ರಾಯಚೋಟಿ ಶ್ರೀ ವೀರಭದ್ರೇಶ್ವರ ಜಾತ್ರಾ ಪ್ರಯುಕ್ತ ವಿಶೇಷ ಲೇಖನ


ಶಾಸನಗಳಲ್ಲಿ ರಾಚೋಟಿ ಶ್ರೀವೀರಭದ್ರ

*************


ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ತಾಲೂಕು ಕೇಂದ್ರವಾದ ರಾಯಚೋಟಿಯು ವೀರಭದ್ರ ದೇವರ ಪವಿತ್ರ ತಾಣ,

ಆಂಧ್ರ ಮತ್ತು ನೆರೆಯ ಕರ್ನಾಟಕದ ಅನೇಕ ಜನರು ಈತನನ್ನು ಭಕ್ತಿಯಿಂದ ಆರಾಧಿಸುತ್ತಾರೆ.

ಇವರಲ್ಲಿ ಬಹಳಷ್ಟು ಜನರು ಈ ವೀರಭದ್ರನನ್ನು ತಮ್ಮ ಕುಲದೈವ ಅಥವಾ ಮನದೈವವಾಗಿ ತುಂಬ ಪ್ರಾಚೀನ ಕಾಲದಿಂದಲೂ ವಂಶಪರಂಪರೆಯಾಗಿ

ಪೂಜಿಸಿಕೊಂಡು ಬಂದಿದ್ದಾರೆ.


ವೀರಭದ್ರನು ತುಂಬ ಜಾಗೃತ ದೇವತೆಯೆಂಬ ಕಲ್ಪನೆ ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿದೆ,

ನಂದಿ, ಮಲ್ಲಿಕಾರ್ಜುನ ಮತ್ತು ವೀರಭದ್ರರು ಕೆಲವರಿಗೆ ಕುಲದೈವಗಳಾಗಿದ್ದುದನ್ನು ಚನ್ನಬಸವಣ್ಣ ತಿಳಿಸಿದ್ದಾನೆ.

ವೀರಭದ್ರ ದೇವರ ಅವತಾರದ ಸಂದರ್ಭವನ್ನು ಅಂಬಿಗರ ಚೌಡಯ್ಯನು,


ಪರಮಾತ್ಮನೆಂಬ ಶಿವನಿಗೆ ಆಶ್ರಯವಾಗಿ ಹುಟ್ಟಿತ್ತು ಲಿಂಗ,

ಆತಂಗೆ ವಾಹನವಾಗಿ ಹುಟ್ಟಿದಾತ ವೃಷಭ,

ಆತಂಗೆ ಯೋಗವಾಗಿ ಹುಟ್ಟಿದಾತ ವಿನಾಯಕ,

ಆತನಿಗೆ ಯುದ್ಧಕ್ಕೆ ಸರಿಯಾಗಿ ಹುಟ್ಟಿದಾತ ವೀರಭದ್ರ ll ಎಂದು ಸ್ಪಷ್ಟಪಡಿಸಿದ್ದಾನೆ.


ವೇದಗಳಲ್ಲಿ ಉಲ್ಲೇಖಗೊಂಡಿರುವ ರುದ್ರನು ಮುಂದೆ ಶಿವನೆಂದು ಸ್ಥಾನ ಪಡೆದ ಮೇಲೂ

ಅವನಿಗೆ ಇಂದ್ರಾದಿ ದೇವತೆಗಳಂತೆ ಯಜ್ಞ ದೇವತೆಯ ಸ್ಥಾನ ದೊರೆಯಲಿಲ್ಲ.


ಇದರಿಂದಾಗಿ ಶಿವನಿಗೆ ಯಜ್ಞ ಸಂದರ್ಭದಲ್ಲಿ ಹವಿರ್ಭಾಗ ಸಲ್ಲಲಿಲ್ಲ. ಇದು ಘರ್ಷಣೆಗೆ ಎಡೆ ಮಾಡಿಕೊಟ್ಟಿತು.

ಈ ಸಮಯದಲ್ಲಿಯೇ ವೀರಭದ್ರನು ಶಿವನ ಆಜ್ಞೆಯ ಮೇರೆಗೆ ಯಜ್ಞವನ್ನು ನಾಶ ಮಾಡಿದನು.

