ಶಿವಯೋಗಿ ಸಿದ್ದರಾಮೇಶ್ವರ ವಚನದಲ್ಲಿ ವೀರಭದ್ರ


ಎಲ್ಲ ಪುರಾಣಕ್ಕೆ ಹೆಸರುಂಟು, ನಮ್ಮ ಪುರಾಣಕ್ಕೆ ಹೆಸರಿಲ್ಲ ನೋಡಯ್ಯಾ.

ಲಿಂಗದ ಮಹತ್ವವ ಹೇಳಿದಲ್ಲಿ ಲಿಂಗಪುರಾಣವೆನಿಸಿತ್ತು.

ಷಣ್ಮುಖನ ಮಾಹಾತ್ಮ್ಯವ ಹೇಳಿದಲ್ಲಿ ಸ್ಕಂದಪುರಾಣವೆನಿಸಿತ್ತು.

ವೀರಭದ್ರನ ಮಾಹಾತ್ಮ್ಯವ ಹೇಳಿದಲ್ಲಿ ದಕ್ಷಖಂಡವೆನಿಸಿತ್ತು.

ಶಿವನ ಮಹಿಮೆ, ಕಾಶೀಮಹಿಮೆಯ ಹೇಳಿದಲ್ಲಿ

ಶಿವಪುರಾಣ ಕಾಶೀಖಂಡವೆನಿಸಿತ್ತು.

ಪಾರ್ವತಿಯ ಮಾಹಾತ್ಮ್ಯವ ಹೇಳಿದಲ್ಲಿ ಕಾಳೀಪುರಾಣವೆನಿಸಿತ್ತು.

ನಮ್ಮ ಪುರಾಣ ಹೆಸರಿಡಬೇಕೆಂದಡೆ,

ನಿಶ್ಶಬ್ದ ನಿರವಯಲ ಪುರಾಣ ತಾನೆಯಾಯಿತ್ತು ನೋಡಾ,

ಕಪಿಲಸಿದ್ಧಮಲ್ಲಿಕಾರ್ಜುನಾ.


