಸಮ್ || 4-2
ತ್ರಿಲಿಂಗ ದೇಶದಲ್ಲಿ ಜನಿಸಿದ ಎಲ್ಲ ಜೀವಿಗಳು (ಜನರೆಲ್ಲರೂ) ಸೋಮೇಶ್ವರನೆಂಬ
ಶಿವಲಿಂಗದಿಂದ ಅವತರಿಸಿದ ಮಹಾತೇಜಸ್ವಿಯಾದ ಶ್ರೀ ರೇಣುಕಗಣಾಧೀಶ್ವರನನ್ನು ನೋಡಿ ವಿಸ್ಮಿತರಾದರು (ಆಶ್ಚರ್ಯಚಕಿತರಾದರು).
ಭಸ್ಮೋದ್ಧೂಲಿತ ಸರ್ವಾಂಗಮ್|
ಸಾರ ರುದ್ರಾಕ್ಷ ಭೂಷಣಮ್ |
ಲಿಂಗಧಾರಣ ಸಂಯುಕ್ತಮ್|
ಲಿಂಗಪೂಜಾ ಪರಾಯಣಮ್ |
ಜಟಾ ಮುಕುಟ ಸಂಯುಕ್ತಮ್
ತ್ರಿಪುಂಡ್ರಾಂಕಿತ ಮಸ್ತಕಮ್ || 4-3
ಭಸ್ಮದಿಂದ ಉದ್ಧೂಲನ ಮಾಡಲ್ಪಟ್ಟ ಸರ್ವಾಂಗವುಳ್ಳ, ಬಹಳಷ್ಟು
ರುದ್ರಾಕ್ಷಿಗಳಿಂದ ಭೂಷಿತನಾದ, ಇಷ್ಟಲಿಂಗವನ್ನು ಧರಿಸಿಕೊಂಡಿದ್ದ,
ಲಿಂಗಪೂಜೆಯಲ್ಲಿ ನಿಷ್ಣಾತನಾದ, ಜಟಾಮಕುಟದಿಂದ ಕೂಡಿದ, ಹಣೆಯಲ್ಲಿ ತ್ರಿಪುಂಡ್ರವನ್ನು ಧರಿಸಿದ-
ಕಟೀ ತಟೀ ಪಟೀ ಭೂತ-|
ಕಂಥಾ ಪಟಲ ಬಂಧುರಮ್ |
ದಧಾನಂ ಯೋಗದಂಡಂ ಚ|
ಭಸ್ಮಾ ಧಾರಂ ಕಮಂಡಲುಮ್ || 4-4
ಶಿವಾದ್ವೈತ ಪರಿಜ್ಞಾನ –
ಪರಮಾನಂದ ಮೋದಿತಮ್ |
ನಿರ್ಧೂತ ಸರ್ವ ಸಂಸಾರ-
ವಾಸನಾ ದೋಷ ಪಂಜರಮ್ || 4-5
ಸೊಂಟಕ್ಕೆ ಅಲಂಕಾರವಾಗಿದ್ದ ಕಂಥಾ ವಸ್ತ್ರದಿಂದ ಮನೋಹರನಾದ,
ಯೋಗದಂಡವನ್ನು ಧರಿಸಿದ ಮತ್ತು ಭಸ್ಮಕ್ಕೆ ಆಧಾರವಾದ ಕಮಂಡಲುವನ್ನು ಹಿಡಿದುಕೊಂಡಿದ್ದ,
ಶಿವಾದ್ವೈತ (ಲಿಂಗಾಂಗ ಸಾಮರಸ್ಯ) ಪರಿಜ್ಞಾನದಿಂದುಂಟಾದ
ಪರಮಾನಂದದಿಂದ ಸಂತುಷ್ಟನಾದ, ಜನನ ಮರಣ ರೂಪವಾದ
ಸಂಸಾರದ ಸಕಲವಾಸನಾರೂಪವಾದ ದೋಷ ಸಮೂಹವನ್ನು ಕೊಡಹಿಕೊಂಡಿರುವ-
ಶಿವಾಗಮ ಸುಧಾಸಿಂಧು-
ಸಮುನ್ಮೇಷ ಸುಧಾಕರಮ್ |
ಚಿತ್ತಾರವಿಂದ ಸಂಗೂಢ-
ಶಿವಪಾದಾಂಬುಜ ದ್ವಯಮ್ || 4-6
ಶಿವಾಗಮಗಳೆಂಬ ಅಮೃತ ಸಮುದ್ರವನ್ನು
ಉಕ್ಕೇರಿಸುವಲ್ಲಿ ಚಂದ್ರಪ್ರಾಯನಾದ, ಹೃದಯಕಮಲದಲ್ಲಿ
ಅಡಗಿಸಿಟ್ಟಿರುವ ಶಿವಪಾದ ಕಮಲಗಳುಳ್ಳ-
ಯಮಾದಿ ಯೋಗ ತಂತ್ರಜ್ಞಮ್
ಸ್ವತಂತ್ರಂ ಸರ್ವಕರ್ಮಸು |
ಸಮಸ್ತ ಸಿದ್ಧ ಸಂತಾನ-
ಸಮುದಾಯ ಶಿಖಾಮಣಿಮ್ || 4-7
ಯೋಗದ ಯಮದಮಾದಿ ಅಷ್ಟಾಂಗಗಳ
ತಂತ್ರ (ವಿಧಾನ)ವನ್ನು ತಿಳಿದ, ಸಕಲ ಕರ್ಮಗಳನ್ನು
ಮಾಡುವಲ್ಲಿ ಸ್ವತಂತ್ರಗಳಾದ ಸಮಸ್ತಸಿದ್ಧರ
ಸಂತಾನ ಸಮುದಾಯಕ್ಕೆ ಶಿಖಾಮಣಿಯಂತಿರುವ-
ವೀರ ಸಿದ್ಧಾಂತ ನಿರ್ವಾಹ-
ಕೃತಪಟ್ಟ ನಿಬಂಧನಮ್ |
ಆಲೋಕ ಮಾತ್ರ ನಿರ್ಭಿನ್ನ-
ಸಮಸ್ತ ಪ್ರಾಣಿ ಪಾತಕಮ್ || 4-8
ವೀರಶೈವ ಸಿದ್ಧಾಂತವನ್ನು ನಿರ್ವಹಿಸುವ (ಸ್ಥಾಪಿಸುವ)
ಕಾರ್ಯಕ್ಕಾಗಿ ಪರಶಿವನಿಂದ ಪಟ್ಟ ಕಟ್ಟಿಸಿಕೊಂಡವನೂ,
ನೋಟ ಮಾತ್ರದಿಂದಲೇ ಸಕಲ ಪ್ರಾಣಿಗಳ ಪಾಪವನ್ನು
ತೊಲಗಿಸಿಕೊಂಡವನೂ ಆದ ಆ ರೇಣುಕಗಣೇಶ್ವರನನ್ನು
ತ್ರಿಲಿಂಗದೇಶದ ಸರ್ವಜನರೂ ನೋಡಿ ಆಶ್ಚರ್ಯಪಟ್ಟರು.
