ತೃತೀಯಃ ಪರಿಚ್ಛೇದಃ

ಕೈಲಾಸ ವರ್ಣನಂ ರೇಣುಕಾವತರಣ ಕಾರಣಂ ಚ ಕೈಲಾಸ ವರ್ಣನಂ

ಕದಾಚಿ ದಥ ಕೈಲಾಸೇ|

ಕಲಧೌತ ಶಿಲಾಮಯೇ |

ಗಂಧರ್ವ ವಾಮ ನಯನಾ-

ಕ್ರೀಡಾ ಮೌಕ್ತಿಕ ದರ್ಪಣೇ|| 3-1

ಅನಂತರ ಒಂದಾನೊಂದು ಕಾಲದಲ್ಲಿ (ಸಮಯದಲ್ಲಿ) ಬೆಳ್ಳಿಯ ಶಿಲೆಗಳಿಂದ ತುಂಬಿದಂತಿರುವ, ಗಂಧರ್ವಸ್ತ್ರೀಯರ ಕ್ರೀಡೆಗಾಗಿ ಮುತ್ತಿನ ದರ್ಪಣದಂತಿರ್ದ ಕೈಲಾಸ ಪರ್ವತದಲ್ಲಿ-

ಮಂದಾರ ವಕುಲಾ ಶೋಕ-

ಮಾಕಂದ ಪ್ರಾಯ ಭೂರುಹೇ |

ಮಲ್ಲೀ ಮರಂದ ನಿಷ್ಯಂದ –

ಪಾನಪೀನ ಮಧುವ್ರತೇ || 3-2

ಮಂದಾರ, ಬಕುಲ, ಅಶೋಕ, ಮಾವು ಮೊದಲಾದ ವೃಕ್ಷಗಳಿಂದ ನಿಬಿಡವಾದ, ಮಲ್ಲಿಗೆಯ ಹೂವುಗಳಿಂದ ಸೂಸುವ ಪರಿಮಳದ ಪಾನದಿಂದ ಪರಿಪುಷ್ಟಗಳಾದ ಭ್ರಮರಗಳಿಂದ (ಶೋಭಿಸುತ್ತಿರುವ)-

ಕುಂಕುಮ ಸ್ತಬಕಾ ಮೋದ-

ಕೂಲಂಕ ಷಹರಿ ನ್ಮುಖೇ |

ಕಲಕಂಠ ಕುಲಾ-ಲಾಪ –

ಕಂದಲದ್ರಾಗ ಬಂಧುರೇ || 3-3

ಕೆಂಪುಹೂಗಳ ಗುಚ್ಛದ ಸುವಾಸನೆಯಿಂದ ತುಂಬಿದ ದಿಕ್ಪ್ರದೇಶಗಳುಳ್ಳ, ಕೋಗಿಲೆಗಳ ಸಮೂಹದ ಮಧುರ ಧ್ವನಿಯಿಂದುತ್ಪನ್ನವಾದ (ರಾಗ ಬಂಧುರವಾದ) ಪಂಚಮ ಸ್ವರದಿಂದ ಮನೋಹರವಾದ (ಕೈಲಾಸದಲ್ಲಿ)-

ಕಿನ್ನರೀ ಗೀತ ಮಾಧುರ್ಯ-

ಪರಿವಾಹಿತ ಗಹ್ವರೇ |

ಸಾನಂದ ವರ ಯೋಗೀಂದ್ರ-

ವೃಂದಾಲಂಕೃತ ಕಂದರೇ || 3-4

ಕಿನ್ನರ ಸ್ತ್ರೀಯರ ಗಾನದ ಮಧುರಧ್ವನಿಯಿಂದ ವ್ಯಾಪ್ತ್ತವಾದ ಗವಿಗಳುಳ್ಳ, ಸಾನಂದನೆಂಬ ಶ್ರೇಷ್ಠ ಯೋಗಿವರ್ಯನೇ ಮೊದಲಾದ (ಯೋಗೀಂದ್ರರ) ಸಮೂಹದಿಂದ-

ಹೇಮಾರವಿಂದ ಕಲಿಕಾ-

ಸುಗಂಧಿ ರಸ ಮಾನಸೇ |

ಶಾತ ಕುಂಭ ಮಯ ಸ್ತಂಭ-

ಶತೋತ್ತುಂಗ ವಿರಾಜಿತೇ || 3-5

ಸುವರ್ಣಕಮಲಗಳ ಮೊಗ್ಗುಗಳ ಸುಗಂಧರಸದಿಂದ ತುಂಬಿದ ಮಾನಸ ಸರೋವರವುಳ್ಳ, ಸುವರ್ಣಮಯಗಳಾದ ಉನ್ನತಗಳಾದ ನೂರಾರು ಕಂಬಗಳಿಂದ ಶೋಭಿಸುತ್ತಿರುವ-

ಮಾಣಿಕ್ಯ ದೀಪ ಕಲಿಕಾ-

ಮರೀಚಿ ದ್ಯೋತಿ ತಾಂತರೇ |

ದ್ವಾರ ತೋರಣ ಸಂರೂಢ-

ಶಂಖ ಪದ್ಮ ನಿಧಿ ದ್ವಯೇ || 3-6

ಮಾಣಿಕ್ಯ ದೀಪಜ್ವಾಲೆಯ ಕಾಂತಿಯಿಂದ ಪ್ರಕಾಶಮಾನವಾದ ಅಂತಃಪುರವುಳ್ಳ ಹೊರಬಾಗಿಲಿನಲ್ಲಿರುವ ತೋರಣದ ಎರಡು ಕಂಬಗಳ ಮೇಲೆ ಇರಿಸಲ್ಪಟ್ಟ ಶಂಖ ಮತ್ತು ಪದ್ಮವೆಂಬ ನಿಧಿಯುಳ್ಳ-

ಮುಕ್ತಾ ತಾರ ಕಿತೋ ದಾರ –

ವಿತಾನಾಂಬರ ಮಂಡಿತೇ |

ಸ್ಪರ್ಶ ಲಕ್ಷಿತ ವೈಡೂರ್ಯ-

ಮಯ ಭಿತ್ತಿ ಪರಂಪರೇ || 3-7

ನಕ್ಷತ್ರಗಳಂತಿರುವ ಮುತ್ತುಗಳಿಂದ ವಿರಚಿತವಾದ, ವಿಶಾಲವಾದ ಮೇಲ್ಕಟ್ಟಿನ ವಸ್ತ್ರದಿಂದ ಅಲಂಕೃತವಾದ, ಸ್ಪರ್ಶದಿಂದಲೇ ಕಂಡುಹಿಡಿಯಬೇಕಾದ ವೈಡೂರ್ಯಮಣಿಮಯವಾದ ಗೋಡೆಗಳ ಸಾಲುಗಳಿಂದ ಕೂಡಿದ-

ಸಂಚರ ತ್ಪ್ರಮಥ ಶ್ರೇಣೀ –

ಪದವಾಚಾಲ ನೂಪುರೇ |

ಪ್ರವಾಲ ವಲಭೀ ಶೃಂಗ –

ಶೃಂಗಾರ ಮಣಿ ಮಂಟಪೇ || 3-8

ಇತಿ ಕೈಲಾಸ ವರ್ಣನಂ

ಅಲ್ಲಿ ಸಂಚರಿಸುತ್ತಿರುವ ಪ್ರಮಥ ಸಮುದಾಯದ ಚರಣಗಳಲ್ಲಿರುವ ಗೆಜ್ಜೆಯ ಸರಗಳಿಂದ ಶಬ್ದಾಯಮಾನವಾದ ತಾರಸಿ (ಛತ್) ಮತ್ತು ಶಿಖರಗಳಿಂದ ಅಲಂಕೃತವಾದ, ರತ್ನಮಂಟಪದಲ್ಲಿ ಶೋಭಿಸುತ್ತಿದ್ದ ಸಿಂಹಾಸನದಲ್ಲಿ ಪರಮೇಶ್ವರನು ಮಂಡಿಸಿದ್ದನು.

ಸಿಂಹಾಸನಾಸೀನ ಪರಮೇಶ್ವರ ವರ್ಣನಮ್

ವಂದಾರು ದೇವ ಮುಕುಟ-

ಮಂದಾರ ರಸ ವಾಸಿತಮ್ |

ರತ್ನ ಸಿಂಹಾಸನಂ ದಿವ್ಯಮ್

ಅಧ್ಯಸ್ತಂ ಪರಮೇಶ್ವರಮ್ || 3-9

ನಮಸ್ಕರಿಸುತ್ತಿರುವ ದೇವತೆಗಳ ಕಿರೀಟಗಳಲ್ಲಿರುವ ಮಂದಾರ ಕುಸುಮಗಳ ಪರಿಮಳದಿಂದ ಸುವಾಸಿತವಾಗಿರುವ, ದೇವಲೋಕ ಸಂಬಂಧಿಯಾದ ರತ್ನ ಸಿಂಹಾಸನವನ್ನು ಆಶ್ರಯಿಸಿ ಕುಳಿತಿರುವ ಪರಮೇಶ್ವರನನ್ನು (ಪರಿವಾರ ದೇವತೆಗಳು ಸೇವಿಸುತ್ತಿದ್ದರು) -

ತಮಾಸ್ಥಾನ ಗತಂ ದೇವಮ್

ಸರ್ವ ಲೋಕ ಮಹೇಶ್ವರಮ್|

ತ್ರಯ್ಯಂತ ಕಮಲಾರಣ್ಯ

ವಿಹಾರಕಲ ಹಂಸಕಮ್ ||3-10

ವೇದಗಳ ಕೊನೆಯ ಭಾಗವಾದ (ತ್ರಯೀ) ಉಪನಿಷತ್ತೆಂಬ ಕಮಲಗಳ ವನದಲ್ಲಿ ವಿಹರಿಸುತ್ತಿರುವ ರಾಜಹಂಸದಂತಿರುವ, ಆಸ್ಥಾನದಲ್ಲಿ ಕುಳಿತಿರುವ ಸಕಲ ಲೋಕಗಳಿಗೆ ಒಡೆಯನಾದ, ದೇವತೆಗಳಿಗೂ ದೇವನಾದ ಆ ಪರಮೇಶ್ವರನನ್ನು-

ಉದಾರ ಗುಣಮ್ ಓಂಕಾರ-

ಶುಕ್ತಿಕಾ ಪುಟ ಮೌಕ್ತಿಕಮ್ |

ಸರ್ವಮಂಗಲ ಸೌಭಾಗ್ಯ-

ಸಮುದಾಯ ನಿಕೇತನಮ್ ||3-11

ಉದಾರಗುಣಗಳುಳ್ಳ, ಓಂಕಾರವೆಂಬ ಶುಕ್ತಿಕಾ ಪುಟಕ್ಕೆ (ಚಿಪ್ಪು) ಮುತ್ತಿನ ಸ್ವರೂಪನೂ, ನಾನಾ ಪ್ರಕಾರಗಳಾದ ಮಂಗಲ ಸೌಭಾಗ್ಯಗಳ ಸಮೂಹಕ್ಕೆ ಮಂದಿರ ಸ್ವರೂಪನೂ-