ಅಂದರೆ ಆರ್ಯ ಮತ್ತು ದ್ರಾವಿಡ ಸಂಸ್ಕೃತಿಯ ಸಮ್ಮಿಲನ ಪೂರ್ವದ ಸಂರ್ಘಷದ

ಸಂದರ್ಭದಲ್ಲಿ ವೀರಭದ್ರನ ಕಲ್ಪನೆ ಜನ್ಮ ತಾಳಿದೆ.


ಕರ್ನಾಟಕದ ಭಕ್ತರನ್ನು ಅದರಲ್ಲೂ ವೀರಶೈವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ರಾಯಚೋಟಿಯ

ವೀರಭದ್ರ ದೇವಾಲಯವು ತುಂಬ ಪ್ರಾಚೀನವಾದುದು. ಬಹುಶಃ ಅದು ದಕ್ಷಿಣ ಭಾರತದ ಬಹುತೇಕ ವೀರಭದ್ರ ದೇವಸ್ಥಾನಗಳಿಗೆ

ಮೂಲವಾಗಿರಬೇಕು.


ರಾಯಚೋಟಿಯ ವೀರಭದ್ರ ದೋಟಿ ಹಿಡಿದು ಬಂದವನೆಂದು ಸ್ಥಳ ಪುರಾಣ ಹೇಳುತ್ತದೆ.

ಆದ್ದರಿಂದ ಕುರುಬರ ಬೀರಲಿಂಗ (ವೀರ) ಶೈವರ ವೀರಭದ್ರ ಮೂಲತಃ ಒಂದೇ ಆಗಿರುವ ಸಾಧ್ಯತೆಯಿದೆ.


ರಾಯಚೋಟಿ ವೀರಭದ್ರನ ಅತ್ಯಂತ ಪ್ರಾಚೀನ ಉಲ್ಲೇಖ ಕ್ರಿ.ಶ. ೧೫೩೪ರ ಶಾಸನವಾಗಿದೆ.

ಆದರೆ ಇದೇ ದೇವಾಲಯದಲ್ಲಿರುವ ಕ್ರಿ.ಶ. ೧೫೨೦ರ ಶಾಸನವು ಕಾಮಿನಾಯಕನು ತನ್ನ ದೊರೆ ಕೃಷ್ಣದೇವರಾಯನಿಗೆ ಪುಣ್ಯವಾಗಲೆಂದು,

ಟೂರಿ ಸೀಮೆಯಲ್ಲಿನ ಪೆನಗೊಂಡ ಮಾಜವಾಡ ಮತ್ತು ಉದಯಗಿರಿ ಮಾರ್ಜವಾಡ ಸೀಮೆಯಲ್ಲಿನ

ಭೂಮಿಯನ್ನು ದೇವಾಲಯಕ್ಕೆ ದಾನ ಬಿಟ್ಟಿದ್ದನ್ನು ಉಲ್ಲೇಖಿಸಿದೆ. ಶಾಸನದ ಪ್ರಮುಖ ಭಾಗವು ತ್ರುಟಿತವಾಗಿರುವುದರಿಂದ

ದೇವಾಲಯದ ಹೆಸರು ಅಸ್ಪಷ್ಟವಾಗಿದೆ. ಬಹುಶಃ ಅದು ಈ ವೀರಭದ್ರ ದೇವಾಲಯದೇ ಆಗಿರಬೇಕು.


ಇದು ನಿಜವಾದರೆ, ಕ್ರಿ.ಶ. ೧೫೨೦ ಶಾಸನವೇ ರಾಯಚೋಟಿ ದೇವಾಲಯವನ್ನು ಉಲ್ಲೇಖಿಸುವ ಅತ್ಯಂತ ಪ್ರಾಚೀನ ಶಾಸನವೆಂದು ಹೇಳಬೇಕಾಗುತ್ತದೆ.