ತಮ ಪೃಚ್ಛನ್ ಜನಾಃ ಸರ್ವೆ
ನಮಂತಃ ಕೋ ಭವಾನಿತಿ |
ಇತಿ ಪೃಷ್ಟೋ ಮಹಾಯೋಗೀ
ಜನೈರ್ ವಿಸ್ಮಿತ ಮಾನಸೈಃ || 4-9
ಪ್ರತ್ಯುವಾಚ ಶಿವಾದ್ವೈತ-
ಮಹಾನಂದ ಪರಾಯಣಃ |
ಪಿನಾಕಿನಃ ಪಾಶ್ರ್ವವರ್ತಿ
ರೇಣುಕಾಖ್ಯೋ ಗಣೇಶ್ವರಃ || 4-10
ಅಲ್ಲಿಯ ಎಲ್ಲ ಜನರೂ ಇವನಿಗೆ ನಮಸ್ಕರಿಸಿ ನೀವು ಯಾರು?
ಎಂಬುದಾಗಿ ಪ್ರಶ್ನಿಸಿದರು. ಹೀಗೆ ವಿಸ್ಮಿತ ಮಾನಸ (ಆಶ್ಚರ್ಯಚಕಿತ)ರಾದ
ಜನರಿಂದ ಈ ರೀತಿಯಾಗಿ ಕೇಳಲ್ಪಟ್ಟ ಆ ಮಹಾಯೋಗಿಯು,
ಶಿವಾದ್ವೈತ ಮಹಾನಂದ ಪರಾಯಣನು, ಪಿನಾಕಿಯ (ಶಿವನ) ಸಮೀಪವರ್ತಿಯಾದ
ರೇಣುಕನೆಂಬ ಹೆಸರಿನ ನಾನು ಗಣೇಶ್ವರನು ಎಂಬುದಾಗಿ (ಪ್ರತ್ಯುವಾಚ) ಉತ್ತರಿಸಿದನು.
ಶಿವಾ ದೇಶಾ-ನು-ಸಾರೇಣ
ಶಿವಲಿಂಗಾದಿ-ಹಾ-ಭವಮ್ |
ನಾಮ್ನಾ ರೇಣುಕ ಸಿದ್ಧೋಹಮ್
ಸಿದ್ಧ ಸಂತಾನ ನಾಯಕಃ || 4-11
ಶಿವನ ಆದೇಶದ ಅನುಸಾರವಾಗಿ ನಾನು ಈ
ಭೂಲೋಕದಲ್ಲಿ ಶಿವಲಿಂಗದಿಂದ ಅವತರಿಸಿರುವೆನು.
ಸಿದ್ಧಸಂತಾನಕ್ಕೆ ನಾಯಕನಾದ ನಾನು
ರೇಣುಕಸಿದ್ಧನೆಂಬ ಹೆಸರುಳ್ಳವನಾಗಿದ್ದೇನೆ.
ಸ್ವಚ್ಛಂದಚಾರೀ ಲೋಕೇಸ್ಮಿನ್
ಶಿವ ಸಿದ್ಧಾಂತ ಪಾಲಕಃ |
ಖಂಡಯನ್ ಜೈನ ಚಾರ್ವಾಕ-
ಬೌದ್ಧಾದೀನಾಂ ದುರಾಗ-ಮಾನ್ ||4-12
ಈ ಲೋಕದಲ್ಲಿ ಜೈನ, ಚಾರ್ವಾಕ ಮತ್ತು
ಬೌದ್ಧ ಮುಂತಾದ ಮತಗಳ ದುರಾಗಮಗಳನ್ನು
(ವೇದ ವಿರುದ್ಧಗಳಾದ ಆಗಮಗಳನ್ನು) ಖಂಡಿಸಲು ಮತ್ತು
ಶಿವಸಿದ್ಧಾಂತವನ್ನು ಸಂರಕ್ಷಿಸಲು ನಾನು ಸ್ವೇಚ್ಛೆಯಿಂದ ಸಂಚರಿಸುವವನಾಗಿದ್ದೇನೆ.
ಇತ್ಯುಕ್ತ್ವಾ ಪಶ್ಯ-ತಾಂ ತೇಷಾಮ್
ವಿಷಯ ಸ್ಥಿರ ಚಕ್ಷುಷಾಮ್ |
ಉತ್ಥಾಯ ವ್ಯೂಮ ಮಾರ್ಗೆಣ
ಮಲಯಾದ್ರಿ ಮುಪಾಗಮತ್ || 4-13
ಈ ರೀತಿಯಾಗಿ ಹೇಳಿ, ಅಲ್ಲಿಯ ಜನರು ಬಿಟ್ಟ ಕಣ್ಣು
ಬಿಟ್ಟಂತೆಯೇ ನೋಡುತ್ತಿರುವಾಗ ಅಲ್ಲಿಂದ ಎದ್ದು
ವ್ಯೋಮ (ಆಕಾಶ) ಮಾರ್ಗವಾಗಿ ಮಲಯ ಪರ್ವತಕ್ಕೆ ಹೋದನು.
ಇತಿ ರೇಣುಕ ಭೂಲೋಕಾವತರಣಂ
ಮಲಯಾಚಲ ವರ್ಣನಂ
ನವಚಂದನ ಕಾಂತಾರ-
ಕಂದಲ-ನ್ಮಂದ ಮಾರುತಮ್ |
ಅಭಂಗುರ ಭುಜಂಗ ಸ್ತ್ರೀ-
ಸಂಗೀತ ರಸ ಸಂಕುಲಮ್||4-14
ಹೊಸತಾದ ಶ್ರೀಗಂಧದ ಅರಣ್ಯವನ್ನು ಭೇದಿಸಿ ಬರುತ್ತಿದ್ದ
ಮಂದ ಮಾರುತದಿಂದ ಕೂಡಿದ ದಟ್ಟವಾಗಿರುವ
ಸರ್ಪಿಣಿಯರ ಸಂಗೀತರಸದಿಂದ ತುಂಬಿಕೊಂಡಿರುವ
ಕರಿಪೋತ ಕರಾಕೃಷ್ಟ-
ಸ್ಫುರ ದೇಲಾತಿ ವಾಸಿತಮ್ |
ವರಾಹ ದಂಷ್ಟ್ರಿಕಾ ಧ್ವಸ್ತ-
ಮುಸ್ತಾ ಸುರಭಿ ಕಂದರಮ್|| 4-15
ಆನೆಯ ಮರಿಗಳು ಸೊಂಡಲಿನಿಂದ
ಕಿತ್ತುಚೆಲ್ಲಿದ ಏಲಕ್ಕಿಯ ಬಳ್ಳಿಯಿಂದ
ಸುವಾಸನೆಗೊಂಡಿರುವ, ಹಂದಿಗಳ ಕೋರೆದಾಡೆಯಿಂದ
ಅಗೆಯಲ್ಪಟ್ಟ ಕೊನ್ನಾರಿಗಡ್ಡೆಯಿಂದ ಪರಿಮಳಿತವಾದ ಗುಹೆಗಳುಳ್ಳ-
ಪಟೀರ ದಲ ಪರ್ಯಂಕ-
ಪ್ರಸುಪ್ತ ವ್ಯಾಧ ದಂಪತಿಮ್ |
ಮಾಧವೀ ಮಲ್ಲಿಕಾ ಜಾತಿ-
ಮಂಜರೀ ರೇಣು ರಂಜಿತಮ್ || 4-16
ಶ್ರೀಗಂಧದ ಚಿಗುರಿನ ಹಾಸುಗೆಯ ಮೇಲೆ ಮಲಗಿರುವ
ಬೇಡ ದಂಪತಿ ಗಳುಳ್ಳ, ಸೇವಂತಿಗೆ, ಮಲ್ಲಿಗೆ, ಜಾಜಿ
ಹೂಗಳ ಗೊಂಚಲಿನಿಂದ ಸುರಿದ ಧೂಳಿನಿಂದ ಮನೋಹರವಾಗಿಯೂ
ಇರುವ ಮಲಯಪರ್ವತಕ್ಕೆ ಆಕಾಶಮಾರ್ಗದಿಂದ ಹೋದನು
ಇತಿ ಮಲಯಾಚಲ ವರ್ಣನಂ
ಅಗಸ್ತ್ಯ ಮುನೇಃ ಆಶ್ರಮ ವರ್ಣನಮ್
ತತ್ರ ಕುತ್ರ ಚಿದಾಭೋಗ-
ಸರ್ವರ್ತು ಕುಸುಮದ್ರುಮೇ |
ಅಪಶ್ಯದಾಶ್ರಮಂ ದಿವ್ಯಮ್
ಅಗಸ್ತ್ಯಸ್ಯ ಮಹಾಮುನೇಃ || 4-17
ಎಲ್ಲ ಋತುಗಳಲ್ಲಿ ಅರಳುವ ಹೂಗಳ ಗಿಡಗಳಿಂದ
ಕೂಡಿದ ಆ ಪರ್ವತದ ಒಂದು ಭಾಗದಲ್ಲಿ
ಮಹಾಮುನಿಯಾದ ಅಗಸ್ತ್ಯನ ದಿವ್ಯವಾದ
ಆಶ್ರಮವನ್ನು(ರೇಣುಕನು) ನೋಡಿದನು.