ಸಂಸಾರ ವಿಷ ಮೂರ್ಛಾಲು-

ಜೀವ ಸಂಜೀವ ನೌಷಧಮ್ |

ನಿತ್ಯಪ್ರಕಾಶ ನೈರ್ಮಲ್ಯ -

ಕೈವಲ್ಯ ಸುರ ಪಾದಪಮ್ ||3-12

ಸಂಸಾರವೆಂಬ ವಿಷದಿಂದ ಮೂರ್ಛಿತರಾದ ಜೀವಿಗಳಿಗೆಲ್ಲಾ ಸಂಜೀವಿನೀ ಔಷಧದಂತಿರುವ, ನಿತ್ಯಪ್ರಕಾಶದಿಂದ ನಿರ್ಮಲ ಸ್ವಭಾವದವನಾದ ಮುಕ್ತಿ ರೂಪ ಕಲ್ಪವೃಕ್ಷವಾಗಿರುವ-

ಅನಂತ ಪರಮಾನಂದ -

ಮಕರಂದ ಮಧು ವ್ರತಮ್ |

ಆತ್ಮ ಶಕ್ತಿ ಲತಾ ಪುಷ್ಯತ್-

ತ್ರಿಲೋಕೀ ಪುಷ್ಪ ಕೋರಕಮ್ ||3-13

ಅಪಾರವಾದ ಪರಮಾನಂದವೆಂಬ ಪುಷ್ಪರಸವನ್ನು ಪಾನಮಾಡುವುದರಲ್ಲಿ ಭೃಂಗ ಸ್ವರೂಪನಾದ ಆತ್ಮ (ತನ್ನಲ್ಲಿ ನಿತ್ಯ ಸಂಬಂಧದಲ್ಲಿರುವ) ಶಕ್ತಿಯೆಂಬ ಬಳ್ಳಿಯಿಂದ ರಕ್ಷಿಸಲ್ಪಡುತ್ತಿರುವ ಮೂರು ಲೋಕಗಳೆಂಬ ಹೂಗಳ ಮೊಗ್ಗು ಗಳನ್ನುಳ್ಳವನಾದ-

ಬ್ರಹ್ಮಾಂಡ ಕುಂಡಿಕಾ ಷಂಡ-

ಪಿಂಡೀ ಕರಣ ಪಂಡಿತಮ್ |

ಸಮಸ್ತ ದೇವತಾ ಚಕ್ರ-

ಚಕ್ರವರ್ತಿ ಪದೇ ಸ್ಥಿತಮ್ ||3-14

ಅನಂತ ಬ್ರಹ್ಮಾಂಡಗಳೆಂಬ ಪಾತ್ರೆಗಳ ಸಮೂಹವನ್ನು ಒಂದುಗೂಡಿಸುವಲ್ಲಿ ಕುಶಲನಾದ, ಎಲ್ಲಾ ದೇವತಾ ಸಮೂಹಕ್ಕೆ ಚಕ್ರವರ್ತಿಸ್ಥಾನದಲ್ಲಿ ಇರುವ -

ಚಂದ್ರ ಬಿಂಬಾಯುತ ಚ್ಛಾಯಾ-

ದಾಯಾ ದದ್ಯುತಿ ವಿಗ್ರಹಮ್ |

ಮಾಣಿಕ್ಯ ಮುಕುಟ ಜ್ಯೋತಿರ್

ಮಂಜರೀ ಪಿಂಜರಾಂಬರಮ್ || 3-15

(ನಮಸ್ಕರಿಸಲು ಬಂದ ದೇವತೆಗಳ ಮಸ್ತಕದಲ್ಲಿರುವ) ಹತ್ತುಸಾವಿರ ಚಂದ್ರ ಬಿಂಬಗಳ ಜೊತೆ ಸ್ಪರ್ಧಿಸುತ್ತಿರುವ ದೇಹ ಕಾಂತಿಯುಳ್ಳ, ರತ್ನಕಿರೀಟಗಳಲ್ಲಿರುವ ರತ್ನಗಳ ಪ್ರಕಾಶಮಾನ ಗಳಾದ ಕಿರಣಂಗಳಿಂದ(ಬಿಂಬಿತವಾದ) ವಿಚಿತ್ರ ಬಣ್ಣದ ವಸ್ತ್ರ ವುಳ್ಳವನಾದ

ಚೂಡಾಲಂ ಸೋಮ ಕಲಯಾ

ಸುಕುಮಾರ ಬಿ ಸಾ ಭಯಾ |

ಕಲ್ಯಾಣ ಪುಷ್ಪ ಕಲಿಕಾ-

ಕರ್ಣ ಪೂರ ಮನೋಹರಮ್||3-16

ಸುಕುಮಾರ (ಕೋಮಲ)ವಾದ ಕಮಲ ತಂತುವಿನಂತಿರುವ, ಪ್ರಕಾಶಿಸುವ ಚಂದ್ರಕಲೆಯಿಂದ ಶಿರೋಭೂಷಣನಾದ, ಕಲ್ಯಾಣಗಳಾದ (ಮಂಗಳಗಳಾದ) ಹೂವಿನ ಮೊಗ್ಗೆಯ ಕರ್ಣಾಭರಣದಿಂದ ಸುಂದರವಾಗಿ ತೋರುತ್ತಿರುವ-

ಮುಕ್ತಾವಲಯ ಸಂಬದ್ಧ

ಮುಂಡ ಮಾಲಾ ವಿರಾಜಿತಮ್ |

ಪರ್ಯಾಪ್ತ ಚಂದ್ರ ಸೌಂದರ್ಯ-

ಪರಿಪಂಥಿ ಮುಖ ಶ್ರಿಯಮ್ |3-17

ಮುತ್ತಿನ ಸರಗಳಿಂದ ಕೂಡಿದ (ಸಂಬದ್ಧ) ರುಂಡಮಾಲೆಯಿಂದ ಶೋಭಿಸುವವನಾದ, ಪರಿಪೂರ್ಣನಾದ ಚಂದ್ರನ ಸೌಂದರ್ಯವನ್ನು ತಿರಸ್ಕರಿ ಸುತ್ತಿರುವ ಮುಖಕಾಂತಿಯುಳ್ಳವನಾದ-

ಪ್ರಾತಃ ಸಂಫುಲ್ಲ ಕಮಲ -

ಪರಿಯಾಯ ತ್ರಿಲೋಚನಮ್ |

ಮಂದಸ್ಮಿತ ಮಿತಾ ಲಾಪ-

ಮಧುರಾಧರ ಪಲ್ಲವಮ್ ||3-18

ಪ್ರಾತಃಕಾಲದಲ್ಲಿ ಅರಳಿದ ಕಮಲಗಳಿಗೆ ಸಮಾನಗಳಾದ ಮೂರು ನೇತ್ರಗಳುಳ್ಳವನಾದ, ಮುಗುಳ್ನಗೆಯಿಂದ, ಮಿತಭಾಷಣದಿಂದ ಕೂಡಿದ ಸುಮನೋಹರವಾದ ತುಟಿಗಳುಳ್ಳವನಾದ-

ಗಂಡಮಂಡಲ ಪರ್ಯಂತ -

ಕ್ರೀಡನ್ ಮಕರ ಕುಂಡಲಮ್ |

ಕಾಲಿಮ್ನಾ ಕಾಲ ಕೂಟಸ್ಯ

ಕಂಠನಾಲೇ ಕಲಂಕಿತಮ್ || 3-19

ಗಲ್ಲದವರೆಗೆ ಜೋಲಾಡುತ್ತಿರುವ ಮೊಸಳೆಯಾಕಾರದ ಕುಂಡಲಗಳನ್ನು ಧರಿಸಿದ, ಕುತ್ತಿಗೆಯಲ್ಲಿ ಕಾಲಕೂಟ ವಿಷದ ಕಪ್ಪುಛಾಯೆಯಿಂದ ಕಲಂಕಿತ (ಕಪ್ಪುಕಲೆಯುಳ್ಳವ)ನಾದ-

ಮಣಿ ಕಂಕಣ ಕೇಯೂರ-

ಮರೀಚಿ ಕರ ಪಲ್ಲವೈಃ |

ಚತುರ್ಭಿಃ ಸಂ ವಿರಾಜಂತಮ್

ಬಾಹು ಮಂದಾರ ಶಾ-ಖಿ ಭಿಃ||3-20

ರತ್ನದ ಕಡಗಗಳ, ರತ್ನಮಯ ತೋಳುಬಳೆಗಳ ಕಾಂತಿಯಿಂದ ಕೂಡಿದ, ಚಿಗುರಿನಂತೆ ಕೋಮಲವಾದ ಹಸ್ತಗಳುಳ್ಳ ಮತ್ತು ಮಂದಾರ ವೃಕ್ಷದ ಶಾಖೆಗಳಂತೆ ಸುಂದರವಾದ ನಾಲ್ಕು ಭುಜಗಳಿಂದ ಪರಿಶೋಭಿಸುತ್ತಿರುವ-

ಗೌರೀ ಪಯೋಧರಾಶ್ಲೇಷ-

ಕೃತಾರ್ಥ ಭುಜ ಮಧ್ಯಮಮ್ |

ಸುವರ್ಣ ಬ್ರಹ್ಮ ಸೂತ್ರಾಂಕಮ್

ಸೂಕ್ಷ್ಮ ಕೌಶೇಯ ವಾಸಸಮ್ |3-21

ಗೌರಿಯ ಕುಚಗಳ (ಪಯೋಧರ) ಆಲಿಂಗನದಿಂದ ಕೃತಾರ್ಥವಾದ ಭುಜಮಧ್ಯ (ಎದೆ)ಯುಳ್ಳ ಸುವರ್ಣದ ಬ್ರಹ್ಮಸೂತ್ರವನ್ನು ಮತ್ತು ಅತಿ ಸೂಕ್ಷ್ಮವಾದ ರೇಷ್ಮೆಯ (ಕೌಶೇಯ) ವಸ್ತ್ರವನ್ನು ಧರಿಸಿದ-

ನಾಭಿಸ್ಥಾನಾ ವಲಂಬಿನ್ಯಾ

ನವ ಮೌಕ್ತಿಕ ಮಾಲಯಾ |

ಗಂಗ ಯೇವ ಕೃತಾ ಶ್ಲೇಷಮ್

ಮೌಲಿ ಭಾಗಾ ವತೀರ್ಣಯಾ ||3-22

ನಾಭಿಸ್ಥಾನದವರೆಗೆ ಜೋಲಾಡುತ್ತಿರುವ, ಮಸ್ತಕ ಭಾಗದಿಂದ ಇಳಿದು ಬಂದ ಗಂಗೆಯೋ ಎಂಬಂತೆ ಇರುವ, ನೂತನವಾದ ಮುತ್ತಿನಸರದಿಂದ ಆಶ್ಲೇಷಿತನಾದ (ಆಲಿಂಗಿತನಾಗಿರುವ)-

ಪದೇನ ಮಣಿಮಂಜೀರ-

ಪ್ರಭಾ ಪಲ್ಲವಿ ತಶ್ರಿಯಾ |

ಚಂದ್ರವತ್ ಸ್ಪಾಟಿಕಂ ಪೀಠಂ

ಸಮಾವೃತ್ಯ ಸ್ಥಿತಂ ಪುರಃ ||3-23

ಮುಂಭಾಗದಲ್ಲಿ ರತ್ನ ನೂಪುರಗಳ ಕಾಂತಿಯಿಂದ ಪಲ್ಲವಾಕಾರದ ಶೋಭೆಯನ್ನು ಧರಿಸಿದ ಪಾದದಿಂದ ಚಂದ್ರನಂತೆ ಶುಭ್ರವಾಗಿರುವ ಸ್ಪಟಿಕಮಯವಾದ ಪೀಠವನ್ನು ಮೆಟ್ಟಿ ಕುಳಿತಿರುವ ಪರಮೇಶ್ವರನನ್ನು ಪರಿವಾರ ದೇವತೆಗಳು ಸೇವಿಸುತ್ತಿದ್ದರು.