ರಾಚೋಟಿ ಕ್ರಿ.ಶ. ೧೫೬೨ರ ಶಾಸನವು ರಾಯದುರ್ಗ ಸೀಮೆಯನ್ನು ಆಳುತ್ತಿದ್ದ ಅಮರನಾಯಿನಿ ವೆಂಗಳನಾಯಿಡು

ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದನೆಂದು ಹೇಳಿವೆ. ವಿಜಯನಗರದ ಸದಾಶಿವರಾಯನ ಸಾಮಂತನಾದ

ಮಹಾಮಂಡಳೇಶ್ವರ ಜಿಲೇಳ ರಂಗಪತಿರಾಜನಿಗೆ ಪುಣ್ಯವಾಗಲೆಂದು ಈ ಜೀರ್ಣೋದ್ಧಾರ ಮಾಡಲಾಗಿದೆ. ಅದನ್ನು 'ಮುದ್ರ ಮನುಷ್ಯ' ಬಿರುದಿನ ಉಚ್ಚಿಲವಾಡಿ ರಾಮಯ್ಯನು ಮಾಡಿದ್ದಾನೆ.


ರಾಯಲ ಸೀಮೆಯಲ್ಲಿನ ವಿಜಯನಗರದ ಚಕ್ರವರ್ತಿಗಳ ಆಳ್ವಿಕೆಯಲ್ಲಿ ರಚನೆಯಾದ ದೇವಾಲಯಗಳ ಬಗ್ಗೆ ಡಾll

ವಿ. ಕಾಮೇಶ್ವರರಾವ್ ಅವರು ಅಧ್ಯಯನ ಮಾಡಿದ್ದಾರೆ, ಅದರಲ್ಲಿ ರಾಯಚೋಟಿ ವೀರಭದ್ರ ದೇವಾಲಯವೂ ಸೇರಿದೆ.

ಈಗಿರುವ ವೀರಭದ್ರ ದೇವಾಲಯದ ವಾಸ್ತುಶೈಲಿಯು ವಿಜಯನಗರದ ಮಾದರಿಯಲ್ಲಿದೆ.

ಮೇಲೆ ಉಲ್ಲೇಖಿಸಿದ ಸದಾಶಿವರಾಯನ ಆಳ್ವಿಕೆಯ ಶಾಸನವು ಕ್ರಿ. ಶ. ೧೫೬೩ರಲ್ಲಿ ಈ ವೀರಭದ್ರ ದೇವಾಲಯವೆಂಬುದು ಸುಸ್ಪಷ್ಟವಾಗಿದೆ.


ಶಾಸನದ ಮಾತನ್ನು ಆಧರಿಸಿ ಮತ್ತು ಈಗಿರುವ ದೇವಾಲಯದ ವಾಸ್ತುರಚನೆಯನ್ನು

ಗಮನಿಸಿ ಹೇಳುವುದಾದರೆ, ಅದು ಮೂಲತಃ ಗರ್ಭಗುಡಿ ಮತ್ತು ಸುಖನಾಸಿಗಳನ್ನು ಮಾತ್ರ ಹೊಂದಿದ್ದು,

ವಿಜಯನಗರದ ಸದಾಶಿವರಾಯನ ಆಳ್ವಿಕೆಯಲ್ಲಿ ಗರ್ಭಗುಡಿ ಸುಖನಾಸಿ ಮತ್ತು ಶಿಖರಗಳು ಪ್ರನರ್ ನಿರ್ಮಾಣಗೊಂಡರೆ,

ಮುಂದಿನ ಕಾಲಘಟ್ಟಗಳಲ್ಲಿ ಈಗಿರುವ ಮಹಾಮಂಟಪ ರಚನೆಯಾಗಿದೆ' ಒಂದು ದೇವಾಲಯದ ಪ್ರಮುಖ ಭಾಗಗಳಾದ ಗರ್ಭಗುಡಿ,

ಸುಖನಾಸಿಗಳು ಶಿಥಿಲಗೊಳ್ಳಬೇಕಾದರೆ, ಅದು ತೀರ ಪ್ರಾಚೀನ ದೇವಾಲಯವಾಗಿರಬೇಕು. ಆದರೆ - ಎಷ್ಟು ಪ್ರಾಚೀನ ?

ಎನ್ನುವುದು ಇಲ್ಲಿನ ಮುಖ್ಯ ಸಮಸ್ಯೆಯಾಗಿದೆ.


ಇತಿಹಾಸದ ಪುನರ್ ರಚನೆಯಲ್ಲಿ ಸಾಹಿತ್ಯಕೃತಿಗಳಿಗೂ ಶಾಸನಗಳಷ್ಟೆ ಮಹತ್ವವಿದೆ.