ಮಂದಾರ ಚಂದನ ಪ್ರಾಯೈರ್
ಮಂಡಿತಂ ತರುಮಂಡಲೈಃ |
ಶಾಖಾ ಶಿಖರ ಸಂಲೀನ-
ತಾರಕಾ ಗಣ ಕೋರಕೈಃ || 4-18
ಕೊಂಬೆಗಳ ತುದಿಯಲ್ಲಿ ಅಡಗಿರುವ ನಕ್ಷತ್ರ ಸಮೂಹವೆಂಬ
ಮೊಗ್ಗುಗಳಿಂದ ಕಲ್ಪವೃಕ್ಷ, ಶ್ರೀಗಂಧ ಮೊದಲಾದ ಮರಗಳ
ಸಮೂಹದಿಂದ ಅಲಂಕೃತವಾದ-
ಮುನಿ ಕನ್ಯಾ ಕರಾನೀತ-
ಕಲಶಾಂಬು ವಿವರ್ಧಿತೈಃ |
ಆಲವಾಲ ಜಲಾ ಸ್ವಾದ-
ಮೋದಮಾನ ಮೃಗೀ ಗಣೈಃ || 4-19
ಮುನಿಕನ್ಯೆಯರ ಕರಗಳಿಂದ ತಂದ ಕಲಶದ ನೀರಿನಿಂದ
ಬೆಳೆದಿರುವ ಗಿಡಗಳ ಪಾತಿಯಲ್ಲಿರುವ ನೀರನ್ನು ಆಸ್ವಾದಿಸಿ
ಆನಂದವಾಗಿರುವ ಹೆಣ್ಣು ಜಿಂಕೆಗಳ ಸಮೂಹದಿಂದ ಕೂಡಿದ-
ಹೇಮಾರವಿಂದ ನಿಷ್ಯಂದ-
ಮಕರಂದ ಸುಗಂಧಿಭಿಃ |
ಮರಾ ಲಾಲಾಪ ವಾಚಾಲು-
ವೀಚಿ ಮಾಲಾ ಮನೋಹರೈಃ || 4-20
ಸುವರ್ಣ ಕಮಲದಿಂದ ಹೊರಕ್ಕೆ ಸೂಸಿದ ಮಕರಂದದಿಂದ
ಸುಗಂಧಿತಗಳಾದ ಹಂಸಪಕ್ಷಿಗಳ ನುಡಿಗಳಿಂದ ಶಬ್ದಾಯಮಾನವಾಗಿರುವ
ತೆರೆಗಳ ಸಾಲುಗಳಿಂದ ಮನೋಹರಗಳಾಗಿರುವ-
ಇಂದೀ ವರವರ ಜ್ಯೋತಿ-
ರಂಧೀಕೃತ ಹರಿನ್ಮುಖೈಃ |
ಲೋಪಾ ಮುದ್ರಾ ಪದನ್ಯಾಸ-
ಚರಿತಾರ್ಥ ತಟಾಂಕಿತೈಃ || 4-21
ನೀಲಕಮಲಗಳ ಜ್ಯೋತಿಯಿಂದ ಕತ್ತಲಾಗಿ
ಮಾಡಲ್ಪಟ್ಟಿರುವ ದಿಕ್ಕುಗಳುಳ್ಳ, ಅಗಸ್ತ್ಯರ
ಪತ್ನಿಯಾದ ಲೋಪಾಮುದ್ರೆಯ ಪಾದ
ವಿನ್ಯಾಸದಿಂದ ಧನ್ಯವಾದ ದಡಗಳಿಂದ ಕೂಡಿದ-
ಹಾರ ನೀಹಾರ ಕರ್ಪೂರ-
ಹರಹಾಸಾ ಮಲೋದಕೈಃ |
ನಿತ್ಯ ನೈಮಿತ್ತಿಕ ಸ್ನಾನ-
ನಿಯಮಾರ್ಥೆಸ್ ತಪಸ್ವಿನಾಮ್ || 4-22
ಮುತ್ತಿನಹಾರ, ಹಿಮ, ಕರ್ಪೂರ ಮತ್ತು
ಹರನ ಮಂದಹಾಸದಂತೆ ನಿರ್ಮಲವಾಗಿರುವ
ಜಲದಿಂದ ಕೂಡಿದ, ತಪಸ್ವಿಗಳ ನಿತ್ಯ ನೈಮಿತ್ತಿಕ
ಸ್ನಾನ ವ್ರತಗಳಿಗೆ ಪ್ರಯೋಜನಕಾರಿಯಾಗಿರುವ-
ಪ್ರಕೃಷ್ಟ ಮಣಿ ಸೋ-ಪಾನೈಃ
ಪರಿವೀತಂ ಸರೋವರೈಃ |
ವಿಮುಕ್ತ ಸತ್ತ್ವ ವೈರಸ್ಯಂ
ಬ್ರಹ್ಮಲೋಕ ಮಿವಾಪರಮ್ || 4-23
ಉತ್ಕೃಷ್ಟ ರತ್ನಖಚಿತಗಳಾದ ಮೆಟ್ಟಲುಗಳಿಂದ
ಕೂಡಿದ ಮುಕ್ತವಾಗಿರುವ ಸರೋವರಗಳುಳ್ಳ, ಪ್ರಾಣಿಗಳ ಜಾತಿವೈರದಿಂದ
ಮುಕ್ತವಾಗಿರುವ ಜಾತಿ ಅಂತೆಯೆ ಎರಡನೆಯ ಬ್ರಹ್ಮಲೋಕದಂತಿರುವುದು.