ಇತಿ ಸಿಂಹಾಸನಾಸೀನ ಪರಮೇಶ್ವರ ವರ್ಣನಂ ||

ಶಕ್ತಿವರ್ಣನಮ್

ವಾಮಪಾರ್ಶವ ನಿವಾಸಿನ್ಯಾ

ಮಂಗಲ ಪ್ರಿಯ ವೇಷಯಾ |

ಸಮಸ್ತಲೋಕ ನಿರ್ಮಾಣ-

ಸಮವಾಯ ಸ್ವರೂಪಯಾ || 3-24

ಪರಶಿವನ ಎಡಭಾಗದಲ್ಲಿ ಕುಳಿತಿರುವ ಮಂಗಲಮಯವೂ, ಪ್ರಿಯಕರವೂ ಆದ ವೇಷವುಳ್ಳ, ಎಲ್ಲ ಭುವನಗಳ ನಿರ್ಮಾಣದಲ್ಲಿ ಶಿವನೊಂದಿಗೆ ಸಮವಾಯ (ನಿತ್ಯ) ಸಂಬಂಧದಿಂದ ಇರುವವಳಾದ-

ಇಚ್ಛಾ ಜ್ಞಾನ ಕ್ರಿಯಾ ರೂಪ-

ಬಹು ಶಕ್ತಿ ವಿಲಾಸಯಾ |

ವಿದ್ಯಾ ತತ್ತ್ವ ಪ್ರಕಾಶಿನ್ಯಾ

ವಿನಾ ಭಾವ ವಿಹೀನಯಾ || 3-25

ಇಚ್ಛಾಜ್ಞಾನಕ್ರಿಯಾ ರೂಪವಾದ ಅನೇಕ ಶಕ್ತಿಗಳಿಂದ ಕೂಡಿರುವವಳಾದ, ಶುದ್ಧವಿದ್ಯಾ ತತ್ತ್ವಸ್ವರೂಪವನ್ನು ಪ್ರಕಾಶಿಸುವವಳಾದ, ಶಿವನೊಡನೆ ಅವಿನಾಭಾವ ಸಂಬಂಧದಿಂದ ಇರುವವಳಾದ-

ಸಂಸಾರ ವಿಷ ಕಾಂತಾರ-

ದಾಹ ದಾವಾಗ್ನಿ ಲೇಖಯಾ |

ಧಮ್ಮಿಲ್ಲ ಮಲ್ಲಿಕಾಮೋದ-ಝಂಕುರ್

ವದ್ ಭ್ರುಂಗ ಮಾಲಯಾ || 3-26

ಸಂಸಾರವೆಂಬ ವಿಷದ ಅರಣ್ಯವನ್ನು ಸುಡುವುದರಲ್ಲಿ ಕಾಡುಗಿಚ್ಚಿನೋ ಪಾದಿಯಲ್ಲಿರುವ, ತುರುಬಿನಲ್ಲಿರುವ (ಧಮ್ಮಿಲ್ಲ) ಮಲ್ಲಿಗೆಹೂಗಳ ಸುಗಂಧದಿಂದ ಝೇಂಕರಿಸುತ್ತಿರುವ ಭ್ರಮರಗಳ ಪಂಕ್ತಿಯುಳ್ಳವಳಾದ-

ಸಂಪೂರ್ಣ ಚಂದ್ರ ಸೌಭಾಗ್ಯ-

ಸಂವಾದಿ ಮುಖ ಪದ್ಮಯಾ |

ನಾಸಾ ಮೌಕ್ತಿಕ ಲಾವಣ್ಯ-

ನಾ ಶಿರ ಸ್ಮಿತ ಶೋಭಯಾ || 3-27

ಪೂರ್ಣಚಂದ್ರನ ಸೌಂದರ್ಯದೊಡನೆ ಸ್ಪರ್ಧಿಸುತ್ತಿರುವ ಮುಖಕಮಲ ವುಳ್ಳವಳಾದ, ನತ್ತಿನಲ್ಲಿನ (ಮೂಗುತಿ) ಮುತ್ತಿನ ಲಾವಣ್ಯದಿಂದ ಉತ್ಕೃಷ್ಟವಾದ ಮಂದಹಾಸದ ಶೋಭೆಯಿಂದ ಶೋಭಾಯಮಾನಳಾದ-

ಮಣಿ ತಾಟಂಕ ರಂಗಾಂತರ್

ವಲಿತಾಪಾಂಗ ಲೀಲಯಾ |

ನೇತ್ರ ದ್ವಿತಯ ಸೌಂದರ್ಯ-

ನಿಂದಿತೇಂದೀ ವರತ್ವಿಷಾ || 3-28

ರತ್ನದ ಕರ್ಣಾಭರಣ(ವಾಲೆ)ಗಳೆಂಬ ರಂಗಮಂಟಪದ ಮಧ್ಯದಲ್ಲಿ ಹೊರಳಿದ ಕಟಾಕ್ಷ (ಕಡೆಗಣ್ಣ ನೋಟ) ಲೀಲೆಯಿಂದುಂಟಾದ ಎರಡು ನಯನಗಳ ಸೌಂದರ್ಯವು ನೀಲಕಮಲಗಳ ಕಾಂತಿಯನ್ನು ಮೀರುವಂತಿತ್ತು.

ಕುಸುಮಾಯುಧ ಕೋದಂಡ –

ಕುಟಿಲ ಭ್ರೂ ವಿಲಾಸ ಯಾ |

ಬಂಧೂಕ ಕುಸುಮ ಚ್ಛಾಯಾ-

ಬಂಧು ಭೂತಾಧರ ಶ್ರಿಯಾ || 3-29

ಮನ್ಮಥನ ಧನುಸ್ಸಿನಂತೆ ವಕ್ರವಾಗಿರುವ (ಮಣಿದಿರುವ) ಹುಬ್ಬುಗಳ ಶೋಭೆಯುಳ್ಳವಳಾದ, ಬಂಧೂಕ ಪುಷ್ಪ (ದಾಸವಾಳ, ಕೆಂಪು ಹೂವು) ಕಾಂತಿಯುಳ್ಳ ತುಟಿಗಳ ಶೋಭೆಯುಳ್ಳವಳಾದ-

ಕಂಠನಾಲ ಜಿತಾನಂಗ-

ಕಂಬು ಬಿಬ್ಬೋಕ ಸಂಪದಾ |

ಬಾಹು ದ್ವಿತಯ ಸೌಭಾಗ್ಯ-

ವಂಚಿತೋತ್ಪಲ ಮಾಲಯಾ || 3-30

ತನ್ನ ಕುತ್ತಿಗೆಯಿಂದ ಗೆಲ್ಲಲ್ಪಟ್ಟ ಅನಂಗನ (ಮನ್ಮಥನ) ವಿಜಯಶಂಖದ ನಾದ ಮಾಧುರ್ಯದ ಶೋಭೆಯುಳ್ಳವಳಾದ, ಎರಡೂ ಭುಜಗಳ ಸೌಭಾಗ್ಯದಿಂದ ವಂಚಿಸಲ್ಪಟ್ಟ ಕನೈದಿಲೆಯ ಮಾಲೆಯುಳ್ಳ-

ಸ್ಥಿರ ಯೌವನ ಲಾವಣ್ಯ –

ಶೃಂಗಾರಿತ ಶರೀರಯಾ |

ಅತ್ಯಂತ ಕಠಿನೋತ್ತುಂಗ-

ಪೀವರ ಸ್ತನ ಭಾರಯಾ || 3-31

ಸ್ಥಿರವಾದ ಯೌವ್ವನದ ಲಾವಣ್ಯದಿಂದ ಶೃಂಗಾರಿತ ಶರೀರವುಳ್ಳ, ಅತ್ಯಂತ ಕಠಿಣವಾದ ಉನ್ನತವಾದ ಪುಷ್ಟವಾದ ಕುಚಗಳ ಭಾರದಿಂದ ಕೂಡಿದವಳಾದ-

ಮೃಣಾಲ ವಲ್ಲರೀತಂತು-

ಬಂಧು ಭೂತಾವ ಲಗ್ನಯಾ |

ಶೃಂಗಾರ ತಟಿನೀ ತುಂಗ-

ಪುಲಿನ ಶ್ರೋಣಿ ಭಾರಯಾ || 3-32

ಕಮಲದ ಬಳ್ಳಿಯ ತಂತುವಿಗೆ ಸಮಾನವಾದ ನಡುವಿನಿಂದ ಕೂಡಿದ (ಅತಿ ಸಣ್ಣ ನಡುವುಳ್ಳ), ಶೃಂಗಾರ ರೂಪನದಿಗೆ ಉನ್ನತವಾದ ಮರಳಿನ ದಿನ್ನೆಗಳಂತಿರುವ ನಿತಂಬಗಳ (ಶ್ರೋಣಿ) ಭಾರದಿಂದ ಕೂಡಿದ-

ಕುಸುಂಭ ಕುಸುಮಚ್ಛಾಯಾ –

ಕೋಮಲಾಂಬರ ಶೋಭಯಾ |

ಶೃಂಗಾರೋದ್ಯಾನ ಸಂರಂಭ –

ರಂಭಾ ಸ್ತಂಭೋರು ಕಾಂಡಯಾ3-33

ಕುಸುಬೆಯ ಹೂವಿನ ಶೋಭೆಯಂತಿರುವ ರಮ್ಯವಾದ ವಸ್ತ್ರದಿಂದ ಶೋಭಿಸುತ್ತಿರುವ, ಶೃಂಗಾರವೆಂಬ ತೋಟದ ಶೋಭೆಗೆ ಬಾಳೆಯ ದಿಂಡಿನಂತಿರುವ ತೊಡೆಗಳುಳ್ಳವಳಾದ (ಊರುಕಾಂಡಯಾ)-

ಚೂತ ಪ್ರವಾಲ ಸುಷುಮಾ-

ಸುಕುಮಾರ ಪದಾಬ್ಜಯಾ |

ಸ್ಥಿರ ಮಂಗಲ ಶೃಂಗಾರ

ಭೂಷಣಾಲಂಕೃ ತಾಂಗಯಾ || 3-34

ಮಾವಿನ ಚಿಗುರಿನಂತೆ ಅತ್ಯಂತ ಶೋಭಾಯಮಾನಳಾದ ಮೃದುವಾದ ಪಾದಕಮಲಗಳುಳ್ಳವಳಾದ, ನಿತ್ಯ ಮಂಗಳಾತ್ಮಕಳಾದ ಶೃಂಗಾರ ಯೋಗ್ಯವಾದ ಒಡವೆಗಳಿಂದ ಅಲಂಕೃತವಾದ ಶರೀರವುಳ್ಳವಳಾದ-

ಹಾರ ನೂಪುರ ಕೇಯೂರ-

ಚಮತ್ಕೃತ ಶರೀರಯಾ |

ಚಕ್ಷುರಾನಂದ ಲತಯಾ

ಸೌಭಾಗ್ಯ ಕುಲ ವಿದ್ಯಯಾ || 3-35

ಪುಷ್ಪ ರತ್ನಾದಿಗಳ ಹಾರದಿಂದ, ಕಾಲಿನ ಗೆಜ್ಜೆಗಳಿಂದ, ವಂಕಿಗಳಿಂದ (ಕೇಯೂರ) ಪರಿಶೋಭಿಸುತ್ತಿರುವ ಶರೀರವುಳ್ಳವಳಾದ, ನೋಡುವವರ ಕಣ್ಣಿಗೆ ಆನಂದ ಲತೆಯಂತಿರುವ, ಸೌಭಾಗ್ಯ ಕುಲವಿದ್ಯಾಸ್ವರೂಪಳೂ ಆದ-

ಉಮಯಾ ಸಮ-ಮಾ-ಸೀನಂ

ಲೋಕ ಜಾಲ ಕುಟುಂಬಯಾ |

ಅಪೂರ್ವ ರೂಪ ಮ ಭಜನ್

ಪರಿವಾರಾಃ ಸಮಂತತಃ || 3-36

ಸಕಲ ಲೋಕಗಳೇ ಕುಟುಂಬವಾಗುಳ್ಳ, ಉಮೆಯೊಂದಿಗೆ ಕೂಡಿ ಕುಳಿತಿರುವ, ಅಸಾಧಾರಣ ರೂಪದಿಂದ ಕೂಡಿದ ಆ ಪರಮೇಶ್ವರನನ್ನು ಅವನ ಪರಿವಾರವು ಸುತ್ತಲೂ ನಿಂತು ಭಜಿಸುತ್ತಿದ್ದರು.