ಸಮಗ್ರ ವಚನ ಸಂಪುಟ: 4 ವಚನದ ಸಂಖ್ಯೆ: 1610


ಶಿವನು ಅಪರಂಪಾರನು ವಾಜ್ಞಾನಗಳಿಗೆ ಗೋಚರನು ವೇದಾಗಮೋಪನಿಷತ್ತುಗಳಿಗೂ ಮೀರಿದವನು,

ಆದಿ ಮಧ್ಯಂತರಗಳಿಲ್ಲದವನು, ಅವನು ಜಿತಮಾಯ ನುತಕಾಯ ಶೃತಿದೂರ ಮತಿಸಾರ

ನಿರವಯು ನಿಶ್ಯಬ್ದ ನಿರಾಕಾರ ನಿಶ್ಲೇಪ ಇಂತವನನ್ನು ಶಬ್ದ ಜಾಲಗಳಲ್ಲಿ ಸಿಲುಕಿಸುವುದು

ಹರಿ ವಿರಿಂಚಾದಿಗಳವಲ್ಲ ಹಿಂದೊಮ್ಮೆ ಬ್ರಹ್ಮ-ವಿಷ್ಣುಗಳು ತಮ್ಮ ತಮ್ಮ ಹಿರಿಮೆಯನ್ನು ಮೆರೆಯಲು

ಪರಸ್ಪರ ಘೋರ ಯುದ್ಧದಲ್ಲಿ ತೊಡಗಿದಾಗ ಆಗುವ ಅನಾಹುತವನ್ನು ತಪ್ಪಿಸಲು

ಶಿವನು ಅವರಿಬ್ಬರ ಮಧ್ಯದಲ್ಲಿ ಲಿಂಗರೂಪವಾಗಿ ಕಾಣಿಸಿಕೊಳ್ಳಲು

ಆ ಲಿಂಗದ ಆದಿ-ಅಂತ್ಯಗಳನ್ನರಿಯಲು ವಿಷ್ಣುವಿನಿಂದ ಅಸಾಧ್ಯವಾದಾಗ ಶಿವನನ್ನು ಕುರಿತು ತಪಸ್ಸು ಮಾಡಿ

ಅವನನ್ನು ಸಾಕ್ಷಾತ್ಕರಿಸಿಕೊಂಡು ತನ್ನ ತಪ್ಪಿಗೆ ಕ್ಷಮೆಯಾಚಿಸಿದ


ಆದರೆ ಬ್ರಹ್ಮನು ಶಿವನ ಶಿರವನ್ನು ಕಂಡನೆಂದು ಸುಳ್ಳು ಹೇಳಿದುದಲ್ಲದೇ

ಕಾಮಧೇನು ಕೇತಕಿಯರಿಂದಲೂ ಸುಳ್ಳು ಸಾಕ್ಷಿ ಹೇಳಿಸಿದ ನಿಮಿತ್ಯವಾಗಿ

ಬ್ರಹ್ಮನು ಪೂಜೆಗೆ ಅನರ್ಹನಾದುದಲ್ಲದೆ ಗೋಮುಖವೂ

ಕೇತಕಿಯರೂ ತಮ್ಮ ಪೂಜ್ಯಸ್ಥಾನವನ್ನು ಕಳೆದುಕೊಳ್ಳಬೇಕಾಯಿತು.


"

ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮುಕುಟ ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ

"


ಎಂದು ಪ್ರಭುದೇವರು ಹೇಳುವ ಹಾಗೆ ಶಿವನ ಆದಿ-ಅಂತ್ಯಗಳನ್ನು ಕಾಣಲು ಅಸಾಧ್ಯ

ಆದುದರಿಂದ ಶಿವನ ಪುರಾಣ ನಿಶ್ಯಬ್ದ ನಿರವಯಲು ಎಂದು ಸಿದ್ಧರಾಮನು

ಹೇಳುವುದರೊಂದಿಗೆ ಉಳಿದ ಪುರಾಣಗಳಲ್ಲಿ ಪರೋಕ್ಷವಾಗಿ ಶಿವನ ಪಾರಮ್ಯವನ್ನು

ಸಾರುವ ಖಂಡ ಪುರಾಣಗಳು, ಅವೆಲ್ಲ ಶಿವನ ಒಂದೊಂದು ಅಂಶ ಮಾತ್ರ ಪರಿಚಯಿಸಬಲ್ಲವು.


ಆದರೆ ವೀರಭದ್ರ ಪುರಾಣವು ದಕ್ಷ ಖಂಡವೆನಿಸಿದರೂ ಮೂಲ ಆದಿರುದ್ರನಿಂದಲೇ

ಆರಂಭವಾಗಿ ಅವನಿಂದಲೇ ಪ್ರೇರಿತವಾಗಿ ಅವನಿಂದಲೇ ಅಂತ್ಯವಾಗುವುದರಿಂದ

ವೀರಭದ್ರ ಪುರಾಣಕ್ಕೆ ವಿಶೇಷ ಮನ್ನಣೆ ಇಲ್ಲ.


ವೀರಭದ್ರನು ವೀರನಾಗಿರುವಂತೆ ಭದ್ರ (ಮಂಗಳಕಾರಕ) ಆಗಿದ್ದಾನೆ.

ಅವನು ಜಿತೇಂದ್ರೀಯನಾಗಿ ಮಲ್ಲಿಗೆಯಂತೆ ಶುಭ್ರನೂ ಶಾಂತನೂ ಮಂಜಿನಂತೆ

ತಂಪು ಅವನಲ್ಲವೆ. ಷಡ್ ಲೀಲೆಗಳ ಅಂತ್ಯದಲ್ಲಿ ಸರ್ವ ಶುಭಕಾರಕನಾಗಿಯೂ

ಸರ್ವರಿಗೂ ಶಿವದರ್ಶಕನಾಗಿಯೂ ಗೋಚರಿಸುತ್ತಾನೆ.


ಕೃಪೆ: ರಾಯಚೋಟಿ ವೀರಭದ್ರ, ಒಂದು ಅಧ್ಯಯನ.


ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