ಹೂಯ ಮಾನಾಜ್ಯ ಸಂತಾನ-
ಧೂಮಗಂಧಿ ಮಹಾಸ್ಥಲಮ್ |
ಶುಕ ಸಂಸತ್ ಸಮಾರಬ್ಧ
ಶ್ರುತಿ ಶಾಸ್ತ್ರೋಪ ಬೃಂಹಣಮ್ ||4-24
ಹೋಮ ಮಾಡುತ್ತಿದ್ದ ತುಪ್ಪದ ಧಾರೆಯಿಂದ ಉತ್ಪನ್ನವಾದ
ಧೂಮದ ಸುಗಂಧದಿಂದ ಕೂಡಿದ ಗಿಣಿಗಳ ಸಂಸತ್ತಿನಲ್ಲಿ ಆರಂಭಿಸಲ್ಪಟ್ಟ
ವೇದ, ಶಾಸ್ತ್ರ, ಪುರಾಣ ಪ್ರಸಂಗಗಳಿಂದ ಕೂಡಿದ
ಅಗಸ್ತ್ಯರ ಋಷ್ಯಾಶ್ರಮವನ್ನು (ರೇಣುಕನು) ಕಂಡನು.
ಇತಿ ಅಗಸ್ತ್ಯಾಶ್ರಮವರ್ಣನಂ
ಅಗಸ್ತ್ಯ ಮುನಿವರ್ಣನಮ್
ತಸ್ಯ ಮಧ್ಯೇ ಸಮಾಸೀನಂ
ಮೂಲೇ ಚಂದನಭೂರುಹಃ |
ಸುಕುಮಾರದಲಚ್ಛಾಯಾ-
ದೂರಿತಾದಿತ್ಯ ತೇಜಸಃ || 4-25
ಆ ಆಶ್ರಮದ ಮಧ್ಯದಲ್ಲಿ ಕೋಮಲಗಳಾದ ಎಲೆಗಳ
ನೆರಳಿನಿಂದ ಸೂರ್ಯನ ಬಿಸಿಲನ್ನು ನಿವಾರಿಸುತ್ತಿದ್ದ
ಚಂದನದ ವೃಕ್ಷದ ಬುಡದಲ್ಲಿ ಕುಳಿತಿರುವ-
ತಡಿತ್ಪಿಂಗ ಜಟಾಭಾರೈಃ
ತ್ರಿಪುಂಡ್ರಾಂಕಿತ ಮಸ್ತಕೈಃ |
ಭಸ್ಮೋದ್ಧೂಲಿತ ಸರ್ವಾಂಗೈಃ
ಸ್ಫುರದ್ ರಾದ್ರಾಕ್ಷ ಭೂಷಣೈಃ || 4-26
ಮಿಂಚಿನಂತೆ ನಸುಗೆಂಪುವರ್ಣದ ಭಾರವಾದ ಜಡೆಯನ್ನು ಧರಿಸಿದ,
ಹಣೆಯಲ್ಲಿ ತ್ರಿಪುಂಡ್ರಭಸ್ಮವನ್ನು ಧರಿಸಿದ, ಸರ್ವಾಂಗಗಳಲ್ಲಿ
ಭಸ್ಮೋದ್ಧೂಲನವನ್ನು ಮಾಡಿಕೊಂಡಿದ್ದ, ರುದ್ರಾಕ್ಷಿಗಳ ಆಭೂಷಣಗಳಿಂದ ಒಪ್ಪುತ್ತಿರುವ-
ನವವಲ್ಕಲ ವಾಸೋಭಿಃ
ನಾನಾ ನಿಯಮ ಧಾರಿಭಿಃ |
ಪರಿವೀತಂ ಮುನಿಗಣೈಃ
ಪ್ರಮಥೈರಿವ ಶಂಕರಮ್ || 4-27
ನೂತನಗಳಾದ ನಾರುಮಡಿಗಳನ್ನು ಉಟ್ಟಿರುವ,
ನಾನಾ ನಿಯಮ(ವ್ರತ) ಗಳನ್ನು ಪರಿಪಾಲಿಸುತ್ತಿರುವ
ಮುನಿಗಳ ಸಮೂಹದಿಂದ ಸುತ್ತುವರಿದಿದ್ದ ಅಗಸ್ತ್ಯಮುನಿಯು
ಪ್ರಮಥರಿಂದ ಸುತ್ತುವರೆಯಲ್ಪಟ್ಟ ಶಂಕರನಂತಿದ್ದನು.
ಸಮುಜ್ವಲ ಜಟಾ ಜಾಲೈಃ
ತಪಃ ಪಾದಪ ಪಲ್ಲವೈಃ |
ಸ್ಫುರ-ತ್ ಸೌದಾಮಿನೀ ಕಲ್ಪೈಃ
ಜ್ವಾಲಾ ಜಾಲೈ ರಿ-ವಾನಲಮ್ || 4-28
ತಪಃ ಪಾದಪಲ್ಲವಗಳಿಗೆ ಸಮಾನಗಳಾದ,
ಹೊಳೆಯುತ್ತಿರುವ ಮಿಂಚಿನಂತಿರುವ
ಉಜ್ವಲವಾದ ಜಡೆಗಳಿಂದ ಕೂಡಿದ ಅಗಸ್ತ್ಯನು ಜ್ವಾಲೆಗಳಿಂದ ಕೂಡಿದ ಅಗ್ನಿಯಂತಿದ್ದನು.
ವಿಶುದ್ಧ ಭಸ್ಮ ಕೃತಯಾ
ತ್ರಿಪುಂಡ್ರಾಂಕಿತ ರೇಖಯಾ |
ತ್ರಿಸ್ರೋತ-ಸೇವ ಸಂಬದ್ಧ-
ಶಿಲಾಭಾಗಂ ಹಿಮಾಚಲಮ್ || 4-29
ಪರಿಶುದ್ಧವಾದ ಭಸ್ಮದಿಂದ ತ್ರಿಪುಂಡ್ರವನ್ನು ಧರಿಸಿದ
(ಅಗಸ್ತ್ಯನು) ಗಂಗೆಯ ಮೂರು ಧಾರೆಗಳಿಂದ
ಕೂಡಿದ ಹಿಮಾಲಯ ಪರ್ವತದಂತೆ ಕಾಣುತ್ತಿದ್ದನು.
ಭಸ್ಮಾಲಂಕೃತ ಸರ್ವಾಂಗಮ್
ಶಶಾಂಕ-ಮಿವ ಭೂಗತಮ್ |
ವಸಾನಂ ವಲ್ಕಲಂ ನವ್ಯಮ್
ಬಾಲಾ ತಪ ಸಮ-ಪ್ರಭಮ್ || 4-30
ಸರ್ವಾಂಗಗಳಲ್ಲಿ ಭಸ್ಮದಿಂದ
ಅಲಂಕೃತನಾಗಿರುವುದರಿಂದ ಭೂಮಿಗಿಳಿದ ಚಂದ್ರನಂತಿದ್ದನು.