ಇತಿ ಶಕ್ತಿವರ್ಣನಮ್

ದೇವತಾನಾಂ ಸೇವಾ ವರ್ಣನಮ್

ಪುಂಡರೀಕಾ ಕೃತಿಂ ಸ್ವಚ್ಛಮ್

ಪೂರ್ಣ ಚಂದ್ರ ಸಹೋದರಮ್ |

ದಧೌ ತಸ್ಯ ಮಹಾಲಕ್ಷ್ಮೀಃ

ಸಿತಮಾತ-ಪ-ವಾರಣಮ್|| 3-37

ಮಹಾಲಕ್ಷ್ಮಿದೇವಿಯು ಪರಮೇಶ್ವರನಿಗೆ ಬಿಳಿಕಮಲದಂತೆ (ಪುಂಡರೀಕಾಕೃತಿ) ಶುಭ್ರವಾಗಿರುವ, ಪೂರ್ಣಚಂದ್ರನಂತೆ ತಂಪಾದ ಶ್ವೇತಛತ್ರವನ್ನು ಹಿಡಿದಿದ್ದಳು.

ತಂತ್ರೀ ಝಂಕಾರ ಶಾಲಿನ್ಯಾ

ಸಂಗೀತಾಮೃತ ವಿದ್ಯಯಾ |

ಉಪತಸ್ಥೇ ಮಹಾದೇವಮ್

ಉಪಾಂತೇ ಚ ಸರಸ್ವತೀ || 3-38

ಸರಸ್ವತಿದೇವಿಯು ವೀಣೆಯ ಝೇಂಕಾರದೊಡನೆ ಕೂಡಿದ ಅಮೃತ ದಂತಿರುವ ಗಾನವಿದ್ಯೆಯಿಂದ ಸಮೀಪದಲ್ಲಿ ಇದ್ದು ಮಹಾದೇವನನ್ನು ಸೇವಿಸಿದಳು (ಉಪತಸ್ಥೇ).

ಝಣತ್ಕಂಕಣ ಜಾತೇನ

ಹಸ್ತೇನೋಪ ನಿಷದ್ವಧೂಃ |

ಓಂಕಾರ ತಾಲ ವೃಂತೇನ

ವೀಜಯಾ ಮಾಸ ಶಂಕರಮ್ || 3-39

ಉಪನಿಷತ್ತೆಂಬ ಸ್ತ್ರೀಯು ಝಣತ್ಕರಿಸುವ ಬಳೆಗಳಿಂದ ಕೂಡಿದ ಹಸ್ತದಿಂದ, ಓಂಕಾರವೆಂಬ ಬೀಸಣಿಗೆಯಿಂದ ಶಂಕರನಿಗೆ ಗಾಳಿಯನ್ನು ಬೀಸಿದಳು.

ಚಲಚ್ಚಾ ಮರಿಕಾ ಹಸ್ತಾ

ಝಂಕುರ್ ವನ್ಮಣಿ ಕಂಕಣಾಃ |

ಆಸೇವಂತ ತವಿೂಶಾನಮ್

ಅಭಿತೋ ದಿವ್ಯಕನ್ಯಕಾಃ || 3-40

ಝಣತ್ಕಾರವನ್ನು ಮಾಡುವ ರತ್ನದ ಬಳೆಗಳುಳ್ಳ, ಚಲಿಸುತ್ತಿರುವ ಚಾಮರಗಳಿಂದ ಕೂಡಿದ ಹಸ್ತಗಳುಳ್ಳ ದೇವಲೋಕದ ಕನ್ಯೆಯರು ಈಶನನ್ನು (ಪರಮೇಶ್ವರನನ್ನು) ಸೇವಿಸುತ್ತಿದ್ದರು.

ಚಾಮರಾಣಾಂ ವಿಲೋಲಾನಾಮ್

ಮಧ್ಯೇ ತನ್ಮುಖ ಮಂಡಲಮ್ |

ರರಾಜ ರಾಜ ಹಂಸಾನಾಮ್

ಭ್ರಮತಾಮಿವ ಪಂಕಜಮ್ || 3-41

ಚಲಿಸುತ್ತಿರುವ ಚಾಮರಗಳ ಮಧ್ಯದಲ್ಲಿ ಆ ಪರಮಾತ್ಮನ ಮುಖವು ಸಂಚರಿಸುತ್ತಿರುವ ರಾಜಹಂಸಗಳ ಮಧ್ಯದಲ್ಲಿ ಇರುವ ಕಮಲದೋಪಾದಿಯಲ್ಲಿ ಶೋಭಿಸುತ್ತಿತ್ತು.

ಮಂತ್ರೇಣ ತಮ ಸೇವಂತ

ವೇದಾಃ ಸಾಂಗವಿಭೂತಯಃ |

ಭಕ್ತ್ಯಾ ಚೂಡಾಮಣಿಂ ಕಾಂತಮ್

ವಹಂತ ಇವ ಮೌಲಿಭಿಃ || 3-42

ಶಿಕ್ಷಾ-ವ್ಯಾಕರಣ ಷಡಂಗಯುಕ್ತಗಳಾದ (ಸಾಂಗ ವಿಭೂತಯಃ) ವೇದಗಳು, ಉಪನಿಷತ್ತುಗಳೆಂಬ ತಮ್ಮ ಶಿರಸ್ಸುಗಳಿಂದ ಆ ಪರಮಾತ್ಮನನ್ನು ಮನೋಹರವಾದ ಚೂಡಾಮಣಿಯೋಪಾದಿಯಲ್ಲಿ ಧರಿಸಿ ಮಂತ್ರದಿಂದ ಭಕ್ತಿಪೂರ್ವಕವಾಗಿ ಸೇವಿಸಿದವು.

ತದೀಯಾಯುಧ ಧಾರಿಣ್ಯಃ

ತತ್ಸಮಾನ ವಿಭೂಷಣಾಃ |

ಅಂಗಭೂತಾಃ ಸ್ತ್ರಿಯಃ ಕಾಶ್ಚಿದ್

ಆ ಸೇವಂತ ತಮೀಶ್ವರಮ್ || 3-43

ಆ ಪರಮಾತ್ಮನ ಆಯುಧಗಳನ್ನು ಧರಿಸಿರುವ ಪರಮಾತ್ಮನ ಹಾಗೆ ಅಲಂಕಾರಗಳನ್ನು ಧರಿಸಿರುವ ಶಿವನಿಗೆ ಅಂಗಭೂತರಾದ ಕೆಲವು ದೇವಸ್ತ್ರೀಯರು ಆ ಈಶ್ವರನನ್ನು ಸೇವಿಸುತ್ತಿದ್ದರು.

ಆಪ್ತಾಧಿಕಾರಿಣಃ ಕೇಚಿತ್

ಅನಂತ ಪ್ರಮುಖಾ ಅಪಿ |

ಅಷ್ಟೌ ವಿದ್ಯೇಶ್ವರಾ ದೇವಮ್

ಅಭಜಂತ ಸಮಂತತಃ || 3-44

ಶಿವನಿಗೆ ಆಪ್ತಾಧಿಕಾರಿಗಳಾದ ಅನಂತನೇ ಮೊದಲಾದ ಎಂಟು ಜನ ವಿದ್ಯೇಶ್ವರರು ಸುತ್ತಲೂ ನಿಂತು ದೇವನನ್ನು (ಶಿವನನ್ನು) ಭಜಿಸುತ್ತಿದ್ದರು.

ತತೋ ನಂದೀ ಮಹಾಕಾಲಃ

ಚಂಡೋ ಭೃಂಗೀರಿಟಿ ಸ್ತತಃ |

ಸೇನಾ ನಿರ್ಗಜ ವಕ್ತ್ರಶ್ಚ

ರೇಣುಕೋದಾರುಕ ಸ್ತಥಾ|

ಘಂಟಾಕರ್ಣಃ ಪುಷ್ಪದಂತಃ

ಕಪಾಲೀ ವೀರಭದ್ರಕಃ|| 3-45

ಅನಂತರ ನಂದೀಶ್ವರ, ಮಹಾಕಾಲ, ಚಂಡ, ಭೃಂಗಿರಿಟಿ, ಷಣ್ಮುಖ (ಸೇನಾನಿ), ಗಣೇಶ, ರೇಣುಕ ದಾರುಕ, ಘಂಟಾಕರ್ಣ, ಪುಷ್ಪದಂತ, ಕಪಾಲಿ ಮತ್ತು ವೀರಭದ್ರರು – ಇವರೇ ಮೊದಲಾದ ಮಹಾನ್ ಬಲಶಾಲಿಗಳೂ, ನಿರಂಕುಶ ಸತ್ವಶಾಲಿಗಳೂ, ಮಹಾಮಹಿಮರೂ ಆದ ಪ್ರಮಥರು ಆ ಮಹೇಶ್ವರನನ್ನು ಸೇವಿಸುತ್ತಿದ್ದರು.