ಅದರಲ್ಲೂ ವಚನ ಸಾಹಿತ್ಯ ತನ್ನ ಕಾಲದ ಜೀವನದ ವಿವಿಧ ಮುಖಗಳ ವಿವರಗಳನ್ನು ಹಿಡಿದಿಟ್ಟುಕೊಂಡಿದೆ.

ಅಲ್ಲಿನ ಅನೇಕ ಸಂಗತಿಗಳನ್ನು ತುಂಬ ಎಚ್ಚರಿಕೆಯಿಂದ ಅಭ್ಯಸಿಸಿದರೆ, ೧೨ನೇ ಶತಮಾನ ಮತ್ತು

ಅದಕ್ಕಿಂತ ಹಿಂದಿನ ಕಾಲದ ಕನ್ನಡ ಜನತೆಯ ಬದುಕಿನ ವಿವರಗಳು ನಮ್ಮ ಕಣ್ಣೆದರು ಗೋಚರಿಸುತ್ತವೆ.


ವಚನಕಾರರು ತಮ್ಮ ಕಾಲದಲ್ಲಿ ಅನೇಕ ಜನರು ಕುಲದೈವ ಮನದೈವಗಳ ಹೆಸರಿನಲ್ಲಿ ಸ್ಥಾವರಲಿಂಗ ಪೂಜೆ ಮಾಡುತ್ತಿದ್ದುದನ್ನು ಪ್ರಸ್ತಾಪಿಸಿದ್ದಾರೆ.

ಇಂಥ ದೈವದ ಜಾತ್ರೆಗೆ ಹೋಗುತ್ತಿದ್ದ ಉಲ್ಲೇಖ ಮಡಿವಾಳ ಮಾಚೀದೇವರ ವಚನದಲ್ಲಿದೆ, ಅಂಬಿಗರ ಚೌಡಯನ ಒಂದು ವಚನ ಹೀಗಿದೆ :

ಕಾಶಿಗೆ ಹೋದನೆಂಬವರು ಹೇಸಿ ತೋತ್ತಿನ ಮಕ್ಕಳಯ್ಯ, ಮೈಲಾರಕ್ಕೆ ಹೋದನೆಂಬುವರು ಮಾದಗಿತ್ತಿಯ ಮಕ್ಕಳಯ್ಯ,

ಪರ್ವತಕ್ಕೆ ಹೋದೆನೆಂಬುವರು ಹಾದರಗಿತ್ತಿಯ ಮಕ್ಕಳಯ್ಯ, ರಾಚೋಟಿಗೆ ಹೋದನೆಂಬವರು ಲಜ್ಜೆ ಮಾರಿ ತೊತ್ತಿನ ಮಕ್ಕಳಯ್ಯ


ಈ ವಚನವು ಕಾಶಿ, ಮೈಲಾರ, ಶ್ರೀಶೈಲಗಳಂತೆ ರಾಯಚೋಟಿಯೂ ಒಂದು ಪ್ರಸಿದ್ಧ ಶೈವ ಕ್ಷೇತ್ರವಾಗಿತ್ತೆಂದು ಹೇಳುತ್ತದೆ,

ತೆಲುಗಿನ ರಾಯಚೋಟಿ ಮತ್ತು ಕನ್ನಡದ ರಾಯಚೋಟಿ ಅಭಿನ್ನವಾಗಿವೆ. ಕಾಶೀಯಲ್ಲಿ ವಿಶ್ವನಾಥ,

ಮೈಲಾರದಲ್ಲಿ ಮೈಲಾರಲಿಂಗ ಮತ್ತು ಪರ್ವತ (ಶ್ರೀಶೈಲ)ದಲ್ಲಿ ಮಲ್ಲಿಕಾರ್ಜುನ ದೇವರು ಲಿಂಗ ರೂಪದಲ್ಲಿ

ತೀರ ಪ್ರಾಚೀನ ಕಾಲದಿಂದಲೂ ಪೂಜೆಗೊಳುತ್ತ ಬಂದಿದ್ದಾರೆ.


ಈ ದೇವಾಲಯಗಳ ಸಾಲಿನಲ್ಲಿ ಸೇರಿರುವ ರಾಯಚೂಟಿಯಲ್ಲಿಯೂ ಅಂಥದೊಂದು ಶಿವಲಿಂಗವಿದ್ದು, ಭಕ್ತರು ಅದನ್ನು ಮನೆ ದೈವವೆಂದು ಪೂಜಿಸುತ್ತಿರಬೇಕು.