ಹೊಸ ನಾರುಮಡಿಯುಟ್ಟುದ್ದರಿಂದ ಎಳೆಬಿಸಿಲಿಗೆ
ಸಮಾನವಾದ ಕಾಂತಿಯುಳ್ಳವನಾಗಿದ್ದನು.
ವಡವಾಗ್ನಿ ಶಿಖಾಜಾಲ-
ಸಮಾಲೀಢ ಮಿ ವಾರ್ಣವಮ್ |
ಸರ್ವಾಸಾಮಪಿ ವಿದ್ಯಾನಾಮ್
ಸಮುದಾಯ ನಿಕೇತನಮ್ || 4-31
ವಡವಾಗ್ನಿಯ ಜ್ವಾಲೆಗಳ ಶಿಖೆಗಳಿಂದ ವ್ಯಾಪ್ತವಾಗಿರುವ
ಸಮುದ್ರದಂತೆ ತೋರುತ್ತಿದ್ದನು. ಎಲ್ಲ ವಿದ್ಯೆಗಳ ಸಮುದಾಯಕ್ಕೆ
ಆಶ್ರಯನಾಗಿದ್ದನು.
ನ್ಯಕ್ಕೃತ ಪ್ರಾಕೃತಾ ಹಂತಮ್
ನಿರೂಢ ಶಿವ ಭಾವನಮ್ |
ತೃಣೀಕೃತ ಜಗಜ್ಜಾಲಮ್
ಸಿದ್ಧೀ ನಾಮುದ ಯ ಸ್ಥಲಮ್ || 4-32
ಪ್ರಾಕೃತಾಹಂಕಾರ ವರ್ಜಿತನೂ, ದೃಢವಾದ ಶಿವಭಾವನೆಯುಳ್ಳವನೂ,
ಜಗಜ್ಜಾಲವನ್ನು ತುಚ್ಛೀಕರಿಸಿದವನೂ, ಸರ್ವಸಿದ್ಧಿಗಳಿಗೆ ಉಗಮ
ಸ್ಥಾನವಾದವನೂ ಆಗಿದ್ದನು.
ಮೋಹಾಂಧಕಾರ ತಪನಮ್
ಮೂಲಬೋಧ ಮಹೀರುಹಮ್ |
ದದರ್ಶ ಸ ಮಹಾಯೋಗೀ
ಮುನಿಂ ಕಲಶ ಸಂಭವಮ್ ||4-33
ಮೋಹವೆಂಬ ಅಂಧಕಾರಕ್ಕೆ ಸೂರ್ಯನಂತಿರುವ,
ಸ್ವಸ್ವರೂಪಜ್ಞಾನಕ್ಕೆ ಕಲ್ಪವೃಕ್ಷದಂತಿರುವ ಕಲಶಸಂಭವನಾದ
ಅಗಸ್ತ್ಯ ಮಹಾಮುನಿಯನ್ನು ಆ ಮಹಾಯೋಗಿಯಾದ ರೇಣುಕಗಣೇಶ್ವರನು ನೋಡಿದನು.
ಇತಿ ಅಗಸ್ತ್ಯಮುನಿವರ್ಣನಮ್
ಶ್ರೀ ರೇಣುಕ ಪೂಜನಮ್
ತಮಾಗತಂ ಮಹಾಸಿದ್ಧಮ್
ಸಮೀಕ್ಷ್ಯ ಕಲಶೋದ್ಭವಃ |
ಗಣೇಂದ್ರಂ ರೇಣುಕಾ ಭಿ ಖ್ಯಮ್
ವಿವೇದ ಜ್ಞಾನ ಚಕ್ಷುಷಾ |
ತಸ್ಯಾನು ಭಾವಂ ವಿಜ್ಞಾಯ
ಸಹಸೈವ ಸಮುತ್ಥಿತಃ || 4-34
ಕಲಶೋದ್ಭವನಾದ ಅಗಸ್ತ್ಯನು ತನ್ನ ಆಶ್ರಮಕ್ಕೆ ಆಗಮಿಸಿದ
ಮಹಾಸಿದ್ಧನನ್ನು ತನ್ನ ಜ್ಞಾನಚಕ್ಷುವಿನಿಂದ ನೋಡಿ,
ಈತನು ರೇಣುಕನೆಂಬ ಹೆಸರಿನ ಗಣೇಂದ್ರನೆಂಬುದಾಗಿ ತಿಳಿದುಕೊಂಡನು.
ಶ್ರೀ ರೇಣುಕಗಣೇಶ್ವರನ ಪ್ರಭಾವವನ್ನು ತಿಳಿದು, ಕೂಡಲೆ ಅಗಸ್ತ್ಯನು ಎದ್ದು ನಿಂತು-
ಸಂಪ್ರಣ ಮ್ಯ ಸಮಾನೀಯ
ಸ್ವಾಸನೇ ತಂ ನ್ಯ ವೇಶಯತ್ |
ಲೋಪಾ ಮುದ್ರಾ ಕರಾನೀತೈಃ
ಉದಕೈ ರತಿ ಪಾವನೈಃ |
ಪಾದೌ ಪ್ರಕ್ಷಾಲ ಯಾ ಮಾಸ
ಸ ತಸ್ಯ ಶಿವಯೋಗಿನಃ || 4-35
ನಮಸ್ಕರಿಸಿ (ಸಂಪ್ರಣಮ್ಯ) ಆ ರೇವಣಸಿದ್ಧೇಶ್ವರನನ್ನು ಆದರದಿಂದ ಬರಮಾಡಿಕೊಂಡು,
ಅವರನ್ನು ತನ್ನ ಆಸನದ ಮೇಲೆ ಕುಳ್ಳರಿಸಿದನು. ಆ ಅಗಸ್ತ್ಯಮಹರ್ಷಿಯು ಲೋಪಾಮುದ್ರಾದೇವಿಯು
ತಂದ ಅತಿ ಪಾವನವಾದ ನೀರಿನಿಂದ ಆ ಶಿವಯೋಗಿಯ ಎರಡೂ ಪಾದಗಳನ್ನು ತೊಳೆದನು.
ಸಂಪೂಜ್ಯ ತಂ ಯಥಾ ಶಾಸ್ತ್ರಮ್
ತನ್ನಿಯೋಗ ಪುರಸ್ಸರಮ್ |
ಮುನಿರ್ ವಿನಯ ಸಂಪನ್ನೋ
ನಿಷ ಸಾದಾ ಸನಾಂತರೇ || 4-36
ಆ ರೇಣುಕ ಗಣೇಶ್ವರನನ್ನು ಶಾಸ್ತ್ರೋಕ್ತವಿಧಿಯಂತೆ
ಪೂಜಿಸಿದ ವಿನಯ ಸಂಪನ್ನನಾದ ಆ ಅಗಸ್ತ್ಯಮಹರ್ಷಿಯು
ರೇಣುಕರ ಆಜ್ಞಾನುಸಾರವಾಗಿ ಬೇರೊಂದು ಆಸನದ ಮೇಲೆ ಕುಳಿತುಕೊಂಡನು.