ಏವಮಾದ್ಯಾ ಮಹಾಭಾಗಾ

ಮಹಾಬಲ ಪರಾಕ್ರಮಾಃ|

ನಿರಂಕುಶ ಮಹಾಸತ್ತ್ವಾ

ಭೇಜಿರೇ ತಂ ಮಹೇಶ್ವರಮ್ || 3-46

ಅಣಿಮಾದಿಕಮ್ ಐಶ್ವರ್ಯಮ್

ಯೇಷಾಂ ಸಿದ್ಧೇರ ಪೋಹನಮ್ |

ಬ್ರಹ್ಮಾದಯಃ ಸುರಾ ಯೇಷಾಮ್

ಆಜ್ಞಾ ಲಂಘನ ಭೀ ರವಃ || 3-47

ಯಾವ ಪ್ರಮಥರ ಸಿದ್ಧಿಯ ಮುಂದೆ ಅಣಿಮಾದಿ ಅಷ್ಟಸಿದ್ಧಿಗಳು ತುಚ್ಛವಾದವುಗಳೋ, ಬ್ರಹ್ಮನೇ ಮೊದಲಾದ ದೇವತೆಗಳು ಯಾವ ಪ್ರಮಥರ ಆಜ್ಞೆಯನ್ನು ಉಲ್ಲಂಘಿಸಲು ಭಯಪಡುವರೋ-

ಮೋಕ್ಷಲಕ್ಷ್ಮೀ ಪರಿಷ್ವಂಗ -

ಮುದಿತಾ ಯೇನ್ತ ರಾತ್ಮನಾ |

ಯೇಷಾಮೀಷ ತ್ಕರಂ ವಿಶ್ವ-

ಸರ್ಗ ಸಂಹಾರ ಕಲ್ಪನಮ್|| 3-48

ಯಾವ ಪ್ರಮಥರು ಮೋಕ್ಷ್ಮಲಕ್ಷ್ಮಿಯ ಆಲಿಂಗನದಿಂದ ಅಂತರಾತ್ಮನಲ್ಲಿ ಸಂತುಷ್ಟರಾಗಿರುವರೋ, ವಿಶ್ವಸೃಷ್ಟಿ ಸಂಹಾರಕ್ರಿಯೆಗಳು ಯಾರಿಗೆ ಅತಿಸುಲಭ ಸಾಧ್ಯಗಳೋ-

ಜ್ಞಾನಶಕ್ತಿಃ ಪರಾ ಯೇಷಾಮ್

ಸರ್ವವಸ್ತು ಪ್ರಕಾಶಿನೀ |

ಆನಂದ ಕಣಿಕಾ ಯೇಷಾಮ್

ಹರಿ ಬ್ರಹ್ಮಾದಿ ಸಂಪದಃ || 3-49

ಯಾವ ಪ್ರಮಥರ ಸರ್ವೊತ್ಕೃಷ್ಟವಾದ ಜ್ಞಾನಶಕ್ತಿಯು ಸಕಲ ವಸ್ತುಗಳ ಯಥಾರ್ಥ ಜ್ಞಾನವನ್ನು ಉಂಟುಮಾಡುವುದೋ, ಹರಿಬ್ರಹ್ಮಾದಿ ದೇವತೆಗಳ ಐಶ್ವರ್ಯಗಳ ಆನಂದವು ಯಾರಿಗೆ ಅತ್ಯಲ್ಪವಾಗಿ ತೋರುವುದೋ-

ಆಕಾಂಕ್ಷಂತೇ ಪದಂ ಯೇಷಾಮ್

ಯೋಗಿನೋ ಯೋಗ ತತ್ಪರಾಃ |

ಕಾಂಕ್ಷಣೀಯ ಫಲೋ ಯೇಷಾಮ್

ಸಂಕಲ್ಪಃ ಕಲ್ಪ ಪಾದಪಃ || 3-50

ಯೋಗತತ್ಪರರಾದ ಯೋಗಿಗಳು ಯಾರ ಸ್ಥಾನವನ್ನು ಅಪೇಕ್ಷಿಸುವರೋ, ಯಾರ ಸಂಕಲ್ಪವು ಅಪೇಕ್ಷಿಸಿದ ಫಲವನ್ನು ಕೊಡುವ ಕಲ್ಪವೃಕ್ಷವಾಗಿರುವುದೋ-

ಕರ್ಮ ಕಾಲಾದಿ ಕಾರ್ಪಣ್ಯ-

ಚಿಂತಾ ಯೇಷಾಂ ನ ವಿದ್ಯತೇ |

ಯೇಷಾಂ ವಿಕ್ರಮ ಸನ್ನಾಹಾ

ಮೃತ್ಯೋರಪಿ ಚ ಮೃತ್ಯವಃ|

ತೇಸಾ ರೂಪ್ಯ ಪದಂ ಪ್ರಾಪ್ತಾಃ

ಪ್ರಮಥಾ ಭೇಜಿರೇ ಶಿವಮ್ ||3-51

ಯಾವ ಪ್ರಮಥರಿಗೆ ಕರ್ಮ, ಕಾಲಗಳ ಚಿಂತೆಗಳು ಇರುವುದಿಲ್ಲವೊ, ಯಾರ ಪರಾಕ್ರಮದ ಉದ್ಯೋಗಗಳು ಮೃತ್ಯುವಿಗೂ ಮೃತ್ಯುವಾಗಿರುವುವೋ ಅಂಥ ಶಿವಸಾರೂಪ್ಯ ಪದವನ್ನು ಪಡೆದ ಅಂತಹ ಪ್ರಮಥರು ಶಿವನನ್ನು ಸೇವಿಸುತ್ತಿದ್ದರು (ಭೇಜಿರೇ).

ಬ್ರಹ್ಮೋಪೇಂದ್ರ ಮಹೇಂದ್ರಾದ್ಯಾ

ವಿಶ್ವ ತಂತ್ರಾಧಿಕಾರಿಣಮ್|

ಆಯುಧಾ ಲಂಕೃತ ಪ್ರಾಂತಾಃ

ಪರಿತಸ್ತಂ ಸಿಷೇವಿರೇ|| 3-52

ಬ್ರಹ್ಮ, ವಿಷ್ಣು, ಇಂದ್ರ ಮೊದಲಾದ ದೇವತೆಗಳು ತಮ್ಮ ತಮ್ಮ ಆಯುಧಗಳನ್ನು ಧರಿಸಿಕೊಂಡು ಜಗತ್ತಿನ ಸೂತ್ರಧಾರಿಯಾದ ಪರಮಾತ್ಮನ ಸುತ್ತಲೂ ಜಾಗ್ರತರಾಗಿ ನಿಂತು ಹಲವು ಬಗೆಯಲ್ಲಿ ಸೇವಿಸುತ್ತಿದ್ದರು.

ಆದಿತ್ಯಾ ವಸವೋ ರುದ್ರಾ

ಯಕ್ಷ ಗಂಧರ್ವ ಕಿನ್ನರಾಃ|

ದಾನವಾ ರಾಕ್ಷಸಾ ದೈತ್ಯಾಃ

ಸಿದ್ಧಾ ವಿದ್ಯಾ ಧರೋ ರಗಾಃ|

ಅಭಜಂತ ಮಹಾದೇವಮ್ |

ಅಪರಿಚ್ಛಿನ್ನ ಸೈನಿಕಾಃ || 3-53

ಆದಿತ್ಯರು (ದ್ವಾದಶ ಸೂರ್ಯರು), ವಸುಗಳು (ಅಷ್ಟವಸುಗಳು) ಏಕಾದಶ ರುದ್ರರು, ಯಕ್ಷರು, ಗಂಧರ್ವರು, ಕಿನ್ನರರು, ದಾನವರು, ರಾಕ್ಷಸರು, ದೈತ್ಯರು, ಸಿದ್ಧರು, ವಿದ್ಯಾಧರರು, ಶೇಷನೇ (ಉರಗ) ಮೊದಲಾದ ಸರ್ಪಗಳು – ಇವರೆಲ್ಲರೂ ತಮ್ಮ ಅಪರಿಮಿತ ಸೇನೆಯೊಂದಿಗೆ ಮಹಾದೇವನನ್ನು ಭಜಿಸುತ್ತಿದ್ದರು.

ವಸಿಷ್ಠೋ ವಾಮದೇವಶ್ಚ

ಪುಲಸ್ತ್ಯಾಗಸ್ತ್ಯ ಶೌನಕಾಃ |

ದಧೀಚಿರ್ಗೌತಮಶ್ಚೈವ

ಸಾನಂದ ಶುಕ ನಾರದಾಃ || 3-54

ಉಪಮನ್ಯು ಭೃಗುವ್ಯಾಸ-

ಪರಾಶರ ಮರೀಚಯಃ |

ಇತ್ಯಾದ್ಯಾ ಮುನಯಃ ಸರ್ವೆ

ನೀಲಕಂಠಂ ಸಿಷೇವಿರೇ || 3-55

ವಸಿಷ್ಠ, ವಾಮದೇವ, ಪುಲಸ್ತ್ಯ, ಆಗಸ್ತ್ಯ, ಶೌನಕ, ದಧೀಚಿ, ಗೌತಮ, ಸಾನಂದ, ಶುಕದೇವ, ನಾರದ, ಉಪಮನ್ಯು, ಭೃಗು, ವ್ಯಾಸ, ಪರಾಶರ ಮತ್ತು ಮರೀಚ – ಇವರೇ ಮೊದಲಾದ ಎಲ್ಲ ಮುನಿಗಳು ನೀಲಕಂಠನನ್ನು ಸೇವಿಸುತ್ತಿದ್ದರು.

ಪಾಶ್ರ್ವಸ್ಥ ಪರಿವಾರಾಣಾಮ್

ವಿಮಲಾಂಗೇಷು ಬಿಂಬಿತಃ |

ಸರ್ವಾಂತರ್ಗತ ಮಾತ್ಮಾನಮ್

ಸ ರೇಜೇ ದರ್ಶಯನ್ನಿವ || 3-56

ತನ್ನ ಇಕ್ಕೆಲಗಳಲ್ಲಿ ನಿಂತಿರುವ ತನ್ನ ಪರಿವಾರ ದೇವತೆಗಳು ಅತ್ಯಂತ ನಿರ್ಮಲವಾದ ಶರೀರಗಳಲ್ಲಿ ಪ್ರತಿಬಿಂಬಿತನಾದ ಆ ಪರಮಾತ್ಮನು, ತಾನು ಸರ್ವಾಂತರ್ಯಾಮಿಯೆಂಬುದನ್ನು ತೋರುತ್ತಿರುವನೋ ಎಂಬಂತೆ ಪರಿಶೋಭಿಸಿದನು (ರೇಜೇ).

ದೇವತಾನಾಂ ಸೇವಾವರ್ಣನಮ್

ಪರಮೇಶ್ವರಸ್ಯ ರಾಜ ವ್ಯಾಪಾರ ವರ್ಣನಮ್

ಕ್ಷಣಂ ಸ ಶಂಭುರ್ ದೇವಾನಾಮ್

ಕಾರ್ಯಭಾಗಂ ನಿರೂಪಯನ್ |

ಕ್ಷಣಂ ಗಂಧರ್ವ ರಾಜಾನಾಮ್

ಗಾನವಿದ್ಯಾಂ ವಿಭಾವಯನ್||3-57

ಆ ಶಂಭುವು ಕ್ಷಣಕಾಲ ದೇವತೆಗಳು ಮಾಡಬೇಕಾದ ಕಾರ್ಯಗಳ ಬಗ್ಗೆ ಆಜ್ಞಾಪಿಸುವವನಾದರೆ, ಇನ್ನೊಂದು ಕ್ಷಣಕಾಲ ಶ್ರೇಷ್ಠ ಗಂಧರ್ವರ ಗಾನವಿದ್ಯೆಯನ್ನು ಆಲಿಸುತ್ತಿದ್ದನು (ವಿಭಾವಯನ್). ಆಲಿಸುತ್ತಿದ್ದನು (ವಿಭಾವಯನ್).

