ಏಕೆ ಭಿಕ್ಷವೋ

ಏಕೆ ಭಿಕ್ಷವೋ ನಿನಗೆ ಚರ್ಮಚೇಲ ||ಪ||

ಶ್ರೀಕಂಠ ನಿನ್ನಷ್ಟು ಅನುಕೂಲ ಯಾರಿಗೋ ||ಅಪ||

ಕನಕಾಚಲವೆ ನಿನ್ನ ಕರದೊಳಗೆ ಇಹ

ಧನುವು ಮನೆಯು ರಜತಾಚಲವು

ಅನ್ನಪೂರ್ಣೆ ನಿನಗೆ ಪಟ್ಟದ ರಾಣಿ

ಲೋಕವಿಘ್ನವ ಕಳೆವ

ಗಣನಾಥ ನಿನ್ನ ಮಗ

ಶಿವರೂಪಿ ನೀನು ||೧||

ಏಕೆ ಭಿಕ್ಷವೋ ನಿನಗೆ ಚರ್ಮಚೇಲ ||ಪ||

ಶ್ರೀಕಂಠ ನಿನ್ನಷ್ಟು ಅನುಕೂಲ ಯಾರಿಗೋ ||ಅಪ||

ರಾಜಶೇಖರ ನೀನು ಸಕಲಕೋಶಾಧ್ಯಕ್ಷ

ರಾಜರಾಜನು ನಿನಗೆ ಪರಮಸಖನು

ಮೂರ್ಜಗದ ಪಾವನಳು

ಸುರಗಂಗೆ ಜಡೆಯೊಳಗೆ

ಸೋಜಿಗವಿದೇನಯ್ಯ ಜಗದೊಳಗೆ ಶಂಕರನೆ ||೨||

ಏಕೆ ಭಿಕ್ಷವೋ ನಿನಗೆ ಚರ್ಮಚೇಲ ||ಪ||

ಶ್ರೀಕಂಠ ನಿನ್ನಷ್ಟು ಅನುಕೂಲ ಯಾರಿಗೋ ||ಅಪ||

ತ್ರಿನಯನನು ನೀನು ಪಂಚಾಸ್ಯ ಬ್ರಹ್ಮನ ಮಗನು

ನಿನಗೊಬ್ಬ ಮಗನಿಹನು ಆರುಮೊಗದವನು

ಅನಿಮಿಷಪ್ರಿಯ ಗುರು ಗೋಪಾಲವಿಠ್ಠಲನು

ನಿನಗೆ ಅತ್ಯಂತ ಸುಪ್ರಿಯನಾಗಿರಲು ದೇವ ||೩||

ಏಕೆ ಭಿಕ್ಷವೋ ನಿನಗೆ ಚರ್ಮಚೇಲ ||ಪ||

ಶ್ರೀಕಂಠ ನಿನ್ನಷ್ಟು ಅನುಕೂಲ ಯಾರಿಗೋ ||ಅಪ||