ಇತಿ ಶ್ರೀ ರೇಣುಕ ಪೂಜನಮ್
ಶ್ರೀ ರೇಣುಕಾಗಸ್ತ್ಯ ಸಂವಾದಃ
ಸಮಾಸೀನಂ ಮುನಿವರಮ್
ಸರ್ವತೇಜಸ್ವಿನಾಂ ವಿಭುಮ್ |
ಉವಾಚ ಶಾಂತಯಾ ವಾಚಾ
ರೇವಣಃ ಸಿದ್ಧಶೇಖರಃ || 4-37
ತೇಜಸ್ವಿಗಳಿಗೆ ಶ್ರೇಷ್ಠನಾಗಿರುವ ಬೇರೊಂದು (ಸಮಾನವಾದ)
ಆಸನದಲ್ಲಿ ಚೆನ್ನಾಗಿ ಕುಳಿತಿರುವ, ಮುನಿಗಳಲ್ಲಿ ಅಗ್ರಗಣ್ಯನಾದ
ಅಗಸ್ತ್ಯನನ್ನು ಕುರಿತು ಸಿದ್ಧಶ್ರೇಷ್ಠನಾದ ರೇಣುಕನು ಶಾಂತವಾದ ವಾಣಿಯಿಂದ ಹೀಗೆ ನುಡಿದನು.
ನಿರ್ವಿಘ್ನಂ ವರ್ತಸೇ ಕಿಂ ನು
ನಿತ್ಯಾ ತೇ ನಿಯಮ ಕ್ರಿಯಾ |
ಅಥ ವಾಗಸ್ತ್ಯ ತೇಜಸ್ವಿನ್
ಕುತಃ ಸ್ಯುಸ್ತೇಂತ ರಾ ಯಕಾಃ || 4-38
ಹೇ ಅಗಸ್ತ್ಯನೇ, ನಿನಗೆ ಯಾವ ವಿಘ್ನಗಳೂ ಇರುವುದಿಲ್ಲವಲ್ಲವೇ?
ಮತ್ತು ನಿನ್ನ ನಿತ್ಯಕ್ರಿಯೆಗಳು ನಿಯಮಿತವಾಗಿ ನಡೆಯುತ್ತಿರುವವಲ್ಲವೇ?
ಅಥವಾ ತೇಜಸ್ವಿಯಾಗಿರುವುದರಿಂದ ನಿನಗೆ ವಿಘ್ನಗಳು ಹೇಗೆ ತಾನೇ ಬಂದಾವು?
ವಿಂಧ್ಯೋ ನಿರುದ್ಧೋ ಭವತಾ
ವಿಶ್ವೋಲ್ಲಂಘನವಿಭ್ರಮಃ |
ನಹುಷೋ ರೋಷಲೇಶಾತ್ ತೇ
ಸದ್ಯಃ ಸರ್ಪತ್ವ ಮಾಗತಃ || 4-39
ವಿಶ್ವವನ್ನೇ ಮೀರಿ ಬೆಳೆಯಬೇಕೆಂಬ ಭ್ರಮೆಯುಳ್ಳ
ವಿಂಧ್ಯಪರ್ವತವನ್ನು ನೀನು ತಡೆದೆ. ನಹುಷ ಚಕ್ರವರ್ತಿಯು
ನಿನ್ನ ಕಿಂಚಿತ್ ರೋಷ ಮಾತ್ರದಿಂದ ಕೂಡಲೇ ಸರ್ಪವಾದನು.
ಆ-ಚಾಂತೇ ಭವತಾ ಪೂರ್ವಮ್
ಪಂಕಶೇಷಾಃ ಪಯೋಧಯಃ |
ಜೀರ್ಣಾಸ್ತೇ ಜಾಠರೇ ವಹ್ನೌ
ದೃಪ್ತೋ ವಾತಾಪಿದಾನವಃ || 4-40
ಪೂರ್ವಕಾಲದಲ್ಲಿ ನೀನು ಆಚಮನವನ್ನು ಮಾಡುವುದರಿಂದಲೇ (ಸಪ್ತ)
ಸಮುದ್ರಗಳ ನೀರೆಲ್ಲಾ ಒಣಗಿ ಕೇವಲ ಕೆಸರೇ ಉಳಿಯಿತು.
ವಾತಾಪಿಯೆಂಬ ಕೊಬ್ಬಿದ ರಾಕ್ಷಸನು ನಿನ್ನ ಜಠರಾಗ್ನಿಯಲ್ಲಿ ಜೀರ್ಣವಾಗಿ ಹೋದನು.
ಏವಂವಿಧಾನಾಂ ಚಿತ್ರಾಣಾಮ್
ಸರ್ವ ಲೋಕಾತಿ ಶಾಯಿನಾಮ್ |
ಕೃತ್ಯಾನಾಂ ತು ಭವಾನ್ ಕರ್ತಾ
ಕಸ್ತೇಗಸ್ತ್ಯ ಸಮಪ್ರಭಃ || 4-41
ನೀನು ಹೀಗೆ ಸರ್ವಲೋಕಗಳಲ್ಲಿ ಅತಿಶಯವಾದ ಪೂರ್ವೊಕ್ತವಾದ
ಆಶ್ಚರ್ಯ ಕೃತ್ಯಗಳನ್ನು ಮಾಡಿರುವೆ. ಆದ್ದರಿಂದ ಹೇ ಅಗಸ್ತ್ಯನೇ,
ನಿನಗೆ ಸರಿಸಾಟಿಯಾದವರು ಯಾರೂ ಇಲ್ಲ.
ಶಿವಾದ್ವೈತ ಪರಾನಂದ-
ಪ್ರಕಾಶನ ಪರಾಯಣಮ್ |
ಭವಂತಮೇಕಂ ಶಂಸಂತಿ
ಪ್ರಕೃತ್ಯಾ ಸಂಗ ವರ್ಜಿತಮ್ || 4-42
ಲೋಕದ ಜನರು ನಿನ್ನೊಬ್ಬನನ್ನೇ ಸ್ವಾಭಾವಿಕವಾಗಿ ಸಂಗವರ್ಜಿತನೆಂತಲೂ,
ಶಿವಾದ್ವೈತ ಪರಾನಂದವನ್ನು ಪ್ರಕಾಶಪಡಿಸುವುದರಲ್ಲಿ
ನಿತ್ಯನಿರತನೆಂತಲೂ ಪ್ರಶಂಸಿಸುತ್ತಿರುತ್ತಾರೆ.
ಪುರಾ ಹೈಮವತೀಸೂನುಃ
ಅವದತ್ ತೇ ಷಡಾನನಃ |
ಶಿವಧರ್ಮೊತ್ತರಂ ನಾಮ
ಶಾಸ್ತ್ರಮೀಶ್ವರಭಾಷಿತಮ್ || 4-43
ಈಶ್ವರನಿಂದ ಹೇಳಲ್ಪಟ್ಟ ಶಿವಧರ್ಮೊತ್ತರ ಎಂಬ ಹೆಸರಿನ
ಶಾಸ್ತ್ರವನ್ನು ಪೂರ್ವಕಾಲದಲ್ಲಿ ಹೈಮವತಿ (ಪಾರ್ವತಿ)ಯ
ಮಗನಾದ ಷಣ್ಮುಖನು ನಿನಗೆ ಬೋಧಿಸಿದನು.