ಬ್ರಹ್ಮವಿಷ್ಣ್ವಾದಿಭಿರ್ದೆವೈಃ

ಕ್ಷಣ ಮಾಲಾಪಮಾಚರನ್ |

ಕ್ಷಣಂ ದೇವ ಮೃಗಾಕ್ಷೀಣಾಮ್

ಲಾಲಯನ್ ನೃತ್ಯ ವಿಭ್ರಮಮ್ || 3-58

ಬಳಿಕ ಸ್ವಲ್ಪ ಹೊತ್ತು ಬ್ರಹ್ಮ, ವಿಷ್ಣು ಮೊದಲಾದ ದೇವತೆಗಳೊಡನೆ ಮಾತನಾಡುವನು, ಸ್ವಲ್ಪ ಹೊತ್ತು ದೇವಕನ್ಯೆಯರ ನರ್ತನ ವೈಭವವನ್ನು ನೋಡುವನು.

ವ್ಯಾಸಾದೀನಾಂ ಕ್ಷಣಂ ಕುರ್ವನ್

ವೇದೋಚ್ಚಾರೇಷು ಗೌರವಮ್ |

ವಿದಧಾನಃ ಕ್ಷಣಂ ದೇವ್ಯಾ

ಮುಖೇ ಬಿಂಬಾಧರೇ ದೃಶಃ || 3-59

ಒಂದು ಕ್ಷಣಕಾಲ ವೇದೋಚ್ಚಾರಣೆಯನ್ನು ಮಾಡುತ್ತಿರುವ ವ್ಯಾಸಾದಿ ಋಷಿಗಳಿಗೆ ಗೌರವವನ್ನು ಸೂಚಿಸುತ್ತಾ, ಮರುಕ್ಷಣದಲ್ಲಿ ತೊಂಡೆಯ ಹಣ್ಣಿನಂತಿರುವ ತುಟಿಯುಳ್ಳ ತನ್ನ ದೇವಿಯ ಮುಖದ ಕಡೆಗೆ ದೃಷ್ಟಿಯನ್ನು ಹೊರಳಿಸುತ್ತಾ-

ಹಾಸ್ಯ ನೃತ್ಯಂ ಕ್ಷಣಂ ಪಶ್ಯನ್

ಭೃಂಗಿಣಾ ಪರಿ ಕಲ್ಪಿತಮ್ |

ನಂದಿನಾ ವೇತ್ರ ಹಸ್ತೇನ

ಸರ್ವ ತಂತ್ರಾಧಿಕಾರಿಣಾ || 3-60

ಅಮುಂಚತಾ ಸದಾ ಪಾರ್ಶ್ವಮ್

ಆತ್ಮಾಭಿಪ್ರಾಯ ವೇದಿನಾ|

ಚೋದಿತಾನ್ ವಾಸಯನ್ ಕಾಂಶ್ಚಿದ್|

ವಿಸೃಜನ್ ಭ್ರೂ ವಿಲಾಸತಃ |

ಸಂಭಾವಯಂಸ್ತಥಾ ಚಾನ್ಯಾನ್

ಅನ್ಯಾನಪಿ ನಿಯಾಮಯನ್ |3-61

ಮರುಕ್ಷಣದಲ್ಲಿ ಭೃಂಗಿಯಿಂದ ಮಾಡಲ್ಪಟ್ಟ ಹಾಸ್ಯನೃತ್ಯವನ್ನು ನೋಡುತ್ತಾ ಸದಾಶಿವನ ನಿಕಟವರ್ತಿಯಾದ ಶಿವನ ಅಭಿಪ್ರಾಯವನ್ನು ತಿಳಿದಿರುವ ಸರ್ವತಂತ್ರಾಧಿಕಾರಿಯಾದ ಮತ್ತು ದಂಡಧಾರಿಯಾದ ನಂದಿಯಿಂದ ಕೆಲವರನ್ನು ಕರೆಯಿಸಿ ಕುಳ್ಳರಿಸುತ್ತಾ, ಕೆಲವರನ್ನು ತನ್ನ ಹುಬ್ಬಿನ ಸನ್ನೆಯಿಂದ ಹೊರಗೆ ಕಳುಹಿಸುತ್ತಾ, ಅದರಂತೆ ಕೆಲವರನ್ನು ಪ್ರೀತಿಯ ವಾಕ್ಯಗಳಿಂದ ಸಂತೋಷಪಡಿಸುತ್ತಾ ಮತ್ತೆ ಕೆಲವರನ್ನು ಶಾಸನಕ್ಕೆ ಒಳಪಡಿಸುತ್ತಿದ್ದನು.

ಸಮಸ್ತ ಭುವನಾಧೀಶ-

ಮೌಲಿ ಲಾಲಿತ ಶಾಸನಃ |

ಅಕುಂಠ ಶಕ್ತಿ ರ ವ್ಯಾಜ-

ಲಾವಣ್ಯ ಲಲಿತಾಕೃತಿಃ ||3-62

ಎಲ್ಲ ಭುವನಗಳ (ಹದಿನಾಲ್ಕು ಲೋಕಗಳ) ಅಧೀಶ್ವರರಿಂದ ಶಿರೋಧಾಯಕವಾದ ಶಾಸನವುಳ್ಳವನಾದ, ಎಲ್ಲಿಯೂ ಅಡೆತಡೆಯಿಲ್ಲದ ಶಕ್ತಿಯುಳ್ಳ, ಸ್ವಾಭಾವಿಕ ಲಾವಣ್ಯದಿಂದ ಸುಂದರವಾದ-

ಸ್ಥಿರ ಯೌವನಸೌರಭ್ಯ-

ಶೃಂಗಾರಿತ ಕಲೇವರಃ |

ಆತ್ಮಶಕ್ತ್ಯಮೃತಾಸ್ವಾದ –

ರಸೋಲ್ಲಾಸಿತ ಮಾನಸಃ || 3-63

ಸ್ಥಿರವಾದ ತಾರುಣ್ಯದಿಂದ ಅಲಂಕೃತವಾದ ಶರೀರವುಳ್ಳವನಾಗಿ, ತನ್ನಲ್ಲಿರುವ ಶಕ್ತಿರೂಪವಾದ ಅಮೃತದ ರಸಾಸ್ವಾದದಿಂದ ಉಲ್ಲಸಿತವಾದ ಮನಸ್ಸುಳ್ಳವನಾಗಿ-

ಸ್ವಾಭಾವಿಕ ಮಹೈಶ್ವರ್ಯ-

ವಿಶ್ರಾಮ ಪರಮಾವಧಿಃ |

ನಿಷ್ಕಲಂಕ ಮಹಾಸತ್ತ್ವ-

ನಿರ್ಮಿತಾನೇಕ ವಿಗ್ರಹಃ || 3-64

ಸ್ವಾಭಾವಿಕವಾಗಿ ನೆಲೆಸಿರುವ ಮಹದೈಶ್ವರ್ಯಗಳಿಗೆ (ಸರ್ವಜ್ಞತ್ವಾದಿ ಐಶ್ವರ್ಯಗಳಿಗೆ) ಪರಮಾವಧಿಯಾಗಿರುವ, ಕಲಂಕಶೂನ್ಯವಾದ ಮಹಾಶಕ್ತಿಯಿಂದ ನಿರ್ಮಿಸಲ್ಪಟ್ಟ ಅನೇಕ ಮಂಗಲ ವಿಗ್ರಹಗಳುಳ್ಳವನಾದ-

ಅಖಂಡಾರಾತಿ ದೋರ್

ದಂಡ- ಕಂಡೂ ಖಂಡನ ಪಂಡಿತಃ|

ಚಿಂತಾಮಣಿಃ ಪ್ರಪನ್ನಾನಾಮ್

ಶ್ರೀಕಂಠಃ ಪರಮೇಶ್ವರಃ || 3-65

ಅನೇಕ ಸಜ್ಜನ ವೈರಿಗಳ ಭುಜಗಳ ನವೆಯನ್ನು ಹೋಗಲಾಡಿಸುವುದರಲ್ಲಿ ಸಮರ್ಥನಾದ, ಶರಣಾಗತರಾದವರಿಗೆ ಚಿಂತಾಮಣಿ ಸ್ವರೂಪನಾದ, ಶ್ರೀಕಂಠನಾದ ಪರಮೇಶ್ವರನು (ಸಭೆಯಲ್ಲಿ ಶೋಭಿಸುತ್ತಿದ್ದನು)-

ಸಭಾಂತರ ಗತಂ ತಂತ್ರಮ್

ರೇಣುಕಂ ಗಣನಾಯಕಮ್|

ಪ್ರಸಾದಂ ಸುಲಭಂ ದಾತುಮ್

ತಾಂಬೂಲಂ ಸ ತ ಮಾಹ್ ವಯತ್||3-66

ಆ ಶ್ರೀಕಂಠನಾದ ಪರಮೇಶ್ವರನು ಸಭೆಯ ಮಧ್ಯದಲ್ಲಿರುವ ಪ್ರಸಿದ್ಧನಾದ ರೇಣುಕನೆಂಬ ಗಣಶ್ರೇಷ್ಠನನ್ನು ಸುಲಭವಾದ ತಾಂಬೂಲ ಪ್ರಸಾದವನ್ನು ಕೊಡುವುದಕ್ಕಾಗಿ ಆಹ್ವಾನಿಸಿದನು (ಶಿರಸಂಜ್ಞೆಯಿಂದ ಕರೆದನು).

ಶಂಭೋರ್ ಆಹ್ವಾನ ಸಂತೋಷ-

ಸಂಭ್ರಮೇಣೈವ ದಾರುಕಮ್|

ಉಲ್ಲಂಘ್ಯ ಪಾರ್ಶ್ವ ಮಗಮತ್

ಲೋಕನಾಥಸ್ಯ ರೇಣುಕಃ || 3-67

ಶಂಭುವಿನ ಆಹ್ವಾನದ ಸಂತೋಷ ಸಂಭ್ರಮದಲ್ಲಿ ಆ ರೇಣುಕಗಣೇಶ್ವರನು ದಾರುಕ ಗಣೇಶ್ವರನನ್ನು ದಾಟಿ ಲೋಕನಾಥನಾದ (ಪರಮೇಶ್ವರನ) ಸಮೀಪಕ್ಕೆ ಹೋದನು.

ತಮಾಲೋಕ್ಯ ವಿಭು ಸ್ತತ್ರ

ಸಮುಲ್ಲಂಘಿತ ದಾರುಕಮ್ |

ಮಾಹಾತ್ಮ್ಯಂ ನಿಜ ಭಕ್ತಾನಾಮ್

ದ್ಯೋತಯನ್ನಿದ ಮಬ್ರವೀತ್ || 3-68

ದಾರುಕನನ್ನು ದಾಟಿ ಬಂದ ರೇಣುಕನನ್ನು ಪರಶಿವನು ನೋಡಿ, ತನ್ನ ಭಕ್ತನ ಮಹಾತ್ಮ್ಯವನ್ನು ವ್ಯಕ್ತಪಡಿಸಲೋಸ್ಕರವಾಗಿ ಹೀಗೆ ಹೇಳಿದನು:

ರೇ! ರೇ! ರೇಣುಕ ದುರ್ಬುದ್ಧೇ

ಕಥಮೇಷ ತ್ವ ಯಾಧುನಾ |

ಉಲ್ಲಂಘಿತಃ ಸಭಾ ಮಧ್ಯೇ

ಮಮ ಭಕ್ತೋ ಹಿ ದಾರುಕಃ || 3-69

ಆತುರಬುದ್ಧಿಯವನಾದ ಹೇ ರೇಣುಕನೇ, ಈ ಸಭೆಯ ಮಧ್ಯದಲ್ಲಿದ್ದ ನನ್ನ ಭಕ್ತನಾದ ಈ ದಾರುಕನು ನಿನ್ನಿಂದ ಅದು ಹೇಗೆ ತಾನೇ ದಾಟಲ್ಪಟ್ಟನು?