ಹಿಂದೆಯೇ ನೋಡಿದಂತೆ ರಾಯಚೋಟಿಯಲ್ಲಿ ಲಭ್ಯವಾದ ಅತ್ಯಂತ ಪ್ರಾಚೀನ ಆಧಾರಗಳು ಕ್ರಿ.ಶ. ೧೬ನೇ ಶತಮಾನಕ್ಕೆ ಸೇರಿವೆ,

ಚೌಡಯ್ಯನ ವಚನವ ಈ ಗಡಿಯನ್ನು ಮತ್ತೆ ನಾಲ್ಕು ಶತಮಾನಗಳಷ್ಟು ಹಿಂದಕ್ಕೆ ಒಯ್ಯುತ್ತದೆ,

ವಚನಕಾರರ ಕಾಲಕ್ಕಾಗಲೇ ರಾಚೋಟಿಯು ಕಾಶಿ, ಶ್ರೀಶೈಲಗಳಂತೆ ಪ್ರಸಿದ್ಧ ಶೈವ ಕ್ಷೇತ್ರವೆನಿಸಿದ್ದರಿಂದ ಆದರ ಇತಿಹಾಸ

ಇನ್ನೂ ಹಿಂದಕ್ಕೆ ಹೋಗುವುದರಲ್ಲಿ ಅನುಮಾನವೇ ಇಲ್ಲ. ಈ ದೇವಾಲಯದ ಗರ್ಭ ಗುಡಿಯ

ಹಿಂಭಾಗದ ಸಾಲು ಮಂಟಪದಲ್ಲಿ ಕೆಲವು ಪ್ರಾಚೀನ ಶಿವಲಿಂಗಗಳಿವೆ.

ಗಾತ್ರದಲ್ಲಿ ದೊಡ್ಡವಿರುವ ಇವುಗಳಲ್ಲಿ ಎರಡು ಬೆಣಚುಕಲ್ಲಿನಲ್ಲಿದ್ದರೆ ಒಂದು ಕರಿಯ ಕಲ್ಲಿನಲ್ಲಿದೆ.

ಅವುಗಳ ಕಾಲ ಕ್ರಿ.ಶ. ಸುಮಾರು ೧೦-೧೧ನೇ ಶತಮಾನವಾಗಿದೆ.

ಇದಲ್ಲದೆ, ಮಹಾಮಂಟಪದ ಮೂಲಕವಾಗಿ ನವರಂಗವನ್ನು ಪ್ರವೇಶಿಸುವ ದ್ವಾರದ ಇಕ್ಕೆಲಗಳಲ್ಲಿ

ಎರಡು ದ್ವಾರಪಾಲಕರ ಶಿಲ್ಪಗಳಿವೆ.ಕರಿಯ ಕಲ್ಲಿನಲ್ಲಿರುವ ಈ ಶಿಲ್ಪಗಳು ಸುಮಾರು ೫ ಫೀಟು ೨ ಇಂಚು ಎತ್ತರವಾಗಿವೆ.

ಇವು ಹೋಲಿಕೆಯಲ್ಲಿ ಕಾಕನೂರಿನ ಕಲ್ಲೇಶ್ವರ ದೇವಾಲಯವಿದ ಶಿಲ್ಪಗಳಂತಿವೆ.


ಕುಕನೂರಿನ ಕಲ್ಲೇಶ್ವರ ದೇವಾಲಯವು ಕಲ್ಯಾಣ ಚಾಲುಕ್ಯರ ಆಳ್ವಿಕೆಯ ಆರಂಭದ ಕಾಲದಲ್ಲಿ

ನಿರ್ಮಾಣವಾಗಿದೆಯೆಂದು ವಿದ್ವಾಂಸರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.


ಅದು ಗರ್ಭಗುಡಿ, ಸುಖನಾಸಿ ಮತ್ತು ಮುಖಮಂಟಪವನ್ನು ಮಾತ್ರ ಹೊಂದಿದೆ.