ಭಕ್ತಿಃ ಶೈವೀ ಮಹಾಘೋರ-
ಸಂಸಾರಭಯಹಾರಿಣೀ |
ತ್ವಯಾ ರಾಜನ್ವತೀ ಲೋಕೇ
ಜಾತಾಗಸ್ತ್ಯ ಮಹಾಮುನೇ || 4-44
ಮಹಾಮುನಿಯಾದ ಹೇ ಅಗಸ್ತ್ಯನೇ, ಘೋರವಾದ
ಸಂಸಾರದ ಭಯವನ್ನು ದೂರಮಾಡುವ ಶಿವಭಕ್ತಿಯು
ರಾಜಮಾನ್ಯವಾಗಿ ಈ ಲೋಕದಲ್ಲಿ ನಿನ್ನಿಂದ ಪ್ರಕಾಶಿಸಲ್ಪಟ್ಟಿತು.
ಅಗಸ್ತ್ಯ ಮುನಿ ವಚನಮ್(10 ಶ್ಲೋಕಗಳು)
ಇತಿ ತಸ್ಯ ವಚಃ ಶ್ರುತ್ವಾ
ಸಿದ್ಧಸ್ಯ ಮುನಿಪುಂಗವಃ |
ಗಂಭೀರಗುಣಯಾ ವಾಚಾ
ಬಭಾಷೇ ಭಕ್ತಿಪೂರ್ವಕಮ್ || 4-45
ಮುನಿಪುಂಗವನಾದ ಅಗಸ್ತ್ಯನು ಸಿದ್ಧನಾದ ಆ ರೇಣುಕನ ಈ ರೀತಿಯ
ಮಾತನ್ನು ಕೇಳಿ, ಗಂಭೀರವಾದ ವಾಣಿಯಿಂದ ಭಕ್ತಿಪೂರ್ವಕವಾಗಿ ಹೀಗೆ ನುಡಿದನು
ಅಹಮೇವ ಮುನೀಂದ್ರಾಣಾಮ್
ಲಾಲ ನೀ ಯೋಸ್ಮಿ ಸರ್ವದಾ |
ಭವದಾಗಮ ಸಂಪತ್ತಿಃ
ಮಾಂ ವಿನಾ ಕಸ್ಯ ಸಂಭವೇತ್ || 4-46
ಮುನಿಶ್ರೇಷ್ಠರಲ್ಲೆಲ್ಲಾ ನಾನೋರ್ವನೇ
ಯಾವಾಗಲೂ ಪ್ರಶಂಸನೀಯ ವಾದವನು. ಕಾರಣವೇನೆಂದರೆ
ತಮ್ಮ ಆಗಮನದ ಸಂಪತ್ತು ನನ್ನ ಹೊರತಾಗಿ ಇನ್ನಾರಿಗೂ ಲಭ್ಯವಾಗಿರುವುದಿಲ್ಲ.
ಸ್ಥಿರಮದ್ಯ ಶಿವ ಜ್ಞಾನಮ್
ಸ್ಥಿರಾ ಮೇ ತಾಪ ಸಕ್ರಿಯಾ |
ಭವದ್ ದರ್ಶನ ಪುಣ್ಯೇನ
ಸ್ಥಿರಾ ಮೇ ಮುನಿ ರಾಜತಾ || 4-47
ನಿಮ್ಮ ದಿವ್ಯದರ್ಶನ ಪುಣ್ಯದಿಂದ ನನ್ನ ಶಿವಜ್ಞಾನವು
ಸ್ಥಿರವಾಯಿತು. ನನ್ನ ತಪಸ್ಸಿನ ಆಚರಣೆಯು ಶಾಶ್ವತವಾಯಿತು.
ನನ್ನ ಮುನಿತ್ವವು ಗಟ್ಟಿಗೊಂಡು ಸ್ಥಿರವಾಯಿತು.
ಸಂಸಾರ ಸರ್ಪ ದಷ್ಟಾನಾಮ್
ಮೂರ್ಛಿತಾನಾಂ ಶರೀರಿಣಾಮ್ |
ಕಟಾಕ್ಷಸ್ತವ ಕಲ್ಯಾಣಮ್
ಸಮುಜ್ಜೀವನ ಭೇಷಜಮ್ || 4-48
ಈ ಸಂಸಾರವೆಂಬ ಸರ್ಪವು ಕಚ್ಚಿ ಮೂರ್ಛಿತರಾದ
ದೇಹಿಗಳಿಗೆ ಕಲ್ಯಾಣಕರವಾದ ನಿಮ್ಮ ದೃಷ್ಟಿಪಾತವು
ಸಂಜೀವಿನಿ ಔಷಧಿಯಾಗಿದೆ.
ಸಮಸ್ತ ಲೋಕ ಸಂದಾಹ-
ತಾಪತ್ರಯ ಮಹಾ ನಲಃ |
ತ್ವತ್ಪದಾಂಬು ಕಣಾ ಸ್ವಾದಾತ್
ಉಪಶಾಮ್ಯತಿ ದೇಹಿನಾಮ್ || 4-49
ಸಮಸ್ತ ಲೋಕಗಳನ್ನು ಸುಡುತ್ತಿರುವ ಜೀವಿಗಳ
ತಾಪತ್ರಯವೆಂಬ ಪ್ರಳಯಾಗ್ನಿಯು ನಿಮ್ಮ ಪಾದೋದಕದ
ಒಂದು ಬಿಂದುವನ್ನು ಸೇವಿಸಿದ ಮಾತ್ರದಿಂದಲೇ ಶಾಂತವಾಗುತ್ತದೆ.
ರೇಣುಕಂ ತ್ವಾಂ ವಿಜಾನಾಮಿ
ಗಣನಾಥಂ ಶಿವ ಪ್ರಿಯಮ್ |
ಅವತೀರ್ಣ ಮಿಮಾಂ ಭೂಮಿಮ್
ಮದನುಗ್ರಹ ಕಾಂಕ್ಷಯಾ || 4-50
ನೀವು ಶಿವನಿಗೆ ಪ್ರಿಯರಾದ ಗಣಗಳಿಗೆ ಒಡೆಯರಾದ ರೇಣುಕರು
ಎಂಬುದನ್ನು ನಾನು ತಿಳಿದಿದ್ದೇನೆ. ನನಗೆ ಅನುಗ್ರಹ ಮಾಡುವ
ಅಪೇಕ್ಷೆಯಿಂದಲೇ ತಾವು ಈ ಭೂಮಿಯ ಮೇಲೆ ಅವತಾರವನ್ನು ತಾಳಿದ್ದೀರಿ.
ಭವಾದೃಶಾನಾಂ ಸಿದ್ಧಾನಾಮ್
ಪ್ರಬೋಧಧ್ವ ಸ್ತಜನ್ಮನಾಮ್ |
ಪ್ರವೃತ್ತಿರೀದೃಶೀ ಲೋಕೇ
ಪರಾನುಗ್ರಹ ಕಾರಿಣೀ || 4-51
ಶಿವಜ್ಞಾನದಿಂದ ಜನ್ಮಬಂಧನವನ್ನು
ಕಳೆದುಕೊಂಡಿರುವ ನಿನ್ನಂಥ ಸಿದ್ಧಪುರುಷರು
ಈ ಮತ್ರ್ಯಲೋಕದಲ್ಲಿ ಸಂಚರಿಸುವುದು
ಇತರರಿಗೆ ಅನುಗ್ರಹವನ್ನು ಮಾಡುವುದಕ್ಕಾಗಿಯೇ ಆಗಿರುವುದು.