ಲಂಘನಂ ಮಮ ಭಕ್ತಾನಾಮ್

ಪರಮಾನರ್ಥ ಕಾರಣಮ್ |

ಆಯುಃ ಶ್ರಿಯಂ ಕುಲಂ ಕೀರ್ತಿಮ್

ನಿಹಂತಿ ಹಿ ಶರೀರಿಣಾಮ್ || 3-70

ನನ್ನ ಭಕ್ತರನ್ನು ದಾಟುವುದು ಅತ್ಯಂತ ಅನರ್ಥಕ್ಕೆ ಕಾರಣವಾಗುವುದು. ಅದು ಪ್ರಾಣಿಗಳ ಆಯುಷ್ಯ, ಸಂಪತ್ತು, ವಂಶಕೀರ್ತಿಗಳನ್ನೆಲ್ಲಾ ಹಾಳುಮಾಡುತ್ತದೆ.

ಮಮ ಭಕ್ತ ಮವಜ್ಞಾಯ

ಮಾರ್ಕಂಡೇಯಂ ಪುರಾ ಯಮಃ |

ಮತ್ಪಾದ ತಾಡನಾ ದಾಸೀತ್

ಸ್ಮರಣೀಯ ಕಲೇವರಃ || 3-71

ಪೂರ್ವಕಾಲದಲ್ಲಿ ಯಮನು ನನ್ನ ಭಕ್ತನಾದ ಮಾರ್ಕಂಡೇಯನನ್ನು ತಿರಸ್ಕರಿಸಿ, ನನ್ನ ಕಾಲಿನ ಒದೆತದಿಂದ (ಅದರ) ಸ್ಮರಣೀಯ ಶರೀರಿಯಾದನು.

ಭೃಗೋಶ್ಚ ಶಂಕು ಕರ್ಣಸ್ಯ

ಮಮ ಭಕ್ತಿ ಮತೋ ಸ್ತಯೋಃ |

ಕೃತ್ವಾನಿಷ್ಟ ಮಭೂದ್ವಿಷ್ಣುಃ ವಿ

ಕೇಶೋ ದಶಯೋನಿಭಾಕ್ || 3-72

ನನ್ನ ಭಕ್ತರಾದ ಭೃಗುಮುನಿಗೂ, ಶಂಕುಕರ್ಣನಿಗೂ ವಿಷ್ಣುವು ಕೇಡನ್ನು ಮಾಡಿ ಮುಂದಲೆಯ ಕೂದಲುಗಳನ್ನು ಕೀಳಿಸಿಕೊಂಡವನಾಗಿ ದಶಯೋನಿಗಳಲ್ಲಿ ಜನ್ಮ ತಾಳಿದನು.

ಮದ್ಭಕ್ತೇನ ದಧೀಚೇನ

ಕೃತ್ವಾ ಯುದ್ಧಂ ಜನಾರ್ದನಃ |

ಭಗ್ನ ಚಕ್ರಾಯುಧಃ ಪೂರ್ವಮ್

ಪರಾಭವ ಮುಪಾಗಮತ್|| 3-73

(ಪೂರ್ವದಲ್ಲಿ) ನನ್ನ ಭಕ್ತನಾದ ದಧೀಚಿಯೊಡನೆ ಜನಾರ್ದನನು ಯುದ್ಧ ಮಾಡಿ ತನ್ನ ಚಕ್ರಾಯುಧವನ್ನು ಮುರಿಸಿಕೊಂಡು ಪರಾಭವಗೊಂಡು ತಿರಸ್ಕೃತನಾದನು.

ಕೃತಾಶ್ವಮೇಧೋ ದಕ್ಷೊಪಿ

ಮದ್ಭಕ್ತಾಂಶ್ಚ ಗಣೇಶ್ವರಾನ್ |

ಅವಮತ್ಯ ಸಭಾಮಧ್ಯೇ

ಮೇಷವಕ್ತ್ರೋ ಭವತ್ ಪುರಾ || 3-74

ಪೂರ್ವದಲ್ಲಿ ದಕ್ಷನು ಕೂಡ ಅಶ್ವಮೇಧ ಯಾಗವನ್ನು ಮಾಡಿ ನನ್ನ ಭಕ್ತರಾದ ಪ್ರಮಥಗಣರನ್ನು ಸಭಾಮಧ್ಯದಲ್ಲಿ ಅವಮಾನಪಡಿಸಿ ಕುರಿತಲೆಯುಳ್ಳವನಾದನು.

ಶ್ವೇತಸ್ಯ ಮಮ ಭಕ್ತಸ್ಯ

ದುರತಿಕ್ರಮ ತೇಜಸಃ |

ಔದಾಸೀನ್ಯೇನ ಕಾಲೋಪಿ

ಮಯಾ ದಗ್ಧಃ ಪುರಾಭವತ್ || 3-75

(ಪೂರ್ವಕಾಲದಲ್ಲಿ) ಮೀರಲಾಗದ ತೇಜಸ್ಸುಳ್ಳ ನನ್ನ ಭಕ್ತನಾದ ಶ್ವೇತನನ್ನು ಉದಾಸೀನ ಮಾಡಿದ್ದರಿಂದ ಯಮನು ನನ್ನಿಂದ ಸುಡಲ್ಪಟ್ಟನು.

ಏವಮನ್ಯೇಪಿ ಬಹವೋ

ಮದ್ಭಕ್ತಾ ನಾಮತಿಕ್ರಮಾತ್ |

ಪರಿಭೂತಾಃ ಹತಾಶ್ಚಾಸನ್

ಭಕ್ತಾ ಮೇ ದುರತಿಕ್ರಮಾಃ || 3-76

ಹೀಗೆಯೇ ಇನ್ನೂ ಅನೇಕರು ನನ್ನ ಭಕ್ತರನ್ನು ಉದಾಸೀನವಾಗಿ ಕಂಡುದರಿಂದ ತಿರಸ್ಕೃತರೂ, ಕೊಲ್ಲಲ್ಪಟ್ಟವರೂ ಆಗಿರುತ್ತಾರೆ. ಆದ್ದರಿಂದ ನನ್ನ ಭಕ್ತರನ್ನು ಅತಿಕ್ರಮಿಸಬಾರದು.

ಅವಿಚಾರೇಣ ಮದ್ಭಕ್ತೋ

ಲಂಘಿತೋ ದಾರುಕಸ್ತ್ವಯಾ |

ಏಷ ತ್ವಂ ರೇಣುಕಾನೇನ

ಜನ್ಮವಾನ್ ಭವ ಭೂತಲೇ || 3-77

ಎಲೈ ರೇಣುಕನೇ, ನಿನ್ನಿಂದ ನನ್ನ ಭಕ್ತನಾದ ದಾರುಕನು ಅವಿಚಾರದಿಂದ ದಾಟಲ್ಪಟ್ಟನು. ಇದರಿಂದ ನೀನು ಭೂಲೋಕದಲ್ಲಿ ಜನ್ಮವನ್ನು ತಾಳು.

ಇತಿ ಪರಮೇಶ್ವರಸ್ಯ ರಾಜ ವ್ಯಾಪಾರ ವರ್ಣನಮ್

ಶ್ರೀ ರೇಣುಕಸ್ಯ ಶಿವ ವಿಜ್ಞಾಪನಮ್

ಇತ್ಯುಕ್ತಃ ಪರಮೇಶೇನ ಭಕ್ತಮಾಹಾತ್ಮ್ಯಶಂಸಿನಾ |

ಪ್ರಾರ್ಥಯಾಮಾಸ ದೇವೇಶಮ್

ಪ್ರಣಿಪತ್ಯ ಸ ರೇಣುಕಃ |

ಭವದಾಹ್ವಾನ ಸಂಭ್ರಾಂತ್ಯಾ

ಮಯಾ ಜ್ಞಾನಾದ್ವಿ ಲಂಘಿತಃ ||3-78

ಭಕ್ತರ ಮಹಾತ್ಮೆಯನ್ನು ಪ್ರಶಂಸಿಸುತ್ತಿದ್ದ ಪರಮೇಶ್ವರನಿಂದ ಈ ರೀತಿಯಾಗಿ ಹೇಳಲ್ಪಟ್ಟ ಆ ರೇಣುಕನು ದೇವಾದಿದೇವನಾದ ಪರಮೇಶ್ವರನಿಗೆ ನಮಸ್ಕರಿಸಿ ಪ್ರಾರ್ಥನೆಯನ್ನು ಮಾಡಿದನು. ಹೇ ಶಂಭುವೇ, ನಿನ್ನ ಆಹ್ವಾನದಿಂದುಂಟಾದ ಸಂಭ್ರಾಂತಿಯಿಂದ (ಗಡಿಬಿಡಿಯಿಂದ) ಅಜ್ಞಾನದಿಂದ (ದಾರುಕನನ್ನು) ದಾಟಿದೆನು.

ದಾರುಕೋಯಂ ತತಃ ಶಂಭೋ

ಪಾಹಿ ಮಾಂ ಭಕ್ತವತ್ಸಲ |

ಮಾನುಷೀಂ ಯೋನಿಮಾಸಾದ್ಯ

ಮಹಾ ದುಃಖ ವಿವರ್ಧಿನೀಂ |

ಜಾತ್ಯಾಯುರ್ ಭೋಗ ವೈಷಮ್ಯ-

ಹೇತು ಕರ್ಮೊಪ ಪಾದಿನೀಮ್ | 3-79

ಈ ದಾರುಕನು ನನ್ನಿಂದ ದಾಟಲ್ಪಟ್ಟನು. ಎಲೈ ಭಕ್ತವತ್ಸಲನೇ, ಅದರಿಂದ (ದಾಟಿದ ದೋಷದಿಂದ) ನನ್ನನ್ನು ರಕ್ಷಿಸು. (ಹೇ ಶಂಭುವೇ) ಮಹಾದುಃಖವನ್ನು ಹೆಚ್ಚಿಸುತ್ತಿರುವ ಜಾತಿ, ಆಯು, ಭೋಗಗಳ ವೈಷಮ್ಯಕ್ಕೆ ಕಾರಣವಾದ ಕರ್ಮವನ್ನು ಸಂಪಾದಿಸುವ,

ಸಮಸ್ತ ದೇವ ಕೈಂಕರ್ಯ-

ಕಾರ್ಪಣ್ಯ ಪ್ರಸವ ಸ್ಥಲೀಮ್ |

ಮಹಾ ತಾಪತ್ರಯೋಪೇತಾಮ್

ವರ್ಣಾಶ್ರಮ ನಿಯಂತ್ರಿತಾಮ್ |

ವಿಹಾಯ ತ್ವತ್ಪದಾಂಭೋಜ-

ಸೇವಾಂ ಕಿಂ ವಾವಸಾಮ್ಯಹಮ್ ||3-80

ಸಮಸ್ತ ದೇವತೆಗಳ ಕೈಂಕರ್ಯ ಮತ್ತು ಕಾರ್ಪಣ್ಯ (ದೈನ್ಯಭಾವ) ಕ್ಕೆ ಉಗಮಸ್ಥಾನವಾಗಿರುವ ಮಹಾತಾಪತ್ರಯಗಳಿಂದ ಕೂಡಿದ, ವರ್ಣಾಶ್ರಮಗಳ ನಿಯಂತ್ರಣಕ್ಕೆ ಒಳಗಾಗಿರುವ ಮನುಷ್ಯ ಯೋನಿಯನ್ನು ಹೊಂದಿ ನಿನ್ನ ಪಾದಕಮಲಸೇವೆಯನ್ನು ಬಿಟ್ಟು ನಾನು ವಾಸಮಾಡಲು ಸಾಧ್ಯವೇ?