ರಾಯಚೋಟಿಯ ವೀರಭದ್ರ ದೇವಾಲಯವೂ ಮೂಲತಃ ಗರ್ಭಗುಡಿ

ಮತ್ತು ಸುಖನಾಸಿಯನ್ನು ಮಾತ್ರ ಹೊಂದಿದ್ದುದು ಶಾಸನಗಳಿಂದ ಸ್ಪಷ್ಟವಾಗುತ್ತದೆ.

ಆದ್ದರಿಂದ ಈ ದೇವಾಲಯವು ಕ್ರಿ.ಶ. ೯-೧೦ನೇ ಶತಮಾನಗಳ ಮಧ್ಯದಲ್ಲಿ ರಚನೆಯಾಗಿರಬೇಕು.


ರಾಯಚೋಟಿಯ ಈಗಿನ ವೀರಭದ್ರ ದೇವಾಲಯವು ಕ್ರಿ.ಶ ೯-೧೦ನೇ ಶತಮಾನಗಳ ಮಧ್ಯದಲ್ಲಿ

ರಚನೆಯಾಗಿರುವುದು ಅಲ್ಲಿರುವ ಶಿವಲಿಂಗ ಮತ್ತು ದ್ವಾರಪಾಲಕ ಶಿಲ್ಪಗಳಿಂದ ಸ್ಪಷ್ಟವಾಗುತ್ತದೆ.

ಆದರೆ ಆ ಅವಧಿಯಲ್ಲಿ ಪೂಜೆಗೊಳ್ಳುತ್ತಿದ್ದ ದೇವರು ಯಾವುದು?

ಎನ್ನುವುದು ತಿಳಿಯುವುದಿಲ್ಲ. ಚನ್ನಬಸವಣ್ಣನು ನಂದಿ, ಮಲ್ಲಿಕಾರ್ಜುನ, ವೀರಭದ್ರರನ್ನು

ಉಲ್ಲೇಖಿಸಿದಂತೆ ಮಡಿವಾಳ ಮಾಚಿದೇವನೂ ಶುದ್ಧ ಶೈವರು, ನಂದಿ, ವೀರಭದ್ರ, ಹಾವುಗೆ, ಗದ್ದುಗೆಗಳನ್ನು

ಲಿಂಗಗಳೆಂದು ಇಟ್ಟು ಪೂಜಿಸುತ್ತಿದ್ದರೆಂದು ಹೇಳಿದ್ದಾನೆ. ಅಂದರೆ ಶೈವರು ನಂದಿ, ವೀರಭದ್ರರನ್ನು ಲಿಂಗ (ದೇವರು?)ಗಳೆಂದೇ ಭಾವಿಸಿದ್ದರು.

ಆದ್ದರಿಂದ ಕ್ರಿ.ಶ.೯-೧೦ನೇ ಶತಮಾನದಿಂದಲೂ ವೀರಭದ್ರನೇ ರಾಯಚೋಟಿಯ ಅಧಿದೈವವಾಗಿ ಪೂಜಿಸಲ್ಪಡುತ್ತಿದ್ದನೆಂದು ಹೇಳಬಹುದು.


ಒಟ್ಟಿನಲ್ಲಿ ರಾಯಚೋಟಿ ವೀರಭದ್ರ ದೇವಾಲಯವು ಅತ್ಯಂತ ಪ್ರಾಚೀನ ದೇವಾಲಯವಾಗಿದೆ.ವಚನಕಾರರ ಕಾಲದಲ್ಲಿ

ಅದು ಪ್ರಸಿದ್ಧ ಯಾತ್ರಾಸ್ಥಳವಾಗಿದ್ದಿತು. ಆರಂಭದಲ್ಲಿ ಚಿಕ್ಕ ಗಾತ್ರದಲ್ಲಿದ್ದ ಈ ದೇವಾಲಯವು ವಿಜಯನಗರದ ಚಕ್ರವರ್ತಿಗಳ

ಕಾಲದಲ್ಲಿ ಜೀರ್ಣೋದ್ದಾರಗೊಂಡು ವಿಸ್ತೃತವಾಗಿ ಬೆಳೆಯಿತು. ಅಪಾರ ಸಂಖ್ಯೆಯ ಭಕ್ತರ ಆರಾಧ್ಯ ದೈವವಾಗಿ

'ದಕ್ಷಿಣದ ಕಾಶಿ' ಎಂಬ ಪ್ರಸಿದ್ಧಯನ್ನೂ ಪಡೆಯಿತು.