ತ್ವನ್ಮುಖಾಚ್ಛ್ರೋತುಮಿಚ್ಛಾಮಿ
ಸಿದ್ಧಾಂತಂ ಶ್ರುತಿ ಸಂಮತಮ್ |
ಸರ್ವಜ್ಞ ವದ ಮೇ ಸಾಕ್ಷಾತ್
ಶೈವಂ ಸರ್ವಾರ್ಥ ಸಾಧಕಮ್||4-52
ಹೇ ಸರ್ವಜ್ಞನಾದ ರೇಣುಕನೇ, ಶ್ರುತಿಸಮ್ಮತವಾದ ಸರ್ವಾರ್ಥ
ಸಾಧಕವಾದ ಶಿವನಿಗೆ ಸಂಬಂಧಿತವಾದ ಸಿದ್ಧಾಂತವನ್ನು ಸಾಕ್ಷಾತ್
ನಿನ್ನ ಮುಖದಿಂದಲೇ ಕೇಳಲು ಅಪೇಕ್ಷಿಸುತ್ತಿರುವೆನು.
ಆದ್ದರಿಂದ ನನಗೆ ನೀನು ಅದನ್ನು ಬೋಧಿಸು.
ಸದ್ಯಃ ಸಿದ್ಧಿಕರಂ ಪುಂಸಾಮ್
ಸರ್ವಯೋಗೀಂದ್ರ ಸೇವಿತಮ್ |
ದುರಾಚಾರೈ ರನಾ ಘ್ರಾತಮ್
ಸ್ವೀಕೃತಂ ವೇದವೇದಿಭಿಃ |
ಶಿವಾತ್ಮೈಕ್ಯ ಮಹಾಬೋಧ-
ಸಂಪ್ರದಾಯ ಪ್ರವರ್ತಕಮ್ || 4-53
ತತ್ಕ್ಷಣದಲ್ಲಿಯೇ ಸಿದ್ಧಿಯನ್ನು ಕೊಡುವ, ಎಲ್ಲ ಯೋಗೀಂದ್ರರಿಂದ
ಸ್ವೀಕರಿಸಲ್ಪಟ್ಟಿರುವ, ದುರಾಚಾರಿಗಳಿಗೆ ದುಃಸಾಧ್ಯವಾದ,
ವೇದವಿದರಿಂದ ಸ್ವೀಕೃತವಾದ, ಶಿವ-ಜೀವರ ಐಕ್ಯಬೋಧಕವಾದ,
ಮಹಾಜ್ಞಾನದ ಸಂಪ್ರದಾಯವನ್ನು
ಪ್ರವರ್ತನಗೊಳಿಸುವ ಶಿವಾದ್ವೈತವನ್ನು ನನಗೆ ಬೋಧಿಸು.
ಉಕ್ತ್ವಾ ಭವಾನ್
ಸಕಲಲೋಕ ಮಹೋಪಕಾರಮ್
ಸಿದ್ಧಾಂತ ಸಂಗ್ರಹ ಮನಾದೃತ
ಬಾಹ್ಯ ತಂತ್ರಮ್ |
ಸದ್ಯಃ ಕೃತಾರ್ಥಯಿತು ಮರ್ಹತಿ ದಿವ್ಯಯೋಗಿನ್
ನಾನಾಗಮ ಶ್ರವಣ ವರ್ತಿತ
ಸಂಶಯಂ ಮಾಮ್ ||4-54
ವಸಂತತಿಲಕಂ ವೃತ್ತಂ ಹೇ ದಿವ್ಯಯೋಗಿಯಾದ ರೇಣುಕನೇ,
ಎಲ್ಲ ಜೀವಿಗಳಿಗೆ ಅನುಗ್ರಹಕಾರಕವಾದ, ವೇದವಿರುದ್ಧಗಳಾದ ತಂತ್ರಗಳನ್ನು
ನಿರಾಕರಿಸಿದ ವೇದ ಸಮ್ಮತವಾದ ಸಿದ್ಧಾಂತ ಸಾರವನ್ನು
ತಾವು ನನಗೆ ಉಪದೇಶ ಮಾಡಿ ಅನೇಕ ಆಗಮಗಳ ಶ್ರವಣದಿಂದ
ಸಂಶಯಗೊಂಡಿರುವ ನನ್ನನ್ನು ಕೂಡಲೇ ಕೃತಾರ್ಥನನ್ನಾಗಿ ಮಾಡಬೇಕು.
ಇತಿ ಅಗಸ್ತ್ಯಪ್ರಾರ್ಥನಾ ಪರಿಸಮಾಪ್ತಂ
ಓಂ ತತ್ಸತ್ ಇತಿ
ಶ್ರೀ ಶಿವಗೀತೇಷು ಸಿದ್ಧಾಂತಾಗಮೇಷು -
ಶಿವಾದ್ವೈತವಿದ್ಯಾಯಾಂ ಶಿವಯೋಗಶಾಸ್ತ್ರೇ,
ಶ್ರೀ ರೇಣುಕಾಗಸ್ತ್ಯ ಸಂವಾದೇ
ಶ್ರೀವೀರಶೈವಧರ್ಮ ನಿರ್ಣಯೇ,
ಶ್ರೀಶಿವಯೋಗಿ ಶಿವಾಚಾರ್ಯ ವಿರಚಿತೇ
ಶ್ರೀಸಿದ್ಧಾಂತ ಶಿಖಾಮಣೌ ಚತುರ್ಥ: ಪರಿಚ್ಛೇದಃ
ಓಂ ತತ್ಸತ್ ಇಲ್ಲಿಗೆ ಶ್ರೀ ಶಿವನಿಂದ ಉಪದೇಶಿಸಲ್ಪಟ್ಟ ಶ್ರೀ ಸಿದ್ಧಾಂತಾಗಮಗಳಲ್ಲಿಯ
ಶಿವಾದ್ವೈತ ವಿದ್ಯಾರೂಪವೂ, ಶಿವಯೋಗಶಾಸ್ತ್ರವೂ, ಶ್ರೀರೇಣುಕಾಗಸ್ತ್ಯ
ಸಂವಾದರೂಪವೂ, ಶ್ರೀ ವೀರಶೈವ ಧರ್ಮ ನಿರ್ಣಯವೂ,
ಶ್ರೀ ಶಿವಯೋಗಿ ಶಿವಾಚಾರ್ಯ ವಿರಚಿತವೂ ಆದ ಶ್ರೀಸಿದ್ಧಾಂತಶಿಖಾಮಣಿಯಲ್ಲಿ
ಶ್ರೀ ರೇಣುಕಾಗಸ್ತ್ಯರ ಸಂಭಾಷಣಪ್ರಸಂಗವೆಂಬ ಹೆಸರಿನ ನಾಲ್ಕನೆಯ ಪರಿಚ್ಛೇದವು ಮುಗಿದುದು