ಯಥಾ ಮೇ ಮಾನುಷೋ ಭಾವೋ

ನ ಭವೇತ್ ಕ್ಷಿತಿಮಂಡಲೇ |

ತಥಾ ಪ್ರಸಾದಂ ದೇವೇಶ

ವಿಧೇಹಿ ಕರುಣಾನಿಧೇ || 3-81

ಆದ್ದರಿಂದ ದೇವದೇವೇಶನಾದ ಹೇ ಕರುಣಾನಿಧಿಯೇ, ನನಗೆ ಭೂಮಂಡಲದಲ್ಲಿ ಮನುಷ್ಯಭಾವವು (ಮನುಷ್ಯ ಜನ್ಮವು) ಬಾರದ ಹಾಗೆ ಪ್ರಸಾದವನ್ನು ಅನುಗ್ರಹಿಸು.

ಇತಿ ಶ್ರೀ ರೇಣುಕಸ್ಯ ಶಿವ ವಿಜ್ಞಾಪನಮ್

ಅವತಾರ ಪ್ರಯೋಜನಮ್

ಇತಿ ಸಂಪ್ರಾರ್ಥಿತೋ ದೇವೋ

ರೇಣುಕೇನ ಮಹೇಶ್ವರಃ |

ಮಾ ಭೈಷೀರ್ಮಮ ಭಕ್ತಾನಾಮ್

ಕುತೋ ಭೀತಿರಿಹೈಷ್ಯತಿ || 3-82

ದೇವನಾದ (ಲೀಲಾಮೂರ್ತಿಯಾದ) ಮಹೇಶ್ವರನು, ರೇಣುಕನಿಂದ ಈ ರೀತಿಯಾಗಿ ಪ್ರಾರ್ಥಿಸಲ್ಪಟ್ಟವನಾಗಿ (ಹೀಗೆ ಹೇಳಿದನು)- ಎಲೈ ರೇಣುಕನೇ, ನೀನು ಹೆದರಬೇಡ. ನನ್ನ ಭಕ್ತರಿಗೆ ಎಲ್ಲಿಂದ ತಾನೆ ಭೀತಿಯುಂಟಾಗುವುದು?

ಶ್ರೀಶೈಲಸ್ಯೋತ್ತರೇ ಭಾಗೇ

ತ್ರಿಲಿಂಗವಿಷಯೇ ಶುಭೇ |

ಕೊಲ್ಲಿಪಾಕ್ಯಾಭಿಧಾನೋಸ್ತಿ ಕೋಪಿ

ಗ್ರಾಮೋ ಮಹತ್ತರಃ || 3-83

ಶ್ರೀಶೈಲದ ಉತ್ತರಭಾಗದಲ್ಲಿರುವ ಮಂಗಳಕರವಾದ ತ್ರಿಲಿಂಗ ದೇಶದಲ್ಲಿ ಕೊಲ್ಲಿಪಾಕಿಯೆಂಬ ಒಂದು ದೊಡ್ಡ ಗ್ರಾಮವಿರುವುದು

ಸೋಮೇಶ್ವರಾಭಿಧಾನಸ್ಯ

ತತ್ರ ವಾಸವತೋ ಮಮ |

ಅಸ್ಪೃಶನ್ ಮಾನುಷಂ ಭಾವಮ್

ಲಿಂಗಾತ್ಪ್ರಾದುರ್ಭವಿಷ್ಯಸಿ || 3-84

ಅಲ್ಲಿ ಸೋಮೇಶ್ವರನೆಂಬ ಹೆಸರಿನಿಂದ ವಾಸವಾಗಿರುವ ನನ್ನ ಲಿಂಗದ ದೆಸೆಯಿಂದ ನೀನು ಮಾನುಷಭಾವವಿಲ್ಲದೆ (ಯೋನಿಜನಾಗದೆ) ಅವತರಿಸುತ್ತೀಯೆ?

ಮದೀಯಲಿಂಗಸಂಭೂತಮ್

ಮದ್ಭಕ್ತಪರಿಪಾಲಕಮ್ |

ವಿಸ್ಮಿತಾ ಮಾನುಷಾಃ ಸರ್ವೆ

ತ್ವಾಂ ಭಜಂತುಮದಾಜ್ಞಯಾ||3-85

ನನ್ನ ಆಜ್ಞೆಯಿಂದ ನನ್ನ ಆ ಸೋಮೇಶ್ವರ ಲಿಂಗದಿಂದುದಿಸಿದ, ನನ್ನ ಭಕ್ತರನ್ನು ಕಾಪಾಡುವ ನಿನ್ನನ್ನು (ನೋಡಿ) ಆಶ್ಚರ್ಯಪಟ್ಟ ಸರ್ವಮನುಷ್ಯರು ನಿನ್ನನ್ನು ಸೇವಿಸುವವರಾಗಲಿ.

ಮದದ್ವೈತಪರಂ ಶಾಸ್ತ್ರಮ್

ವೇದವೇದಾಂತ ಸಂಮತಮ್ |

ಸ್ಥಾಪಯಿಷ್ಯಸಿ ಭೂಲೋಕೇ

ಸರ್ವೆಷಾಂ ಹಿತ ಕಾರಕಮ್ ||3-86

ವೇದವೇದಾಂತ ಸಮ್ಮತವಾದ, ನನ್ನ ಅದ್ವೈತ ಪರವಾದ (ಶಿವಾದ್ವೈತ ಪರವಾದ), ಸರ್ವಜನಹಿತಕಾರಕವಾದ ಶಾಸ್ತ್ರವನ್ನು ಭೂಲೋಕದಲ್ಲಿ ನೀನು ಸ್ಥಾಪಿಸುವನಾಗುವೆ.

ಮಮ ಪ್ರತಾಪಮತುಲಮ್

ಮದ್ಭಕ್ತಾನಾಂ ವಿಶೇಷತಃ |

ಪ್ರಕಾಶಯ ಮಹೀಭಾಗೇ

ವೇದಮಾರ್ಗಾನುಸಾರತಃ || 3-87

ನನ್ನ ಪ್ರತಾಪವು (ಮಹಿಮೆಯು) ಅತುಲನೀಯವಾದುದು. ನನ್ನ ಭಕ್ತರ ಪ್ರತಾಪವು ನನಗಿಂತಲೂ ವಿಶೇಷವಾದುದು ಎಂಬುದನ್ನು ವೇದಮಾರ್ಗಾನು ಸಾರವಾಗಿ ಭೂಮಂಡಲದಲ್ಲಿ ಪ್ರಕಾಶಪಡಿಸು.

ಇತ್ಯುಕ್ತ್ವಾ ಪರಮೇಶ್ವರಃ

ಸ ಭಗವಾನ್ ಭದ್ರಾಸನಾ ದು ತ್ಥಿತೋ

ಬ್ರಹ್ಮೋಪೇಂದ್ರ ಮುಖಾನ್ ವಿಸೃಜ್ಯ

ವಿಬುಧಾನ್ ಭ್ರೂ ಸಂಜ್ಞಯಾ ಕೇವಲಮ್||

ಪಾರ್ವತ್ಯಾ ಸಹಿತೋಗಣೈರ್

ಅಭಿಮತೈಃ ಪ್ರಾಪ ಸ್ವಮ್ ಅಂತಃಪುರಮ್

ಕ್ಷೊಣೀ ಭಾಗಮ್ ಅವಾತರತ್

ಪಶು ಪತೇರಾಜ್ಞಾ ವಶಾದ್ ರೇಣುಕಃ||3-88

ಭಗವಂತನಾದ (ಷಡ್ಗುಣೈಶ್ವರ್ಯಯುಕ್ತನಾದ) ಆ ಪರಮೇಶ್ವರನು ಈ ರೀತಿಯಾಗಿ ಹೇಳಿ, ಸಿಂಹಾಸನದಿಂದ ಎದ್ದು ಹುಬ್ಬಿನ ಸಂಜ್ಞೆಯಿಂದ ಬ್ರಹ್ಮ, ವಿಷ್ಣು, ಮೊದಲಾದ ದೇವತೆಗಳನ್ನು ಕಳುಹಿಸಿ ಪಾರ್ವತಿಯೊಡಗೂಡಿ ಆಪ್ತರಾದ ಕೆಲ ಪ್ರಮಥರೊಡನೆ ಅಂತಃಪುರಕ್ಕೆ ತೆರಳಿದನು. ಇತ್ತ ಶ್ರೀರೇಣುಕಗಣೇಶ್ವರನು ಪಶುಪತಿಯ ಆಜ್ಞಾನುಸಾರವಾಗಿ ಭೂಲೋಕದಲ್ಲಿ ಅವತರಿಸಿದನು..

ಇತಿ ಓಂ ತತ್ಸತ್ ಇತಿ

ಶ್ರೀ ಶಿವಗೀತೇಷು ಸಿದ್ಧಾಂತಾಗಮೇಷು –

ಶಿವಾದ್ವೈತ ವಿದ್ಯಾಯಾಂ ಶಿವಯೋಗ ಶಾಸ್ತ್ರೇ,

ಶ್ರೀ ರೇಣುಕಾಗಸ್ತ್ಯ ಸಂವಾದೇ ವೀರಶೈವಧರ್ಮ ನಿರ್ಣಯೇ,

ಶ್ರೀಶಿವಯೋಗಿ ಶಿವಾಚಾರ್ಯ ವಿರಚಿತೇ ಶ್ರೀಸಿದ್ಧಾಂತ ಶಿಖಾಮಣೌ

ಜಗತ್ಸೃಷ್ಟಿ ವಿಚಾರೋ ನಾಮ ತೃತೀಯಃ ಪರಿಚ್ಛೇದಃ

ಓಂ ತತ್ಸತ್ ಇಲ್ಲಿಗೆ ಶ್ರೀ ಶಿವನಿಂದ ಉಪದೇಶಿಸಲ್ಪಟ್ಟ ಶ್ರೀ ಸಿದ್ಧಾಂತಾಗಮಗಳಲ್ಲಿಯ ಶಿವಾದ್ವೈತವಿದ್ಯಾರೂಪವೂ, ಶಿವಯೋಗಶಾಸ್ತ್ರವೂ, ಶ್ರೀ ರೇಣುಕಾಗಸ್ತ್ಯಸಂವಾದರೂಪವೂ, ಶ್ರೀವೀರಶೈವಧರ್ಮನಿರ್ಣಯವೂ, ಶ್ರೀಶಿವಯೋಗಿಶಿವಾಚಾರ್ಯವಿರಚಿತವೂ ಆದ ಶ್ರೀಸಿದ್ಧಾಂತಶಿಖಾಮಣಿಯಲ್ಲಿ ಶ್ರೀ ಶಿವನ ಸಭಾವರ್ಣನೆಯೆಂಬ ಹೆಸರಿನ ಮೂರನೆಯ ಪರಿಚ್ಛೇದವು ಮುಗಿದುದು