ಅನುಬಂಧ:


ಇದುವರೆಗೆ ರಾಯಚೋಟಿ ವೀರಭದ್ರ ದೇವರನ್ನು ಉಲ್ಲೇಖಿಸುವ ಒಟ್ಟು ೮ ತೆಲುಗು ಶಾಸನಗಳು ಲಭ್ಯವಾಗಿದೆ.

ಅರಸರ ಆಳ್ವಿಕೆಗೆ ಸಂಬಂಧಿಸಿ ಹೇಳುವುದಾದರೆ, ಕೃಷ್ಣದೇವರಾಯನ ಕಾಲದ ಒಂದು ಅಚ್ಯುತದೇವರಾಯನ ಕಾಲದ ಒಂದು,

ಸದಾಶಿವರಾಯನ ಕಾಲದ ಮೂರು, ವೆಂಕಟಾದ್ರಿಯ ಕಾಲದ ಒಂದು, ಕುಮಾರ ಅನಂತರಾಯನ ಕಾಲದ ಒಂದು

ಮತ್ತು ಅರಸರ ಉಲ್ಲೇಖವಿಲ್ಲದ ಒಂದು ಶಾಸನಗಳು ಸೇರಿವೆ. ಇವುಗಳಲ್ಲಿ ಸದಾಶಿವರಾಯನ ಕಾಲದ

ಒಂದು ಶಾಸನ (ಕ್ರಿ.ಶ.೧೫೪೯) ವನ್ನು ಹೊರತುಪಡಿಸಿ ಉಳಿದವು ರಾಯಚೋಟಿ ವೀರಭದ್ರ ದೇವಾಲಯದಲ್ಲಿಯೇ ಇವೆ.


ಕೃಷ್ಣದೇವರಾಯನ ಆಳ್ವಿಕೆಯಲ್ಲಿನ ಶಾಸನವು (ವೀರಭದ್ರ) ದೇವಾಲಯಕ್ಕೆ ಭೂಮಿಯನ್ನು

ದಾನವಾಗಿ ಬಿಟ್ಟುದನ್ನು ಉಲ್ಲೇಖಿಸಿದೆ. ಅಚ್ಯುತದೇವರಾಯನ ಸಾಮಂತ (ಮಹಾನಾಯಕಾಚಾರ್ಯ)ನಾದ

ವೆಂಕಟಾದ್ರಿ ನಾಯಕನ ಮಗ ವೆಂಕಟಾದ್ರಿ ನಾಯಕನು ಚೀರೇಶ್ವರ ದೇವರ ಅಂಗರಂಗ ವೈಭವ ನಡೆಸಲು

ಮತ್ತು ಅಖಂಡ ದೀಪ ನಡೆಸಲು ದಾನ ಬಿಟ್ಟಿದ್ದಾನೆ. ಅಲ್ಲದೆ ೩ನೇ ಜಾವದಲ್ಲಿ ದೇವರಿಗೆ ನೈವೇದ್ಯ ಮಾಡಲು

ಒಂದು ತೂಮ ಅಕ್ಕಿಯನ್ನು ನೀಡಿದ್ದಾನೆ. ಈ ಎಲ್ಲ ಕಾರ್ಯಗಳಿಗೆ ಮಂಡ್ಯಂ' ಪ್ರಾಂತ್ಯದಿಂದ ಬರುವ ಆದಾಯವನ್ನು

ಕಾವಲಗಾಡು ಮತ್ತು ದೇಸಿಯ ಕಾಪುಗಳ ರೂಪದಲ್ಲಿ ಬಿಟ್ಟಿದ್ದಾನೆ, ಸದಾಶಿವರಾಯನ ಕಾಲದ ಬೆಡದೂರು ಶಾಸನವು

“ಪುರಾಂತಕುಲ ಒಪಂ ರಾಚವೀಟ ವೀರೇಶ್ವರುಂಡು” ಎಂದು ಹೇಳಿದ್ದಾರೆ. ಕ

್ರಿ.ಶ. ೧೫೫೮ರ ಶಾಸನವು ಜಿಲ್ಲೆ ವೆಂಗಳರಾಜು ಮತ್ತು ರಾಯಪರಾಜು ವೆಂಗಳರಾಜರಿಗೆ ಪುಣ್ಯವಾಗಲೆಂದು ಪೂಜಾರಿ

ಪರುವತಯ್ಯನು ಆಕಾಲ ಪಾಯಸ (ನೈವೇದ್ಯ) ನಡೆಸಲು ದಾನ ಬಿಟ್ಟಿದ್ದಾನೆ.


ಈ ಪಾಯಸವನ್ನು ಸಿದ್ಧಪಡಿಸಲು ಅಕ್ಕಿ, ಬೆಲ್ಲ, ಸಕ್ಕರೆ ಚನ್ನಮಲ್ಲೆಚರಿ, ಹಾಲು ಮುಂತಾದ ದವಸ-ಧಾನ್ಯಗಳನ್ನು ಬಳಸಲಾಗುತ್ತಿತ್ತು.

ಅಲ್ಲದೆ ಈ ನೈವೇದ್ಯವನ್ನು ರಾತ್ರಿ ೧೨ರ ಸುಮಾರಿಗೆ ದೇವರಿಗೆ ಅರ್ಪಿಸುತ್ತಿದ್ದರು.

ಈತನ ಆಳ್ವಿಕೆಯ ಮತ್ತೊಂದು ಶಾಸನ (ಕ್ರಿ.ಶ. ೧೫೬೩)ವು ವೀರೇಶ್ವರ ದೇವಾಲಯದ ಜೀರ್ಣೋದ್ವಾರವನ್ನು ಉಲ್ಲೇಖಿಸಿದೆ.


ಅರಸರ ಉಲ್ಲೇಖವಿಲ್ಲದ ಕ್ರಿ.ಶ. ೧೫೫೩-೫೪ರ ಶಾಸನವು ದುಗ್ಗರಾಜು ತಿಮ್ಮಪ್ಪನು ಗುರುವರಾಜು ಮತ್ತು ದೊಡ್ಡ ಸಂಗರಾಜು

ಅವರಿಗೆ ಪುಣ್ಯವಾಗಲೆಂದು ವೀರಭದ್ರ ದೇವಾಲಯದ ಬೀದಿ ಮಂಟಪದಲ್ಲಿ ದೀಪದ ವ್ಯವಸ್ಥೆ ಮಾಡಿ ಅದಕ್ಕಾಗಿ ದಾನ ಬಿಟ್ಟಿದ್ದಾನೆ.

ಕಾಲನಿರ್ದೇಶನವಿಲ್ಲದ ಮತ್ತೊಂದು ಶಾಸನವು ವೆಂಕಟಾದ್ರಿ ನಾತಕನ ಕಾರ್ಯಕರ್ತರಾದ 'ವಡಮ್' ಅಧಿಕಾರಿಯು ಇರುಗಜೀಲ,

ಬಾಲಜೀಲ, ಯರಜೀಲ, ಚನವೀರಪ, ನಜೀಲ, ರಾಚವೀಟಿ, ವೀರಪಶಿಧನ ಮೊದಲಾದವರಿಗೆ ವೀರಭದ್ರ ದೇವಾಲಯದಲ್ಲಿ

ಶಾಶ್ವತ ದೀಪವನ್ನು ನೋಡಿಕೊಳ್ಳಲು ಮೊಗವಾಲುಪಲ್ಲಿ' ಗ್ರಾಮದ ಸಮಸ್ತ ಆದಾಯವನ್ನು ಬಿಟ್ಟುಕೊಡಲಾಗಿದೆ.

ಇನ್ನು ಕುಮಾರ ಅನಂತರಾಯನ ಕಾಲದ ಶಾಸನ (ಕ್ರಿ.ಶ. ೧೬೨೮)ವು ವೀರಭದ್ರ ದೇವಾಲಯದ

ಎರಡು ಗೋಪುರಗಳಿಗೆ ಬಣ್ಣ ಹಚ್ಚಿದನ್ನು ಉಲ್ಲೇಖಿಸಿದೆ.


ರಚನೆ:- ಡಾll ಚೆನ್ನಬಸವ ಹಿರೇಮಠ.


ಕೃಪೆ: ರಾಯಚೋಟಿ ಶ್ರೀ ವೀರಭದ್ರ ಒಂದು ಅಧ್ಯಯನ


ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿ


08-030422